ಜನ್ನ

ಜನ್ನ
Janna
ಅಮೃತಾಪುರದ ಅಮೃತೇಶ್ವರ ದೇವಾಲಯದ ಪ್ರಾಂಗಣದಲ್ಲಿರುವ ಜನ್ನ ವಿರಚಿತ ಕಾವ್ಯದ ಹಳಗನ್ನಡ ಶಾಸನ(ಕ್ರಿ.ಶ. ೧೧೯೬)
ವೀರಗಲ್ಲಿನ ಮೇಲೆ ಜನ್ನ ವಿರಚಿತ ಕಾವ್ಯದ ದೃಶ್ಯಾವಳಿಗಳು. ಅಮೃತೇಶ್ವರ ದೇವಾಲಯ, ಅಮೃತಾಪುರ, ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ ರಾಜ್ಯ, ಭಾರತ.

ಕವಿಚಕ್ರವರ್ತಿ ಬಿರುದಾಂಕಿತನಾದ ಮಹಾಕವಿ ಜನ್ನನು ಕರ್ನಾಟಕದಲ್ಲಿದ್ದ, ಹಳಗನ್ನಡ ಕವಿ.(ಕಾಲ :ಕ್ರಿ.ಶ.೧೧೫೦-೧೨೫೦) ಜನ್ನ ಕನ್ನಡದ ಪ್ರಸಿದ್ಧ ಜೈನ ಕವಿ. 12ನೆಯ ಶತಮಾನದ ಉತ್ತರಾರ್ಧ ಮತ್ತು 13ನೆಯ ಶತಮಾನದ ಪೂರ್ವಾರ್ಧದಲ್ಲಿ ಕೃತಿರಚನೆ ಮಾಡಿದವ. ಹಳೆಯಬೀಡು ಪ್ರಾಂತದವನಾದ .ಈತನ ತಂದೆ ಸುಮನೋಬಾಣನೆಂಬ ಬಿರುದು ಪಡೆದಿದ್ದ ಶಂಕರ. ತಾಯಿ ಗಂಗಾದೇವಿ ಹೆಂಡತಿ ಲಕುಮಾದೇವಿ. ಧರ್ಮಗುರು ರಾಮಚಂದ್ರ ದೇವ ಮುನಿ, ಉಪಾಧ್ಯಾಯ ಇಮ್ಮಡಿ ನಾಗವರ್ಮ. ಹೊಯ್ಸಳ ವೀರಬಲ್ಲಾಳನಿಂದ ಈತ "ಕವಿಚಕ್ರವರ್ತಿ" ಎಂಬ ಬಿರುದನ್ನು ಪಡೆದು, ಅನಂತರ ನರಸಿಂಹನಲ್ಲಿ ದಂಡಾಧಿಪತಿಯೂ ಮಂತ್ರಿಯೂ ಆಗಿದ್ದ. "ನಾಳ್ಪ್ರಿಭು ಜನಾರ್ಧನದೇವ" ಎಂದು ತನ್ನನ್ನು ಕರೆದುಕೊಂಡಿದ್ದಾನೆ. ಒಟ್ಟಿನಲ್ಲಿ ಈತ ಪಂಪ ನಂತೆ ಬಹುಮುಖ ವ್ಯಕ್ತಿತ್ವವುಳ್ಳವ..[][][][]

ತಂದೆ ತಾಯಿಗಳು  :

[ಬದಲಾಯಿಸಿ]

