ಜಯಶಂಕರ ಪ್ರಸಾದ್ ೧೮೯೦-೧೯೩೭. ಕವಿ, ನಾಟಕಕಾರ, ಕಾದಂಬರಿಕಾರ. ಆಧುನಿಕ ಹಿಂದೀ ಸಾಹಿತ್ಯದ ಛಾಯಾವಾದ ಮತ್ತು ರಹಸ್ಯವಾದಗಳ ಪ್ರವರ್ತಕನೆಂದು ಹೆಸರಾದವ. ಕಾಶಿಯ ದೇವೀ ಪ್ರಸಾದ ಸಾಹು ಎಂಬಾತನ ಮಗ. ತಂದೆ ದಾನಶೀಲನೂ ವಿದ್ವಾಂಸ ಕಲಾವಿದರ ಪೋಷಕನೂ ಆಗಿದ್ದ. ಕವಿಯ ಶಿಕ್ಷಣ ಮನೆಯಲ್ಲೆ ಆರಂಭವಾಗಿ ಸಂಸ್ಕøತ, ಹಿಂದೀ, ಉರ್ದು, ಪಾರಸಿ, ಇಂಗ್ಲಿಷ್, ಬಂಗಾಳಿ ಭಾಷೆಗಳಲ್ಲಿ ಸಾಕಷ್ಟು ವ್ಯವಸಾಯ ನಡೆಯಿತು. ಶಾಲೆಯ ಶಿಕ್ಷಣ ಮಾತ್ರ 8ನೆಯ ತರಗತಿಗೇ ಕೊನೆಗೊಂಡಿತು. ೧೫ ನೆಯ ವಯಸ್ಸಿಗೆಲ್ಲ ತಂದೆ ತಾಯಿಯನ್ನು ಕಳೆದುಕೊಂಡು ಅನಾಥನಾದ. ಗೃಹಕಲಹ, ವ್ಯಾಪಾರದಲ್ಲಿನ ನಷ್ಟ. ಅಣ್ಣನ ಸಾವುಗಳಿಂದ ಜರ್ಜರಿತನಾಗಿ ತನ್ನ ೧೭ ನೆಯ ವಯಸ್ಸಿಗೆಲ್ಲ ಗೃಹ ಕೃತ್ಯದ ಭಾರವನ್ನು ಹೊರಬೇಕಾಗಿ ಬಂತು. ಮೂರು ನಾಲ್ಕು ಸಾರಿ ಯಾತ್ರೆ ಮಾಡಿದ್ದರ ಹೊರತು ಉಳಿದ ತನ್ನ ಜೀವನವೆಲ್ಲ ಈತ ಕಾಶಿಯಲ್ಲೆ ಕಳೆದ.
ಜಯಶಂಕರ ಪ್ರಸಾದ್, ನಾಟಕಕಾರ, ಕಾದಂಬರಿಕಾರ. ಆಧುನಿಕ ಹಿಂದೀ ಸಾಹಿತ್ಯದ ಛಾಯಾವಾದ ಮತ್ತು ರಹಸ್ಯವಾದಗಳ ಪ್ರವರ್ತಕನೆಂದು ಹೆಸರಾದವ.[೧] ಶಾಲೆಯ ಶಿಕ್ಷಣ ಮಾತ್ರ ೮ ನೆಯ ತರಗತಿಗೇ ಕೊನೆಗೊಂಡಿತು. ೧೫ ನೆಯ ವಯಸ್ಸಿಗೆಲ್ಲ ತಂದೆ ತಾಯಿಯನ್ನು ಕಳೆದುಕೊಂಡು ಅನಾಥನಾದ. ಅಣ್ಣನ ಸಾವುಗಳಿಂದ ಜರ್ಜರಿತನಾಗಿ ತನ್ನ ೧೭ ನೆಯ ವಯಸ್ಸಿಗೆಲ್ಲ ಗೃಹ ಕೃತ್ಯದ ಭಾರವನ್ನು ಹೊರಬೇಕಾಗಿ ಬಂತು.
