ಗಾಯಕವಾಡ ಮನೆತನ ಪೇಷ್ವೆ ಒಂದನೆಯ ಬಾಜಿರಾಯನ ಆಡಳಿತದ ಕಾಲದಲ್ಲಿ (1720 - 1740) ಅಧಿಕಾರಗಳಿಸಿದ ಮರಾಠಾ ರಾಜಮನೆತನ. ಇದರ ಸ್ಥಾಪಕ 1ನೆಯ ದಾಮಾಜಿ.
ಅವನ ಸೋದರನ ಮಗ ಪಿಲಾಜಿ ಎಂಬುವನು ಖಂಡೇರಾವ್ ದಾಬಡೆಯ ಅನುವರ್ತಿಯಾಗಿದ್ದ. 1720ರಲ್ಲಿ ಸೂರತ್ತಿನ ಪೂರ್ವಕ್ಕೆ 80 ಕಿ.ಮೀ. ದೂರದಲ್ಲಿದ್ದ ಸೋನ್‌ಗಢದಲ್ಲಿ ಕೋಟೆ ಕಟ್ಟಿಕೊಂಡು ಪ್ರಬಲನಾಗುತ್ತಿದ್ದ.[೧] ಖಂಡೇರಾಯನ ಮಗನಾದ ತ್ರಿಯಂಬಕರಾಯನಿಗೂ ಬಾಜಿರಾಯನಿಗೂ ಭಿಲಾಪುರದಲ್ಲಿ ನಡೆದ ಯುದ್ಧದಲ್ಲಿ ಪಿಲಾಜಿ ಗಾಯಕವಾಡ ತ್ರಿಯಂಬಕರಾಯನ ಪಕ್ಷ ವಹಿಸಿದ್ದ. ಕದನದಲ್ಲಿ ತ್ರಿಯಂಬಕರಾಯ ಮಡಿದ.[೨] ಬಾಜಿರಾಯನೊಂದಿಗೆ ಪಿಲಾಜಿ ಸಂಧಿ ಮಾಡಿಕೊಂಡ. ಗುಜರಾತಿನಲ್ಲಿ ಮರಾಠರಿಗೆ ಸೇರಿದ್ದ ಭಾಗದ ಮೇಲ್ವಿಚಾರಣೆಯ ಅಧಿಕಾರವನ್ನು ಬಾಜಿರಾಯ ಪಿಲಾಜಿಗೆ ವಹಿಸಿಕೊಟ್ಟ. ಬರೋಡೆಯೇ ಪಿಲಾಜಿಯ ರಾಜಧಾನಿಯಾಯಿತು.
ಎರಡನೆಯ ದಾಮಾಜಿ: 1732ರಲ್ಲಿ ಪಿಲಾಜಿ ಕೊಲೆ ಹೊಂದಿದಾಗ[೩] ಅವನ ಮಗ ಎರಡನೆಯ ದಾಮಾಜಿ ಪಟ್ಟಕ್ಕೆ ಬಂದ. 1761ರಲ್ಲಿ ನಡೆದ ಪಾಣಿಪಟ್ ಯುದ್ಧದಲ್ಲಿ ದಾಮಾಜಿ ಭಾಗವಹಿಸಿದ್ದು ಅಲ್ಲಿಂದ ತಪ್ಪಿಸಿಕೊಂಡು ಬಂದ. ಅವನು 1768ರಲ್ಲಿ ತೀರಿಕೊಂಡಾಗ ಅವನ ಹಲವಾರು ಮಕ್ಕಳು ಅಧಿಕಾರಕ್ಕಾಗಿ ಹಲವು ವರ್ಷಗಳ ಕಾಲ ಪರಸ್ಪರ ಬಡಿದಾಡಿದರು.
ಆನಂದರಾವ್: ಕೊನೆಗೆ 1800ರಲ್ಲಿ ದಾಮಾಜಿಯ ನಾಲ್ಕನೆಯ ಮಗನಾದ ಗೋವಿಂದರಾಯನ[೪] ಪುತ್ರ ಆನಂದರಾವ್ ಸಿಂಹಾಸನವನ್ನೇರಿ 1819ರ ವರೆಗೆ ರಾಜ್ಯವಾಳಿದ. ಗಾಯಕವಾಡ ಮನೆತನದ ಅರಸರು ಮೊದಲಿಂದಲೂ ಇಂಗ್ಲಿಷರೊಂದಿಗೆ ಸ್ನೇಹದಿಂದ ವರ್ತಿಸುತ್ತಿದ್ದರು. ಆನಂದರಾಯನಿಗೂ ಇಂಗ್ಲಿಷರಿಗೂ ನಡುವೆ 1805ರಲ್ಲಿ ಒಪ್ಪಂದವಾಗಿ ಗಾಯಕವಾಡ ದೊರೆ ಇಂಗ್ಲಿಷರ ಆಶ್ರಿತ ರಾಜನಾದ. ಗಾಯಕವಾಡರು ಇಂಗ್ಲಿಷರಿಗೆ ವಿಧೇಯವಾಗಿದ್ದುದರಿಂದ ಅನಂತರ ನಡೆದ ಎರಡು ಮೂರನೆಯ ಇಂಗ್ಲಿಷ್ ಮರಾಠಾ ಯುದ್ಧಗಳಲ್ಲಿ ಬರೋಡ ಸಂಸ್ಥಾನಕ್ಕೆ ಏನೂ ಕಷ್ಟನಷ್ಟಗಳು ಸಂಭವಿಸಲಿಲ್ಲ.
ಎರಡನೆಯ ಸಯಾಜಿರಾವ್: ಆನಂದರಾಯನ ಅನಂತರ ಅಧಿಕಾರಕ್ಕೆ ಬಂದವನು ಅವನ ತಮ್ಮ ಎರಡನೆಯ ಸಯಾಜಿರಾವ್ (ಆ. 1819 - 1847).[೫]
ಅನಂತರ ಸಯಾಜಿರಾಯನ ಮೂವರು ಮಕ್ಕಳಾದ ಗಣಪತರಾವ್ (ಆ. 1847 - 1856), ಖಂಡೇರಾವ್ (ಆ. 1856 - 1870) ಮತ್ತು ಮಲ್ಹಾರ್‌ರಾವ್ (ಆ. 1870 - 1875) ಅನುಕ್ರಮವಾಗಿ ರಾಜ್ಯವಾಳಿದರು.
ಮಲ್ಹಾರ್‌ರಾವ್: ಆಡಳಿತವನ್ನು ಹದಗೆಡಿಸಿದನೆಂದೂ ಬ್ರಿಟಿಷ್ ರೆಸಿಡೆಂಟನಿಗೆ ವಿಷ ಹಾಕಿ ಅವನನ್ನು ಕೊಲ್ಲಲು ಯತ್ನಿಸಿದನೆಂದು ಮಲ್ಹಾರಿರಾಯನ ಮೇಲೆ ಆಪಾದನೆ ಹೊರಿಸಿ ಅವನನ್ನು ಬ್ರಿಟಿಷರು ವಿಚಾರಣೆಗೆ ಗುರಿಪಡಿಸಿದರು. ವಿಷ ಪ್ರಯೋಗದ ಆಪಾದನೆಯನ್ನು ಸ್ಥಿರೀಕರಿಸಲಾಗಲಿಲ್ಲ. ಆದರೆ ದುರ್ನಡತೆ ದುರಾಡಳಿತಗಳ ಕಾರಣದ ಮೇಲೆ ಅವನನ್ನು ಪದಚ್ಯುತಿಗೊಳಿಸಲಾಯಿತು.
3ನೆಯ ಸಯಾಜಿರಾವ್: ಮಲ್ಹಾರಿರಾಯನಿಗೆ ಮಕ್ಕಳಿರಲಿಲ್ಲ. ಗಾಯಕವಾಡ ಮನೆತನದ ದೂರದ ಸಂಬಂಧ ಹೊಂದಿದ್ದ ಸಯಾಜಿರಾಯನನನ್ನು ಬ್ರಿಟಿಷರು ಸಿಂಹಾಸನಕ್ಕೆ ತಂದರು (1875 - 1939). 3ನೆಯ ಸಯಾಜಿರಾವ್ ಬರೋಡ ಸಂಸ್ಥಾನದ ಪ್ರಗತಿಪರ ರಾಜನೆಂದು ಖ್ಯಾತಿ ಗಳಿಸಿದ.