ಚಿತ್ರಾಪುರ ಸಾರಸ್ವತ ಬ್ರಾಹ್ಮಣರು, ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಒಂದು ಪಂಗಡದವರು. ಕೊಂಕಣಿಯನ್ನು ಮಾತೃಭಾಷೆಯನ್ನಾಗಿ ಹೊಂದಿರುವ ಇವರು ಮೂಲತ: ಭಾರತದ ಉತ್ತರ ಭಾಗಕ್ಕೆ ಸೇರಿದವರು ಹಾಗೂ ನಂತರದ ಕಾಲಘಟ್ಟದಲ್ಲಿ ವಲಸೆ ಬಂದು,ಪ್ರಸ್ತುತ ಪಶ್ಚಿಮ ಕರಾವಳಿಯ ಪ್ರದೇಶದಲ್ಲಿ ಬಹುಸಂಖ್ಯೆಯಲ್ಲಿ ನೆಲೆಸಿದ್ದಾರೆ. ೨೦೧೧ರ ಜನಗಣತಿಯ ಪ್ರಕಾರ ಈ ಪಂಗಡಕ್ಕೆ ಸೇರಿದವರ ಸಂಖ್ಯೆ ಸುಮಾರು ೨೫,೦೦೦.[೧]
ಪ್ರಾಚೀನ ಭಾರತದಲ್ಲಿ ಉತ್ತರದಲ್ಲಿ ನೆಲೆಗೊಂಡಿರುವ ಬ್ರಾಹ್ಮಣರನ್ನು ಗೌಡ ಬ್ರಾಹ್ಮಣರೆಂದು, ದಕ್ಷಿಣದಲ್ಲಿರುವವರನ್ನು ದ್ರಾವಿಡ ಬ್ರಾಹ್ಮಣರೆಂದು ಎನ್ನುತ್ತಿದ್ದರು. ಸರಸ್ವತಿ ನದಿ ತಟದಲ್ಲಿ ಸ್ಥಿತರಿದ್ದ ಬ್ರಾಹ್ಮಣರನ್ನು ಗೌಡ ಸಾರಸ್ವತ ಬ್ರಾಹ್ಮಣರೆಂದು ಕರೆಯುತ್ತಿದ್ದರು. ವೇದ ಕಾಲದಲ್ಲಿದ್ದ ಸರಸ್ವತಿ ನದಿಯು ಲುಪ್ತವಾದ ಕಾಲಘಟ್ಟ ಸ್ಪಷ್ಟವಾಗಿ ತಿಳಿದು ಬರದಿದ್ದರು ಈ ನದಿಯು ಸುಮಾರು ಕ್ರಿಸ್ತಪೂರ್ವ ೧೫೦೦ರಲ್ಲಿ ನೈಸರ್ಗಿಕ ಕಾರಣಗಳಿಂದ ಇಂಗಿ ಹೋಯಿತೆಂದು ಹೇಳಲಾಗುತ್ತದೆ.[೨] [೩] ಸುಮಾರು ಕ್ರಿಸ್ತಶಕ ೬೦೦ರಲ್ಲಿ ಹರ್ಷವರ್ಧನನ ಆಳ್ವಿಕೆಯ ಸಂದರ್ಭದಲ್ಲಿ ಹರ್ಯಾಣ, ಪಂಜಾಬ್ ಹಾಗೂ ಕಾಶ್ಮೀರದಲ್ಲಿ ಸಾರಸ್ವತ ಬ್ರಾಹ್ಮಣರು ವಾಸವಾಗಿದ್ದರು. ಇದು ಅದಾಗಲೇ ಲುಪ್ತವಾಗಿದ್ದ ಸರಸ್ವತಿ ನದಿಯ ಹರಿಯುತ್ತಿದ್ದ ಪ್ರದೇಶವಾಗಿತ್ತು. ಶೈವ ಮತವಾಲಂಬಿ ಗೌಡ ಬ್ರಾಹ್ಮಣನಾಗಿದ್ದ ರಾಜಾ ಹರ್ಷವರ್ಧನನು ಬಳಿಕ ಬೌದ್ದ ಧರ್ಮವನ್ನು ಸ್ವೀಕರಿಸಿದ. ಇದೇ ಸಮಯದಲ್ಲಿ ಶೈವರೇ ಆಗಿದ್ದ ಸಾರಸ್ವತ ಬ್ರಾಹ್ಮಣರು ಚಾಳುಕ್ಯರ ಆಳ್ವಿಕೆಯಿದ್ದ ದಕ್ಷಿಣದತ್ತ ವಲಸೆ ಹೋಗಲು ಪ್ರಾರಂಭಿಸುತ್ತಾರೆ. ಇದಕ್ಕೆ ಬೌಧ್ಧ ಧರ್ಮಕ್ಕೆ ಮತಾಂತರಗೊಂಡ ಹರ್ಷವರ್ಧನನಿಂದ ರಾಜಾಶ್ರಯ ದೊರಕದೇ ಇದ್ದುದೇ ಕಾರಣ ಎಂದು ಊಹಿಸಲಾಗಿದೆ.[೪] ಹೀಗೆ ವಲಸೆ ಬಂದ ಸಾರಸ್ವತ ಬ್ರಾಹ್ಮಣರು ದಕ್ಷಿಣದ ಮಹಾರಾಷ್ಟ್ರ ಹಾಗೂ ಗೋವಾ ಪ್ರದೇಶಗಳಲ್ಲಿ ನೆಲೆಸುತ್ತಾರೆ. ಅದ್ವೈತ ಸಿದ್ಧಾಂತ ಬೋಧಿಸುವ ಗೌಡಪಾದಾಚಾರ್ಯ ಶೈವ ಮಠದ ಅನುಯಾಯಿಗಳಾಗಿದ್ದರು. ೧೫೬೪ ರಲ್ಲಿ ಪೋರ್ಚುಗೀಸರು ಈ ಮಠವನ್ನು ನಾಶ ಮಾಡುತ್ತಾರೆ. ಇದೇ ಸಮಯದಲ್ಲಿ ಗೋವಾದ ಸಾರಸ್ವತ ಬ್ರಾಹ್ಮಣರು ಪೋರ್ಚುಗೀಸರ ಧಾರ್ಮಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಕರಾವಳಿ ಕರ್ನಾಟಕಕ್ಕೆ ಗುಳೆ ಬಂದು ನೆಲೆಸುತ್ತಾರೆ.[೫] ಸಾರಸ್ವತ ಬ್ರಾಹ್ಮಣರು ಶೈವ ಮತಾವಲಂಬಿಗಳು ಜೊತೆಗೆ ಮೀನನ್ನು ತಿನ್ನುತ್ತಿದ್ದರು.[೬][೭] ಕರಾವಳಿಯಲ್ಲಿ ಮಧ್ವಾಚಾರ್ಯರ ಪ್ರಭಾವ ಜಾಸ್ತಿ ಇದ್ದು, ವೈಷ್ಣವರ ಪ್ರಾಬಲ್ಯವಿತ್ತು. ಈ ಕಾರಣದಿಂದ ಅವರಿಗೆ ಬ್ರಾಹ್ಮಣ ಮಾನ್ಯತೆಯನ್ನು ನೀಡಲು ನಿರಾಕರಿಸಲಾಯಿತು. ಇದಲ್ಲದೇ ಗೌಡಪಾದಾಚಾರ್ಯ ಮಠದ ಮಠಾಧೀಶರು ಹಲವು ದಶಕಗಳ ಕಾಲ ಕಾಶಿಯಲ್ಲಿ ನೆಲೆಸಿದ್ದರು. ಈ ಕಾರಣಗಳಿಂದ ಮಠದೊಂದಿಗಿನ ನಂಟು ದುರ್ಬಲವಾಗಿ, ಬಹುತೇಕ ಸಾರಸ್ವತ ಬ್ರಾಹ್ಮಣರು ಮಾಧ್ವ ದ್ವೈತ ಮಠಗಳಾದ ಕಾಶಿ ಮಠ ಮತ್ತು ಗೋಕರ್ಣ ಮಠವನ್ನು ಸೇರಿಕೊಂಡರು. ಕೆಲವು ಸಾರಸ್ವತ ಬ್ರಾಹ್ಮಣರು ಶೈವರಾಗಿಯೇ ಉಳಿದು, ಗೌಡಪಾದಾಚಾರ್ಯ ಮಠದ ಅನುಯಾಯಿಗಳಾಗಿ ಮುಂದುವರೆದರು. ಗೌಡಪಾದಾಚಾರ್ಯ ಮಠವು ಕವಳೆ ಮಠವಾಗಿ ಪುನರ್ಸ್ಥಾಪನೆಗೊಂಡ ಮೇಲೆ ಕಾಶಿ ಮತ್ತು ಗೋಕರ್ಣ ಮಠದ ಅನುಯಾಯಿಗಳನ್ನು ಮತ್ತೆ ತನ್ನತ್ತ ಸೆಳೆಯಲು ಪ್ರಯತ್ನಿಸಿತು. ಇದು ಜಾಸ್ತಿ ಫಲ ಕಾಣದಿದ್ದರೂ ಕರಾವಳಿಯಲ್ಲಿ, ಮುಖ್ಯವಾಗಿ ಉತ್ತರ ಕನ್ನಡದಲ್ಲಿ, ಶೈವ ಪ್ರಭಾವ ಮರುಕಳಿಸುವಂತೆ ಮಾಡಿತು.[೮] ಇವೆಲ್ಲಾ ನಡೆಯುತ್ತಿದ್ದಾಗ ಹದಿನೇಳನೇ ಶತಮಾನದುದ್ದಕ್ಕೂ ಕಾಶ್ಮೀರದಿಂದ ಕಾಶ್ಮೀರಿ ಪಂಡಿತರು ಬಂದು ನೆಲೆಸಿದರು. ಇವರೂ ಕೂಡ ಸಾರಸ್ವತ ಬ್ರಾಹ್ಮಣರಾಗಿದ್ದು, ಕಾಶ್ಮೀರ ಶೈವ ಪಂಥಕ್ಕೆ ಸೇರಿದವರಾಗಿದ್ದರು. ಇವರಲ್ಲಿ ಬಹಳ ಕಡಿಮೆ ಜನರು ಮಾತ್ರ ವೈಷ್ಣವ ಪಂಥವನ್ನು ಸೇರಿಕೊಂಡರು. ಶೈವರಾಗಿದ್ದರೂ ಇವರ ಮತ್ತು ಕವಳೆ ಮಠದ ನಡುವಿನ ಸಂಬಂಧ ಚೆನ್ನಾಗಿರಲಿಲ್ಲ. ಏಕೆಂದರೆ ಇವರು ಮೊದಲು ಕೊಂಕಣಿ ಸಾರಸ್ವತ ಬ್ರಾಹ್ಮಣರಿಗಿಂತ ಭಿನ್ನವಾಗಿದ್ದರಿಂದ ಹೊರಗಿನವರು ಎಂಬಂತೆ ನೋಡಲಾಯಿತು. ಹದಿನೆಂಟನೇ ಶತಮಾನದ ಹೊತ್ತಿಗೆ ಕವಳೆ ಮಠವು ಬರುಬರುತ್ತಾ ಕರಾವಳಿಯ ಶೈವರನ್ನು ಕಡೆಗಣಿಸಿ, "ಗೋವಾ ಮಠ" ಎಂದು ಕಾಣತೊಡಗಿತು. ಇದರಿಂದಾಗಿ ಕರಾವಳಿಯ ಶೈವ ಸಾರಸ್ವತ ಬ್ರಾಹ್ಮಣರಲ್ಲಿ ಕವಳೆ ಮಠದೊಂದಿಗಿನ ಸಂಬಂಧವೂ ಹಳಸಿತು. ಕಾಶ್ಮೀರಿಗಳು ಮತ್ತು ಹಳೇಯ ಶೈವ ಸಾರಸ್ವತ ಬ್ರಾಹ್ಮಣರು ಸೇರಿ ೧೭೦೮ ರಲ್ಲಿ ಉತ್ತರ ಕನ್ನಡದ ಗೋಕರ್ಣದಲ್ಲಿ ಮಠವನ್ನು ಸ್ಥಾಪಿಸಿದರು. ನಂತರ ೧೭೨೦ರಲ್ಲಿ ಇದು ಚಿತ್ರಾಪುರಕ್ಕೆ ಸ್ಥಳಾಂತರಗೊಳ್ಳುತ್ತದೆ. ವೈಷ್ಣವ ಮಠಗಳಿಗೆ ಸೇರಿದ್ದ ಕೆಲವು ಸಾರಸ್ವತ ಬ್ರಾಹ್ಮಣರು ಶೈವ ಪಂಥಕ್ಕೆ ವಾಪಸ್ ಬಂದು ಈ ಚಿತ್ರಾಪುರ ಮಠದ ಅನುಯಾಯಿಗಳಾಗಿ ಸೇರಿಕೊಳ್ಳುತ್ತಾರೆ.
ಚಿತ್ರಾಪುರ ಮಠದ ಅನುಯಾಯಿಗಳಾಗಿ ಸೇರಿದ ಶೈವ ಸಾರಸ್ವತ ಬ್ರಾಹ್ಮಣರನ್ನು ಚಿತ್ರಾಪುರ ಸಾರಸ್ವತ ಬ್ರಾಹ್ಮಣರು ಎಂದು ಗುರುತಿಸುತ್ತಾರೆ.
ಚಿತ್ರಾಪುರ ಮಠದ ಕೇಂದ್ರ ಸ್ಥಾನವು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯ ಬಳಿ ಇದೆ. ಈ ಮಠದಲ್ಲಿ ಶ್ರೀ ಆದಿ ಶಂಕರಾಚಾರ್ಯರ ಪರಂಪರೆಯನ್ನು ಅನುಸರಿಸಲಾಗುತ್ತದೆ. ಶೈವ ಸಾರಸ್ವತ ಬ್ರಾಹ್ಮಣರು ಕ್ರಿಸ್ತಶಕ ೧೭೦೮ಲ್ಲಿ ಗೋಕರ್ಣದಲ್ಲಿ ತಮ್ಮದೇ ಮಠವನ್ನು ಪ್ರಾರಂಭಿಸಿದರು. ಮಠದ ಮೊದಲ ಪಿಠಾಧಿಪತಿಗಳಾಗಿದ್ದವರು ಪರಿಜ್ಞಾನಶ್ರಮರು. ಎರಡನೇ ಪಿಠಾಧಿಪತಿಗಳಾಗಿ ಶಂಕರಾಶ್ರಮರು ಪಟ್ಟಕ್ಕೇರುತ್ತಾರೆ. ಇದೇ ಸಮಯದಲ್ಲಿ ಅಂದರೆ ೧೭೦ರಲ್ಲಿ ಮಠದ ಕೇಂದ್ರ ಸ್ಥಾನವು ಗೋಕರ್ಣದಿಂದ ಚಿತ್ರಾಪುರಕ್ಕೆ ಸ್ಥಳಾಂತರಗೊಳ್ಳುತ್ತದೆ. ಈಗ ಸದ್ಯೋಜಾತ ಶಂಕರಾಶ್ರಮರು ೧೧ನೇ ಪಿಠಾಧಿಪತಿಗಳಾಗಿದ್ದಾರೆ. ಶಿವ ಹಾಗೂ ಪಾರ್ವತಿ ಒಡಗೂಡಿದ ಭವಾನಿಶಂಕರ ಇಲ್ಲಿನ ಮುಖ್ಯ ಆರಾಧ್ಯ ದೈವ.
ಸಣ್ಣ ಸಂಖ್ಯೆಯಲ್ಲಿರುವ ಈ ಸಮುದಾಯದ ಹಲವರು ಸಾಹಿತ್ಯ, ಸಾಮಾಜಿಕ, ಕ್ರೀಡಾ ಹಾಗೂ ಮನೋರಂಜನಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರುವಾಸಿಯಾಗಿದ್ದಾರೆ.
ಅವರಲ್ಲಿ ಕೆಲವರ ಹೆಸರುಗಳು
ಚಿತ್ರಾಪುರ ಸಾರಸ್ವತ ಬ್ರಾಹ್ಮಣ ಸಮುದಾಯದ E-ಗ್ರಂಥಾಲಯ
{{cite book}}
: CS1 maint: unrecognized language (link)
{{cite journal}}
: CS1 maint: unrecognized language (link)
{{cite book}}
: CS1 maint: extra punctuation (link) CS1 maint: multiple names: authors list (link)
{{cite book}}
: |edition=
has extra text (help)