ಈತನ ಕಾವ್ಯವಿಷಯ ಪ್ರೇಮ ಮತ್ತು ಸೌಂದರ್ಯ, ಇವು ಲೌಕಿಕದಿಂದ ದಿವ್ಯರೂಪವನ್ನು ಯಾವಾಗ ಹೊಂದುತ್ತವೆಂದು ಹೇಳುವುದು ತೊಡಕಿನ ವಿಷಯ. ಆಂಸೂ ಮತ್ತು ಕಾಮಾಯನೀ ಈ ಕವಿಯ ಉತ್ಕಷ್ಟ ಕಾವ್ಯಗಳು.[೨][೩] ಆಂಸೂ ಉತ್ತಮ ಗೀತಕಾವ್ಯ. ಕಾಮಾಯನೀ ಮಹಾಕಾವ್ಯ, ಏಕಾರ್ಥಕಾವ್ಯವೂ ಹೌದು. ಆಂಸೂನಲ್ಲಿ ವಿರಹ-ಮಿಲನಗಳ ಇಂಗಿತಗಳ ಮೇಲೆ ಕವಿ ವಿರಾಟ್ ಪ್ರಕೃತಿಯನ್ನು ಸರ್ವಾಲಂಕಾರ ವಿಭೂಷಿತವನ್ನಾಗಿ ಮಾಡಿ ಕುಣಿಸಬಲ್ಲ ಸಿದ್ಧಿಯನ್ನು ವ್ಯಕ್ತಗೊಳಿಸಿದ್ದಾನೆ. ಆಂಸೂ ಛಾಯಾವಾದೀ ಉಪನಿಷತ್ತು. ಜೀವನ ಯಾವ ಮಹಾಕಾವ್ಯದ ಆದರ್ಶಗಳಿಂದಲೂ ಬದ್ಧವಲ್ಲ. ಪ್ರಪಂಚದ ಸ್ಥಿತಿಯಿಂದ ಮನಸ್ಸಿನ ವೃತ್ತಿ. ಈ ವೃತ್ತಿಯೇ ಸಾಹಿತ್ಯ ಪ್ರವೃತ್ತಿಯಾಗಿ ಅಭಿವ್ಯಕ್ತಿಹೊಂದುವುದು. ಶಿವತತ್ತ್ವದ ಉಪಾಸಕನಾದ ಈ ಕವಿಗೆ ಅಮೃತ ಕೂಡ ಹಾಲಾಹಲ ಸಮಾನ. ಬಹು ಮುಖ ಜೀವನವನ್ನು ಕಂಡರೂ ಈತ ಉಂಡವನಲ್ಲ. ಅಂತೆಯೇ ಪ್ರಪಂಚದ ಬಹುಮುಖ ಜೀವನದಿಂದ ಬೇರೆಯಾಗಿ ತನ್ನದೇ ಪಂಥ ಬೆಳೆಸಿದ್ದಾನೆ. ಕಾಮಾಯನೀ ಕಾವ್ಯದ ಆರಂಭದಲ್ಲೇ ಆದರ್ಶದ ದೇವಸೃಷ್ಟಿಯ ನಾಶವಾಗಿ ಮಾನವ ಸಭ್ಯತೆಯ ಉದಯವಾಗುವುದು ಕಂಡುಬರುತ್ತದೆ. ಅತಿಬುದ್ಧಿವಾದ ಮತ್ತು ಆದರ್ಶವಾದ ಎರಡೂ ಈ ಕವಿಗೆ ಅಷ್ಟೇನೂ ಮಾನ್ಯವಲ್ಲ. ಕಾಮಾಯನೀ ಕಾವ್ಯದಲ್ಲಿ ಶಿವನ ೫ ರೂಪಗಳ ಸಾಕ್ಷಾತ್ಕಾರವಿದೆ. ಸಂಹಾರಕ, ಸೃಷ್ಟ್ಯಾತೃಕ, ಮಾಯಾ ಯೋಗಿದಿಗಂಬರ, ಮಂತ್ರವಿದ್ ಋಷಿ, ನಟರಾಜ ಇವೇ ಆ ಪಂಚರೂಪಗಳು. ಮಹಾ ಕಾವ್ಯದ ಧ್ಯೇಯಸಾಧನೆಗಳ ದೃಷ್ಟಿಯಿಂದ ಕಾಮಾಯನೀ ಪೂರ್ಣ ಸಫಲತೆಯನ್ನು ಪಡೆದಿದೆ. ಇದರ ಆಧಾರ ದರ್ಶನ ಪ್ರಧಾನವಾಗಿ ಶೈವದರ್ಶನ ಮತ್ತು ಇದರ ಒಂದು ವಿಶಿಷ್ಟ ಪ್ರಕಾರವಾದ ತ್ರಿಕದರ್ಶನ ಗೀತೆಯ ಕರ್ಮಯೋಗ ಮತ್ತು ವೇದಾಂತದ ಅದ್ವೈತವಾದದ ಸಂಮಿಶ್ರಣಗಳಿಂದ ಕೂಡಿದ್ದಾಗಿದೆ. ಈ ಮಹಾಕಾವ್ಯ ಭಾವಪಕ್ಷ ಕಲಾಪಕ್ಷಗಳೆರಡರಿಂದಲೂ ಪುಷ್ಟವಾಗಿ ಸಂಪೂರ್ಣ ಮಾನವತಾ ವಿಕಾಸದ ಅಂತರಂಗ ಗಾಥೆಯಾಗಿದೆ. ತುಲಸೀದಾಸನ ರಾಮಚರಿತಮಾನಸವಾದ ಮೇಲೆ ಕಾಮಾಯನೀ ಕಾವ್ಯಕ್ಕೆ ಹಿಂದೀ ಸಾಹಿತ್ಯದಲ್ಲಿ ಮೊದಲನೆಯ ಸ್ಥಾನ. ಭಾವನೆ, ವಿಚಾರ, ಶೈಲಿ-ಈ ಮೂರೂ ಇದರಲ್ಲಿ ಪ್ರೌಢತೆಯನ್ನು ಸಾಕ್ಷಾತ್ಕರಿಸಿಕೊಂಡಿವೆ. ಈ ಕಾವ್ಯದಲ್ಲಿ ಇಚ್ಛಾ, ಜ್ಞಾನ, ಕ್ರಿಯಾ, ಆನಂದ-ಇವುಗಳ ಸಮನ್ವಯವಿದೆ. ಜಲಪ್ಲಾವನದಲ್ಲಿ (ಪ್ರಳಯ) ಅನ್ನಮಯಕೋಶ ಸ್ಥಿತಿಯಿಂದ ಮೊದಲುಗೊಂಡು ಕಡೆಗೆ ಕೈಲಾಸಶಿಖರದಲ್ಲಿ ಆನಂದಮಯ ಕೋಶಸ್ಥಿತಿಯನ್ನು ಹೊಂದುವವರೆಗಿನ ಮಾನವ ಚೇತನದ ಯಾತ್ರೆಯ ವರ್ಣನೆ ಇದರಲ್ಲಿದೆ. ಆದರೆ ಶೈವತಂತ್ರಗಳ ಸಾಂಪ್ರದಾಯಿಕತೆಯ ಆಧಿಕ್ಯದಿಂದ ರಸಾತ್ಮಕತೆಯ ಅಖಂಡಧಾರೆ ಕುಂಠಿತವಾಗಿದೆ.
