ಬಟಾಟಾ ವಡಾ ಮಹಾರಾಷ್ಟ್ರದಲ್ಲಿ ಒಂದು ಜನಪ್ರಿಯ ಸಸ್ಯಾಹಾರಿ ತ್ವರಿತ ಖಾದ್ಯವಾಗಿದೆ. ಇದು ಚೂರುಮಾಡಿದ ಆಲೂಗಡ್ಡೆ ಪ್ಯಾಟಿಯ ಮೇಲೆ ಕಡಲೆ ಹಿಟ್ಟಿನ ಲೇಪನವನ್ನು ಹೊಂದಿರುತ್ತದೆ. ನಂತರ ಇದನ್ನು ಎಣ್ಣೆಯಲ್ಲಿ ಕರಿದು ಬಿಸಿಯಾಗಿರುವಾಗಲೇ ಚಟ್ನಿಯೊಂದಿಗೆ ಬಡಿಸಲಾಗುತ್ತದೆ. ವಡಾ ವ್ಯಾಸದಲ್ಲಿ ಸುಮಾರು ಎರಡರಿಂದ ಮೂರು ಅಂಗುಲವಿರುವ ಗಟ್ಟಿಯಾದ ಗೋಳವಾಗಿರುತ್ತದೆ.
ಇದರ ಮೂಲ ಮಹಾರಾಷ್ಟ್ರವಾದರೂ, ಬಟಾಟಾ ವಡಾವು ಭಾರತದ ಉಳಿದೆಡೆಯೂ ಜನಪ್ರಿಯತೆಯನ್ನು ಗಳಿಸುತ್ತಿದೆ.[೧]
ಆಲೂಗಡ್ಡೆ ಹೂರಣಕ್ಕೆ ಮೊದಲು ಆಲೂಗಡ್ಡೆಗಳನ್ನು ಬೇಯಿಸಿಕೊಂಡು ಉರುಟಾಗಿ ಚೂರುಮಾಡಿಕೊಳ್ಳಲಾಗುತ್ತದೆ. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿಮಾಡಿ ಅದಕ್ಕೆ ಇಂಗು, ಸಾಸಿವೆ, ಮೆಣಸಿನಕಾಯಿ, ಈರುಳ್ಳಿ, ಕರಿಬೇವು ಮುಂತಾದವುಗಳನ್ನು ಸೇರಿಸಿ ಈರುಳ್ಳಿ ಬಣ್ಣ ಹೋಗುವವರೆಗೆ ಸ್ವಲ್ಪ ಕಾಲ ಎಣ್ಣೆಯಲ್ಲಿ ಬಾಡಿಸಿಕೊಳ್ಳಲಾಗುತ್ತದೆ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಸಿನ ಮತ್ತು ಉಪ್ಪು ಸೇರಿಸಿ ಸ್ವಲ್ಪ ಕಾಲ ಬಾಡಿಸಿ ನಂತರ ಚೂರ್ಣಮಾಡಿದ ಆಲೂಗಡ್ಡೆಯನ್ನು ಸೇರಿಸಿ ಸ್ವಲ್ಪ ಕಾಲ ಬೇಯಿಸಲಾಗುತ್ತದೆ.