ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಭಾರತೀಯ ಮೂಲದ, ಬಹುರಾಷ್ಟ್ರೀಯ ಉತ್ಪನ್ನ ಎಂಜಿನಿಯರಿಂಗ್ ಕಂಪನಿಯಾಗಿದ್ದು, ಇದು ಎಂಜಿನಿಯರಿಂಗ್ ಮತ್ತು ವಿನ್ಯಾಸ, ಉತ್ಪನ್ನ ಜೀವನಚಕ್ರ ನಿರ್ವಹಣೆ, ಉತ್ಪಾದನೆ, ಉತ್ಪನ್ನ ಅಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ. ಇದಲ್ಲದೆ ವಾಹನೋದ್ಯಮಗಳಿಗೆ ಮಾಹಿತಿ ತಂತ್ರಜ್ಞಾನ ಸೇವಾ ನಿರ್ವಹಣೆ ಮತ್ತು ಬಾಹ್ಯಾಕಾಶ ಕ್ಷೇತ್ರದ ಮೂಲ ಉಪಕರಣಗಳ ತಯಾರಕರಾಗಿ, ಮತ್ತು ಕೈಗಾರಿಕಾ ಯಂತ್ರೋಪಕರಣಗಳ ಕಂಪನಿಗಳಿಗೆ ಸೇವೆಗಳನ್ನು ಒದಗಿಸುತ್ತದೆ.[೭][೮] ಇದು ಟಾಟಾ ಮೋಟಾರ್ಸ್ ಅಂಗಸಂಸ್ಥೆಯಾಗಿದೆ..[೯]
ಟಾಟಾ ಟೆಕ್ನಾಲಜೀಸ್ ತನ್ನ ಪ್ರಧಾನ ಕಛೇರಿಯನ್ನು ಪುಣೆ ಯಲ್ಲಿ ಹೊಂದಿದೆ. ವಿದೇಶದಲ್ಲಿನ ಪ್ರಾದೇಶಿಕ ಪ್ರಧಾನ ಕಛೇರಿಯು ಅಮೇರಿಕಾದ ಡೆಟ್ರಾಯಿಟ್, ಮಿಚಿಗನ್‌ನಲ್ಲಿ ಇದೆ. 2023 ರ ಹೊತ್ತಿಗೆ, ಕಂಪನಿಯು ಭಾರತ, ಉತ್ತರ ಅಮೆರಿಕಾ, ಯುರೋಪ್ ಮತ್ತು ಏಷ್ಯಾ-ಫೆಸಿಫಿಕ್ ದೇಶಗಳ 18 ವಿತರಣಾ ಕೇಂದ್ರಗಳಲ್ಲಿನ ಉದ್ಯೋಗಿಗಳೂ ಸೇರಿ ಒಟ್ಟು 11,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.[೧೦][೧೧]
ಬೆಂಗಳೂರಿನಲ್ಲಿರುವ ಟಾಟಾ ಟೆಕ್ನಾಲಜೀಸ್ ಕಚೇರಿ.ಇಂಗ್ಲೆಂಡಿನ ಲೀಮಿಂಗ್ಟನ್ ಸ್ಪಾದಲ್ಲಿರುವ ಟಾಟಾ ಟೆಕ್ನಾಲಜೀಸ್ ಯುರೋಪಿಯನ್ ಇನ್ನೋವೇಶನ್ & ಡೆವಲಪ್ಮೆಂಟ್ ಸೆಂಟರ್ಟಾಟಾ ಟೆಕ್ನಾಲಜೀಸ್ ಅಭಿವೃದ್ಧಿಪಡಿಸಿದ eMO ಹೆಸರಿನ ಮಾದರಿ ಎಲೆಕ್ಟ್ರಿಕ್ ಕಾರು, 2012ರ ಉತ್ತರ ಅಮೆರಿಕಾದ ಅಂತಾರಾಷ್ಟ್ರೀಯ ಆಟೋ ಪ್ರದರ್ಶನದಲ್ಲಿ ಪ್ರದರ್ಶನಕ್ಕಿಡಲಾಗಿತ್ತು.
ಟಾಟಾ ಟೆಕ್ನಾಲಜೀಸ್ ಅನ್ನು 1989 ರಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯ ವಾಹನ ವಿನ್ಯಾಸ ಘಟಕವಾಗಿ ಸ್ಥಾಪಿಸಲಾಯಿತು.[೧೨] 1994ರಲ್ಲಿ ಇದನ್ನು ಪ್ರತ್ಯೇಕ ಕಂಪನಿಯಾಗಿ ವಿಭಜಿಸಲಾಯಿತು, ಟಾಟಾ ಮೋಟಾರ್ಸ್ ಬಹುಪಾಲು ಪಾಲನ್ನು ಉಳಿಸಿಕೊಂಡಿತು ಮತ್ತು ಅದರ ಅತಿದೊಡ್ಡ ಗ್ರಾಹಕನಾಗಿ ಮುಂದುವರಿಯಿತು.[೧೩]
ಟಾಟಾ ಟೆಕ್ನಾಲಜೀಸ್ ಇಂಕ್, 2005ರ ಆಗಸ್ಟ್ನಲ್ಲಿ, ಯುಕೆ ಮತ್ತು ಯುಎಸ್ ಮೂಲದ ಆಟೋಮೋಟಿವ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ಕಂಪನಿಯಾದ ಐಎನ್ಸಿಎಟಿ ಇಂಟರ್ನ್ಯಾಷನಲ್ ಅನ್ನು 53.4 ದಶಲಕ್ಷ ಪೌಂಡ್ಗಳಿಗೆ ಸ್ವಾಧೀನಪಡಿಸಿಕೊಂಡಿತು.[೧೪]
2011ರಲ್ಲಿ, ಟಾಟಾ ಟೆಕ್ನಾಲಜೀಸ್ ಸಂಸ್ಥೆಯು ತನ್ನ 13% ಪಾಲನ್ನು ಟಾಟಾ ಕ್ಯಾಪಿಟಲ್ ಮತ್ತು ಆಲ್ಫಾ ಟಿಸಿ ಹೋಲ್ಡಿಂಗ್ಸ್ ಸಂಸ್ಥೆಗಳಿಗೆ ಮಾರಾಟ ಮಾಡುವ ಮೂಲಕ ೧೪೧ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತು.[೧೫]
ಏಪ್ರಿಲ್ 2013 ರಲ್ಲಿ, ಟಾಟಾ ಟೆಕ್ನಾಲಜೀಸ್ ಅಮೆರಿಕನ್ ಎಂಜಿನಿಯರಿಂಗ್ ಸೇವಾ ಕಂಪನಿಯಾದ ಕ್ಯಾಂಬ್ರಿಕ್ ಕಾರ್ಪೊರೇಷನ್ ಅನ್ನು $32.5 ಮಿಲಿಯನ್ಗೆ ಸ್ವಾಧೀನಪಡಿಸಿಕೊಂಡಿತು.[೧೬]
ಮೇ 2017 ರಲ್ಲಿ, ಟಾಟಾ ಟೆಕ್ನಾಲಜೀಸ್ ಸ್ವೀಡಿಷ್ ಆಟೋಮೋಟಿವ್ ಡಿಸೈನ್ ಮತ್ತು ಉತ್ಪನ್ನ ಎಂಜಿನಿಯರಿಂಗ್ ಕಂಪನಿಯಾದ ಎಸ್ಸೆಂಡಾ ಎಂಜಿನಿಯರಿಂಗ್ ಎಬಿ ಯಲ್ಲಿ 100% ಪಾಲನ್ನು ಸ್ವಾಧೀನಪಡಿಸಿಕೊಂಡಿತು.[೧೭]
2017ರಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯ ಸಾಲವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಟಾಟಾ ಗ್ರೂಪ್ ಟಾಟಾ ಟೆಕ್ನಾಲಜೀಸ್‌ನಲ್ಲಿನ ತನ್ನ 43% ಪಾಲನ್ನು ಖಾಸಗಿ ಇಕ್ವಿಟಿ ಸಂಸ್ಥೆ ವಾರ್ಬರ್ಗ್ ಪಿಂಕಸ್ ಸಂಸ್ಥೆಗೆ $360 ದಶಲಕ್ಷಕ್ಕೆ ಮಾರಾಟ ಮಾಡುವುದಾಗಿ ಘೋಷಿಸಿತು ಮತ್ತು ಕಂಪನಿಯಲ್ಲಿನ ನಿಯಂತ್ರಕ ಷೇರುದಾರಿಕೆಯನ್ನು ಕೊನೆಗೊಳಿಸುವುದಾಗಿ ಘೋಷಿಸಿತು.[೧೮] ಆದರೆ, 2018ರಲ್ಲಿ ಒಪ್ಪಂದವನ್ನು ರದ್ದುಪಡಿಸಲಾಯಿತು.[೧೯]
ನವೆಂಬರ್ 2023 ರಲ್ಲಿ, ಟಾಟಾ ಟೆಕ್ನಾಲಜೀಸ್ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು ಘೋಷಿಸಿತು. ಸುಮಾರು ೩,೦೪೨ ಕೋಟಿ ಮೌಲ್ಯದ ಷೇರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಭಾರತೀಯ ಶೇರು ಮಾರುಕಟ್ಟೆಗೆ ಪಾದಾರ್ಪಣೆ ಮಾಡಿತು. ಇದು ಸುಮಾರು ಎರಡು ದಶಕಗಳ ನಂತರ ಟಾಟಾ ಬಳಗದ ಮೊದಲ ಸಾರ್ವಜನಿಕ ಕೊಡುಗೆಯಾಗಿದೆ.[೨೦] ಇದರ ಷೇರುಗಳು ಎನ್ಎಸ್ಇ ಮತ್ತು ಬಿಎಸ್ಇಯಲ್ಲಿ 30 ನವೆಂಬರ್ 2023 ರಂದು ವಹಿವಾಟು ಪ್ರಾರಂಭಿಸಿದವು.[೨೧]