ನ್ಯೂಟನ್ | |
---|---|
![]() ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ | |
ನಿರ್ದೇಶನ | ಅಮಿತ್ ವಿ. ಮಾಸೂರ್ಕರ್ |
ನಿರ್ಮಾಪಕ | ಮನೀಶ್ ಮುಂದ್ರಾ |
ಚಿತ್ರಕಥೆ | ಅಮಿತ್ ವಿ. ಮಾಸೂರ್ಕರ್ ಮಯಾಂಕ್ ತಿವಾರಿ |
ಪಾತ್ರವರ್ಗ | ರಾಜ್‍ಕುಮಾರ್ ರಾವ್ ಪಂಕಜ್ ತ್ರಿಪಾಠಿ ಅಂಜಲಿ ಪಾಟೀಲ್ ರಘುಬೀರ್ ಯಾದವ್ |
ಸಂಗೀತ | ಬೆನೆಡಿಕ್ಟ್ ಟೇಲರ್ ನರೇನ್ ಚಂದಾವರ್ಕರ್ (ಸಂಗೀತ ಮತ್ತು ಹಿನ್ನೆಲೆ ಸಂಗೀತ) ರಚಿತಾ ಅರೋರಾ ಪ್ರಚಾರ ಗೀತೆ |
ಛಾಯಾಗ್ರಹಣ | ಸ್ವಪ್ನಿಲ್ ಎಸ್. ಸೋನಾವನೆ |
ಸಂಕಲನ | ಶ್ವೇತಾ ವೆಂಕಟ್ ಮ್ಯಾಥ್ಯೂ |
ಸ್ಟುಡಿಯೋ | ದೃಶ್ಯಂ ಫ಼ಿಲ್ಮ್ಸ್ |
ವಿತರಕರು | ಈರಾಸ್ ಇಂಟರ್‌ನ್ಯಾಷನಲ್ ಕಲರ್ ಯೆಲೊ ಪ್ರೊಡಕ್ಷನ್ಸ್ |
ಬಿಡುಗಡೆಯಾಗಿದ್ದು |
|
ಅವಧಿ | 106 ನಿಮಿಷಗಳು |
ದೇಶ | ಭಾರತ |
ಭಾಷೆ | ಹಿಂದಿ ಗೋಂಡಿ |
ಬಂಡವಾಳ | ₹9 ಕೋಟಿ[೧] |
ಬಾಕ್ಸ್ ಆಫೀಸ್ | ₹81.65 ಕೋಟಿ[೨] |
ನ್ಯೂಟನ್ ೨೦೧೭ರ ಒಂದು ಕರಾಳ ವಿನೋದಮಯ ನಾಟಕೀಯ ಚಲನಚಿತ್ರವಾಗಿದೆ. ಅಮಿತ್ ಮಾಸೂರ್ಕರ್ ಇದರ ಸಹ-ಬರಹಗಾರರು ಮತ್ತು ನಿರ್ದೇಶಕರಾಗಿದ್ದಾರೆ.[೩] ಚಿತ್ರದಲ್ಲಿ ರಾಜ್‍ಕುಮಾರ್ ರಾವ್, ಪಂಕಜ್ ತ್ರಿಪಾಠಿ, ಅಂಜಲಿ ಪಾಟೀಲ್ ಮತ್ತು ರಘುಬೀರ್ ಯಾದವ್ ನಟಿಸಿದ್ದಾರೆ. ಚಿತ್ರವನ್ನು ದೃಶ್ಯಂ ಫ಼ಿಲ್ಮ್ಸ್ ಅಡಿಯಲ್ಲಿ ಮನೀಶ್ ಮುಂಡ್ರಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವು ಅಮಿತ್ ಮಾಸೂರ್ಕರ್ ನಿರ್ದೇಶನದ ಎರಡನೇ ಚಿತ್ರವಾಗಿದೆ.[೪]
