ಬ್ರಹ್ಮಸೂತ್ರಗಳನ್ನು ರಚಿಸಿದವರು ಭಗವಾನ್ ಬಾದರಾಯಣರು. ಇದನ್ನು ವೇದಾಂತಸೂತ್ರಗಳೆಂದು ಕರೆಯುತ್ತಾರೆ. ಅಲ್ಲದೆ ಶರೀರಕ ಸೂತ್ರ ಮತ್ತು ಭಿಕ್ಷು ಸೂತ್ರ ಎಂಬ ಹೆಸರುಗಳೂ ಉಂಟು. ಸೂತ್ರವೆಂದರೆ ಸಾರವತ್ತಾದ ವಿಷಯವನ್ನು ಸಂದೇಹವುಂಟಾಗದಂತೆ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ತಿಳಿಸುವುದು. ಉಪನಿಷತ್ತುಗಳಲ್ಲಿ ಹೇಳಿರುವ ಪರಮತತ್ವಕ್ಕೆ ಬ್ರಹ್ಮ ಎಂಬ ಹೆಸರಿರುವುದರಿಂದ ಅದೇ ವಿಷಯವನ್ನು ಹೇಳುವ ವೇದಾಂತಸೂತ್ರಗಳನ್ನು ಬ್ರಹ್ಮಸೂತ್ರವೆಂಬ ಹೆಸರಿನಿಂದಲೂ ಕರೆಯುತ್ತಾರೆ.
ಮಹಾಭಾರತದ ಕರ್ತೃವಾದ ವೇದವ್ಯಾಸರೇ ಬ್ರಹ್ಮಸೂತ್ರಗಳನ್ನು ರಚಿಸಿದ ಬಾದರಾಯಣರೆಂದು ಪ್ರತೀತಿಯಿದೆ. ಈ ಸೂತ್ರವು ಉಪನಿಷತ್ಗಳ ತತ್ವಗಳು ಮತ್ತು ಅಧ್ಯಾತ್ಮದ ಕಲ್ಪನೆಗಳನ್ನು ಶಿಸ್ತುಬದ್ಧವಾಗಿ ಮತ್ತು ಸಂಕ್ಷಿಪ್ತವಾಗಿ ತಿಳಿಸುತ್ತದೆ
ಅಥವಾ ಒಗ್ಗೂಡಿಸುತ್ತದೆ.
ಉಪನಿಷತ್ತುಗಳಲ್ಲಿ ಹೇಳಿರುವ ಸಾರವನ್ನೇ ಗೀತೆಯಲ್ಲಿ ತಿಳಿಸಿದೆ. ಅದೇ ವಿಷಯವನ್ನು ಯುಕ್ತಿಗಳಿಂದ ಅಂದರೆ ತರ್ಕಬದ್ಧವಾಗಿ ಬ್ರಹ್ಮಸೂತ್ರದಲ್ಲಿ ಹೇಳಿದೆ. ಆದ್ದರಿಂದ ಉಪನಿಷತ್ತುಗಳು, ಗೀತೆ, ಬ್ರಹ್ಮಸೂತ್ರ- ಇವು ಮೂರನ್ನೂ ಪ್ರಸ್ಥಾನತ್ರಯಗಳು ಎಂದು ಕರೆಯುತ್ತಾರೆ. ಬ್ರಹ್ಮಸೂತ್ರವು ೪ ಅಧ್ಯಾಯಗಳಲ್ಲಿ ೫೫೫ ಸೂತ್ರಗಳನ್ನು ಹೊಂದಿದೆ. ಈ ಸೂತ್ರಗಳಲ್ಲಿ ಮುಖ್ಯವಾಗಿ ವೇದಾಂತದರ್ಶನವು ಹೇಳುವ ಮುಖ್ಯತತ್ವ 'ಬ್ರಹ್ಮ'ದ ವಿಷಯವನ್ನು ಹೇಳಿದೆ.
ನಾಲ್ಕು ಅಧ್ಯಾಯಗಳು ಮತ್ತು ಅದರ ವಿಷಯ
[ಬದಲಾಯಿಸಿ]
- 1ಸಮನ್ವಯಾಧ್ಯಾಯ::: ತತ್ವವಿಚಾರಭಾಗ: ಈ ಬ್ರಹ್ಮವು ಯಕ್ತಿ (ತರ್ಕ),ಅನುಭವಗಳಿಗೆ ಹೊಂದಿಕೆಯಾಗಿದೆ ಎಂದು ತಿಳಿಸಿಕೊಡುವ ಮೊದಲನೆಯ ಬಾಗಕ್ಕೆ ತತ್ವವಿಚಾರಭಾಗ ಎನ್ನಬಹುದು. ಈ ಮೊದಲ ಅಧ್ಯಾಯದಲ್ಲಿ ಮುಖ್ಯವಾಗಿ ವೇದಾಂತ ವಾಕ್ಯಗಳು (ಉಪನಿಷತ್ ವಾಕ್ತಗಳು) ಬ್ರಹ್ಮವನ್ನೇ ತಿಳಿಸುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ' ಆದ್ದರಿಂದ ಇದಕ್ಕೆ 'ಸಮನ್ವಯಾಧ್ಯಾಯ'ವೆಂದು ಹೆಸರು.
- 2ಅವಿರೋಧಾಧ್ಯಾಯ:::ಇದು ಸಕಾರಣವಾಗಿದೆ; ವೇದಾಂತದರ್ಶನವು ಯಾವ ಯುಕ್ತಿಗೂ ವಿರುದ್ಧವಲ್ಲ, ಎಂದು ಎರಡನೆಯ ಅಧ್ಯಾಯ ತೋರಿಸಿಕೊಡುತ್ತದೆ. ಆದ್ದರಿಂದ ಈ ಅಧ್ಯಾಯಕ್ಕೆ 'ಅವಿರೋಧಾಧ್ಯಾಯ'ವೆಂದು ಹೆಸರು.
- 3.ಸಾಧನಾಧ್ಯಾಯ::: 'ಉಪಾಸನಾ ಭಾಗ';ವೇದಾಂತ ದರ್ಶನದಲ್ಲಿ ಹೇಳಿರುವ ಬ್ರಹ್ಮವನ್ನು ವಿಚಾರದಿಂದ ನೇರವಾಗಿ ಸಂಪೂರ್ಣವಾಗಿ ಅರಿತುಕೊಳ್ಳಲಾರದವರು ಅದನ್ನು ಉಪಾಸನೆಮಾಡಿ ತಿಳಿದು ಸದ್ಗತಿ ಹೊಂದಬಹುದು ಎಂಬುದು ವೇದಾಂತದ ಎರಡನೆಯ ಬಾಗ. ಈ ಉಪದೇಶಗಳನ್ನೊಳಗೊಂಡ ಬಾಗಕ್ಕೆ 'ಉಪಾಸನಾ ಭಾಗ' ಎನ್ನಬಹುದು. ಬ್ರಹ್ಮಜ್ಞಾನಕ್ಕಾಗಲಿ, ಬ್ರಹ್ಮದ ಉಪಾಸನೆಗಾಗಲಿ ಯಾರು ತಕ್ಕವರು? ಮನಸ್ಸು ಯಾವ ಅಂತಸ್ಥಿನಲ್ಲಿರುವವರು ಜ್ಞಾನೊಪಾಸನೆಗಳಿಗೆ ಅಧಿಕಾರಿಗಳಾಗುವರು? (ಅಧಿಕಾರಿಗಳು = ಯೋಗ್ಯರು) ಈ ಅಧಿಕಾರವನ್ನು (ಯೋಗ್ಯತೆಯನ್ನು) ಪಡೆದುಕೊಳ್ಳಲು ಏನು ಮಾಡಬೇಕು? ಎಂಬುದನ್ನು ವಿವರಿಸುವುದು ಈ ಭಾಗಕ್ಕೇ ಸೇರಿದೆ. ಇದನ್ನೆಲ್ಲ ವಿವರಿಸಿರುವ ಈ ಮೂರನೆಯ ಅಧ್ಯಾಯಕ್ಕೆ ಸಾಧನಾಧ್ಯಾಯ ಎಂಬ ಹೆಸರಿದೆ.
- 4. ಫಲಾಧ್ಯಾಯ::: ಪ್ರಯೋಜನ ಭಾಗ: ವೇದಾಂತ ದರ್ಶನವನ್ನು ತಿಳಿದುಕೊಂಡು ಅದರಂತೆ ನಮ್ಮ ನಡೆನುಡಿಗಳನ್ನೂ ವಿಚಾರಗಳನ್ನೂ ಇಟ್ಟುಕೊಂಡರೆ, ನಮಗೆ ಆಗುವ ಪ್ರಯೋಜನವೇನು? ಎಂಬುದನ್ನು ತಿಳಿಸುವ ಭಾಗವನ್ನು ಪ್ರಯೋಜನ ಭಾಗ ಎಂದು ಕರೆಯಬಹುದು. ಬ್ರಹ್ಮಸೂತ್ರದ ನಾಲ್ಕನೆಯ ಅಧ್ಯಾಯದಲ್ಲಿ ಈ ವಿಚಾರವಿದೆ.ಆದ್ಧರಿಂದ ಅದಕ್ಕೆ ಫಲಾಧ್ಯಾಯ ಎಂದು ಹೆಸರು.[೧]
- ಬ್ರಹ್ಮಸೂತ್ರವು ನಾಲ್ಕು ಅಧ್ಯಾಯಗಳನ್ನು ಹೊಂದಿದೆ. ಅದನ್ನು ಪುನಹ ನಾಲ್ಕು ಪಾದಗಳಾಗಿ ವಿಂಗಡಿಸಿದೆ. ಮತ್ತೆ ಅದನ್ನು ಅಧಿಕರಣ ಮತ್ತು ಸೂತ್ರಗಳಾಗಿ ವಿಂಗಡಿಸಿದೆ. ಸಾಮಾನ್ಯವಾಗಿ ಸೂತ್ರಗಳನ್ನು ಸೂಚಿಸುವಾಗ , ಅಧ್ಯಾಯ - ಪಾದ -ಸೂತ್ರಗಳ ಅಂಕೆಗಳನ್ನು ಸೂಚಿಸುವರು. ಬ್ರಹ್ಮ-ಸೂತ್ರದ ಪ್ರತಿಯೊಂದು ಅಧಿಕರಣವೂ ಅನೇಕ ಸೂತ್ರಗಳನ್ನು ಹೊಂದಿದೆ, . ಗ್ರಂಥದ ವಿಭಾಗಗಳಲ್ಲಿ ಕೆಳಗಿನ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ನಿರ್ಮಿಸಿದೆ:
- ವಿಷಯ (विषय): ವಿಷಯ, ಸಮಸ್ಯೆ ಅಥವಾ ವಿಷಯ;
- ವಿಸ್ಮಯ (विस्मय): ಅನುಮಾನ, ಅನಿಶ್ಚಿತತೆ ಅಥವಾ ಸಂದಿಗ್ಧತೆ;
- ಪೂರ್ವ-ಪಕ್ಷ (पूर्वपक्ष): ಮೊದಲ ನೋಟಕ್ಕೆ ತೋರುವ ವಿಚಾರ. ಅಥವಾ ಹಿಂದಿನ ನಂಬುಗೆ ಮತ್ತು ವಾದಗಳು
- ಸಿದ್ಧಾಂತ (सिद्धान्त): ಮಂಡಿಸಿದ (ತತ್ವ) ಸಿದ್ಧಾಂತ ಮತ್ತು ವಾದಗಳು; ತಾತ್ಪರ್ಯ; ಅಂತಿಮ ಸಿದ್ಧಾಂತ ಅಥವಾ ತೀರ್ಮಾನಗಳು
- ಸಂಗತಿ (सङ्गति): , ಸಂಶ್ಲೇಷಣೆ ಅಥವಾ ಜ್ಞಾನದ ಒಟ್ಟಿಗೆ ಬರುವ ವಿಚಾರಗಳ ನಡುವೆ ಸಂಪರ್ಕ
- ಬ್ರಹ್ಮಸೂತ್ರ ಪಠ್ಯವು 189 ಅಧಿಕರಣಗಳನ್ನು ಹೊಂದಿದೆ. [ಕೆಲವು ಪಠ್ಯದಲ್ಲಿ ಬದಲಾವಣೆ ಇದೆ] ಪಠ್ಯದ ಪ್ರತಿಯೊಂದು ವಿಭಾಗದ (ಕೇಸ್ ಸ್ಟಡಿ) ಮೊದಲ ಮುಖ್ಯ ಸೂತ್ರ, ಆ ವಿಭಾಗದ ಉದ್ದೇಶವನ್ನು ಹೇಳುತ್ತದೆ. ಮತ್ತು ಬ್ರಹ್ಮ-ಸೂತ್ರದ ಇತರ ಹಲವಾರು ಸೂತ್ರಗಳು ವಿಷಯ ವಾಕ್ಯಗಳು ಅದರಲ್ಲಿ ಬಳಸುವ ಪಠ್ಯ ಮೂಲಗಳು ಮತ್ತು ಸಾಕ್ಷಿಗಳನ್ನು ನೀಡುತ್ತವೆ. (ಜೈಮಿನಿಯು ಮೊಟ್ಟಮೊದಲು ಈ ವಿಧಾನ ಅನುಸರಿಸಿದವನು)
- ಆದಿ ಶಂಕರರು ತಮ್ಮ ವ್ಯಾಖ್ಯಾನದಲ್ಲಿ, ಪಠ್ಯದ ಸೂತ್ರಗಳು ಹೂವಿನ ಹಾರದಲ್ಲಿ ದಾರವು ಹೂಗಳನ್ನು ಒಟ್ಟಾಗಿ ಕಟ್ಟುವಂತೆ ವೇದಾಂತ ಗ್ರಂಥಗಳನ್ನು ಒಟ್ಟಾಗಿ ಸೂತ್ರಗಳಲ್ಲಿ ಕಟ್ಟುತ್ತವೆ ಎಂದು ಹೇಳುತ್ತಾರೆ.[೨]
: ಬ್ರಹ್ಮ-ಸೂತ್ರದಲ್ಲಿ ಸೂತ್ರಗಳ ವಿತರಣೆ :
|
ವಿಭಾಗ |
1 ನೇ ಪಾದ |
2 ನೇ ಪಾದ |
3 ನೇ ಪಾದ |
4 ನೇ ಪಾದ |
ಒಟ್ಟು
|
ಅಧ್ಯಾಯ 1 |
31 |
32 |
43 |
28 |
134
|
ಅಧ್ಯಾಯ 2 |
37 |
45 |
53 |
22 |
157
|
ಅಧ್ಯಾಯ 3 |
27 |
41 |
66 |
52 |
186
|
ಅಧ್ಯಾಯ 4 |
19 |
21 |
16 |
22 |
78
|
ಒಟ್ಟು ಸೂತ್ರಗಳು |
|
|
|
|
555
|
[೩]
- ಗ್ರಂಥ ರಚನೆಯು ಉಳಿದು ಬಂದಿರುವ ಸ್ಥಿತಿಯಲ್ಲಿ, ಅದು ಅಂದಾಜು ಕ್ರಿ.ಪೂ.450 ರಿಂದ ಕ್ರಿ.ಶಕ 200 ನಡುವಿನ ಸಮಯವನ್ನು ಸೂಚಿಸುತ್ತವೆ.[೪]
- ಬ್ರಹ್ಮಸೂತ್ರವು ಬಾದರಾಯಣ ರಚಿಸಿದ್ದು ಎಂದು ಉಲ್ಲೇಖಿಸಲಾಗಿದೆ. ಕೆಲ ಪಠ್ಯಗಳಲ್ಲಿ ಬಾದರಾಯಣನಿಗೆ ವ್ಯಾಸವೆಂದೂ ಉಲ್ಲೇಖಿಸಲಾಗಿದೆ. ಬಾದರಾಯಣರು ಜೈಮಿನಿ ಮಹರ್ಷಿಗಳ ಗುರುವಾಗಿದ್ದರು. ಜೈಮಿನಿ ಮಹರ್ಷಿಗಳು ಮೀಮಾಂಸ ತತ್ವದ ಮೀಮಾಂಸ ಸೂತ್ರಗಳ ರಚನೆಕಾರರಾಗಿದ್ದಾರೆ. (ವ್ಯಾಸರ ಕಾಲ ಮಹಾಭಾರತದ ಕಾಲವಾದರೆ ಅದು ಕ್ರಿ.ಪೂ.