ಮೇಲಿನಿಂದ ಪ್ರದಕ್ಷಿಣಾಕಾರವಾಗಿ : ಕರ್ನಾಟಕ ವಿಶ್ವವಿದ್ಯಾಲಯದ ಗಡಿಯಾರ ಗೋಪುರ, ಧಾರವಾಡ, SDM ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಮಂಜುಶ್ರೀ ಬ್ಲಾಕ್), SDM ಆಸ್ಪತ್ರೆ ಒಳರೋಗಿಗಳ ಬ್ಲಾಕ್, ಕರ್ನಾಟಕ ಕಾಲೇಜು, ಕರ್ನಾಟಕ ವಿಜ್ಞಾನ ಕೃಷಿ ವಿಶ್ವವಿದ್ಯಾಲಯ, IIIT ಧಾರವಾಡ
ಧಾರವಾಡಕರ್ನಾಟಕ ರಾಜ್ಯದ ಒಂದು ನಗರ; ಧಾರವಾಡ ನಗರ ಧಾರವಾಡ ಜಿಲ್ಲೆಯ ಕೇಂದ್ರಸ್ಥಳ. ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಎರಡನೇ ಅತಿ ದೊಡ್ಡ ನಗರ ಎಂದರೆ ಧಾರವಾಡ ನಗರ, ಹುಬ್ಬಳ್ಳಿ ವಾಣಿಜ್ಯ ನಗರವಾದರೆ ಧಾರವಾಡ ಶೈಕ್ಷಣಿಕ ಜಿಲ್ಲೆ, ಧಾರವಾಡ ಅತಿ ತಂಪು ವಾತಾವರಣ ಹೊಂದಿರುವ ನಗರ, ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಆಕಾಶವಾಣಿ, ಕಾನೂನು ವಿಶ್ವವಿದ್ಯಾಲಯ, ಹೈಕೋರ್ಟ್, ನೈರುತ್ಯ ರೈಲ್ವೆ ಘಟಕ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಐ ಐ ಟಿ,ಮುಂತಾದವುಗಳ ಆಗರ ಧಾರವಾಡ, ಧಾರವಾಡ’ದ ಮೂಲ ರೂಪ ‘ದಾರವಾಡ’. ಬಹಳಷ್ಟು ಚರ್ಚಿತವಾಗಿರುವ ಧಾರವಾಡ ಗ್ರಾಮದ ನಿಪ್ಪತ್ತಿಯು ಸಹ ವ್ಯಕ್ತಿನಾಮದ್ದಾಗಿರುವ ಸಾಧ್ಯತೆ ಹೆಚ್ಚಿದೆ. ಧಾರವಾಡ ಜಿಲ್ಲಾ ಗೆಝೆಟಿಯರ್‍ದಲ್ಲಿ ವಿಜಯನಗರದ ರಾಮರಾಜನ ಕಾಲದ ಧಾರರಾವ್ ಎಂಬುವನು ೧೪೦೩ರಲ್ಲಿ ಕೋಟೆ ಕಟ್ಟಿಸಿದ್ದರ ನಿಮಿತ್ತ ಈ ಊರಿಗೆ ಧಾರವಾಡ ಎಂಬ ಹೆಸರು ಬಂದಿತೆಂದು ತಿಳಿಸುತ್ತದೆ. ಆದರೆ ಕ್ರಿ.ಶ.೧೧೧೭ ಧಾರವಾಡ ಶಾಸನದಲ್ಲಿಯೇ ‘ದಾರವಾಡ’ ಎಂಬ ಹೆಸರು ಬಳಕೆಗೊಂಡಿದೆ
ಇದಕ್ಕೆ ಸಹಾಯಕವಾಗಿ ಕ್ರಿ.ಶ.೧೧೨೫ ನರೇಂದ್ರ ಮತ್ತು ೧೧೪೮ ಧಾರವಾಡ ಶಾಸನಗಳಲ್ಲೂ ಕ್ರಮವಾಗಿ ದಾರವಾಡ ಮತ್ತು ಧಾರವಾಡ ಬಳಕೆಗೊಂಡಿವೆ. ಅಲ್ಲದೆ ೧೪೦೩ರಲ್ಲಿ ರಾಮರಾಯ ವಿಜಯನಗರವನ್ನು ಆಳುತ್ತಿರಲಿಲ್ಲ. ಇವೆಲ್ಲ ಕಾರಣಗಳಿಂದ ಈ ವಾದವನ್ನು ಒಪ್ಪಲಿಕ್ಕಾಗದು.
ಡಾ. ಪಿ.ಬಿ. ದೇಸಾಯಿ ಧಾರವಾಡ ಪದವು ಸಂಸ್ಕೃತದ ‘ದ್ವಾರ’ದಿಂದ ‘ದಾರ’ ಮತ್ತು ‘ವಾಟ’ ದಿಂದ ‘ವಾಡ’ ಬಂದಿದೆ ಎನ್ನುತ್ತಾರೆ. ಡಾ. ಎಂ.ಎಂ. ಕಲಬುರ್ಗಿ ಅವರು ವಾದವನ್ನು ಒಪ್ಪುವುದಿಲ್ಲ. ಸಾಮಾನ್ಯವಾಗಿ ಊರ ಹೆಸರನ್ನು ಇಷ್ಟರಮಟ್ಟಿಗೆ ಸಂಸ್ಕೃತ ಭೂಯಿಷ್ಠವಾಗಿ ಇಡುವುದು ಅಸಂಭವ.
ಅಲ್ಲದೆ ಅಲ್ಲಿ ಸುಂಕವನ್ನು ಆಕರಿಸಲಾಗುತ್ತಿತ್ತು ಎಂಬ ಕಾರಣಕ್ಕೆ ಇದೊಂದೇ ಪ್ರದೇಶದ ಮೂಲಕ ಎರಡು ವಿಶಾಲ ಪ್ರದೇಶಗಳ ಸುಂಕವನ್ನು ಆಕರಿಸಲಾಗುತ್ತಿತ್ತೆಂದಲ್ಲ. ಸುಂಕ ಸಂಗ್ರಹ ಸಾಮಾನ್ಯವಾಗಿ ಅಂದು ಎಲ್ಲಾ ಗ್ರಾಮಗಳಲ್ಲಿ ಕಂಡುಬರುವಂತಹದ್ದಾಗಿ ಸಾಮಾನ್ಯವಾಗಿ ಅಂದು ಎಲ್ಲಾ ಗ್ರಾಮಗಳಲ್ಲಿ ಕಂಡುಬರುವಂತಹದ್ದಾಗಿತ್ತು ಎಂಬ ಡಾ. ಕಲಬುರ್ಗಿ ಅವರ ವಿಚಾರಗಳನ್ನು ಒಪ್ಪುವಂತಹದ್ದೆ.
ಡಾ. ಎಂ.ಎಂ. ಕಲಬುರ್ಗಿ ಅವರು ಧಾರವಾಡ ಪದದ ಪೂರ್ವಪದದ ಅಂತ್ಯ ‘ರ’ ಕಾರವುಳ್ಳ ಈ ಪದವು ಜನಾಂಗಿ ಸೂಚಿಯಾಗಿದೆ ಎಂದು ತಿಳಿಸುತ್ತಾ ದಾಯರ, ದಾರರ, ದಾವರ ಇವುಗಳಲ್ಲಿ ಒಂದರ ಸವೆದ ರೂಪ ‘ದಾರ’ ಎಂದು ತಿಳಿಸುತ್ತಾರೆ. ಹೀಗಾಗಿ ದಾಯರು, ದಾರರು, ದಾವರು ಇವುಗಳಲ್ಲಿ ಒಂದು ಜನಾಂಗದ ನೆಲೆ ಆಗಿರಬಹುದೆನ್ನುತ್ತಾರೆ. ಇನ್ನು ಉತ್ತರ ಪದ ‘ವಾಡ’ ದ್ರಾವಿಡದ ‘ಬಾಡ’ದಿಂದ ಬಂದಿರುವ ಸಾಧ್ಯತೆಯನ್ನು ತಿಳಿಸುತ್ತಾರೆ. ಡಾ. ಎಂ.ಎಂ. ಕಲಬುರ್ಗಿ ಅವರು ತಿಳಿಸುವ ದಾಯರ, ದಾರರ, ದಾವರ ಎನ್ನುವ ಜನಾಂಗಗಳಿದ್ದವು ಎನ್ನುವುದರ ಬಗ್ಗೆ ನಮಗೆ ಯಾವುದೇ ರೀತಿಯ ಕುರುಹುಗಳಿಲ್ಲ. ಹೀಗಾಗಿ ಧಾರವಾಡದ ಮೂಲ ತಿಳಿಸುವ ಅವರ ಜನಾಂಗ ನಿಷ್ಠೆ ಅಭಿಪ್ರಾಯ ಸರಿಯೆನಿಸುವುದಿಲ್ಲ. ಆದ್ದರಿಂದ ಧಾರವಾಡ ಗ್ರಾಮನಾಮದ ನಿಷ್ಪತ್ತಿಯನ್ನು ಜನಾಂಗವಾಚಿಗಿಂತ ವ್ಯಕ್ತಿವಾಚಿಯಲ್ಲಿ ಹುಡಕಲು ಆಧಾರ ಒಂದು ದೊರೆಯುತ್ತದೆ.
‘ಸಾಮಾನ್ಯವಾಗಿ ಇಂದಿಗೂ ಜನಬಳಕೆಯಲ್ಲಿ ಮೇಲೆ, ಮ್ಯಾಲೆ ಎಂಬ ಪದಬಳಕೆಯುಂಟು. ಮೇಲೆ ಗ್ರಾಂಥಿಕವಾದರೆ, ಮ್ಯಾಲೆ ಮೌಖಿಕವಾದದು. ಅದರಂತೆ ದೇರಣ್ಣ> ದ್ಯಾವಣ್ಣ, ದೇಮಪ್ಪ> ದ್ಯಾಮಪ್ಪ ನಾಮಗಳ ಬಳಕೆಯುಂಟು, ಇಂಥ ಯಾವುದೋ ವ್ಯಕ್ತಿಯೋರ್ವನ ಹೆಸರೇ ಧಾರವಾಡ ಗ್ರಾಮಕ್ಕೆ ಆದಿಯಾಗಿರಬೇಕು. ಇದಕ್ಕೆ ಸಹಾಯಕವಾಗಿ ಸುಮಾರು 9ನೇ ಶತಮಾನದ ಧಾರವಾಡದ ಒಂದು ವೀರಗಲ್ಲು ಶಾಸನದಲ್ಲಿ ದೇರಣ್ಣ ಎಂಬ ವ್ಯಕ್ತಿಯ ಉಲ್ಲೇಖ ಕಂಡುಬರುತ್ತದೆ. ಪ್ರಾಯಶಃ ಆತನೇ ವೀರಮರಣ ಹೊಂದಿದ ವ್ಯಕ್ತಿಯಾಗಿರಬೇಕು. ಶಾಸನ ಅಧಿಕ ತ್ರುಟಿತವಿದೆ. ಆ ದೇರಣ್ಣ ಹೆಸರು ಧಾರವಾಡದ ಮೂಲ ನಿಷ್ಪತ್ತಿಯಾಗಿರಬೇಕು. ಅಂದರೆ ಧಾರವಾಡ ಪದದ ನಿರ್ದಿಷ್ಟ ಪದವಾಗಿರಬೇಕು.
ಇನ್ನು ವಾರ್ಗಿಕ ಡಾ. ಎಂ.ಎಂ. ಕಲಬುರ್ಗಿಯವರು ತಿಳಿಸುವಂತೆ ಬಾಡದಿಂದಲೇ ಬಂದಿರಬೇಕು. ದೇರಣ್ಣಬಾಡ> ದ್ಯಾರಣ್ಣಬಾಡ> ದಾರನಬಾಡ> ದಾರವಾಡ> ಧಾರವಾಡ ಆಗಿರುವ ಸಾಧ್ಯತೆ ಹೆಚ್ಚಾಗಿದೆ’. ಭಾಷಾ ಹಿನ್ನೆಲೆಯಲ್ಲಿ ಇದು ಸರಿಯಾದ ಕ್ರಮವಾಗಿದೆ. ಇನ್ನು ಧಾರವಾಡವನ್ನು ಸಂಸ್ಕೃತಿ ನೆಲೆಯಲ್ಲಿ ತುಂತುಪುರಿ, ಧಾರಾನಗರಿ ಎಂದು ಹೆಸರಿಸಿದ್ದುಂಟು. ಮುಸ್ಲಿಂ ಆಡಳಿತ ಕಾಲದಲ್ಲಿ ‘ನಸ್ರತಾಬಾದ್’, ಬ್ರಿಟಿಷರ ಆಡಳಿತದಲ್ಲಿ ‘ಧಾರವಾರ’ ಎಂದು ಕರೆಸಿಕೊಂಡಿತ್ತು ಈಗ ಮತ್ತೆ ಧಾರವಾಡ ಆಗಿದೆ. ಡಾ. ಎಂ.ಎಂ. ಕಲಬುರ್ಗಿ ಅವರು ತಿಳಿಸುವಂತೆ ಗ್ರಾಮನಾಮದ ಪೂರ್ವಪದದ ಅಂತ್ಯದಲ್ಲಿ ಲಾ.ಳ.ಬ್ಬೆ.ಕ್ಕ ಇವು ಬಂದಿದ್ದರೆ ಅವು ಸ್ತ್ರೀವಾಚಿ ಸ್ಥಳನಾಮಗಳಾಗಿರುತ್ತವೆ.
