ಟಿಫ಼ಿನ್ ಒಂದು ಬಗೆಯ ಭೋಜನವನ್ನು ಸೂಚಿಸುವ ಭಾರತೀಯ ಇಂಗ್ಲಿಷ್ ಶಬ್ದವಾಗಿದೆ. ಇದು ನಡುಹಗಲಿನ ಊಟ, ಅಥವಾ ಭಾರತೀಯ ಉಪಖಂಡದ ಕೆಲವು ಪ್ರದೇಶಗಳಲ್ಲಿ ಊಟದ ನಡುವಿನ ಲಘು ಆಹಾರ, ಅಥವಾ ದಕ್ಷಿಣ ಭಾರತೀಯ ಬಳಕೆಯಲ್ಲಿ ಹಗುರವಾದ ಬೆಳಗಿನ ಉಪಾಹಾರವನ್ನು ಸೂಚಿಸಬಹುದು.[೧] ಬ್ರಿಟಿಷ್ ಆಳ್ವಿಕೆಯಲ್ಲಿ, ಬ್ರಿಟಿಷ್ ರೂಢಿಯಾದ ಮಧ್ಯಾಹ್ನದ ಚಹಾದ ಬದಲಿಗೆ ಆ ಹೊತ್ತಿಗೆ ಲಘು ಭೋಜನವನ್ನು ತೆಗೆದುಕೊಳ್ಳುವ ಭಾರತೀಯ ಅಭ್ಯಾಸ ಚಾಲ್ತಿಗೆ ಬಂದಿತು. ಇದನ್ನು ಟಿಫ಼ಿನ್ ಎಂದು ಕರೆಯಲಾಯಿತು.
ದಕ್ಷಿಣ ಭಾರತ ಮತ್ತು ನೇಪಾಳದಲ್ಲಿ, ಟಿಫ಼ಿನ್ ಎಂದರೆ ಸಾಮಾನ್ಯವಾಗಿ ಊಟಗಳ ನಡುವಿನ ಲಘು ಆಹಾರ: ದೋಸೆ, ಇಡ್ಲಿ, ವಡೆ, ಇತ್ಯಾದಿ. ಮುಂಬಯಿಯಂತಹ ಭಾರತದ ಇತರ ಭಾಗಗಳಲ್ಲಿ, ಈ ಶಬ್ದವು ಬಹುತೇಕವಾಗಿ ಯಾವುದೋ ಬಗೆಯ ಡಬ್ಬಿ ತುಂಬಿದ ಮಧ್ಯಾಹ್ನದ ಊಟವನ್ನು ಸೂಚಿಸುತ್ತದೆ. ಮುಂಬಯಿಯಲ್ಲಿ, ಇದನ್ನು ಹಲವುವೇಳೆ ಡಬ್ಬಾವಾಲಾಗಳು ರವಾನಿಸುತ್ತಾರೆ. ಇದು ಸಾವಿರಾರು ಟಿಫ಼ಿನ್ ಬಾಕ್ಸ್ಗಳನ್ನು ಅವುಗಳ ಗಮ್ಯಸ್ಥಾನಗಳಿಗೆ ತಲುಪಿಸುವ ಒಂದು ಸಂಕೀರ್ಣ ವ್ಯವಸ್ಥೆಯಾಗಿದೆ. ಮುಂಬಯಿಯಲ್ಲಿ, ಶಾಲೆಗೆ ಹೋಗುವ ಮಗುವಿನ ಊಟದ ಡಬ್ಬಿಯನ್ನು ಪ್ರೀತಿಯಿಂದ ಟಿಫ಼ಿನ್ ಬಾಕ್ಸ್ ಎಂದು ಕರೆಯಲಾಗುತ್ತದೆ. ಟಿಫ಼ಿನ್ ಹಲವುವೇಳೆ ಅನ್ನ, ಸಾರು/ತೊವ್ವೆ, ಮೇಲೋಗರ, ತರಕಾರಿಗಳು, ಚಪಾತಿಗಳು ಅಥವಾ ಮಸಾಲೆಭರಿತ ಮಾಂಸದ ಖಾದ್ಯಗಳನ್ನು ಹೊಂದಿರುತ್ತದೆ. ಜೊತೆಗೆ, ಊಟದ ಡಬ್ಬಿಗಳನ್ನು ಸ್ವತಃ ಟಿಫ಼ಿನ್ ಕ್ಯಾರಿಯರ್ಗಳೆಂದು ಕರೆಯಲಾಗುತ್ತದೆ.