ಈತನ ತಂದೆ ಶಂಕರ(ಕವಿ ಸುಮನೋಬಾಣ)ನು ಹೊಯ್ಸಳ ನರಸಿಂಹನಲ್ಲಿ ದಂಡಾಧೀಶನಾಗಿದ್ದನು ; ತಾಯಿ ಗಂಗಾದೇವಿ. ಕನ್ನಡದ ಬಹುಮುಖ್ಯ ಕಾವ್ಯಸಂಕಲನ ಗ್ರಂಥವಾದ ಸೂಕ್ತಿಸುಧಾರ್ಣವವನ್ನು ರಚಿಸಿದ ಮಲ್ಲಿಕಾರ್ಜುನನಿಗೆ(ಕ್ರಿ.ಶ.೧೨೪೫) ಜನ್ನನ ತಂಗಿಯನ್ನು ಕೊಟ್ಟು ಮದುವೆಯಾಗಿತ್ತು.ಶಬ್ದಮಣಿದರ್ಪಣವನ್ನು ರಚಿಸಿದ ವಯ್ಯಾಕರಣಿ ಕೇಶಿರಾಜನು ಜನ್ನನ ಸೋದರಳಿಯ(ಮಲ್ಲಿಕಾರ್ಜುನನ ಮಗ).ಈತನು ಹೊಯ್ಸಳ ವೀರಬಲ್ಲಾಳನ ಮಹಾಮಂತ್ರಿಯೂ,ಸೈನ್ಯಾಧಿಪತಿಯೂ,ಆಸ್ಥಾನಕವಿಯೂ ಆಗಿದ್ದನು.ವೀರಬಲ್ಲಾಳನ ನಂತರ ಪಟ್ಟಕ್ಕೆ ಬಂದ ೨ನೆಯ ನರಸಿಂಹನ ಕಾಲದಲ್ಲೂ ಜನ್ನನು ಆಸ್ಥಾನಕವಿಯಾಗಿ ಮುಂದುವರಿದನು.[][]

ಬಾಲ್ಯ ಮತ್ತು ಜೀವನ

[ಬದಲಾಯಿಸಿ]

ಜನ್ನನು, ಸಿಂದಗಿ ತಾಲೂಕಿನ ಕೊಂಡಗೂಳಿಯಲ್ಲಿ ಹುಟ್ಟಿ, ಹಳೆಯಬೀಡಿನಲ್ಲಿರುವ ವಿಜಯ ಪಾರ್ಶ್ವನಾಥ ದೇವಾಲಯದ ಮುಖಭಾಗದಲ್ಲಿ ಸೊಗಸಾದ ಮುಖಮಂಟಪವನ್ನು ಕಟ್ಟಿಸಿ ,ಅಲ್ಲಿ ತನ್ನ ಕಾವ್ಯ ಅನಂತನಾಥಪುರಾಣದ ೧,೦೦೦, ತಾಳೆಗರಿಗಳ ಪ್ರತಿಗಳನ್ನು ಬರೆಸಿ,ಉದಾರ ಸಂಭಾವನೆಯೊಂದಿಗೆ ವಿದ್ವಾಂಸರಿಗೆ ಕೊಟ್ಟು, ಗೌರವಿಸಿದನೆಂದು ತಿಳಿದುಬರುತ್ತದೆ. ಬಾಲಕರಗಣದ ಮೇಘನಂದಿ ಸಿದ್ಧಾಂತಿದೇವರು, ಜನ್ನನ ಆಧ್ಯಾತ್ಮಿಕ ಗುರು ಮಕಾಶಿಗಳಾಗಿದ್ದರು.[][]

ಜನ್ನನ ರಚನೆಗಳು

[ಬದಲಾಯಿಸಿ]

ಅನುಭವಮುಕುರವೆಂಬ ಕಾಮಶಾಸ್ತ್ರ ಸಂಬಂಧವಾದ ಕೃತಿಯನ್ನೂ ಯಶೋಧರ ಚರಿತೆ, ಅನಂತನಾಥಪುರಾಣ ಎಂಬ ಎರಡು ಕಾವ್ಯಗಳನ್ನೂ ಬರೆದಿದ್ದಾನೆ. ಜನ್ನ. ಕೆಲವು ಶಾಸನಗಳೂ ಈತನಿಂದ ರಚಿತವಾಗಿವೆ.[]

ಯಶೋಧರಚರಿತೆ

[ಬದಲಾಯಿಸಿ]