ಪುರಾಣ ಕಾಲದಲ್ಲಿ ಪಾಂಡವರು ಹಾನಗಲ್ ನಲ್ಲಿ ವಾಸ್ತವ್ಯ ಹೂಡಿದ್ದರು ಎಂಬಲ್ಲಿಂದ ಧಾರವಾಡದ ಚರಿತ್ರೆ ಪ್ರಾರಂಭವಾಗುತ್ತದೆ. ತಾಮ್ರ ಶಾಸನಗಳ ಪ್ರಕಾರ ಧಾರವಾಡವು ಬನವಾಸಿ ಯ ಕದಂಬರ ಆಳ್ವಿಕೆ ಒಳಪಟ್ಟಿತ್ತು ಎಂದು ತಿಳಿದು ಬರುತ್ತದೆ.ಅನಂತರದ ಚರಿತ್ರೆಯಂತೆ ಕ್ರಿ.ಶ. ಏಳನೆಯ ಶತಮಾನದಲ್ಲಿ ಚಾಲುಕ್ಯ ರು, ಕ್ರಿ.ಶ. ಒಂಭತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟ ರು, ಹನ್ನೆರಡನೆಯ ಶತಮಾನದಲ್ಲಿ ದೇವಗಿರಿಯ ಯಾದವರು ಆಳ್ವಿಕೆ ಮಾಡಿದರು.೧೨ ನೇ ಶತಮಾನದ ವರೆಗೆ ಧಾರವಾಡ ಜಿಲ್ಲೆ ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿದ್ದಿತು. ನಂತರ ವಿಜಯನಗರ ಸಾಮ್ರಾಜ್ಯದ ಭಾಗವಾಯಿತು.
ವಿಜಯನಗರ ಸಾಮ್ರಾಜ್ಯದ ಪತನದ ನಂತರ ಬಿಜಾಪುರದ ಆದಿಲ್ ಶಾಹಿ ಸುಲ್ತಾನರ ಕೈ ಸೇರಿದ ಮೇಲೆ ಧಾರವಾಡ ಜಿಲ್ಲೆಯ ಪ್ರಾಮುಖ್ಯತೆ ಹೆಚ್ಚಿತು. ಇದಕ್ಕೆ ಮುಖ್ಯ ಕಾರಣ ಆದಿಲ್ ಶಾಹಿ ಸುಲ್ತಾನರು ಇಲ್ಲಿ ಕಟ್ಟಿಸಿದ ಕೋಟೆ -ಮಣ್ಣಕಿಲ್ಲೆ- ಇದಕ್ಕೆ ಆಗಿನ ಕಾಲದಲ್ಲಿ ನಜರತಾಬಾದ್ ಎಂಬ ಹೆಸರಿತ್ತು. ಆದಿಲ್ ಶಾಹಿ ಸುಲ್ತಾನರ ನಂತರ ಧಾರವಾಡ ಜಿಲ್ಲೆ ಸ್ವಲ್ಪ ಕಾಲ ಮುಘಲ್ ಸಾಮ್ರಾಜ್ಯದ ಕೈಯಲ್ಲಿದ್ದು ನಂತರ ಅನುಕ್ರಮವಾಗಿ ಮರಾಠರು, ಹೈದರ್ ಅಲಿ ಮತ್ತು ಟೀಪು ಸುಲ್ತಾನ್ ಹಾಗೂ ಬ್ರಿಟಿಷರ ಕೈ ಸೇರಿತು. ಮುಂಬಯಿ ಸರ್ಕಾರದ ಆಡಳಿತದಲ್ಲಿದ್ದ ಧಾರವಾಡ, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತು.
ಕರ್ನಾಟಕದಲ್ಲಿ ಪ್ರಥಮ ಬಾರಿಗೆ ವಿದ್ಯಾರ್ಥಿ ಸಂಘಟನೆ ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತುಸ್ಥಾಪಿಸಿ, ರಾಜ್ಯಾದಂತ್ಯ ಕರ್ನಾಟಕ ಏಕೀಕರಣ ಹೋರಾಟದ ಪರವಾಗಿ ವಿದ್ಯಾರ್ಥಿಗಳನ್ನು ಸಂಘಟಿಸಿದವರು ಅನ್ನದಾನಯ್ಯ ಪುರಾಣಿಕ. ಹುಬ್ಬಳ್ಳಿಯಲ್ಲಿ ಕರ್ನಾಟಕ ಏಕೀಕರಣದ ಕುರಿತು ಅಂತಿಮ ತೀರ್ಮಾನ ಮಾಡಲು ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಕೆ.ಪಿ.ಸಿ.ಸಿ ಸಭೆ ನೆಡೆಯುವಾಗ, ಇವರು ನೆಡೆಸಿದ ಬೃಹತ್ ವಿದ್ಯಾರ್ಥಿ ಮೆರವಣಿಗೆ, ಕೆಪಿಸಿಸಿ ಸಭೆಯು ಕರ್ನಾಟಕ ಏಕೀಕರಣದ ಪರವಾಗಿ ನಿರ್ಧಾರ ಮಾಡಲು ಪ್ರಮುಖ ಕಾರಣವಾಗಿತ್ತು.
ಕರ್ನಾಟಕಕ್ಕೆ ಧಾರವಾಡ ಜಿಲ್ಲೆಯ ಪ್ರಮುಖ ಕೊಡುಗೆ ಇಲ್ಲಿ ಹುಟ್ಟಿ ಬೆಳೆದಿರುವ ಅನೇಕ ಸಂಗೀತಗಾರರು ಮತ್ತು ಸಾಹಿತಿಗಳು. ಧಾರವಾಡದ ಕೆಲವು ಪ್ರಮುಖ ಗಣ್ಯ ವ್ಯಕ್ತಿಗಳನ್ನು ಕೆಳಗೆ ಕಾಣಿಸಲಾಗಿದೆ. ಧಾರವಾಡದ ಮುರುಘಾ ಮಠ ಮತ್ತು ಲಿಂ.ಮೃತ್ಯುಂಜಯ ಸ್ವಾಮಿಗಳು ಹಾಗೂ ದಿ. ಮಹಾಂತಪ್ಪಗಳು ವಿಶ್ವ ಪ್ರಸಿದ್ಧ. ಇಲ್ಲಿದ್ದು ವಿದ್ಯಾಭ್ಯಾಸ ಮಾಡಿದವರಲ್ಲಿ ಹಲವಾರು ಜನರು ಗಣ್ಯವ್ಯಕ್ತಿಗಳು, ಸಾಹಿತಿಗಳು, ಅಧಿಕಾರಿಗಳು ಆಗಿದ್ದಾರೆ. ಸಂಗೀತ-ಕಲೆ-ಶಿಕ್ಷಣ-ಭಕ್ತಿಯ ನಿರಂತರ ದಾಸೋಹ ಈ ಮಠದಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ನಡೆಯುತ್ತಿರುವುದು ಇಲ್ಲಿ ವಿಶೇಷವಾಗಿದೆ.
ಕನ್ನಡ ಸಾಹಿತ್ಯಕ್ಕೆ ಧಾರವಾಡ ಜಿಲ್ಲೆಯ ಕೊಡುಗೆ ಅಪಾರ. ಕನ್ನಡ ಸಾಹಿತ್ಯದ ಅನೇಕ ದಿಗ್ಗಜರ ಕರ್ಮಭೂಮಿ ಧಾರವಾಡ. ಧಾರವಾಡ ಜಿಲ್ಲೆಯಲ್ಲಿ ಜನಿಸಿದ ಅಥವಾ ನೆಲೆಸಿದ ಮಹತ್ವದ ಸಾಹಿತಿಗಳ ಹೆಸರುಗಳನ್ನು ಇಲ್ಲಿ ಕೊಡಲಾಗುತ್ತಿದೆ:
ಮೂಲತಃ ಬೆಳಗಾವಿ ಜಿಲ್ಲೆಯವರಾದ ಶ್ರೀ ಡಿ.ಸಿ. ಪಾವಟೆಯವರು ಗಣಿತ ಶಾಸ್ತ್ರದಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ Rangler ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಇವರು ಸಲ್ಲಿಸಿದ ಸೇವೆ ಅವಿಸ್ಮರಣೀಯವಾದದ್ದು.
೨೦೧೧ರ ಜನಗಣತಿಯಂತೆ ಜಿಲ್ಲೆಯ ಜನಸಂಖ್ಯೆ ೧೮,೪೭,೦೨೩ ಆಗಿದ್ದು, ಇದರಲ್ಲಿ ಪುರುಷರು ೯,೩೭,೨೦೬ ಮತ್ತು ಮಹಿಳೆಯರು ೯,೦೯,೮೧೭ ಆಗಿದೆ. ಜಿಲ್ಲೆಯ ವಿಸ್ತೀರ್ಣ ೪೨೬೦ ಕಿ.ಮೀ ವಿಸ್ತೀರ್ಣ ಹೊಂದಿದ್ದು ಜನಸಾಂದ್ರತೆ ೪೩೪ ಪ್ರತೀ ಕಿ.ಮೀ,ಗೆ ಇರುತ್ತದೆ.