ತನಿಖೆಗಳು


Wikipedia Sockpuppet Investigations logo

ತನಿಖೆ ಎಂದರೆ ಒಂದು ಸಂಸ್ಥೆಯ ಹಿಂದಿನ ೫-೬ ವರ್ಷಗಳ ಲೆಕ್ಕ ಪತ್ರಗಳನ್ನು ನಿರ್ದಿಷ್ಟ ಉದ್ದೇಶದಿಂದ ಪರಿಶೀಲನೆ ಮಾಡುವುದೇ ಆಗಿದೆ. ಒಂದು ಸಂಸ್ಥೆಯ ಬೆಳವಣಿಗೆ ಅಥವಾ ಲಾಭಗಳಿಸುವ ಶಕ್ತಿ ಮೊದಲಾದುವುಗಳನ್ನು ತಿಳಿಯುವುದಕ್ಕೆ ಅನುಸರಿಸುವ ಕ್ರಮವಾಗಿದೆ. ಲೆಕ್ಕ ಪರಿಶೋಧನೆಗೂ , ತನಿಖೆಗೂ ಬಹಳ ವ್ಯತ್ಯಾಸವಿದೆ. ಅವುಗಳ ವ್ಯತ್ಯಾಸವನ್ನು ಮುಂದೆ ಹೇಳಿದ್ದೇವೆ.[]

  1. ಒಂದು ವ್ಯಾಪಾರಿ ಸಂಸ್ಥೆಯು ನಿಜವಾದ ಮತ್ತು ನ್ಯಾಯಯುತವಾದ ಹಣಕಾಸಿನ ಪರಿಸ್ಥಿತಿಯನ್ನು ತಿಳಿಯುವ ಉದ್ದೇಶದಿಂದ ಪ್ರತಿವರ್ಷ ನಡೆಸುವ ಲೆಕ್ಕಗಳ ತಪಾಸಣೆಯನ್ನು ಲೆಕ್ಕ ಪರಿಶೋಧನೆ" ಎನ್ನುತ್ತಾರೆ .ಆದರೆ ಒಂದು ನಿರ್ದಿಷ್ಟ ಉದ್ದೇಶದಿಂದ ಲೆಕ್ಕಗಳ ತಪಾಸಣೆ ಮಾಡುವುದನ್ನು "ತನಿಖೆ" ಎನ್ನುತ್ತಾರೆ. ಉದಾ: ಕಂಪನಿಯ ಬಂಡವಾಳದ ರಚನೆ ಮತ್ತು ಬೆಳವಣಿಗೆಯನ್ನು ತಿಳಿಯುವ ಉದ್ದೇಶದಿಂದ ನಡೆಸಿದ ಪರಿಶೀಲನೆಯು ತನಿಖೆ ಆಗುತ್ತದೆ.
  2. ಲೆಕ್ಕ ಪರಿಶೋಧನೆಯನ್ನು ಮಾಲೀಕರ ಪರಿವಾಗಿ, ಮಾಲೀಕರಿಗೋಸ್ಕರ ಪ್ರತಿವರ್ಷ ನಡೆಸಲಾಗುತ್ತದೆ. ಷೇರುದಾರರಿಗೆ ಪ್ರತಿ ವರ್ಷದ ಲಾಭ-ನಷ್ಟವನ್ನು ತಿಳಿಸಲು ಮತ್ತು ಕಂಪನಿಯ ಆರ್ಥಿಕ ಬೆಳವಣಿಗೆಯನ್ನು ತಿಳಿಯಲು ಪರಿಶೋಧನೆಯನ್ನು ನಡೆಸಲಾಗುತ್ತದೆ. ಆದರೆ ತನಿಖೆಯನ್ನು ಯಾರ ಪರವಾಗಿಯಾದರೂ ನಡೆಸಬಹುದು.
  3. ಲೆಕ್ಕ ಪರಿಶೋಧನೆ ಸಾಮಾನ್ಯವಾಗಿ ಒಂದು ವರ್ಷಕ್ಕೆ ನಡೆಯುತ್ತಾದೆ. ಆದರೆ ತನಿಖೆಯು ೨,೩,೪,೫, ಅಥವಾ ೬ ವರ್ಷಗಳ ಲೆಕ್ಕ ಪತ್ರಗಳನ್ನು ಒಳಗೊಂಡಂತೆ ನಡೆಯುತ್ತದೆ.
  4. ಪ್ರತಿ ವರ್ಷ, ಲೆಕ್ಕ ಶಾಸ್ತ್ರ ಮತ್ತು ಕಾನೂನಿಗೆ ಅನುಗುಣವಾಗಿ ಸಂಸ್ಥಯ ಲೆಕ್ಕ ಪತ್ರಗಳನ್ನು ಇಡಲಾಗಿದೆಯೇ ಎಂಬುದನ್ನು ತಿಳಿಯುವ ಸಲುವಾಗಿ ಲೆಕ್ಕ ಪರಿಶೋಧನೆ ನಡೆಯುತ್ತದೆ. ಆದರೆ ಸಮಗ್ರ ಪರಿಶೀಲನೆ ದೃಷ್ಟಿಯಿಂದ ಅಂದರೆ ಉದ್ದೇಶ ಸಾಧನೆಗಾಗಿ, ಸಂಸ್ಥೆಯ ಆಗುಹೋಗುಗಳನ್ನು ತಿಳಿಯಲು ನಡೆಸುವ ಕ್ರಮವನ್ನು ತನಿಖೆ ಎನ್ನಲಾಗುತ್ತದೆ.
  5. ಲೆಕ್ಕ ಪರಿಶೋಧನೆಯು ,ಸಾಮಾನ್ಯವಾಗಿ ಪರೀಕ್ಷಾರ್ಥ ಪರಿಶೀಲನೆಯಂತೆ ನಡೆಯುತ್ತದೆ.ಆದರೆ ತನಿಖೆಯನ್ನು ಇನ್ನೂ ಆಳವಾಗಿ ನಡೆಸಲಾಗುತ್ತದೆ. ಒಂದು ಒಂದು ಸಮಸ್ಯೆಯನ್ನು ಪೂರ್ಣವಾಗಿ ವಿಶ್ಲೇಷಣೆ ನಡೆಸುವ ದೃಷ್ಟಿಯಿಂದ ಮತ್ತು ತೀರ್ಮಾನ ತೆಗೆದುಕೊಳ್ಳುವುದಕ್ಕಾಗಿ ನಡೆಸುವ ಲೆಕ್ಕ ಪತ್ರಗಳ ಸಮಗ್ರ ಪರಿಶೀಲನೆಯನ್ನು ತನಿಖೆ ಎನ್ನಲಾಗುತ್ತದೆ.
  6. ಲೆಕ್ಕ ಪರಿಶೋಧನೆಯಲ್ಲಿ ಆಸ್ತಿಗಳನ್ನು ಮೌಲೀಕರಣ ವಿಧಾನಗಳು, ಇತರ ಲೆಕ್ಕ ಕ್ರಮಗಳು ನಿಖರತೆಯಿಂದ ಪ್ರತಿವರ್ಷ ನಡೆಸಲಾಗುತ್ತದೆಯೇ ಎಂಬುದನ್ನು ತಿಳಿಯುವುದು ಮತ್ತು ಅಂತಿಮ ಲೆಕ್ಕಗಳಲ್ಲಿ ತಿಳಿಸಬೇಕಾದ ಎಲ್ಲ ವಿಷಯಗಳನ್ನು ಪೂರ್ಣವಾಗಿ ತಿಳಿಸಲಾಗಿದೆಯೇ ಎಂಬುದನ್ನು ತಿಳಿಯುವುದೇ ಲೆಕ್ಕ ಪರಿಶೋಧನೆಯಾಗುತ್ತದೆ. ಪ್ರತಿ ವರ್ಷ ನಡೆಯುವ ಪ್ರಕ್ರಿಯೆ. ಆದರೆ ತನಿಖೆಯು ಈ ರೀತಿಯ ಕಟ್ಟುಪಾಡುಗಳಿಗೆ ಒಳಪಡುವುದಿಲ್ಲ. ಇಲ್ಲಿಯ ಕ್ರಮವೇ ಬೇರೆ, ಉದ್ದೇಶವೇ ಬೇರೆ.
  7. ಲೆಕ್ಕ ಪರಿಶೋಧನೆಯಲ್ಲಿ ಸಾಕ್ಷ್ಯಾಧಾರಗಳನ್ನು ಮೇಲ್ನೋಟದ ಪರಿಶೀಲನೆಯನ್ನು ಮಾಡಲಾಗುತ್ತದೆ. ಆದರೆ ತನಿಖೆಯಲ್ಲಿ ವಿಸ್ತಾರವಾದ ಮತ್ತು ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುವ ಸಾಕ್ಷ್ಯಾಧಾರಗಳ ಪರಿಶೀಲನೆ ನಡೆಯುತ್ತದೆ. []

ಈ ಎಲ್ಲ ವ್ಯತ್ಯಾಸಗಳಿಂದ ತಿಳಿದು ಬರುವ ಅಂಶವೆಂದರೆ, ಲೆಕ್ಕ ಪರಿಶೋಧನೆ ಮತ್ತು ತನಿಖೆ, ಎರಡೂ ಕೂಡ ವಿಷಯ ಹೊರಗೆಡುವ ಕ್ರಮಗಳಾದರೂ, ಅವುಗಳ ಮೂಲ ಸ್ವರೂಪದಲ್ಲಿ,ಉದ್ದೇಶಗಳಲ್ಲಿ ವ್ಯತ್ಯಾಸವಿದೆ.ವ್ಯಾಪ್ತಿ, ನಡೆಯುವ ಅಂತರ, ಆಧಾರ, ನಂಬಿಕೆ, ಆಳ ತೀರ್ಮಾನಿಸುವಿಕೆಗಳಿಗೆ ಸಂಬಂಧಿಸಿದಂತೆ ಇವೆರಡಕ್ಕೂ ವ್ಯತ್ಯಾಸವಿದೆ.

ತನಿಖೆ ನಡೆಸುವ ಸಾಮಾನ್ಯ ಅಂಶಗಳು

[ಬದಲಾಯಿಸಿ]

ಪ್ರತಿಯೊಂದು ತನಿಖೆಯನ್ನು ನಡೆಸುವಾಗಲೂ, ಬೇರೆ ಬೇರೆ ವಿಧಾನಗಳನ್ನು ಸಮಸ್ಯೆಗೆ ಅನುಗುಣವಾಗಿ ಅಳವಡಿಸಿದರೂ, ತನಿಖಾಧಿಕಾರಿಗಳು ಕೆಲವು ಸಾಮಾನ್ಯ ಅಂಶಗಳನ್ನು ಗಮನಿಸಬೇಕು. ಅವುಗಳೆಂದರೆ

  1. ಉದ್ದೇಶಗಳನ್ನು ಗುರುತಿಸುವುದು.
  2. ತನಿಖೆಯ ವೇಳಾ ಪಟ್ಟಿಯನ್ನು ತಯಾರು ಮಾಡುವುದು.
  3. ದಾಖಲತಿಗಳ ಪರೀಕ್ಷೆ ಮತ್ತು ಸಾಕ್ಷಿಗಳನ್ನು ಹುಡುಕುವುದು, ಮುಖ್ಯವಾಗಿ ಮಾಡಬೇಕದ ಕೆಲಸಗಳು.

ತನಿಖೆಯನ್ನು ಪ್ರಾರಂಭಿಸುವ ಮೊದಲು ತನ್ನನ್ನು ನೇಮಕ ಮಾಡಿದವರಿಂದ, ತನಿಖಾಧಿಕಾರಿಯು, ತನಿಖೆಗೆ ಸಂಬಂಧಿಸಿದ ನಿರ್ಧಿಷ್ಟ ತಿಳುವಳಿಕೆಯನ್ನು ಪಡೆಯಬೇಕು.ಅದು ಬರವಣಿಗೆಯ ರೂಪದಲ್ಲಿರಬೇಕು. ತನಿಖೆಯ ಅವಧಿಯನ್ನೂ ನಿರ್ಧಿಷ್ಟವಾಗಿ ತಿಳಿಯಬೇಕು. ಅಪೂರ್ಣ ತಿಳುವಳಿಕೆಯು ತನ್ನ ಗಿರಾಕೆಗೆ ತೊಂದರೆಯನ್ನು ಮಾಡುತ್ತದೆ. ತನಿಖೆಯ ಉದ್ದೇಶಗಳು ಬಹಳ ವಿಶಾಲವಾಗಿದ್ದರೆ ಅಂದರೆ ವ್ಯಾಪ್ತಿಯು ದೊಡ್ಡದಾಗಿದ್ದರೆ ಅದನ್ನು ನಿರ್ಧಿಷ್ಟಗೊಳಿಸಬೇಕು ಮತ್ತು ಸಣ್ಣದಾಗಿಸಬೇಕು. ಎರಡೆನೆಯದಾಗಿ, ತನಿಖೆಯ ಉದ್ದೇಶಕ್ಕೆ ಅನುಗುಣವಾಗಿ ತನಿಖೆಯ ವೇಳಾ ಪಟ್ಟಿಯನ್ನು, ತಯಾರಿಸಬೇಕು ಮತ್ತು ಈ ವೇಳಾಪಟ್ಟಿಯನ್ನು ತನಿಖೆಯು ಮುಂದುವರಿದಂತೆ ಸಂದರ್ಭಕ್ಕೆ ಅನುಗುಣವಾಗಿ ವದಲಾಯಿಸುವಂತೆ ಇರಬೇಕು. ಅವನು ಲೆಕ್ಕ ಪರಿಶೋಧನೆ ವರದಿಗಳನ್ನು ಪೂರ್ಣವಾಗಿ ಆಧರಿಸದೇ, ಅದರ ವ್ಯಾಪ್ತಿಯ ಹೊರಗಡೆಯೂ ತನಿಖೆಯನ್ನು ನಡೆಸುವಂತೆ ಕಾರ್ಯಕ್ರಮ ಪಟ್ಟಿಯನ್ನು ತಯಾರಿಸಬೇಕು. ಮೂರನೆಯದಾಗಿ, ದಾಖಲೆಗಳನ್ನು ಪರಿಶೀಲನೆ ನಡೆಸಬೇಕು ಮತ್ತು ಸಾಕ್ಷ್ಯಾಧಾರಗಳನ್ನು ಹೊಂದಿಸಿಕೊಳ್ಳಬೇಕು.ತಜ್ಞರ ನೆರವು ಬೇಕಾಗಿದ್ದರೆ ಅದನ್ನು ಪಡೆಯಬೇಕು.ಪ್ರತಿಯೊಬ್ಬ ತಜ್ಞನ ವರದಿಯನ್ನು ತನ್ನ ತನಿಖೆ ವರದಿಯೊಂದಿಗೆ ಲಗತ್ತಿಸಬೇಕು. ತಾನೂ ಸಹಾ ಕಾರ್ಯಪತ್ರಗಳನ್ನು ಜೋಪಾನವಾಗಿಡಬೇಕು. ತನ್ನ ತನಿಖೆಯ ಅವಧಿಯಲ್ಲಿ ಸಂಬಂಧಪಟ್ಟವರಿಂದ ಪಡೆದ ಹೇಳಿಕೆಗಳನ್ನು ಸರಿಯಾಗಿಟ್ಟಿರಬೇಕು. ತನಿಖೆಯನ್ನು ಪ್ರಾಮಾಣಿಕವಾಗಿ ಮಾಡವಬೇಕು ಮತ್ತು ಆಸಕ್ತ ಜನರಿಂದ ಪ್ರಭಾವಿತನಾಗಬಾರದು. ಆಗ ಮಾತ್ರ ನಿಚ್ಚಳ ವರದಿಯನ್ನು ಕೊಡಲು ಸಾಧ್ಯವಾಗುತ್ತದೆ. ತಾನು ತನಿಖೆಯನ್ನು ನಡೆಸುವಾಗ ಕುಶಲತೆಯಿಂದ ತನ್ನ ಕೆಲಸವನ್ನು ನಿರ್ವಹಿಸಬೇಕು. ತನಿಖಾ ವರದಿಯನ್ನು ತನಿಖೆಯು ಮುಗಿದ ನಂತರ ತಯಾರಿಸಬೇಕು. ವರದಿಯನ್ನು ಎಚ್ಚರದಿಂದ ತಯಾರಿಸಬೇಕು. ವರದಿಯು, ತನಗೆ ತಿಳಿಸಿದ ವ್ಯಾಪ್ತಿಗೊಳಪಟ್ಟು ಇರಬೇಕು. ಮತ್ತು ಅಸಂಬದ್ಧ ಮಾಹಿತಿಯನ್ನು ಹೊಂದಿರಬಾರದು. ತನಿಖಾಧಿಕಾರಿಯು ತನ್ನ ಅಭಿಪ್ರಾಯವ್ನ್ನು ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಬೇಕು. ಮತ್ತು ದೃಡಪಡಿಸಿ ಹೇಳಬೇಕು.

ವಿವಿಧ ರೀತಿಯ ತನಿಖೆಗಳು ಅಥವಾ ಉದ್ದೇಶಗಳು

[ಬದಲಾಯಿಸಿ]

ತನಿಖೆಯನ್ನು ವಿವಿಧ ಉದ್ದೇಶಗಳಿಗೋಸ್ಕರ ನಡೆಸಲಾಗುತ್ತದೆ. ಕೆಲವು ರೀತಿಯ ತನಿಖೆಗಳನ್ನು ಇಲ್ಲಿ ಹೇಳಿದೆ.

  1. ಒಂದು ಸಂಸ್ಥೆಯಲ್ಲಿ ಪಾಲುದಾರನಾಗಿ ಒಬ್ಬ ಸೇರಲು ಬಯಸಿದಾಗ, ಅವನು ಅದರಲ್ಲಿ ಪಾಲುದಾರನಾಗಿ ಸೇರಲು ಸೂಕ್ತವೇ ಎಂದು ನಿರ್ಧರಿಸಲು ನಡೆಸುವ ತನಿಖೆ.
  2. ಒಂದು ವ್ಯವಹಾರವನ್ನು ಕೊಳ್ಳುವ ಮೊದಲು ಅದರ ದುಡಿಯುವ ಶಕ್ತಿಯನ್ನು ತಿಳಿಯಲು ನಡೆಸುವ ತನಿಖೆ.
  3. ಒಂದು ಸಂಸ್ಥೆಯಲ್ಲಿ ವಂಚನೆ ನಡೆದಿದೆ ಎಂದು ಶಂಕಿಸಿದಾಗ ನಡೆಸುವ ತನಿಖೆ.
  4. ಸಂಚಯನವನ್ನು ಮಾಡಲು ಬಯಸಿದಾಗ ನಡೆಸುವ ತನಿಖೆ.
  5. ಒಂದು ಹೊಸ ಕಂಪನಿಯು ಹಳೆಯ ಕಂಪನಿಯನ್ನು ಕೊಳ್ಳಲು ಬಯಸಿದಾಗ ನಡೆಸುವ ತನಿಖೆ.
  6. ಒಂದು ಕಂಪನಿ ಷೇರುಗಲ ಮೌಲ್ಯವನ್ನು ನಿರ್ಧರಿಸಲು ತನಿಖೆ.
  7. ಕಾನೂನು ಬದ್ಧವಾಗಿ ಕಂಪನಿಯ ವ್ಯವಹಾರಗಳನ್ನು ತನಿಖೆ ಮಾಡುವುದು.
  8. ಒಂದು ಸಂಸ್ಥೆಗೆ, ಹಣವನ್ನು ಸಾಲವನ್ನಾಗಿ ಕೊಡಲು ಬಯಸಿದಾಗ ನಡೆಸುವ ತನಿಖೆ.
Tsicul-na-clinichniya-odit-bglang

ಪಾಲುಗಾರಿಕೆಗೆ ಸೇರಲು ನಡೆಸುವ ತನಿಖೆ

[ಬದಲಾಯಿಸಿ]

ತನಿಖೆ ನಡೆಸುವಾಗ ಗಮನಿಸಬೇಕಾದ ಅಂಶಗಳು-

  • .ಸಂಸ್ಥೆಲ್ಲಿರುವವ ಸದ್ಯದ ಮಾಲೀಕರು ಏಕೆ ಹೊಸಬರನ್ನು ಪಾಲುದಾರರಾಗಿ ತೆಗೆದುಕೊಳ್ಳಲು ಬಯಸುತ್ತಾರೆ.
  • .ಪಾಲುದಾರಿಕೆ ಸಂಸ್ಥೆಯ ಸದ್ಯದ ಹಣಕಾಸಿನ ಪರಿಸ್ಥಿತಿಯನ್ನು ಪರಿಶೀಲಿಸಿಬೇಕು. ಮತ್ತು ಅದು ಲಾಭವನ್ನು ಗಳಿಸುವ ಶಕ್ತಿಯನ್ನು ಎಷ್ಟರ ಮಟ್ಟಿಗೆ ಹೊಂದಿದೆ ಎಂಬುದನ್ನು ತಿಳಿಯಬೇಕು.
  • . ಪಾಲುಗಾರಿಕೆಯು, ಒಬ್ಬ ನಿವೃತ್ತನಾದ ಅಥವಾ ನಿಧನವಾದ ಪಾಲುದಾರನ ಜಾಗವನ್ನು ಭರ್ತಿ ಮಾಡಲು ,ಪಾಲುಗಾರನನ್ನು ಸೇರಿಸಲು ಬಯಸಿದ್ದರೆ,ಸಂಸ್ಥೆಗೆ ನಿವೃತ್ತಿಯಿಂದ ಅಥವಾ ನಿಧನದಿಂದ ಮುಂದೆ ವ್ಯವಹಾರಕ್ಕೆ ಧಕ್ಕೆ ಆಗುತ್ತದೆಯೇ ಎಂಬುದ್ದನ್ನು ಪರಿಶೀಲಿಸಬೇಕು.ಹೊಸಬನು ಸೇರುವುದರಿಂದ ಈ ನಷ್ಟವನ್ನು ಭರಿಸಲು ಸಾಧ್ಯವಾಗುವುದೇ ಎಂಬುದನ್ನು ಪರಿಶೀಲಿಸಬೇಕು.
  • .ಹೊಸದಾಗಿ ಸೇರ ಬಯಸುವವನು ಕೊಡುವ ಬಂಡವಾಳವನ್ನು ಯಾವ ರೀತಿಯಲ್ಲಿ ಬಳಸಲಾಗುತ್ತದೆ ಎಂಬುದ್ದನ್ನು ತಿಳಿಯಬೇಕು. ಅಂದರೆ ನಿವೃತ್ತನಾಗುವ ಪಾಲುದಅರನ ಬಂಡವಾಳವನ್ನು ವಾಪಸ್ ಮಾಡಲು ಬಳಸುವುದೇ ಅಥವಾ ಮುಂದೆ ಸಂಸ್ಥೆಯ ಚರ ಬಂಡವಾಳಕ್ಕಾಗಿ ಉಪಯೋಗಿಸಲಾಗುವುದೇ ಎಂಬುದನ್ನು ತಿಳಿಯಬೇಕು.
  • .ಸಂಸ್ಥೆಯಲ್ಲಿ ಹಾಲಿ ಇರುವ ಪಾಲುದಾರರ ಬಂಡವಾಳವು, ಲಾಭ ಅಥವಾ ನಷ್ಟದ ಹಂಚಿಕೆಯ ಪ್ರಮಾಣದಲ್ಲಿ ಇದೆಯೇ ಎಂಬುದನ್ನು ತಿಳಿಯಬೇಕು.
  • .ಸಂಸ್ಥೆಯ ಹಣಕಾಸಿನ ಪರಿಸ್ಥಿತಿಯನ್ನು ಪರಿಶೀಲಿಸಬೇಕು. ಹೊಸಬನು ಪಾಲುದಾರನಾಗಿ ಸೇರುವುದರಿಂದ ಯಾವ ರೀತಿ ಹಣಕಾಸಿನ ಭಾರವನ್ನು ಅವನು ಹೊರಬೇಕಾಗುತ್ತದೆ ಎಂಬುದನ್ನು ತಿಳಿಯಬೇಕು. ಅಸ್ತಿ-ಜವಾಬ್ದಾರಿ ಪಟ್ಟಿಯನ್ನು ಪೂರ್ಣವಾಗಿ ಪರಿಶೀಲಿಸಬೇಕು.
  • . ಪಾಲುಗಾರಿಕೆ ಒಪ್ಪಂದವನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಹೊಸಬನನ್ನು ಪಾಲುದಾರನನ್ನಾಗಿ ಸೇರಿಸಿಕೊಳ್ಳವುದ್ದಕ್ಕೆ ಇರುವ ವಿಧಿ ಅಥವಾ ನಿಯಮವನ್ನು ತಿಳಿಯಬೇಕು.
  • .ಹೊಸಬನು ತರುವ ಸುನಾಮವನ್ನು ನಿರ್ಧರಿಸುವ ವಿಧಾನವು ಸರಿಯಾಗಿದೆಯೇ ಎಂಬುದನ್ನು ತಿಳಿಯಬೇಕು.ಈ ಹಣವನ್ನು ಹಾಲಿ ಇರುವ ಪಾಲುದಾರರು ಯಾವ ರೀತಿ ಹಂಚಿಕೊಳ್ಳುತ್ತಾರೆಂಬುದನ್ನು ತಿಳಿಯಬೇಕು.
  • .ಸಂಸ್ಥೆಗೆ ತಾಂತ್ರಿಕ ಜ್ಞಾನದ ಅವಶ್ಯಕತೆ ಇದೆಯೇ ಎಂಬುದನ್ನು ತಿಳಿಯಬೇಕು ಮತ್ತು ಈ ಜ್ಞಾನವನ್ನು ಹೊಸಬನು ಎಷ್ಟರಮಟ್ಟಿಗೆ ಇದನ್ನು ಭರಿಸಬಹುದ ಎಂಬುದನ್ನು ತಿಳಿಯಬೇಕು.

ಸಂಸ್ಥೆಯನ್ನು ಕೊಳ್ಳವ ಮೊದಲು ನಡೆಸುವ ತನಿಖೆ

[ಬದಲಾಯಿಸಿ]

ಒಬ್ಬನು ಅಥವಾ ಹೆಚ್ಚು ಜನರು ಸೇರಿ ಒಂದು ವ್ಯಾಪಾರೀ ಸಂಸ್ಥೆಯ ಕೊಳ್ಳಲು ಬಯಸಿದಾಗ, ಅದನ್ನು ಕೊಳ್ಳುವುದು ಸೂಕ್ತವೇ ಎಂಬುದನ್ನು ತಿಳಿಯಲು ತನಿಖೆಯನ್ನು ನಡೆಸಲಾಗುವುದು ಮತ್ತು ಎಷ್ಟು ಪ್ರತಿಫಲವನ್ನು ಕೊಡಬೇಕು ಎಂಬುದನ್ನು ನಿರ್ಧರಿಸಲಾಗುವುದು.ಅದಕ್ಕಾಗಿ ಸಂಸ್ಥೆಯ ಹಿಂದಿನ ವರ್ಷಗಳ ಲಾಭ ನಷ್ಟ ಖಾತೆ ಮತ್ತು ಆಸ್ತಿ ಜವಾಬ್ದಾರಿ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಅದರಿಂದ,ವ್ಯವಹಾರದ ಹಿಂಧಿನ ಹಾಗು ಹೋಗುಗಳು ತಿಳಿಯುತ್ತದೆ ಮತ್ತು ಮುಂದೆ ಲಾಭಗಳಿಸುವ ಶಕ್ತಿ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದನ್ನು ತಿಳಿಯಬೇಕು.ಅದಕ್ಕಾಗಿ ಕೆಲವು ಪ್ರಮುಖ ಅಂಶಗಳ ತೀವ್ರ ಪರಿಶೀಲನೆ ಅಗತ್ಯ.

  1. ದುಡಿಯುವ ಶಕ್ತಿ-

ಹಿಂದಿನ ವರ್ಷದ ಲಾಭ ನಷ್ಟಗಳನ್ನು ತೀವ್ರವಾಗಿ ಪರಿಶೀಲಿಸಿದಾಗ ಸಂಸ್ಥೆಯ ದುಡಿಯುವ ಶಕ್ತಿ ತಿಳಿಯುತ್ತದೆ. ಇದರಿಂದ ಲಾಭದ ಪ್ರವೃತ್ತಿ ಯಾವ ರೀತಿ ಇದೆ ಎಂಬುದು ಗೊತ್ತಾಗುತ್ತದೆ. ಇದರಿಂದ ಲಾಭಧ ಪ್ರವೃತ್ತಿ ಯಾವ ರೀತಿ ಇದೆ ಎಂಬುದು ಗೊತ್ತಾಗುತ್ತದೆ. ಒಟ್ಟು ಲಾಭ ಮತ್ತು ವಹಿವಾಟಿಗೆ ಇರುವ ಅನುಪಾತವನ್ನು ಗಮನಿಸಬೇಕು. ವ್ಯಾಪಾರದಲ್ಲಿ ಬದಾಲಾವಣೆಗಳಾಗಿದ್ದರೆ ಗಮನಿಸಬೇಕು ಮತ್ತು ಲಾಭವನ್ನು ಹಿಂದಿನ ವರ್ಷಗಳಲ್ಲಿ ಹೆಚ್ಚಾಗಿ ತೋರಿಸಿಲ್ಲವೆಂಬುದನ್ನು ಮತ್ತು ನಿಜಲಾಭವನ್ನು ಮಾತ್ರ ತೋರಿಸಲಾಗಿದೆಯೆಂಬುದನ್ನು ಪರಿಶೀಲಿಸಬೇಕು. ಮಾರಾಟವನ್ನು ನಿಜ ಮಾರಾಟಕ್ಕಿಂತ ಹೆಚ್ಚಾಗಿ ತೋರಿಸುವುದು, ಕೆಲವು ಖರ್ಚುಗಳನ್ನು ಕೈಬಿಟ್ಟಿರುವುದು,ಆವರ್ತಕ ವೆಚ್ಚಗಳನ್ನು ಬಂಡವಾಳ ವೆಚ್ಚವೆಂದು ಪರಿಗಣಿಸುವುದು ಇತ್ಯಾದಿಗಳಿಂದ ಲಾಭವನ್ನು ಹೆಚ್ಚಿಸಿದ್ದರೆ ಅದನ್ನು ಗಮನಿಸಬೇಕು. ಈ ರೀತಿಯಾದ ತೀವ್ರ ಪರಿಶೀಲನೆಯಿಂದ ನಿಜಲಾಭ ಸ್ಥಿತಿ ಮತ್ತು ಸಂಸ್ಥೆಯ ದುಡಿಯುವ ಶಕ್ತಿಯು ತಿಳಿಯುತ್ತದೆ.

  1. ಹಣಕಾಸಿನ ಸ್ಥಿರತೆ:
FSFTDcover

ಆಸ್ತಿ ಜವಾಬ್ದಾರಿ ಪಟ್ಟಿಯನ್ನು ತೀವ್ರ ಪರಿಶೀಲನೆಗೆ ಒಳಪಡಿಸುವುದರಿಂದ,ವ್ಯಾಪಾರದ ಹಣಕಾಸಿನ ಸ್ಥಿರತೆ ತಿಳಿಯುತ್ತದೆ. ಆಸ್ತಿಗಳನ್ನು ಹಿಂದಿನಿಂದ ಸರಿಯಾಗಿ ಮೌಲೀಕರಿಸಲಾಗಿದೆ ಎಂಬುದನ್ನು ತಿಳಿಯಬೇಕು. ಎಲ್ಲ ಸ್ಥಿರ ಆಸ್ತಿಗಳಿಗೆ ಅವಶ್ಯವಾದ ಸವಕಳಿಯನ್ನು ತೆಗೆದಿಡಲಾಗಿದೆ ಎಂಬುದನ್ನು ಪರಿಶೀಲಿಸಬೇಕು. ಸಂಸ್ಥೆಯಲ್ಲಿ ಚರ ಬಂಡವಾಳ ಸಾಕಷ್ಟು ಇದೆಯೇ ಎಂಬುದನ್ನು ತಿಳಿಯಬೇಕು.

  1. ಸುನಾಮಾ:

ವ್ಯಾಪಾರವನ್ನು ಕೊಳ್ಳುವಾಗ ಗಮನಿಸುವ ಅಂಶಗಳೆಂದರೆ "ಸುನಾಮ".ಸುನಾಮವನ್ನು ನಿರ್ಧರಿಸುವ ಮಾರ್ಗವನ್ನು ಪರಿಶೀಲಿಸಬೇಕು. ಒಂದು ಸಂದರ್ಭದಲ್ಲಿ ಹಿಂದಿನ ಲಾಭದ ಪ್ರವೃತ್ತಿಯನ್ನು ಆಧರಿಸಿ ಸುನಾಮವನ್ನು ನಿರ್ಧರಿಸಿದರೆ, ಮತ್ತೊಂದು ಸಂದರ್ಭದಲ್ಲಿ ವಹಿವಾಟು ಅಥವಾ ಸಂಸ್ಥೆಯನ್ನು ನಡೆಸುತ್ತಿರುವ ವ್ಯಕ್ತಿಯ ವೈಯಕ್ತಿಕ ಶಕ್ತಿ ಮತ್ತು ಪ್ರಭಾವದ ಆಧಾರದ ಮೇಲೆ ನಿರ್ಧಾರ ಮಾಡಲಾಗುತ್ತದೆ. ಲಾಭವನ್ನು ಆಧರಿಸಿ ಸುನಾಮವನ್ನು ನಿರ್ಧರಿಸಿದ್ದಿರೆ, ಲಾಭವು ಹಿಂದಿನ ವರ್ಷಗಳಲ್ಲಿ ನಿಜವಾದ ಲಾಭ ಪರಿಸ್ಥಿತಿಯನ್ನು ತೋರಿಸಿದೆಯೇ ಎಂಬುದನ್ನು ತಿಳಿಯಬೇಕು. ಸುನಾಮವನ್ನು ವ್ಯಕ್ತಿಗತ ಆಧಾರದ ಮೇಲೆ ನಿರ್ಧರಿಸಿದ್ದಿರೆ, ಆ ವ್ಯಕ್ತಿಯು ಸಂಸ್ಥೆಯನ್ನು ಬಿಟ್ಟರೆ ಅದರಿಂದ ಸುನಾಮದ ಮೇಲೆ ಆಗುವ ಪ್ರಭಾವವನ್ನು ತಿಳಿಯಬೇಕು.

  1. ಇತರ ವಿಷಯಗಳು:

ಸಂಸ್ಥೆಗೆ ಯಾವುದೇ ರೀತಿಯ ಸರಕಾರದ ರಕ್ಷಣೆ ಇದೆಯೇ ಎಂಬುದನ್ನು ತಿಳಿಯಬೇಕು. ಅಂದರೆ ತೆರಿಗೆ ರೂಪದ ಸವಲತ್ತುಗಳು ಅಥವಾ ಬೇರೆ ರೀತಿಯ ಸವಲತ್ತುಗಳು ಇದೆಯೇ ಎಂಬುದನ್ನು ತಿಳಿಯಬೇಕು. ಈ ಸವಲತ್ತುಗಳು ಎಲ್ಲಿಯವರೆಗೆ ದೊರೆಯುತ್ತದೆ ಎಂಬುದನ್ನು ತಿಳಿಯಬೇಕು. ಸಂಸ್ಥೆಗೆ ಹಣಕಾಸು ಸಂಸ್ಥೆಗಳಿಂದ , ಯಾವ ರೀತಿಯ ಸಾಲ ಸೌಲಭ್ಯ ದೊರೆಯುತ್ತದೆ ಎಂಬುದನ್ನು ತಿಳಿಯಬೇಕು. ಮತ್ತು ಮಾಲೀಕತ್ವದ ಬದಲಾವಣೆಯಿಂದ ಈ ಸೌಲಭ್ಯಕ್ಕೆ ಯಾವ ರೀತಿ ತೊಂದರೆ ಆಗುತ್ತದೆ ಎಂಬುದನ್ನು ಪರಿಶೀಲಿಸಬೇಕು.ಮಾಲೀಕತ್ವದ ಬದಲಾವಣೆಯಿಂದ ವ್ಯಾಪಾರದ ಒಟ್ಟು ವಹಿವಾಟಿನ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬುದನ್ನು ತಿಳಿಯಬೇಕು. ವ್ಯಾಪಾರೀ ಸಂಸ್ಥೆಗೆ ಬೇರೆಯವರಿಂದ ಇರುವ ತೊಡಕುಗಳು ಮತ್ತು ಸ್ಪರ್ಧೆಯನ್ನು ಗಮನಿಸಬೇಕು. ಈ ಸಂಸ್ಥೆ ಮಾರುಕಟ್ಟೆಯಲ್ಲಿ ತನ್ನ ಪದಾರ್ಥಗಳನ್ನು ಹೇಗೆ ಮಾರಾಟ ಮಾಡುತ್ತಿದೆ ಮತ್ತು ವಹಿವಾಟು ಹೇಗಿದೆ ಮತ್ತು ಇತರರಿಂದ ಇದರ ವಹಿವಾಟಿಗೆ ಯಾವ ರೀತಿಯ ಧಕ್ಕೆ ಉಂಟಾಗುತ್ತಿದೆ ಎಂಬುದನ್ನು ತಿಳಿಯಬೇಕು. ಗ್ರಾಹಕರ ಮನೋಭಾವನೆಯ ಬಗೆಗೂ ವಿಚಾರ ಮಾಡಬೇಕು. ಈ ಸಂಸ್ಥೆಯ ಗ್ರಾಹಕರು ಯಾವ ರೀತಿ ನಡೆದುಕೊಳ್ಳುತ್ತಾರೆಂಬುದರ ತನಿಖೆ ಅಗತ್ಯ. ಮಾಲೀಕತ್ವದ ಬದಲಾವಣೆಯಿಂದ ಗ್ರಾಹಕರ ಸಂಬಂಧ ಯಾವ ರೀತಿ ಇರುತ್ತದೆಂಬುದನ್ನು ತಿಳಿಯಬೇಕು.ನೌಕರ ವರ್ತನೆಯ ವಿಷಯವಾಗಿ ಅಧ್ಯಯಿಸಬೇಕು. ಮಾಲೀಕತ್ವದ ಬದಲಾವಣೆ ಆದರೂ, ನೌಕರರು ಕೆಲಸದಲ್ಲಿ ಮುಂದುವರೆಯುತ್ತಾರೆಯೇ ಅಥವಾ ಬೇರೆ ನೌಕರರನ್ನು ತೆಗೆದುಕೊಂಡು ವ್ಯಾಪಾರ ಮುಂದುವರಿಸಬೇಕೇ ಎಂಬುದನ್ನು ತಿಳಿಯಬೇಕು. ಸಂಸ್ಥೆಯ ದಾಸ್ತಾನು ಶಿಲ್ಕನ್ನು ಧೃಡೀಕರಣ ಮಾಡುಬೇಕು. ಎಲ್ಲ ಅಂಶಗಳ ಕೂಲಂಕುಷ ತನಿಖೆಯ ನಂತರ , ತನಿಖಾಧಿಕಾರ ತನ್ನ ವರದಿಯನ್ನು ನಿರ್ದಿಷ್ಟ ಹೇಳಿಕೆಗಳೊಂದಿಗೆ ಸಂಬಂಧಪಟ್ಟವರಿಗೆ ಪಲಪಿಸಬೇಕು. ೩. ವಂಚನೆಯನ್ನು ಸಂಶಯಿಸಿದಾಗ ನಡೆಸುವ ತನಿಖೆ: ಒಂದು ಸಂಸ್ಥೆಯಲ್ಲಿ ವಂಚನೆ ನಡೆದಿದೆ ಎಂದು ಸಂಶಯ ಬಂದಾಗ, ತನಿಖಾಧಿಕಾರಿ ಗಮನಿಸಬೇಕಾದ ಅಂಶಗಳು.

  • . ವಂಚನೆ ಯಾವ ರೀತಿಯಲ್ಲಿ ನಡೆದಿದೆ ಎಂಬುದನ್ನು ತಿಳಿಯಬೇಕು. ಅಂದರೆ ನಗದು ಹಣವನ್ನು ದುರುಪಯೋಗ ಮಾಡಲಾಗಿದೆಯೇ ಅಥವಾ ದಾಸ್ತಾನು ಶಿಲ್ಕನ್ನು ವ್ಯತ್ಯಾಸ ಮಾಡುವುದರಿಂದ ವಂಚನೆ ಮಾಡಲಾಗಿದೆಯೇ ಎಂಬುದನ್ನು ತಿಳಿಯಬೇಕು.
  • .ಲೆಕ್ಕ ಪುಸ್ತಕಗಳನ್ನು ಇಟ್ಟಿರುವ ಕ್ರಮ, ಕೊಳ್ಳುವಿಕೆ ಮತ್ತು ಮಾರುವಿಕೆ ಕ್ರಮ ಗಳನ್ನು ಪರಿಶೀಲಿಸಬೇಕು. ಈ ಕ್ರಮಗಳಲ್ಲಿ ಏನಾದರೂ ದೋಷವಿದೆಯೇ ಎಂಬುದನ್ನು ತಿಳಿಯಬೇಕು.
  • .ಧನಿಗಳ ಪಟ್ಟಿ ಮತ್ತು ಋಣಿಗಳ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಅವುಗಳಲ್ಲಿ ತಪ್ಪೇನಾದರೂ ಕಂಡು ಬಂದರೆ ಟಿಪ್ಪಣಿ ಮಾಡಬೇಕು.
  • .ನಗದು ಹಣದ ದುರುಪಯೋಗವಾಗಿದ್ದರೆ, ನಗದು ಪುಸ್ತಕದ ದಾಖಲೆಗಳನ್ನು ವಿವರವಾಗಿ ಪರಿಶೀಲಿಸಬೇಕು.
  • .ನಗದು ಪುಸ್ತಕದ ಕೂಡಿವಿಕೆಯಲ್ಲಿ ತಪ್ಪಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು.
  • .ಬ್ಯಾಂಕ್ ಪಾಸ್ ಪುಸ್ತಕ ಮತ್ತು ನಗದು ಪುಸ್ತಕಗಳ ಶಿಲ್ಕುಗಳನ್ನು ಹೋಲಿಸಿ ನೋಡಬೇಕು.
  • .ನಗದು ಮಾರಾಟದ ವಿವರಗಳನ್ನು ಮಾರುವಿಕೆ ಒಪ್ಪಂದಗಳೊಂದಿಗೆ ತಾಳೆ ಮಾಡಬೇಕು.
  • .ಖರ್ಚುಗಳನ್ನು ವಿವರವಾಗಿ ತನಿಖೆ ಮಾಡಬೇಕು.
  • .ಸೋಡಿ ವ್ಯವಹಾರದಲ್ಲಿ ಮೋಸ ನಡೆದಿದೆಯೇ ಎಂಬುದನ್ನು ಪರಿಶೀಲಿಸಬೇಕು.
  • .ಮಾರುವಿಕೆ ಮತ್ತು ಕೊಳ್ಳುವಿಕೆ ಪುಸ್ತಕಗಳ ದಾಖಲೆಗಳನ್ನು ಪರಿಶೀಲಿಸಿ ನಗದು ವ್ಯವಹಾರವನ್ನು ಸಾಲದ ವ್ಯವಹಾರವೆಂದು ಪರಿಗಣಿಸಲಾಗಿದೆಯೇತಿಳಿಯಬೇಕು.
  • .ಚಿಲ್ಲರೆ ನಗದು ಪುಸ್ತಕದ ದಾಖಲೆಗಳನ್ನು ಪರಿಶೀಲಿಸಬೇಕು.[]

ಈ ಎಲ್ಲ ತನಿಖೆಯ ನಂತರ ವಿವರವಾದ ವರದಿಯನ್ನು ಮಾಲೀಕರಿಗೆ ತಲಪಿಬೇಕು.

Indian rupee sign

ಉಲ್ಲೇಕಗಳು

[ಬದಲಾಯಿಸಿ]