ಟೆಂಪ್ಲೇಟು:Infobox ಶಿವಾಲಯ ಧರ್ಮಸ್ಥಳ(ⓘ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ. ಮಂಜುನಾಥಸ್ವಾಮಿ ದೇವಾಲಯವಿರುವ ಈ ಊರು ಬಹಳ ಪ್ರಸಿದ್ಧ. ಶ್ರವಣ ಬೆಳಗೊಳದಂತೆ ಬಾಹುಬಲಿಯ ಪ್ರತಿಮೆ ಕೂಡ ಇರುವುದು. ಸುಮಾರು ಏಳು ನೂರು ವರುಷಗಳ ಇತಿಹಾಸ ಇರುವ ಇದು ನೇತ್ರಾವತಿ ನದಿಯ ದಡದಲ್ಲಿದೆ. ಇಲ್ಲಿಯ ಆರಾಧ್ಯ ದೈವ ಮಂಜುನಾಥ ಸ್ವಾಮಿಯನ್ನು ಮಂಗಳೂರಿನ ಕದ್ರಿ ಎಂಬಲ್ಲಿಂದ ತಂದು ಉಡುಪಿಯ ಯತ್ರಿಗಳಾದ ಶ್ರೀ ವಾದಿರಾಜರು ಪ್ರತಿಷ್ಠಾಪಿಸಿದರು ಎಂದು ಪ್ರತೀತಿ ಇದೆ. ಈ ದೇವಾಲಯವು ದಾನ ಧರ್ಮಕ್ಕೆ ಪ್ರಸಿದ್ಧವಾಗಿ ಮತ್ತು ಭಕ್ತರಿಗೆ ನೈತಿಕ, ಸಾಂಸ್ಕೃತಿಕ, ಧಾರ್ಮಿಕ ಕೇಂದ್ರವಾಗಿ ಯಕ್ಷಗಾನದ ನಾಡಿನ ಚರಿತ್ರೆಯನ್ನೂ ಅಲಂಕರಿಸುತ್ತಿದೆ.
ಇಲ್ಲಿನ ಮತ್ತೊಂದು ಆಕರ್ಷಣೆಯೆಂದರೆ ಬೃಹದಾಕಾರದ ಏಕಶಿಲಾ ಗೊಮ್ಮಟೇಶ್ವರ ವಿಗ್ರಹ. ಇದರ ನಿರ್ಮಾಣ ಕಾರ್ಯ ರಂಜಾಳ ಗೋಪಾಲಕೃಷ್ಣ ಶೆಣೈರವರ ನೇತೃತ್ವದಲ್ಲಿ 1968ರಲ್ಲಿ ಪ್ರಾರಂಭವಾಗಿ 1973ರಲ್ಲಿ ಮುಗಿಯಿತು. ಕಾರ್ಕಳದಿಂದ 75 ಕಿಮೀ ದೂರದ ಇಲ್ಲಿಗೆ ವಿಶೇಷ ವಾಹನ ವ್ಯವಸ್ಥೆಯಲ್ಲಿ ಈ ವಿಗ್ರಹವನ್ನು ತರಿಸಲಾಗಿದೆ. 39' ಎತ್ತರ 14' ದಪ್ಪನಾದ ಈ ವಿಗ್ರಹ ಗ್ರ್ಯಾನೈಟ್ ಶಿಲೆಯಿಂದ ನಿರ್ಮಾಣವಾದುದು. ಇದರ ತೂಕ 175 ಟನ್ನುಗಳು. ಇದು ಭಾರತದ ಮೂರನೆಯ ಅತ್ಯಂತ ದೊಡ್ಡ ವಿಗ್ರಹ. ಧರ್ಮಸ್ಥಳದ ಪ್ರವೇಶದ್ವಾರದ ಬಳಿಯ ಗುಡ್ಡದ ಮೇಲೆ ಇದನ್ನು ನಿಲ್ಲಿಸಲಾಗಿದೆ.
ಧರ್ಮಸ್ಥಳದ ಆಡಳಿತವು ಹಲವಾರು ಸಮಾಜ ಸೇವೆಗಳನ್ನು ನಡೆಸುತ್ತಿದೆ.
ಗ್ರಾಮೀಣಾಭಿವೃದ್ಧಿ ಯೋಜನೆ
ಧರ್ಮಸ್ಥಳದಲ್ಲಿ ಒಂದು ಯೋಜನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (SKDRDP ಎಂದು ಕರೆಯಲಾಗುತ್ತದೆ) ಎಂದು ಕರೆಯಲಾಗುತ್ತದೆ, ಇದು ಗ್ರಾಮೀಣಾಭಿವೃದ್ಧಿಗಾಗಿ ಚಟುವಟಿಕೆಗಳನ್ನು ಆಯೋಜಿಸುತ್ತದೆ. ಇದರ ಉದ್ಯೋಗಿಗಳು ಹಳ್ಳಿಗಳಿಗೆ ಹೋಗಿ ಶ್ರೀ ಶಕ್ತಿ ಸಂಘ ಎಂಬ ಸಣ್ಣ ಗುಂಪುಗಳನ್ನು ರಚಿಸುತ್ತಾರೆ ಮತ್ತು ಗುಂಪು ಸದಸ್ಯರಿಗೆ ವ್ಯವಹಾರಕ್ಕಾಗಿ ಬ್ಯಾಂಕ್ ಸಾಲಗಳನ್ನು ಒದಗಿಸುತ್ತಾರೆ. ಅವರು ಬೇಸಿಗೆಯಲ್ಲಿ ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳುತ್ತಾರೆ.
೧೯೭೨ ರಿಂದ ಇಂದಿನವರೆಗೆ ಸತತವಾಗಿ ಸಮಾಜದಲ್ಲಿ ವರದಕ್ಷಿಣೆ ಪಿಡುಗು ಮತ್ತು ಆಡಂಬರದ ಮದುವೆಯ ಸುಧಾರಣೆಗೋಸ್ಕರ ಸಾಮೂಹಿಕ ವಿವಾಹಗಳನ್ನು ನಡೆಸಲಾಗುತ್ತಿದೆ.[೧]
ಧರ್ಮಸ್ಥಳಕ್ಕೆ ಆಗಮಿಸುವ ಸರಾಸರಿ ೧೦,೦೦೦ ಭಕ್ತಾದಿಗಳಿಗೆ ಉಚಿತ ಭೋಜನದ ವ್ಯವಸ್ಥ ಮಾಡಲಾಗಿದೆ.ಇದಕ್ಕಾಗಿ ಸುಸಜ್ಜಿತ ವ್ಯವಸ್ಥೆಗಳನ್ನು ಒಳಗೊಂಡ ಅನ್ನಪೂರ್ಣ ಎಂಬ ಹೆಸರಿನ ಅನ್ನದಾನ ಛತ್ರವಿದೆ.
ಧರ್ಮಸ್ಥಳ ದೇವಳದ ವತಿಯಿಂದ ಶ್ರೀ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಪ್ರಾಥಮಿಕ ಶಾಲೆಯಿಂದ ಪ್ರಾರಂಬಿಸಿ ಉನ್ನತ ಶಿಕ್ಷಣವನ್ನು ನೀಡುವ ಸುಮಾರು ೫೦ಕ್ಕಿಂತಲೂ ಹೆಚ್ಚು ಸಂಸ್ಥೆಗಳನ್ನು ನಡೆಸಲಾಗುತ್ತಿದೆ.ಈ ಸಂಸ್ಥೆಗಳು ಸಮೀಪದ ಉಜಿರೆಯಲ್ಲಿ ಅಲ್ಲದೆ ಧಾರವಾಡ, ಮೈಸೂರು, ಮಂಗಳೂರು, ಹಾಸನ, ಉಡುಪಿ ಮುಂತಾದೆಡೆ ಹರಡಿಕೊಂಡಿವೆ.
ಬಡ ಹಳ್ಳಿಯ ಜನರ ಅನುಕೂಲಕ್ಕೆ ಸಂಚಾರಿ ಆಸ್ಪತ್ರೆ,ಪ್ರಕೃತಿ ಚಿಕಿತ್ಸೆಯನ್ನು ನೀಡುವ ಶಾಂತಿವನ ನ್ಯಾಚುರೋಪತಿ ಆಸ್ಪತ್ರೆ, ಆಯುರ್ವೇದ ಚಿಕಿತ್ಸೆಗಾಗಿ ಉಡುಪಿ ಮತ್ತು ಹಾಸನದಲ್ಲಿ ಸುಸಜ್ಜಿತ ಆಸ್ಪತ್ರೆಗಳು ಮತ್ತು ಅಲೋಪತಿ ಔಷಧ ಪದ್ಧತಿಯಲ್ಲಿ ಚಿಕಿತ್ಸೆಗಾಗಿ ಧಾರವಾಡ ಮತ್ತು ಉಜಿರೆಗಳಲ್ಲಿ ಆಸ್ಪತ್ರೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.
ಧರ್ಮಸ್ಥಳಕ್ಕೆ ದೇವಸ್ಥಾನ ವತಿಯಿಂದ ಹಳೆ ಕಾರುಗಳ ಸಂಗ್ರಹಾಲಯ ಮತ್ತು ಮಂಜೂಷಾ ವಸ್ತು ಸಂಗ್ರಹಾಲಯವಿದೆ. ಹಳೆಯ ಹಸ್ತ ಪ್ರತಿಗಳು, ಗ್ರಂಥಗಳ ರಕ್ಷಣೆಯನ್ನು ಮಾಡುವ ಗ್ರಂಥಾಲಯವೂ ಇಲ್ಲಿದೆ.
ಧರ್ಮಸ್ಥಳವು ದಕ್ಷಿಣ ಕನ್ನಡದ ಮಲೆನಾಡು ಪ್ರದೇಶದಲ್ಲಿದೆ.ಜಿಲ್ಲಾ ಕೇಂದ್ರವಾದ ಮಂಗಳೂರಿನಿಂದ ೭೫ ಕಿ.ಮೀ.ದೂರದಲ್ಲಿದೆ.ಮಂಗಳೂರಿಗೆ ದೇಶದ ಎಲ್ಲಾ ಭಾಗಗಳಿಂದ ರಸ್ತೆ,ರೈಲು ಮತ್ತು ವಿಮಾನ ಯಾನ ಸೌಕರ್ಯಗಳಿದ್ದು ಧರ್ಮಸ್ಥಳಕ್ಕೆ ಕೂಡಾ ಉತ್ತಮ ಸಾರಿಗೆ ಸೌಕರ್ಯಗಳಿವೆ. ಧರ್ಮಸ್ಥಳವು ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಉಜಿರೆಯಿಂದ ಕೇವಲ ೯ ಕಿ.ಮೀ ದೂರದಲ್ಲಿದೆ.ಬೆಂಗಳೂರಿನಿಂದ ಶಿರಾಡಿ ಘಾಟಿಯಾಗಿ ರಸ್ತೆಯಲ್ಲಿ ಹಾಗೂ ರೈಲಿನಲ್ಲಿ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ ಇಲ್ಲಿಗೆ ಆಗಮಿಸಬಹುದಾಗಿದೆ. ಇಲ್ಲಿಂದ ಸಮೀಪದ ಇತರ ಯಾತ್ರಾಕ್ಷೇತ್ರಗಳಾದ ಸುಬ್ರಹ್ಮಣ್ಯ,ಉಡುಪಿ,ಕೊಲ್ಲೂರು,ಕಟೀಲು ಮುಂತಾದೆಡೆಗೆ ಹೇರಳ ಸಾರಿಗೆ ಸೌಕರ್ಯವಿದೆ.