ನಚಿಕೇತ - ಆರುಣಿಯೆಂಬ ಉದ್ಧಾಲಕ ಮುನಿಯ ಮಗ. ದೃಢಚಿತ್ತವುಳ್ಳ ಹಠವಾದಿ ಹುಡುಗ. ತನ್ನ ತಂದೆ ಯಜ್ಞದಲ್ಲಿ ಮುದಿಗೋವುಗಳನ್ನು ದಕ್ಷಿಣೆಯಾಗಿ ಬ್ರಾಹ್ಮಣರಿಗೆ ಕೊಡುತ್ತಿದ್ದುದು ಈತನಿಗೆ ಸರಿಕಾಣಲಿಲ್ಲ. ತಂದೆಗೆ ಬುದ್ಧಿ ಹೇಳಲಾರ, ಹೇಳದೆ ಇರಲಾರ. ಹೇಗಾದರೂ ತಂದೆಯ ಕೆಲಸವನ್ನು ತಡೆಯಬೇಕು. ಹೇಗೆ? ಅದಕ್ಕೆ ಒಂದು ಉಪಾಯ ಹೂಡಿದ. ತಂದೆಯ ಬಳಿಗೆ ಪದೇ ಪದೇ ಹೋಗಿ ಅಪ್ಪಾ, ನನ್ನನ್ನು ಯಾರಿಗೆ ಕೊಡುವೆ-ಎಂದು ಕೇಳತೊಡಗಿದ. ಸಿಟ್ಟಿಗೆದ್ದ ಆರುಣಿ ನಿನ್ನನ್ನು ಮೃತ್ಯುವಿಗೆ ಕೊಡುವೆ ಎಂದ. ಕೂಡಲೇ ನಚಿಕೇತ ತಂದೆಯ ಮಾತನ್ನು ನಡೆಸಲುದ್ಯುಕ್ತನಾದ. ಮೃತ್ಯುದೇವನಾದ ಯಮನಲ್ಲಿಗೆ ಹೋದ. ಯಮ ಇರಲಿಲ್ಲ. ಆತ ಬರುವವರೆಗೂ ಕಾದಿದ್ದು ತನ್ನ ಅಸಾಧಾರಣ ಪ್ರತಿಭೆಯಿಂದ ಆತನ ಪ್ರಶ್ನೆಗಳಿಗೆಲ್ಲ ಉತ್ತರಿಸಿ ಅವನನ್ನು ಮೆಚ್ಚಿಸಿದ. ಹುಡುಗನ ಬುದ್ಧಿವಂತಿಕೆಗೆ ಮೆಚ್ಚಿ ಯಮ, ಪರೀಕ್ಷಿಸಲೆಂದು ಪ್ರಲೋಭನೆಗಳನ್ನೊಡ್ಡಿದ. ಆದರೆ ದೃಢಚಿತ್ತನಾದ ಈತ ಜಗ್ಗಲಿಲ್ಲ. ಸಂತೃಪ್ತನಾದ ಯಮ ಈತನನ್ನು ಸತ್ಕರಿಸಿದ. ಯಮನಿಂದ ಅಪಾರವಾದ ಜ್ಞಾನಸಂಪತ್ತನ್ನು ಗಳಿಸಿ ಈತ ಮತ್ತೆ ತಂದೆಯನ್ನು ಸೇರಿದ. ಈತನ ಉಪಾಖ್ಯಾನ ಕ್ರಿ.ಪೂ ೫ನೇ ಶತಮಾನದ ಕಠೋಪನಿಷತ್ತಿನಲ್ಲಿ ಪ್ರಸಿದ್ಧವಾಗಿದೆ.
ಋಗ್ವೇದವು ಯಮ ಮತ್ತು ಒಬ್ಬ ಬಾಲಕನ[೧] ಕುರಿತು ಹೇಳುತ್ತದೆ, ಆ ಬಾಲಕನು ನಚಿಕೇತನಾಗಿರಬಹುದು. ತೈತ್ತಿರೀಯ ಬ್ರಾಹ್ಮಣದಲ್ಲಿಯೂ [೨]. ಅವನ ಹೆಸರಿನ ಪ್ರಸ್ತಾಪ ಇದೆ. ನಂತರ ಮಹಾಭಾರತದ ಸಭಾ ಪರ್ವ[೩]ದಲ್ಲಿ ಯುಧಿಷ್ಠಿರನ ಆಸ್ಥಾನದಲ್ಲಿ ಈ ಹೆಸರಿನ ಒಬ್ಬ ಮುನಿಯು ಇದ್ದನೆಂದು ಹೇಳಿದೆ. ಅನುಶಾಸನ ಪರ್ವದಲ್ಲಿಯೂ ಅವನ ಹೆಸರು ಇದೆ. ಆದರೆ ನಚಿಕೇತ ಮತ್ತು ಯಮರ ಸಂವಾದದ ಕತೆಯು ನಂತರದ ಕಠೋಪನಿಷತ್ತಿನಲ್ಲಿ ಇದೆ.