ಛತ್ರವು (ಸತ್ರ) ಪ್ರಯಾಣಿಕರು, ತೀರ್ಥಯಾತ್ರಿಗಳು, ಅಥವಾ ಒಂದು ಸ್ಥಳಕ್ಕೆ ಭೇಟಿನೀಡುವವರಿಗಾಗಿ ಇರುವ ಒಂದು ವಿಶ್ರಾಂತಿ ಸ್ಥಳ, ತಂಗುದಾಣ, ಧರ್ಮಶಾಲೆ. ಇವು ಸಾಮಾನ್ಯವಾಗಿ ಬೌದ್ಧ, ಜೈನ ಮತ್ತು ಹಿಂದೂ ದೇವಸ್ಥಾನಗಳಿಗೆ ಸಂಪರ್ಕ ಹೊಂದಿರುತ್ತವೆ.[೧] ಈ ಪದವು ದಕ್ಷಿಣ ಭಾರತ, ಮಧ್ಯ ಭಾರತ ಮತ್ತು ಪಶ್ಚಿಮ ಭಾರತದಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಉತ್ತರ ಭಾರತದಲ್ಲಿ ಸಮಾನ ಸೌಕರ್ಯಗಳನ್ನು ಧರ್ಮಶಾಲೆಗಳು ಎಂದು ಕರೆಯಲಾಗುತ್ತದೆ. ಶಿಲೆ ಮತ್ತು ತಾಮ್ರಫಲಕ ಶಾಸನದಂತಹ ಶಾಸನಲಿಪಿ ಸಾಕ್ಷ್ಯಗಳ ಪ್ರಕಾರ, ದಕ್ಷಿಣ ಏಷ್ಯಾದಲ್ಲಿ ಛತ್ರದ ಪರಿಕಲ್ಪನೆ ಮತ್ತು ಮೂಲಸೌಕರ್ಯವು ಕನಿಷ್ಠಪಕ್ಷ ೧ನೇ ಸಹಸ್ರಮಾನದಷ್ಟು ಹಿಂದಿನ ಕಾಲದ್ದಾಗಿದೆ.[೨]
ಛತ್ರವು ಕೂಡುವ ಸ್ಥಳ, ಕೋಣೆಗಳು, ನೀರು ಮತ್ತು ಕೆಲವೊಮ್ಮೆ ಧರ್ಮಾರ್ಥ ಸಂಸ್ಥೆಯ ಧನಸಹಾಯದಿಂದ ಆಹಾರವನ್ನು ಒದಗಿಸುತ್ತದೆ. ಇದರ ಸೇವೆಗಳು ಉಚಿತವಾಗಿರುತ್ತವೆ, ಅಥವಾ ಅತ್ಯಲ್ಪ ದರಗಳಲ್ಲಿ ಇರುತ್ತವೆ, ಅಥವಾ ಭೇಟಿಕಾರರು ಇಷ್ಟವಿದ್ದರೆ ಕಾಣಿಕೆಯಾಗಿ ಬಯಸಿದಷ್ಟು ಬಿಡುತ್ತಾರೆ. ಸಾರ್ವಜನಿಕ ವ್ಯವಹಾರಕ್ಕಾಗಿ ಪ್ರಯಾಣಿಸುತ್ತಿದ್ದ ಅಧಿಕಾರಿಗಳೂ ಇವನ್ನು ಬಳಸುತ್ತಿದ್ದರು.