ಯಶೋಧಚರಿತೆ, ಅನಂತನಾಥ ಪುರಾಣ ಎರಡೂ ಧಾರ್ಮಿಕ ಕೃತಿಗಳು. ಆದರೆ ಯಶೋಧರಚರಿತೆಯಲ್ಲಿ ಲೌಕಿಕದ ನೆಲೆಗಟ್ಟು ಇಲ್ಲದಿಲ್ಲ. ಯಶೋಧರಚರಿತೆ ಬಹುಸುಂದರವಾದ ಪುಟ್ಟಕಾವ್ಯ. ಕೇವಲ ನಾಲ್ಕು ಅವತಾರಗಳೂ 310 ಪದ್ಯಗಳೂ ಇದರಲ್ಲಿವೆ. ಬರಿಯ ಕಂದಪದ್ಯಗಳಿಂದಲೇ ರಚಿತವಾಗಿರುವುದು ಈ ಕೃತಿಯ ವಿಶಿಷ್ಟತೆ. ಇದಕ್ಕೆ ಮೂಲ, ಸಂಸ್ಕೃತದಲ್ಲಿ ವಾದಿರಾಜ (11ನೆಯ ಶ.) ಬರೆದಿರುವ ಯಶೋಧರ ಚರಿತೆ. ಅದಕ್ಕಿಂತಲೂ ಹಿಂದೆ ಪ್ರಭಂಜನ, ಹರಿಭದ್ರ, ಸೋಮದೇವ ಮುಂತಾದ ಪ್ರಾಕೃತ ಸಂಸ್ಕೃತ ಕವಿಗಳು ಯಶೋಧರನ ಕತೆಯನ್ನು ನಿರೂಪಿಸಿದ್ದರು. ಮೂಲತಃ ಅದೊಂದು ಜನಪದ ಕತೆಯಿರಬೇಕು. ಹಿಂದಿನವರಲ್ಲಿ ಬಹುಮಟ್ಟಿಗೆ ಧಾರ್ಮಿಕ ಸ್ವರೂಪದ ಕತೆಯಷ್ಟೆ ಆಗಿದ್ದ ಯಶೋಧರಾಖ್ಯಾನವನ್ನು ತೆಗೆದುಕೊಂಡು ಆದರೆ ಅಸಂಗತಾಂಶಗಳನ್ನು ನಿವಾರಿಸಿ ಉಚಿತ ಮಾರ್ಪಾಡುಗಳನ್ನು ಮಾಡಿಕೊಂಡು ಅದನ್ನೊಂದು ಸರಳರಮ್ಯವಾದ, ಮಾನವೀಯ ಸ್ವಾರಸ್ಯವುಳ್ಳ ಕಾವ್ಯವನ್ನಾಗಿ ಪರಿವರ್ತಿಸಿದವ ವಾದಿರಾಜ. ಅವನ ಕಾವ್ಯಕ್ಕೆ ಸಂಸ್ಕøತದಲ್ಲಿ ಯಾವ ವೈಶಿಷ್ಟ್ಯವಿದೆಯೋ ಅದೇ ವೈಶಿಷ್ಟ್ಯ ಕನ್ನಡದಲ್ಲಿ ಜನ್ನನ ಕೃತಿಗಿದೆ.

ಜನ್ನ ವಾದಿರಾಜನನ್ನು ಹೆಜ್ಜೆಹೆಜ್ಜೆಗೂ ಅನುಸರಿಸಿದ್ದಾನಾದರೂ ತನ್ನ ಸ್ವಂತ ಪ್ರತಿಭೆಯನ್ನು ಸಾಕಷ್ಟು ತೋರಿದ್ದಾನೆ. ಕೆಲವೆಡೆ ಮೂಲವನ್ನು ಸೊಗಸಾಗಿ ಅನುವಾದಿಸಿ ತನ್ನ ಭಾಷಾಂತರ ಶಕ್ತಿಯನ್ನು ಮೆರೆದಿದ್ದಾನೆ; ಕೆಲವೆಡೆ ಮೂಲದ ಚೆಲುವನ್ನು ಹೆಚ್ಚಿಸಿದ್ದಾನೆ; ಎಷ್ಟೋ ಕಡೆ ಮೂಲವನ್ನು ಅಂದವಾಗಿ ಸಂಗ್ರಹಿಸಿದ್ದಾನೆ. ಕತೆಗೆ ಕೆಲವು ಅಂಶಗಳು ಹೊಸದಾಗಿ ಸೇರಿವೆ. ಅನೇಕ ಕಡೆ ಸೂಕ್ಷ್ಮವಾದ ಕೆಲವು ಮಾರ್ಪಾಟುಗಳಾಗಿವೆ. ಮೂಲದ ಕೆಲವು ಅನೌಚಿತ್ಯಗಳು ಹೋಗಿವೆ. ಅಲ್ಲದೆ, ಜನ್ನ ದೇಸಿಯ ಸೊಬಗನ್ನು ತನ್ನ ಕೃತಿಯಲ್ಲಿ ಸೂರೆಮಾಡಿದ್ದಾನೆ; ಅನ್ಯಭಾಷಾಕೃತಿಯೊಂದನ್ನು ತಾಯ್ನುಡಿಯಲ್ಲಿ ಎಷ್ಟು ಚೆನ್ನಾಗಿ ನಿರ್ವಹಿಸಬಹುದೊ ಅಷ್ಟೂ ಚೆನ್ನಾಗಿ ನಿರ್ವಹಿಸಿ ಯಶಸ್ವಿಯಾಗಿದ್ದಾನೆ.

ಜೇವದಯೆ ಜೈನಧರ್ಮಂ ಎಂಬ ಸಂದೇಶವನ್ನು ಬಿತ್ತರಿಸಿ, ಅಹಿಂಸೆಯ ಪಾರಮ್ಯವನ್ನು ಎತ್ತಿಹಿಡಿಯುವುದು ಯಶೋಧರಚರಿತೆಯ ಉದ್ದೇಶ. ಹಿಂಸೆಯಿಮದಾಗುವ ಘೋರ ದುರಂತವನ್ನು ಕವಿ ಮನಮುಟ್ಟುವಂತೆ ಚಿತ್ರಿಸಿದ್ದಾನೆ. ಯಶೋಧರ ಮತ್ತು ಚಂದ್ರಮತಿಯರು ಒಂದು ಹಿಟ್ಟಿನ ಕೋಳಿಯನ್ನು ಕೊಂದು ಸಂಕಲ್ಪ ಹಿಂಸೆಯನ್ನೆಸಗಿದ ಮಾತ್ರದಿಂದಲೇ ಹಲವಾರು ಜನ್ಮಗಳನ್ನೆತ್ತಿ ವಿವಿಧ ತಿರ್ಯಗ್ಗತಿಗಳಲ್ಲಿ ತೊಳಲಿ ಕಡೆಗೆ ಕರ್ಮದಿಂದ ಬಿಡುಗಡೆಗೊಳ್ಳುವುದನ್ನು ಇಲ್ಲಿ ನೋಡುತ್ತೇವೆ. ಈ ಕೃತಿಯಲ್ಲಿ ವ್ಯಕ್ತವಾಗುವ ಅಹಿಂಸಾತತ್ತ್ವ ಜೈನಧರ್ಮಕ್ಕೇ ಸೀಮಿತವಾದುದಲ್ಲ, ಅದು ಇಡೀ ಮಾನವ ಧರ್ಮದ ಸಂದೇಶವಾಗಿ ನಿಲ್ಲುತ್ತದೆ. ಅದನ್ನು ಕವಿ ಕಲಾವಿಲಾಸಪೂರ್ವಕವಾಗಿ ಪ್ರತಿಪಾದಿಸಿದ್ದಾನೆ.

ಯೋಶೋಧರಚರಿತೆಯಲ್ಲಿ ಅಮೃತಮತಿಯ ಅಧಾರ್ಮಿಕ ವಿಕೃತ ಪ್ರಣಯದ ಕತೆಯೊಂದು ಪೂರಕವಾಗಿ ಸೇರಿಕೊಂಡಿದೆ. ಅದರಲ್ಲಿ ಬರುವ ಸಮಸ್ಯೆ ಸಾಮಾಜಿಕವಾದುದು, ನಿತ್ಯನೂತನವಾದುದು, ಕವಿ ಅದನ್ನು ವೈರಾಗ್ಯಪ್ರಚೋದನೆಗೆ, ಧರ್ಮ ಬೋಧನೆಗೆ ಬಳಸಿಕೊಂಡಿದ್ದಾನಾದರೂ ಅದನ್ನು ಪ್ರತ್ಯೇಕಿಸಿ ನೋಡುವುದು ಸಾಧ್ಯ. ಮನಸಿಜನ ಮಾಯೆ ವಿಧಿವಿಳಸನದ ನೆರಂಬಡೆಯೆ ಕೊಂದು ಕೂಗದೆ ನರರಂ- ಎಂಬುದು ಇಲ್ಲಿ ಜನ್ನನ ಕಾಣ್ಕೆ.

ಒಟ್ಟಿನ ಮೇಲೆ ಮಾನವ ಸ್ವಭಾವದ ಸಂಕೀರ್ಣತೆಯ ಅರಿವು, ಸ್ವಾರಸ್ಯಪೂರ್ಣವೂ ಸಂಕ್ಷಿಪ್ತವೂ ಆದ ನಿರೂಪಣೆ, ಸರಳ ಸಮುಚಿತವಾದ ಅಲಂಕಾರಗಳು, ದೇಸಿಯ ಬೆಡಗು ಬಿನ್ನಾಣಗಳು-ಈ ಗುಣಗಳಿಂದ ಕೂಡಿರುವ ಯಶೋಧರಚರಿತೆ ಕನ್ನಡದಲ್ಲಿ ಒಂದು ವಿರಳವರ್ಗದ ಕಾವ್ಯವಾಗಿದೆ; ಧರ್ಮ, ಕಾವ್ಯಧರ್ಮಗಳ ಸಮನ್ವಯಕ್ಕೆ ಒಳ್ಳೆಯ ನಿದರ್ಶನವಾಗಿದೆ.[೧೦]

ಅನಂತನಾಥಪುರಾಣ

[ಬದಲಾಯಿಸಿ]

ಅನಂತನಾಥಪುರಾಣ 14ನೆಯ ತೀರ್ಥಂಕರನಾದ ಅನಂತನಾಥನ ಕತೆಯನ್ನು ಬಣ್ಣಿಸುವ 14 ಆಶ್ವಾಸಗಳ ಪ್ರೌಢ ಚಂಪೂ ಕಾವ್ಯ. ಇದಕ್ಕೆ ಮುಖ್ಯವಾದ ಆಕರ ಗುಣಭದ್ರಾಚಾರ್ಯರು ಸಂಸ್ಕೃತದಲ್ಲಿ ರಚಿಸಿರುವ ಉತ್ತರಪುರಾಣ. ಅಲ್ಲಿ ಕಿರಿದಾಗಿ ಬರುವ ಅನಂತನಾಥನ ಕತೆಯನ್ನು ಜನ್ನ ಎಳೆದು ಹಿಗ್ಗಲಿಸಿ 14 ಆಶ್ವಾಸಗಳಷ್ಟು ದೊಡ್ಡದು ಮಾಡಿದ್ದಾನೆ. ಈ ಕಾವ್ಯ ಸಂಪ್ರದಾಯದ ಪ್ರಭಾವಕ್ಕೆ ವಿಶೇಷವಾಗಿ ಪಕ್ಕಾಗಿದೆ. ವಿದ್ವತ್ತಿನ ಪ್ರದರ್ಶನ, ಮಾತಿನ ಆಡಂಬರ, ಅಲಂಕಾರಗಳ ಜಟಿಲತೆ, ಮತೀಯ ಪ್ರಕ್ರಿಯೆಗಳ ಆಧಿಕ್ಯ, ಅನಾವಶ್ಯಕ ವರ್ಣನೆಗಳು, ಔಚಿತ್ಯ ಪ್ರಜ್ಞೆಯ ಕೊರತೆ-ಇವು ಇದರಲ್ಲಿ ಎದ್ದುಕಾಣುವ ಲಕ್ಷಣಗಳು. ಹೀಗಾಗಿ ಈ ಕೃತಿ ರಸವತ್ತಾದ ಕವಿತೆಯಾಗುವುದರ ಬದಲು ಬಹುಮಟ್ಟಿಗೆ ಶುಷ್ಕವಾದ ಪುರಾಣವಾಗಿ ಪರಿಣಮಿಸಿದೆ. ಆದರೆ ಇದರಲ್ಲಿ ಅಂತರ್ಗತವಾಗಿರುವ ಚಂಡಶಾಸನನ ಉಪಾಖ್ಯಾನ ಒಂದು ಹೃದಯಂಗಮವಾದ ಭಾಗ. ಪ್ರತ್ಯೇಕಿಸಿದರೆ ಅದೊಂದು ಉಜ್ಜ್ವಲವಾದ ಖಂಡಕಾವ್ಯವಾಗುತ್ತದೆ. ಜಿನಕಥೆಗೂ ಅದಕ್ಕೂ ಸಾವಯವ ಸಂಬಂಧವೇನೂ ಇಲ್ಲ. ಉತ್ತರ ಪುರಾಣದಲ್ಲಿ ಬಿಂದುರೂಪವಾಗಿ ಬರುವ ಕತೆಯನ್ನು ಇಲ್ಲಿ ಜನ್ನ ಸೊಗಸಾಗಿ ವಿಸ್ತರಿಸಿದ್ದಾನೆ.[೧೧]

ಪ್ರಾಮುಖ್ಯತೆ

[ಬದಲಾಯಿಸಿ]

ಯಶೋಧರಚರಿತೆಯಲ್ಲಿ ಹೆಣ್ಣಿನ ನಿಷಿದ್ಧಕಾಮ ಚಿತ್ರಿತವಾಗಿದ್ದರೆ ಚಂಡಶಾಸನ ವೃತ್ತಾಂತದಲ್ಲಿ ಗಂಡಿನ ದುರಂತ ವ್ಯಾಮೋಹ ನಿರೂಪಿತವಾಗಿದೆ. ಸುಮಾರು 80 ಪದ್ಯಗಳಷ್ಟು ಚಿಕ್ಕದಾದರೂ ಈ ಉಪಾಖ್ಯಾನ ಸಹೃದಯರ ಚಿತ್ತದ ಮೇಲೆ ಅಳಿಸಲಾಗದ ಮುದ್ರೆಯೊತ್ತುತ್ತದೆ. ಯಶೋಧರಚರಿತೆ ಹಾಗೂ ಅನಂತನಾಥಪುರಾಣದ ಚಂಡಶಾಸನ ಕಥೆ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆಯುತ್ತವೆ. ಸಂಪ್ರದಾಯಬದ್ಧವೂ ಚಿರಪರಿಚಿತವೂ ಆದ ವಸ್ತುವನ್ನು ಬಿಟ್ಟು, ಕವಿ ವಿಷಮಪ್ರಣಯದ ಎರಡು ದಿಕ್ಕುಗಳನ್ನು ಚಿತ್ರಿಸಿ ಬದುಕಿನ ವಾಸ್ತವಿಕತೆಗೆ ಕನ್ನಡಿ ಹಿಡಿದಿದ್ದಾನೆ. ವಿಮರ್ಶಕರೊಬ್ಬರು ಹೇಳುವಂತೆ ಅದಮ್ಯವಾದ ಕಾಮದ, ಧರ್ಮವಿರುದ್ಧ ಪ್ರಣಯದ ಸ್ತ್ರೀಮುಖ ಪುರುಷ ಮುಖಗಳನ್ನು ಉಜ್ಜ್ವಲವಾಗಿ ಕ್ರಾಂತಿಕಾರಕ ರೀತಿಯಲ್ಲಿ ಚಿತ್ರಿಸ ಕನ್ನಡ ಸಾಹಿತ್ಯಕ್ಕೆ ಸ್ವಂತ ಕಾಣಿಕೆ ಸಲ್ಲಿಸಿದ್ದಾನೆ. ಕನ್ನಡ ಸಾಹಿತ್ಯಕ್ಕೆ ಮಾತ್ರವಲ್ಲ, ಜಾಗತಿಕ ಸಾಹಿತ್ಯಕ್ಕೂ ಬೆಲೆಯುಳ್ಳ ಕಾಣಿಕೆ ಸಲ್ಲಿಸಿದ್ದಾನೆಂದರೆ ತಪ್ಪಲ್ಲ. ಮಹಾಕಾವ್ಯದ ಔನ್ನತ್ಯ, ಭವ್ಯತೆಗಳು ಆಂಶಿಕವಾಗಿಯಾದರೂ ಅವನ ಎರಡು ಕಿರುಗಬ್ಬಗಳಲ್ಲಿ ತಲೆದೋರಿವೆ. ಆದ್ದರಿಂದ, ಜನ್ನ ಮಹಾಕವಿಗಳ ಸಾಲಿನಲ್ಲಿ ನಿಲ್ಲಲಾರನಾದರೂ ಮಧ್ಯಮವರ್ಗದ ಕವಿಗಳ ಪಂಕ್ತಿಯಲ್ಲಿ ಅಗ್ರಸ್ಥಾನಕ್ಕೆ ನಿಸ್ಸಂದೇಹವಾಗಿ ಅರ್ಹನಾಗುತ್ತಾನೆ. ನೇಮಿಜನ್ನಮರಿರ್ವರೆ ಕರ್ಣಾಟಕೃತಿಗೆ ಸೀಮಾಪುರುಷರ್ ಎಂಬ ಮಧೂರ ಕವಿಯ ಪ್ರಶಂಸೆ ಉತ್ಪ್ರೇಕ್ಷೆಯಾದರೂ ಭಾಗಶಃ ಸತ್ಯವೆನ್ನಬಹುದು.[೧೨]

