ಘಟಿಕೋತ್ಸವ(ಕಾನ್ವೋಕೇಷನ್)[೧] ವಿಶ್ವವಿದ್ಯಾನಿಲಯದ ಅಥವಾ ಇತರ ಅಂಗೀಕೃತ ಉನ್ನತ ಶಿಕ್ಷಣ ಸಂಸ್ಥೆಗಳ ಅಧ್ಯಯನ ಘಟಕವೊಂದರ ಶಿಕ್ಷಣವನ್ನು ಯಶಸ್ವಿಯಾಗಿ ಮುಗಿಸಿದ ಇಲ್ಲವೇ ಯಾವುದಾದರೊಂದು ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಥವಾ ಪಾಂಡಿತ್ಯ ಸಾಧಿಸಿದ ಖ್ಯಾತ ವ್ಯಕ್ತಿಗಳಿಗೆ ಪದವಿ/ಪ್ರಶಸ್ತಿಯನ್ನು ನೀಡಲು ಏರ್ಪಡಿಸುವ ಸಾಂಪ್ರದಾಯಿಕ ಸಮಾರಂಭ [೨].
ಭಾರತದ ಇತರೆಡೆಗಳಂತೆ ಕರ್ನಾಟಕದಲ್ಲೂ ಘಟಿಕೋತ್ಸವ ಇಂಗ್ಲಿಷ್ ಸಂಪ್ರದಾಯದಂತೆ ನಡೆಯುತ್ತದೆ[೩]. [೪]ಕರ್ನಾಟಕದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲೂ ಘಟಿಕೋತ್ಸವದಲ್ಲಿ ಏಕರೀತಿಯ ಕಾರ್ಯಕ್ರಮವನ್ನು ಅನುಸರಿಸಲಾಗುತ್ತಿದೆ[೫]. ಸಮಾರಂಭಕ್ಕೆ ಬರತಕ್ಕ ವಿದ್ಯಾರ್ಥಿಗಳು ಆಯಾ ಪದವಿಗೆ ಗೊತ್ತು ಮಾಡಿರುವ ಬಣ್ಣದ ಮೇಲುಹೊದಿಕೆ(ಗೌನು), ಲಾಂಛನ ವಸ್ತ್ರ(ಹುಡ್)ಗಳನ್ನು ಧರಿಸಿಕೊಂಡು ಬರಬೇಕೆಂಬ ನಿಯಮವುಂಟು. ಸಮಾರಂಭಕ್ಕೆ ರಾಷ್ಟ್ರದ ವರಿಷ್ಠ ನಾಯಕರೊಬ್ಬರು ಆಹ್ವಾನಿತರಾಗಿ ಬಂದು ನೂತನ ಪದವೀಧರರನ್ನು ಉದ್ದೇಶಿಸಿ ಭಾಷಣ ಮಾಡುವರು. ಇವರೊಂದಿಗೆ ವಿಶ್ವವಿದ್ಯಾನಿಲಯದ ಕುಲಪತಿ, ಉಪಕುಲಪತಿ, ಸಿಂಡಿಕೇಟ್ ಸದಸ್ಯರು, ಶೈಕ್ಷಣಿಕ ಪರಿಷತ್ತಿನ ಸದಸ್ಯರು, ವಿಶ್ವವಿದ್ಯಾನಿಲಯದ ಪ್ರಾಂಶುಪಾಲರು ಮತ್ತು ಪದವಿ ಪಡೆಯುವ ವಿದ್ಯಾರ್ಥಿಗಳು, ಅವರೊಂದಿಗೆ ಕುಟುಂಬದ ಸದಸ್ಯರು ಮಾತ್ರ ಹಾಜರಿರಬೇಕು. ಇದು ವಿಶ್ವವಿದ್ಯಾನಿಲಯದ ಖಾಸಗಿ ಸಮಾರಂಭವಾದುದರಿಂದ ಸಾರ್ವಜನಿಕರು ಇದರಲ್ಲಿ ಮುಕ್ತವಾಗಿ ಭಾಗವಹಿಸುವಂತಿಲ್ಲ.
ಸಮಕಾಲೀನ ಸನ್ನಿವೇಶಕ್ಕೆ ತಕ್ಕಂತೆ ಘಟಿಕೋತ್ಸವ ಸಮಾರಂಭದಲ್ಲಿ ಕೆಲವು ಮಾರ್ಪಾಡುಗಳು ಜಾರಿಗೆ ಬರುತ್ತಿವೆ. ಮೈಸೂರು ವಿಶ್ವವಿದ್ಯಾನಿಲಯ [೬] ಸ್ನಾತಕೋತ್ತರ ಪದವೀಧರರಿಗೆ ಏರ್ಪಡಿಸುವ ಘಟಿಕೋತ್ಸವದ ಜೊತೆಗೆ ಕಾಲೇಜುಗಳು ತಮ್ಮ ತಮ್ಮ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸಮಾರಂಭವನ್ನು ಏರ್ಪಡಿಸಿ ಪದವಿಗಳನ್ನು ವಿತರಣೆ ಮಾಡುತ್ತಿವೆ. ವಿದ್ಯಾರ್ಥಿಯ ಗೈರುಹಾಜರಿಯಲ್ಲಿ ಪದವಿ ಸ್ವೀಕರಿಸಲು ಅವಕಾಶವಿತ್ತು. ಅಂಚೆಯ ಮೂಲಕವೂ ಪ್ರಶಸ್ತಿ ಪತ್ರವನ್ನು ಕಳುಹಿಸಿಕೊಡುವ ವ್ಯವಸ್ಥೆಯನ್ನು ವಿಶ್ವವಿದ್ಯಾನಿಲಯಗಳು ಮಾಡುತ್ತಿವೆ. ಕೆಲವು ವಿಶ್ವವಿದ್ಯಾನಿಲಯಗಳು [೭] ಪದವೀಧರರ ಬಾಹುಳ್ಯತೆಯನ್ನು ಗಮನಿಸಿ ಸ್ನಾತಕೋತ್ತರ ಪದವೀಧರರಿಗೆ ಮಾತ್ರ ಘಟಿಕೋತ್ಸವ ನಡೆಸುವ ಪದ್ದತಿಯನ್ನು ರೂಢಿಗೆ ತರುತ್ತಿವೆ.
ಈಚೆಗೆ ಪಾಶ್ಚತ್ಯ ಸಂಪ್ರದಾಯದ ಪೋಷಾಕಿಗೆ ಬದಲು ಭಾರತೀಯ ಸಂಪ್ರದಾಯದ ಉಡುಪನ್ನು ಧರಿಸಬಹುದಾದ ಅವಕಾಶವನ್ನು ಕಲ್ಪಿಸಲಾಗಿದೆ. ಬಿಳಿಯ ಉಡುಪನ್ನು ಧರಿಸಿ ಅದರ ಮೇಲೆ ಆಯಾ ಪದವಿಯ ಗುತಿನ ಬಿಲ್ಲೆಗಳನ್ನು ಧರಿಸಬೇಕೆಂದು ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯಗಳು ನಿಯಮ ರೂಪಿಸಿವೆ. ಕೆಲವೆಡೆ ಉಡುಪಿನ ನಿಯಮವನ್ನು ಪೂರ್ಣವಾಗಿ ಬದಲಾಯಿಸಿರುವ ಪ್ರವೃತ್ತಿಯೂ ಕಂಡು ಬರುತ್ತಿದೆ.