ನ್ಯೂಟನ್ ಚಿತ್ರದ ವೈಶ್ವಿಕ ಪ್ರಥಮ ಪ್ರದರ್ಶನ ೬೭ನೇ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಾಯಿತು. ಈ ಚಿತ್ರವು ಸಾರ್ವತ್ರಿಕ ಮೆಚ್ಚುಗೆಯನ್ನು ಗಳಿಸಿತು. ೬೩ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಈ ಚಿತ್ರವು ವಿಮರ್ಶಕರ ಅತ್ಯುತ್ತಮ ಚಲನಚಿತ್ರ, ರಾವ್‍ರಿಗೆ ವಿಮರ್ಶಕರ ಅತ್ಯುತ್ತಮ ನಟ ಮತ್ತು ತ್ರಿಪಾಠಿಯವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸೇರಿದಂತೆ ಎಂಟು ನಾಮನಿರ್ದೇಶನಗಳನ್ನು ಪಡೆಯಿತು ಮತ್ತು ವಿಮರ್ಶಕರ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್ ಅತ್ಯುತ್ತಮ ಕಥೆ ಪ್ರಶಸ್ತಿಯನ್ನು ಗೆದ್ದಿತು. ನ್ಯೂಟನ್ ಹಿಂದಿ ಭಾಷೆಯ ಅತ್ಯುತ್ತಮ ಚಲನಚಿತ್ರ ರಾಷ್ಟ್ರಪ್ರಶಸ್ತಿಯನ್ನೂ ಗೆದ್ದಿತು. ೬೫ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪಂಕಜ್ ತ್ರಿಪಾಠಿ ವಿಶೇಷ ಉಲ್ಲೇಖವನ್ನು ಪಡೆದರು.[೫] ೯೦ನೇ ಅಕ್ಯಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ಈ ಚಿತ್ರವನ್ನು ಅತ್ಯುತ್ತಮ ವಿದೇಶಿ ಭಾಷೆಯ ಚಲನಚಿತ್ರ ವರ್ಗಕ್ಕೆ ಭಾರತದ ಸ್ಪರ್ಧಿಯಾಗಿ ಆಯ್ಕೆಮಾಡಲಾಯಿತು.[೬][೭]
ಮೀಸಲಿನಲ್ಲಿರುವ ಹೊಸ ಸರ್ಕಾರಿ ಗುಮಾಸ್ತನಾದ ನೂತನ್ (ನ್ಯೂಟನ್) ಕುಮಾರ್‌ನನ್ನು (ರಾಜ್‍ಕುಮಾರ್ ರಾವ್) ಚುನಾವಣಾ ಕರ್ತವ್ಯದ ಮೇಲೆ ಭಾರತದ ಛತ್ತೀಸ್‌ಘಡ್‍ನ ಬಂಡಾಯ ಪೀಡಿತ ಕಾಡುಗಳಲ್ಲಿ ನಕ್ಸಲರ ಹಿಡಿತದಲ್ಲಿರುವ ಒಂದು ಪಟ್ಟಣಕ್ಕೆ ಕಳಿಸಲಾಗುತ್ತದೆ (ಅಲ್ಲಿನ ಮುಖ್ಯ ಕರ್ತವ್ಯಾಧಿಕಾರಿಗಳಲ್ಲಿ ಒಬ್ಬನು ಹೃದಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆಂದು ಪತ್ತೆಯಾಗುತ್ತದೆ). ಸಹಾಯಕ ದಳಪತಿ ಆತ್ಮಾ ಸಿಂಗ್ (ಪಂಕಜ್ ತ್ರಿಪಾಠಿ) ನೇತೃತ್ವದ ಯುದ್ಧ-ಶ್ರಾಂತ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಭದ್ರತಾ ಪಡೆಗಳ ನಿರಾಸಕ್ತಿ ಮತ್ತು ಕಮ್ಯೂನಿಸ್ಟ್ ದಂಗೆಕೋರರ ಗೆರಿಲಾ ದಾಳಿಯ ಉಂಟಾಗಬಹುದಾದ ಭಯವನ್ನು ಎದುರಿಸುತ್ತಾ, ಯಶಸ್ವಿಯಾಗುವುದು ಸಾಧ್ಯವಿಲ್ಲದಿದ್ದರೂ ಅವನು ತನ್ನ ಕೈಲಾದಷ್ಟು ಉತ್ತಮವಾಗಿ ಸ್ವತಂತ್ರ ಹಾಗೂ ನ್ಯಾಯವಾದ ಮತದಾನವನ್ನು ನಡೆಸಲು ಪ್ರಯತ್ನಿಸುತ್ತಾನೆ. ಮತದಾರರು ಚುನಾವಣೆಗೆ ಬರದಿದ್ದಾಗ ಅವನಿಗೆ ನಿರಾಶೆಯಾಗುತ್ತದೆ. ನಂತರ ಮತದಾನ ಕೇಂದ್ರಕ್ಕೆ ಒಬ್ಬ ವಿದೇಶಿ ವರದಿಗಾರನು ಬಂದಾಗ, ಸಿಆರ್‌ಪಿಎಫ್‍ನವರು ಕ್ಷೇತ್ರದ ಗ್ರಾಮಸ್ಥರು ತಮ್ಮ ಮತಗಳನ್ನು ಚಲಾಯಿಸಲು ಬರುವಂತೆ ಒತ್ತಾಯಿಸುತ್ತಾರೆ. ಅವರಲ್ಲಿ ಒಬ್ಬನು ಮತಗಟ್ಟೆಯನ್ನು ಪ್ರವೇಶಿಸಿದಾಗ, ಮತದಾನ ಯಂತ್ರ ಮತ್ತು ಅದರ ಕಾರ್ಯದಿಂದ ಅವನು ದಿಗ್ಭ್ರಮೆಗೊಳ್ಳುತ್ತಾನೆ.
ಅವರೊಂದಿಗೆ ಮಾತನಾಡಿದ ಬಳಿಕ, ಚುನಾವಣೆ ಯಾವುದರ ಬಗ್ಗೆ ಎಂದು ಅವರಿಗೆ ಯಾವುದೇ ಕಲ್ಪನೆಯಿಲ್ಲ ಎಂದು ನ್ಯೂಟನ್‍ಗೆ ಬೇಗನೇ ಅರಿವಾಗುತ್ತದೆ. ಕೆಲವರು ಇದರಿಂದ ಹಣವನ್ನು ಗಳಿಸಬಹುದೆಂದು ಭಾವಿಸಿರುತ್ತಾರೆ. ಇತರರು ತಮ್ಮ ಕೆಲಸಕ್ಕೆ ಸಾಕಷ್ಟು ಗಳಿಕೆಯಾಗುವ ಬಗ್ಗೆ ಹತಾಶವಾಗಿ ಕೇಳಿಕೊಳ್ಳುತ್ತಾರೆ. ಅವನು ಹತಾಶೆಯಿಂದ ಅವರಿಗೆ ಕಲಿಸಲು ಪ್ರಯತ್ನಿಸುತ್ತಾನೆ ಆದರೆ ಯಾವುದೇ ಪ್ರಯೋಜನವಾಗುವುದಿಲ್ಲ. ನೇತೃತ್ವ ವಹಿಸಿಕೊಂಡು ನಿರಾಶೆಗೊಂಡ ಆತ್ಮಾ ಸಿಂಗ್ ನ್ಯೂಟನ್‍ನನ್ನು ಬದಿಗೆ ತಳ್ಳಿ, ಈ ಅಧಿಕಾರಿಗಳು ಅವರ ಮತಕ್ಕಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟಿದ್ದಾರೆ, ಮತ್ತು ಅವರು ಅವರನ್ನು ದೂರ ಕಳಿಸಬಾರದು ಎಂದು ಹೇಳಿ ಗ್ರಾಮಸ್ಥರನ್ನು ಅಪಮಾನಿಸುತ್ತಾನೆ. ಮತಯಂತ್ರವು ಒಂದು ಆಟಿಕೆ ಎಂದು ಅವನು ಅವರಿಗೆ ಹೇಳುತ್ತಾನೆ; ಆನೆಗಳು, ಸೈಕಲ್‍ಗಳು ಇತ್ಯಾದಿಗಳ ಸಂಕೇತಗಳಿರುತ್ತವೆ ಮತ್ತು ಅವರು ತಾವು ಇಷ್ಟಪಡುವ ಯಾವುದೇ ಸಂಕೇತವನ್ನು ಒತ್ತಬಹುದು (ಆ ಸಂಕೇತಗಳು ಅನುಕ್ರಮವಾದ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುತ್ತವೆ ಎಂಬ ವಾಸ್ತವಾಂಶದ ಬಗ್ಗೆ ಅವರನ್ನು ಅಶಿಕ್ಷಿತರನ್ನಾಗಿ ಬಿಡುತ್ತಾನೆ). ಹೀಗೆ, ಅವರು ಎಂದೂ ಕೇಳಿರದ ರಾಜಕಾರಣಿಗಳ ಬದಲು ತಮ್ಮ ಅಚ್ಚುಮೆಚ್ಚಿನ ಸಂಕೇತಕ್ಕೆ ಮತ ಚಲಾಯಿಸುತ್ತಿರುವಾಗ ವಿದೇಶಿ ವರದಿಗಾರನಿಗೆ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಒಳ್ಳೆ ಸುದ್ದಿ ವರದಿ ಸಿಗುತ್ತದೆ.
ನ್ಯೂಟನ್ ನಿಗದಿತ ಸಮಯದವರೆಗೆ ಮತಗಟ್ಟೆಯಲ್ಲಿ ಕೂಡಲು ಬಯಸಿರುತ್ತಾನೆ, ಆದರೆ ಒಂದು ನಕ್ಸಲ್ ಹೊಂಚುದಾಳಿಯ ಕಾರಣ ಬಲವಂತದಿಂದ ಓಡಿಹೋಗಬೇಕಾಗುತ್ತದೆ. ಇದನ್ನು ಸಿಆರ್‌ಪಿಎಫ್‌ನವರು ಏರ್ಪಡಿಸಿದರು ಎಂದು ನಂತರ ಅವನಿಗೆ ಅರಿವಾಗುತ್ತದೆ. ಅಂತಹ ಜ್ಞಾನ ತಿಳಿದ ಮೇಲೆ, ಅವನು ತನ್ನ ಬೆಂಗಾವಲು ತಂಡವನ್ನು ಮೀರಿಸಿ ವಾಪಸು ಮತಗಟ್ಟೆಗೆ ಓಡಿಹೋಗಲು ಪ್ರಯತ್ನಿಸುತ್ತಾನೆ. ಆದರೆ ಎರಡೂ ಕಡೆಯಿಂದ ಸಿಕ್ಕಿಬಿದ್ದು ವಾಪಸು ಸುರಕ್ಷಿತತೆ ಕಡೆಗೆ ಕರೆದೊಯ್ಯಲ್ಪಡುತ್ತಾನೆ. ವಾಪಸು ಹೋಗುವಾಗ ನ್ಯೂಟನ್ ಕಾಡಿನ ಆಳದಿಂದ ಹಠಾತ್ತನೆ ಕಾಣಿಸಿಕೊಂಡ ನಾಲ್ಕು ಗ್ರಾಮಸ್ಥರ ಮತಗಳನ್ನು ಸಂಗ್ರಹಿಸಲು ನಿರ್ಧರಿಸುತ್ತಾನೆ. ಅವರು ಹಾಗೆ ಮಾಡಲು ಬಿಡಲು ಆತ್ಮಾ ಸಿಂಗ್‍ಗೆ ಇಷ್ಟವಿರುವುದಿಲ್ಲ. ಇಲ್ಲಿ ಚಲನಚಿತ್ರವು ಯಾವುದೇ ಪೈಪೋಟಿಯಿಲ್ಲದ, ತಮ್ಮ ಕರ್ತವ್ಯದ ಬಗ್ಗೆ ಆಸಕ್ತಿಯುಳ್ಳ, ಆದರೆ ಸಂಪೂರ್ಣ ವ್ಯತ್ಯಾಸವುಳ್ಳ ಇಬ್ಬರು ಪುರುಷರ ಮೂಲಕ, ಯುದ್ಧಗ್ರಸ್ತ ಪ್ರದೇಶಗಳಲ್ಲಿನ ಪರಿಸ್ಥಿತಿಯ ಒಗಟನ್ನು ಪ್ರೇಕ್ಷಕರಿಗೆ ನೀಡಿ ಸತ್ಯದ ಒಗಟನ್ನು ಬಹಿರಂಗಪಡಿಸುತ್ತದೆ. ತನ್ನ ಕರ್ತವ್ಯವನ್ನು ಗಂಭೀರವಾಗಿ ತೆಗೆದುಕೊಂಡು, ನ್ಯೂಟನ್ ಆತ್ಮಾ ಸಿಂಗ್‍ನ ಬಂದೂಕನ್ನು ಕದ್ದು ಅಧಿಕಾರಿಗೆ ಅದನ್ನು ಗುರಿಯಿಟ್ಟು ಹೆದರಿಸಿ ಗ್ರಾಮಸ್ಥರು ಮತ ಚಲಾಯಿಸುವಂತೆ ಮಾಡುತ್ತಾನೆ. ತಾನು ಸರ್ಕಾರಿ ಪಡೆಗಳು ಕೇವಲ ೬ ತಿಂಗಳ ಹಿಂದೆ ಭದ್ರಪಡಿಸಿದ್ದ ಪ್ರದೇಶದಲ್ಲಿ ಮತದಾನವನ್ನು ನಡೆಸುವುದು ಬಯಸಿರಲಿಲ್ಲ, ಮತ್ತು ಅಲ್ಲಿ ಜನರಿಗಿಂತ ಹೆಚ್ಚು ನೆಲಸಿಡಿಗಳಿವೆ ಎಂದು ಸಿಂಗ್ ಹತಾಶೆಯಿಂದ ಹೇಳುತ್ತಾನೆ. ಅವನು ಯಾವುದೇ ಹೆಚ್ಚಿನ ಪಡೆಗಳನ್ನು ಕಳೆದುಕೊಳ್ಳಲು ಬಯಸುವುದಿಲ್ಲ, ವಿಶೇಷವಾಗಿ ತಾವು ೨ ವರ್ಷಗಳಿಂದ ಬೇಡುತ್ತಿರುವ ರಾತ್ರಿನೋಟದ ಕನ್ನಡಕಗಳನ್ನು ಕೂಡ ಪೂರೈಸಲು ಸರ್ಕಾರಕ್ಕೆ ಆಗದಿದ್ದಾಗ, ಎಂದು ಅವನು ನ್ಯೂಟನ್‍ಗೆ ಹೇಳುತ್ತಾನೆ. ಮತದಾನದ ನಂತರವೂ ತನ್ನ ಅಧಿಕೃತ ಕರ್ತವ್ಯದ ಉಳಿದ ಎರಡು ನಿಮಿಷಗಳವರೆಗೆ (೩ ಗಂಟೆವರೆಗೆ) ನ್ಯೂಟನ್ ಅವನಿಗೆ ಬಂದೂಕು ಗುರಿಯಿಟ್ಟು ಹಿಡಿದಿಟ್ಟಿರುತ್ತಾನೆ. ನಂತರ ಸಿಆರ್‌ಪಿಎಫ್ ಪಡೆಗಳು ಅವನಿಗೆ ನಿರಾಶೆಯಿಂದ ಹೊಡೆಯುತ್ತಾರೆ.
