ಘಿಯಾಸ್-ಉದ್-ದೀನ್ ಆಜಂ ಷಾ ಬಂಗಾಳವನ್ನಾಳಿದ ಒಬ್ಬ ಸುಲ್ತಾನ; ಸಿಕಂದರನ ಮಗ.
ಇವನು ಪಟ್ಟಕ್ಕೆ ಬಂದ ಕಾಲ ನಿರ್ದಿಷ್ಟವಾಗಿ ತಿಳಿದಿಲ್ಲ. ಸಿಕಂದರ್ ಬಹುಶಃ 1390ರಲ್ಲಿ ಮಗನಾದ ಘಿಯಾಸ್-ಉದ್-ದೀನನೊಂದಿಗೆ ಪಾಂಡುವಾ ಎಂಬಲ್ಲಿ ನಡೆದ ಕದನದಲ್ಲಿ ತೀರಿಕೊಂಡಿರಬೇಕು.[೧] ಆ ವರ್ಷ ಘಿಯಾಸ್-ಉದ್-ದೀನ್ ಸಿಂಹಾಸನವನ್ನೇರಿರಬೇಕು. ಘಿಯಾಸ್-ಉದ್-ದೀನನ ಆಡಳಿತದ ಕಾಲ ಸಮೃದ್ಧಿಯದಾಗಿತ್ತೆಂದು ಊಹಿಸಬಹುದು. ಈತ ಹೊರಡಿಸಿದ ವೈವಿಧ್ಯಪೂರ್ಣವಾದ ನಾಣ್ಯಗಳೂ, ಆದೀನ ಎಂಬಲ್ಲಿ ಇವನು ಕಟ್ಟಿಸಿದ ಭವ್ಯವಾದ ಮಸೀದಿಯೂ ಇದಕ್ಕೆ ಸಾಕ್ಷಿ. ಇವನು 1409 ರ ವರೆಗೆ ಆಳಿದ.
ಈತನ ಆಳ್ವಿಕೆಯಲ್ಲಿ ಅಹೋಂ ರಾಜ ಸುದನಗ್ಫನಿಗೂ ಕಾಮಾಟದ ರಾಜನಿಗೂ ನಡುವೆ ಘರ್ಷಣೆಯುಂಟಾಯಿತು. ಆಜಂ ಷಾ ಈ ಅವಕಾಶವನ್ನು ಉಪಯೋಗಿಸಿಕೊಂಡು, ತನ್ನ ರಾಜ್ಯವನ್ನು ವಿಸ್ತರಿಸುವ ಉದ್ದೇಶದಿಂದ ಕಾಮಾಟದ ಮೇಲೆ ದಂಡೆತ್ತಿ ಹೋದ. ಆದರೆ ಆ ಇಬ್ಬರು ರಾಜರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಒಂದಾದರು.[೨][೩][೪] ಆಜಂ ಷಾ ಅವರ ಸಂಯುಕ್ತ ಬಲವನ್ನು ಎದುರಿಸಲಾಗದೆ ಹಿಂದಿರುಗಬೇಕಾಯಿತು.
ಜೌನ್‌ಪುರದ ಖ್ವಾಜಾ ಖಾನನೊಡನೆ ಆಜಂ ಷಾ ಸ್ನೇಹದಿಂದಿದ್ದ. ಆದರೆ ಖ್ವಾಜಾ ಖಾನನ ಉತ್ತರಾಧಿಕಾರಿ ಇಬ್ರಾಹಿಂ ಬಂಗಾಳದ ಮೇಲೆ ದಂಡೆತ್ತಿ ಬಂದ. ಆಜಂ ಷಾ ಆ ಆಕ್ರಮಣವನ್ನು ಹಿಮ್ಮೆಟ್ಟಿಸಿದ.
1408ರಲ್ಲಿ ಆಜಂ ಷಾನ ಆಸ್ಥಾನಕ್ಕೆ ಚೀನಿ ಚಕ್ರವರ್ತಿ ಹುಯಿ-ಟಿ ಯ ಪ್ರತಿಸ್ಪರ್ಧಿ ಯೋಂಗ್-ಲೇ ತನ್ನ ರಾಯಭಾರಿಯನ್ನೂ, ಸುಲ್ತಾನನಿಗೆ ಮತ್ತು ಅವನ ರಾಣಿಗೆ ಬಹುಮಾನಗಳನ್ನೂ ಕಳಿಸಿದ. ಆಜಂ ಷಾ ಪ್ರತಿಯಾಗಿ ಅವನ ಆಸ್ಥಾನಕ್ಕೆ ತನ್ನ ರಾಯಭಾರಿಯನ್ನು ಕಳುಹಿಸಿ, ಚಿನ್ನದ ತಗಡಿನ ಮೇಲೆ ಬರೆದ ಒಂದು ಪತ್ರವನ್ನು ಮತ್ತು ಒಂದು ಜಿರಾಫೆಯನ್ನು ಬಹುಮಾನವನ್ನು ಕಳುಹಿಸಿಕೊಟ್ಟ. ಚೀನೀ ರಾಯಭಾರಕ್ಕೆ ಸೇರಿದ ವ್ಯಾಖ್ಯಾನಕಾರ ಮಹೌನ್ ಆ ಕಾಲದ ಬಂಗಾಳದ ಬಗ್ಗೆ ಬರೆದಿದ್ದಾನೆ.
ಆಜಂ ಷಾಗೆ ಸಾಹಿತ್ಯದಲ್ಲಿ ಪ್ರೀತಿಯಿತ್ತು. ಆತ ಪ್ರಸಿದ್ಧ ಕವಿ ಹಾಫೀಜ಼ನೊಂದಿಗೆ ಪತ್ರವ್ಯವಹಾರ ನಡೆಸುತ್ತಿದ್ದ. ಅವನು ದಕ್ಷವಾಗಿ ಆಡಳಿತ ನಡೆಸುತ್ತಿದ್ದ. ನಿಷ್ಪಕ್ಷಪಾತವಾಗಿ ನ್ಯಾಯ ಪರಿಪಾಲನೆ ಮಾಡುತ್ತಿದ್ದ. ಒಂದು ಸಲ ಸುಲ್ತಾನ ಹೊಡೆದ ಬಾಣವೊಂದು ಒಬ್ಬ ವಿಧವೆಯ ಮಗನಿಗೆ ತಗಲಿದಾಗ[೫] ಅವಳು ತನ್ನ ಫಿರ್ಯಾದನ್ನು ಕಾಜಿಯ ಮುಂದಿಟ್ಟಳೆಂದೂ ಅವನು ಸುಲ್ತಾನನನ್ನು ಬರಮಾಡಿ ವಿಚಾರಣೆ ನಡೆಸಿ ವಿಧಿಸಿದ ದಂಡವನ್ನು ಸುಲ್ತಾನ ತೆತ್ತನೆಂದೂ, ಕಾಜಿಯ ನ್ಯಾಯಪರಿಪಾಲನೆಯನ್ನು ಕಂಡು ಸುಲ್ತಾನಿಗೆ ಮೆಚ್ಚುಗೆಯಾಯಿತೆಂದೂ ಹೇಳಲಾಗಿದೆ.[೬][೭] ಸುಲ್ತಾನ ಆ ಕಾಲದ ಸುಪ್ರಸಿದ್ಧ ಚಿಸ್ತಿ ಸಂತ ಷೇಕ್ ನೂರ್ ಕುತ್ಬಿ ಆಲಂನೊಡನೆ ನಿಕಟ ಸಂಬಂಧ ಹೊಂದಿದ್ದ.[೮] ಆಜಂ ಷಾ 1409ರಲ್ಲಿ ಗಣೇಶ ರಾಜನ ಕೈಯಿಂದ ದುರಂತ ಮರಣಕ್ಕೀಡಾದನೆಂದು ಹೇಳಲಾಗಿದೆ. ರಿಯಾಜ್, ನಿಜಾಂ ಉದ್-ದೀನ್, ಫಿರಿಷ್ಟಾ ಮತ್ತು ಮಹೌನರ ಬರೆವಣಿಗೆಗಳಿಂದ ಘಿಯಾಸ್-ಉದ್-ದೀನ್ ಆಜಂ ಷಾನ ವಿಷಯ ತಿಳಿದುಬರುತ್ತದೆ.
{{cite encyclopedia}}
: Check date values in: |access-date=
(help)
{{cite book}}
: CS1 maint: unrecognized language (link)