ಗ್ರಂಥ- ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Sastri (1955), pp. 358–359
  2. Kamath (2001), p. 133
  3. Nagaraj in Pollock (2003), p. 364
  4. Shiva Prakash (1997), p. 204
  5. Nagaraj in Pollock (2003), p. 377
  6. Sastri (1955), p. 359
  7. E.P. Rice (1921), pp. 43–44
  8. Sahitya Akademi (1988), p. 1181
  9. Sahitya Akademi (1992), p. 4629
  10. Nagaraj in Pollock (2003), p. 375
  11. Nagaraj in Pollock (2003), p. 375
  12. Nagaraj in Pollock (2003), p. 375


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  • Sastri, K.A. Nilakanta (2002) [1955]. A history of South India from prehistoric times to the fall of Vijayanagar. New Delhi: Indian Branch, Oxford University Press. ISBN 0-19-560686-8.
  • Shiva Prakash, H.S. (1997). "Kannada". In Ayyappapanicker (ed.). Medieval Indian Literature:An Anthology. Sahitya Akademi. ISBN 81-260-0365-0.
  • Various (1988) [1988]. Encyclopaedia of Indian literature – vol 2. New Delhi: Sahitya Akademi. ISBN 81-260-1194-7.
  • Nagaraj, D.R. (2003) [2003]. "Critical Tensions in the History of Kannada Literary Culture". In Sheldon I. Pollock (ed.). Literary Cultures in History: Reconstructions from South Asia. Berkeley and London: University of California Press. Pp. 1066. pp. 323–383. ISBN 0-520-22821-9.
  • Kamath, Suryanath U. (2001) [1980]. A concise history of Karnataka : from pre-historic times to the present. Bangalore: Jupiter books. LCCN 80905179. OCLC 7796041.
  • Various (1992) [1992]. Encyclopaedia of Indian literature – vol 5. Sahitya Akademi. ISBN 81-260-1221-8.