ಜಾರ್ಜ್ ಡಾರ್ಲಿ( 1795-1846). ಐರ್ಲೆಂಡಿನ ಕವಿ ಹಾಗೂ ಗಣಿತಶಾಸ್ತ್ರ ಲೇಖಕ.
ಡಬ್ಲಿನ್ ನಗರದಲ್ಲಿ ಹುಟ್ಟಿದ ಈತ ಟ್ರಿನಿಟಿ ಕಾಲೇಜಿನಲ್ಲಿ ವ್ಯಾಸಂಗಮಾಡಿದ. ಗಣಿತ ಈತನ ಪ್ರಿಯ ವಿಷಯ. ಆದರೆ ತನ್ನಲ್ಲಿ ಸಹಜವಾಗಿ ಇದ್ದ ಉಗ್ಗಿನಿಂದಾಗಿ ಈತ ತನ್ನ ಧೈರ್ಯವನ್ನೂ ಆತ್ಮವಿಶ್ವಾಸವನ್ನೂ ಕಳೆದುಕೊಂಡು ಸದಾ ಖಿನ್ನನಾಗಿಯೇ ಇರುತ್ತಿದ್ದು 1822ರಲ್ಲಿ ಲಂಡನ್ನಿಗೆ ಬಂದು ನೆಲಸಿದ. ತನ್ನಂತೆಯೇ ಉಗ್ಗುತಿದ್ದ ಚಾರ್ಲ್ ಲ್ಯಾಮನ ಸ್ನೇಹ ದೊರಕಿಸಿಕೊಂಡ. ಅಥೇನಿಯಮ್ ಪತ್ರಿಕೆಯ ಲೇಖನವರ್ಗದಲ್ಲಿ ಸೇರಿಕೊಂಡು ಬಹಳ ಹರಿತವಾದ ವಿಮರ್ಶೆಗೆ ಹೆಸರಾದ. ಇವನ ಸಣ್ಣಕತೆಗಳು ಕವಿತೆಗಳು ಮತ್ತು ವಿಮರ್ಶಾಲೇಖನಗಳು ಆ ಕಾಲದಲ್ಲಿ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾದುವು. ಸರಳ ರಗಳೆಯಲ್ಲಿ ಸಂವಾದರೂಪದ ಕವಿತೆ ಎರರ್ಸ್ ಆಫ್ ಎಕ್ಸ್‍ಟಿಸೀ 1822ರಲ್ಲಿ ಪ್ರಕಟವಾಯಿತು. 1826ರಲ್ಲಿ ಲಿಲಿಯನ್ ಆಫ್ ದಿ ವೇಲ್ ಎಂಬ ಈತನ ಅತ್ಯುತ್ತಮ ಕಥೆ ಹೊರಬಿತ್ತು. ಲಂಡನ್ ಮ್ಯಾಗಜಿನ್ ಎಂಬ ಪತ್ರಿಕೆಗೆ ಈತ ಜಾನ್ ಲೇಸಿ ಎಂಬ ಹುಸಿ ಹೆಸರಿನಿಂದ ಲೇಖನಗಳನ್ನು ಬರೆದ. 1827ರಲ್ಲಿ ಸಿಲ್ವಿಯ ಎಂಬ ಕವನವನ್ನು ಬರೆದ. ಅದು ಸೊಗಸಾಗಿದೆಯೆಂದು ಲ್ಯಾಮ್ ಹೊಗಳಿದ. 1829ರಲ್ಲಿ ಲೇಬರ್ಸ್ ಆಫ್ ಐಡ್ಸ್‍ನೆಸ್ ಎಂಬ ಮತ್ತೊಂದು ಕಥಾಸಂಕಲನವನ್ನು ಪ್ರಕಟಿಸಿದ. ಸಾಹಿತಿಯಾಗಿ ಇವನಿಗೆ ಪುರಸ್ಕಾರ ಸಿಕ್ಕಲಿಲ್ಲ. ಅದರಿಂದ ಬೇಸರಗೊಂಡು ಗಣಿತಶಾಸ್ತ್ರದ ಬಗ್ಗೆ ಸಣ್ಣಪುಸ್ತಿಕೆಗಳನ್ನು ಪ್ರಕಟಿಸಿದ. ಕಲನಶಾಸ್ತ್ರ, ರೇಖಾಗಣಿತ, ಬೀಜಗಣಿತ ತ್ರಿಕೋನಮಿತಿಗಳ ಬಗ್ಗೆ ಪುಸ್ತಿಕೆಗಳನ್ನು ರಚಿಸುದುದಲ್ಲದೆ ಜಿಯೊಮೆಟ್ರಿಕಲ್ ಕಂಪ್ಯಾನಿಯನ್ ಎಂಬ ದೊಡ್ಡ ಶಾಸ್ತ್ರೀಯ ಗ್ರಂಥವನ್ನೂ ಬರೆದ. ಇಷ್ಟಾದರೂ ಸಾಹಿತ್ಯದ ಗೀಳು ಹೋಗಲಿಲ್ಲ. ಆಗ ಈತ ಬರೆದ ತಾಮಸ್ ಬೆಕೆಟ್ (1840) ಮತ್ತು ಎತೆಲ್ಸ್‍ಲನ್ (1841) ಎಂಬ ಎರಡು ನಾಟಕಗಳೂ ಕೆಟ್ಟದಾಗಿವೆ. 