ಚಲನಚಿತ್ರವು ಆರು ತಿಂಗಳುಗಳ ನಂತರದ ಪ್ರದೇಶದ ದೃಶ್ಯದೊಂದಿಗೆ ಮುಕ್ತಾಯವಾಗುತ್ತದೆ. ಗಣಿಗಾರಿಕೆ ಚಟುವಟಿಕೆ ಮುಂದುವರಿದಿರುವುದನ್ನು ತೋರಿಸಲಾಗುತ್ತದೆ. ಆತ್ಮಾ ಸಿಂಗ್ ನಾಗರೀಕರ ಉಡುಪಿನಲ್ಲಿ ತನ್ನ ಹೆಂಡತಿ ಮತ್ತು ಮಗಳೊಂದಿಗೆ ರಜಾದಿನಗಳಲ್ಲಿ ಶಾಪಿಂಗ್ ಮಾಡುತ್ತಿರುವುದನ್ನು ತೋರಿಸಲಾಗುತ್ತದೆ. ಅವನೂ ಮನುಷ್ಯನೇ ಮತ್ತು ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ಸ್ಥಿತಿಗಳು ಅವನನ್ನು ನಿರುದ್ವಿಗ್ನ ಹಾಗೂ ದೋಷದರ್ಶಿ ವ್ಯಕ್ತಿಯನ್ನಾಗಿ ಮಾಡಿದವು ಎಂದು ಇದು ಸೂಚಿಸುತ್ತದೆ. ನ್ಯೂಟನ್ ತನ್ನ ಕಚೇರಿಯಲ್ಲಿ ಹೊಡೆತದಿಂದ ಆದ ಗಾಯಕ್ಕೆ ಕುತ್ತಿಗೆ ಕಟ್ಟನ್ನು ಧರಿಸಿರುವುದನ್ನು ಆದರೆ ಖುಶಿಯಾಗಿರುವುದನ್ನು ಮತ್ತು ತನ್ನ ಹಳೆ ಅಭ್ಯಾಸಗಳನ್ನು ಮುಂದುವರಿಸಿರುವುದನ್ನು ತೋರಿಸಲಾಗುತ್ತದೆ. ಸ್ಥಳೀಯ ಚುನಾವಣಾಧಿಕಾರಿ ಮಾಲ್ಕೊ (ಅಂಜಲಿ ಪಾಟೀಲ್) ಅವನಿಗೆ ಭೇಟಿನೀಡಿ ತನಗೆ ಘಟನೆಗಳ ಅರಿವಿಲ್ಲದ ಕಾರಣದಿಂದ ತಾನು ಹೊರಟ ಮೇಲೆ ಏನಾಯಿತೆಂದು ಕೇಳುತ್ತಾಳೆ. ನ್ಯೂಟನ್ ತಾನು ಎಲ್ಲವನ್ನೂ ಚಹಾ ಕುಡಿಯುವಾಗ, ಆದರೆ ಐದು ನಿಮಿಷಗಳ ನಂತರ ಅಂದರೆ ತನ್ನ ನಿಗದಿತ ಊಟದ ವಿರಾಮ ಆರಂಭಗೊಳ್ಳುವಾಗ ಮಾತ್ರ ಹೇಳುವೆನು ಎಂದು ಹೇಳುತ್ತಾನೆ.
ಹಾಡುಗಳ ಪಟ್ಟಿ | |||||
---|---|---|---|---|---|
ಸಂ. | ಹಾಡು | ಸಾಹಿತ್ಯ | संगीतकार | ಗಾಯಕ(ರು) | ಸಮಯ |
1. | "ಪಂಛಿ ಉಡ್ ಗಯಾ" | ವರುಣ್ ಗ್ರೋವರ್ | ನರೇನ್ ಚಂದಾವರ್ಕರ್ ಮತ್ತು ಬೆನೆಡಿಕ್ಟ್ ಟೇಲರ್ | ಮೋಹನ್ ಕಣ್ಣನ್ | 4:16 |
2. | "ಚಲ್ ತೂ ಅಪ್ನಾ ಕಾಮ್ ಕರ್" | ಇರ್ಷಾದ್ ಕಾಮಿಲ್ | ರಚಿತಾ ಅರೋರಾ | ಅಮಿತ್ ತ್ರಿವೇದಿ | 3:51 |
3. | "ಚಲ್ ತೂ ಅಪ್ನಾ ಕಾಮ್ ಕರ್" (ಆವೃತ್ತಿ 2) | ಇರ್ಷಾದ್ ಕಾಮಿಲ್ | ರಚಿತಾ ಅರೋರಾ | ರಘುಬೀರ್ ಯಾದವ್ | 3:34 |
ನ್ಯೂಟನ್ ಸಾರ್ವತ್ರಿಕ ವಿಮರ್ಶಾತ್ಮಕ ಪ್ರಶಂಸೆ ಪಡೆದು ಬಿಡುಗಡೆಗೊಂಡಿತು ಮತ್ತು ವಾಣಿಜ್ಯಿಕ ಯಶಸ್ಸು ಕೂಡ ಆಯಿತು.
ಇದು ಕೇಂದ್ರ ಸರ್ಕಾರದಿಂದ ರೂ. ೧ ಕೋಟಿಯ ಅನುದಾನವನ್ನು ಪಡೆದ ಮೊದಲ ಭಾರತೀಯ ಚಲನಚಿತ್ರವಾಗಿತ್ತು.[೮]
ನ್ಯೂಟನ್ 9–19 ಫ಼ೆಬ್ರುವರಿ ೨೦೧೭ರಲ್ಲಿ ಆಯೋಜಿತವಾದ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಪ್ರಥಮವಾಗಿ ಪ್ರದರ್ಶನಗೊಂಡಿತು.[೯] ಭಾರತದಲ್ಲಿ ಇದು ೨೨ ಸೆಪ್ಟೆಂಬರ್ ೨೦೧೭ರಂದು ಬಿಡುಗಡೆಯಾಯಿತು.[೧೦]
ನ್ಯೂಟನ್ ಭಾರತದಲ್ಲಿ ಒಟ್ಟು ರೂ. ೧೫.೫೦ ಕೋಟಿಯಷ್ಟು ಹಣಗಳಿಸಿತು.[೧೧] ಇದು ಬಾಕ್ಸ್ ಆಫ಼ಿಸ್ ಯಶಸ್ಸೆನಿಸಿಕೊಂಡಿತು ಮತ್ತು ೨೦೧೭ರ ಅತಿ ಲಾಭದಾಯಕ ಚಲನಚಿತ್ರಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ.
ಚಿತ್ರದ ಬಿಡುಗಡೆ ಮತ್ತು ಆಸ್ಕರ್‌ಗೆ ಭಾರತದ ಸ್ಪರ್ಧಿಯಾಗಿ ಇದರ ಆಯ್ಕೆಯ ನಂತರ, ಇರಾನ್‍ನ ಒಂದು ಚಲನಚಿತ್ರದೊಂದಿಗೆ ಇದರ ಗಮನಾರ್ಹ ಹೋಲಿಕೆಗಳ ಕಾರಣದಿಂದ ನ್ಯೂಟನ್‍ನ್ನು ಟೀಕಿಸಲಾಯಿತು. ಕೆಲವು ಚಲನಚಿತ್ರೋದ್ಯಮಿಗಳು ಈ ಚಿತ್ರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಇವರಲ್ಲಿ ಅನುರಾಗ ಕಶ್ಯಪ್ ಪ್ರಮುಖರು.
೨೦ ಜನೆವರಿ ೨೦೧೮ - ಫಿಲ್ಮ್‌ಫೇರ್ ಪ್ರಶಸ್ತಿಗಳು
೩ ಮೇ ೨೦೧೮ - ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು