ಜಿಬ್ರಾಲ್ಟರ್ ತಲೆಬುರುಡೆ ಜಿಬ್ರಾಲ್ಟರ್ ಪ್ರದೇಶದಲ್ಲಿ ಸಿಕ್ಕಿದ ಮಾನವ ತಲೆಬುರುಡೆ.
ಮಾನವನ ವಿಕಾಸ ಹಾದಿಯಲ್ಲಿ ಮುಖ್ಯವಾದ ನೀಯಾಂಡರ್ತಾಲ್ ಮಾನವನ ಗುಂಪಿಗೆ ಸೇರಿದೆ. 1856ರಲ್ಲಿ ಜರ್ಮನಿಯ ನೀಯಾಂಡರ್ ಕಣಿವೆಯ ಪೇಲಿಯೊಲಿತಿಕ್ ಗುಹೆಗಳಲ್ಲಿ ವಾಸಿಸುತ್ತಿದ್ದ ಮಾನವನ ಅಸ್ಥಿ ಅವಶೇಷಗಳು ಸಿಕ್ಕಿದವು. ಆದ್ದರಿಂದ ಇವಕ್ಕೆ ನೀಯಾಂಡರ್ತಾಲ್ ಮಾನವನ ಅಸ್ಥಿ ಅವಶೇಷಗಳೆಂದು ಹೆಸರಾಯಿತು. ಇದಕ್ಕೆ ಮುಂಚೆಯೇ ಅಂದರೆ, 1848ರಲ್ಲಿ ಈ ಗುಂಪಿಗೆ ಸೇರಿದ ಮಾನವನ ತಲೆಬುರುಡೆಯೊಂದು ಜಿಬ್ರಾಲ್ಟರಿನಲ್ಲಿ ಸಿಕ್ಕಿತ್ತು. ಆಗ ಅದರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿರಲಿಲ್ಲ. ಆ ತಲೆಬುರುಡೆ ಸಾಧಾರಣ ರೀತಿಯದು. ಅದು ಹೆಂಗಸಿನ ತಲೆಬುರುಡೆ ಎಂದು ಈಗ ಗೊತ್ತಾಗಿದೆ. ಅದರಲ್ಲಿ ಮುಖದ ಎಲುಬುಗಳು ಮತ್ತು ಬಲ ಆಕ್ಸಿಪಿಟಲ್ ಭಾಗದ ಎಲುಬುಗಳು ಮಾತ್ರ ಸುರಕ್ಷಿತವಾಗಿವೆ. ಕಪಾಲದ ವಿಸ್ತಾರ ಸುಮಾರು 1280 ಮಿಲಿ ಲೀಟರ್. ಈ ತಲೆಬುರುಡೆ ಈಗ ಲಂಡನ್ನಿನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ನಲ್ಲಿದೆ.
1926ರಲ್ಲಿ ಮತ್ತೊಂದು ನೀಯಾಂಡರ್ತಾಲ್ ತಲೆಬುರುಡೆಯ ಭಾಗಗಳು ಜಿಬ್ರಾಲ್ಟರಿನಲ್ಲಿ ಸಿಕ್ಕಿದವು. ಅದು 5 ವರ್ಷ ಮಗುವಿನ ತಲೆಬುರುಡೆ. ಇದರಲ್ಲಿ, ಫ್ರಾಂಟಲ್ ಮತ್ತು ಆಕ್ಸಿಪಿಟಲ್ ಎಲುಬುಗಳ ಜೊತೆಗೆ ಕೆಳದವಡೆಯು ಮಾತ್ರ ಇದೆ. ಈ ತಲೆಬುರುಡೆ ಪೂರ್ಣವಾಗಿಲ್ಲದುದರಿಂದಲೂ ಎಳೆ ವಯಸ್ಸಿನ ಮಾನವನ ತಲೆಬುರುಡೆಯಾದುದರಿಂದಲೂ ಇದನ್ನು ಯಾವ ಮಾನವ ಗುಂಪಿಗೆ ಸೇರಿಸಬೇಕೆಂಬುದು ಕಷ್ಟ. ಆದರೂ ಇದರ ಕೆಳದವಡೆ ಟ್ಯಾಂಜಿಯರ್ ಮಾನವನ ಕೆಳದವಡೆಯನ್ನು ಹೋಲುವುದರಿಂದ ಈ ತಲೆಬುರುಡೆಯನ್ನು ಮೊದಲನೆಯ ಜಿಬ್ರಾಲ್ಟರ್ ತಲೆಬುರುಡೆಯಂತೆ ಸಾಧಾರಣರೀತಿಯ ನೀಯಾಂಡರ್ತಾಲ್ ಗುಂಪಿಗೆ ಸೇರಿಸಬೇಕಾಗುವುದು.