ಈ ಕವಿಯ ಕೃತಿಗಳಲ್ಲಿ ಈ ಮೂರು ಪ್ರವೃತ್ತಿಗಳನ್ನು ಮುಖ್ಯವಾಗಿ ಗಮನಿಸಬಹುದು : ಪ್ರೇಮದ ಚಿತ್ರಣದಲ್ಲಿ ಲೌಕಿಕತೆ ಹಾಗೂ ಅಲೌಕಿಕತೆಗಳ ಸಾಮಂಜಸ್ಯ, ಪ್ರಕೃತಿಯ ಸುಂದರಭಯಾನಕ ಚಿತ್ರಗಳ ವರ್ಣನೆ, ಪ್ರಾಚೀನ ಭಾರತೀಯ ಸಂಸ್ಕøತಿಯಲ್ಲಿ ಅಪಾರ ನಿಷ್ಠೆಯಿಂದ ಕೂಡಿದ ಗೌರವಪೂರ್ಣ ಅಭಿವ್ಯಕ್ತಿ. (ಎಂ.ಡಿ.ಜಿ.)
ಈತನ ಸಾಹಿತ್ಯ ರಚನಾಕಾಲ ಒಟ್ಟು ೨೬ ವರ್ಷಗಳಷ್ಟು ವ್ಯಾಪ್ತಿಯದು. ಈ ಕವಿಯ ಆರಂಭದ ರಚನೆಗಳು ಶಿಥಿಲವಾಗಿದ್ದರೂ ಬರಬರುತ್ತ ಅನುಭೂತಿ ಮತ್ತು ಶಿಲ್ಪದ ದೃಷ್ಟಿಯಿಂದ ಜಾಗರೂಕವಾದದ್ದು ಕಾಣಬಹುದು. ಈತ ತನ್ನ ನಾಟಕಗಳ ಮೂಲಕ ಭಾರತೀಯ ಸಂಸ್ಕ್ರತಿಯನ್ನು ಪುನರುಜ್ಜೀವನಗೊಳಿಸಿದ. ಅಭಿವ್ಯಕ್ತಗೊಳಿಸಿದ. ಭಾರತೀಯ ಇತಿಹಾಸ, ದರ್ಶನ, ಸಂಸ್ಕ್ರತಿಗಳ ವಿಷಯದಲ್ಲಿ ರಾಗಾತ್ಮಕತೆ ಭಾವಮಯತೆ, ಅನುಭೂತಿಪ್ರವಣತೆ, ಮಾನವೀಯತೆ ಮತ್ತು ಸಾಂಸ್ಕೃತಿಕ ದೃಷ್ಟಿ-ಇವು ಈ ಕವಿಯ ಕೃತಿಗಳಲ್ಲಿ ಕಂಡುಬರುವ ವೈಶಿಷ್ಟ್ಯಗಳು. ಛಾಯಾವಾದೀಯುಗ ಪ್ರವರ್ತಕನಾದ ಈ ಕವಿಯ ಕೃತಿಗಳಲ್ಲಿ ಛಾಯಾವಾದೀ ಪ್ರವೃತ್ತಿಗಳು ಅನ್ಯಕವಿಗಳಲ್ಲಿ ಕಂಡುಬರುವುದಕ್ಕಿಂತ ಹೆಚ್ಚು ಗೋಚರಿಸುತ್ತವೆ. ಅನುಭೂತಿಯ ಗಂಭೀರತೆ. ಲಾಕ್ಷಣಿಕ ಶೈಲಿ, ಚಿತ್ರಾತ್ಮಕತೆ, ವ್ಯಂಗ್ಯಾತ್ಮಕತೆ, ಪ್ರೇಮಾನುಭೂತಿ, ಸೌಂದರ್ಯ ಚೇತನ, ಕಲ್ಪನಾತತ್ತ್ವ, ಸಾಂಸ್ಕೃತಿಕ ಭಾವನೆ, ಆದರ್ಶವಾದೀ ದೃಷ್ಟಿ, ಆತ್ಮ ಪ್ರಕಾಶನ ಮೊದಲಾದ ಛಾಯಾವಾದೀ ಗುಣಲಕ್ಷಣಗಳು ವಿಪುಲವಾಗಿ ಈತನಲ್ಲಿ ಕಾಣಸಿಗುತ್ತವೆ. ಕಾಮಾಯನೀಯಲ್ಲಂತು ಛಾಯಾವಾದ ತುಟ್ಟತುದಿಗೇರಿದೆ.