ಪಶುಪತಿ ಮುದ್ರೆ ಸಿಂಧೂತಟದ ನಾಗರೀಕತೆಯ ಮೋಹನ್ಜೋದಡೊ ಪುರಾತತ್ವ ತಾಣದಲ್ಲಿ ಪರಿಶೋಧಿಸಲಾದ ಬಳಪದ ಕಲ್ಲಿನ ಮುದ್ರೆಯ ಹೆಸರು. ಮುದ್ರೆಯು ಸಂಭಾವ್ಯವಾಗಿ ಮೂರು ಶಿರದ ಕುಳಿತಿರುವ ವ್ಯಕ್ತಿಯನ್ನು ಚಿತ್ರಿಸುತ್ತದೆ. ಒಂದು ಕಾಲದಲ್ಲಿ ಇದು ಲಿಂಗರೂಪದ್ದು ಎಂದು ಭಾವಿಸಲಾಗಿತ್ತು, ಆದರೆ ಈ ವ್ಯಾಖ್ಯಾನವನ್ನು ಈಗ ಬಹುತೇಕ ತಿರಸ್ಕರಿಸಲಾಗಿದೆ. ಅವನಿಗೆ ಕೊಂಬುಗಳಿರುವ ತಲೆಯುಡಿಗೆಯಿದೆ ಮತ್ತು ಪ್ರಾಣಿಗಳಿಂದ ಸುತ್ತುವರಿಯಲ್ಪಟ್ಟಿದ್ದಾನೆ. ಅವನು ಕೊಂಬುಳ್ಳ ದೇವತೆಯನ್ನು ಪ್ರತಿನಿಧಿಸುತ್ತಿರಬಹುದು. ಇದು ಹಿಂದೂ ದೇವತೆ ಶಿವನ ಅಥವಾ ವೈರಾಗ್ಯ, ಯೋಗ ಮತ್ತು ಲಿಂಗಕ್ಕೆ ಸಂಬಂಧಿತವಾದ ರುದ್ರನ ಅತ್ಯಂತ ಮುಂಚಿನ ಚಿತ್ರಣವೆಂದು ಊಹಿಸಲಾಗಿದೆ. ಮುದ್ರೆಗೆ ಪಶುಪತಿಯ ಹೆಸರಿಡಲಾಗಿದೆ, ಪಶುಪತಿ ಎಂದರೆ ಪಶುಗಳ ಒಡೆಯ, ಮತ್ತು ಶಿವನ ಒಂದು ಗುಣವಾಚಕ ಮತ್ತು ಹಲವುವೇಳೆ ಮೂರು ತಲೆಗಳುಳ್ಳವನಾಗಿ ಚಿತ್ರಿಸಲಾಗುತ್ತದೆ. ಈ ಆಕೃತಿಯನ್ನು ಅನೇಕವೇಳೆ ಪ್ರಾಚೀನ ನಿಕಟಪೂರ್ವ ಹಾಗೂ ಮೆಡಿಟರೇನಿಯನ್ ಕಲೆ ಹಾಗೂ ಕೊಂಬುಳ್ಳ ದೇವತೆಗಳ ಅನೇಕ ಇತರ ಸಂಪ್ರದಾಯಗಳಲ್ಲಿ ಸಿಕ್ಕಿದ ಪ್ರಾಣಿಗಳ ಒಡೆಯನ ವ್ಯಾಪಕ ಅಲಂಕಾರ ಸಂಕೇತಕ್ಕೆ ಸಂಬಂಧಿಸಲಾಗಿದೆ.[೧]
ಮುದ್ರೆಯನ್ನು ೧೯೨೮-೨೯ ರಲ್ಲಿ ಬಹಿರಂಗಗೊಳಿಸಲಾಯಿತು. ಮುದ್ರೆಯ ಅಳತೆ ೩.೫೬ ಸೆ.ಮಿ. x ೩.೫೩ ಸೆ.ಮಿ. ಮತ್ತು ದಪ್ಪ ೦.೭೬ ಸೆ.ಮಿ. ಆಕೃತಿಯ ಕಾಲುಗಳು ಮಂಡಿಯಲ್ಲಿ ಮಡಚಿವೆ ಮತ್ತು ಅಂಗಾಲುಗಳು ಒಂದಕ್ಕೊಂದು ಸ್ಪರ್ಶಿಸಿವೆ ಮತ್ತು ಬೆರಳುಗಳು ಕೆಳಗೆ ಮುಖಮಾಡಿವೆ. ತೋಳುಗಳು ಹೊರಭಾಗಕ್ಕೆ ಚಾಚಿವೆ ಮತ್ತು ಮಂಡಿಗಳ ಮೇಲೆ ಹಗುರವಾಗಿ ನಿಂತಿವೆ, ಹೆಬ್ಬೆರಳುಗಳು ದೇಹದಿಂದ ಹೊರಗೆ ಮುಖಮಾಡಿವೆ. ಎಂಟು ಸಣ್ಣ ಮತ್ತು ಮೂರು ದೊಡ್ಡ ಬಳೆಗಳು ತೋಳುಗಳನ್ನು ಮುಚ್ಚಿವೆ. ಎದೆಯು ಹಾರಗಳು ಎಂದು ತೋರುವ ಆಭರಣಗಳಿಂದ ಆವೃತವಾಗಿದೆ, ಮತ್ತು ಸೊಂಟವನ್ನು ಒಂದು ಜೋಡಿ ಪಟ್ಟಿ ವೃತ್ತಾಕಾರವಾಗಿ ಸುತ್ತುತ್ತದೆ. ಮಾನವ ಆಕೃತಿಯು ನಾಲ್ಕು ಕಾಡು ಪ್ರಾಣಿಗಳಿಂದ ಸುತ್ತುವರಿಯಲ್ಪಟ್ಟಿದೆ: ಒಂದು ಬದಿಗೆ ಒಂದು ಆನೆ ಮತ್ತು ಹುಲಿ, ಮತ್ತು ಇನ್ನೊಂದು ಬದಿಗೆ ಎಮ್ಮೆ ಮತ್ತು ಘೇಂಡಾಮೃಗ ಇದೆ. ಜಗಲಿಯ ಕೆಳಗೆ ಹಿಂದಕ್ಕೆ ನೋಡುತ್ತಿರುವ ಎರಡು ಜಿಂಕೆಗಳು ಅಥವಾ ಐಬೆಕ್ಸ್ ಇವೆ, ಹಾಗಾಗಿ ಅವುಗಳ ಕೋಡುಗಳು ಮಧ್ಯದಲ್ಲಿ ಹತ್ತಿರಹತ್ತಿರ ಸೇರುತ್ತವೆ. ಮುದ್ರೆಯ ಮೇಲ್ಭಾಗದಲ್ಲಿ ಏಳು ಚಿತ್ರರೂಪದ ಸಂಕೇತಗಳಿವೆ, ಕೊನೆಯದು ಅಡ್ಡ ಜಾಗದ ಅಭಾವದಿಂದಾಗಿ ಸ್ಪಷ್ಟವಾಗಿ ಕೆಳಗಡೆಗೆ ಸ್ಥಳಾಂತರಗೊಂಡಿದೆ.