ತುಳು ನಾಡು ಅಥವಾ ತುಳುನಾಡ್, ತುಳು ಭಾಷೆ ಪ್ರಭಾವಿಯಾಗಿ ಮಾತನಾಡುವ ಭಾರತದ ಪ್ರದೇಶವಾಗಿದೆ. ತುಳುವರೆಂದು ಕರೆಯಲ್ಪಡುವ ಭಾರತ ಜನರು ಈ ಪ್ರದೇಶದ ಸ್ಥಳೀಯರು. ಹಳೆಯ ದಕ್ಷಿಣ ಕೆನರಾ ಜಿಲ್ಲೆಯನ್ನು ಪ್ರಸ್ತುತ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ[೧]. ಈ ಪ್ರದೇಶವು ಅಧಿಕೃತ ಆಡಳಿತಾತ್ಮಕ ಘಟಕವಲ್ಲ ಆದರೆ ಭಾರತದ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ರಾಜ್ಯತ್ವವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಚಳುವಳಿ ನಡೆಯುತ್ತಿದೆ. ಮಂಗಳೂರು, ಉಡುಪಿ ಮತ್ತು ಕಾಸರಗೋಡುಗಳು ಇಲ್ಲಿನ ಪ್ರಮುಖ ನಗರಗಳಾಗಿವೆ.
ತುಳು ನಾಡು - ತುಳುವ, ತುಳುವ ನಾಡು, ತುಳು ದೇಶ ಎಂಬುದಾಗಿಯೂ ಕರೆಯಲ್ಪಡುವ ತುಳು ನಾಡಿನ ಭಾಗ ಕರ್ನಾಟಕ ರಾಜ್ಯದ ಈಗಿನ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ತೆಂಕಣ ಭಾಗ ಹಾಗೂ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬಡಗಣ ಭಾಗ.
ತುಳು ಶಬ್ದ ವ್ಯುತ್ಪತ್ತಿಯ ಬಗ್ಗೆ ವಿದ್ವಾಂಸರಲ್ಲಿ ಅಭಿಪ್ರಾಯಭೇಧವಿದೆ. ತು¿ು ಎಂಬ ಶಬ್ದದಿಂದ ತುಳು ಬಂತೆಂದು ಒಂದು ಅಭಿಪ್ರಾಯವಾದರೆ, ತುಳುವೆ (ಮೃದು) ಶಬ್ದದಿಂದ (ಮೃದುನೆಲ) ಬಂತೆಂದು ಇನ್ನೊಂದು. ತುಳು ಎಂಬುದು ಪ್ರದೇಶವಾಚಕವೂ ಹೌದು. ಭಾಷಾವಾಚಕವೂ ಹೌದು. ತುಳು ನಾಡಿನ ಕಲ್ಯಾಣಪುರದ ಉತ್ತರ ಭಾಗದಲ್ಲಿ ತುಳು ಭಾಷೆ ಇಲ್ಲದಿರುವಾಗ ತುಳು ಎಂಬ ಶಬ್ದ ಮೂಲತಃ ಪ್ರದೇಶವಾಚಕವೇ ಇದ್ದಿರಬೇಕು. ಈ ಪ್ರದೇಶಕ್ಕೆ ಮತ್ತೆ ಬಂದು ನೆಲಸಿದ ಜನಾಂಗವೊಂದರ ಭಾಷೆಯೂ ತುಳು ಎಂಬ ಅಭಿಧಾನವನ್ನು ಪಡೆದಿರಬಹುದು. ತುಳು ಭಾಷೆ ದಕ್ಷಿಣದ ಇತರ ದ್ರಾವಿಡ ಭಾಷೆಗಳಲ್ಲಿ ಯಾವುದಕ್ಕೆ ಹತ್ತಿರವಾದುದು ಎಂಬುದನ್ನು ಕುರಿತ ಅಭಿಪ್ರಾಯಭಿನ್ನತೆಯಿಂದ ಮೇಲಿನ ಸಂದೇಹ ಬಲಪಡುತ್ತದೆ. ತುಳು ಭಾಷೆ ಬಳಕೆಯಲ್ಲಿಲ್ಲದ ಬಾರಕೂರು, ಬಸರೂರು, ಹಾಡುವಳ್ಳಿ, ಗೇರುಸೊಪ್ಪಗಳು ತುಳು ನಾಡಿನ ಕೇಂದ್ರಗಳಾಗಿದ್ದವು.
ಅಶೋಕನ ೨ನೆಯ ಬಂಡೆಗಲ್ಲಿನ ಶಾಸನದಲ್ಲಿ ಆತನ ಸಾಮ್ರಾಜ್ಯದ ಮೇರೆಗಳನ್ನು ಹೇಳುವಾಗ ಸತಿಯಪುತವನ್ನು ಉಲ್ಲೇಖಿಸಿದೆ. ಈ ಭೌಗೋಳಿಕ ಪ್ರದೇಶವನ್ನು ಗುರುತಿಸುವುದರಲ್ಲಿ ಹಲವಾರು ಅಭಿಪ್ರಾಯಗಳು ಮಂಡಿತವಾಗಿವೆಯಾದರೂ ಈಗ ಇದು ತುಳು ದೇಶಕ್ಕೆ ಅನ್ವಯವಾಗುವ ಪದವೆಂದು ಸಮಾನ್ಯವಾಗಿ ಒಪ್ಪಲಾಗಿದೆ. ತುಳು ದೇಶದ ಬಹುಶ: ಮೊಟ್ಟಮೊದಲ ಐತಿಹಾಸಿಕ ಉಲ್ಲೇಖ ಇದು. ಕ್ರಿ. ಶ. ಸುಮಾರು ೩ನೆಯ ಶತಮಾನಕ್ಕೆ ಸೇರಿದ ಮಾಮೂಲನಾರ್ ಎಂಬ ತಮಿಳು ಕವಿ ತನ್ನ ಒಂದು ಪದ್ಯದಲ್ಲಿ ತುಳು ನಾಡನ್ನು ಪ್ರಸ್ತಾಪಿಸಿದ್ದಾನೆ. ತಮಿಳು ನಾಡಿನ ಸಂಗಮ್ ಸಾಹಿತ್ಯದಲ್ಲಿ ಮೌರ್ಯ, ಕೋಶ, ಪಡುಗ, ಮೋಗೂರು ಮುಂತಾದ ಜನರ ಪ್ರದೇಶಗಳ ಪ್ರಸ್ತಾಪವಿದೆ. ಇವನ್ನು ಗುರುತಿಸಲು ಹಲವಾರು ಯತ್ನಗಳು ನಡೆದಿವೆ. ಮೌರ್ಯ ಸಾಮ್ರಾಜ್ಯದ ಪತನಾನಂತರ ದಕ್ಷಿಣ ಭಾರತದ ಪಶ್ಚಿಮ ಕರಾವಳಿಯ ಉತ್ತರ ಭಾಗದ ಕೊಂಕಣ ಪ್ರದೇಶದಲ್ಲಿ ನೆಲಸಿದ್ದ, ಮೌರ್ಯ ಸಂತತಿಗೆ ಸೇರಿದವರೆನ್ನಲಾದ ಕೆಲವರಲ್ಲಿ ಒಬ್ಬ ತುಳು ನಾಡಿನ ಕೋಶರ್ ಜನರ ನೆರವಿನಿಂದ ತಮಿಳು ನಾಡಿನ ಮೋಗೂರ ಮೇಲೆ ದಂಡೆತ್ತಿದ. ಸ್ವಲ್ಪ ಕಾಲದ ಅನಂತರ ಕೋಶರ್ ಹಾಗೂ ಮೌರ್ಯರ ನಡುವೆ ಕಲಹ ಉಂಟಾಗಿ ಕೋಶರನ್ನು ಮೌರ್ಯರ ನನ್ನನ್ ಯುದ್ಧದಲ್ಲಿ ಎದುರಿಸಿದ. ಈ ಕೆಲವು ಅಂಶಗಳನ್ನು ಸಾಹಿತ್ಯಾಧಾರಗಳಿಂದ ಊಹಿಸಲಾಗಿದೆ. ಇವು ಎಷ್ಟರಮಟ್ಟಿಗೆ ಐತಿಹಾಸಿಕ ಎಂದು ಹೇಳಲಾಗದು.
