ಟೈಗರ್ ವರದಾಚಾರ್ಯ

ವರದಾಚಾರ್ಯ
ಜನನಆಗಸ್ಟ್ ೧, ೧೮೭೬
ತಮಿಳುನಾಡಿನ ತಿರುವಟ್ಟಿಯಾರ್ ಬಳಿ ಇರುವ ಕಲಡಿಪೇಟ್
ಮರಣಜನವರಿ ೧, ೧೯೫೦
ವೃತ್ತಿ(ಗಳು)ಸಂಗೀತ ವಿದ್ವಾಂಸರು, ಸಂಗೀತ ಪ್ರಾಧ್ಯಾಪಕರು

ಟೈಗರ್ ವರದಾಚಾರ್ಯ[] (ಆಗಸ್ಟ್ ೧, ೧೮೭೬ - ಜನವರಿ ೧, ೧೯೫೦) ಕರ್ನಾಟಕ ಶಾಸ್ತ್ರೀಯ ಸಂಗೀತ ಲೋಕದ ತಾರೆ.

ಸಂಗೀತ ಕ್ಷೇತ್ರದ ಮಹಾನ್ ಸಾಧಕರೂ, ಮೈಸೂರರಸರಿಂದ ಸಂಗೀತದಲ್ಲಿ ಟೈಗರ್ ಎಂದು ಬಿರುದಾಂಕಿತರಾದ ವರದಾಚಾರ್ಯರು ಆಗಸ್ಟ್ ೧, ೧೮೭೬ರ ವರ್ಷದಲ್ಲಿ ತಮಿಳುನಾಡಿನ ತಿರುವಟ್ಟಿಯಾರ್ ಬಳಿ ಇರುವ ಕಲಡಿಪೇಟ್‌ ಎಂಬಲ್ಲಿ ಜನಿಸಿದರು. ತಂದೆ ರಾಮಾನುಜಾಚಾರ್ಯರು ಮತ್ತು ತಾಯಿ ಕಲ್ಯಾಣಿ ಅಮ್ಮಾಳ್‌ ಅವರು. ವರದಾಚಾರ್ಯರ ಶಾಲಾ ಶಿಕ್ಷಣ ಎಫ್‌. ಎ. ವರೆಗೆ ನೆರವೇರಿತು. ಪಟ್ಲಂ ಸುಬ್ರಹ್ಮಣ್ಯ ಅಯ್ಯರ್ ಬಳಿ ಮೂರು ವರ್ಷ ಕಾಲ ತಿರುವಯ್ಯಾರಿನಲ್ಲಿ ಗುರುಕುಲ ಪದ್ಧತಿಯಲ್ಲಿ ಸಂಗೀತ ಶಿಕ್ಷಣ ನಡೆಸಿದರು. ಮುಂದೆ ಹೊಟ್ಟೆ ಪಾಡಿಗೆ ಕೆಲಕಾಲ ಕಲ್ಲಿಕೋಟೆಯ ಸರ್ವೆ ಇಲಾಖೆಯಲ್ಲಿ ಉದ್ಯೋಗ ಮಾಡಿದರು.

ಮೈಸೂರಿನಲ್ಲಿ ಪ್ರಖ್ಯಾತಿ

[ಬದಲಾಯಿಸಿ]

ಸಕಲ ವಿದ್ಯೆಗಳನ್ನು ಗೌರವಿಸುವ ತಾಣವೆಂದು ಪ್ರಖ್ಯಾತವಾಗಿದ್ದ ಮೈಸೂರಿಗೆ ೧೯೧೬ರ ವರ್ಷದಲ್ಲಿ ಆಗಮಿಸಿದ ವರದಾಚಾರ್ಯರು ಅಂದಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ ಮುಂದೆ ಸಂಗೀತ ಕಚೇರಿ ನಡೆಸಿದರು. ಅಂದಿನ ಶ್ರೇಷ್ಠ ಸಂಗೀತ ವಿದ್ವಜ್ಜನರ ಜೊತೆ ಇವರ ಸಂಗೀತ ಕೇಳಿ ಸಂತೋಷಿಸಿದ ಮಹಾರಾಜರು ‘ಟೈಗರ್’ ಎಂಬ ಬಿರುದಿನ ಜೊತೆಗೆ ಕಿಲ್ಲತ್ತಿನ ತೋಡ ಇತ್ತು ಸನ್ಮಾನಿಸಿದರು. ಮುಂದೆ ಅವರು ಸಂಗೀತಲೋಕದಲ್ಲಿ ಟೈಗರ್ ವರದಾಚಾರ್ಯರೆಂದೇ ಪ್ರಸಿದ್ಧಿ ಪಡೆದರು. ವರದಾಚಾರ್ಯರು ಹತ್ತು ವರ್ಷಗಳಿಗೂ ಮಿಕ್ಕು ಮೈಸೂರಿನಲ್ಲಿ ನೆಲೆಸಿದ್ದರಿಂದ ಮೈಸೂರಿನ ಸಂಗೀತಪ್ರಿಯರಿಗೆ ಮೈಸೂರಿನವರೇ ಆಗಿಬಿಟ್ಟಿದ್ದರು.

ದೇವದಾಸಿ ಮಹಿಳೆಯೊಬ್ಬರು ತಮ್ಮ ಮಗಳಿಗೆ ಸಂಗೀತ ಶಿಕ್ಷಣ ಕೊಡಿಸುವ ಉದ್ದೇಶದಿಂದ ಟೈಗರ್ ಅವರನ್ನು ಮೈಸೂರಿಗೆ ಬಂದು ನೆಲೆಸುವಂತೆ ಪ್ರಾರ್ಥಿಸಿಕೊಂಡರಂತೆ. ಆಕೆಯ ಆಹ್ವಾನವನ್ನು ಅಂಗೀಕರಿಸಿ ಮೈಸೂರಿಗೆ ಬಂದ ಆಚಾರ್ಯರು, ಕತ್ವಾಡಿಪುರ ಅಗ್ರಹಾರದಲ್ಲಿದ್ದ ಮೈಸೂರು ವಾಸುದೇವಾಚಾರ್ಯರ ಹಳೆಯ ಮನೆಯ ಸಮೀಪದಲ್ಲೇ ವಾಸಿಸುತ್ತಿದ್ದರಂತೆ.

ಕೆಲವು ರಸಿಕ ಬಾಂಧವರ ಬೇಡಿಕೆಯ ಮೇರೆಗೆ ಟೈಗರ್ ಅವರು ತಿರುಮಕೂಡ್ಲು ನರಸೀಪುರದಲ್ಲಿ ಸ್ವಲ್ಪ ಕಾಲ ನೆಲೆಸಿದ್ದರು. ಪ್ರಕೃತಿಲಕ್ಷ್ಮಿಯ ಸಿರಿಸೊಬಗುಗಳಿಗೆ ಹೆಸರುವಾಸಿಯಾದ ಈ ಊರು ಕಾವೇರಿ ಕಪಿಲಾ ನದಿಗಳ ಸಂಗಮ ಸ್ಥಾನ. ನೆಮ್ಮದಿಯ ಜೀವನಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನೂ ಈ ಮಿತ್ರರು ಪೂರೈಸಿದ್ದುದರಿಂದ ಟೈಗರ್ ಅವರ ದ್ರುಷ್ಟಿಯೆಲ್ಲ ಸಂಗೀತದಲ್ಲಿ ಕೇಂದ್ರೀಕೃತವಾಗಲು ಸಾಧ್ಯವಾಯಿತು. ಆಚಾರ್ಯರ ಗಾನಸುಧೆಯನ್ನು ಸವಿಯಲು ರಸಿಕರು ಕಾವೇರಿಯ ದಂಡೆಯ ಮೇಲೆ ಪ್ರತಿ ಸಂಜೆ ಸೇರುತ್ತಿದ್ದರು. ಕೂಡಲು ಬಂಗಾರ ಬಣ್ಣದ ನುಣುಪಾದ ಮರಳುರಾಶಿ. ನದಿಯ ಮೇಲಿನಿಂದ ಬೀಸಿ ಬರುವ ತಣ್ಣನೆಯ ಗಾಳಿ. ಹಾಲು ಚೆಲ್ಲಿದಂತ ಬೆಳದಿಂಗಳು. ಈ ಮನೋಹರ ವಾತಾವರಣದಲ್ಲಿ ಶ್ರುತಿ ಪಕ್ಕವಾದ್ಯಗಳಿಂದ ಮುಕ್ತವಾದ ಟೈಗರ್ ಅವರ ಗಾಯನ ನಿರಾಭರಣ ಸುಂದರಿಯಂತೆ ಕೇಳುಗರ ಹೃದಯವನ್ನು ಸೂರೆಗೊಳ್ಳುತ್ತಿತ್ತಂತೆ. ಹಿಂದಿನ ತಲೆಮಾರಿನ ಅನೇಕ ಹಿರಿಯರು ಈ ಸ್ವರ್ಗೀಯ ಸುಖವನ್ನು ಮೇಲಿಂದ ಮೇಲೆ ಮೆಲುಕುಹಾಕುತ್ತಿದ್ದರು.

ಸಂಗೀತ ಪ್ರಾಧ್ಯಾಪಕರಾಗಿ

[ಬದಲಾಯಿಸಿ]

ವರದಾಚಾರ್ಯರು ಮದರಾಸು ಹಾಗೂ ಅಣ್ಣಾಮಲೈ ವಿಶ್ವವಿದ್ಯಾನಿಲಯಗಳಲ್ಲಿ ಸಂಗೀತ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ, ದಕ್ಷ ಆಡಳಿತಗಾರರೂ, ಆದರ್ಶ ಗುರುಗಳೂ ಎಂದು ಖ್ಯಾತಿ ಪಡೆದರು. 1944ರಲ್ಲಿ ರುಕ್ಮಣಿದೇವಿಯವರ ಅಪೇಕ್ಷೆಯಮೇರೆಗೆ ಕಲಾಕ್ಷೇತ್ರದಲ್ಲಿ ‘ಸಂಗೀತ ಶಿರೋಮಣಿ’ ಪದವಿ ತರಗತಿಯನ್ನು ಪ್ರಾರಂಭಿಸಿದಾಗ ವರದಾಚಾರ್ಯರು ಅಲ್ಲಿ ಪ್ರಾಂಶುಪಾಲರಾಗಿ ನೇಮಕಗೊಂಡರು.

ವಿವಿಧ ಪ್ರಾವೀಣ್ಯತೆ

[ಬದಲಾಯಿಸಿ]

ವರದಾಚಾರ್ಯರು ಅಣ್ಣ ಶ್ರೀನಿವಾಸ ಅಯ್ಯಂಗಾರ್ಯರು ನಿರ್ದೇಶಿಸಿದ ‘ಇಂದ್ರಕೀಲ’ ನಾಟಕದ ಪಾತ್ರಧಾರಿಯೂ ಆಗಿದ್ದರು. ವಾಗ್ಗೇಯಕಾರರಾಗಿ ಹಲವಾರು ಕೀರ್ತನೆಗಳ ರಚನೆ ಮಾಡಿದರು. ಇವುಗಳು ಅಣ್ಣಾಮಲೆ ವಿಶ್ವವಿದ್ಯಾಲಯದಿಂದ ಪ್ರಕಟಿತಗೊಂಡಿವೆ. ಆಚಾರ್ಯರ ಮಾತೃಭಾಷೆ ತಮಿಳಾದರೂ ಅವರು ಕನ್ನಡ, ತೆಲುಗು, ಮಲೆಯಾಳಂ, ಸಂಸ್ಕೃತ, ಇಂಗ್ಲಿಷ್‌ ಭಾಷೆಗಳಲ್ಲಿ ಪರಿಣತಿ ಪಡೆದಿದ್ದರು.

ಪ್ರಶಸ್ತಿ ಗೌರವಗಳು

[ಬದಲಾಯಿಸಿ]

ವರದಾಚಾರ್ಯರಿಗೂ ಮೈಸೂರಿಗೂ ಬೆಳದುಬಂದಿದ್ದ ನಂಟು ಜಯಚಾಮರಾಜ ಒಡೆಯರು ಅವರನ್ನು ಆಸ್ಥಾನ ವಿದ್ವಾಂಸರನ್ನಾಗಿ ನೇಮಿಸಿ ಗೌರವಿಸಿದಾಗ ಮತ್ತಷ್ಟು ಬಲಗೊಂಡಿತು. ಪ್ರತಿವರ್ಷ ನಡೆಯುತ್ತಿದ್ದ ಪ್ರಭುಗಳ ವರ್ಧಂತಿ ಹಾಗೂ ನವರಾತ್ರಿ ಮಹೋತ್ಸವಗಳ ಸಂದರ್ಭಗಳಲ್ಲಿ ಟೈಗರ್ ಅವರು ತಪ್ಪದೆ ಭೇಟಿ ಕೊಡುತ್ತಿದ್ದರು. ಮೈಸೂರಿನಲ್ಲಿ ಇದ್ದಾಗ ದಿನವೂ ಮೈಸೂರು ವಾಸುದೇವಾಚಾರ್ಯರನ್ನು ಕಾಣಲು ಅವರ ಮನೆಗೆ ಪ್ರತಿದಿನ ಬರುತ್ತಿದ್ದರಂತೆ. “ಟೈಗರ್ ಹಾಗೂ ಮೈಸೂರು ವಾಸುದೇವಾಚಾರ್ಯರು ಏಕದೇಹನ್ಯಾಯದಂತಿದ್ದರು” ಎಂದು ಬಣ್ಣಿಸಿದ್ದಾರೆ ವಾಸುದೆವಾಚಾರ್ಯರರ ಮೊಮ್ಮಗ ಎಸ್. ಕೃಷ್ಣಮೂರ್ತಿಯವರು.

ವರದಾಚಾರ್ಯರಿಗೆ ವೀಣೆ ಶೇಷಣ್ಣನವರ ಮನೆಯಲ್ಲಿ ನಡೆಯುತ್ತಿದ್ದ ರಾಮೋತ್ಸವ ಸಂದರ್ಭದಲ್ಲಿ ಸನ್ಮಾನ; ಮದರಾಸಿನ ಮ್ಯೂಸಿಕ್‌ ಅಕಾಡೆಮಿ ಸಂಗೀತ ಸಮ್ಮೇಳನದ ಅಧ್ಯಕ್ಷತೆ, ಸಂಗೀತ ಕಲಾನಿಧಿ ಬಿರುದು; ಮೈಸೂರಿನ ಅರಸರಾದ ಜಯಚಾಮರಾಜ ಒಡೆಯರ ಆಸ್ಥಾನದಲ್ಲಿ ಆಸ್ಥಾನ ವಿದ್ವಾಂಸರಾಗಿ ಗೌರವ, ‘ಸಂಗೀತ ಶಾಸ್ತ್ರ ವಿಶಾರದ’ ಬಿರುದಿನೊಂದಿಗೆ ಗಂಡಭೇರುಂಡ ಲಾಂಛನದ ಪದಕದೊಂದಿಗೆ ವಜ್ರದ ಹಾರದ ಸನ್ಮಾನ ಮುಂತಾದ ಅನೇಕ ಪ್ರತಿಷ್ಠಿತ ಗೌರವಗಳು ಸಂದಿದ್ದವು.

ವಿದಾಯ

[ಬದಲಾಯಿಸಿ]

ಈ ಸಂಗೀತ ತಪಸ್ವಿಗಳು ತಮ್ಮ ಶಿಷ್ಯ ಎಂ.ಡಿ. ರಾಮನಾಥನ್‌ ಅವರಿಗೆ ಜನವರಿ 1, 1950ರ ದಿನದಂದು ತಮಗಿಷ್ಟವಾದ ಕೀರ್ತನೆಯನ್ನು ಹಾಡಲು ಹೇಳಿ, ಅದನ್ನು ಆಲಿಸುತ್ತಿದ್ದಂತೆ ಈ ಲೋಕವನ್ನು ತ್ಯಜಿಸಿದರು.

ಉಲ್ಲೇಖಗಳು

[ಬದಲಾಯಿಸಿ]
  1. 'ನೇಸರು',ಮಾರ್ಚ್,೨೦೧೫,ಪುಟ-೧೦,'ಕರ್ನಾಟಕ ಸಂಗೀತಕ್ಷೇತ್ರದ ನಾಡ ಕಣ್ಮಣಿಗಳು','ವಿದ್ವಾನ್ ಟೈಗರ್ ವರದಾಚಾರ್'(ಗಾಯನ ವಿದ್ವಾಂಸರು)

ಮಾಹಿತಿ ಕೃಪೆ

[ಬದಲಾಯಿಸಿ]