ಜಾನ್ ಫೇಯ್ತ್‌ಫುಲ್ ಫ್ಲೀಟ್ ಸಿಐಇ (೧೮೪೭ – ೨೧ ಫೆಬ್ರವರಿ ೧೯೧೭) ಅವರು ಐಸಿಎಸ್ ಹುದ್ದೆಗೇರಿ ಇಂಡಿಯಾ ದೇಶದ ಪಶ್ಚಿಮ ಕರಾವಳಿಗೆ ನಿಯುಕ್ತರಾದರು. ಅವರು ಸರ್ಕಾರಿ ಅಧಿಕಾರಿಯಾಗಿದ್ದುಕೊಂಡು ಇತಿಹಾಸಜ್ಞರಾಗಿ ಭಾಷಾತಜ್ಞರಾಗಿ ಬೆಳೆದುದು ಒಂದು ವಿಪರ್ಯಾಸ. ಮೂವತ್ತು ವರ್ಷಗಳ ಅವರ ಅಧಿಕಾರಾವಧಿಯಲ್ಲಿ ಅವರು ಶಿಲಾಶಾಸನಗಳ ಕುರಿತು ಆಳ ಸಂಶೋಧನೆ ನಡೆಸಿ ಹಲವಾರು ಲೇಖನಗಳನ್ನೂ ಪುಸ್ತಕಗಳನ್ನೂ ಪ್ರಕಟಿಸಿದರು. ಅವುಗಳಲ್ಲಿ ಮುಖ್ಯವಾದವು "ಪಾಳಿ, ಸಂಸ್ಕೃತ ಮತ್ತು ಹಳಗನ್ನಡ ಶಾಸನಗಳು", "ಮುಂಬಯಿ ಪ್ರಾಂತ್ಯದ ಕನ್ನಡ ಜಿಲ್ಲೆಗಳ ರಾಜವಂಶಗಳು", ಮತ್ತು "ಮೊದಲ ಗುಪ್ತ ರಾಜರ ಮತ್ತವರ ಉತ್ತರಾಧಿಕಾರಿಗಳ ಶಾಸನಗಳು". ಇವಲ್ಲದೆ ಅವರು ದಿ ರಾಯಲ್ ಏಶಿಯಾಟಿಕ್ ಸೊಸೈಟಿಯ ಪತ್ರಿಕೆಗೆ (Journal of the Royal Asiatic Society) ಹಾಗೂ ‘ಇಂಡಿಯನ್ ಆಂಟಿಕ್ವರಿ’ ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿದ್ದರು.[೧] ಅಲ್ಲದೆ ಅವರು ೧೯೧೦ರಲ್ಲಿ ಪ್ರಕಟವಾದ ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ (Encyclopaedia Britanica) ದ ಹನ್ನೊಂದನೇ ಪ್ರಕಟಣೆಯ ಹದಿನಾಲ್ಕನೇ ಸಂಪುಟಕ್ಕೆ "ಹಿಂದೂ ಕಾಲನಿರ್ಣಯ" ಹಾಗೂ "ಶಾಸನಗಳು" ಕುರಿತಂತೆ ಮಾಹಿತಿ ತುಂಬಿದ್ದಾರೆ. ೧೮೮೫-೧೮೯೨ರ ಅವಧಿಯಲ್ಲಿ ಅವರು, ಆರ್.ಸಿ. ಟೆಂಪಲ್ ಅವರ ಜೊತೆಯಲ್ಲಿ ಇಂಡಿಯನ್ ಆಂಟಿಕ್ವರಿಯ ಸಂಪಾದಕರಾಗಿ ೧೪ರಿಂದ ೨೦ರವರೆಗಿನ ಸಂಪುಟಗಳನ್ನು ಪ್ರಕಟಿಸಿದರು. ಇವೆಲ್ಲವುಗಳಿಂದ ಅವರು ದೇಶಾದ್ಯಂತದ ವಿದ್ವನ್ಮಂಡಲಿಗಳಲ್ಲಿ ಉಲ್ಲೇಖಗೊಳ್ಳತೊಡಗಿದರು. ’ಗುಪ್ತ ವಂಶದ ಮೊದಲ ರಾಜರು ಮತ್ತವರ ಉತ್ತರಾಧಿಕಾರಿಗಳ ಶಾಸನಗಳ ಅಧ್ಯಯನ’ವು ಅವರ ಅನುಪಮ ವಿದ್ವತ್ತಿಗೆ ಕೈಗನ್ನಡಿಯಾಗಿ ಒಳ್ಳೆ ಹೆಸರು ತಂದುಕೊಟ್ಟಿತು.
ಲಂಡನ್ನಿನ ಸಗಟು ಸಕ್ಕರೆ ವ್ಯಾಪಾರಿ ಜಾನ್ ಜಾರ್ಜ್ ಫ್ಲೀಟ್ ಮತ್ತು ಎಸ್ತೆರ್ ಫೇಯ್ತ್‌ಫುಲ್ ಅವರ ಮಗನಾಗಿ ೧೮೪೭ರಲ್ಲಿ [೨] ಜನಿಸಿದ ಫ್ಲೀಟರು ನಾರ್ತ್‌ವುಡ್ ಮರ್ಚೆಂಟ್ ಟೇಲರ್ ಶಾಲೆಯಲ್ಲಿ ಶಿಕ್ಷಣ ಪಡೆದರು. ಅವರ ಒಡಹುಟ್ಟಿದವರಲ್ಲಿ ವೈಸ್ ಅಡ್ಮಿರಲ್ ಹರ್ಬರ್ಟ್ ಸಿಸಿಲ್ ಫ್ಲೀಟ್, ಚಿತ್ರನಟ ರುತ್‌ಲ್ಯಾಂಡ್ ಬ್ಯಾರಿಂಗ್‌ಟನ್ ನಟ ಡಂಕನ್ ಫ್ಲೀಟ್ ಮುಂತಾದ ಗಣ್ಯರಿದ್ದಾರೆ. ಅವರ ಚಿಕ್ಕಮ್ಮ ಎಮಿಲಿ ಫೇತ್‌ಫುಲ್ ಅವರು ನಾಟಕಗಳಿಗೆ ಧ್ವನಿದಾನಿ ಮತ್ತು ಸಂಘಟಕಿಯಾಗಿದ್ದರು..[೩]
ಫ್ಲೀಟ್ ಅವರು ಐಸಿಎಸ್ ಗಾಗಿ ಲಂಡನ್ನಿನ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಸಂಸ್ಕೃತ ಓದಿದರು. ೧೮೬೭ರಲ್ಲಿ ಅವರು ಮುಂಬಯಿ ಪ್ರಾಂತ್ಯಕ್ಕೆ ಆಗಮಿಸಿ ಅಸಿಸ್ಟೆಂಟ್ ಕಲೆಕ್ಟರ್ ಆದರು. ಆನಂತರದ ದಿನಗಳಲ್ಲಿ ದಕ್ಷಿಣ ವಿಭಾಗದ ನ್ಯಾಯಾಧೀಶ, ಶಿಕ್ಷಣ ಇನ್ಸ್‌ಪೆಕ್ಟರ್ ಆಗಿ, ಕೊಲ್ಲಾಪುರ ಮತ್ತು ದಕ್ಷಿಣ ಮರಾಠಾ (ಇಂದಿನ ಉತ್ತರ ಕರ್ನಾಟಕ) ಪ್ರದೇಶದ ರಾಜತಂತ್ರಜ್ಞರಾಗಿ ಹಾಗೂ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದರು. ಸಂಸ್ಕೃತಾಭ್ಯಾಸದ ಮುಂದುವರಿಕೆಯಾಗಿ ಮುಂಬಯಿ ಪ್ರಾಂತ್ಯದ ಅಸಂಖ್ಯ ಕಲ್ಲಿನ ಮತ್ತು ತಾಮ್ರದ ಶಾಸನಗಳತ್ತ ಆಸಕ್ತಿ ತಳೆದು ಅವುಗಳ ಅಧ್ಯಯನಕ್ಕೆ ತೊಡಗಿದರು. ೧೮೬೦ರ ದಶಕದ ನಡುವಿನ ವೇಳೆಗೆಲ್ಲ ಅವರು ಈ ಕುರಿತು ಲೇಖನಗಳನ್ನು ಬರೆಯತೊಡಗಿದರು. ಈ ಒಂದು ಅಧ್ಯಯನದ ಫಲವಾಗಿ ಅವರು ಕನ್ನಡ ಭಾಷೆಯತ್ತ ಸೆಳೆಯಲ್ಪಟ್ಟರು. ಕನ್ನಡವನ್ನು ಆಮೂಲಾಗ್ರವಾಗಿ ಅಭ್ಯಸಿಸಿ ಹಳಗನ್ನಡದಿಂದ ಹಿಡಿದು ಕನ್ನಡದ ಆಧುನಿಕ ಪ್ರಯೋಗಗಳವರೆಗೆ ಎಲ್ಲವನ್ನೂ ಕರತಲಾಮಲಕ ಮಾಡಿಕೊಂಡರು.[೧][೪] ಸದರನ್ ಮರಾಠಾ ಎಂದು ಕರೆಸಿಕೊಳ್ಳುತ್ತಿದ್ದ ಪ್ರದೇಶವೆಲ್ಲ ಕನ್ನಡನಾಡಿನ ಭಾಗವೇ ಎಂದು ಪರೋಕ್ಷವಾಗಿ ಗುರುತಿಸಿದವರಲ್ಲಿ ಫ್ಲೀಟರೇ ಮೊದಲಿಗರು. ಕನ್ನಡವನ್ನು ಅವರು ಹೆಚ್ಚುಹೆಚ್ಚಾಗಿ ಪ್ರೀತಿಸಿದರು. ಜನಸಾಮಾನ್ಯರ ನೆಲೆಯ ಆಳಕ್ಕಿಳಿದು ಯಾವ ಜಾನಪದ ವಿದ್ವಾಂಸನಿಗೂ ಕಡಿಮೆಯಿಲ್ಲದಂತೆ ಲಾವಣಿಗಳನ್ನು ಸಂಗ್ರಹಿಸಿ ಆ ಮೂಲಕ ಕನ್ನಡ ನಾಡಿನ ಇತಿಹಾಸವನ್ನು ಕಟ್ಟಿದರು. ಕಿತ್ತೂರ ಈರವ್ವ, ಸಂಗೊಳ್ಳಿರಾಯಣ್ಣ ಮುಂತಾದವರನ್ನು ಹಾಗೂ ನರಗುಂದದ ಬಂಡಾಯ, ಬಾದಾಮಿ ಕೋಟೆಯ ಬಂಡಾಯ ಮುಂತಾದ ಜನಪದರ ಬಾಯಿಂದ ಮುದ್ರಣದ ಬಂಗಾರದ ಚೌಕಟ್ಟಿಗೆ ತಂದು ಕನ್ನಡಿಗರ ಶೌರ‍್ಯವನ್ನು ಲೋಕಕ್ಕೆಲ್ಲ ಸಾರಿದ ಕಾರಣಕ್ಕೆ ಕನ್ನಡಿಗರು ಅವರಿಗೆ ಚಿರಋಣಿಗಳಾಗಿರಬೇಕು. ಅವರು ಸಂಗ್ರಹಿಸಿದ ’ಹಲಗಲಿಯ ಬೇಡರ ಲಾವಣಿ’ಯು ಶಸ್ತ್ರನಿಷೇಧ ಕಾನೂನಿನ ವಿರುದ್ಧ ನಡೆದ ಕ್ರಾಂತಿಯ ನಿರೂಪಣೆ. ಸರ್ಕಾರೀ ಅಧಿಕಾರಿಯಾಗಿ ಬಿಡುವಿಲ್ಲದ ಕೆಲಸಗಳನ್ನು ನಿಭಾಯಿಸುತ್ತಲೇ ಅವರು ತಮ್ಮ ಆಸಕ್ತಿಯ ಕನ್ನಡದ ಕೆಲಸವನ್ನೂ ಅಷ್ಟೇ ಶ್ರದ್ಧೆಯಿಂದ ಮಾಡಿದರು.
೧೮೮೩ರಲ್ಲಿ ಅಂದಿನ ಇಂಡಿಯಾ ಸರ್ಕಾರವು ಅವರಿಗಾಗಿ ಶಾಸನತಜ್ಞ ಹುದ್ದೆಯನ್ನು ಸೃಷ್ಟಿಸಿತು. ಮೂರು ವರ್ಷಗಳ ಆ ಸೇವೆಯ ನಂತರ ಅವರು ಸೊಲ್ಲಾಪುರದ ನ್ಯಾಯಾಧೀಶರಾದರು. ೧೮೮೯ರಲ್ಲಿ ಅವರು ಹಿರಿಯ ಕಲೆಕ್ಟರ್ ಆಗಿ ೧೮೯೧ಕ್ಕೆ ದಕ್ಷಿಣ ವಿಭಾಗಗಳ ಕಮಿಷನರ್ ಹಾಗೂ ೧೮೯೨ರ ವೇಳೆಗೆ ಕೇಂದ್ರ ವಿಭಾಗಕ್ಕೂ ಕಮಿಷನರ್ ಆದರು. ೧೮೯೩ರಲ್ಲಿ ಅವರನ್ನು ಸುಂಕದ ಇಲಾಖೆಯ ಕಮಿಷನರ್ ಆಗಿ ನೇಮಿಸಲಾಯಿತು. ೧೮೮೨ರಲ್ಲಿ ಮುಂಬಯಿ ಗೆಝೆಟಿಯರಿನಲ್ಲಿ ಅವರ ಅತ್ಯುತ್ತಮ ಕೃತಿಯಾದ "ದಿ ಡೈನಾಸ್ಟೀಸ್ ಆಫ್ ದ ಕ್ಯಾನರೀಸ್ ಡಿಸ್ಟ್ರಿಕ್ಟ್ಸ್ ಆಫ್ ದ ಮುಂಬಯಿ ಪ್ರೆಸಿಡೆನ್ಸಿ ಫ್ರಂ ದಿ ಅರ್ಲಿಯೆಸ್ಟ್ ಹಿಸ್ಟಾರಿಕಲ್ ಟೈಮ್ಸ್ ಟು ದ ಮುಸಲ್ಮಾನ್ ಕಾನ್‌ಕ್ವೆಸ್ಟ್" (ಇತಿಹಾಸಾರಂಭ ಕಾಲದಿಂದ ಮುಸ್ಲಿಂ ದಾಳಿಯವರೆಗಿನ ಮುಂಬಯಿ ಪ್ರಾಂತ್ಯದ ಕನ್ನಡ ಜಿಲ್ಲೆಗಳ ರಾಜವಂಶಗಳು) ಪ್ರಕಟವಾಯಿತು. ಅದೇ ಮುಂದೆ ೧೮೯೫ರಲ್ಲಿ ಪುಸ್ತಕರೂಪದಲ್ಲಿಯೂ ಪ್ರಕಟವಾಯಿತು. ಶಾಸನಗಳ ಅಧ್ಯಯನದಿಂದ ತಾವು ಕಂಡುಕೊಂಡ ಸತ್ಯದ ಆಧಾರದಲ್ಲಿ ಅವರು ಈ ಚರಿತ್ರೆಯನ್ನು ಸಂಕಲಿಸಿದರು. ಕಾವ್ಯಗಳು, ಸ್ಥಳಪುರಾಣಗಳು ಹಾಗೂ ನಾಣ್ಯಗಳ ಅಧ್ಯಯನಕ್ಕಿಂತಲೂ ಶಾಸನಗಳ ಅಧ್ಯಯನದಿಂದ ನಿಖರವಾದ ಚರಿತ್ರೆ ಅರಿಯಬಹುದೆಂದು ಅವರು ನಂಬಿದ್ದರು. ಹಾಗಾಗಿ ಅವರ ಈ ಕೃತಿಯು ವಸ್ತುನಿಷ್ಠವಾಗಿದ್ದು ಕದಂಬರು, ಗಂಗರು, ಕಲಚುರಿ, ಯಾದವರು, ಚಾಲುಕ್ಯರು, ರಾಷ್ಟ್ರಕೂಟರು, ಸೇವುಣರು ಮುಂತಾದ ರಾಜಮನೆತನಗಳ ಮತ್ತವರ ಕಾಲ ಮತ್ತು ಪ್ರಾದೇಶಿಕ ಪರಿಧಿಗಳನ್ನು ವಿಶದವಾಗಿ ವಿಶ್ಲೇಷಿಸಲಾಗಿದೆ.[೫] ಅಲ್ಲದೆ ಶಾಸನಗಳ ಅವಲೋಕನದಿಂದ ಲಿಪಿ ಬೆಳೆದ ದಾರಿ, ಅಯಾ ಕಾಲದ ಆಡಳಿತ ಪದ್ಧತಿ ಹಾಗೂ ಆಚಾರ ವಿಚಾರಗಳನ್ನು ತಿಳಿಯಲಾಯಿತು. ಅಲ್ಲದೆ ಈ ಮೂಲಕ ಫ್ಲೀಟರು ಕಾಲನಿರ್ಣಯಕ್ಕೆ ಒಂದು ಸರಿಯಾದ ಬುನಾದಿ ಹಾಕಿಕೊಟ್ಟರು. ಅಲ್ಲಿ ತನಕ ವಿಕ್ರಮಾದಿತ್ಯ ಶಕೆ, ಶಾಲಿವಾಹನ ಶಕೆಗಳನ್ನು ಮನಸಿಗೆ ತೋಚಿದಂತೆ ಲೆಕ್ಕಿಸಲಾಗುತ್ತಿತ್ತು.
ಫ್ಲೀಟರು ೧೮೯೭ರಲ್ಲಿ ಐಸಿಎಸ್ ಹುದ್ದೆಯಿಂದ ನಿರ್ಗಮಿಸಿ ಇಂಗ್ಲೆಂಡಿಗೆ ವಾಪಸಾದರು. ಅಲ್ಲಿದ್ದುಕೊಂಡೇ ಶಾಸನಗಳ ಪೂರ್ಣಕಾಲೀನ ಅಧ್ಯಯನದಲ್ಲಿ ತೊಡಗಿ ರಾಯಲ್ ಏಶಿಯಾಟಿಕ್ ಸೊಸೈಟಿ ಆಫ್ ಗ್ರೇಟ್ ಬ್ರಿಟನ್ ಅಂಡ್ ಐರ್ಲೆಂಡ್ ಪತ್ರಿಕೆಗೆ ಹಾಗೂ ಎಫಿಗ್ರಾಫಿಯಾ ಇಂಡಿಕಾದ ಹೊತ್ತಿಗೆಗಳಿಗೆ ಮೌಲಿಕ ಲೇಖನಗಳನ್ನು ಬರೆದರು. ಹೀಗೆ ಅವರು ತಮ್ಮ ಜೀವಿತ ಕಾಲದಲ್ಲಿ ಇನ್ನೂರಕ್ಕೂ ಮಿಗಿಲಾದ ಲೇಖನಗಳನ್ನು ಬರೆದರು. ಆ ಮೂಲಕ ಕನ್ನಡಿಗರ ಭವ್ಯ ಇತಿಹಾಸದ ದಿವ್ಯ ಪತಾಕೆಯನ್ನು ಜಗತ್ತಿಗೆಲ್ಲ ಸಾರಿದರು. ಫ್ಲೀಟರ ಈ ಅಮೋಘ ಕಾರ್ಯದಿಂದ ಇತಿಹಾಸದ ಪುಸ್ತಕಗಳ ಪಠ್ಯವೆಲ್ಲ ಆಮೂಲಾಗ್ರವಾಗಿ ಬದಲಾಯಿತೆಂಬುದರಲ್ಲಿ ಅತಿಶಯೋಕ್ತಿಯಿಲ್ಲ. ೧೯೦೬ರಲ್ಲಿ ಅವರು ಏಶಿಯಾಟಿಕ್ ಸೊಸೈಟಿಗೆ ಗೌರವ ಕಾರ್ಯದರ್ಶಿಗಳಾದರು ಮತ್ತು ೧೯೧೨ರಲ್ಲಿ ಅವರನ್ನು ಚಿನ್ನದ ಪದಕದೊಂದಿಗೆ ಸನ್ಮಾನಿಸಲಾಯಿತು. ೬೯ರ ಇಳಿವಯಸ್ಸಿನಲ್ಲಿ ಅಂದರೆ ೧೯೧೭ರಲ್ಲಿ ಅವರು ನಿಧನರಾಗುವ ಮುನ್ನ ಇಂಡಿಯನ್ ಆಂಟಿಕ್ವೆರಿಯಲ್ಲಿ ’ಲಾವಣಿ’ಗಳನ್ನು ಸಂಗೀತ ಸಮೇತ ಪ್ರಕಟಿಸಿದರು. ಬಾದಾಮಿ ಕೋಟೆಯು ನಾಶವಾದುದರ ಕುರಿತಾದ ಲಾವಣಿಯ ತುಣುಕು ಇಲ್ಲಿದೆ:
ಭಾದೂರ ಕಟ್ಟಿಸಿದಂಥ ಬಾದಾಮಿ ಕಿಲೇಕ ಬಂತೊ ಪ್ರಳಯಕಾಲಾ |
ಸುತ್ತ ರಾಜ್ಯದೊಳು ಮೇಲಾದ ಕಿಲೆಯ ಆಯಿತೊ ನೆಲದ ಪಾಲಾ ||ಪಲ್ಲ||
ಕಿಲೇದ ಚಮತ್ಕಾರ ಹೇಳತೀನಿ ಕೇಳರಿ ಮಜಕೂರಾ
ಗುಡ್ಡದ ಮೇಲೆ ಗಡಾ ಕಾಣತದ ಭಾಳ ಅಪರಂಪಾರಾ
ಮುನ್ನೂರ ಅರವತ್ತು ಕಿಲೇವು ಕಟ್ಟಿಸಿದ ಭಾದೂರ ಸಾಹೇಬರಾ
ಕುಂಟ ಕುರುಡರಿಗೆ ಅನ್ನಕ್ಷೇತ್ರ ಅಲಿ ಇಟ್ಟಿದ ಕರಾರಾ
ಬಸರ್ಹೆಂಗಸರಿಗೆ ಎರಡಾಳಿನ ಕೂಲಿ ಕೊಟ್ಟನ ಮಜೂರಾ
ಒಂಬತ್ತು ವರುಷ ಕಟ್ಟಿದ ಜನ ಹನ್ನೆರಡು ಸಾವಿರಾ
ಸುತ್ತ ಅಳವಾರಿ ಕಬ್ಬಿಣ ದ್ವಾರಗಸಿ ಇದ್ದವನೂ
ಕಲ್ಲು ಗಚ್ಚಿಲೆ ಕಟ್ಟಿದ ಗೋಡೀಗೆ ಬರದಾರ ಚಿತ್ತಾರಾ ||ಚಾಲ||
ಇಂಥ ಮಹಾನುಭಾವ ಜೆ ಎಫ್ ಫ್ಲೀಟರು ೧೯೧೭ರ ಫೆಬ್ರವರಿ ೨೧ ರಂದು ನಿಧನರಾದಾಗ ರಾಯಲ್ ಏಶಿಯಾಟಿಕ್ ಸೊಸೈಟಿ ಆಫ್ ಗ್ರೇಟ್ ಬ್ರಿಟನ್ ಅಂಡ್ ಐರ್ಲೆಂಡಿನ ಪತ್ರಿಕೆಯು ತನ್ನ ವಿಶೇಷ ಆವೃತ್ತಿ ಹೊರತಂದು ಫ್ಲೀಟರ ಜೀವನ ಸ್ಮರಣೆಯನ್ನು ಮಾಡಿ ಕೃತಾರ್ಥವಾಯಿತು.