ಟಾಲಮಿಯ ಭೂಗೋಳದಲ್ಲಿ ಬರುವ ಒಲೊಖೊಯಿರಾ ಎಂಬುದು ಆಳ್ವಖೇಡವೆಂದೂ ಇದು ದಕ್ಷಿಣ ಕನ್ನಡ ಜಿಲ್ಲೆಯನ್ನೊಳಗೊಂಡ ಪ್ರದೇಶವೆಂದೂ ರೈಸ್ ಸೂಚಿಸಿದ್ದಾರೆ. ಇದು ಒಪ್ಪಿಗೆಯಾದಲ್ಲಿ ಆಳುಪರು ಆಳಿದ ಈ ಪ್ರದೇಶ ಕ್ರಿ. ಶ. ೨ನೆಯ ಶತಮಾನದಲ್ಲೇ ಪ್ರಸಿದ್ಧವಾಗಿತ್ತೆನ್ನಬೇಕು. ಹಲ್ಮಿಡಿ ಶಾಸನದಲ್ಲಿ ಉಕ್ತನಾದ ಆಳಪಗಣ ಪಶುಪತಿಯು ಆಳುಪನೆಂದು ಹೇಳಲಾಗಿದೆ. ಈತ ಕದಂಬ ಮಯೂರ ಶರ್ಮನ ಸಾಮಂತನಾಗಿದ್ದನೆಂದೂ ಭಟರಿಕುಲಜನೆಂದೂ ಊಹಿಸಲಾಗಿದೆ. ತಾಳಗುಂದ ಶಾಸನವೊಂದರಲ್ಲಿ ಭಟರಿವಂಶದ ಕಾಕುಸ್ಥನೆಂಬಾತ ಕದಂಬ ರಾಜಕುಮಾರಿ ಲಕ್ಷ್ಮಿಯ ಮಗನೆಂದು ಹೇಳಿರುವ ಕಾರಣ, ಈಕೆ ಮೇಲೆ ಹೇಳಿದ ಪಶುಪತಿಯ ಪತ್ನಿ ಎಂದೂ ಇವರಿಗೆ ಜನಿಸಿದಾತನೇ ಕಾಕುಸ್ಥನೆಂದೂ ಕದಂಬ ಕಾಕುಸ್ಥನ ಮಗಳೇ ಲಕ್ಷ್ಮಿ ಎಂದೂ ಭಾವಿಸಲಾಗಿದೆ.
ಬಾದಾಮಿ ಚಾಳುಕ್ಯರ ೧ನೆಯ ಕೀರ್ತಿವರ್ಮ ಆಳುಕ ದೇಶವನ್ನು ಗೆದ್ದ. ಇದು ದಕ್ಷಿಣ ಕನ್ನಡ ಜಿಲ್ಲೆಯ ಅಂದಿನ ಹೆಸರು. ಅಲ್ಲಿ ಆಗ ಆಳುಪರು ಅಧಿಕಾರದಲ್ಲಿದ್ದರು. ಅವರು ಚಾಳುಕ್ಯರ ಸಾಮಂತರಾಗಿರಲು ಒಪ್ಪಿಕೊಂಡರು. ಇಮ್ಮಡಿ ಪುಲಕೇಶಿಯ ದಿಗ್ವಿಜಯ ಯಾತ್ರೆಯಲ್ಲಿ ೧ನೆಯ ಆಳುವರಸ ಭಾಗವಹಿಸಿ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಕಲ್ಲೂರಿನ ವರೆಗೂ ಹೋದ. ಇವನ ರಾಜಧಾನಿ ಮಂಗಲಪುರ - ಈಗಿನ ಮಂಗಳೂರು. ಈತನ ಮಗ ಚಿತ್ರವಾಹನ, ಮಹಾದೇವಿಯ ಮಗ, ಚಾಳುಕ್ಯ ವಿನಯಾದಿತ್ಯನ ಮಗಳಾದ ಕುಂಕುಮ ಮಹಾದೇವಿಯ ಗಂಡ. ಬಾದಾಮಿ ಚಾಳುಕ್ಯರ ಅನಂತರ ರಾಷ್ಟ್ರಕೂಟರು ಆಳತೊಡಗಿದಾಗ ಆಳುವರು ಪಲ್ಲವರ ಸಾಮಂತರಾದರು. ಇಮ್ಮಡಿ ಆಳುವರಸ ಪಟ್ಟಿಯೊಡೆಯನ್ ಎಂದು ಬಿರುದಾಂಕಿತನಾಗಿದ್ದ. ಈ ವೇಳೆಗೆ ಕದಂಬ ಮಂಡಲ ಇವರ ಕೈಯಿಂದ ಜಾರಿತ್ತು. ಪಟ್ಟಿ ಎಂಬುದು ಪೊಂಬುಚ್ಚಪುರಕ್ಕೆ ಇನ್ನೊಂದು ಹೆಸರಾದ ಕಾರಣ ಇವರು ಆ ಪ್ರದೇಶವನ್ನು ಸ್ವಾಧೀನದಲ್ಲಿಟ್ಟುಕೊಂಡಿದ್ದರೆಂದು ತೋರುತ್ತದೆ. ಉದ್ಯಾವರ ಇವನ ರಾಜಧಾನಿಯಾಗಿತ್ತು. ಇವನ ಅನಂತರ ಇವನ ಇಬ್ಬರು ಮಕ್ಕಳ ನಡುವೆ ಕಲಹಗಳಾದವು. ದೇಶದಲ್ಲಿ ಕ್ಷೋಭೆ ಉಂಟಾಯಿತು. ಇವನ ಮೊಮ್ಮಗ, ರಣಸಾಗರನಮಗ ಪೃಥ್ವೀಸಾಗರ ಮುಮ್ಮಡಿ ಶಳುವರಸನ ಅನಂತರ ತುಳು ನಾಡು ಶಾಂತಿಯನ್ನು ಕಂಡಿತು.
ಚೋಳರ ಒಂದನೆಯ ರಾಜರಾಜ ತುಳು ನಾಡನ್ನು ವಶಪಡಿಕೊಂಡ. ಸು. ೧೦೧೦ ರಿಂದ ಈ ಪ್ರದೇಶ ತಮಿಳು ನಾಡಿನ ಹಾಗೂ ಕರ್ನಾಟಕದ ಸಾರ್ವಭೌಮರನ್ನು ಆಕರ್ಷಿಸಿತು. ಆದರೆ ೧ನೆಯ ಬಂಕಿದೇವ, ಪಟ್ಟೆಯೊಡೆಯ ಮುಂತಾದವರು ಈ ಶತ್ರುಗಳನ್ನು ಹಿಮ್ಮೆಟ್ಟಿಸಲು ಹೋರಾಡಿದರು. ಇದಕ್ಕಾಗಿ ಅವರು ಸಾಂತರ ಮನೆತನದವರ ಸಹಾಯ ಕೋರಿದರು. ಅವರೊಂದಿಗೆ ರಕ್ತಸಂಬಂಧಗಳನ್ನೂ ಬೆಳೆಸಿದರು. ೧ನೆಯ ಬಂಕಿದೇವ ಸಾಂತರ ಅಮ್ಮಣನ ಮಗಳಾದ ಬೀರಲ ದೇವಿಯನ್ನು ಲಗ್ನವಾಗಿದ್ದ. ಇವರಿಗೆ ಜನಿಸಿದ ಮಂಕಬ್ಬರಸಿ ಸೋದರ ಮಾವನಾದ ಅಮ್ಮಣನ ಮಗ ತೈಲಪನನ್ನುವರಿಸಿದಳು. ತೈಲಪನಮಗ ವೀರಶಾಂತರಸು ಬಂಕಿದೇವನ ಮಗ 5ನೆಯ ಆಳುವರಸನ ಮಗಳಾದ ಅಚಲ ದೇವಿಯನ್ನು ಲಗ್ನವಾದ. ಹೀಗೆ ಇವರ ಬಾಂಧವ್ಯ ಮುಂದುವರೆಯಿತು. ೧೨೨೦ ರಲ್ಲಿ ಒಂದನೆಯ ಕುಲಶೇಖರನ ಬಳಿಕ ಸಾಂತರ ಮನೆತನದ ತ್ರಿಭುವನ ರಾಜನ ಮಗ ಕುಂದಣ ತುಳು ನಾಡಿನ ಅರಸನಾಗಿ ಹತ್ತು ವರ್ಷಗಳ ಕಾಲ ಆಳಿದ. ಅನಂತರ ಕುಲಶೇಖರನ ಮಗ ವಲ್ಲಭದೇವ ಪಟ್ಟಕ್ಕೆ ಬಂದ. ೧೨೭೫ ರಿಂದ ವೀರಪಾಂಡ್ಯನ ಪತ್ನಿ ಬಲ್ಲಮಹಾದೇವಿ ಸುಮಾರು ಎರಡು ದಶಕಗಳ ಕಾಲ ಆಳಿದಳು. ಈಕೆಯ ಅಳಿಯ ಬಂಕಿದೇವ ರಾಜ್ಯಲೋಭಿ. ಅದುವರೆಗೂ ಇಲ್ಲದಿದ್ದ ಅಳಿಯ ಸಂತಾನ ಪದ್ಧತಿಯನ್ನು ಅನುಸರಿಸಿ ರಾಜ್ಯ ತನ್ನದಾಗಬೇಕೆಂದು ಅವನು ಬಯಸಿದ. ರಾಣಿ ರಾಜ್ಯವನ್ನು ಇಬ್ಬಾಗ ಮಾಡಿದಕ್ಷಿಣಾರ್ಧವನ್ನು ಬಂಕಿದೇವನಿಗಿತ್ತಳು. ಇವನ ರಾಜಧಾನಿ ಮಂಗಳಪುರ. ರಾಣಿ ಬಾರಹಕನ್ಯಾಪುರದಿಂದ (ಬಾರಕೂರು) ಆಳುತ್ತಿದ್ದಳು. ಆಕೆಯ ಬಳಿಕ ಆಕೆಯ ಮಗನಾದ ನಾಗದೇವರಸ ತುಳು ನಾಡಿನ ಉತ್ತರಾರ್ಧದ ಅಧಿಪತಿಯಾದ (೧೩೦೦). ಆದರೆ ಕೆಲವೇ ವರ್ಷಗಳಲ್ಲಿ ಆಳಿಯ ಬಂಕಿದೇವ ಇವನನ್ನು ಹೊರದೂಡಿ ತುಳುನಾಡನ್ನು ಆಳತೊಡಗಿದ.
ಬಂಕಿದೇವನ ಮಗ ಸೋಯಿದೇವನ ಕಾಲದಲ್ಲಿ ಹೊಯ್ಸಳ 3ನೆಯ ಬಲ್ಲಾಳ ತುಳು ನಾಡಿನ ಮೇಲೆ ದಂಡೆತ್ತಿ ಬಂದ. ಶತ್ರುವನ್ನು ಎದುರಿಸಲಾರದ ಅರಸ ಬಹುಶಃ ಅವನ ತಂಗಿಯಾಗಿದ್ದರಿರಬಹುದಾದ ಚಿಕ್ಕಾಯಿ (ಕಿಕ್ಕಾಯಿ) ತಾಯಿಯನ್ನು ಹೊಯ್ಸಳನಿಗೆ ಮದುವೆ ಮಾಡಿಕೊಟ್ಟ. ಸೋಯಿ ದೇವನ ಕಾಲದಲ್ಲಿ ಪುನಃ ಬಾರಹಕನ್ಯಾಪುರ ರಾಜಧಾನಿಯಾಯಿತು. ಇವರು ಹೊಯ್ಸಳರ ಸಾಮಂತರಾದರು. ಬಲ್ಲಾಳನ ಮರಣಾನಂತರ ಚಿಕ್ಕಾಯಿತಾಯಿ ಬಾರಕೂರಿನಿಂದ ಆಳತೊಡಗಿದಳು. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಬಳಿಕ ತೀರಪ್ರದೇಶವಾದ ತುಳು ನಾಡು ಪ್ರಾಮುಖ್ಯ ಪಡೆಯಿತು. ಮುಸ್ಲಿಮರೊಡನೆ ಹೋರಾಡಲು ಹಿಂದೂ ಅರಸರಿಗೆ ಅಶ್ವಗಳ ಆವಶ್ಯಕತೆ ಅತಿಯಾಗಿತ್ತು. ಎಂತಲೇ ಅವರು ತೀರಪ್ರದೇಶಗಳ ಮೇಲೆ ಹತೋಟಿ ಹೊಂದಿದ್ದರು. ತುಳು ನಾಡನ್ನು ಆಗ ಬಾರಕೂರು ಮತ್ತು ಮಂಗಳೂರು ರಾಜ್ಯಗಳೆಂದು ವಿಭಜಿಸಿ ಒಂದೊಂದು ರಾಜ್ಯಕ್ಕೂ ಸಾಮ್ರಾಟರು ತಮ್ಮ ನೇರವಾದ ಆಧೀನದಲ್ಲಿದ್ದ ದಂಡನಾಯಕರನ್ನೂ ಮಹಾಪ್ರಧಾನರನ್ನೂ ಪ್ರಾಂತ್ಯಾಧಿಕಾರಿಗಳನ್ನಾಗಿ ನೇಮಿಸತೊಡಗಿದರು. ಆಗಿಂದಾಗ್ಗೆ ಏಳುತ್ತಿದ್ದ ದಂಗೆಗಳನ್ನು ಅವರು ಅಡಗಿಸುತ್ತಿದ್ದರು. ೧೪ನೆಯ ಶತಮಾನದ ಕೊನೆಯಲ್ಲಿ ಚೌಟರು ದಂಗೆ ಎದ್ದಾಗ ಮಹಾಪ್ರಧಾನ ಮಂಗಪ್ಪರಸ ಅವರನ್ನು ಸದೆಬಡಿದ.
ಆಕಾಲಕ್ಕೆ ಉತ್ತರ ಕನ್ನಡ ಜಿಲ್ಲೆಯ ಹಾಡುವಳ್ಳಿ ನಗಿರೆಗಳಲ್ಲಿ ಸಣ್ಣ ರಾಜ್ಯಗಳು ಸಾಮಂತ ಪದವಿ ಪಡೆದಿದ್ದವು. ಅಂತೆಯೇ ಕಳಸ ಕಾರ್ಕಳದಲ್ಲಿ ಸಹ ತುಂಡರಸರು ತಲೆ ಎತ್ತಿದ್ದರು. ಇವರಲ್ಲಿ ಪರಸ್ಪರಕಲಹಗಳು ಆಗಿಂದಾಗ್ಗೆ ಸಂಭವಿಸುತ್ತಿದ್ದವು. ಇದರಲ್ಲಿ ವಿಜಯನಗರದ ಅಧಿಕಾರಿಗಳು ತಲೆಹಾಕಿ, ಹಲವಾರು ಸಂದರ್ಭಗಳಲ್ಲಿ ಇವರನ್ನು ಹತೋಟಿಯಲ್ಲಿಡುತ್ತಿದ್ದರು. ೧೫೬೫ರ ತಾಳೀಕೋಟೆಯ ಕದನದ ಬಳಿಕ ಪರದೇಶಗಳಿಂದ ಬಂದ ವರ್ತಕರ ರಾಜಕೀಯಕ್ಕೆ ತುಳು ನಾಡು ಬಲಿಯಾಗಿ ತನ್ನ ಪ್ರತ್ಯೇಕತೆಯನ್ನು ಕಳೆದುಕೊಂಡಿತು.
೨೦೦೧ ರ ಜನಗಣತಿಯ ಪ್ರಕಾರ, ಈ ಪ್ರದೇಶದ ಜನಸಂಖ್ಯೆಯು ೩೦೦೫,೮೯೮ ಆಗಿತ್ತು. ತುಳುನಾಡಿನ ಬಹುಸಂಖ್ಯೆಯ ಜನಸಂಖ್ಯೆ ತುಳುವಾಗಳು, ಇತರ ಸ್ಥಳೀಯ ಜನಾಂಗೀಯ ಗುಂಪುಗಳು ಕನ್ನಡಿಗರು, ಕೊಂಕಣಿಗಳು ಮತ್ತು ಬೇರಿಗಳನ್ನೊಳಗೊಂಡಿದೆ.
