ನಹುಷ

ನಹುಷ - ಚಂದ್ರ ವಂಶರಾಜ. ಊರ್ವಶೀ-ಪುರೂರವರ ಮಗನಾದ ಆಯುರಾಜನಿಂದ ಸ್ವರ್ಭಾನವಿಯಲ್ಲಿ ಹುಟ್ಟಿದವ.

ಹೆಂಡತಿ ವಿರಜೆ. ಮಕ್ಕಳು ಯತಿ, ಆಯತಿ, ಅಯತಿ, ಯಯಾತಿ, ಸಂಯಾತಿ; ಧ್ರುವ ಎಂಬ ಆರು ಮಂದಿ. ನೀರಿನಲ್ಲಿ ಮುಳುಗಿ ತಪಸ್ಸು ಮಾಡುತ್ತಿದ್ದಾಗ ಚ್ಯವನ ಮುನಿ ಒಮ್ಮೆ ಬೆಸ್ತರ ಬಲೆಗೆ ಸಿಕ್ಕಿಕೊಳ್ಳಲು ಈತ ಬಿಡಿಸಿದನೆನ್ನಲಾಗಿದೆ.

ಇಂದ್ರ ಪದವಿ

[ಬದಲಾಯಿಸಿ]

ಒಮ್ಮೆ ಇಂದ್ರ ತನಗೆ ಬಂದ ಬ್ರಹ್ಮಹತ್ಯಾದೋಷದ ಪರಿಹಾರಾರ್ಥ ಹೋಗಿದ್ದಾಗ ಅಧಿಪತಿಯಿಲ್ಲದ ದೇವತೆಗಳು ತಮ್ಮ ಅವಸ್ಥೆಯನ್ನು ಬ್ರಹ್ಮನಲ್ಲಿ ಬಿನ್ನವಿಸಿಕೊಳ್ಳಲಾಗಿ, ನಹುಷನಿಗೆ ಇಂದ್ರ ಪದವಿ ಸಿಕ್ಕಿತು. ಇತ್ತ ಇಂದ್ರ ಅಶ್ವಮೇಧ ಯಾಗ ಮಾಡಿ ತನ್ನ ಪಾಪ ಪರಿಹರಿಸಿಕೊಂಡು ಮತ್ತೆ ಇಂದ್ರಪದವಿಗೆ ಅರ್ಹನೆನಿಸಿದ. ಇದೇ ಸಂದರ್ಭದಲ್ಲಿ ಇಂದ್ರನ ರಾಣಿಯಾದ ಶಚೀದೇವಿಯನ್ನು ಕೂಡಬೇಕೆಂಬ ದುರಭಿಲಾಷೆ ನಹುಷನಿಗೆ ಉಂಟಾಯಿತು. ಶಚಿಯಲ್ಲಿಗೆ ದೂತರನ್ನಟ್ಟಿದಾಗ ಆಕೆ ಅಪೂರ್ವವಾದ ವಾಹನದಲ್ಲಿ ಕುಳಿತು ಬಂದರೆ ಆಗಬಹುದು ಎಂದು ಹೇಳಿ ಕಳುಹಿಸಿದಳು. ಸಪ್ತರ್ಷಿಗಳನ್ನೇ ವಾಹನವಾಗಿಸಿಕೊಂಡು ಪಲ್ಲಕ್ಕಿಯಲ್ಲಿ ಕುಳಿತು ಹೊರಟ ನಹುಷ ಕಾಮಾಂಧನಾಗಿ ಸರ್ಪ, ಸರ್ಪ, ಬೇಗ ನಡೆ, ಬೇಗ ನಡೆ, ಎಂದು ಹೇಳುತ್ತ ವಾಹನ ಹೊತ್ತವರಲ್ಲಿ ಒಬ್ಬರಾದ ಅಗಸ್ತ್ಯರ ತಲೆಗೆ ಕಾಲಿನಿಂದ ಒದ್ದ. ಕೋಪೋದ್ರಿಕ್ತರಾದ ಅಗಸ್ತ್ಯರು ಸರ್ಪೋಭವ ಎಂದು ಶಪಿಸಿದರು.

ಪಾಂಡವರು ವನವಾಸದಲ್ಲಿದ್ದಾಗ ಒಮ್ಮೆ ಬೇಟೆಗೆಂದು ಬಂದ ಭೀಮನನ್ನು ಹೆಬ್ಬಾವಿನ ರೂಪದಲ್ಲಿದ್ದ ನಹುಷ ಬಳಸಿದ. ಬಿಡಿಸಿಕೊಳ್ಳಲು ಭೀಮ ಅಸಮರ್ಥನಾದ; ಹಾವಿನ ಪ್ರಶ್ನೆಗಳಿಗೂ ಉತ್ತರಿಸದಾದ. ತಮ್ಮನನ್ನು ಹುಡುಕುತ್ತ ಬಂದ ಧರ್ಮರಾಯ ಪ್ರಶ್ನೆಗಳಿಗೆಲ್ಲ ಸಮರ್ಪಕವಾಗಿ ಉತ್ತರಿಸಿದುದರಿಂದ ಹಾವು ಭೀಮನನ್ನು ಬಿಟ್ಟಿತಲ್ಲದೆ ಶಾಪದಿಂದ ವಿಮೋಚನೆ ಪಡೆಯಿತು. ಕೂಡಲೇ ಈತ ಸ್ವರ್ಗಕ್ಕೆ ಹೋದ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: