ಸಂಸ್ಥೆಯ ಪ್ರಕಾರ | ಖಾಸಗಿ ಕಂಪನಿ |
---|---|
ಸ್ಥಾಪನೆ | ೧೯೨೯ |
ಮುಖ್ಯ ಕಾರ್ಯಾಲಯ | ಮುಂಬೈ, ಮಹಾರಾಷ್ಟ್ರ, ಭಾರತ |
ವ್ಯಾಪ್ತಿ ಪ್ರದೇಶ | ವಿಶ್ವಾದ್ಯಂತ |
ಪ್ರಮುಖ ವ್ಯಕ್ತಿ(ಗಳು) | ವಿಜಯ್ ಚೌಹಾಣ್, ಶರದ್ ಚೌಹಾಣ್, ರಾಜ್ ಚೌಹಾಣ್ |
ಉದ್ಯಮ | ಆಹಾರ ಸಂಸ್ಕರಣೆ |
ಉತ್ಪನ್ನ | ಬಿಸ್ಕತ್ತುಗಳು, ಮಿಠಾಯಿ ತಯಾರಿಕೆ |
ಆದಾಯ | ![]() |
ನಿವ್ವಳ ಆದಾಯ | ![]() |
ಜಾಲತಾಣ | parleproducts.com |
ಪಾರ್ಲೆ ಉತ್ಪನ್ನಗಳು (ಅದರ ಲೋಗೋದಲ್ಲಿ ಪಾರ್ಲೆ ಎಂದು ವಿನ್ಯಾಸಗೊಳಿಸಲಾಗಿದೆ) ಭಾರತೀಯ ಬಹುರಾಷ್ಟ್ರೀಯ ಆಹಾರ ನಿಗಮವಾಗಿದೆ. ಇದು ಬಿಸ್ಕತ್ತು ಮತ್ತು ಮಿಠಾಯಿ ಉತ್ಪನ್ನಗಳನ್ನು ತಯಾರಿಸುತ್ತದೆ. ಇದು ಬಿಸ್ಕತ್ತು ಬ್ರಾಂಡ್ ಪಾರ್ಲೆ-ಜಿಗೆ ಹೆಸರುವಾಸಿಯಾಗಿದೆ ಮತ್ತು ೨೦೧೧ ರ ನೀಲ್ಸನ್ ವರದಿಯ ಪ್ರಕಾರ,ಇದು ವಿಶ್ವದಲ್ಲೇ ಹೆಚ್ಚು ಮಾರಾಟವಾಗುವ ಬಿಸ್ಕತ್ತು ಬ್ರಾಂಡ್ ಆಗಿದೆ.[೨][೩][೪][೫][೬]
ಮೊದಲ ಪಾರ್ಲೆ ಕಾರ್ಖಾನೆಯನ್ನು ೧೯೨೯ ರಲ್ಲಿ ಸ್ವದೇಶಿ ಚಳವಳಿಯಿಂದ ಸ್ಫೂರ್ತಿ ಪಡೆದು ಮುಂಬೈನ ವಿಲೆ ಪಾರ್ಲೆಯಲ್ಲಿ ಚೌಹಾಣ್ ಕುಟುಂಬದ ನರೋತ್ತಮ್ ಮೋಹನ್ ಲಾಲ್ ದಯಾಳ್ ಸ್ಥಾಪಿಸಿದರು.[೭] ದಯಾಳ್ ಗುಜರಾತಿನ ವಲ್ಸಾದ್ ಬಳಿಯ ಪಾರ್ಡಿ ಮೂಲದವರು. ಜೀವನೋಪಾಯಕ್ಕಾಗಿ ಮುಂಬೈಗೆ ತೆರಳಿದ ಅವರು ಮೊದಲಿಗೆ ಹೊಲಿಗೆ(ಟೈಲರಿಂಗ್) ಕೆಲಸ ಮಾಡುತ್ತಿದ್ದರು. ಆದರೆ, ಅದು ಲಾಭದಾಯಕವಾಗಿರಲಿಲ್ಲ. ಈ ಕಾರಣದಿಂದ ಅವರು ತಿಂಡಿ ತಿನಿಸುಗಳನ್ನು ಮಾರಾಟ ಮಾಡುವ ಮೂಲಕ ಆಹಾರ ವ್ಯಾಪಾರಕ್ಕೆ ಕಾಲಿಟ್ಟರು. ಅವರು ಬ್ರೆಡ್, ಬನ್, ರಸ್ಕ್, ಸ್ಕೋನ್ಸ್, ನಂಖಾತೈ, ಇತ್ಯಾದಿಗಳನ್ನು ತಯಾರಿಸುವ ಬೇಕರಿಯನ್ನು ನಡೆಸುತ್ತಿದ್ದರು.[೮] ಅವರಿಗೆ ಮನೇಕ್ ಲಾಲ್, ಪಿತಾಂಬರ್, ನರೋತ್ತಮ್, ಕಾಂತಿಲಾಲ್ ಮತ್ತು ಜಯಂತಿಲಾಲ್ ಎಂಬ ಐವರು ಗಂಡು ಮಕ್ಕಳಿದ್ದರು. ಐವರು ಸಹೋದರರು ತಮ್ಮ ತಂದೆಯ ಅಡಿಯಲ್ಲಿ ಒಟ್ಟಿಗೆ ಕೆಲಸ ಮಾಡಿದರು.
ಪಾರ್ಲೆಯು ಬ್ರಿಟಿಷ್ ಸೈನ್ಯಕ್ಕೆ ಮಾತ್ರ ತಮ್ಮ ಬಿಸ್ಕತ್ತುಗಳನ್ನು ಪೂರೈಸುವ ಪರವಾನಗಿಯೊಂದಿಗೆ ೧೯೩೯ ರಲ್ಲಿ ತಯಾರಿಸಲು ಪ್ರಾರಂಭಿಸಿತು.[೯] ೧೯೪೭ ರಲ್ಲಿ, ಭಾರತವು ಸ್ವತಂತ್ರವಾದಾಗ ಪಾರ್ಲೆ ಕಂಪನಿಯು ತನ್ನ ಗ್ಲೂಕೋಸ್ ಬಿಸ್ಕತ್ತುಗಳನ್ನು ಬ್ರಿಟಿಷ್ ಬಿಸ್ಕತ್ತುಗಳಿಗೆ ಭಾರತೀಯ ಪರ್ಯಾಯವಾಗಿ ಪ್ರದರ್ಶಿಸುವ ಜಾಹೀರಾತು ಪ್ರಚಾರವನ್ನು ಪ್ರಾರಂಭಿಸಿತು.[೧೦] ಪಾರ್ಲೆ-ಜಿ ಬಿಸ್ಕತ್ತುಗಳಂತಹ ಉತ್ಪನ್ನಗಳ ಯಶಸ್ಸಿನ ನಂತರ ಪಾರ್ಲೆ ಬ್ರ್ಯಾಂಡ್ ಭಾರತದಲ್ಲಿ ಪ್ರಸಿದ್ಧವಾಯಿತು. ಬಹಳ ಸಮಯದ ನಂತರ, ೧೯೭೭ ರಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರವು ಕೋಕಾ-ಕೋಲಾವನ್ನು ಭಾರತದಿಂದ ಹೊರಹಾಕಿತು. ಚೌಹಾಣ್ ಕುಟುಂಬವು ಇಲ್ಲಿ ಅವಕಾಶವನ್ನು ಕಂಡಿತು ಮತ್ತು ತಮ್ಮದೇ ಆದ ತಂಪು ಪಾನೀಯಗಳ ವ್ಯಾಪಾರವನ್ನು ತೆರೆದರು. ಈ ತಂಪು ಪಾನೀಯಗಳ ಉತ್ಪನ್ನಗಳು ಯಾವುದೇ ಸ್ಪರ್ಧೆಯಿಲ್ಲದ ಕಾರಣ ಪ್ರವರ್ಧಮಾನಕ್ಕೆ ಬಂದಿತು. ಇದು ಗೋಲ್ಡ್ ಸ್ಪಾಟ್, ಥಮ್ಸ್ ಅಪ್ ಮತ್ತು ಫ್ರೂಟಿಯಂತಹ ತಂಪು ಪಾನೀಯಗಳನ್ನು ಮಾರಾಟ ಮಾಡುವುದರಿಂದ ಹಣವನ್ನು ಗಳಿಸಿತು. ಈ ಉತ್ಪನ್ನಗಳು ಮನೆಮಾತಾದವು.
ಮೂಲ ಪಾರ್ಲೆ ಕಂಪನಿಯು ಮೂಲ ಚೌಹಾಣ್ ಕುಟುಂಬದ ವಿವಿಧ ಬಣಗಳ ಒಡೆತನದ ಮೂರು ಪ್ರತ್ಯೇಕ ಕಂಪನಿಗಳಾಗಿ ವಿಭಜಿಸಲ್ಪಟ್ಟಿತು. ಅದರಲ್ಲಿ ಹೆಚ್ಚಿನವು ಪಾರ್ಲೆ ಆಗ್ರೋ ಉತ್ಪನ್ನಗಳ ಒಡೆತನದಲ್ಲಿದೆ. [೧೧] ಜಯಂತಿಲಾಲ್ ತನ್ನ ನಾಲ್ವರು ಅಣ್ಣಂದಿರಿಂದ ಬೇರ್ಪಟ್ಟಿದ್ದರು. ಇದಕ್ಕೆ ಮುಖ್ಯ ಕಾರಣವೆಂದರೆ ಜಯಂತಿಲಾಲ್ ತನ್ನ ನಾಲ್ಕು ಹಿರಿಯ ಸಹೋದರರಿಗಿಂತ ಭಿನ್ನವಾದ ಜೀವನಶೈಲಿಯನ್ನು ಹೊಂದಿದ್ದರು. ನಾಲ್ವರು ಹಿರಿಯ ಸಹೋದರರು ಬಿಸ್ಕತ್ತು ವ್ಯವಹಾರವನ್ನು ತಮ್ಮ ಪಾಲಾಗಿ ಪಡೆದರು ಮತ್ತು ಇಂದಿಗೂ ಅವರೆಲ್ಲರೂ ಯಾವುದೇ ಪ್ರತ್ಯೇಕತೆಯಿಲ್ಲದೆ ಒಟ್ಟಿಗೆ ಇದ್ದಾರೆ. ಜಯಂತಿಲಾಲ್ ಅವರು ಪಾನೀಯಗಳ ವಿಭಾಗವನ್ನು ತನ್ನ ಪಾಲಾಗಿ ತೆಗೆದುಕೊಂಡರು. ಈ ವಿಭಾಗವನ್ನು ಅವರ ಇಬ್ಬರು ಪುತ್ರರ ನಡುವೆ ಹಂಚಲಾಯಿತು.
ಇಂದು ಮೂರು ಕಂಪನಿಗಳು ಈ ಕೆಳಗಿನಂತಿವೆ:
ಎಲ್ಲಾ ಮೂರು ಕಂಪನಿಗಳು "ಪಾರ್ಲೆ" ಎಂಬ ಕುಟುಂಬದ ಟ್ರೇಡ್‌ಮಾರ್ಕ್ ಹೆಸರನ್ನು ಬಳಸುವುದನ್ನು ಮುಂದುವರಿಸಿವೆ. ಮೂಲ ಪಾರ್ಲೆ ಗುಂಪನ್ನು ಸೌಹಾರ್ದಯುತವಾಗಿ ಮೂರು ಸ್ಪರ್ಧಾತ್ಮಕವಲ್ಲದ ವ್ಯವಹಾರಗಳಾಗಿ ವಿಂಗಡಿಸಲಾಗಿದೆ. ಪಾರ್ಲೆ ಆಗ್ರೋ ಮಿಠಾಯಿ ವ್ಯಾಪಾರದಲ್ಲಿ ವೈವಿಧ್ಯಗೊಳಿಸಿದಾಗ "ಪಾರ್ಲೆ" ಬ್ರ್ಯಾಂಡ್‌ನ ಬಳಕೆಯ ಬಗ್ಗೆ ವಿವಾದ ಹುಟ್ಟಿಕೊಂಡಿತು. ಹೀಗಾಗಿ ಇದು ಪಾರ್ಲೆ ಉತ್ಪನ್ನಗಳಿಗೆ ಪ್ರತಿಸ್ಪರ್ಧಿಯಾಯಿತು. ಫೆಬ್ರವರಿ ೨೦೦೮ ರಲ್ಲಿ, ಪಾರ್ಲೆ ಉತ್ಪನ್ನಗಳು, ಪಾರ್ಲೆ ಆಗ್ರೋ ಬ್ರಾಂಡ್ ಅನ್ನು ಪ್ರತಿಸ್ಪರ್ಧಿ ಮಿಠಾಯಿ ಉತ್ಪನ್ನಗಳಿಗೆ ಬಳಸಿದ್ದಕ್ಕಾಗಿ ಮೊಕದ್ದಮೆ ಹೂಡಿತು. ನಂತರ, ಪಾರ್ಲೆ ಆಗ್ರೋ ತನ್ನ ಮಿಠಾಯಿ ಉತ್ಪನ್ನಗಳನ್ನು ಹೊಸ ವಿನ್ಯಾಸದ ಅಡಿಯಲ್ಲಿ ಬಿಡುಗಡೆ ಮಾಡಿತು. ಇದರಲ್ಲಿ ಪಾರ್ಲೆ ಬ್ರಾಂಡ್ ಹೆಸರನ್ನು ಸೇರಿಸಲಾಗಿಲ್ಲ.[೨೧] ೨೦೦೯ ರಲ್ಲಿ, ಪಾರ್ಲೆ ಆಗ್ರೋ ತನ್ನ ಉತ್ಪನ್ನಗಳು ಪಾರ್ಲೆ ಉತ್ಪನ್ನಗಳೊಂದಿಗೆ ಯಾವುದೇ ಸಂಬಂಧವಿಲ್ಲದ ಪ್ರತ್ಯೇಕ ಕಂಪನಿಗೆ ಸೇರಿವೆ ಎಂದು ಸ್ಪಷ್ಟವಾಗಿ ನಿರ್ದಿಷ್ಟಪಡಿಸುವ ಷರತ್ತಿನ ಮೇಲೆ ಬಾಂಬೆ ಹೈಕೋರ್ಟ್ ಪಾರ್ಲೆ ಆಗ್ರೋಗೆ ತನ್ನ ಮಿಠಾಯಿ ಬ್ರಾಂಡ್ಗಳನ್ನು "ಪಾರ್ಲೆ" ಅಥವಾ "ಪಾರ್ಲೆ ಕಾನ್ಫಿ" ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಬಹುದು ಎಂದು ತೀರ್ಪು ನೀಡಿತು.[೨೨]
ಮುಂಬೈನಲ್ಲಿರುವ ಮೂಲ ಕಾರ್ಖಾನೆಯ ಹೊರತಾಗಿ, ಪಾರ್ಲೆಯು ಕಾನ್ಪುರ್(ಉತ್ತರ ಪ್ರದೇಶ), ನೀಮ್ರಾನಾ(ರಾಜಸ್ಥಾನ), ಬೆಂಗಳೂರು(ಕರ್ನಾಟಕ), ಹೈದರಾಬಾದ್(ತೆಲಂಗಾಣ), ಕಚ್( ಗುಜರಾತ್ ), ಖೋಪೋಲಿ(ಮಹಾರಾಷ್ಟ್ರ), ಇಂದೋರ್ (ಮಧ್ಯಪ್ರದೇಶ), ಪಂತ್‌ನಗರ(ಉತ್ತರಾಖಂಡ), ಸಿತಾರ್‌ಗಂಜ್(ಉತ್ತರಾಖಂಡ), ಬಹದ್ದೂರ್‌ಗಢ(ಹರಿಯಾಣ), ಮತ್ತು ಮುಜಾಫರ್‌ಪುರ್(ಬಿಹಾರ) ನಲ್ಲಿ ಉತ್ಪಾದನಾ ಸೌಲಭ್ಯಗಳನ್ನು ಹೊಂದಿದೆ. ಬಹದ್ದೂರ್‌ಗಢ್ ಮತ್ತು ಮುಜಫರ್‌ಪುರದಲ್ಲಿರುವ ಸ್ಥಾವರಗಳು ಭಾರತದಲ್ಲಿ ಪಾರ್ಲೆಯ ಕೆಲವು ದೊಡ್ಡ ಉತ್ಪಾದನಾ ಘಟಕಗಳಾಗಿವೆ. ಇದು ಒಪ್ಪಂದದ ಮೇಲೆ ಹಲವಾರು ಉತ್ಪಾದನಾ ಘಟಕಗಳನ್ನು ಸಹ ಹೊಂದಿದೆ.[೨೩]