ದಕ್ಷಿಣ ಗಂಗೋತ್ರಿ | |
---|---|
ಸಂಶೋಧನಾ ಕೇಂದ್ರ | |
ದೇಶ | ![]() |
Government | |
• Type | ಧೃವ ಸಂಶೋಧನಾ ಸಂಸ್ಥೆ |
• Body | ಅಂಟಾರ್ಟಿಕಾದಲ್ಲಿನ ಭಾರತೀಯ ಕಾರ್ಯಕ್ರಮ |
ದಕ್ಷಿಣ ಗಂಗೋತ್ರಿಯು ಅಂಟಾರ್ಟಿಕಾದಲ್ಲಿನ ಭಾರತೀಯ ಕಾರ್ಯಕ್ರಮದ ಅಡಿಯಲ್ಲಿ ಅಂಟಾರ್ಟಿಕಾದಲ್ಲಿ ಸ್ಥಾಪಿಸಲ್ಪಟ್ಟ ಭಾರತದ ಮೊಟ್ಟಮೊದಲ ವೈಜ್ಞಾನಿಕ ಕಾರ್ಯಸ್ಥಾನ. ಇದು ದಕ್ಷಿಣ ಧ್ರುವದಿಂದ ಸುಮಾರು ೨೫೦೦ ಕಿ.ಮೀ.(೧೬೦೦ ಮೈಲಿ) ದೂರದಲ್ಲಿದೆ.[೧]
೧೯೮೩-೮೪ರಲ್ಲಿ ಭಾರತವು ಅಂಟಾರ್ಟಿಕಾಕ್ಕೆ ಕೈಗೊಂಡ ಮೂರನೆ ಸಂಶೋಧನಾ ಯಾತ್ರೆಯಲ್ಲಿ ಈ ಕಾರ್ಯಸ್ಥಾನವು ಸ್ಥಾಪಿಸಲ್ಪಟ್ಟಿತು. ಮೊದಲನೆ ಬಾರಿಗೆ ಭಾರತದ ತಂಡವೊಂದು ವೈಜ್ಞಾನಿಕ ಕಾರ್ಯಗಳನ್ನು ನಿರ್ವಹಿಸುವ ಉದ್ದೇಶದಿಂದ ಅಂಟಾರ್ಟಿಕಾದಲ್ಲಿ ಚಳಿಗಾಲವನ್ನು ಕಳೆದಿತ್ತು. ೮೧ ಜನರನ್ನೊಳಗೊಂಡ ತಂಡವು ಎಂಟು ವಾರಗಳಲ್ಲಿ ಈ ಕಾರ್ಯಸ್ಥಾನದ ನಿರ್ಮಾಣವನ್ನು ಪೂರ್ಣಗೊಳಿಸಿತು.[೨][೩] ೧೯೮೪ರ ಜನವರಿಯ ಕೊನೆಯಲ್ಲಿ ಭಾರತೀಯ ಸೇನೆಯ ಸಹಾಯದೊಂದಿಗೆ ಕಾರ್ಯಸ್ಥಾನದ ನಿರ್ಮಾಣವು ಪೂರ್ಣಗೊಂಡು ಭಾರತದ ಗಣರಾಜ್ಯೋತ್ಸವವನ್ನು ಸೋವಿಯಟ್ ಮತ್ತು ಪೂರ್ವ ಜರ್ಮನಿಯ ತಂಡಗಳೊಂದಿಗೆ ಆಚರಿಸಲಾಯಿತು. [೧]
ಸಂಪೂರ್ಣ ಸ್ವದೇಶಿ ಉಪಕರಣಗಳಿಂದ ನಿರ್ಮಿತ, ಸೌರ ಶಕ್ತಿ ಚಾಲಿತ ಮಾನವರಹಿತ ಕಾರ್ಯಸ್ಥಾನ ಇದಾಗಿತ್ತು. ಸಂಶೋಧಿತ ಮಾಹಿತಿಯನ್ನು ದಾಖಲಿಸುವ ಸಲುವಾಗಿ ಕಾರ್ಯಸ್ಥಾನವನ್ನು ಸಂಪೂರ್ಣ ಗಣಕೀಕರಿಸಲಾಗಿತ್ತು.[೪] ಶಾಶ್ವತ ಕಾರ್ಯಸ್ಥಾನವನ್ನಾಗಿ ನೆಲೆಗೊಳಿಸುವ ಉದ್ದೇಶದಿಂದ ಇದನ್ನು ಅಣಿಗೊಳಿಸಿದ ಮರಮುಟ್ಟನ್ನು ಬಳಸಿ ಕಟ್ಟಲಾಗಿತ್ತು. ಕಾರ್ಯಸ್ಥಾನವು Inmarsat ಸಂವಹನಾ ಘಟಕ ಹಾಗು ಬಾನುಲಿ ಕೇಂದ್ರವನ್ನೊಳಗೊಂಡಿತ್ತು.[೧]
ಕಾರ್ಯಸ್ಥಾನವನ್ನು ಘಟಕ ‘ಎ’ ಮತ್ತು ಘಟಕ ‘ಬಿ’ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿತ್ತು. ಜೆನರೇಟರ್(ವಿದ್ಯುದುತ್ಪಾದಕ)ಗಳು, ಇಂಧನ ಕೋಠಿ ಮತ್ತು ಕಾರ್ಯಾಗಾರಗಳನ್ನು ಘಟಕ ‘ಎ’ ಒಳಗೊಂಡಿತ್ತು. ಪ್ರಯೋಗಾಲಯಗಳು, ಬಾನುಲಿ ಕೋಣೆಗಳು ಹಾಗು ಇತರೆ ಸೌಲಭ್ಯಗಳು ಘಟಕ ‘ಬಿ’ನಲ್ಲಿ ಇದ್ದವು.[೫]
ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ಸ್ವಯಂಚಾಲಿತ ಹವಾಮಾನ ದಾಖಲಾತಿ ಕೇಂದ್ರವನ್ನೂ ದಕ್ಷಿಣ ಗಂಗೋತ್ರಿಯಲ್ಲಿ ನೆಲೆಗೊಳಿಸಲಾಗಿತ್ತು. ಇದನ್ನು ಹೊರತುಪಡಿಸಿ, ಅಂಟಾರ್ಟಿಕಾದಲ್ಲಿನ ಬಾನುಲಿ ತರಂಗಗಳನ್ನು ತಪಾಸಣೆಮಾಡಲು ಕಾರ್ಯಸ್ಥಾನವನ್ನು ಬಳಸಲಾಗಿತ್ತು. [೪] ಭೌತಿಕ ಸಾಗರಗ್ರಹಣದ ದಾಖಲಾತಿ, ಸುತ್ತಮುತ್ತಲಿನ ಸಿಹಿನೀರ ಸರೋವರಗಳ ಅಧ್ಯಯನ, ಅಲ್ಲಿನ ನೆಲ ಮತ್ತು ನೀರಿನ ಜೈವಿಕ ಗುಣಲಕ್ಷಣಗಳ ದಾಖಲಾತಿ, ನೀರ್ಗಲ್ಲುಗಳ ಹಾಗು ಭೂ-ಅಯಸ್ಕಾಂತತ್ವದ ಅಧ್ಯಯನ ಇವು ದಕ್ಷಿಣ ಗಂಗೋತ್ರಿಯ ಇತರೆ ಕೆಲಸಗಳಾಗಿದ್ದವು.[೪]
೧೯೮೪ರಲ್ಲಿ ಕಾರ್ಯಸ್ಥಾನದಿಂದ ೨ ಕಿ.ಮೀ. ದೂರದಲ್ಲಿ ರನ್ ವೇ ಒಂದನ್ನು ಗುರುತಿಸಲಾಯಿತು. ಇದರೊಂದಿಗೆ ದಕ್ಷಿಣ ಗಂಗೋತ್ರಿಯ ಬಗೆಗಿನ ೨೦೦೦ ಅಂಚೆ ಲಕೋಟೆಗಳನ್ನು ಪರಿಚಯಿಸಲಾಯಿತು. ಮುಂದೆ ಇದೇ ವರ್ಷದಲ್ಲಿ ಹತ್ತಿರದ ಗುಡ್ಡದ ಮೇಲೆ “ಫೀಲ್ಡ್ ಸ್ಟೇಶನ್” ಅನ್ನು ಸ್ಥಾಪಿಸಿ, ಭಾರತದ ಭೂಭಾಗದೊಂದಿಗೆ ನಿರಂತರ ಉಪಗ್ರಹ ಸಂಪರ್ಕಹೊಂದಲು ಸಾಧ್ಯವಾಯಿತು.[೧]
೧೯೮೫ರಲ್ಲಿ ಸ್ವಯಂಚಾಲಿತ ಛಾಯಾಚಿತ್ರ ಕಳಿಸುವ-ಪಡೆಯುವ ಉಪಕರಣ, ಪವನ ಶಕ್ತಿ ಹಾಗು ಸೌರ ಶಕ್ತಿಯನ್ನು ಉತ್ಪಾದಿಸುವ ಸಾಧ್ಯಾಸಾಧ್ಯತೆಗಳನ್ನು ತಿಳಿಯಲು ಗಾಳಿಯ ವೇಗ ಮತ್ತು ಸೂರ್ಯನ ಬೆಳಕಿನ ಸಾಂದ್ರತೆಯನ್ನಳೆಯುವ ಉಪಕರಣಗಳನ್ನು ಸ್ಥಾಪಿಸಲಾಯಿತು. ೨೦೦೦ ಅಂಚೆ ಲಕೋಟೆಗಳನ್ನೂ ಹಿಂಪಡೆಯಲಾಯಿತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದ ಉಗ್ರಾಣವನ್ನು ಹಿಮವಾಹನಗಳನ್ನು ನಿಲ್ಲಿಸಲು ಮತ್ತು ದುರಸ್ತಿ ಕಾರ್ಯಾಗಾರವನ್ನೂ ಸ್ಥಾಪಿಸಲಾಯಿತು. ಭಾರತೀಯ ನೌಕಾಪಡೆಯ ಸಹಾಯದಿಂದ ನಿಸ್ತಂತು ಸಂವಹನಾ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು.[೬]
೧೯೮೮-೮೯ರಲ್ಲಿ ಅಂಟಾರ್ಕ್ಟಿಕದ ಸಂಪೂರ್ಣ ಹಿಮಾವೃತವಾದ ದಕ್ಷಿಣ ಗಂಗೋತ್ರಿಯನ್ನು ತೊರೆದು ಮೈತ್ರಿ ಎಂಬ ಕಾರ್ಯಸ್ಥಾನವನ್ನು ಪ್ರಸ್ತುತ ಜಾಗದಿಂದ ೯೦ ಕಿ.ಮೀ. ದೂರದ ಹಿತಕರ ಹವಾಮಾನ ವಲಯದಲ್ಲಿ ಸ್ಥಾಪಿಸಿ ೧೯೯೦ ಕಾರ್ಯಾರಂಭಿಸಲಾಯಿತು.[೭] ೧೯೯೦ರ ಫೆಬ್ರವರಿ ೨೫ರಂದು ದಕ್ಷಿಣ ಗಂಗೋತ್ರಿಯಲ್ಲಿ ಕಾರ್ಯಸ್ಥಗಿತಗೊಳಿಸಿ.[೮] ಮುಂದೆ ಅದನ್ನು ಸರಬರಾಜು ಕೇಂದ್ರವನ್ನಾಗಿ ಮಾರ್ಪಡಿಸಲಾಯಿತು.[೯][೧೦]
೧೯೯೧ರಲ್ಲಿ ಅಂಟಾರ್ಟಿಕಾಕ್ಕೆ ಬಂದಿಳಿದ, ಹನ್ನೊಂದನೇ ವೈಜ್ಞಾನಿಕ ಯಾತ್ರಾತಂಡವು ದಕ್ಷಿಣ ಗಂಗೋತ್ರಿ, ಮೈತ್ರಿ ಮತ್ತು ಪೇಯರ್ ಗಳಲ್ಲಿ ಸಂವೇದಿಗಳನ್ನು ಬಳಸಿಕೊಂಡು ಏಕಕಾಲಕ್ಕೆ ಭೂ-ಅಯಸ್ಕಾಂತತ್ವದ ಅಧ್ಯಯನ ನಡೆಸಲಾಯಿತು.[೧೧]
೨೦೦೮ನೇ ಇಸವಿಯಲ್ಲಿ ಭಾರತವು ಆರ್ಕಟಿಕ್ ಮಹಾಸಾಗರದಲ್ಲಿ ತನ್ನ ಪ್ರಥಮ ಸಂಶೋಧನಾ ಕೇಂದ್ರ ಹಿಮಾದ್ರಿಯನ್ನು ಸ್ಥಾಪಿಸಿತು.[೧೨]
೨೦೧೨ರಲ್ಲಿ ಭಾರತವು ಅಂಟಾರ್ಟಿಕಾದಲ್ಲಿನ ತನ್ನ ಮೂರನೆ ಸಂಶೋಧನಾ ಕೇಂದ್ರ, ಭಾರತಿಯನ್ನು ಪರೀಕ್ಷಾರ್ಥ ಪ್ರಯೋಗಗಳಿಗಾಗಿ ಕಾರ್ಯಾರಂಭಿಸಿತು.[೭]