1840ರಲ್ಲಿ ಬೋಮಾಂಟ್ ಮತ್ತು ಫ್ಲೆಚರ್ ಅವರ ನಾಟಕಗಳನ್ನು ಸಂಪಾದಿಸಿ ಪ್ರಕಟಿಸಿದ. ಡಾರ್ಲಿಯ ಕೀರ್ತಿ ಅವನ ಅಪೂರ್ಣ ಗೀತಕಾವ್ಯ ನೆಪೆಂತೆಯನ್ನು ಆಧರಿಸಿದೆ. ಈ ಕೃತಿ 1837ರಲ್ಲಿ ಪ್ರಕಟವಾಯಿತು. ಆಗಿನ ಕವಿಗಳೂ ಇದನ್ನು ಮೂಸಲಿಲ್ಲ. ಆದರೆ ಇಪ್ಪತ್ತನೆಯ ಶತಮಾನದ ವಿಮರ್ಶಕರು ಇದನ್ನು ಅದ್ಭುತ ಕೃತಿಯೆಂದು ಮೆಚ್ಚಿದ್ದಾರೆ; ಕೋಲ್‍ರಿಜ್‍ನ ಅಲೌಕಿಕ ಕನಸಿನ ಪ್ರಪಂಚದ ನೆನಪು ಕೊಡುವಂಥ, ಅತಿ ತೀವ್ರ ಸಂವೇದನೆಯ ಕಾವ್ಯವೆಂದು ಇದನ್ನು ಹೊಗಳಿದ್ದಾರೆ. ಮಾದಕವಾದ ಕನಸಿನ ಪ್ರತಿಮೆಗಳು, ಬೆಂಕಿಮೋಡದಂಥ ಚಮಕು, ಅತಿಸಂಶ್ಲಿಷ್ಟವಾದರೂ ಬಹಳ ಜಾಣ್ಮೆಯಿಂದ ಬಳಸಿಕೊಂಡ ಛಂದಸ್ಸು, ಅಂತರಂಗಿಕ ತುಮುಲವನ್ನು ತೀವ್ರವಾಗಿ ತೋರುವ ಭಾವದ ಆಳ, ಸಾಮಾನ್ಯವಾಗಿ ಕಂಡರೂ ಅತ್ಯಂತ ಗಹನವಾದ ಧ್ವನಿಯುಳ್ಳ ಸಂಕೇತಗಳು- ಇವುಗಳಿಂದ ತುಂಬಿದ ಈ ಕವಿತೆ ಒಂದು ರೀತಿಯ ಅಮಲು ತರಿಸುತ್ತದೆಂದು ಇಂದಿನ ವಿಮರ್ಶಕರು ಹೊಗಳಿದ್ದಾರೆ. ಆದರೆ ತನ್ನ ಸಮಕಾಲೀನರು ಯಾರೂ ಅದನ್ನು ಕಣ್ಣೆತ್ತಿ ಸಹ ನೋಡಲಿಲ್ಲವೆಂಬ ಬೇಸರ ಮತ್ತು ನಿರಾಶೆಗಳಿಂದ ಡಾರ್ಲಿ 1846ರ ನವೆಂಬರ್ 23ರಂದು ಲಂಡನ್ನಿನಲ್ಲಿ ತೀರಿಕೊಂಡ. ಹದಿನೇಳನೆಯ ಶತಮಾನದ ಅಂತರ್ಯವನ್ನು ಡಾರ್ಲಿ ಅದೆಷ್ಟು ಚೆನ್ನಾಗಿ ಅರಗಿಸಿಕೊಂಡಿದ್ದನೆನ್ನುವುದಕ್ಕೆ ಪಾಲ್ ಗ್ರೇವ್ ತನ್ನ ಗೋಲ್ಡನ್ ಟ್ರಷರಿಯಲ್ಲಿ ಆ ಶತಮಾನದ ಅನಾಮಿಕ ಕವಿಯೊಬ್ಬನ ಉತ್ತಮ ಭಾವಗೀತೆಯೆಂದು ಡಾರ್ಲಿಯ ಇಟ್ ಈಸ್ ನಾಟ್ ಬ್ಯೂಟಿ ಐ ಡಿಸೈರ್- ಎಂಬ ಗೀತಿಕೆಯನ್ನು ಸೇರಿಸಿರುವುದೇ ಸಾಕ್ಷಿಯಾಗಿದೆ.