Didarganj Yakshi | |
---|---|
![]() Didarganj Yakshi (Chauri Bearer) with fly-whisk (chauri) is held in the right hand whereas the left hand is broken, in Bihar Museum. | |
Material | Polished sandstone |
Height | 5 ft 2 in |
Period/culture | 3rd century BCE or 1st/2nd century CE |
Discovered | 25°34'18"N 85°15'45"E |
Place | Didarganj, Patna, Bihar, India |
Present location | Bihar Museum, India |
ದಿದರ್ಗಂಜ್ ಯಕ್ಷಿ (ಅಥವಾ ದಿದರ್ಗಂಝ್ ಚೌರಿ ಬೇರರ್) ಪ್ರಾಚೀನ ಭಾರತೀಯ ಕಲ್ಲಿನ ಪ್ರತಿಮೆಗಳ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ. ಇದು ಮೌರ್ಯ ಶಿಲ್ಪ ಕಲೆಯನ್ನು ಹೊಂದಿದೆ. ಉತ್ತಮವಾದ ಮೌರ್ಯ ಪೋಲಿಷ್ ಅನ್ನು ಹೊಂದಿರುವುದರಿಂದ ಇದನ್ನು ಕ್ರಿ. ಪೂ. 3 ನೇ ಶತಮಾನದ್ದೆಂದು ಹೇಳಲಾಗುತ್ತದೆ. ಆದರೆ ಈ ಶೈಲಿ ನಂತರದ ಶಿಲ್ಪಗಳಲ್ಲಿಯೂ ಕಂಡುಬರುತ್ತದೆ. ಈಗ ಶಿಲ್ಪದ ಆಕಾರ ಮತ್ತು ಅಲಂಕಾರಗಳ ವಿಶ್ಲೇಷಣೆಯ ಆಧಾರದ ಮೇಲೆ ಇದನ್ನು ಸಾಮಾನ್ಯವಾಗಿ ಸುಮಾರು ಕ್ರಿ. ಶ. 2 ನೇ ಶತಮಾನದ್ದೆಂದು ಸೂಚಿಸಲಾಗುತ್ತದೆ. ಕೆಲವರು ಇದನ್ನು ಕ್ರಿ. ಶ 1 ನೇ ಶತಮಾನದ್ದೆಂದೂ ಸೂಚಿಸುತ್ತಾರೆ.[೧][೨][೩] ಈ ಶಿಲ್ಪದ ಮುಂಭಾಗದ ಮುಚ್ಚಿದ ಕೆತ್ತನೆಯನ್ನು ಕುಶಾನ ಎಂದು ಹೇಳಲಾಗುತ್ತದೆ.[೪]
ಈ ಶಿಲ್ಪವು ಈಗ ಭಾರತದ ಬಿಹಾರದ ಪಾಟ್ನಾದಲ್ಲಿರುವ ಬಿಹಾರ ವಸ್ತುಸಂಗ್ರಹಾಲಯದಲ್ಲಿದೆ. ಇದು ೧೯೧೭ರಲ್ಲಿ ಶಿಲ್ಪ ಕಂಡುಬಂದ ಸ್ಥಳಕ್ಕೆ ಹತ್ತಿರದಲ್ಲಿದೆ.[೫][೬][೭] ಪಾಟಲೀಪುತ್ರ ಎಂದು ಕರೆಯಲಾಗುವ ಪಾಟ್ನಾ ಕೂಡ ಮೌರ್ಯರ ರಾಜಧಾನಿಯಾಗಿತ್ತು.
ಪ್ರತಿಮೆಯು 1 '7 1⁄2 "ಪೀಠದ ಮೇಲೆ 5' 2" ಎತ್ತರವಿದ್ದು, ಇದನ್ನು ಚುನಾರ್ ಮರಳುಗಲ್ಲಿನಿಂದ ತಯಾರಿಸಲಾಗಿದ್ದು, ಕನ್ನಡಿಯಂತಹ ಪಾಲಿಶ್ ನೀಡಲಾಗಿದೆ.[೮] ಈ ಪೂರ್ಣ ಗಾತ್ರದ ನಿಂತಿರುವ ಪ್ರತಿಮೆಯು ಮೌರ್ಯ ಪಾಲಿಶ್ಗೆ ಸಂಬಂಧಿಸಿದ ಉತ್ತಮವಾದ ಉದಾಹರಣೆ. ಇದು ನಯಗೊಳಿಸಿದ ಮೇಲ್ಮೈಯನ್ನು ಹೊಂದಿರುವ ಮರಳುಗಲ್ಲಿನಿಂದ ಮಾಡಿದ ಎತ್ತರದ, ಉತ್ತಮ ಅನುಪಾತದ, ಮುಕ್ತವಾಗಿ ನಿಂತಿರುವ ಶಿಲ್ಪವಾಗಿದೆ. ಮೌರ್ಯ ಪಾಲಿಶ್ ಶೈಲಿಯು ಮೌರ್ಯ ಸಾಮ್ರಾಜ್ಯದ ಪತನದ ನಂತರ ಸ್ವಲ್ಪ ಸಮಯದವರೆಗೆ ಮುಂದುವರೆಯಿತು. ಈ ಶಿಲ್ಪವು ಫ್ಲೈ-ವಿಸ್ಕಿ (ಚೌರಿ)ಯನ್ನು ಬಲಗೈಯಲ್ಲಿ ಹಿಡಿದರೆ ಇದರ ಎಡಗೈ ಮುರಿದಿದೆ. ಕೆಳ ಉಡುಪು ಸ್ವಲ್ಪಮಟ್ಟಿಗೆ ಪಾರದರ್ಶಕ ಪರಿಣಾಮವನ್ನು ಸೃಷ್ಟಿಸುತ್ತದೆ. ಭಾರತೀಯ ಕಲೆಯಲ್ಲಿನ ಅನೇಕ ಆರಂಭಿಕ ದೊಡ್ಡ ಶಿಲ್ಪಗಳಂತೆಯೇ, ಇದು ಪ್ರಮುಖ ದೇವತೆಗಳಲ್ಲಿ ಒಂದನ್ನು ಪ್ರತಿನಿಧಿಸುವುದಿಲ್ಲ. ಬದಲಿಗೆ ಒಂದು ಸಣ್ಣ ಆಧ್ಯಾತ್ಮಿಕ ವ್ಯಕ್ತಿ ಅಥವಾ ದೇವತೆ, ಯಕ್ಷಿಯನ್ನು ಅನ್ನು ಪ್ರತಿನಿಧಿಸುತ್ತದೆ.[೯]
ದೈವತ್ವಕ್ಕೆ ಹತ್ತಿರವಿದ್ದರೂ ದೇವರಲ್ಲದ ಹೆಣ್ಣು ಯಕ್ಷ ಅಥವಾ ಯಕ್ಷಿಣಿ ಯರು ಮತ್ತು ಗಂಡು ಯಕ್ಷರು ಬಹಳ ಸಣ್ಣ ಗಾತ್ರದ ವ್ಯಕ್ತಿಗಳಾಗಿರುತ್ತಾರೆ. ಯಕ್ಷಿಣಿಗಳು ಸಾಮಾನ್ಯವಾಗಿ ನೀರು ಮತ್ತು ಮರಗಳ ಸ್ಥಳೀಯ ಆತ್ಮಗಳಾಗಿರುತ್ತವೆ. ಅವರು ಬೌದ್ಧ, ಹಿಂದೂ ಮತ್ತು ಜೈನ ಧರ್ಮ ದೇವತೆಗಳ ಜೊತೆಗೆ ಅಂಗೀಕರಿಸಲ್ಪಟ್ಟ ಭಾರತೀಯ ಜಾನಪದದಲ್ಲೂ ಬರುವ ವ್ಯಕ್ತಿಗಳು.[೧೦] ಸದ್ಯಕ್ಕೆ ಲಭ್ಯವಾಗಿರುವ ಶಿಲ್ಪಗಳಲ್ಲಿ ಅತ್ಯಂತ ಪ್ರಾಚೀನ ಭಾರತೀಯ ಕಲ್ಲಿನ ಸ್ಮಾರಕ ಶಿಲ್ಪಗಳು ಈ ಯಕ್ಷಿಯರ ಬಗ್ಗೆ ಇರುವುದಾಗಿವೆ. ಇವು ಹೆಚ್ಚು ಗಮನಾರ್ಹವಾದ ದೇವತೆಗಳ ಮೂರ್ತಿಗಳಿಗಿಂತ ಮುಂಚಿನವು.[೧೧] ಸಾಂಚಿ ಮತ್ತು ಭಾರ್ಹುಟ್ನ ಬೌದ್ಧ ಸ್ತೂಪ ತಾಣಗಳು ಈ ರೀತಿ ಅನೇಕ ಯಕ್ಷಿಗಳ ಶಿಲ್ಪಗಳನ್ನು ಹೊಂದಿವೆ. ಭಾರ್ಹುಟ್ನಲ್ಲಿ ಅವುಗಳ ಹೆಸರುಗಳೊಂದಿಗೆ ಶಾಸನಗಳಿವೆ.[೧೨]
ಈ ಆಕೃತಿಯು ಭಾರತೀಯ ಸ್ತ್ರೀ ಧಾರ್ಮಿಕ ಪ್ರತಿಮೆಗಳಲ್ಲಿ "ವಿಸ್ತಾರವಾದ ಶಿರಸ್ತ್ರಾಣ ಮತ್ತು ಆಭರಣಗಳು, ಭಾರೀ ಗೋಳಾಕಾರದ ಸ್ತನಗಳು, ಕಿರಿದಾದ ಸೊಂಟ ಮತ್ತು ಆಕರ್ಷಕ ಭಂಗಿ... ದೈಹಿಕ ಅಂಗರಚನಾಶಾಸ್ತ್ರದ ವಿವರಗಳನ್ನು ಸ್ನಾಯುಗಳೆಂದು ಚಿತ್ರಿಸಲು ಕೇವಲ ಸ್ಥೂಲವಾದ ಪ್ರಯತ್ನಗಳೊಂದಿಗೆ" ನಿರೀಕ್ಷಿಸುವ ಅಂಶಗಳನ್ನು ಹೊಂದಿದೆ.[೧೩] ಮತ್ತೊಬ್ಬ ವಿದ್ವಾಂಸರಿಗೆ ಪ್ರತಿಮೆಯು "ಮೊದಲ ಬಾರಿಗೆ ಅದರ ಸಾವಯವ ಅಭಿವ್ಯಕ್ತಿಯ ನಿರ್ದಿಷ್ಟ ಅರ್ಥದೊಂದಿಗೆ ಪೂರ್ಣ ಮತ್ತು ಐಷಾರಾಮಿ ರೂಪದ ಶಿಲ್ಪಕಲೆಯ ಸಾಕ್ಷಾತ್ಕಾರವನ್ನು ತೋರಿಸುತ್ತದೆ".[೧೪] ಮುಂಭಾಗಕ್ಕೆ ವಿಪರೀತ ಎನ್ನುವಂತೆ "ಆಕೃತಿಯು ಮಾದರಿಯ ಮಾಡೆಲಿಂಗಿನ ಪರಿಪೂರ್ಣ ಸೂಚನೆ ಎಂಬಂತೆ ಹಿಂಭಾಗದಲ್ಲಿ ಚಪ್ಪಟೆಯಾಗಿದೆ".[೧೪]
ದಿದರ್ಗಂಜ್ ಯಕ್ಷಿ ಗಂಗಾ ನದಿಯ ದಡದಲ್ಲಿ ಪಾಟ್ನಾ ನಗರದ ಖಾದಮ್-ಇ-ರಸುಲ್ ಮಸೀದಿಯ ಈಶಾನ್ಯದಲ್ಲಿರುವ ದಿದರ್ಗಂಝ್ ಕದಮ್ ರಸುಲ್ ಎಂಬ ಕುಗ್ರಾಮದಲ್ಲಿ ಸಿಕ್ಕಿತು. ಇದನ್ನು 1917ರ ಅಕ್ಟೋಬರ್ 18ರಂದು ಗ್ರಾಮಸ್ಥರು ಮತ್ತು ಪ್ರಸಿದ್ಧ ಪುರಾತತ್ವಶಾಸ್ತ್ರಜ್ಞ ಮತ್ತು ಇತಿಹಾಸಕಾರರಾದ ಪ್ರೊಫೆಸರ್ ಜೆ. ಎನ್. ಸಮದ್ದಾರ್ ಅವರು ಗುರಿತಿಸಿದರು. ಸಮದ್ದಾರ್ ಅವರು ಪಾಟ್ನಾ ವಸ್ತುಸಂಗ್ರಹಾಲಯ ಸಮಿತಿಯ ಅಂದಿನ ಅಧ್ಯಕ್ಷರು ಮತ್ತು ಕಂದಾಯ ಮಂಡಳಿಯ ಸದಸ್ಯರಾದ ಶ್ರೀ ಇ. ಎಚ್. ಸಿ. ವಾಲ್ಷ್ ಮತ್ತು ಪ್ರಸಿದ್ಧ ಪುರಾತತ್ವ ಶಾಸ್ತ್ರಜ್ಞರಾದ ಡಾ. ಡಿ. ಬಿ. ಸ್ಪೂನರ್ ಅವರ ಸಹಾಯದಿಂದ ಪಾಟ್ನಾದ ಪಾಟ್ನಾ ವಸ್ತು ಸಂಗ್ರಹಾಲಯಕ್ಕೆ ಈ ಪ್ರತಿಮೆಯನ್ನು ಪಡೆದುಕೊಂಡರು.[೧೫]
ವಾಷಿಂಗ್ಟನ್, ಡಿ. ಸಿ.ಯ ಕೇಂದ್ರ ಭಾಗದಲ್ಲಿ ವೈಟ್ ಹೌಸಿಗೆ ಸಮೀಪದಲ್ಲಿರುವ ಸ್ಮಿತ್ಸೋನಿಯನ್ ಇನ್ಸ್ಟಿಟ್ಯೂಷನ್ ಮತ್ತು ನ್ಯಾಷನಲ್ ಗ್ಯಾಲರಿ ಆಫ್ ಆರ್ಟ್ ನಲ್ಲಿ ನಡೆದ 'ದಿ ಫೆಸ್ಟಿವಲ್ ಆಫ್ ಇಂಡಿಯಾ' ಎಂಬ ಪ್ರವಾಸ ಪ್ರದರ್ಶನಕ್ಕೆ ಈ ಮೂರ್ತಿಯನ್ನು ತೆಗೆದುಕೊಂಡು ಹೋಗಲಾಗಿತ್ತು. ಈ ಸಂದರ್ಭದಲ್ಲಿ ಪ್ರತಿಮೆಯ ಮೂಗು ಹಾನಿಗೊಳಗಾಯಿತು. ಇದಾದ ಮೇಲೆ ಅದನ್ನು ಮತ್ತೆ ವಿದೇಶಕ್ಕೆ ಕಳುಹಿಸದಿರಲು ನಿರ್ಧಾರಿಸಲಾಯಿತು.[೧೬]
ಉತ್ಖನನದ ಶತಮಾನೋತ್ಸವವನ್ನು ಆಚರಿಸಲು ಪಾಟ್ನಾದ ರಂಗಭೂಮಿ ನಿರ್ದೇಶಕಿ ಸುನೀತಾ ಭಾರತಿ ಅವರು 2017ರಲ್ಲಿ ಯಕ್ಷಿಣಿ ಎಂಬ ನಾಟಕವನ್ನು ನಿರ್ಮಿಸಿ ನಿರ್ದೇಶಿಸಿದರು. ಇದನ್ನು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್, ಭಾರತ ಸರ್ಕಾರ ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ (ಐಜಿಎನ್ಸಿಎ, ಭಾರತ ಸರ್ಕಾರ, ನವದೆಹಲಿ) ಪ್ರದರ್ಶಿಸಿದವು.