ಜಿಮ್ ಲೇಕರ್

ಜಿಮ್ ಲೇಕರ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಜೇಮ್ಸ್ ಚಾರ್ಲ್ಸ್ ಲೇಕರ್
ಹುಟ್ಟು(೧೯೨೨-೦೨-೦೯)೯ ಫೆಬ್ರವರಿ ೧೯೨೨
ಶಿಪ್ಲೆ, ಯಾರ್ಕ್‌ಶೈರ್‌ನ್ ಪಶ್ಚಿಮ ರೈಡಿಂಗ್, ಇಂಗ್ಲೆಂಡ್
ಸಾವು23 April 1986(1986-04-23) (aged 64)
ಪುಟ್ನಿ, ಲಂಡನ್.
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ ಆಫ್ ಬ್ರೇಕ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ [[ಇಂಗ್ಲೆಂಡ್ ಟೆಸ್ಟ್ ಕ್ರಿಕೆಟಿಗರ ಪಟ್ಟಿ|೩೨೮]])೨೧ ಜನವರಿ ೧೯೪೮ v ವಿಸ್ಟ್ ಇಂಡೀಸ್
ಕೊನೆಯ ಟೆಸ್ಟ್೧೮ ಫೆಬ್ರವರಿ ೧೯೫೯ v ಆಸ್ಟ್ರೇಲಿಯ
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
೧೯೪೬-೧೯೫೯ಸರ್ರೆ
೧೯೫೧/೫೨[ಆಕ್ಲೆಂಡ್ ಕ್ರಿಕೆಟ್ ತಂಡ
೧೯೬೨-೧೯೬೪ಎಸ್ಸೆಕ್ಸ್
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ತೆಸ್ಟ್ ಪ್ರಥಮ ದರ್ಜೆ
ಪಂದ್ಯಗಳು ೪೬ ೪೫೦
ಗಳಿಸಿದ ರನ್ಗಳು ೬೭೬ ೭,೩೦೪
ಬ್ಯಾಟಿಂಗ್ ಸರಾಸರಿ ೧೪.೦೮ ೧೬.೬೦
೧೦೦/೫೦ ೦/೨ ೨/೧೮
Top score ೬೩ ೧೧೩
ಎಸೆತಗಳು ೧೨,೦೨೭ ೧೦೧,೩೭೦
ವಿಕೆಟ್‌ಗಳು ೧೯೩ ೧,೯೪೪
ಬೌಲಿಂಗ್ ಸರಾಸರಿ ೨೧.೨೪ ೧೮.೪೧
ಐದು ವಿಕೆಟ್ ಗಳಿಕೆ ೧೨೭
ಹತ್ತು ವಿಕೆಟ್ ಗಳಿಕೆ ೩೨
ಉನ್ನತ ಬೌಲಿಂಗ್ ೧೦/೫೩ ೧೦/೫೩
ಹಿಡಿತಗಳು/ ಸ್ಟಂಪಿಂಗ್‌ ೧೨/– ೨೭೦/–
ಮೂಲ: Cricinfo, ೩೧ ಅಕ್ಟೋಬರ್ ೨೦೨೦

ಜೇಮ್ಸ್ ಚಾರ್ಲ್ಸ್ ಲೇಕರ್ (೯ ಫೆಬ್ರವರಿ ೧೯೨೨ - ೨೩ ಏಪ್ರಿಲ್ ೧೯೮೬) ಇಂಗ್ಲಿಷ್ ಕ್ರಿಕೆಟಿಗರಾಗಿದ್ದಾರೆ. ಇವರು ೧೯೪೬ ರಿಂದ ೧೯೫೯ ರವರೆಗೆ ಸರ್ರೆ ಕೌಂಟಿ ಕ್ರಿಕೆಟ್ ಕ್ಲಬ್ ಪರ ಆಡಿದ್ದು, ೪೬ ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು ಯಾರ್ಕ್‌ಷೈರ್‌ನ ವೆಸ್ಟ್ ರೈಡಿಂಗ್‌ನ ಶಿಪ್ಲಿಯಲ್ಲಿ ಹುಟ್ಟಿ, ಲಂಡನ್‌ನ ಪುಟ್ನಿಯಲ್ಲಿ ನಿಧನರಾದರು.

ಲೇಕರ್ ಬಲಗೈ ಆಫ್ ಬ್ರೇಕ್ ಬೌಲರ್, ಕ್ರಿಕೆಟ್ ಇತಿಹಾಸದ ಶ್ರೇಷ್ಠ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗುತ್ತದೆ. ೧೯೫೬ರಲ್ಲಿ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದಲ್ಲಿ (ಓಲ್ಡ್ ಟ್ರಾಫರ್ಡ್) ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಅವರು ಹತ್ತೊಂಬತ್ತು (ಗರಿಷ್ಠ ಇಪ್ಪತ್ತು) ವಿಕೆಟ್‌ಗಳನ್ನು ಪಡೆದ ವಿಶ್ವ ದಾಖಲೆಯು ಈಗಲೂ ಅಚಲವಾಗಿದೆ. ಇದರಿಂದಾಗಿ ಆಸ್ಟ್ರೇಲಿಯಾವನ್ನು ಸೋಲಿಸಲು ಇಂಗ್ಲೆಂಡ್‌ಗೆ ಸಾಧ್ಯವಾಗಿ, ಇದನ್ನು "ಲೇಕರ್‌ನ ಪಂದ್ಯ" ಎಂದು ಕರೆಯುತ್ತಾರೆ. ಕ್ಲಬ್ ಮಟ್ಟದಲ್ಲಿ ಅವರು ಎಡಗೈ ಆರ್ಥೊಡಾಕ್ಸ್ ಸ್ಪಿನ್ನರ್ ಆಗಿದ್ದ ಟೋನಿ ಲಾಕ್ ಅವರೊಂದಿಗೆ ಅದ್ಭುತ ಜುಗಲ್ಬಂಧಿಯಾಗಿ, ೧೯೫೨ ರಿಂದ ೧೯೫೯ ರವರೆಗೆ ಸತತ ಏಳು ಕೌಂಟಿ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಒಳಗೊಂಡಂತೆ, ೧೯೫೦ರ ದಶಕದಲ್ಲಿ ಸರ್ರೆ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದರು. ಎರಡು ಪ್ರಥಮ ದರ್ಜೆ ಶತಕಗಳನ್ನು ಗಳಿಸಿದ ಉಪಯುಕ್ತ ಟೈಲ್-ಎಂಡರ್ ಆಗಿ ಲೇಕರ್ ಬಲಗೈ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಉತ್ತಮ ಕ್ಷೇತ್ರರಕ್ಷಕರಾಗುದ್ದು, ವಿಶೇಷವಾಗಿ ಗಲ್ಲಿ ಸ್ಥಾನದಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದರು.

೧೯೫೧ರಲ್ಲಿ ಅವರ ಸಾಧನೆಗಳಿಗಾಗಿ, ಲೇಕರ್‌ನನ್ನು ೧೯೫೨ರ ಆವೃತ್ತಿಯಲ್ಲಿ ವಿಸ್ಡೆನ್ ಕ್ರಿಕೆಟಿಗರ ಅಲ್ಮಾನಾಕ್ ವರ್ಷದ ಐದು ವಿಸ್ಡೆನ್ ಕ್ರಿಕೆಟಿಗರಲ್ಲಿ ಒಬ್ಬರಾಗಿ ಆಯ್ಕೆ ಮಾಡಿಲಾಯಿತು. ೧೯೫೧/೫೨ ಸಾಲಿನಲ್ಲಿ ಆಕ್ಲೆಂಡ್ ಪರ ಆಡಿದ ನಂತರ ೧೯೫೨ರಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ಅಲ್ಮಾನಾಕ್ ವರ್ಷದ ಆಟಗಾರನಾಗಿ ಆಯ್ಕೆಯಾದರು. ೧೯೫೬ರಲ್ಲಿ ಅವರು ಸರ್ರೆಯ ಪರ ಆಡಿ £೧೧,೦೮೬ ಗಳಿಸಿ, ವರ್ಷದ ಕೊನೆಯಲ್ಲಿ ಅವರನ್ನು "ವರ್ಷದ ಬಿಬಿಸಿ ಸ್ಪೋರ್ಟ್ಸ್ ಪರ್ಸನಾಲಿಟಿ" ಎಂದು ಆಯ್ಕೆ ಮಾಡಲಾಯಿತು. ಲೇಕರ್ ಈ ಪ್ರಶಸ್ತಿಯನ್ನು ಗೆದ್ದ ಮೊದಲ ಕ್ರಿಕೆಟಿಗ. ನಂತರ ಅವರು ಬಿಬಿಸಿಯ ವಿದೇಶಿ ಪ್ರಸಾರಗಳಲ್ಲಿ ಕ್ರಿಕೆಟ್ ನಿರೂಪಕರಾಗಿ ಕೆಲಸ ಮಾಡಿದರು.

ಆರಂಭಿಕ ಜೀವನ

[ಬದಲಾಯಿಸಿ]

ಜಿಮ್ ಲೇಕರ್ ಅವರ ಕುಟುಂಬದ ಹಿನ್ನೆಲೆ ಸಂಕೀರ್ಣವಾಗಿದ್ದು, ೧೯೯೮ಲ್ಲಿ ಅಲನ್ ಹಿಲ್ ಅವರು ಸಂಶೋಧಿಸಿ ಜೀವನ ಚರಿತ್ರೆಯನ್ನು ಪ್ರಕಟಿಸುವ ತನಕ ದೀರ್ಘಕಾಲದ ತಪ್ಪುಗ್ರಹಿಕೆಗಳು ಇದ್ದವು. ಲೇಕರ್ ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ಅನಾಥಗೊಳಿಸಲಾಯಿತು ಮತ್ತು ನಾಲ್ಕು ಸೋದರತ್ತೆಯರು ಬೆಳೆಸಿದರು ಎಂದು ಹಲವು ವರ್ಷಗಳಿಂದ ನಂಬಲಾಗಿತ್ತು. ಹಿಲ್ ಅವರಿಂದ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಮತ್ತು ನಿಜವಾಗಿಯೂ ಏನಾಯಿತು ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಯಿತು.[]

ಲೇಕರ್ ಅವರ ತಾಯಿ ಎಲ್ಲೆನ್ ಸುಮಾರು ೧೮೭೮ರಲ್ಲಿ ಬಾರ್ನ್ಸ್ಲೆ ಪ್ರದೇಶದಲ್ಲಿ ಹುಟ್ಟಿದರು. ೧೮೯೮ರ ಸುಮಾರಿಗೆ ಎಲ್ಲೆನ್ ೨೦ ವರ್ಷದವಳಿದ್ದಾಗ ಬ್ರಾಡ್ಫೋರ್ಡಿನ ಪ್ರಯಾಣಿಕ ಮುದ್ರಕನಾಗಿದ್ದ ಜೇಮ್ಸ್ ಹೆನ್ರಿ ಕೇನ್ ಎಂಬ ವ್ಯಕ್ತಿಯನ್ನು ಮದುವೆಯಾದಳು. ಎಲ್ಲೆನ್‌ಗೆ ಮೋಲಿ, ಮಾರ್ಗರೇಟ್ ಮತ್ತು ಡೋರೀನ್ ಎಂಬ ಮೂರು ಹೆಣ್ಣುಮಕ್ಕಳು ಹುಟ್ಟಿದರು. ನಂತರ ಕೇನ್ ಅವಳನ್ನು ತೊರೆದನು. ಕೇನ್‌ನ ಕುಟುಂಬವು ಅವನನ್ನು ಬಹಿಷ್ಕರಿಸಿದ್ದನ್ನು ಹಿಲ್ ಕಂಡುಕೊಂಡಳು. ಆದರೆ ಇವರ ವಿಚ್ಛೇದನ ಎಂದಿಗೂ ಆಗಲಿಲ್ಲ, ಆದ್ದರಿಂದ ಎಲ್ಲೆನ್ ಹೆಸರು ಎಲ್ಲೆನ್ ಕೇನ್ ಎಂದೇ ಮುಂದುವರೆಯಿತು.[]

ಎಲ್ಲೆನ್ ತನ್ನ ಸಹೋದರಿ ಎಮಿಲಿ ಆಕ್ಸ್‌ಬಿಯ ಮಾದರಿಯನ್ನು ಅನುಸರಿಸಿ ಸಣ್ಣ ಮಕ್ಕಳ ಶಾಲಾ ಶಿಕ್ಷಕಿಯಾದಳು. ಬ್ರಾಡ್‌ಫೋರ್ಡ್‌ನ ಉತ್ತರದ ಐರೆಡೇಲ್‌ನಲ್ಲಿರುವ ಶಿಪ್ಲೆ ಜಿಲ್ಲೆಯ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಳು. ಕೆಲ ವರ್ಷಗಳ ನಂತರ ಅವಳು ಚಾರ್ಲ್ಸ್ ಹೆನ್ರಿ ಲೇಕರ್ ಎಂಬ ವ್ಯಕ್ತಿಯೊಂದಿಗೆ ತೊಡಗಿಸಿಕೊಂಡಳು.[] ಅವರು ಬ್ರಾಡ್ಫೋರ್ಡ್ ಸಿಟಿ ಹಾಲ್‌ನಲ್ಲಿ ಕೆಲಸ ಮಾಡಲು ಬಂದಿದ್ದ ಸಸೆಕ್ಸ್‌ನ ಕಲ್ಲು ಕೆಲಸಗಾರರಾಗಿದ್ದರು. ಇವರಿಬ್ಬರು ಒಟ್ಟಿಗೆ ಮನೆ ಸ್ಥಾಪಿಸಿ, ಸೂಸಿ ಎಂಬ ಮಗಳನ್ನು ೧೯೧೬ರಲ್ಲಿ ಪಡೆದರು. ಫೆಬ್ರವರಿ ೧೯೨೨ರಲ್ಲಿ ಇವರ ಕುಟುಂಬವು ಶಿಪ್ಲಿಯ ೩೬, ನಾರ್ವುಡ್ ರಸ್ತೆಯಲ್ಲಿ ವಾಸಿಸುತ್ತಿತ್ತು. ಅಲ್ಲಿಯೇ ಮೂಲತಃ ಚಾರ್ಲಿ ಎಂದು ಕರೆಯಲ್ಪಡುವ ಜಿಮ್ ಲೇಕರ್ ಹುಟ್ಟಿದ್ದು.[] ೧೯೨೪ರಲ್ಲಿ ಚಾರ್ಲ್ಸ್ ಲೇಕರ್ ಎಲ್ಲೆನ್‌ರನ್ನು ತೊರೆದರು. ಎಲ್ಲೆನ್ ಮತ್ತೆ ಕುಟುಂಬವನ್ನು ಪೋಷಿಸಲು ಶಾಲಾ ಬೋಧನೆಯನ್ನು ಹಿಡಿಯಬೇಕಾಯಿತು.[]

ಇದು ಸಂಭವಿಸಿದಾಗ ಜಿಮ್‌ಗೆ ಎರಡು ವರ್ಷ ವಯಸ್ಸಾಗಿದ್ದು, ಅವನ ತಂದೆ ತೀರಿಹೋದರೆಂದು ತಿಳಿಸಲಾಯಿತು. ಜಿಮ್‌ಗೆ ತನ್ನ ತಂದೆಯ ನೆನಪಿಲ್ಲ, ಅವರ ಛಾಯಾಚಿತ್ರವನ್ನು ಸಹ ನೋಡಿಲ್ಲ ಎಂದು ಅಲನ್ ಹಿಲ್ ಹೇಳಿದ್ದಾರೆ. ೧೯೮೦ರ ದಶಕದಲ್ಲಿ, ಜಿಮ್‌ನ ಸಾವಿನ ಕೆಲವೇ ವರ್ಷಗಳ ಮೊದಲು, ತನ್ನ ತಂದೆ ಬರ್ನಾಲ್ಡ್ಸ್‌ವಿಕ್‌ಗೆ ಸ್ಥಳಾಂತರಗೊಂಡು, ೧೯೩೧ರಲ್ಲಿ ಸ್ಥಳೀಯವಾಗಿ ಕಲ್ಲು ಕೆಲಸಗಾರನಾಗಿ ಕೆಲಸ ಮಾಡಿದ ನಂತರ ಅಲ್ಲಿಯೇ ಮರಣಹೊಂದಿದ್ದನ್ನು ಕಂಡುಕೊಂಡನು. ಲೇಕರ್ ಸೀನಿಯರ್ ಎಲ್ಲೆನ್ ಅವರನ್ನು ತೊರೆದು, ಬರ್ನಾಲ್ಡ್ಸ್‌ವಿಕ್‌ನಲ್ಲಿ ಅನ್ನಿ ಸಟ್‌ಕ್ಲಿಫ್ ಎಂಬ ಮಹಿಳೆಯೊಂದಿಗೆ ವಾಸಿಸುತ್ತಿದ್ದನು ಎಂಬುದು ತಿಳಿಯುತ್ತದೆ.[]

ಚಾರ್ಲ್ಸ್ ಲೇಕರ್ ನಿಧನರಾಗಿದ್ದಾಗಿ ಎಲ್ಲರಿಗೂ ಹೇಳಿ, ಕ್ರಮೇಣ ನಾರ್ವುಡ್ ಅವೆನ್ಯೂದಿಂದ ಹತ್ತಿರದ ಕಾರ್ಮೋನಾ ಅವೆನ್ಯೂಗೆ ಸ್ಥಳಾಂತರಗೊಂಡರು. ನಂತರ ಮೋಲಿ, ಮಾರ್ಗರೇಟ್ ಮತ್ತು ಡೋರೀನ್ ಎಲ್ಲಾ ಸಹೋದರಿಯರು ಅನಾಥರಾದ ಸೂಸಿ ಮತ್ತು ಜಿಮ್ ಅವರ ಅತ್ತೆ ಎಂದು ಎಲ್ಲೆನ್ ಅವರು ಎಲ್ಲರಿಗೂ ತಿಳಿಸಿದರು. ೧೯೨೪ರಲ್ಲಿ ಎಲ್ಲೆನ್ ಕ್ಯಾಲ್ವರ್ಲಿಯ ಚರ್ಚ್ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಮೋಲಿ ಮತ್ತು ಮಾರ್ಗರೇಟ್ ಆಗಲೇ ಮನೆ ತೊರೆದಿದ್ದರು ಆದರೆ ಇನ್ನೂ ಶಿಪ್ಲೆ ಪ್ರದೇಶದಲ್ಲಿ ವಾಸಿಸುತ್ತಿದ್ದರು.

೧೯೩೦ರ ಆಸುಪಾಸಿನಲ್ಲಿ, ಎಲ್ಲೆನ್ ಫ್ರಿಜಿಂಗ್ಹಾಲ್ ಕೌನ್ಸಿಲ್ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಆಗ ಅಲ್ಲಿ ಜಿಮ್ ೧೯೩೨ರವರೆಗೆ ವ್ಯಾಸಂಗ ಮಾಡಿದನು.[] ಅವನು ಬುದ್ಧಿವಂತನಾಗಿದ್ದು, ವಿದ್ಯಾರ್ಥಿವೇತನವನ್ನು ಗೆಲ್ಲಲು ಸಾಧ್ಯವಾಯಿತು. ಇದರಿಂದಾಗಿ ಹತ್ತಿರದ ಸಾಲ್ಟೇರ್‌ನ ಸಾಲ್ಟ್ಸ್ ಪ್ರೌಢ ಶಾಲೆಯಲ್ಲಿ ಉಚಿತ ಸ್ಥಾನ ಪಡೆದನು.[] ಸೆಪ್ಟೆಂಬರ್ ೧೯೩೨ರಲ್ಲಿ ಸಾಲ್ಟ್ಸ್‌ಗೆ ಸೇರಿಕೊಂಡು ಏಳು ವರ್ಷಗಳ ಕಾಲ ಅಲ್ಲಿ ಓದಿದರು. ಬಹಳ ವರ್ಷಗಳ ನಂತರ ಅವರು ಅಲ್ಲಿ ತುಂಬಾ ಸಂತೋಷವಾಗಿ ಇದ್ದರೆಂದು ಹೇಳಿದರು.[] ೧೯೩೨ರ ಸುಮಾರಿಗೆ ಎಲ್ಲೆನ್ ಬರ್ಟ್ ಜೋರ್ಡಾನ್ ಹೆಸರಿನ ಹೊಸ ಜೊತೆಗಾರನನ್ನು ಪಡೆದರು. ಇದು ಉತ್ತಮ ಸಂಬಂಧವಾಗಿತ್ತು ಮತ್ತು ಜಿಮ್ ತನ್ನ ಹಿರಿಯ ಶಾಲಾ ವರ್ಷಗಳಲ್ಲಿ ನೆಲೆಸಿದ ಮನೆಯ ಜೀವನವನ್ನು ಆನಂದಿಸಲು ಸಾಧ್ಯವಾಯಿತು. ಕುಟುಂಬವು ಬೈಲ್ಡನ್‌ನ ಕಿರ್ಕ್‌ಲ್ಯಾಂಡ್ಸ್ ಅವೆನ್ಯೂಗೆ ಸ್ಥಳಾಂತರಗೊಂಡಿತು. ಡೋರೀನ್ ಮತ್ತು ಸೂಸಿ ಮದುವೆಯಾಗಿ ಹೋದರು. ಆದರೆ ಜಿಮ್ ಎಲ್ಲೆನ್ ಮತ್ತು ಬರ್ಟ್ ಅವರೊಂದಿಗೆ ೧೯೪೧ರಲ್ಲಿ ಸೈನ್ಯಕ್ಕೆ ಸೇರುವವರೆಗೂ ವಾಸಿಸುತ್ತಿದ್ದರು. ಫೆಬ್ರವರಿ ೧೯೩೯ರಲ್ಲಿ ಜಿಮ್ ಶಾಲೆಯನ್ನು ತೊರೆದು, ಬ್ರಾಡ್ಫೋರ್ಡ್ ನಗರ ಕೇಂದ್ರದಲ್ಲಿರುವ ಬಾರ್ಕ್ಲೇಸ್ ಬ್ಯಾಂಕಿನಲ್ಲಿ ಪೂರ್ಣ ಸಮಯದ ಉದ್ಯೋಗವನ್ನು ಪಡೆದರು. ಅವರು ತಿಂಗಳಿಗೆ £೫ ಕ್ಕೆ ಒಂಬತ್ತು ಗಂಟೆಗಳ ದಿನ ಕೆಲಸ ಮಾಡಿದರು.[೧೦]

ಜಿಮ್ ಸ್ವಯಂಪ್ರೇರಿತನಾಗಿ ಸೇನೆ ಸೇರಲು ಹೊರಟಾಗ ಎಲ್ಲೆನ್ ತಲ್ಲಣಗೊಂಡರು. ಅವನು ತನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳಿ, ಇಪ್ಪತ್ತು ವರ್ಷ ವಯಸ್ಸಿನವನು ಎಂದು ಹೇಳಿದನು.[೧೧] ಜಿಮ್ ಕಡಿಮೆ ವಯಸ್ಸಿನವನಾಗಿದ್ದಾನೆ ಎಂದು ಎಲ್ಲೆನ್ ಸೈನ್ಯಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಜಿಮ್ ಪದಾತಿ ಪಡೆ ತರಬೇತಿಗಾಗಿ ಲೀಸೆಸ್ಟರ್‌ಶೈರ್‌ಗೆ ಹೋಗಿ, ನಂತರ ಅವರನ್ನು ಮಧ್ಯಪ್ರಾಚ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ರಾಯಲ್ ಆರ್ಮಿ ಆರ್ಡ್‌ನೆನ್ಸ್ ಕಾರ್ಪ್ಸ್ (ಆರ್‌ಎಒಸಿ) ಗೆ ನೇಮಿಸಲಾಯಿತು. ೧೯೪೫ರವರೆಗೆ ಪ್ಯಾಲೆಸ್ಟೈನ್ ಮತ್ತು ಕೈರೋದಲ್ಲಿ ಸೇವೆ ಸಲ್ಲಿಸಿದರು. ಆದರೂ ಅವರು ಎಂದಿಗೂ ನೇರವಾಗಿ ಹೋರಾಡಲಿಲ್ಲ.[೧೨] ಜಿಮ್ ೧೯೪೫ರಲ್ಲಿ ರಜೆಯ ಮೇಲೆ ಇಂಗ್ಲೆಂಡ್‌ಗೆ ಮರಳಿದರು. ಆದರೆ ಅವರು ವಿದೇಶದಲ್ಲಿದ್ದಾಗ ಮನೆಯ ಪರಿಸ್ಥಿತಿ ಬದಲಾಗಿತ್ತು. ಯುದ್ಧದಲ್ಲಿ ಬರ್ಟ್ ಸಾವನ್ನಪ್ಪಿದ್ದನು ಮತ್ತು ಎಲ್ಲೆನ್ ಬೈಲ್ಡನ್‌ನಲ್ಲಿರುವ ಮನೆಯನ್ನು ಮಾರಬೇಕಾಯಿತು. ೬೬ ವರ್ಷದವಳಾಗಿದ್ದರೂ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಆಕೆಯ ಆರೋಗ್ಯ ಕುಂದುಹೋದ್ದರಿಂದ ಜಿಮ್ ಅವಳ ಬಗ್ಗೆ ಚಿಂತಿತನಾಗಿದ್ದನು. ಅವನ ರಜೆ ಕೊನೆಗೊಳ್ಳುವ ತುಸು ಮೊದಲು, ಎಲ್ಲೆನ್ ಹೃದಯಾಘಾತದಿಂದ ಸತ್ತಳು. ಎಲ್ಲೆನ್ ಅವನಿಗೆ £ ೧,೦೦೦ ಮೌಲ್ಯದ ಎಸ್ಟೇಟ್ ಅನ್ನು ಬಿಟ್ಟಳು. ಅದು ಆಗಿನ ಕಾಲದಲ್ಲಿ ಸಾಕಷ್ಟು ಗಣನೀಯ ಮೊತ್ತವಾಗಿತ್ತು.[೧೩]

ಜಿಮ್ ಇಟಲಿಯ ಮೂಲಕ ಈಜಿಪ್ಟ್‌ಗೆ ಹಿಂತಿರುಗಬೇಕಾಯಿತು. ಸೇವಾವಧಿ ಇನ್ನೂ ಒಂದು ವರ್ಷದ ಕಾಲ ಇತ್ತು. ಜಿಮ್ ೧೯೪೫ರ ಉತ್ತರಾರ್ಧದಲ್ಲಿ ಫೋಕ್‌ಸ್ಟೋನ್‌ನಲ್ಲಿರುವ ಶಾರ್ನ್‌ಕ್ಲಿಫ್ ಬ್ಯಾರಕ್‌ಗಳಿಗೆ ಒಂದು ತಿಂಗಳ ಕಾಲ ಕಳುಹಿಸಲಾಯಿತು. ನಂತರ ಅವರು ಮಧ್ಯ ಲಂಡನ್ನಲ್ಲಿರುವ ಯುದ್ಧ ಕಚೇರಿಗೆ ವರ್ಗಾವಣೆಯ ಬಗ್ಗೆ ಮಾತುಕತೆ ನಡೆಸಿದರು. ಕ್ಯಾಟ್ಫೋರ್ಡ್ನಿಂದ ಒಂದೆರಡು ಮೈಲಿ ದೂರದಲ್ಲಿರುವ ಫಾರೆಸ್ಟ್ ಹಿಲ್ನಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸಲು ಕಾಲಿನ್ ಹ್ಯಾರಿಸ್ ಎಂಬ ಸೇನಾ ಸ್ನೇಹಿತ ಅವನನ್ನು ಆಹ್ವಾನಿಸಿದ. ಇದು ತಾತ್ಕಾಲಿಕ ವ್ಯವಸ್ಥೆ ಎಂದು ಮೊದಲು ಯೋಜಿಸಿದ್ದರೂ ಲೇಕರ್ ಹ್ಯಾರಿಸ್ ಕುಟುಂಬದೊಂದಿಗೆ ಐದು ವರ್ಷಗಳ ಕಾಲ ಬಾಳಿದನು. ಆಗಸ್ಟ್ ೧೯೪೬ ವರೆಗೂ ಅವರ ಸೇವಾವಧಿ ಇತ್ತು. ಸೇನಾಪಡೆಯಲ್ಲಿ ಶಾಶ್ವತ ವೃತ್ತಿಜೀವನದ ಆಯ್ಕೆಯನ್ನು ಹೊಂದಿದ್ದರು. ಅವರು ಬ್ಯಾಂಕಿಂಗ್‌ಗೆ ಹಿಂದಿರುಗುಲು ಯೋಚಿಸಿ, ಬಾರ್ಕ್ಲೇಸ್‌ ತಮ್ಮನ್ನು ಪುನರ್ಸ್ಥಾಪಿಸಿ ಲಂಡನ್ ಶಾಖೆಗೆ ಕಳಿಸುತೀರಾ ಎಂದು ಕೇಳಿದರು. ಅವರು ಒಪ್ಪಿದರು, ಆದರೆ ಲೇಕರ್‌ನ ಹಳೆಯ ಶಾಲಾ ಗೆಳೆಯರಲ್ಲೊಬ್ಬರಾದ ಫ್ರೆಡ್ ರಾಬಿನ್ಸನ್ ನಂತರ ಅಲನ್ ಹಿಲ್‌ಗೆ ಹೇಳಿದಂತೆ, "ಈ ಎರಡೂ ಕೆಲಸಗಳು ಸಂಪೂರ್ಣವಾಗಿ ಅವನಿಗೆ ಹಿಡಿಸಲಿಲ್ಲ".[೧೪]

ಜಿಮ್ ಲೇಕರ್ ಹಲವು ವರ್ಷಗಳಿಂದ ಪ್ರತಿಭಾವಂತ ಕ್ರಿಕೆಟಿಗನಾಗಿ ಬೆಳೆದಿದ್ದನು. ಅವನ ಸೇನೆಯಲ್ಲಿನ ಸೇವೆ ಮುಗಿದ ಕೂಡಲೇ, ಸರ್ರೆ ಕೌಂಟಿ ಕ್ರಿಕೆಟ್ ಕ್ಲಬ್ ಅವರಿಗೆ ವೃತ್ತಿಪರ ಒಪ್ಪಂದವನ್ನು ನೀಡಿತು. ಇದನ್ನು ಅವರು ಯಾರ್ಕ್‌ಷೈರ್ ಕೌಂಟಿ ಕ್ರಿಕೆಟ್ ಕ್ಲಬ್‌ನಿಂದ ಅನುಮತಿ ಪಡೆದು ಒಪ್ಪಿದರು.[೧೫] ಅವರು ಆಗಲೇ ಒಂದು ತಿಂಗಳ ಹಿಂದೆಯೇ ಸರ್ರೆಗಾಗಿ ತಮ್ಮ ಪ್ರಥಮ ದರ್ಜೆ ಪಾದಾರ್ಪಣೆ ಮಾಡಿದ್ದರು ಮತ್ತು ಕೇವಲ ಹದಿನೇಳು ತಿಂಗಳ ನಂತರ ಜನವರಿ ೧೯೪೮ರಲ್ಲಿ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್‌ನಲ್ಲಿ ಇಂಗ್ಲೆಂಡ್ ಪರ ಟೆಸ್ಟ್ ಚೊಚ್ಚಲ ಪಂದ್ಯವನ್ನಾಡಿದರು.[೧೬]

೧೯೪೬ ರವರೆಗೆ ಕ್ರಿಕೆಟಿಗನಾಗಿ ಅಭಿವೃದ್ಧಿ

[ಬದಲಾಯಿಸಿ]

ಕ್ರಿಕೆಟ್ ಆಟದ ಉತ್ಸಾಹಿಯಾಗಿದ್ದ ತನ್ನ ತಾಯಿಯ ಪೂರ್ಣ ಪ್ರೋತ್ಸಾಹದಿಂದ ಲೇಕರ್ ಚಿಕ್ಕ ವಯಸ್ಸಿನಿಂದಲೂ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದ. ಅಲನ್ ಹಿಲ್‌ಗೆ ಸೂಸಿಯ ಮಗನಿಂದ ತಿಳಿದ ವಿಚಾರವೆಂದರೆ, ಎಲ್ಲೆನ್ ಸೂಸಿಯನ್ನು ಜಿಮ್ ವಿರುದ್ಧ ಬಾಲ್ ಹಾಕಲು ಹೇಳುತ್ತಿದ್ದಳು ಎಂದು. ಜಿಮ್‌ಗೆ ತನ್ನಲ್ಲಿ ಬ್ಯಾಟ್ಸ್‌ಮನ್ ಆಗುವ ಗುಣವಿದೆ ಎಂದು ನಂಬಿದ್ದನು. ಅವರು ಸಾಲ್ಟ್ಸ್ ಪ್ರೌಢ ಶಾಲಾ ತಂಡದಲ್ಲಿ ಮುಖ್ಯವಾಗಿ ಬ್ಯಾಟ್ಸ್‌ಮನ್ ಆಗಿ, ಕೆಲವೊಮ್ಮೆ ವೇಗದ ಬೌಲರ್ ಆಗಿ ನಿಯಮಿತ ಸದಸ್ಯರಾಗಿದ್ದರು. ಮಾರ್ಚ್ ೧೯೩೯ರಲ್ಲಿ ೧೬ ವರ್ಷ ವಯಸ್ಸಿನವನಾಗಿದ್ದಾಗ, ಯಾರ್ಕ್ಷೈರ್ ಹೆಡಿಂಗ್ಲಿಂಗ್ನಲ್ಲಿನ ಚಳಿಗಾಲದ ಶೆಡ್‌ನಲ್ಲಿ ವಿಶೇಷ ತರಬೇತಿಗೆ ಬರಲು ಅವರನ್ನು ಆಹ್ವಾನಿಸಲಾಯಿತು.[೧೭] ಯಾರ್ಕ್ಷೈರ್‌ನ ಶಿಫಾರಸ್ಸಿನ ಮೇರೆಗೆ, ಅವರು ಸಾಲ್ಟೇರ್ ಕ್ರಿಕೆಟ್ ಕ್ಲಬ್‌ಗೆ ಸೇರಿಕೊಂಡರು. ಬ್ರಾಡ್ಫೋರ್ಡ್ ಕ್ರಿಕೆಟ್ ಲೀಗ್‌ನಲ್ಲಿ ಬಿಲ್ಡನ್ ವಿರುದ್ಧ ರಾಬರ್ಟ್ಸ್ ಪಾರ್ಕ್ ಮೈದಾನದಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಆಡಿದರು. ಬೈಲ್ಡನ್ ತಂಡಕ್ಕೆ ಸೇರಿಸಲು ಪ್ರಯತ್ನಿಸುವ ಮೂಲಕ ಎಲ್ಲೆನ್ ಜಿಮ್‌ನ ಚೊಚ್ಚಲ ಪಂದ್ಯವನ್ನು ಹಾಳುಮಾಡಲು ಪ್ರಯತ್ನಿಸಿದ್ದಾಗಿ ಹಿಲ್ ವಿವರಿಸಿದ್ದಾರೆ. ಅವರು ಮೂರು ಸಾಲಿನಲ್ಲಿ ಸಾಲ್ಟೇರ್ ಪರ ಆಡಿ, ಒಂದು ಶತಕ ಬಾರಿಸಿದರು.[೧೮] ೧೯೩೯ರ ಸಾಲಿನಲ್ಲಿ, ಶಾಲಾ ತಂಡದಲ್ಲಿ ಸಾಲ್ಟ್ಸ್ ಎಚ್ಎಸ್ ಮತ್ತು ಸಾಲ್ಟೇರ್ ಸಿ.ಸಿ. ಪರ ಕೊನೆಯದಾಗಿ ಆಡಿದ್ದರು.[೧೯]

ಹರ್ಬರ್ಟ್ ಸಟ್ಕ್ಲಿಫ್ ಅವರ ಅಂಗಡಿಯಲ್ಲಿ ಹೊಸ ಕ್ರಿಕೆಟ್ ಗೇರ್ ಖರೀದಿಸಲು ಎಲ್ಲೆನ್ ತನ್ನನ್ನು ಲೀಡ್ಸ್‌ಗೆ ಕರೆದೊಯ್ದರು ಎಂದು ಲೇಕರ್ ನೆನಪಿಸಿಕೊಂಡಿದ್ದಾರೆ. ಅವಳು ಮಾಡಿದ ತ್ಯಾಗ "ಆಲೋಚಿಸಲು ಭಯ ಹುಟ್ಟಿಸುತ್ತದೆ" ಆದರೆ ಕ್ರಿಕೆಟಿಗನಾಗಿ ಅವನು ಯಶಸ್ವಿಯಾಗುವುದನ್ನು ನೋಡಲು ಅವಳು ನಿಶ್ಚಯಿಸಿದ್ದಳು ಎಂದು ಅವರು ಹೇಳಿದ್ದಾರೆ.[೨೦] ಯಾರ್ಕ್‌ಷೈರ್‌ನ ಕೋಚಿಂಗ್ ಸೆಷನ್‌ಗಳನ್ನು ಮಾಜಿ ಕೌಂಟಿ ಬ್ಯಾಟ್ಸ್‌ಮನ್ ಬೆನ್ನಿ ವಿಲ್ಸನ್ ನಡೆಸುತ್ತಿದ್ದರು. ಅವರು ಲೇಕರ್‌ಗೆ ಚೆಂಡನ್ನು ಹೇಗೆ ತಿರುಗಿಸಬೇಕೆಂದು ತೋರಿಸಿ, ಅದರ ಕೌಶಲ್ಯವನ್ನು ಬೆಳೆಸಲು ಪ್ರೋತ್ಸಾಹಿಸಿದರು. ವಿಲ್ಸನ್ ಹದಿಹರೆಯದವರಿಗೆ ಕೋಚಿಂಗ್ ತರಗತಿಗಳನ್ನು ನಡೆಸುತ್ತಿದ್ದರೂ, ಲೇಕರ್‌ಗೆ ಮಾಜಿ ಯಾರ್ಕ್‌ಷೈರ್ ಆಟಗಾರರಾದ ಜಾರ್ಜ್ ಹಿರ್ಸ್ಟ್, ಮಾರಿಸ್ ಲೇಲ್ಯಾಂಡ್, ಎಮ್ಮೊಟ್ ರಾಬಿನ್ಸನ್ ಮತ್ತು ಆಲ್ಫ್ರೆಡ್ ವರ್ಮಾಲ್ಡ್ ಸಹ ತರಬೇತುದಾರರಾಗಿದ್ದರು.[೨೧] ಲೇಕರ್ ತನ್ನನ್ನು ತಾನು ಬ್ಯಾಟ್ಸ್‌ಮನ್ ಎಂದು ಭಾವಿಸಿದ್ದಾನೆ ಮತ್ತು ೧೯೫೦ರ ದಶಕದ ಉತ್ತರಾರ್ಧದಲ್ಲಿ ಯಾರ್ಕ್‌ಷೈರ್ನ ನಾಯಕನಾದ ಅವನ ಸಮಕಾಲೀನ ರೋನಿ ಬರ್ನೆಟ್, ಯುದ್ಧದ ಮೊದಲು "ವೇಗದ ಆಫ್-ಕಟ್ಟರ್ಸ್-ಕಮ್-ಸ್ಪಿನ್ನರ್" ಗಳ ಮಿಶ್ರಣವನ್ನು ಲೇಕರ್ ಬೌಲ್ ಮಾಡಿದ್ದನೆಂದು ನೆನಪಿಸಿಕೊಂಡನು. ಲೇಕರ್‌ನ ಸಾಲ್ಟೇರ್ ತಂಡದ ಸಹ ಆಟಗಾರರಲ್ಲಿ ಒಬ್ಬರಾದ ಚಾರ್ಲಿ ಲೀ ಇದೇ ರೀತಿಯ ನೆನಪನ್ನು ಹೊಂದಿದ್ದು, "ಜಿಮ್ ಎಲ್ಲಾ ರೀತಿಯ ಎಸೆತಗಳನ್ನು ಬೌಲ್ ಮಾಡುತ್ತಾನೆ ಮತ್ತು ಸಾಮಾನ್ಯವಾಗಿ ಒಬ್ಬ ಶ್ರೇಷ್ಠ ಬೌಲರ್‌ನೆಂದ ತಿಳಿಯದೇ ತನ್ನನ್ನು ತಾನು ಆನಂದಿಸುತ್ತಿದ್ದನು" ಎಂದು ಹೇಳಿದ್ದಾರೆ.[೨೨]

ಸಾಲ್ಟೇರ್‌ನಲ್ಲಿ ಲೇಕರ್ ಸಾಕಷ್ಟು ನೆನಪಿನಲ್ಲಿ ಉಳಿಯುವಂತೆ ಮಾಡಿದ್ದರೂ, ಅವರ ಕ್ರಿಕೆಟ್ ವೃತ್ತಿಜೀವನವು ನಿಜವಾಗಿಯೂ ಆರಂಭವಾಗಿದ್ದು ಅವರು ಈಜಿಪ್ಟ್‌ನಲ್ಲಿ ಆರ್‌ಏಓಸಿ ಯೊಂದಿಗೆ ಹೊರಟಾಗ. ಇಂಟರ್-ಸರ್ವಿಸ್ ಪಂದ್ಯಗಳಲ್ಲಿ ತೆಂಗಿನಕಾಯಿ ಮ್ಯಾಟಿಂಗ್ ವಿಕೆಟ್‌ಗಳಲ್ಲಿ ಆಡಿದ ಅವರು, ಬೆನ್ನಿ ವಿಲ್ಸನ್ ಅವರು ಕಲಿಸಿದ ಆಫ್ ಸ್ಪಿನ್ ತಂತ್ರವನ್ನು ಪ್ರಯೋಗಿಸಲು ನಿರ್ಧರಿಸಿದರು. "ನನ್ನನ್ನು ಸಂಪೂರ್ಣ ಬೆರಗುಗೊಳಿಸುವಂತೆ" ಲೇಕರ್ ಈ ಮ್ಯಾಟಿಂಗ್ ಸ್ಟ್ರಿಪ್‌ಗಳ ಮೇಲೆ ಚೆಂಡನ್ನು "ಸಾಕಷ್ಟು ಅದ್ಭುತವಾಗಿ" ತಿರುಗಿಸಿದರು ಎಂದು ಅವರು ನೆನಪಿಸಿಕೊಂಡರು.[೨೩] ಜಾನ್ ಅರ್ಲಾಟ್ ನಂತರ ಈಜಿಪ್ಟ್‌ನ ಇಂಗ್ಲಿಷ್ ಕ್ರಿಕೆಟಿಗರು ಮನೆಗೆ ಬರೆದು "ಯಾರ್ಕ್‌ಷೈರ್ ಹುಡುಗನೊಬ್ಬ ಮಾಸ್ಟರ್‌ನಂತೆ ಸ್ಪಿನ್ ಬೌಲ್ ಮಾಡಬಲ್ಲ" ವ್ಯಕ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಬರೆದಿದ್ದಾರೆ.[೨೪] ೧೯೪೩ರಲ್ಲಿ ಅಲೆಕ್ಸಾಂಡ್ರಿಯದಲ್ಲಿ ಆರ್‌ಏಎಫ್ ವಿರುದ್ಧ ಒಂದು ಪಂದ್ಯದಲ್ಲಿ ಲೇಕರ್ ಹ್ಯಾಟ್ರಿಕ್ ಸೇರಿದಂತೆ ಹತ್ತು ರನ್‌ಗೆ ಐದು ವಿಕೆಟ್ ಗಳಿಸಿದರು. ೧೯೪೪ರಲ್ಲಿ ಅವರು ದಕ್ಷಿಣ ಆಫ್ರಿಕಾದ ವಾಯುಪಡೆಯ ಇಲೆವೆನ್ ವಿರುದ್ಧ ಆಡಿದರು. ಒಂದು ಶತಕ ಬಾರಿಸಿ, ನಂತರ ಹತ್ತು ರನ್‌ಗಳಿಗೆ ಆರು ವಿಕೆಟ್ ಪಡೆದರು. ಈ ಪಂದ್ಯಗಳಲ್ಲಿ ಅವರು ನಾರ್ಮನ್ ಯಾರ್ಡ್ಲಿ, ಪೀಟರ್ ಸ್ಮಿತ್, ಬರ್ಟ್ ಸಟ್ಕ್ಲಿಫ್, ರಾನ್ ಆಸ್ಪಿನಾಲ್, ಡಡ್ಲಿ ನೂರ್ಸ್ ಮತ್ತು ಆರ್ಥರ್ ಮ್ಯಾಕ್ಇಂಟೈರ್ ಸೇರಿದಂತೆ ಹಲವಾರು ಉನ್ನತ ದರ್ಜೆಯ ಆಟಗಾರರನ್ನು ಎದುರಿಸಿದರು. [೨೫]

ಲೇಕರ್ ಯಾರ್ಕ್‌ಷೈರ್ ಪರ ಆಡಲು ಇಷ್ಟಪಡುತ್ತಿದ್ದರೂ, ಯುದ್ಧ ಮುಗಿದ ನಂತರದ ಅವನ ಸನ್ನಿವೇಶಗಳು ಅನಿವಾರ್ಯವಾಗಿ ಸರ್ರೆ ಪರವಾಗಿ ಆಡುವಂತಾಯಿತು. ಅವರು ಫಾರೆಸ್ಟ್ ಹಿಲ್‌ನಲ್ಲಿ ಹ್ಯಾರಿಸ್ ಜೊತೆ ವಾಸವಾಗಿದ್ದಾಗ ಸೇವಾ ತಂಡಗಳಿಗಾಗಿ ಆಡುತ್ತಲೇ ಇದ್ದರು. ಮಾರ್ಚ್ ೧೯೪೬ರಲ್ಲಿ ಅವರು ಕ್ಯಾಟ್ಫೋರ್ಡ್ ಕ್ರಿಕೆಟ್ ಕ್ಲಬ್‌ಗೆ ಸೇರಿದರು.[೨೬] ಬ್ರೋಮ್ಲಿ ವಿರುದ್ಧ ೨೧ಕ್ಕೆ ೧೦ ವಿಕೆಟ್ ಸೇರಿದಂತೆ ಕ್ಯಾಟ್ಫೋರ್ಡ್‌ನ ಕೆಲವು ಪ್ರಭಾವಶಾಲಿ ಪ್ರದರ್ಶನಗಳು ಕ್ಯಾಟ್ಫೋರ್ಡ್ ಕ್ಲಬ್ ಅಧ್ಯಕ್ಷ ಆಂಡ್ರ್ಯೂ ಕೆಂಪ್ಟನ್ ಅವರ ಗಮನಕ್ಕೆ ಬಂತು. ಕೆಂಪ್ಟನ್‌ಗೆ ೧೯೪೬ರಲ್ಲಿ ಸರ್ರೆಯ ತರಬೇತುದಾರರಾಗಿದ್ದ ಇಂಗ್ಲೆಂಡ್‌ನ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಆಂಡಿ ಸ್ಯಾಂಡ್‌ಹ್ಯಾಮ್ ಲೇಕರ್‌ಗೆ ಶಿಫಾರಸು ಮಾಡಿದರು. ದಿ ಓವಲ್‌ನಲ್ಲಿ ಟ್ರಯಲ್‌ಗೆ ಸ್ಯಾಂಡ್‌ಹ್ಯಾಮ್ ಲೇಕರ್‌ನನ್ನು ಆಹ್ವಾನಿಸಿದರು.[೨೭] ಜುಲೈ ೧೭ರಂದು, ಸರ್ರೆ ಕಂಬೈನ್ಡ್ ಸರ್ವೀಸಸ್ ತಂಡವನ್ನು ಆತಿಥ್ಯ ವಹಿಸಿದಾಗ ಲೇಕರ್ ತನ್ನ ಪ್ರಥಮ ದರ್ಜೆ ಪಾದಾರ್ಪಣೆ ಮಾಡಿ, ಎದುರಾಳಿ ತಂಡವನ್ನು ಸರ್ರೆ ಆರು ವಿಕೆಟ್‌ಗಳಿಂದ ಸೋಲಿಸಿತು. ಲೇಕರ್ ೭೮ಕ್ಕೆ ಮೂರು ಮತ್ತು ೪೩ಕ್ಕೆ ಮೂರು ಅಂಕಗಳನ್ನು ಹೊಂದಿದ್ದರು. ಆ ಸಮಯದಲ್ಲಿ ಅವರು ಇನ್ನೂ ಆರ್‌ಏಓಸಿನಲ್ಲಿದ್ದರು. ಆದರೆ ಆಗಸ್ಟ್‌ನಲ್ಲಿ ಅವರನ್ನು ಬಿಡುಗಡೆ ಮಾಡಲಾಗಿ, ಯಾರ್ಕ್ಷೈರ್‌ನ ಅನುಮೋದನೆಗೆ ಒಳಪಟ್ಟು ಸರ್ರೆ ತಂಡವು ತಕ್ಷಣ ಅವರಿಗೆ ವೃತ್ತಿಪರ ಒಪ್ಪಂದವನ್ನು ನೀಡಿತು.[೨೮] ಯಾರ್ಕ್‌ಷೈರ್ ಅವರ ಬಿಡುಗಡೆಗೆ ಒಪ್ಪಿಕೊಂಡರು ಮತ್ತು ಚಳಿಗಾಲದಲ್ಲಿ ವಾರಕ್ಕೆ £೬ ರಂತೆ ಲೇಕರ್ ಸರ್ರಿಗೆ ಸಹಿ ಹಾಕಿದರು, ಬೇಸಿಗೆಯಲ್ಲಿ ಪಂದ್ಯದ ಶುಲ್ಕದಿಂದ ಇದನ್ನು ಹೆಚ್ಚಿಸಲಾಯಿತು.[೨೯] ಆ ಸಾಲಿನ ಅಂತ್ಯದ ವೇಳೆಗೆ ಲೇಕರ್ ಇನ್ನೂ ಎರಡು ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದರು.

ಪ್ರಥಮ ದರ್ಜೆ ಮತ್ತು ಅಂತರರಾಷ್ಟ್ರೀಯ ವೃತ್ತಿ

[ಬದಲಾಯಿಸಿ]

೧೯೪೭ ರಿಂದ ೧೯೫೦ ರವರೆಗೆ

[ಬದಲಾಯಿಸಿ]

ಲೇಕರ್ ೧೯೪೭ರಲ್ಲಿ ಕೌಂಟಿ ಮಟ್ಟದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದರು. ೭೯ ವಿಕೆಟ್‌ಳನ್ನು ಪಡೆದು ಸರ್ರೆ ಬೌಲಿಂಗ್ ಸರಾಸರಿಯಲ್ಲಿ ಅಗ್ರಸ್ಥಾನ ಗಳಿಸಿದರು. ಪೋರ್ಟ್ಸ್‌ಮೌತ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿ, ಅಲ್ಲಿ ಅವರು ಹ್ಯಾಂಪ್‌ಶೈರ್ ಅನ್ನು ೬೯ಕ್ಕೆ ಎಂಟು ರನ್ ಗಳಿಸಿ, ಚೆಲ್ಮ್ಸ್ಫೋರ್ಡ್‌ನಲ್ಲಿ ಎಸೆಕ್ಸ್ ವಿರುದ್ಧ ೯೪ಕ್ಕೆ ಏಳು ವಿಕೆಟ್ ಪಡೆದರು.[೩೦] ಸಾಲಿನ ಅಂತ್ಯದ ವೇಳೆಗೆ, ಹೇಸ್ಟಿಂಗ್ಸ್ ಫೆಸ್ಟಿವಲ್ ಪಂದ್ಯವೊಂದರಲ್ಲಿ ಪೆಲ್ಹಾಮ್ ವಾರ್ನರ್ ಅವರ ಇಲೆವೆನ್ ಪರ ದಕ್ಷಿಣ ಇಂಗ್ಲೆಂಡ್ ವಿರುದ್ಧ ಆಡಲು ಅವರನ್ನು ಆಹ್ವಾನಿಸಲಾಯಿತು. ಆ ಸಮಯದಲ್ಲಿ ಅವನು ತಿಳಿದಿರಲಿ ಅಥವಾ ಇಲ್ಲದಿರಲಿ, ಈ ಪಂದ್ಯವು ನಿರ್ಣಾಯಕ ಟೆಸ್ಟ್ ಪ್ರಯೋಗವಾಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಹ್ಯಾಟ್ರಿಕ್ ಸೇರಿದಂತೆ ಪಂದ್ಯದಲ್ಲಿ ಎಂಟು ವಿಕೆಟ್ ಕಬಳಿಸಿ ಲೇಕರ್ ಬಹಳ ಉತ್ತಮ ಪ್ರದರ್ಶನ ನೀಡಿದರು.[೩೧]

ನಂತರ ಅವರನ್ನು ಮೇರಿಲೆಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ೧೯೪೭/೪೮ ರ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಆಯ್ಕೆ ಮಾಡಿತು. ಅವರು ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಆಡಿ, ಚೊಚ್ಚಲ ಪಂದ್ಯದಲ್ಲಿ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ೧೦೩ಕ್ಕೆ ಏಳು ವಿಕೆಟ್ ಪಡೆದರು.[೩೨] ಈ ಪ್ರವಾಸವು ಎಂಸಿಸಿಗೆ ಕೆಟ್ಟದಾಗಿ ಪರಿಣಮಿಸಿ, ೧೯೪೭ರ ಪ್ಲೇಫೇರ್ ಇದನ್ನು "ಆನ್ ಇಲ್-ಸ್ಟಾರ್ಡ್ ವೆಂಚರ್" ಎಂದು ಶೀರ್ಷಿಕೆ ನೀಡಿತು.[೩೩] ಯೋಜನೆ ಮತ್ತು ಸಿದ್ಧತೆ ಕಳಪೆಯಾಗಿತ್ತು ಮತ್ತು ತಂಡವನ್ನು ಗಬ್ಬಿ ಅಲೆನ್ ಕೆಟ್ಟದಾಗಿ ಮುನ್ನಡೆಸಿದರು. "ತನ್ನ ಆಯ್ಕೆಯನ್ನು ನಿಜವಾಗಿಯೂ ಸಮರ್ಥಿಸಿದ" ಏಕೈಕ ಆಟಗಾರ ಲೇಕರ್ ಎಂದು ಪ್ಲೇಫೇರ್ ಹೇಳಿದೆ.[೩೪] ೧೯೪೮ರ ಆವೃತ್ತಿಯಲ್ಲಿ, ವಿಸ್ಡೆನ್ ಲೇಕರ್‌ನ ಆವಿಷ್ಕಾರವು ಸರ್ರಿಗೆ "ತೃಪ್ತಿಕರವಾಗಿದೆ" ಎಂದು ಹೇಳಿತು. ಅವರು ಆಫ್ ಬ್ರೇಕ್‌ಗಳಲ್ಲಿ ಪರಿಣತಿ ಹೊಂದಿದ್ದಾರೆ, ಗಲ್ಲಿಯಲ್ಲಿ "ಅಚ್ಚುಕಟ್ಟಾಗಿ ಕ್ಷೇತ್ರರಕ್ಷಣೆ" ಮಾಡುತ್ತಾರೆ ಮತ್ತು ಬ್ಯಾಟ್ಸ್‌ಮನ್ ಆಗಿ ಭರವಸೆಯನ್ನು ತೋರಿಸಿದ್ದಾರೆ ಎಂದು ಹೇಳಿತು.[೩೫]

ಟೆಸ್ಟ್ ಮಟ್ಟದಲ್ಲಿ ಇನ್ನೂ ಅನನುಭವಿಯಾದ ಲೇಕರ್ ಅವರು ೧೯೪೮ರಲ್ಲಿ ಆಸ್ಟ್ರೇಲಿಯನ್ನರ ವಿರುದ್ಧ ಮೂರು ಟೆಸ್ಟ್ ಪಂದ್ಯಗಳಲ್ಲಿ ಆಡಿದಾಗ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ನರ ಕೈಯಲ್ಲಿ ಭಾರೀ ಶಿಕ್ಷೆಗೆ ಗುರಿಯಾದರು. ಆ ವೈಫಲ್ಯವು ಇಂಗ್ಲೆಂಡ್ ತಂಡದ ಆಯ್ಕೆಗಾರರ ಮನಸ್ಸಿನಲ್ಲಿ ಲೇಕರ್ ಬಗ್ಗೆ ಅನುಮಾನವನ್ನು ಉಂಟುಮಾಡಿತು. ಸರ್ರೆಯಲ್ಲಿ ಅವರ ನಿರಂತರ ಯಶಸ್ಸಿನ ಹೊರತಾಗಿಯೂ, ಲೇಕರ್ ನಂತರ ೧೯೫೬ರವರೆಗೆ ಇಂಗ್ಲೆಂಡ್ ತಂಡದಲ್ಲಿ ನಿಯಮಿತ ಸ್ಥಾನವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಕೇವಲ ಒಂದು ಅಂತರರಾಷ್ಟ್ರೀಯ ಪ್ರವಾಸವನ್ನು ಕೈಗೊಂಡರು. ೧೯೫೩/೫೪ ರಲ್ಲಿ ಮತ್ತೊಮ್ಮೆ ವೆಸ್ಟ್ ಇಂಡೀಸ್‌ಗೆ, ೧೯೪೭/೪೮ ಮತ್ತು ೧೯೫೬/೫೭ ರ ನಡುವೆ ಆಡಿದರು. ೧೯೪೮ರ ಸರಣಿಯಲ್ಲಿ ಇಂಗ್ಲೆಂಡ್‌ನ ಕೆಟ್ಟ ಪ್ರದರ್ಶನವು ಹೆಡಿಂಗ್ಲಿಯಲ್ಲಿತ್ತು: ಅವರು ಮೊದಲ ನಾಲ್ಕು ದಿನಗಳಲ್ಲಿ ಒಳ್ಳೆಯದಾಗಿ ಆಡಿ, ಆಸ್ಟ್ರೇಲಿಯಾಗೆ ಗೆಲ್ಲಲು ಕೊನೆಯ ದಿನ ೪೦೪ ರನ್‌ಗಳ ಗುರಿಯನ್ನು ನಿಗದಿಪಡಿಸಿದರು. ಡಾನ್ ಬ್ರಾಡ್ಮನ್ ನೇತೃತ್ವದ ಆಸ್ಟ್ರೇಲಿಯಾ ಏಳು ವಿಕೆಟ್‌ಗಳಿಂದ ಜಯಗಳಿಸಿತು.[೩೬] ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಮೊದಲು ಯಾರೂ ಅಂತಹ ಗುರಿಯನ್ನು ಬೆನ್ನಟ್ಟದ ಕಾರಣ ಇಂಗ್ಲೆಂಡ್ ತಂಡವು ನಿರ್ಲಕ್ಷಕರವಾಗಿದೆ ಎಂದು ಗಾಡ್‌ಫ್ರೇ ಇವಾನ್ಸ್ ಹೇಳಿದ್ದರು. ಇವಾನ್ಸ್ ಸ್ವತಃ ಒಬ್ಬ ಪ್ರಧಾನ ಅಪರಾಧಿ, ಏಕೆಂದರೆ ಲೇಕರ್ ತಂದೊಡ್ಡಿದ ಸ್ಟಂಪಿಂಗ್ ಅವಕಾಶವನ್ನು ಕೈಬಿಟ್ಟು, ಇದರಿಂದ ಬ್ರಾಡ್ಮನ್ ಪಾರಾದನು. ಇದು ಆಸ್ಟ್ರೇಲಿಯಾದ ಇನ್ನಿಂಗ್ಸ್‌ನ ತಿರುವು ಎಂದು ಬ್ರಾಡ್‌ಮನ್ ನಂತರ ಹೇಳಿದರು.[೩೭] ಒಟ್ಟಾರೆಯಾಗಿ ಪಂದ್ಯದಲ್ಲಿ ಲೇಕರ್ ೬೨ ಓವರ್‌ಗಳನ್ನು ಎಸೆದು, ೨೦೬ ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರು. ನಿರಾಶಾದಾಯಕ ಫಲಿತಾಂಶವು ಇದು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ತಂಡವೆಂದು ಅನೇಕ ಜನರು ನಂಬಿದ್ದಕ್ಕೆ ವಿರುದ್ಧವಾಗಿತ್ತು.[೩೮] "ಪ್ಲೇಫೇರ್" ಇಂಗ್ಲೆಂಡ್‌ಗೆ "ಲೆಗ್-ಸ್ಪಿನ್ನರ್ ಅಥವಾ ವೆರಿಟಿ" ( ಹೆಡ್ಲಿ ವೆರಿಟಿ ನಿಧಾನಗತಿಯ ಎಡಗೈ ಸಾಂಪ್ರದಾಯಿಕ ಬೌಲರ್) ಅಗತ್ಯವಿದೆ ಎಂದು ಹೇಳುವ ಮೂಲಕ ಪರಿಸ್ಥಿತಿಯನ್ನು ಚೆನ್ನಾಗಿ ಸಂಕ್ಷಿಪ್ತಗೊಳಿಸಿತು. ಆದರೆ ಅವರಿಗೆ ಎರಡೂ ಇರಲಿಲ್ಲ. ಇದರ ಅರ್ಥವೇನೆಂದರೆ, ಲೇಕರ್‌ನಂತಹ ಆಫ್-ಬ್ರೇಕ್ ಬೌಲರ್ ಯಶಸ್ವಿಯಾಗಲು ಪಿಚ್ ಕಾರಣವಲ್ಲ. ಪ್ಲೇಫೇರ್ "ತಂತ್ರದ ದೋಷಗಳು, ತಪ್ಪಿದ ಅವಕಾಶಗಳು ಮತ್ತು ಕ್ಷೇತ್ರದಲ್ಲಿ ದುಃಖದ ಆಲಸ್ಯ" ವನ್ನು ಟೀಕಿಸಿತು.[೩೯] ೧೯೪೮ರಲ್ಲಿ ಸರ್ರೆ ಪರ ಆಡುತ್ತಿದ್ದ ಲೇಕರ್ ೭೯ ವಿಕೆಟ್‌ಗಳನ್ನು ಪಡೆದರು ಮತ್ತು ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ತಂಡವು ಮೊದಲ ಬಾರಿಗೆ ವಿಜೇತರಾದ ಗ್ಲಾಮೊರ್ಗನ್ ಹಿಂದೆ ಎರಡನೇ ಸ್ಥಾನ ಪಡೆಯಿತು.[೪೦]

೧೯೪೮ರ ಹೆಡಿಂಗ್ಲೆ ಟೆಸ್ಟ್ ಪಂದ್ಯವನ್ನು ಲೇಕರ್ ಆನಂದಿಸದೇ, ಯಾರ್ಕ್‌ಷೈರ್ ಮೂಲದ ಲೇಕರ್ ಅವರ ಗಮನವು ಬೇರೆಡೆ ಇದೆ ಎಂದು ಅಲನ್ ಹಿಲ್ ಬರೆದಿದ್ದಾರೆ. ೧೯೪೮ರಲ್ಲಿ ಯಾರ್ಕ್‌ಷೈರ್ ಕ್ಲಬ್ ಅಧ್ಯಕ್ಷ ಅರ್ನೆಸ್ಟ್ ಹೋಲ್ಡ್ಸ್ವರ್ತ್ ಲೇಕರ್ ಅವರನ್ನು ಸಂಪರ್ಕಿಸಿ ಲಂಡನ್ ರೆಸ್ಟೋರೆಂಟ್‌ನಲ್ಲಿ ಊಟಕ್ಕೆ ಆಹ್ವಾನಿಸಿದ್ದನ್ನು ಫ್ರೆಡ್ ಟ್ರೂಮನ್ ನಂತರ ನೆನಪಿಸಿಕೊಂಡರು. ಲೇಕರ್ ಒಪ್ಪಿಕೊಂಡರು ಆದರೆ ಹೋಲ್ಡ್ಸ್‌ವರ್ತ್ ಯಾರ್ಕ್‌ಷೈರ್‌ಗೆ ಮರಳಲು ಮತ್ತು ಆಡಲು ಮನವೊಲಿಸಲು ಪ್ರಯತ್ನಿಸಿದಾಗ ಆಶ್ಚರ್ಯಚಕಿತರಾದರು. ಸರ್ರೆಯಲ್ಲಿನ ಸಾಮಾಜಿಕ ವಿಭಜನೆಯನ್ನು ಲೇಕರ್ ಇಷ್ಟಪಡದಿದ್ದರೂ, ಅವನು ತನ್ನ ದತ್ತು ಪಡೆದ ಕೌಂಟಿಯೊಂದಿಗೆ ಇರಲು ಬಯಸಿದನು. ಈ ಪ್ರಸ್ತಾಪಕ್ಕಾಗಿ ಹೋಲ್ಡ್ಸ್‌ವರ್ತ್‌ಗೆ ಧನ್ಯವಾದ ಹೇಳಿ, ಅದನ್ನು ಅವನು ನಿರಾಕರಿಸಿದನು. ೧೯೪೮ರಲ್ಲಿ ಯಾರ್ಕ್‌ಷೈರ್ ಸಮಿತಿಯು ಸರ್ರೆಯಲ್ಲಿನ ಲೇಕರ್‌ನ ಪರಿಸ್ಥಿತಿಯ ಬಗ್ಗೆ ಕೆಲವು ವಿವೇಚನೆಯಿಂದ ವಿಚಾರಣೆ ನಡೆಸಲು ಕೇಳಿಕೊಂಡಿದ್ದನ್ನು ಲೆನ್ ಹಟ್ಟನ್ ನೆನಪಿಸಿಕೊಂಡರು. ಲೇಕರ್ ಅವರು ಎಲ್ಲಿದ್ದರು ಮತ್ತು ಯಾಕೆ ಯಾರ್ಕ್ಷೈರ್ ಪರ ಆಡಲು ಇಷ್ಟಪಡುವುದಿಲ್ಲ ಎಂದು ಅವರು ಮತ್ತೆ ಕೇಳಿ ತಿಳಿದರು. ಯಾರ್ಕ್‌ಷೈರ್‌ಗೆ "ಲೇಕರ್‌ನ ಬಹಳ ಅಗತ್ಯವಿತ್ತು" ಎಂದು ಹಟ್ಟನ್ ಒಪ್ಪಿಕೊಂಡರು ಮತ್ತು ಸರ್ರೆಯ ವಿರುದ್ಧದ ಯಾರ್ಕ್‌ಷೈರ್ ಪಂದ್ಯಗಳಲ್ಲಿ "ನಮ್ಮನ್ನು ಎಲ್ಲಾ ರೀತಿಯ ಗಂಟುಗಳಲ್ಲಿ ಕಟ್ಟಿಹಾಕಿದ್ದಾರೆ" ಎಂದು ಅಸಭ್ಯವಾಗಿ ಒಪ್ಪಿಕೊಂಡರು.[೪೧]

ಹೆಡಿಂಗ್ಲೆ ಪಂದ್ಯದ ನಂತರ ಓವಲ್‌ನಲ್ಲಿ ನಡೆದ ಅಂತಿಮ ಟೆಸ್ಟ್‌ನಲ್ಲಿ ಲೇಕರ್ ತಂಡದಿಂದ ಹೊರಗುಳಿದಿದ್ದರು. ೧೯೪೮/೪೯ ರಲ್ಲಿ ಇಂಗ್ಲೆಂಡ್ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡರೂ ಅವರನ್ನು ಆಯ್ಕೆ ಮಾಡಲಾಗಲಿಲ್ಲ. ಸ್ಪಿನ್ನರುಗಳಾಗಿ ಜ್ಯಾಕ್ ಯಂಗ್ (ನಿಧಾನಗತಿಯ ಎಡಗೈ ಆರ್ಥೊಡಾಕ್ಸ್ ಸ್ಪಿನ್ನರ್), ರೋಲಿ ಜೆಂಕಿನ್ಸ್ ಮತ್ತು ಡೌಗ್ ರೈಟ್ (ಲೆಗ್ ಬ್ರೇಕ್ ಮತ್ತು ಗೂಗ್ಲಿ ಎರಡೂ) ಈ ಮೂವರನ್ನು ಆಯ್ಕೆ ಮಾಡಲಾಯಿತು. ಯಾವುದೇ ಸ್ಪೆಷಲಿಸ್ಟ್ ಆಫ್ ಸ್ಪಿನ್ನರ್ ತಂಡದಲ್ಲಿ ಇರಲಿಲ್ಲ. ಇಂಗ್ಲೆಂಡ್ ಐದು ಪಂದ್ಯಗಳ ಸರಣಿಯನ್ನು ಎರಡು ಪಂದ್ಯಗಳ ಜಯ ಮತ್ತು ಮೂರು ಡ್ರಾಗಳಿಂದ ಗೆದ್ದಿತು. ೧೯೪೯ರ ಸಾಲಿನಲ್ಲಿ ಅವರು ೧೨೨ ವಿಕೆಟ್‌ಗಳನ್ನು ಪಡೆದರೂ ಸಹ, ನ್ಯೂಜಿಲೆಂಡ್ ವಿರುದ್ಧದ ನಾಲ್ಕು ಟೆಸ್ಟ್‌ಗಳಲ್ಲಿ ಕೇವಲ ಒಂದು ಪಂದ್ಯಗಳಲ್ಲಿ ಮಾತ್ರ ಆಡಿದ್ದರು ಮತ್ತು ಸುಲಭವಾಗಿ ಇಂಗ್ಲಿಷ್‌ನ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು. ಈ ಸರಣಿಯಲ್ಲಿ ಇಂಗ್ಲೆಂಡ್ ಉಳಿದ ಪಂದ್ಯಗಳಲ್ಲಿ ಮತ್ತೊಬ್ಬ ಲೆಗ್ ಸ್ಪಿನ್ನರ್ ಎರಿಕ್ ಹಾಲಿಸ್ ಅವರನ್ನು ಆಯ್ಕೆ ಮಾಡಿತು. ಲೇಕರ್ ಅವರ ಏಕೈಕ ಆಯ್ಕೆಯು ತಂತ್ರದ ಬದಲಾವಣೆಯಿಂದ ಆಯಿತು. ದಿ ಓವಲ್‌ನಲ್ಲಿ ನಡೆದ ಅಂತಿಮ ಟೆಸ್ಟ್‌ನಲ್ಲಿ ವೇಗದ ಬೌಲರ್ ಬದಲಿಗೆ ಆ ಜಾಗವನ್ನು ಹೆಚ್ಚುವರಿ ಸ್ಪಿನ್ನರ್‌ಗೆ ನೀಡಲಾಯಿತು. ೧೯೪೯/೫೦ರ ಚಳಿಗಾಲದಲ್ಲಿ ಇಂಗ್ಲೆಂಡ್ ತಂಡವು ಯಾವುದೇ ವಿದೇಶ ಪ್ರವಾಸಕ್ಕೆ ಹೋಗಲಿಲ್ಲ.

೧೯೫೦ರಲ್ಲಿ ಬ್ರಾಡ್ಫೋರ್ಡ್ ಪಾರ್ಕ್ ಅವೆನ್ಯೂದಲ್ಲಿ ನಡೆದ ಟೆಸ್ಟ್ ಪ್ರಯೋಗ ಪಂದ್ಯದಲ್ಲಿ "ದಿ ರೆಸ್ಟ್" ವಿರುದ್ಧ ಇಂಗ್ಲೆಂಡ್ ಪರ ಆಡುವಾಗ ಲೇಕರ್ ಇನ್ನಿಂಗ್ಸ್‌ನಲ್ಲಿ ಕೇವಲ ಎರಡು ರನ್‌ಗೆ ಎಂಟು ವಿಕೆಟ್ ಪಡೆದರು. ಮೂರು ದಿನಗಳ ಈ ಪಂದ್ಯವು ಮೇ ೩೧ರ ಬುಧವಾರ ಚಳಿಯ ಗಾಳಿಯೊಂದಿಗೆ ಪ್ರಾರಂಭವಾಯಿತು. ಪಿಚ್ ಅನ್ನು ತೆರೆಯಲಾಗಿತ್ತು ಮತ್ತು ಇತ್ತೀಚಿನ ಮಳೆಯ ನಂತರ ಒಣಗುತ್ತಿತ್ತು, ಇದರರ್ಥ ಬೌಲ್ ಮಾಡುವಾಗ ಸ್ಪಿನ್ನಿಂಗ್ ಎಸೆತವು ಅನಿರೀಕ್ಷಿತವಾಗಿ ನಡೆದುಕೊಳ್ಳುತ್ತದೆ. ಲೇಕರ್ ಇದರ ಪೂರ್ಣ ಲಾಭ ಪಡೆದರು. ಅವರು ಆಕ್ರಮಣಕಾರಿ ಲೆಗ್ ಸೈಡ್ ಮೈದಾನವನ್ನು ನಿಗದಿಪಡಿಸಿ, ಅರೌಂಡ್ ದಿ ವಿಕೆಟ್ ಬೌಲ್ ಮಾಡಿದರು. ಕಡಿಮೆ ಹಾರಾಟದೊಂದಿಗೆ ಲೈನ್ ಮತ್ತು ಉದ್ದವನ್ನು ಕೇಂದ್ರೀಕರಿಸಿದರು. ಇದು ಬ್ಯಾಟ್ಸ್‌ಮನ್‌ಗಳಿಗೆ ಚೆಂಡಿನ ಪಿಚ್‌ಗೆ ಮುಂದೆ ಬರಲು ಸಮಯ ನೀಡಲಿಲ್ಲ. ಕೆಲವು ಚೆಂಡುಗಳು ಪಿಚ್ ಮೇಲ್ಮೈಯಿಂದ ಹೆಚ್ಚು ಪುಟಿದು ಹಿಂಭಾಗದಲ್ಲಿರುತ್ತವೆ ಮತ್ತು ಬೇರೆಯವು ಅನಿರೀಕ್ಷಿತವಾಗಿ ತಿರುಗುತ್ತವೆ. ಉಳಿದವರು ಕೇವಲ ೨೭ಕ್ಕೆ ಊಟದ ವಿರಾಮಕ್ಕೆ ಮುಂಚಿತವಾಗಿ ಆಲ್‌ಔಟ್ ಆಗಿದ್ದರು. ನಂತರ ಬ್ಯಾಟಿಂಗ್ ಸುಧಾರಿಸಿತು, ಆದರೆ ಎರಡು ದಿನಗಳಲ್ಲಿ ಇಂಗ್ಲೆಂಡ್ ಇನ್ನಿಂಗ್ಸ್ ಜಯಗಳಿಸಿತು.[೪೨] ಈ ಪಂದ್ಯದಿಂದ ಆಯ್ಕೆದಾರರಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಪಿಚ್ ಅನ್ನು ಮುಚ್ಚಬೇಕಿಗಿತ್ತು ಅಥವಾ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಮಾಡಬೇಕಾಗಿತ್ತು ಎಂದು ವಾದಿಸಲಾಯಿತು.[೪೩] ಪಂದ್ಯವು ಖಚಿತಪಡಿಸಿದ ಒಂದು ವಿಷಯವೇನೆಂದರೆ, ಆ ಬೇಸಿಗೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಲೇಕರ್ ಆಡುವಂತೆ ಮಾಡಿತು.[೪೪] ದುರದೃಷ್ಟವಶಾತ್, ಟೆಸ್ಟ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಲೇಕರ್ ಅವರ ಕೈಗೆ ಗಾಯವಾಯಿತು, ಇದು ಅವರ ಬೌಲಿಂಗ್ ಅನ್ನು ದುರ್ಬಲಗೊಳಿಸಿತು. ಇಂಗ್ಲೆಂಡ್ ಗೆದ್ದ ಪಂದ್ಯದಲ್ಲಿ ಅವರು ಕೇವಲ ಒಂದು ವಿಕೆಟ್ ಪಡೆದರು. ನಂತರ ಅವರನ್ನು ತಂಡದಿಂದ ಕೈಬಿಡಲು ಆಯ್ಕೆದಾರರು ನಿರ್ಧರಿಸಿದರು. ಲೇಕರ್ ಇಲ್ಲದೇ ಇಂಗ್ಲೆಂಡ್ ಸರಣಿಯನ್ನು ೧-೩ ಅಂತರದಲ್ಲಿ ಸೋತಿತು.

೧೯೫೦ರಲ್ಲಿ ಲೇಕರ್ ತಮ್ಮ ಒಂದು ಸಾಲಿನಲ್ಲಿ ಅತಿಹೆಚ್ಚು ಮೊತ್ತವಾಗಿದ ೧೬೬ ವಿಕೆಟ್ಗಳನ್ನು ಪಡೆದಿದ್ದರೂ, ೧೯೫೦/೫೧ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ತಂಡದಲ್ಲಿ ಆಯ್ಕೆಯಾಗಲಿಲ್ಲ. ಕಳಪೆ ನಾಯಕತ್ವದಲ್ಲಿ ಮೊದಲ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಸೋತ ಇಂಗ್ಲೆಂಡ್, ಐದನೇ ಪಂದ್ಯದಲ್ಲಿ ಸಮಾಧಾನಕರ ಜಯವನ್ನು ಗಳಿಸಿತು. ಕಾಮನ್ವೆಲ್ತ್ ಇಲೆವೆನ್‌ನೊಂದಿಗೆ ಭಾರತ ಮತ್ತು ಸಿಲೋನ್‌ಗೆ ಪ್ರವಾಸ ಮಾಡುವ ಆಹ್ವಾನವನ್ನು ಲೇಕರ್ ಸ್ವೀಕರಿಸಿ, ಹತ್ತು ಪಂದ್ಯಗಳಲ್ಲಿ ೩೬ ವಿಕೆಟ್‌ಗಳನ್ನು ಪಡೆದರು. ಕಾಮನ್ವೆಲ್ತ್ ತಂಡವು ಬಹು-ಪ್ರತಿಭಾನ್ವಿತ ಗುಂಪಾಗಿದ್ದು, ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಇಂಗ್ಲೆಂಡ್‌ಗಿಂತ ಬಲಶಾಲಿ ಎಂದು ಪರಿಗಣಿಸಲಾಗಿದೆ.[೪೫] ಇದನ್ನು ಹೆಸರಿಗೆ ಮಾತ್ರವಾಗಿ ಲೆಸ್ ಅಮೆಸ್ ನಾಯಕತ್ವ ವಹಿಸಿದ್ದರು, ಆದರೆ ಗಾಯಗಳಿಂದಾಗಿ ಅವರು ಫ್ರಾಂಕ್ ವೊರೆಲ್‌ಗೆ ಹಸ್ತಾಂತರಿಸಿದರು.[೪೬] ಅಕ್ಟೋಬರ್ ೧ ಮತ್ತು ಮಾರ್ಚ್ ೬ರ ನಡುವೆ ಆಡಿದ ೨೯ ಪಂದ್ಯಗಳಲ್ಲಿ ಕಾಮನ್ವೆಲ್ತ್ ಇಲೆವೆನ್ ಅಜೇಯವಾಗಿ ಇಳಿಯಿತು. ಇದರಲ್ಲಿ ಭಾರತದ ವಿರುದ್ಧ ನಾಲ್ಕು ಅನಧಿಕೃತ ಟೆಸ್ಟ್ ಪಂದ್ಯಗಳು ಮತ್ತು ಸಿಲೋನ್ ವಿರುದ್ಧ ಒಂದು ಪಂದ್ಯ ಸೇರಿವೆ. ಸೈನಸ್ ಸಮಸ್ಯೆಗಳಿಂದಾಗಿ ಲೇಕರ್ ಡಿಸೆಂಬರ್ ಆರಂಭದಲ್ಲಿ ಮನೆಗೆ ಮರಳಬೇಕಾಯಿತು, ಆದರೆ ಅವರು ಪ್ರವಾಸವನ್ನು ಆನಂದಿಸಿದರು.[೪೭] ಒಂದು ಸಲ ಅವರು ಬೌಲಿಂಗ್ ಮಾಡಲು ಹೊರಟಿದ್ದಂತೆಯೇ ಒಂದು ದೊಡ್ಡ ಇಲಿ ಮೈದಾನದಾದ್ಯಂತ ಮತ್ತು ಪಿಚ್ ಮೇಲೆ ಓಡಿಹೋದ ಒಂದು ಘಟನೆಯನ್ನು ನೆನಪಿಸಿಕೊಂಡರು. ಗಿಡುಗವೊಂದು ಕೆಳಕ್ಕೆ ಇಳಿದು ಇಲಿಯನ್ನು ಹಿಡಿದು ಹಾರಿಗೊದಿದ್ದನ್ನು ನೋಡಿ ಲೇಕರ್‌ಗೆ ಸೋಜಿಗವಾಯಿತು. ಅವರು ಮುಂದಿನ ಎಸೆತವನ್ನು ಬೌಲ್ ಮಾಡಿದಾಗ, ಅದು ಎರಡು ಬಾರಿ ಪುಟಿದು ಬೌಂಡರಿಗೆ ಹೋಯಿತು.[೪೮]

೧೯೫೧ ರಿಂದ ೧೯೫೫ ರವರೆಗೆ

[ಬದಲಾಯಿಸಿ]

ಅನಾರೋಗ್ಯದಿಂದ ಚೇತರಿಸಿಕೊಂಡ ಲೇಕರ್ ಮದುವೆಯ ಬಗ್ಗೆ ಗಂಭೀರವಾಗಿ ಯೋಚಿಸಲು ಪ್ರಾರಂಭಿಸಿದರು. ಅವರು ಕೆಲವು ವರ್ಷಗಳ ಕಾಲ ಲಿಲ್ಲಿ ಎಂಬುವಳನ್ನು ಮೆಚ್ಚಿದ್ದರು. ಅವಳು ವಿಯೆನ್ನಾದಲ್ಲಿ ಜನಿಸಿದಳು. ನಾಜಿ ನಿಯಂತ್ರಣಕ್ಕೆ ಬಂದಾಗ ಆಸ್ಟ್ರಿಯಾವನ್ನು ತೊರೆದು, ಯುದ್ಧ ಪ್ರಾರಂಭವಾದಾಗ ಮಧ್ಯಪ್ರಾಚ್ಯದಲ್ಲಿದ್ದಳು. ನಾಜಿಗಳನ್ನು ವಿರೋಧಿಸಿದ ಆಕೆಯು ಕೈರೋದಲ್ಲಿನ ಸಹಾಯಕ ಪ್ರಾದೇಶಿಕ ಸೇವೆಗೆ ಸೇರಿದಾಗ, ಲೇಕರ್ ಆರ್‌ಏಓಸಿಯಲ್ಲಿ ಇದ್ದಾಗ ಅವರನ್ನು ಭೇಟಿಯಾದರು.[೪೯] ಅವರು ಅದೇ ಕಚೇರಿಯಲ್ಲಿ ಕೆಲಸ ಮಾಡಿ, ನಂತರ ಲಂಡನ್‌ನಲ್ಲಿ ಇನ್ನೊಮ್ಮೆ ಸೇವಾ ಪುನರ್ಮಿಲನ ಕಾರ್ಯಕ್ರಮದಲ್ಲಿ ಭೇಟಿಯಾದರು. ಅವರು ಮಾರ್ಚ್ ೨೭, ೧೯೫೧ರಂದು ಕೆನ್ಸಿಂಗ್ಟನ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಲು ನಿರ್ಧರಿಸಿದರು. ಕ್ರಿಕೆಟ್ ಸಾಲು ಪ್ರಾರಂಭವಾಗುವ ಮೊದಲು ಮಳೆಗಾಲದ ಮಧುಚಂದ್ರವನ್ನು ಬೌರ್ನ್‌ಮೌತ್‌ನಲ್ಲಿ ಕಳೆದರು.[೫೦] ಲಿಲ್ಲಿ ಮತ್ತು ಅವರ ಹೆಣ್ಣುಮಕ್ಕಳಾದ ಫಿಯೋನಾ ಮತ್ತು ಏಂಜೆಲಾ ಅವರು ಜಿಮ್ ಅವರ ಜೀವನಚರಿತ್ರೆಗಾಗಿ ಅಲನ್ ಹಿಲ್ ಅವರ ಸಂಶೋಧನೆಗೆ ಸಹಾಯ ಮಾಡಿದರು.[೫೧]

ಲೇಕರ್ ೧೯೫೧ರಲ್ಲಿ ೧೪೯ ವಿಕೆಟ್ ಪಡೆದರು, ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಎರಡರಲ್ಲಿ ಆಡಿದರು. ದಿ ಓವಲ್‌ನಲ್ಲಿ ನಡೆದ ಅಂತಿಮ ಟೆಸ್ಟ್‌ನಲ್ಲಿ ಅವರು ೧೧೯ ರನ್‌ಗಳಿಗೆ ಹತ್ತು ವಿಕೆಟ್‌ಗಳನ್ನು ಪಡೆದರು. ಇಂಗ್ಲೆಂಡ್ ನಾಲ್ಕು ವಿಕೆಟ್‌ಗಳಿಂದ ಈ ಪಂದ್ಯವನ್ನು ಗೆದ್ದಿತು. ತಂಡದಲ್ಲಿ ಸ್ಥಳಕ್ಕಾಗಿ ಅವರ ಮುಖ್ಯ ಸ್ಪರ್ಧಿಗಳು ಜಾನಿ ವಾರ್ಡಲ್ (ನಿಧಾನಗತಿಯ ಎಡಗೈ ಸಾಂಪ್ರದಾಯಿಕ) ಮತ್ತು ಇನ್ನೊಬ್ಬ ಆಫ್ ಸ್ಪಿನ್ನರ್ ರಾಯ್ ಟ್ಯಾಟರ್ಸಾಲ್ . ಟ್ಯಾಟರ್ಸಾಲ್ ಎಲ್ಲಾ ಐದು ಪಂದ್ಯಗಳಲ್ಲಿ ಆಡಿದರು.

ಲೇಕರ್ ೧೯೫೧/೫೨ರ ಚಳಿಗಾಲದಲ್ಲಿ ಆಟಗಾರ-ತರಬೇತುದಾರನಾಗಿ ನ್ಯೂಜಿಲೆಂಡ್‌ನ ಆಕ್ಲೆಂಡ್‌ಗೆ ಹೋದರು. ವಿಸ್ತರಿಸಿದ ಮಧುಚಂದ್ರಕ್ಕಾಗಿ ಲಿಲ್ಲಿಯನ್ನು ಅವರೊಂದಿಗೆ ಕರೆದೊಯ್ದರು. ಆಕ್ಲೆಂಡ್ ಪರ ನಾಲ್ಕು ಪಂದ್ಯಗಳಲ್ಲಿ ಆಡಿದ ಅವರು ೨೪ ವಿಕೆಟ್ ಪಡೆದರು. ಲೇಕರ್ಸ್ ಐದು ತಿಂಗಳು ನ್ಯೂಜಿಲೆಂಡ್‌ನಲ್ಲಿದ್ದು, ಅದನ್ನು ತುಂಬಾ ಇಷ್ಟಪಟ್ಟರು. ಅಲ್ಲಿಗೆ ವಲಸೆ ಹೋಗುವುದನ್ನು ಅವರು ಗಂಭೀರವಾಗಿ ಪರಿಗಣಿಸಿದರು. ಆದರೆ ಆಮೇಲೆ ಯೋಚಿಸಿ, ತಮ್ಮ ಕ್ರಿಕೆಟಿಂಗ್ ಭವಿಷ್ಯವು ಇಂಗ್ಲೆಂಡ್‌ನಲ್ಲಿದೆ ಎಂದು ಲೇಕರ್ ನಿರ್ಧರಿಸಿದರು. ೧೯೫೨/೫೩ ರಲ್ಲಿ ಆಟಗಾರ-ತರಬೇತುದಾರರಾಗಿ ಮತ್ತೆ ತೊಡಗಿಸಿಕೊಳ್ಳಲು ಆಕ್ಲೆಂಡ್ ಕ್ರಿಕೆಟ್ ಅಸೋಸಿಯೇಶನ್‌ನ ಪ್ರಸ್ತಾಪವನ್ನು ವಿಷಾದದಿಂದ ನಿರಾಕರಿಸಿದರು.[೫೨]

೧೯೫೨ರಲ್ಲಿ ಸರ್ರೆ ಸತತ ಏಳು ಕೌಂಟಿ ಚಾಂಪಿಯನ್‌ಶಿಪ್ ಪ್ರಶಸ್ತಿಗಳ ಮೊದಲನೆಯದನ್ನು ಗೆದ್ದ ಸಾಲಿನಲ್ಲಿ, ಲೇಕರ್ ಭಾರತದ ವಿರುದ್ಧ ನಾಲ್ಕು ಟೆಸ್ಟ್‌ಗಳಲ್ಲಿ ಆಡಿದರು. ಅವರು ಆಸ್ಟ್ರೇಲಿಯಾ ವಿರುದ್ಧ ಆಶಸ್ ಸರಣಿಯಲ್ಲಿ, ದಿ ಓವಲ್‌ನಲ್ಲಿ ನಡೆದ ನಿರ್ಣಾಯಕ ಪಂದ್ಯವೂ ಸೇರಿದಂತೆ ಮೂರು ಟೆಸ್ಟ್ ಪಂದ್ಯಗಳಲ್ಲಿ ಆಡಿದರು. ಇಂಗ್ಲೆಂಡ್ ಇಪ್ಪತ್ತು ವರ್ಷಗಳಲ್ಲಿ ಮೊದಲ ಬಾರಿ ದಿ ಆಶಸ್ ಸರಣಿಯನ್ನು ಗೆದ್ದಿತು. ಅವರು ೧೯೫೩/೫೪ರಲ್ಲಿ ಎಂಸಿಸಿಯೊಂದಿಗೆ ಮತ್ತೆ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡರು. ನಾಲ್ಕು ಟೆಸ್ಟ್ ಸೇರಿದಂತೆ ಏಳು ಪಂದ್ಯಗಳಲ್ಲಿ ಆಡಿ ೨೨ ವಿಕೆಟ್ ಪಡೆದರು. ಅವರು ೧೯೫೪ರಲ್ಲಿ ಪಾಕಿಸ್ತಾನ ವಿರುದ್ಧದ ಒಂದು ಟೆಸ್ಟ್ ಪಂದ್ಯದಲ್ಲಿ ಆಡಿದ್ದರು. ಆದರೆ ೧೯೫೪/೫೫ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಲಿಲ್ಲ. ಅವರು ೧೯೫೫ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಒಂದು ಟೆಸ್ಟ್ ಪಂದ್ಯದಲ್ಲಿ ಆಡಿದರು.

ಲೇಕರ್ ಅಂತಿಮವಾಗಿ ೧೯೫೬ರಲ್ಲಿ ತಮ್ಮ ಟೆಸ್ಟ್ ಸ್ಥಾನವನ್ನು ಸ್ಥಿರ ಮಾಡಿಕೊಂಡರು ಮತ್ತು ಆಸ್ಟ್ರೇಲಿಯಾ ವಿರುದ್ಧದ ಎಲ್ಲಾ ಐದು ಟೆಸ್ಟ್ ಪಂದ್ಯಗಳಲ್ಲಿ ಆಡಿದರು. ಆಸ್ಟ್ರೇಲಿಯಾದ ವಿರುದ್ಧ ಸರ್ರೆ ಪರ ಇನ್ನಿಂಗ್ಸ್‌ನಲ್ಲಿ ಅವರು ಎಲ್ಲಾ ಹತ್ತು ವಿಕೆಟ್‌ಗಳನ್ನು ಪಡೆದರು. ೧೮೭೮ರಲ್ಲಿ ಟೆಡ್ ಬ್ಯಾರೆಟ್ ನಂತರ ಬೌಲರ್ ಆಸ್ಟ್ರೇಲಿಯನ್ನರ ವಿರುದ್ಧ ಎಲ್ಲಾ ಹತ್ತು ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್ ಆದರು. ೧೯೫೬ರ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಲೇಕರ್ ೪೬ ವಿಕೆಟ್ ಪಡೆದ ದಾಖಲೆಯು ಇನ್ನೂ ಹಾಗೆಯೇ ಇದೆ. ಆದರೆ ಸಿಡ್ನಿ ಬಾರ್ನ್ಸ್ ದಕ್ಷಿಣ ಆಫ್ರಿಕಾದಲ್ಲಿ ಇಂಗ್ಲೆಂಡ್ ಪರ ೧೯೧೩/೧೪ ರಲ್ಲಿ ತೆಗೆದುಕೊಂಡ ೪೯ ವಿಕೆಟ್‌ಗಳ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಲೇಕರ್ ಅವರ ಪ್ರದರ್ಶನವು ಅವರಿಗೆ ೧೯೫೬ರಲ್ಲಿ ಬಿಬಿಸಿ ಸ್ಪೋರ್ಟ್ಸ್ ಪರ್ಸನಾಲಿಟಿ ಆಫ್ ದಿ ಇಯರ್ ಪ್ರಶಸ್ತಿಯನ್ನು ನೀಡಿತು. ಲೇಕರ್ ಈ ಪ್ರಶಸ್ತಿಯನ್ನು ಗೆದ್ದ ಮೊದಲ ಕ್ರಿಕೆಟಿಗ. ಸರ್ರೆ ೧೯೫೬ರಲ್ಲಿ ಸತತ ಐದನೇ ಬಾರಿಗೆ ಕೌಂಟಿ ಚಾಂಪಿಯನ್‌ಶಿಪ್ ಗೆದ್ದಿತು. ರಾಯ್ ವೆಬ್ಬರ್ ಅವರ ಸ್ಪರ್ಧೆಯ ಇತಿಹಾಸವನ್ನು ಶೀಘ್ರದಲ್ಲೇ ಪ್ರಕಟಿಸಲಾಯಿತು ಮತ್ತು ಸಮಕಾಲೀನ ಕೌಂಟಿ ತಂಡಗಳ ವಿಮರ್ಶೆಯಲ್ಲಿ ಅವರು "ಅಲೆಕ್ ಬೆಡ್ಸರ್, ಪೀಟರ್ ಲೋಡರ್, ಸ್ಟುವರ್ಟ್ ಸರ್ರಿಡ್ಜ್, ಜಿಮ್ ಲೇಕರ್ ಮತ್ತು ಟೋನಿ ಲಾಕ್ ಇವರುಗಳಿಗಿಂತ ಒಳ್ಳೆಯ ಬೌಲಿಂಗ್ ಪಡೆಯು ಸಿಗುವುದು ಕಷ್ಟ" ಎಂದು ಬರೆದಿದ್ದಾರೆ.[೫೩]

"ಲೇಕರ್‌ನ ಪಂದ್ಯ"

[ಬದಲಾಯಿಸಿ]

ಓಲ್ಡ್ ಟ್ರ್ಯಾಫೋರ್ಡ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ನ ವರದಿಯಲ್ಲಿ ವಿಸ್ಡೆನ್ "ಈ ಸ್ಮರಣೀಯ ಆಟವನ್ನು ಯಾವಾಗಲೂ ಲೇಕರ್ಸ್ ಮ್ಯಾಚ್ ಎಂದು ಕರೆಯಲಾಗುತ್ತದೆ, ಏಕೆಂದರೆ ಮೊದಲ ಇನ್ನಿಂಗ್ಸ್‌ನಲ್ಲಿ ೩೭ ರನ್‌ಗಳಿಗೆ ಒಂಬತ್ತು ವಿಕೆಟ್‌ಗಳನ್ನು ಕಬಳಿಸುವಲ್ಲಿ ಸರ್ರೆ ಆಫ್-ಬ್ರೇಕ್ ಬೌಲರ್ ಮಾಡಿದ ಅದ್ಭುತ ಪ್ರದರ್ಶನದಿಂದಾಗಿ, ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ೫೩ಕ್ಕೆ ಹತ್ತು ವಿಕೆಟ್ ಪಡೆದದ್ದು ಅವಿಸ್ಮರಣೀಯ" ಎಂದು ಹೇಳಿತು. ಪಂದ್ಯವು ಗುರುವಾರ ಜುಲೈ ೨೬ ರಿಂದ ಮಂಗಳವಾರ ಜುಲೈ ೩೧ ರವರೆಗೆ ನಡೆಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಇಂಗ್ಲೆಂಡ್ ಪಂದ್ಯವನ್ನು ಇನ್ನಿಂಗ್ಸ್ ಮತ್ತು ೧೭೦ ರನ್‌ಗಳಿಂದ ಗೆದ್ದಿತು.

ಇಂಗ್ಲೆಂಡ್ ಶುಕ್ರವಾರ ಮಧ್ಯಾಹ್ನದವರೆಗೆ ಬ್ಯಾಟಿಂಗ್ ಮಾಡಿ, ಒಟ್ಟು ೪೫೯ ರನ್ ಗಳಿಸಿತು. ಇದರಲ್ಲಿ ಪೀಟರ್ ರಿಚರ್ಡ್ಸನ್ ಮತ್ತು ಡೇವಿಡ್ ಶೆಪರ್ಡ್ ಅವರ ಶತಕಗಳನ್ನು ಒಳಗೊಂಡಿದೆ. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ೮೪ ರನ್‌ಗಳಿಗೆ ಆಲ್‌ಔಟ್ ಆಯಿತು. ಫಾಲೊ-ಆನ್ ಆಗಿ ದಿನಾಂತ್ಯದಲ್ಲಿ ಒಂದು ವಿಕೆಟ್‌ಗೆ ೫೩ ರನ್ ಮೊತ್ತ ಗಳಿಸಿತು. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಇಬ್ಬರು ವೇಗದ ಬೌಲರ್‌ಗಳಾದ ಟ್ರೆವರ್ ಬೈಲಿ ಮತ್ತು ಬ್ರಿಯಾನ್ ಸ್ಟ್ಯಾಥಮ್ಇವರಿಬ್ಬ ನಡುವೆ, ಲೇಕರ್ ಮತ್ತು ಲಾಕ್ ಅವರನ್ನು ಪರಿಚಯಿಸುವ ಮುಂಚೆ ಕೇವಲ ಹತ್ತು ಓವರ್‌ಗಳನ್ನು ಎಸೆದರು. ಲೇಕರ್ ವಾರ್ವಿಕ್ ರೋಡ್ ಎಂಡ್‌ನಿಂದ ಪ್ರಾರಂಭಿಸಿದರು ಆದರೆ ಸ್ಟ್ರೆಟ್‌ಫೋರ್ಡ್ ಎಂಡ್‌ಗೆ ಬದಲಾಯಿಸುವವರೆಗೂ ವಿಕೆಟ್ ತೆಗೆದುಕೊಳ್ಳಲಿಲ್ಲ. ಚಹಾ ವಿರಾಮಕ್ಕೂ ಮುಂಚೆ ಆಸ್ಟ್ರೇಲಿಯಾ ಎರಡು ವಿಕೆಟ್‌ಗೆ ೬೨ ರನ್‌ಗಳಿದ್ದಾಗ, ಲಾಕ್‌ಗೆ ೩೨ ರನ್‌ಗಳಿಗೆ ಕ್ಯಾಚ್ ನೀಡಿದ ಓಪನರ್ ಕಾಲಿನ್ ಮೆಕ್‌ಡೊನಾಲ್ಡ್ ಮತ್ತು ನೀಲ್ ಹಾರ್ವೆ ರನ್ ಗಳಿಸದೇ ಔಟ್ ಆದರು. ಚಹಾ ನಂತರ ಮೊದಲ ಎಸೆತದಲ್ಲಿ ಸ್ಲಿಪ್‌ನಲ್ಲಿ ಕಾಲಿನ್ ಕೌಡ್ರೆ ಕ್ಯಾಚ್ ಮಾಡಿದ ಜಿಮ್ ಬರ್ಕ್ ಅವರ ವಿಕೆಟ್ ಅನ್ನು ಲಾಕ್ ಪಡೆದರು. ಪುನರಾರಂಭದ ಕೇವಲ ೩೭ ನಿಮಿಷಗಳಲ್ಲಿ ಆಸ್ಟ್ರೇಲಿಯಾ ೮೪ ರನ್‌ಗಳಿಗೆ ಕುಸಿಯಿತು. ೨೨ ಎಸೆತಗಳಲ್ಲಿ ಕೇವಲ ಎಂಟು ರನ್‌ಗಳಿಗೆ ಕೊನೆಯ ಏಳು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಲೇಕರ್ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು. ಅವರ ಅಂಕಿಅಂಶಗಳು ೩೭ಕ್ಕೆ ಒಂಬತ್ತು ಮತ್ತು ಲಾಕ್ ೩೭ಕ್ಕೆ ಒಂದು ವಿಕೆಟ್ ಪಡೆದರು.

ಆಸ್ಟ್ರೇಲಿಯಾಗೆ ಫಾಲೊ-ಆನ್ ಕೊಡಲಾಯಿತು. ವಿಕೆಟ್ ನಷ್ಟವಿಲ್ಲದೆ ೨೮ ರನ್ ಇದ್ದಾಗ ಮೆಕ್ಡೊನಾಲ್ಡ್ ಮೊಣಕಾಲಿನ ಗಾಯಗೊಂಡು ಹೊರಹೋಗಬೇಕಾಯಿತು. ಅವನ ಜಾಗಕ್ಕೆ ಹಾರ್ವೆ ಬಂದು, ಲೇಕರ್ ಎದುರಿಸಿದ ಮೊದಲ ಎಸೆತದಲ್ಲಿ ಔಟ್ ಆದನು. ಆಸ್ಟ್ರೇಲಿಯಾದ ಅತ್ಯುತ್ತಮ ಬ್ಯಾಟ್ಸ್‌ಮನ್ ನಿರ್ಗಮಿಸುವಾಗ ಹತಾಶೆಯಿಂದ ತಮ್ಮ ಬ್ಯಾಟ್ ಅನ್ನು ಗಾಳಿಯಲ್ಲಿ ಎಸೆದರು. ಬರ್ಕ್ ಮತ್ತು ಇಯಾನ್ ಕ್ರೇಗ್ ಸ್ವಲ್ಪ ಪ್ರತಿರೋಧವನ್ನು ಒಡ್ಡಿದರು. ವಿಸ್ಡೆನ್ ಪ್ರಕಾರ ಆಸ್ಟ್ರೇಲಿಯನ್ನರು ಶುಕ್ರವಾರ ಸಂಜೆ ಪಿಚ್ ಬಗ್ಗೆ ಪ್ರತಿಭಟನೆ ನಡೆಸಿ, ಆತಿಥೇಯರಾದ ಲಂಕಾಷೈರ್ ಕೌಂಟಿ ಕ್ರಿಕೆಟ್ ಕ್ಲಬ್ (ಲಂಕಾಷೈರ್) ಸ್ಪಿನ್ ಬೌಲಿಂಗ್‌ಗೆ ಸೂಕ್ತವಾದ ಪಿಚ್ ಅನ್ನು ಸಿದ್ಧಪಡಿಸಿದ್ದಾರೆ ಎಂದು ಆರೋಪಿಸಿದರು. ಲಂಕಾಷೈರ್ ಈ ಆರೋಪವನ್ನು ಬಲವಾಗಿ ನಿರಾಕರಿಸಿತು. ಆಸ್ಟ್ರೇಲಿಯಾದ ನಾಯಕ ಇಯಾನ್ ಜಾನ್ಸನ್ ಈ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಿಲ್ಲ.

ಕೆಟ್ಟ ಹವಾಮಾನದ ಕಾರಣ ಶನಿವಾರದಂದು ಕೇವಲ ೪೭ ನಿಮಿಷಗಳು, ಮತ್ತು ಸೋಮವಾರ ಕೇವಲ ಒಂದು ಗಂಟೆಯ ಆಟ ಮಾತ್ರ ನಡೆಯಿತು. ಆಗ ಆಸ್ಟ್ರೇಲಿಯಾ ಬರ್ಕ್‌ನನ್ನು ಲೇಕರ್‌ಗೆ ಕಳೆದುಕೊಂಡಿತು ಮತ್ತು ಮೆಕ್‌ಡೊನಾಲ್ಡ್ (ಬರ್ಕ್ ಔಟ್ ಆದಮೇಲೆ ಹಿಂದಿರುಗಿದ) ಮತ್ತು ಕ್ರೇಗ್ ಬ್ಯಾಟಿಂಗ್‌ನೊಂದಿಗೆ ಎರಡು ವಿಕೆಟ್‌ಗೆ ೮೪ ರನ್ ಗಳಿಸಿತು.[೫೪] ಕೊನೆಯ ದಿನವಾದ ಮಂಗಳವಾರದಂದು ಪರಿಸ್ಥಿತಿ ಸುಧಾರಿಸಿ, ಆಟವು ಕೇವಲ ಹತ್ತು ನಿಮಿಷ ತಡವಾಗಿ ಪ್ರಾರಂಭವಾಯಿತು. ಮೆಕ್ಡೊನಾಲ್ಡ್ ಒಳ್ಳೆಯ ಪ್ರಯತ್ನ ಮಾಡಿದರು. ರಕ್ಷಣಾತ್ಮಕವಾಗಿ ಆಡಿ ೮೯ ರನ್ ಗಳಿಸಿದರು. ಕ್ರೇಗ್ ೩೮ ರನ್ ಗಳಿಸಿದಾಗ, ಸ್ಕೋರ್ ಎರಡು ವಿಕೆಟ್‌ಗೆ ೧೧೨ ಆಗಿದ್ದಾಗ, ಊಟದ ವಿರಾಮದವರೆಗೂ ಅವರೊಂದಿಗೆ ಇದ್ದರು. ನಾಲ್ಕು ಗಂಟೆಗಳ ಆಟ ಉಳಿದಿದ್ದು, ಆಸ್ಟ್ರೇಲಿಯಾಗೆ ಡ್ರಾದೊಂದಿಗೆ ತಪ್ಪಿಸಿಕೊಳ್ಳುವ ಒಂದು ಒಳ್ಳೆಯ ಅವಕಾಶ ಇತ್ತು. ಆದಾಗ್ಯೂ ಬೆಳಿಗ್ಗೆ ಮೋಡ ಕವಿದ ವಾತಾವರಣ ಇದ್ದು, ಊಟದ ಸಮಯ ಮುಗಿದಮೇಲೆ ಸೂರ್ಯನು ಬೆಳಗಲಾರಂಭಿಸಿದನು. ಇದು ಚೆಂಡನ್ನು ಹೆಚ್ಚು ತಿರುಗುವಂತೆ ಮಾಡಿ, ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ಸಮಸ್ಯೆಗಳನ್ನು ತಂದೊಡ್ಡಿತು. ಲೇಕರ್ ಒಂಬತ್ತು ಓವರ್‌ಗಳಲ್ಲಿ ಮೂರು ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಪಡೆದರು. ಆದರೆ ನಂತರ ರಿಚೀ ಬೆನಾಡ್ ಮತ್ತು ಮೆಕ್‌ಡೊನಾಲ್ಡ್ ಚಹಾ ವಿರಾಮದ ತನಕ ೭೫ ನಿಮಿಷಗಳ ಕಾಲ ಒಟ್ಟಿಗೆ ಇದ್ದರು. ಚಹಾದ ನಂತರ ಪಿಚ್ ತೆಂಡು ತಿರುಗಿಸಲು ಇನ್ನಷ್ಟು ಸಹಕರಿಸಿತು. ಲೇಕರ್‌ನ ಎರಡನೇ ಎಸೆತದಲ್ಲಿ ಮೆಕ್ಡೊನಾಲ್ಡ್ ಅವರನ್ನು ಔಟ್ ಆಗುವುದರೊಂದಿದೆ ಆಸ್ಟ್ರೇಲಿಯಾ ಸೋಲುಂಡಿತು. ೧೭:೨೭ ಕ್ಕೆ, ಕೇವಲ ಒಂದು ಗಂಟೆ ಬಾಕಿ ಇರುವಾಗ, ಲೇಕರ್ ಲೆನ್ ಮ್ಯಾಡಾಕ್ಸ್‌ರನ್ನು ಎಲ್‌ಬಿಡಬ್ಲು ಔಟ್ ಮಾಡಿದರು. ಇದರೊಂದಿಗೆ ಲೇಕರ್ ೫೩ ರನ್‌ಗಳಿಗೆ ಎಲ್ಲಾ ಹತ್ತು ವಿಕೆಟ್‌ಗಳನ್ನು ತೆಗೆದುಕೊಂಡು ಇಂಗ್ಲೆಂಡ್‌ನ ಗೆಲುವಿನಲ್ಲೆ ಮುಖ್ಯ ಕಾರಣರಾದರು.[೫೫]

ಮಂಗಳವಾರ ರಾತ್ರಿ ಮತ್ತೊಮ್ಮೆ ಮಳೆಬಂದು, ಬುಧವಾರ ಯಾವ ಮೊದಲ ದರ್ಜೆ ಪಂದ್ಯಗಳೂ ನಡೆದಿಲ್ಲ. ವಿಸ್ಡೆನ್ "ಇಂಗ್ಲೆಂಡ್‌ನ ಎಷ್ಟು ಅದೃಷ್ಟಶಾಲಿಯಾಗಿದೆ ಮತ್ತು ಸಾರ್ವಕಾಲಿಕ ಶ್ರೇಷ್ಠ ಬೌಲಿಂಗ್ ಸಾಧನೆಯು ಬಹುತೇಕವಾಗಿ ಹೇಗೆ ಸಂಭವಿಸಲಿಲ್ಲ ಎಂಬುದನ್ನು ನೋಡಬಹುದು" ಎಂದು ಹೇಳಿತು. ೨೦೦೫ರಲ್ಲಿ ಬರೆಯುತ್ತಾ, ರಿಚೀ ಬೆನಾಡ್ ಓಲ್ಡ್ ಟ್ರಾಫರ್ಡ್ ಸುತ್ತಮುತ್ತಲ ಪ್ರದೇಶದಲ್ಲಿ ಕೊನೆಯ ದಿನದಂದು ಮಳೆಯಾಗಿತ್ತು, ಆದರೆ ಮೈದಾನದಲ್ಲಿ ಮಳೆ ಆಗಿಲ್ಲ ಎಂದು ನೆನಪಿಸಿಕೊಂಡರು. ಬೆನಾಡ್ ಅವರು ಲೇಕರ್‌ನಿಂದ ಎಷ್ಟು ಪ್ರಭಾವಿತರಾದರು ಎಂದರೆ, ಅವರು ತಮ್ಮದೇ ಆದ ರನ್-ಅಪ್ ಅನ್ನು ಕಡಿಮೆ ಮಾಡಲು ನಿರ್ಧರಿಸಿದರು. ತಮ್ಮ ಬೌಲಿಂಗ್ ಸಿದ್ಧಾಂತವನ್ನೂ ಬದಲಾಯಿಸಿದರು.[೫೬] ತನ್ನ ಪಂದ್ಯದ ವರದಿಯಲ್ಲಿ ಪ್ಲೇಫೇರ್ "ಕ್ರಿಕೆಟ್ ಮೈದಾನದಲ್ಲಿ ಕಂಡ ಅತ್ಯಂತ ಗಮನಾರ್ಹ ಬೌಲಿಂಗ್ ಪ್ರದರ್ಶನವನ್ನು ಲೇಕರ್ ಕೊಟ್ಟಿದ್ದಾರೆ" ಎಂದು ಹೇಳಿತು.

ಲೇಕರ್ ೫೩ ರನ್‌ಗಳಿಗೆ ಎಲ್ಲಾ ಹತ್ತು ವಿಕೆಟ್‌ಗಳನ್ನು ಪಡೆದದ್ದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲನೇ ಸತಿ ಒಬ್ಬ ಬೌಲರ್ ಮಾಡಿದ ಸಾಧನೆಯಾಯಿತು. ೧೯೯೯ರಲ್ಲಿ ಪಾಕಿಸ್ತಾನದ ವಿರುದ್ಧ ದೆಹಲಿಯ ಫಿರೋಜ್ ಷಾ ಕೋಟ್ಲಾದಲ್ಲಿ ೭೪ಕ್ಕೆ ಹತ್ತು ವಿಕೆಟ್ ಕಬಳಿಸಿದ ಭಾರತದ ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ ಇನ್ನೊಬ್ಬ ಬೌಲರ್. ಮೊದಲ ಇನ್ನಿಂಗ್ಸ್‌ನಲ್ಲಿ ಈಗಾಗಲೇ ೩೭ಕ್ಕೆ ಒಂಬತ್ತು ವಿಕೆಟ್ ಪಡೆದ ಲೇಕರ್, ಅವರ ಮ್ಯಾಚ್ ಬೌಲಿಂಗ್ ಅಂಕಿಅಂಶವಾದ ೯೦ಕ್ಕೆ ೧೯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯಾಗಿ ಉಳಿದಿವೆ. ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಈ ಹಿಂದೆ ಇಂಗ್ಲೆಂಡ್‌ನ ಸಿಡ್ನಿ ಬಾರ್ನ್ಸ್ ಹೊಂದಿದ್ದರು. ಅವರು ೧೯೧೩ರ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್‌ಬರ್ಗ್‌ನ ಓಲ್ಡ್ ವಾಂಡರರ್ಸ್‌ನಲ್ಲಿ ೧೫೯ಕ್ಕೆ ೧೭ ವಿಕೆಟ್ ಪಡೆದಿದ್ದರು. ಎರಡು ಸಾಮಾನ್ಯ ಅಂಶಗಳು ಲೇಕರ್ ಮತ್ತು ಬಾರ್ನ್ಸ್ ಅವರು ಹಂಚಿಕೊಂಡಿದ್ದಾರೆ. ಟೆಸ್ಟ್ ಪಂದ್ಯವೊಂದರಲ್ಲಿ ೧೭ ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಇಬ್ಬರು ಬೌಲರ್‌ಗಳು ಇವರೇ ಆಗಿದ್ದಾರೆ. ಬ್ರಾಡ್‌ಫೋರ್ಡ್ ಲೀಗ್‌ನಲ್ಲಿ ಸಾಲ್ಟೇರ್ ಪರವಾಗಿ, ೧೯೧೫ - ೧೯೨೩ ರವರೆಗೆ ಬಾರ್ನ್ಸ್, ೧೯೩೯ - ೧೯೪೦ ರವರೆಗೆ ಲೇಕರ್ ಆಡಿದ್ದರು.[೫೭] ಲೇಕರ್ ಪ್ರಥಮ ದರ್ಜೆ ಪಂದ್ಯವೊಂದರಲ್ಲಿ ಹದಿನೇಳಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಏಕೈಕ ಬೌಲರ್ ಆಗಿ ಉಳಿದಿದ್ದಾರೆ.[೫೮] ಅದಕ್ಕೂ ಹಿಂದೆ ಒಂದು ಪಂದ್ಯದಲ್ಲಿ ೧೭ ವಿಕೆಟ್ ಪಡೆದ ಇಪ್ಪತ್ತು ನಿದರ್ಶನಗಳಿದ್ದವು. ಆದರೆ ಲೇಕರ್‌ನ ಸಾಧನೆಯ ನಂತರ, ೨೦೦೪ರಲ್ಲಿ ಕೆನಡಾದ ಜಾನ್ ಡೇವಿಸನ್ ಮತ್ತು ೨೦೧೯ರಲ್ಲಿ ಕೈಲ್ ಅಬಾಟ್ ಮಾತ್ರ ಒಂದು ಪಂದ್ಯದಲ್ಲಿ ಹದಿನೇಳು ವಿಕೆಟ್‌ಗಳನ್ನು ಪಡೆದಿದ್ದಾರೆ.

೧೯೫೬/೫೭ ರಿಂದ ೧೯೬೪ ರವರೆಗೆ

[ಬದಲಾಯಿಸಿ]

ಲೇಕರ್ ೧೯೫೬/೫೭ ರಲ್ಲಿ ಎಂಸಿಸಿಯೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡರು. ಎಲ್ಲಾ ಐದು ಟೆಸ್ಟ್ ಸೇರಿದಂತೆ ಹದಿನಾಲ್ಕು ಪಂದ್ಯಗಳಲ್ಲಿ ಆಡಿ ೫೦ ವಿಕೆಟ್‌ಗಳನ್ನು ಪಡೆದರು. ಇದು ಸಾಗರೋತ್ತರ ಸಾಲಿನಲ್ಲಿ ಅವರ ವೃತ್ತಿಜೀವನದ ಅತ್ಯುತ್ತಮ ಮೊತ್ತವಾಗಿದೆ. ಅವರು ೧೯೫೭ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕು ಮತ್ತು ೧೯೫೯ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಆಡಿದರು.

೧೯೫೮ರ ಸಾಲು ಸರ್ರೆಯ ಸತತ ಏಳು ಕೌಂಟಿ ಚಾಂಪಿಯನ್‌ಶಿಪ್‌ಗಳಲ್ಲಿ ಕೊನೆಯದಾಗಿದೆ. ಆದರೆ ಜುಲೈನಲ್ಲಿ ಬ್ಲ್ಯಾಕ್‌ಹೀತ್‌ನಲ್ಲಿ ಕೆಂಟ್ ವಿರುದ್ಧದ ಪಂದ್ಯದಲ್ಲಿ ಲೇಕರ್ "ಪ್ರಯತ್ನಿಸಲಿಲ್ಲ" ಎಂದು ಮೇ ಆರೋಪಿಸಿದ ನಂತರ ಲೇಕರ್ ಮತ್ತು ಮೇ ನಡುವಿನ ಜಗಳದಿಂದ ಇದು ಹಳಸಿತು. ಪಂದ್ಯವನ್ನು ಕೆಂಟ್ ೨೯ ರನ್‌ಗಳಿಂದ ಗೆದ್ದಿತು. ಈ ಪಂದ್ಯದಲ್ಲಿ ಲೇಕರ್ ಒಟ್ಟು ೫೪ ಓವರ್‌ಗಳನ್ನು ಎಸೆದರು. ಇದು ಸ್ವಾನ್ಸೀಯಲ್ಲಿ ಗ್ಲಾಮೊರ್ಗಾನ್ ವಿರುದ್ಧದ ಪಂದ್ಯದಲ್ಲಿ ೬೩ ಓವರ್ ಎಸೆದ ನಂತರದ್ದಾಗಿತ್ತು. ಆ ಪಂದ್ಯವನ್ನು ಸರ್ರೆ ಗೆದ್ದಿತು. ಆ ಸಮಯದಲ್ಲಿ ಲೇಕರ್‌ನ ಬೆರಳು ನೋವಿನಿಂದಾಗಿ ಬೌಲಿಂಗ್ ಪರಿಣಾಮಕಾರಿ ಆಗಿರಲಿಲ್ಲ. ಅವರ ಸಹೋದ್ಯೋಗಿಗಳು ಈ ವಿಷಯದ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದರು. ಪೀಟರ್ ಲೋಡರ್ ಮೇ ಅವರನ್ನು ವಿರೋಧಿಸಿದ್ದರೆ, ಮಿಕ್ಕಿ ಸ್ಟೀವರ್ಟ್ "ಜಿಮ್ ಸುಸ್ತಾಗಿದ್ದಾನೆ" ಎಂದು ಮೇಗೆ ತಿಳಿದಿರಬೇಕು ಎಂದುಕೊಂಡಿದ್ದರು. ಪಂದ್ಯದಲ್ಲಿ ಕೆಂಟ್ ಪರ ಆಡಿದ ಗಾಡ್ಫ್ರೇ ಇವಾನ್ಸ್, ಲೇಕರ್ ಅವರು "ಮೇ ಅವರಿಂದ ಸರಿಯಾದ ಬೆಂಬಲ ಪಡೆಯುತ್ತಿಲ್ಲ" ಎಂದು ಹೇಳಿದರು. ರಾಮನ್ ಸುಬ್ಬಾ ರೋ ಅವರು ಮೇ ಅವರ "ನಿರ್ವಹಣಾ ಶೈಲಿ" ಯನ್ನು ದೂಷಿಸಿದರು. ಮತ್ತೊಂದೆಡೆ ಆರ್ಥರ್ ಮ್ಯಾಕ್‌ಇಂಟೈರ್ ಅವರು ಬ್ಯಾಟ್ಸ್‌ಮನ್ ಆಗಿ ಕೆಂಟ್ ಪಂದ್ಯದಲ್ಲಿ ಲೇಕರ್‌ನ ವಿಫಲತೆಯನ್ನು ದೂಷಿಸಿದರು. ಏಕೆಂದರೆ ಅವರು "ಪ್ರಯತ್ನಿಸಲಿಲ್ಲ" ಮತ್ತು ಬೆರಳಿನ ಗಾಯದ ಬಗ್ಗೆ ಲೇಕರ್ "ನಾಟಕ ಆಡಿತ್ತಿದ್ದಾರೆ" ಎಂದರು.[೫೯]

೧೯೫೮/೫೯ ರಲ್ಲಿ ಇಂಗ್ಲೆಂಡ್ ಪಾಲಿಗೆ ಕೆಟ್ಟದಾಗಿ ನಡೆದ ಆಸ್ಟ್ರೇಲಿಯಾದ ಪ್ರವಾಸದಲ್ಲಿ, ಲೇಕರ್ ಒಳ್ಳೆಯ ಪ್ರದರ್ಶನ ನೀಡಿದ ಕೆಲವೇ ಆಟಗಾರರಲ್ಲಿ ಒಬ್ಬನಾಗಿದ್ದನು. ಅಸಹಾಯಕಾರಿ ಪಿಚ್‌ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದನು. ಅವರು ನಾಲ್ಕು ಟೆಸ್ಟ್ ಸೇರಿದಂತೆ ಹತ್ತು ಪಂದ್ಯಗಳಲ್ಲಿ ಆಡಿದರು. ಫೆಬ್ರವರಿಯಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐದನೇ ಟೆಸ್ಟ್ ಅವರ ಕೊನೆಯ ಟೆಸ್ಟ್ ಪಂದ್ಯವಾಯಿತು.

೧೯೫೯ರಲ್ಲಿ ಭಾರತ ವಿರುದ್ಧದ ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿಲ್ಲ. ಸರ್ರೆ ಪ್ರಶಸ್ತಿಯನ್ನು ಯಾರ್ಕ್‌ಷೈರ್‌ಗೆ ಒಪ್ಪಿಸಿದ ಈ ಸಾಲಿನ ಕೊನೆಯಲ್ಲಿ ಅವರು ಆಟದಿಂದ ನಿವೃತ್ತರಾದರು. ಸೆಪ್ಟೆಂಬರ್‌ನಲ್ಲಿ ದಿ ಓವಲ್‌ನಲ್ಲಿ ಸರ್ರೆಯ ನಾರ್ಥಾಂಪ್ಟನ್‌ಶೈರ್ ವಿರುದ್ಧದ ಪಂದ್ಯವು ಅವರ ಕೊನೆಯ ಪಂದ್ಯವಾಯಿತು. ಈ ಪಂದ್ಯವನ್ನು ಸರ್ರೆ ನಾಲ್ಕು ವಿಕೆಟ್‌ಗಳಿಂದ ಸೋಲುಂಡು, ಲೇಕರ್ ಕೇವಲ ಒಂದು ವಿಕೆಟ್ ಪಡೆದರು.

೧೯೬೦ರಲ್ಲಿ ಲೇಕರ್ ಅವರ ಆತ್ಮಚರಿತ್ರೆ "ಓವರ್ ಟು ಮಿ" ಪ್ರಕಟವಾಯಿತು. ಇದು ಮೇ ಬಗ್ಗೆ ತೀವ್ರ ಟೀಕೆಗಳನ್ನು ಹೊಂದಿದ್ದರಿಂದ ವಿವಾದಾತ್ಮಕವಾಯಿತು.[೬೦] ಹವ್ಯಾಸಿ ಸಿದ್ಧಾಂತದಿಂದ ರಚಿಸಲ್ಪಟ್ಟ ಈ ಪುಸ್ತಕವು "ಕ್ರಿಕೆಟ್‌ನಲ್ಲಿನ ಸಾಮಾಜಿಕ ಕಮರಿಯ ಬಗ್ಗೆಯ ಲೇಕರ್‌ನ ಅಸಹ್ಯತೆಗೆ ಸಾಕ್ಷಿಯಾಗಿದೆ" ಎಂದು ಹಿಲ್ ಹೇಳುತ್ತಾರೆ.[೬೧] ಮಿಕ್ಕಿ ಸ್ಟೀವರ್ಟ್ ಅವರು "ಸಾಂಪ್ರದಾಯಿಕ ಆಕ್ಸ್‌ಬ್ರಿಡ್ಜ್ ಅಕ್ಷ" ದಿಂದ ಆಟವನ್ನು ನಡೆಸಬಾರದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕ್ರೀಡೆಯ ಆಡಳಿತ ನಡೆಸುವವರು ಹಿನ್ನೆಲೆಯಿಂದ ಅಲ್ಲ, ಸಾಮರ್ಥ್ಯದ ಬಲದಿಂದ ಆಯ್ಕೆಯಾಗಬೇಕು ಎಂದು ಲೇಕರ್ ಗಟ್ಟಿಯಾಗಿ ನಂಬಿದ್ದರು. ಆದರೆ ಸ್ಟೀವರ್ಟ್ ಲೇಕರ್‌ಗೆ ಆಕ್ಸ್‌ಬ್ರಿಡ್ಜ್‌ನ ಸಮರ್ಥ ಹವ್ಯಾಸಿಗಳೊಂದಿಗೆ ಯಾವುದೇ ತೊಂದರೆಗಳಿಲ್ಲ ಎಂದು ಹೇಳಿದರು.[೬೨] "ಓವರ್ ಟು ಮಿ" ಯೊಂದಿಗಿನ ಅಧಿಕೃತ ಅಸಮಾಧಾನವು, ಓವಲ್‌ನಲ್ಲಿನ ಸೌಲಭ್ಯಗಳಿಗೆ ಲೇಕರ್ ಅವರಿಗಿದ್ದ ಉಚಿತ ಪ್ರವೇಶ ಪಾಸ್ ಅನ್ನು ಸರ್ರೆ ಹಿಂತೆಗೆದುಕೊಳ್ಳಲು ಕಾರಣವಾಯಿತು. ಇದರ ಕುರಿತು ಎಂಸಿಸಿ ಸರ್ರೆಗೆ ಬೆಂಬಲ ನೀಡಲು ನಿರ್ಧರಿಸಿ, ಲೇಕರ್ ಅವರ ಗೌರವ ಸದಸ್ಯತ್ವವನ್ನು ರದ್ದುಗೊಳಿಸಿತು.[೬೩] ಅಂತಿಮವಾಗಿ ಎರಡನ್ನೂ ಪುನಃಸ್ಥಾಪಿಸಲಾಯಿತು. ಸರ್ರೆ ೧೯೬೪ರಲ್ಲಿ ತನ್ನ ಉಚಿತ ಪ್ರವೇಶ ಪಾಸ್ ಮತ್ತು ೧೯೬೭ರಲ್ಲಿ ಎಂಸಿಸಿ ಅವರ ಗೌರವ ಸದಸ್ಯತ್ವವನ್ನು ಪುನಃ ಸ್ಥಾಪಿಸಿತು. [೬೪]

೧೯೬೨ರಲ್ಲಿ ಲೇಕರ್ ಅವರ ಹಳೆಯ ಇಂಗ್ಲೆಂಡ್ ತಂಡದ ಸಹ ಆಟಗಾರ ಟ್ರೆವರ್ ಬೈಲಿ ಅವರು ಲೇಕರ್‌ನನ್ನು ನಿವೃತ್ತಿಯಿಂದ ಹೊರಬರಲು ಮನವೊಲಿಸಿದರು. ೧೯೬೪ರಲ್ಲಿ ಎಸೆಕ್ಸ್ ಪರ ಇಪ್ಪತ್ತು ಪಂದ್ಯಗಳಲ್ಲಿ ಆಡಿದರು. ಅವರು ೧೯೬೨ ಮತ್ತು ೧೯೬೩ರ ಹೊತ್ತಿಗೆ ಪರಿಣಾಮಕಾರಿ ಬೌಲರ್ ಆಗಿ ಉಳಿದಿದ್ದರು, ಆದರೆ ೧೯೬೪ರಲ್ಲಿ ಅಷ್ಟೇನೂ ಒಳ್ಳೆಯ ಪ್ರದರ್ಶನ ನೀಡಲಿಲ್ಲ.

ಅಂಕಿಅಂಶಗಳ ಸಾರಾಂಶ

[ಬದಲಾಯಿಸಿ]

ಇದರ ವಿವರಗಳನ್ನು ೧೯೬೦ ಮತ್ತು ೧೯೬೫ರ ಪ್ಲೇಫೇರ್ ವಾರ್ಷಿಕಗಳಲ್ಲಿ ನೀಡಲಾಯಿತು. ಅಲನ್ ಹಿಲ್ ಅವರ ಜೀವನಚರಿತ್ರೆಯು ಪಾಲ್ ಇ. ಡೈಸನ್ ಸಂಗ್ರಹಿಸಿದ ವ್ಯಾಪಕವಾದ ವೃತ್ತಿಜೀವನದ ಅಂಕಿಅಂಶಗಳ ಅನುಬಂಧವನ್ನು ಹೊಂದಿದೆ, ಇದು ಪುಟ ೨೧೫ರಿಂದ ಪ್ರಾರಂಭವಾಗುತ್ತದೆ.

ಲೇಕರ್ ೪೫೦ ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದು, ಒಟ್ಟು ೧,೯೪೪ ವಿಕೆಟ್ ಪಡೆದಿದ್ದಾರೆ. ಓಲ್ಡ್ ಟ್ರ್ಯಾಫೋರ್ಡ್‌ನಲ್ಲಿ ೧೯೫೬ರ ಟೆಸ್ಟ್‌ನಲ್ಲಿ ೫೩ಕ್ಕೆ ೧೦ ವಿಕೆಟ್ ಗಳಿಸಿದರು. ಅವರ ವೃತ್ತಿಜೀವನದ ಸರಾಸರಿ ಪ್ರತಿ ವಿಕೆಟ್‌ಗೆ ೧೮.೪೧ ರನ್ ಆಗಿತ್ತು (ಯಾವುದೇ ದೀರ್ಘಾವಧಿಯ ವೃತ್ತಿಜೀವನದ ಸರಾಸರಿ ೨೦ ಕ್ಕಿಂತ ಕಡಿಮೆ ಇರುವುದು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ). ಒಂದು ಪಂದ್ಯದಲ್ಲಿ ೧೨೭ ಬಾರಿ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಮತ್ತು ೩೨ ಬಾರಿ ಹತ್ತು ವಿಕೆಟ್‌ಗಳನ್ನು ಪಡೆದಿದ್ದಾರೆ. ಪ್ರಥಮ ದರ್ಜೆ ಅಂಕಿಅಂಶಗಳು ಟೆಸ್ಟ್ ಪಂದ್ಯಗಳನ್ನು ಒಳಗೊಂಡಿವೆ. ಲೇಕರ್ ೪೬ ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ ಮತ್ತು ೨೧.೨೪ ಸರಾಸರಿಯಲ್ಲಿ ೧೯೩ ವಿಕೆಟ್ ಪಡೆದಿದ್ದಾರೆ. ಇದು ಆ ಮಟ್ಟದ ಸ್ಪರ್ಧೆಯಲ್ಲಿ ಅಸಾಧಾರಣವಾಗಿದೆ. ಅವರ ಅತ್ಯುತ್ತಮ ಪ್ರದರ್ಶನವು ಮತ್ತೆ ೫೩ ಕ್ಕೆ ೧೦ ವಿಕೆಟ್ ಆಗಿದೆ. ಅವರು ಇನ್ನಿಂಗ್ಸ್‌ನಲ್ಲಿ ೯ ಬಾರಿ ಐದು ವಿಕೆಟ್ ಮತ್ತು ೩ ಬಾರಿ ಹತ್ತು ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ೧೯೪೮ರ ಸಾಲಿನಲ್ಲಿ ೧೦೦ ವಿಕೆಟ್ ಪಡೆದು, ೧೯೫೮ರವರೆಗೆ ಸತತ ಹನ್ನೊಂದು ಸಾಲುಗಳಲ್ಲಿ ಈ ಗುರಿಯನ್ನು ಸಾಧಿಸಿದರು. ೧೯೫೦ರಲ್ಲಿ ೧೬೬ ವಿಕೆಟ್ ಪಡೆದರು. ಅವರ ಅತ್ಯುತ್ತಮ ಸಾಲಿನ ಸರಾಸರಿಯು ೧೯೫೮ರಲ್ಲಿನ ೧೪.೨೩ ಆಗಿದ್ದು, ಇದು ಸರ್ರೆಯ ಏಳು ಪ್ರಶಸ್ತಿಗಳ ಕೊನೆಯ ವರ್ಷವಾಗಿದೆ. ದಕ್ಷಿಣ ಆಫ್ರಿಕಾದ ಎಂಸಿಸಿ ಪ್ರವಾಸದಲ್ಲಿ ೧೯೫೬/೫೭ ರಲ್ಲಿ ಲೇಕರ್ ಅವರ ಅತ್ಯುತ್ತಮ ಸಾಗರೋತ್ತರ ಪ್ರದರ್ಶನದಲ್ಲಿ ೫೦ ವಿಕೆಟ್ ಪಡೆದರು. ೧೯೫೧/೫೨ ರಲ್ಲಿ ಅವರು ಆಕ್ಲೆಂಡ್ ಪರ ಆಡಿದಾಗ ಅವರ ಅತ್ಯುತ್ತಮ ಸಾಗರೋತ್ತರ ಸರಾಸರಿಯು ೧೫.೭೯ ಆಗಿತ್ತು.

ಹೆಡಿಂಗ್ಲಿಯಲ್ಲಿ ಪ್ರಯೋಗಗಳಿಗೆ ಆಹ್ವಾನಿಸಿದಾಗ ಯಾರ್ಕ್‌ಷೈರ್ ಲೇಕರ್‌ನನ್ನು ಸಂಭಾವ್ಯ ಬ್ಯಾಟ್ಸ್‌ಮನ್ ಎಂದು ಪರಿಗಣಿಸಿದ್ದರೂ, ಬೌಲಿಂಗ್‌ನಲ್ಲಿ ಅವರ ಗಮನದಿಂದಾಗಿ ಎಂದಿಗೂ ಉಪಯುಕ್ತ ಬ್ಯಾಟ್ಸ್‌ಮನ್ ಆಗಲಿಲ್ಲ. ಆದರೂ ಅವರು ಎರಡು ಪ್ರಥಮ ದರ್ಜೆ ಶತಕಗಳನ್ನು ಗಳಿಸಿದರು (೧೧೩ ಅವರ ಅತ್ಯಧಿಕ ಸ್ಕೋರ್) ಮತ್ತು ಹದಿನೆಂಟು ಅರ್ಧಶತಕಗಳಲ್ಲಿ ೯೯ ರನ್ ಗಳಿಸಿದರು. ಅವರನ್ನು ಉತ್ತಮ ಕ್ಷೇತ್ರ ರಕ್ಷಕರಾಗಿದ್ದರು, ವಿಶೇಷವಾಗಿ ಗಲ್ಲಿಯಲ್ಲಿ. ಕ್ಷೇತ್ರ ರಕ್ಷಕರಾಗಿ ಅವರು ೧೯೫೪ ಸಾಲಿನಲ್ಲಿ ೨೯ ಕ್ಯಾಚ್‌ಗಳನ್ನು ಅಷ್ಟೆ ಪಂದ್ಯಗಳಲ್ಲಿ ಹಿಡಿದಿದ್ದರು. ಒಟ್ಟಾರೆಯಾಗಿ ಲೇಕರ್ ವೃತ್ತಿಜೀವನದಲ್ಲಿ ೨೭೦ ಕ್ಯಾಚ್‌ಗಳನ್ನು ಹಿಡಿದು, ೧೬.೬೦ ಸರಾಸರಿಯಲ್ಲಿ ೭,೩೦೪ ರನ್ ಗಳಿಸಿದರು.

ಹವ್ಯಾಸಿಗಳೊಂದಿಗಿನ ಸಮಸ್ಯೆಗಳು

[ಬದಲಾಯಿಸಿ]

ಮಾಜಿ ಹವ್ಯಾಸಿ (amateur) ಆಟಗಾರ ಚಾರ್ಲ್ಸ್ ವಿಲಿಯಮ್ಸ್ ಪ್ರಕಾರ ಲೇಕರ್ "ಶಾಮಟೂರಿಸಂ" ಬಗ್ಗೆ "ಸರಣಿ ದೂರುದಾರ" ಆಗಿದ್ದರು. ದುರದೃಷ್ಟವಶಾತ್ ಅವರು ಕೆಲವೊಮ್ಮೆ ಹವ್ಯಾಸಿ ಪರಿಕಲ್ಪನೆಯನ್ನು ವಿರೋಧಿಸಿ ಮಾತನಾಡಿ, ಅವಿವೇಕದಿಂದ ವರ್ತಿಸುತ್ತದ್ದರು. ಏನೇ ಇದ್ದರೂ ಅವರು ನಿವೃತ್ತರಾದ ಮೂರು ವರ್ಷಗಳ ನಂತರ ಅದನ್ನು ರದ್ದುಗೊಳಿಸಲಾಯಿತು.[೬೫]

ಮಾರ್ಚ್ ೧೯೫೯ರಲ್ಲಿ ಎಂಸಿಸಿ ಉಪಸಮಿತಿಯು ಹವ್ಯಾಸಿಗಳ ಮುಂದುವರಿಕೆ ಕುರಿತು ವರದಿಯನ್ನು ನೀಡಿ, ವಿಶೇಷ್ವಗಿ ಮುರಿದ ಸಮಯ ಪಾವತಿಗಳ ಪ್ರಶ್ನೆಗೆ ಒತ್ತು ನೀಡಿತು. ನಂತರ ಲೇಕರ್ ಕ್ರಿಕೆಟ್ ಸೊಸೈಟಿಯ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಹವ್ಯಾಸಿ ಆಟಗಾರನಾಗಿ ಆಡಲು ಸಾಧ್ಯವಾಗದ ಕ್ರಿಕೆಟಿಗನು ವೃತ್ತಿಪರನಾಗಿರಬೇಕು ಅಥವಾ ಆಟವಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು. ಮುರಿದ ಪಾವತಿಗಳನ್ನು "ನಗಣ್ಯ" ಎಂದು ಅವರು ವಿವರಿಸಿದರು, ಏಕೆಂದರೆ ಹವ್ಯಾಸಿಗಳಿಗೆ ವೃತ್ತಿಪರರಿಗಿಂತ ಹೆಚ್ಚಿನ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ.[೬೬] ಎಂಸಿಸಿ ೧೯೫೮/೫೯ ರಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತಮ್ಮ ತಂಡವನ್ನು ಘೋಷಿಸಿದ ನಂತರ, ಲೇಕರ್ ಪ್ರವಾಸದ ಅವಧಿಗೆ ಹವ್ಯಾಸಿಯಗಲು, ನಂತರ ಸರ್ರೆಗೆ ಹಿಂದಿರುಗಿದ ನಂತರ ಮತ್ತೆ ವೃತ್ತಿಪರರಾಗಲು ಪ್ರಸ್ತಾಪಿಸಿದರು. ಪ್ರವಾಸದಲ್ಲಿ ಹವ್ಯಾಸಿಗಳಿಗೆ ತಮ್ಮ ಖರ್ಚನ್ನು ಭರಿಸಲು £ ೧,೦೦೦ ಭತ್ಯೆ ನೀಡಲಾಗುತ್ತದೆ ಮತ್ತು ವೃತ್ತಿಪರರಿಗೆ £ ೮೦೦ ನೀಡಲಾಗುತ್ತದೆ ಎಂಬ ತಪ್ಪು ಮಾಹಿತಿಯು ಅವರ ಈ ಆಲೋಚನೆ ಕಾರಣ. ಎಂಸಿಸಿಯು ಅವರ ಮನವಿಯನ್ನು ನಿರಾಕರಿಸಿತು. ಇದರ ಮೂಲಕ ಹವ್ಯಾಸಿ ಸಿದ್ಧಾಂತವು ಅಸ್ತಿತ್ವದಲ್ಲಿದ್ದ ಕಾರಣಗಳನ್ನು ಸರಿಯಾಗಿ ಅಥವಾ ತಪ್ಪಾಗಿ ಮೊದಲಿಗೆ ಅರ್ಥಮಾಡಿಕೊಳ್ಳದೆ ಲೇಕರ್ ತನ್ನ ಪ್ರಕರಣವನ್ನು ಹಾಳುಮಾಡನು ಎಂದು ವಿಲಿಯಮ್ಸ್ ಬರೆದಿದ್ದಾರೆ. ವಿಪರ್ಯಾಸವೆಂದರೆ ೧೯೬೨ರಲ್ಲಿ ಎಸೆಕ್ಸ್‌ಗೆ ಸೇರಲು ನಿವೃತ್ತಿಯಿಂದ ಹೊರಬಂದಾಗ ಲೇಕರ್ ಹವ್ಯಾಸಿ ಪಾತ್ರದಲ್ಲಿ ಆಡುತ್ತಿದ್ದರು.[೬೭]

ಶೈಲಿ ಮತ್ತು ವ್ಯಕ್ತಿತ್ವ

[ಬದಲಾಯಿಸಿ]

೧೯೮೬ರ ಬಾರ್ಕ್ಲೇಸ್‌ನಲ್ಲಿ, ಕಾಲಿನ್ ಕೌಡ್ರೆ ಲೇಕರ್ ಅವರ ಕಿರು-ಜೀವನಚರಿತ್ರೆಯನ್ನು ಬರೆದರು. ಅವರನ್ನು "ಬಹುಶಃ ಕ್ರಿಕೆಟ್ ಆಟ ಕಂಡ ಅತ್ಯುತ್ತಮ ಆಫ್-ಸ್ಪಿನ್ ಬೌಲರ್" ಎಂದು ಪ್ರಶಂಸಿಸಿದರು.[೬೮] ಕೌಡ್ರೆ ಲೇಕರ್ ಅನ್ನು ಮಹತ್ವಾಕಾಂಕ್ಷಿ ನಿಧಾನಗತಿಯ ಬೌಲರ್‌ಗೆ "ಪರಿಪೂರ್ಣ ಮಾದರಿ" ಎಂದು ಬಣ್ಣಿಸಿದರು. ಏಕೆಂದರೆ ಅವರು ದೊಡ್ಡ ಕೈಗಳಿಂದ ಎತ್ತರ ಮತ್ತು ಬಲಶಾಲಿಯಾಗಿದ್ದರು. ಲೇಕರ್ ಅವರ ಬಲವು ದೀರ್ಘ ಬೌಲಿಂಗ್ ಸ್ಪೆಲ್‌ಗಳನ್ನು ಎಸೆಯಲು ಸಾಮರ್ಥ್ಯವನ್ನು ನೀಡಿತು. ಅವರ ವೈವಿಧ್ಯಮಯ ಚೆಂಡಿನ ಹಾರಾಟವು ಬ್ಯಾಟ್ಸ್‌ಮನ್‌ಗೆ ತಿಳಿಯಲು ಕಷ್ಟಕರವಾಗಿತ್ತು. ಪಿಚ್ ಅಥವಾ ಹವಾಮಾನವು ಸಹಾಯ ನೀಡಿದರೆ, ಲೇಕರ್ ಹೆಚ್ಚುವರಿ ವೇಗ ಮತ್ತು ಸ್ಪಿನ್ ಅನ್ನು ಉತ್ಪಾದಿಸಬಹುದಿತ್ತು. ಇದರಿಂದಾಗಿ ಕೆಲವೊಮ್ಮೆ "ಬಹುತೇಕ ಆಡಲಾಗದ" ಎಸೆತಗಳನ್ನು ಹಾಕುತ್ತಿದ್ದರು.

ಲೇಕರ್ ಚೆಂಡೆಸೆಯುವಾಗ ನೀಡುವ ತಿರುವಿನ ಕಾರಣ ಬೌಲಿಂಗ್ ತುದಿಯಲ್ಲಿರುವ ಬ್ಯಾಟ್ಸ್‌ಮನ್‌ಗಳು "ಚೆಂಡಿನ ಬಜ್ ಅನ್ನು ಕೇಳಬಹುದು" ಎಂದು ಜಾನ್ ಆರ್ಲಾಟ್ ಒಮ್ಮೆ ಬರೆದಿದ್ದರು.[೬೯] ಗ್ಯಾರಿ ಸೋಬರ್ಸ್ ಅದಕ್ಕೆ ಒಪ್ಪಿ, "ಜಿಮ್ ಅದನ್ನು ತಿರುಗಿಸಿದಂತೆ ನೀವು ಚೆಂಡಿನ ಫಿಜ್ ಅನ್ನು ಕೇಳಬಹುದು" ಎಂದು ಹೇಳಿದರು.[೭೦] ಲ್ಯಾನ್ಸ್ ಗಿಬ್ಸ್ ಅವರೊಂದಿಗೆ "ನಿಸ್ಸಂದೇಹವಾಗಿ ನಾನು ನೋಡಿದ ಅತ್ಯುತ್ತಮ ಆಫ್ ಸ್ಪಿನ್ನರ್" ಎಂದು ಸೋಬರ್ಸ್ ಹೇಳಿದರು. ಸೋಬರ್ಸ್ ವಿಶೇಷವಾಗಿ ಲೇಕರ್‌ನ ನೇರ ಚೆಂಡಿನ ಬಗ್ಗೆ ಜಾಗರೂಕರಾಗಿದ್ದರು, ಏಕೆಂದರೆ ಸ್ಪಿನ್ನರ್‌ಗಳಲ್ಲಿ ಅಸಾಮಾನ್ಯವಾಗಿ ಇದು ಅವನ ತಿರುಗುವ ಎಸೆತಗಳಿಗಿಂತ ಕಡಿಮೆ ವೇಗದಲ್ಲಿ ಇರುತ್ತಿದ್ದು, ಡ್ರಿಫ್ಟ್ ಆಗುತ್ತಿತ್ತು.

ಲೇಕರ್ ಅವರನ್ನು ಚೆನ್ನಾಗಿ ತಿಳಿದಿದ್ದ ಫ್ರೆಡ್ ಟ್ರೂಮನ್ ಅವರು, "ಸಾಧಾರಣ, ಲಕೋನಿಕ್, ಕೆಲವೊಮ್ಮೆ ಪೇಲವ" ಎಂದು ಲೇಕರ್‌ನನ್ನು ಬಣ್ಣಿಸಿದರು.[೭೧] ಕ್ರಿಕೆಟ್‌ನಲ್ಲಿರುವ ಎಲ್ಲರಂತೆ ೧೯೫೬ರಲ್ಲಿ ಓಲ್ಡ್ ಟ್ರ್ಯಾಫೋರ್ಡ್‌ನಲ್ಲಿ ಲೇಕರ್ ಅವರ ವಿಶ್ವ ದಾಖಲೆಯಿಂದ ಟ್ರೂಮನ್ ಬೆರಗಾದರು, ಆದರೆ ಸಾಧನೆಗೆ ಲೇಕರ್ ಅವರ "ಸ್ವಯಂ-ಪರಿಣಾಮಕಾರಿ" ಪ್ರತಿಕ್ರಿಯೆಯಿಂದ ಹೆಚ್ಚು ಪ್ರಭಾವಿತರಾದರು. ಟ್ರೂಮನ್ ಹೇಳಿದಂತೆ, ಮರುದಿನದ ಪತ್ರಿಕೆಗಳಲ್ಲಿ ಲೇಕರ್ ಅವರ ಭಾಯಾಚಿತ್ರಗಳು ಅವನನ್ನು ಪೆವಿಲಿಯನ್ ಕಡೆಗೆ ಹೋಗುತ್ತಿರುವುದನ್ನು ತೋರಿಸುತ್ತವೆ. ಆಗ ಅವರು ನಗುತ್ತಿರಲಿಲ್ಲ, ಭುಜದ ಮೇಲೆ ಸ್ವೆಟರ್, "ನಿವ್ವಳ ಅಭ್ಯಾಸದಿಂದ ಹಿಂದಿರುಗಿದಂತೆ" ನಡೆದರು.[೭೨] ೨೧ನೇ ಶತಮಾನದ ಕ್ರಿಕೆಟಿಗರಿಂದ ಲೇಕರ್‌ನ ಸಾಧನೆಯಾದರೆ ಯಾವ ರೀತಿ ವರ್ತಿಸುವರು ಎಂದು ಟ್ರೂಮನ್ ಯೋಚಿಸಿದರು.

ಪೀಟರ್ ಮೇ ಅವರ ಆತ್ಮಚರಿತ್ರೆಯಲ್ಲಿ ಬೆಡ್ಸರ್, ಲೋಡರ್, ಲೇಕರ್ ಮತ್ತು ಲಾಕ್ ಅವರ ಎಸೆತಗಳಿಗೆ ಒಳ್ಳೆಯ ವಿಕೆಟ್ ಕೀಪಿಂಗ್ ನಡೆಸಿದ ಆರ್ಥರ್ ಮ್ಯಾಕ್‌ಇಂಟೈರ್ ಕುರಿತು ಬರೆದಿದ್ದಾರೆ. ಈ ನಾಲ್ವರಲ್ಲಿ, "ಚೆಂಡನ್ನು ಅಷ್ಟು ಕೆಟ್ಟದಾಗಿ ತಿರುಗಿಸಿದ" ಲೇಕರ್‌ಗೆ ವಿಕೆಟ್ ಇಡುವುದರಲ್ಲಿ ತನಗೆ ಬಹಳ ಕಷ್ಟವಾಯಿತು ಎಂದು ಖುದ್ದು ಮ್ಯಾಕ್‌ಇಂಟೈರ್ ಅವರೇ ಹೇಳಿದರು.[೭೩]

೨೦೦೬ರಲ್ಲಿ ಪೀಟರ್ ರಿಚರ್ಡ್ಸನ್ ಲೇಕರ್ ಮತ್ತು ಲಾಕ್ ನಡುವಿನ ವ್ಯತ್ಯಾಸಗಳನ್ನು ಪರಿಗಣಿಸಿದರು. ಲೇಕರ್ "ಸ್ವಲ್ಪ ಸಿನಿಕತನದ, ಸಂಪರ್ಕ ಸಾಧಿಸಲು ಕಷ್ಟ, ಲಕೋನಿಕ್ ಮತ್ತು ಮೂಡಿ" ಎಂದು ಹೇಳಿದರು. ಲೇಕರ್ ಮತ್ತು ಲಾಕ್ ನಡುವಿನ ಸಂಬಂಧ ಅಷ್ಟಕ್ಕಷ್ಟೇ, ಮತ್ತು ಯಾವಾಗಲೂ ಸ್ಪರ್ಧಿಸುತ್ತಿದ್ದರು ಎಂದು ರಿಚರ್ಡ್ಸನ್ ಹೇಳಿದರು. ಲಾಕ್ "ಆಕ್ರಮಣ ಮಾಡುತ್ತಾನೆ" ಮತ್ತು ಲೇಕರ್ "ಕೊರೆಯುತ್ತಾ" ಇದ್ದರಿಂದ ಅವರ ಆಟದ ವಿಧಾನಗಳು ಭಿನ್ನವಾಗಿವೆ. ರಿಚೀ ಬೆನಾಡ್ ಅವರು ಕೂಡ ವಿಭಿನ್ನ ಗುಣಲಕ್ಷಣಗಳನ್ನು ಗಮನಿಸಿದ್ದರು: "ಲೇಕರ್ ಕ್ಷಮೆಯಾಚಿಸುತ್ತಿದ್ದರು, ಲಾಕ್ ಬೇಡಿಕೆ ಇಡುತ್ತಿದ್ದರು". ೧೯೫೬ರಲ್ಲಿ ಸ್ಟುವರ್ಟ್ ಸರ್ರಿಡ್ಜ್ ನಿವೃತ್ತರಾದ ನಂತರ ಲೇಕರ್‌ನ ಸರ್ರೆ ನಾಯಕನಾಗಿದ್ದ ಪೀಟರ್ ಮೇ, ಲೇಕರ್ ಉತ್ಸಾಹವನ್ನು ತೋರಿಸುವ ಕಲ್ಪನೆಯೇ "ಅಸಂಬದ್ಧ" ಎಂದು ಹೇಳಿದರು.

ವೈಯಕ್ತಿಕ ಜೀವನ ಮತ್ತು ನಿವೃತ್ತಿಯ ನಂತರದ

[ಬದಲಾಯಿಸಿ]

ಲೇಕರ್ ಅವರ ಪತ್ನಿ ಲಿಲ್ಲಿ ಆಸ್ಟ್ರಿಯನ್ ಆಗಿದ್ದು, ಅವರಿಗೆ ಕ್ರಿಕೆಟ್ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಅವರ ೧೯ ವಿಕೆಟ್ ಸಾಧನೆಯ ನಂತರ ಅವರು ಹಲವಾರು ಅಭಿನಂದನಾ ದೂರವಾಣಿ ಕರೆಗಳನ್ನು ತೆಗೆದುಕೊಂಡರು ಮತ್ತು ಲೇಕರ್ ಮನೆಗೆ ಬಂದಾಗ ಅವಳು ಅವನನ್ನು ಕೇಳಿದಳು: "ಜಿಮ್, ನೀವು ಇಂದು ಏನಾದರೂ ಒಳ್ಳೆಯದನ್ನು ಮಾಡಿದ್ದೀರಾ?"[೭೪]

ಜುಲೈ ೧೯೫೬ ಓಲ್ಡ್ ಟ್ರ್ಯಾಫೋರ್ಡ್‌ನಲ್ಲಿನ ಅವರ ದಾಖಲೆಯ ಪ್ರದರ್ಶನದ ಮೂರು ವಾರಗಳ ಮುಂಚೆ, ಲೇಕರ್ ಅವರು ಡಸರ್ಟ್ ಐಲ್ಯಾಂಡ್ ಡಿಸ್ಕ್ ರೇಡಿಯೊ ಕಾರ್ಯಕ್ರಮದಲ್ಲಿ ರಾಯ್ ಪ್ಲಾಮ್ಲಿಯ ಅತಿಥಿಯಾಗಿದ್ದರು. ಅವರ ಸಂಗೀತ ಆಯ್ಕೆಗಳಲ್ಲಿ ಪಾಲ್ ರೋಬೆಸನ್ ಅವರ ಓಲ್ ಮ್ಯಾನ್ ರಿವರ್, ವೆರಾ ಲಿನ್ ಮತ್ತು ಗ್ರೇಸಿ ಫೀಲ್ಡ್ಸ್ ಅವರ ಹಾಡುಗಳು ಮತ್ತು ಪಿಯೆಟ್ರೊ ಮಸ್ಕಾಗ್ನಿ ಮತ್ತು ಫ್ರಾಂಜ್ ಶುಬರ್ಟ್ ಅವರ ಶಾಸ್ತ್ರೀಯ ತುಣುಕುಗಳು ಸೇರಿವೆ. ಅವರ ಐಷಾರಾಮಿ ಆಯ್ಕೆಗಳು ಪಿಯಾನೋ ಮತ್ತು ಕ್ರಿಕೆಟ್ ಬಾಲ್.[೭೫]

ಲೇಕರ್ ಟಿವಿ ಪ್ರಸಾರದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು, ಆಟದಿಂದ ನಿವೃತ್ತರಾದ ನಂತರ, ೧೯೬೦ರ ದಶಕದಲ್ಲಿ ಐಟಿವಿ, ೧೯೭೦ ಮತ್ತು ೧೯೮೦ರ ದಶಕಗಳಲ್ಲಿ ಬಿಬಿಸಿ ಟಿವಿಗೆ ಹೆಚ್ಚು ಗೌರವಿಸಲ್ಪಟ್ಟ ಕ್ರಿಕೆಟ್ ನಿರೂಪಕರಾದರು. ಸಹ ನಿರೂಪಕ ಜಾನ್ ಅರ್ಲಾಟ್ ಅವರು ಲೇಕರ್ ಅವರ ವ್ಯಾಖ್ಯಾನ ಶೈಲಿಯನ್ನು "ವಕ್ರ, ಶುಷ್ಕ, ಲಕೋನಿಕ್, ಅವರು ಕ್ರಿಕೆಟ್ ಬಗ್ಗೆ ಆಳವಾದ ತಿಳುವಳಿಕೆ ಮತ್ತು ಭವ್ಯವಾದ ವ್ಯಂಗ್ಯಾತ್ಮಕ ದೃಷ್ಟಿಕೋನದಿಂದ ಯೋಚಿಸಿದ್ದಾರೆ"[೭೬] ಎಂದು ಬಣ್ಣಿಸಿದರು. ಕಾಲಿನ್ ಕೌಡ್ರೆ ಲೇಕರ್ ಅವರು ಮಾಧ್ಯಮದಲ್ಲಿ ಗೌರವಾನ್ವಿತ ವ್ಯಕ್ತಿ, ಅವರ "ಟೆಲಿವಿಷನ್ ಕಾಮೆಂಟರಿ ಬ್ರಾಂಡ್" ಅನ್ನು ಶ್ಲಾಘಿಸಿದರು. ಟೆಡ್ ಡೆಕ್ಸ್ಟರ್ ಬಿಬಿಸಿಯಲ್ಲಿ ವ್ಯಾಖ್ಯಾನಕಾರರಾದ ಲೇಕರ್ ಮತ್ತು ರಿಚೀ ಬೆನಾಡ್ ಅವರೊಂದಿಗೆ ಕೆಲಸ ಮಾಡಿದ್ದರು, "ಬಾಲ್-ಬೈ-ಬಾಲ್ ವ್ಯಾಖ್ಯಾನವು ಮಾರ್ಪಟ್ಟಂತೆ ಹೊಸ ಶೈಲಿಯ ವ್ಯಾಖ್ಯಾನವು ಹೇಗೆ ವಿಕಸನಗೊಂಡಿತು" ಎಂದು ಹೇಳಿದರು. ಅವರ ಟ್ರೇಡ್‌ಮಾರ್ಕ್‌ಗಳು "ತಾಳ್ಮೆ, ನಿಖರತೆ ಮತ್ತು ನಿರಂತರತೆ " ಆಗಿತ್ತು.[೭೭]

ಏಪ್ರಿಲ್ ೨೩, ೧೯೮೬ ರಂದು ೬೪ ವರ್ಷ ವಯಸ್ಸಿನಲ್ಲಿ ಲೇಕರ್ ಪುಟ್ನಿಯಲ್ಲಿ ಸಾವನ್ನಪ್ಪಿದರು. ಆಗ ಅವರು ಬಿಬಿಸಿ ಪರ ಕೆಲಸ ಮಾಡುತ್ತಿದ್ದರು. ಪಿತ್ತಕೋಶದ ಶಸ್ತ್ರಚಿಕಿತ್ಸೆಯಿಂದ ಉಂಟಾದ ತೊಂದರೆಗಳು ಲೇಕರ್ ಸಾವಿಗೆ ಕಾರಣವಾಯಿತು. ಅವರ ಶವವನ್ನು ಪುಟ್ನಿ ವೇಲ್ ಶವಾಗಾರದಲ್ಲಿ ಅಂತ್ಯಕ್ರಿಯೆ ಮಾಡಿ, ಚಿತಾಭಸ್ಮವನ್ನು ದಿ ಓವಲ್‌ನಲ್ಲಿ ಹರಡಲಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. Hill, pp. xiv–xv & 1–36.
  2. Hill, p. 2.
  3. Hill, p. 3.
  4. Hill, p. 1.
  5. Hill, p. 4.
  6. Hill, pp. 4–5.
  7. Hill, p. 6.
  8. Hill, p. 7.
  9. Hill, p. 8.
  10. Hill, pp. 8–9.
  11. Hill, p. 26.
  12. Hill, p. 26.
  13. Hill, pp. 31–32.
  14. Hill, p. 35.
  15. Hill, p. 42.
  16. Hill, p. 50.
  17. Hill, p. 16.
  18. Hill, pp. 15–16.
  19. "Jim Laker". Cricinfo. Retrieved 2020-02-08.
  20. Hill, p. 15.
  21. Hill, p. 14.
  22. Hill, p. 16.
  23. Hill, p. 27.
  24. Hill, p. 27.
  25. Hill, pp. 27–33.
  26. Hill, p. 36.
  27. Hill, p. 40.
  28. Wisden 1948, p. 466.
  29. Hill, p. 42.
  30. Hill, 45 to 46
  31. Hill, 48
  32. "1st Test: West Indies v England at Bridgetown, Jan 21–26, 1948". espncricinfo. Retrieved 13 December 2011.
  33. Playfair 1947, 11
  34. Playfair 1947, 11
  35. Wisden 1948, 466
  36. Hill, 54
  37. Hill, 55 to 56
  38. "Sporting greats – Australia reveres and treasures its sporting heroes". Department of the Environment, Water, Heritage and the Arts. Archived from the original on 8 April 2011. Retrieved 18 December 2007. The 1948 Australian cricket team captained by Don Bradman, for example, became known as 'The Invincibles' for their unbeaten eight-month tour of England. This team is one of Australia's most cherished sporting legends.
  39. Playfair 1949, 58
  40. Playfair 1949, 88 to 90
  41. Hill, 62
  42. Arlott, 261-262
  43. Arlott, 262
  44. Arlott, 263
  45. Hill, 74
  46. Hill, 74
  47. Hill, 76
  48. Hill, 75
  49. Hill, 68-69
  50. Hill, 76 to 77
  51. Hill, 6
  52. Hill, 78
  53. Webber, 103
  54. Playfair 1957, 41
  55. "19-90 | Cricket Web". www.cricketweb.net. Retrieved 2020-02-09.
  56. Benaud, 169
  57. Hill, 20 to 22
  58. Wisden 1957 and Playfair 1957, 161
  59. Hill, 166 to 167
  60. Birley, 290
  61. Hill, 159
  62. Hill, 160
  63. Swanton, 92
  64. Hill, 175
  65. Williams, 93-94
  66. Williams, 129-130
  67. Williams, 184
  68. Barclays, 200
  69. Arlott, 261
  70. Sobers, 200
  71. Trueman, 193
  72. Trueman, 194
  73. Telegraph, 67 to 69
  74. Steen, Rob (30 July 2006). "Heroes & villains". The Guardian. Retrieved 23 September 2010.
  75. Jim Laker, Desert Island Discs, BBC. Retrieved 23 November 2019.
  76. Arlott, John (24 April 2008). "From the Vault: Arlott on Laker". The Guardian. Retrieved 26 September 2010.
  77. Barclays, 666

ಗ್ರಂಥಸೂಚಿ

[ಬದಲಾಯಿಸಿ]

ಜೀವನಚರಿತ್ರೆ

[ಬದಲಾಯಿಸಿ]
  • Hill, Alan (1998). Jim Laker: A Biography. Andre Deutsch Ltd.
  • Laker, Jim (1960). Over To Me. Muller.

ಇತರ ಪುಸ್ತಕಗಳು

[ಬದಲಾಯಿಸಿ]
  • ಅರ್ಲಾಟ್, ಜಾನ್ (1984). ಕ್ರಿಕೆಟ್‌ನಲ್ಲಿ ಅರ್ಲಾಟ್. ಕಾಲಿನ್ಸ್.
  • ಬಾರ್ಕ್ಲೇಸ್ ವರ್ಲ್ಡ್ ಆಫ್ ಕ್ರಿಕೆಟ್ (1986). ವಿಲೋ.
  • ಬೆನಾಡ್, ರಿಚಿ (2005). ನನ್ನ ಸ್ಪಿನ್ ಆನ್ ಕ್ರಿಕೆಟ್. ಹೊಡರ್ & ಸ್ಟೌಟನ್.
  • ಬಿರ್ಲಿ, ಡೆರೆಕ್ (1999). ಇಂಗ್ಲಿಷ್ ಕ್ರಿಕೆಟ್‌ನ ಸಾಮಾಜಿಕ ಇತಿಹಾಸ. Um ರಮ್.
  • ಲೆಮ್ಮನ್, ಡೇವಿಡ್ (1989). ದಿ ಹಿಸ್ಟರಿ ಆಫ್ ಸರ್ರೆ ಕೌಂಟಿ ಕ್ರಿಕೆಟ್ ಕ್ಲಬ್. ಹೆಲ್ಮ್.
  • ಪ್ಲೇಫೇರ್ ಕ್ರಿಕೆಟ್ ವಾರ್ಷಿಕ (1947 ರಿಂದ 1965). ಪ್ಲೇಫೇರ್ ಬುಕ್ಸ್ ಲಿಮಿಟೆಡ್.
  • ಸ್ಮಿತ್, ಮಾರ್ಟಿನ್ (ಸಂಪಾದಕ). ಅಂತ್ಯವಿಲ್ಲದ ಬೇಸಿಗೆಯ ಭರವಸೆ (ಡೈಲಿ ಟೆಲಿಗ್ರಾಫ್‌ನಿಂದ ಕ್ರಿಕೆಟ್ ಲೈವ್ಸ್) . Um ರಮ್ (2013).
  • ಸೋಬರ್ಸ್, ಗ್ಯಾರಿ (2003). ನನ್ನ ಆತ್ಮಚರಿತ್ರೆ. ಹೆಡ್‌ಲೈನ್.
  • ಸ್ವಾಂಟನ್, ಇಡಬ್ಲ್ಯೂ (1977). ಅನುಸರಿಸಿ. ಕಾಲಿನ್ಸ್.
  • ಟ್ರೂಮನ್, ಫ್ರೆಡ್ (2004). ಇದ್ದ ಹಾಗೆಯೇ. ಮ್ಯಾಕ್ಮಿಲನ್.
  • ವಿಲಿಯಮ್ಸ್, ಚಾರ್ಲ್ಸ್ (2012). ಜಂಟಲ್ಮೆನ್ & ಪ್ಲೇಯರ್ಸ್. ವೀಡೆನ್‌ಫೆಲ್ಡ್ ಮತ್ತು ನಿಕೋಲ್ಸನ್.
  • ವಿಸ್ಡೆನ್ ಕ್ರಿಕೆಟಿಗರ ಅಲ್ಮಾನಾಕ್ (1947 ರಿಂದ 1965). ಜಾನ್ ವಿಸ್ಡೆನ್ & ಕಂ ಲಿಮಿಟೆಡ್.
Sporting positions
ಪೂರ್ವಾಧಿಕಾರಿ
Gordon Pirie
BBC Sports Personality of the Year
1956
ಉತ್ತರಾಧಿಕಾರಿ
Dai Rees