ಹೆಚ್ಚು ವ್ಯಾಪಕವಾಗಿ ಮಾತನಾಡುವ ಭಾಷೆ ತುಳು ಭಾಷೆಯಾಗಿದ್ದು, ದ್ರಾವಿಡ ಕುಟುಂಬದ ಭಾಷೆಗಳಿಗೆ ಸೇರಿದೆ ಮತ್ತು ಅವರ ಸ್ಥಳೀಯ ಭಾಷಣಕಾರರನ್ನು ತುಳುವಾ ಎಂದು ಉಲ್ಲೇಖಿಸಲಾಗುತ್ತದೆ. ತುಳುನಾಡಿನಲ್ಲಿ ಮಾತನಾಡುವ ಇತರ ಭಾಷೆಗಳು ಕನ್ನಡ, ಮಲಯಾಳಂ, ಕೊಂಕಣಿ, ಕೋರಗಾ ಮತ್ತು ಬೀರಿ. ಶತಮಾನಗಳವರೆಗೆ ಇದನ್ನು ತುಳುವಾಸ್ ಬಳಸುತ್ತಿದ್ದರು, ಮೊದಲು ಇದನ್ನು ಕನ್ನಡ ಲಿಪಿಯಿಂದ ಬದಲಾಯಿಸಲಾಯಿತು. ಹೆಚ್ಚಿನ ಲಿಖಿತದಲ್ಲಿ ಕೆಲವು ಸಂಸ್ಕೃತ ಕೃತಿಗಳು ಮತ್ತು ತುಳು ಶಾಸ್ತ್ರೀಯ ಈ ಲಿಪಿಯಲ್ಲಿ ಇರುತ್ತವೆ.
ಯಕ್ಷಗಾನವು ತುಳುನಾಡಿನಲ್ಲಿ ನಡೆಸುತ್ತಿರುವ ರಾತ್ರಿಯ ನೃತ್ಯ ಮತ್ತು ನಾಟಕ ಪ್ರದರ್ಶನವಾಗಿದೆ. ಪಿಲಿವೇಶಾ ಎಂಬುದು ಈ ಪ್ರದೇಶದಲ್ಲಿನ ಜಾನಪದ ನೃತ್ಯದ ಒಂದು ವಿಶಿಷ್ಟ ರೂಪವಾಗಿದೆ, ಇದು ಯುವ ಮತ್ತು ಹಳೆಯವರನ್ನು ಆಕರ್ಷಿಸುತ್ತದೆ.ಕರಡಿ ವೇಶ (ಕರಡಿ ನೃತ್ಯ) ತುಳು ನಾಡಿನ ದಸರಾ ಸಮಯದಲ್ಲಿ ಪ್ರದರ್ಶನಗೊಂಡ ಒಂದು ಜನಪ್ರಿಯ ನೃತ್ಯ. ಉಡುಪಿ ಪಾಕಪದ್ಧತಿಯು ದಕ್ಷಿಣ ಭಾರತದಾದ್ಯಂತ ಜನಪ್ರಿಯವಾಗಿದೆ, ಮುಖ್ಯವಾಗಿ ಉಡುಪಿ ಉಪಾಹಾರ ಮಂದಿರಗಳು, ಸಸ್ಯಾಹಾರಿಗಳಾಗಿವೆ. ದಕ್ಷಿಣ ಭಾರತದ ಹೊರತಾಗಿ, ಮುಂಬೈ ಮತ್ತು ನವದೆಹಲಿಯಲ್ಲಿ ಪ್ರಸಿದ್ಧ ಉಡುಪಿ ಉಪಾಹಾರ ಮಂದಿರಗಳಿವೆ
ತುಳು ನಾಡು ಭಾರತದ ಪಶ್ಚಿಮ ಕರಾವಳಿಯಲ್ಲಿ ಅತ್ಯಂತ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿದೆ. ತುಳುನಾಡಿನಲ್ಲಿ ನೂರಾರು ವೃತ್ತಿಪರ ಕಾಲೇಜುಗಳಿವೆ.ಭಾರತದಾದ್ಯಂತ ಮತ್ತು ವಿದೇಶಗಳಲ್ಲಿರುವ ದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ಈ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಾರೆ.