ದುಶ್ಯಲಾ | |
---|---|
Information | |
ಕುಟುಂಬ | ಗಾಂಧಾರಿ ಮತ್ತು ಧೃತರಾಷ್ಟ್ರ (ಪೋಷಕರು) ದುರ್ಯೋಧನ, ದುಶ್ಯಾಸನ, ವಿಕರ್ಣ ಮತ್ತು ೯೭ ಇತರ ಸಹೋದರರು |
ಗಂಡ/ಹೆಂಡತಿ | ಜಯದ್ರಥ |
ಮಕ್ಕಳು | ಸುರಥ(ಮಗ) |
ದುಶ್ಯಲಾ (ಸಂಸ್ಕೃತ: दुश्शला, ರೋಮನೈಸ್ಡ್: Duśśalā) ಹಸ್ತಿನಾಪುರದ ರಾಜಕುಮಾರಿ. ದುಶ್ಯಲಾ ರಾಜ ಧೃತರಾಷ್ಟ್ರ ಮತ್ತು ರಾಣಿ ಗಾಂಧಾರಿಯ ಏಕೈಕ ಪುತ್ರಿ.[೧] ಕೌರವ ಸಹೋದರರು ಜನಿಸಿದ ನಂತರ ದುಶ್ಶಲೆಯು ಜನಿಸಿದಳು. ದುಶ್ಶಲೆಯು ಸಿಂಧುವಿನ ರಾಜ ಜಯದ್ರಥನನ್ನು ಮದುವೆಯಾದಳು.[೨] ದುಶ್ಯಲಾ ಮತ್ತು ಜಯದ್ರಥನಿಗೆ ಸುರಥ ಎಂಬ ಮಗನಿದ್ದನು. ಪಾಂಡವರೆಲ್ಲರೂ ದುಶ್ಶಲೆಯನ್ನು ತಮ್ಮ ಸ್ವಂತ ಸಹೋದರಿಯಂತೆ ನೋಡುತ್ತಿದ್ದರು. ದುಶ್ಶಲೆಯು ಸಹ ಯಾವಾಗಲೂ ಪಾಂಡವರನ್ನು ತನ್ನ ಸ್ವಂತ ಸಹೋದರರಂತೆ ಕಾಣುತ್ತಿದ್ದಳು.[೩]
ದುಶ್ಶಲೆಯು ಭಾರತದ ಮಹಾಕಾವ್ಯದ ಮಹಾಭಾರತದಲ್ಲಿ ದುರ್ಯೋಧನ ಮುಂತಾದ ನೂರು ಮಂದಿ ಕೌರವರ ಒಬ್ಬಳೇ ತಂಗಿ.
ಜಯದ್ರಥನು ದ್ರೌಪದಿಯನ್ನು ಅಪಹರಿಸಿದಾಗ ಪಾಂಡವರು ಅವನನ್ನು ಕೊಲ್ಲಲು ನಿರ್ಧರಿಸಿದರು. ಆದರೆ ಅವನನ್ನು ಕೊಂದರೆ ತಮ್ಮ ತಂಗಿ ದುಶ್ಯಲಾ ವಿಧವೆಯಾಗುತ್ತಾಳೆ ಎಂಬ ಕಾರಣಕ್ಕಾಗಿ ಅವರು ಅವನ ತಲೆಯನ್ನು ಬೋಳಿಸಿ ಶಿಕ್ಷೆಯನ್ನು ನೀಡಿದರು. ಅರ್ಜುನನ ಮಗನಾದ ಅಭಿಮನ್ಯುವಿನ ಸಾವಿಗೆ ಜಯದ್ರಥನು ಸಹ ಕಾರಣವಾದನು. ಅರ್ಜುನನು ಕೃಷ್ಣನ ಸಹಾಯದಿಂದ ಜಯದ್ರಥನ ಶಿರಚ್ಛೇದ ಮಾಡಿದನು.[೪]
ನಂತರ, ಪಾಂಡವರ ಅಶ್ವಮೇಧ ಯಾಗದ ಸಮಯದಲ್ಲಿ ಕುದುರೆಯು ಸಿಂಧು ರಾಜ್ಯಕ್ಕೆ ಬಂದಿತು. ಆ ಸಮಯದಲ್ಲಿ ಸಿಂಧು ರಾಜ್ಯವನ್ನು ದುಶ್ಶಲೆಯ ಮಗ ಸುರಥನು ಆಳುತ್ತಿದ್ದನು. ಅರ್ಜುನನೊಂದಿಗೆ ಹೋರಾಡುವ ನಿರೀಕ್ಷೆಯಲ್ಲಿ ಭಯಭೀತನಾದ ಸುರಥನು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾನೆ. ದುಶ್ಶಲೆಯು ಸುರಥನ ಮಗನೊಡನೆ ಅಳುತ್ತಾ ಯುದ್ಧಭೂಮಿಗೆ ಬಂದಳು. ಅದನ್ನು ನೋಡಿದ ಅರ್ಜುನನು ಸುರಥನ ಮಗನನ್ನು ಸಿಂಧುವಿನ ರಾಜನೆಂದು ಘೋಷಿಸಿದನು.[೫][೬]