ಗೊಡಚಿ

ಶ್ರೀಕ್ಷೇತ್ರ ಗೊಡಚಿ ವೀರಭದ್ರೇಶ್ವರ ಜಾತ್ರೆ

ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮದ ಗೊಡಚಿ ವೀರಭದ್ರೇಶ್ವರ ದೇವಾಲಯ ಜಾತ್ರೆಯು (ಅಕ್ಟೋಬರ್ - ನವೆಂಬರ್ ) ತಿಂಗಳಲ್ಲಿ ಜರುಗುತ್ತದೆ. ಶ್ರೀಕ್ಷೇತ್ರ ಗೊಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನವು "ಉತ್ತರ ಕರ್ನಾಟಕದ ಧರ್ಮಸ್ಥಳ"ವೆಂದೇ ಪ್ರಖ್ಯಾತಿಯಾದ ರಾಮದುರ್ಗ ತಾಲೂಕಿನ ಪುಣ್ಯಕ್ಷೇತ್ರವಾಗಿದೆ. ಗೊಡಚಿ ಕ್ಷೇತ್ರದಲ್ಲಿ ಶ್ರೀವೀರಭದ್ರೇಶ್ವರ ದೇವಸ್ಥಾನ, ಮುದಿ ವೀರಭದ್ರೇಶ್ವರ ದೇವಸ್ಥಾನ, ಶ್ರೀ ಭದ್ರಕಾಳಿ ಮಾತೆಯ ದೇವಸ್ಥಾನ ಮತ್ತು ವೀರಶೈವ ಮಠ ಮುಂತಾದ ದೇವಸ್ಥಾನಗಳಿವೆ. ವೀರಭದ್ರೇಶ್ವರ ಜಾತ್ರೆಯು ಪ್ರತಿ ವರ್ಷ ಹೊಸ್ತಿಲ ಹುಣ್ಣಿಮೆಯಂದು ಆಚರಿಸುತ್ತಾರೆ. ಈ ಜಾತ್ರೆಯು ರಾಮದುರ್ಗ ತಾಲೂಕಿನ ಅತಿ ಹೆಚ್ಚು ಭಕ್ತಾದಿಗಳು-ಜನ ಸಾಮಾನ್ಯರೆಲ್ಲರೂ ಒಂದಾಗಿ  ಸೇರಿ ಆಚರಿಸುವ  ಜಾತ್ರೆಯಾಗಿದೆ. ಈ ಜಾತ್ರೆಯಲ್ಲಿ ಬಳವಲು ಕಾಯಿ, ಬಾರಿ ಹಣ್ಣನ್ನು ಅತಿ ಹೆಚ್ಚಾಗಿ ಮಾರುವುದರಿಂದ "ಬಳವಲುಕಾಯಿ ಜಾತ್ರೆ" ಎಂತಲೂ ಕರೆಯುತ್ತಾರೆ. ಪ್ರತಿ ವರ್ಷ ಜಾತ್ರೆಯು ೫ ದಿನಗಳವರೆಗೆ ನಡೆಯುತ್ತದೆ, ಜಾತ್ರೆಯಲ್ಲಿ ಪ್ರಸಿದ್ಧ ಸಾಮಾಜಿಕ-ಜಾನಪದ ನಾಟಕ ಕಂಪನಿಗಳು ಹೆಸರುವಾಸಿಯಾಗಿವೆ. ೫ನೆಯ ದಿನ ಲಕ್ಷ ದೀಪೋತ್ಸವ ನಡೆಯುತ್ತದೆ.

ಸಕ್ಷ ಮದಕ್ಷ ಶಿಕ್ಷಣ ವಿಚಕ್ಷಣ ಸುಕ್ಷಣ ಲಕ್ಷಣೇಕ್ಷಣಾ |

ರಕ್ಷಿತ ಲಕ್ಷಿತೇಶ್ವರ ಮುಮುಕ್ಷು ಜಿತಾಕ್ಷ ಮಹೋಕ್ಷ ಲಕ್ಷ ||

ಫಾಲಾಕ್ಷ ತರಕ್ಷು ರಾಕ್ಷಸ ವಿಪಕ್ಷ ವಳಕ್ಷ ಸರಕ್ಷ ದೇಹಮೋ |

ಹಕ್ಷಯ ದಕ್ಷ ರಕ್ಷಿ ಪುದದೋಕ್ಷ ಜಪಕ್ಷ ಶಿವಾಕ್ಷಿ ಸಂಭವಾ ||

- ಷಢಕ್ಷರದೇವ (ರಾಜಶೇಖರ ವಿಳಾಸ)

ಷಡಕ್ಷರದೇವ ಬರೆದ  ರಾಜಶೇಖರ ವಿಳಾಸ ಕಾವ್ಯದಲ್ಲಿ ಶ್ರೀ ವೀರಭದ್ರದೇವರ ಕುರಿತು ಸ್ತುತಿಸಿದ ಈ ಪದ್ಯ ವಿಶೇಷತೆಯನ್ನೊಳಗೊಂಡಿದೆ ಅದು ಏನೆಂದರೆ, ಶ್ರೀ ವೀರಭದ್ರದೇವನು ವೀರರಸದ ಅಧಿದೇವನು. ಆತನ ವರ್ಣನೆಯನ್ನು ಈ ಪದ್ಯದಲ್ಲಿ ೨೫ ಬಾರಿ ಕ್ಷ ಕಾರವನ್ನು ಬಳಸಿ ಬರೆದಿದ್ದಾನೆ. ಈ ಪದ್ಯ ಓದುಗರಿಗೆ-ಭಕ್ತರಿಗೆ ವೀರಭದ್ರದೇವನ ಕೆಚ್ಚು, ವೀರತ್ವಗಳ ನೆನಪು ತಂದು ಕೊಡುವಂಥದ್ದಾಗಿದೆ.