೧೨೦೦ ಕ್ಕಿಂತ ಹಿಂದಿನವರು. ಬ್ರಹ್ಮಸೂತ್ರದಲ್ಲಿ ಬೌದ್ಧ ಧರ್ಮದ ತತ್ವ ವಿಚಾರ ಬಂದಿರುವುದರಿಂದ ಅದು ಹೊಂದದು. ಕೆಲವರು ವ್ಯಾಸರೆಂಬುವವರು ಅನೇಕರೆಂದು ಅಭಿಪ್ರಾಯಪಡುತ್ತಾರೆ; ಪ್ರಸಿದ್ಧಿಯಾಗಲೆಂದು ಕೆಲವರು ತಾವು ಬರೆದ ಕಾವ್ಯ ಸಿದ್ಧಾಂತಗಳಿಗೆ ವ್ಯಾಸರ ಹೆಸರನ್ನು ಹಚ್ಚುವ ಪ್ರಸಂಗಗಳೂ ಇವೆ. ಉದಾ:ಭಾಗವತ)
- ಶಂಕರರು ಬಾದರಾಯಣರನ್ನು ವ್ಯಾಸರೆಂದು ತಮ್ಮಭಾಷ್ಯದಲ್ಲಿ ಎಲ್ಲಿಯೂ ಹೇಳಿಲ್ಲ. ವ್ಯಾಸರು ಬಾದರಾಯಣರಿಗಿಂತ ಹಿಂದಿನವರೆಂದು ಸಂಶೋಧಕರ ಅಭಿಪ್ರಾಯ. ಆದರೆ ಮ್ಯಾಕ್ಷ್ ಮುಲ್ಲರ್ ಗೀತೆಯಲ್ಲಿ ಬ್ರಹ್ಮಸೂತ್ರದ ಹೆಸರು ಬಂದಿರುವುದರಿಂದ ಆ ಕಾಲಕ್ಕೂ ಹಿಂದಿನವರೆಂದು ಅಭಿಪ್ರಾಯ ಪಡುವರು. ಆದರೆ ವಿಚಾರದ ಹೊಡೆತದಲ್ಲಿ ಈವಾದಗಳು ನಿಲ್ಲುವುದಿಲ್ಲ.[೫]
- ಬ್ರಹ್ಮಸೂತ್ರ ಬುದ್ಧ ಮಹಾವೀರರ ಶತಕಗಳ ನಂತರ ರಚನೆಗೊಂಡಿದೆ ಏಕೆಂದರೆ ಅದರ ಎರಡನೆಯ ಅಧ್ಯಾಯದಲ್ಲಿ ಬುದ್ಧ ಧರ್ಮದ ಬಗ್ಗೆ ಉಲ್ಲೇಖ ಮತ್ತು ಟೀಕೆಗಳು ಕಂಡುಬರುತ್ತವೆ. ನ್ಯಾಯ ತತ್ವವನ್ನು ಹೊರತುಪಡಿಸಿ ಉಳಿದೆಲ್ಲಾ ತತ್ವಗಳ ಬಗ್ಗೆ ಈ ಶಾಸ್ತ್ರದಲ್ಲಿ ಕಾಣಬಹುದು. ಇದರಿಂದ ಈ ಶಾಸ್ತ್ರದ ತುಲನಾ ಕಾಲಗಣನೆ ಅರ್ಥವಾಗುತ್ತದೆ.
ಸೂತ್ರ ಮತ್ತು ಭಾಷ್ಯದ ಸ್ವರೂಪ - ಉದಾಹರಣೆ
[ಬದಲಾಯಿಸಿ]
- ಶಂಕರರಭಾಷ್ಯ:
- ಉದಾ:ಅವತರಣಿಕೆ (ಪೀಠಿಕೆ, ವಿಷಯ ನಿರೂಪಣೆ ಅಥವಾ ಮಂಡನೆ) ಬ್ರಹ್ಮಸೂತ್ರದ ಮೊದಲ ಆರಂಭದ ವ್ಯಾಖ್ಯಾನ;
- ಭಾಷ್ಯ:"ಯುಷ್ಮದಸ್ಮತ್ಪ್ರತ್ಯಯಗೋಚರಯೋರ್ವಿಷಯವಿಷಯಿಣೋಃ ತಮಃ ಪ್ರಕಾಶವದ್ವಿರುದ್ಧ ಸ್ವಭಾವಯೋಃ ಇತರೇತರ ಭಾವಾನುಪಪತ್ತೌ ಸಿದ್ಧಾಯಾಂ ತದ್ಧರ್ಮಾಣಾಮಪಿ ಸುತರಾಮ್ ಇತರೇತರ ಭಾವನುಪಪತ್ತಿಃ, ಇತ್ಯತಃ ಅಸ್ಮತ್ ಪ್ರತ್ಯಯಗೋಚರಸ್ಯ ವಿಷಯಸ್ಯ ತದ್ಧರ್ಮಾಣಾಂ ಚ ಅಧ್ಯಾಸಃ ತದ್ವಿಪರ್ಯಯೇಣ ವಿಷಯಿಣಃ| .....
- 'ನೀನು', 'ನಾನು' - ಎಂಬ ಪ್ರತ್ಯಯಗಳಿಗೆ (ಅರಿವುಗಳಿಗೆ) ಗೋಚರವಾಗಿರುವ ವಿಷಯ,ವಿಷಯಿ (ಅರಿಯುವ ಆತ್ಮನು) ಇವುಗಳು ಕತ್ತಲೆಬೆಳಕುಗಳಂತೆ ಒಂದಕ್ಕೊಂದು ವಿರುದ್ಧವಾದಸ್ವಭಾವವುಳ್ಳವುಗಳಾದ್ದರಿಂದ ಒಂದು ಮತ್ತೊಂದರ ಸ್ವರೂಪವಾಗುವುದೆಂಬುದು ಹೊಂದುವುದಿಲ್ಲವೆಂದು ಸಿದ್ಧವಾಗಿರುವಲ್ಲಿ ಇವುಗಳ ಧರ್ಮಗಳು (ಆತ್ಮನ ಧರ್ಮ/ಗುಣಗಳು; ಚೈತನ್ಯ, ವಿಕಾರ/ಬದಲಾವಣೆ ಇಲ್ಲದಿರುವಿಕೆ) ಒಂದರವು ಮತ್ತೊಂದರಲ್ಲಿವೆಯೆಂಬುದುತೀರಾ ಹೊಂದದ ಮಾತಾಗಿರುವುದು. ...
- (ಸಂಶಯ): ಆಹ ಕೋಯಂ ಅಧ್ಯಾಸ ನಾಮೋ ಇತಿ?|ಉಚ್ಯತೇ|....
- (ಪ್ರಶ್ನೆ):ಈ ಅಧ್ಯಾಸವೆಂಬುದು ಯಾವುದು?
- ಮೂಲ: ಸ್ಮೃತಿರೂಪ ಪರತ್ರಪೂರ್ವ ದೃಷ್ಟಾವಭಾಸಃ|
- ಉತ್ತರ: ಹೇಳುತ್ತೇವೆ. ಹಿಂದೆಕಂಡ ಒಂದು ವಸ್ತು ಮತ್ತೊಂದರಲ್ಲಿ ಸ್ಮೃತಿರೂಪವಾಗಿತೋರುವುದೇ ಅಧ್ಯಾಸವು.(ಒಂದು ಮತ್ತೊಂದು ಎಂದು ತೋರುವ ಭ್ರಾಂತಿಯೇ ಅಧ್ಯಾಸವು)
- ೧. ಒಂದನೆಯ ಅಧ್ಯಾಯ; ಒಂದನೆಯ ಪಾದ; ಜಿಜ್ಞಾಸಾಧಿಕರಣ: ಸೂತ್ರ ೧:
- ವೇದಾಂತಮೀಮಾಂಸಾಶಾಸ್ತ್ರಸ್ಯ ವ್ಯಾಖ್ಯಾಸಿತಸ್ಯ ಇದಮ್ ಆದಿಮಂ ಸೂತ್ರಮ್:-
- (ನಾವು) ವ್ಯಾಖ್ಯಾನ ಮಾಡಬೇಕೆಂದಿರುವ ವೇದಾಂತ ಮೀಮಾಂಸಾ ಶಾಸ್ತ್ರಕ್ಕೆ ಇದು ಮೊದಲನೆಯ ಸೂತ್ರವು.
- ಅಥಾತೋ ಬ್ರಹ್ಮಜಿಜ್ಞಾಸಾ ||೧||
- (ಟೀಕಕಾರರ ಅರ್ಥ: ೧.[ಸಾಧನ ಚತುಷ್ಟಯವನ್ನು ಸಂಪಾದಿಸಿಕೊಂಡ]ಮೇಲೆ, [ಬ್ರಹ್ಮಜ್ಞಾನದಿಂದಲೇ ಪರಮಪುರುಷಾರ್ಥವುದೊರೆಯುತ್ತದೆ.] ಆದಕಾರಣ ಬ್ರಹ್ಮ ಜಿಜ್ಞಾಸೆಯನ್ನು [ಮಾಡಬೇಕು])
- ಪದ ವಿಂಗಡಣೆ:ಅಥ, ಅತಃ, ಬ್ರಹ್ಮ, ಜಿಜ್ಞಾಸಾ||
- ಸೂತ್ರಾರ್ಥ:-ಅಥ-(ನಿತ್ಯಾನಿತ್ಯವಸ್ತುವಿವೇಕವೇ ಮುಂತಾದ ಸಾಧನ ಸಂಪತ್ತು ಗಳಿಸಿದ [ಟಿ.೧) ಅನಂತರ, ಅತಃ:-(ಬ್ರಹ್ಮಜ್ಞಾನದಿಂದ ಮಾತ್ರಾ ಕೈವಲ್ಯ ಪ್ರಾಪ್ತಿ ಎಂದು ಶ್ರುತಿಗಳು ಸಾರುತ್ತಿವೆ) ಆದ್ದರಿಂದ, ಬ್ರಹ್ಮಜಿಜ್ಞಾಸಾ (ಕರ್ತವ್ಯಾ):- ಬ್ರಹ್ಮಜಿಜ್ಞಾಸೆಯು (ಮಾಡಲ್ಪಡಬೇಕು).
- ವ್ಯಾಖ್ಯಾನ: ತತ್ರ ಅಥ ಶಬ್ದಃ ಅನನ್ತಯಾರ್ಥಃ ಪರಿಗ್ರಹ್ಯತೇ ನ ಅಧಿಕಾರಾರ್ಥಃ| ...ಇತ್ಯಾದಿ;
- ಇಲ್ಲಿ 'ಅಥ' ಎಂಬ ಮಾತನ್ನು ಆಮೇಲೆ ಎಂಬ ಅರ್ಥದಲ್ಲಿ ತೆಗೆದುಕೊಳ್ಳಬೇಕೇ ಹೊರತು 'ಪ್ರಾರಂಭ' ಎಂಬರ್ಥದಲ್ಲಿ ತೆಗೆದುಕೊಳ್ಳಬಾರದು; ಏಕೆಂದರೆ ಬ್ರಹ್ಮ ಜಿಜ್ಞಾಸೆಯು ಇಲ್ಲಿ ಆರಂಭಿಸತಕ್ಕದ್ದಾಗಿರುವುದಿಲ್ಲ. (ಇದು ಚರ್ಚೆಯ ಆರಂಭಕ್ಕಲ್ಲ,ಬ್ರಹ್ಮದ ನಿರೂಪಣೆಗೆ ಹೊರಟಿದೆ; ವೇದಾಧ್ಯಯನದ ನಂತರ ಇತ್ಯಾದಿ ಹೀಗೂ ಅರ್ಥಮಾಡುವರು[೬][೭]
- ಆವರಣದಲ್ಲಿರುವುದು ಅಧ್ಯಾಹಾರ - ಊಹಿಸಿಕೊಳ್ಳಬೇಕಾದದ್ದು)
- ೨.ಜನ್ಮಾಧಿಕರಣ: ಸೂತ್ರ ೨:ಭಾಷ್ಯ: ಬ್ರಹ್ಮಜಿಜ್ಙಾಸಿತವ್ಯಮ್ ಇತ್ಯುಕ್ತಮ್| ಕಿಂ ಲಕ್ಷಣಂ ಪುನಸ್ತದ್ಬ್ರಹ್ಮ ಇತಿ? ಅತ ಆಹ ಭಗವಾನ್ ಸೂತ್ರಕಾರಃ|
-ಅನುವಾದ: ಬ್ರಹ್ಮವನ್ನು ಜಿಜ್ಞಾಸೆ ಮಾಡಬೇಕೆಂದು ಹೇಳಿದ್ದಾಯಿತು. ಬ್ರಹ್ಮದ ಲಕ್ಷಣವೇನೂ? ಎಂದರೆ ಭಗವಾನ್ ಸೂತ್ರಕಾರರು ಹೇಳೂತ್ತಾರೆ:
- ಅಧ್ಯಾಯ - ೧, ಪಾದ - ೧, ಸೂತ್ರ - ೨:
- ಜನ್ಮಾದ್ಯಸ್ಯಯತಃ
- ಪದ ವಿಭಾಗ: ಜನ್ಮಾದಿ, ಅಸ್ಯ, ಯತಃ. ತ್ರಿಪದಾತ್ಮಕವಾದ ಸೂತ್ರ.
- ಅನ್ವಯಾನುಸಾರ: ಅಸ್ಯ (ಜಗತಃ), ಜನ್ಮಾದಿ ಯತಃ (ಸಂಭವತಿ ತದ್ ಬ್ರಹ್ಮ)
- ಸೂತ್ರಾರ್ಥ: ಅಸ್ಯ - ಈ (ಜಗತ್ತಿನ), ಜನ್ಮಾದಿ - ಸೃಷ್ಟಿ ಮುಂತಾದವು, ಯತಃ - ಯಾವುದರಿಂದ (ಉಂಟಾಗುತ್ತದೆಯೋ ಅದು ಬ್ರಹ್ಮವು)
- ೩ ಶಾಸ್ರಯೋನಿತ್ವಾಧಿಕರಣ:
- ಭಾಷ್ಯ: ಜಗತ್ ಕಾರಣತ್ವ ಪ್ರದರ್ಶನೇನ ಸರ್ವಜ್ಞಂ ಬ್ರಹ್ಮ ಇತ್ಯುಪಕ್ಷಿಪ್ತಮ್ ತದೇವ ದ್ರಢಯನ್ ಆಹ|
- ಅನುವಾದ: ಬ್ರಹ್ಮವು ಜಗತ್ತಿಗೆ ಕಾರಣವೆಂಬುದನ್ನು ತೋರಿಸಿ ಅದು ಸರ್ವಜ್ಞವೆಂದು ಸೂಚಿಸಿದ್ದಾಗಿದೆ. ಅದನ್ನೇ ದೃಢಪಡಿಸುವುದಕ್ಕಾಗಿ ಹೇಳುತ್ತಾರೆ:
- ಅಧ್ಯಾಯ - ೧, ಪಾದ - ೧, ಸೂತ್ರ - ೩:
- ಶಾಸ್ತ್ರಯೋನಿತ್ವಾತ್
- ಅನ್ವಯ: ಇದು ಏಕಪದಾತ್ಮಕವಾದ ಸೂತ್ರ. (ಒಂದೇ ಪದ)
- ಸೂತ್ರಾರ್ಥ: ಶಾಸ್ತ್ರಕ್ಕೆ ಕಾರಣವಾಗಿರುವುದರಿಂದ ಬ್ರಹ್ಮವು ಸರ್ವಜ್ಞವು.
- ಅಧ್ಯಾಯ ೧, ಪಾದ ೧, ಸೂತ್ರ ೪.
- ತತ್ತು ಸಮನ್ವಯಾತ್
- ಪದ ವಿಭಾಗ; ತತ್, ತು, ಸಮನ್ವಯಾತ್. ತ್ರಿಪದಾತ್ಮಕವಾದ ಸೂತ್ರ.
- ಅನ್ವಯ:ತು,ತತ್, (ಬ್ರಹ್ಮಣಃ ಶಾಸ್ತ್ರಪ್ರಮಾಣ ಕತ್ವಂ), (ವೇದಾಂತವಾಕ್ಯಾನಾಮ್), ಸಮನ್ವಯಾತ್ (ಅವಗಮ್ಯತೇ).
- ಸೂತ್ರಾರ್ಥ: ಆದರೆ ಬ್ರಹ್ಮವು ಶಾಸ್ತ್ರಪ್ರಮಾಣಕವಾಗಿದೆಯೆಂಬುದು ವೇದಾಂತ ವಾಕ್ಯಗಳ ಸಮನ್ವಯದಿಂದ ತಿಳಿದುಬರಯತ್ತದೆ.
- ಭಾಷ್ಯ (ಮೊದಲ ವಾಕ್ಯ):ತು ಶಬ್ದಃ ಪೂರ್ವಪಕ್ಷಯಗಯಾವೃತ್ತ್ಯರ್ಥಃ| ತದ್ ಬ್ರಹ್ಮ ಸರ್ವಜ್ಞಂ ಸರ್ವಶಕ್ತಿ ಜಗದುತ್ಪತ್ತಿ - ಸ್ಥತಿ - ಲಯಕಾರಣಂ ವೇದಾಂತ ಶಾಸ್ತ್ರಾದೇವ ಅವಗಮ್ಯತೇ| ಕಥಮ್? ಸಮನ್ವಯಾತ್| ಸರ್ವೇಷು ಹಿ ವೇದಾಂತೇಷು ವಾಕ್ಯಾನಿ ತಾತ್ಪರ್ಯೇಣ ಏತಸ್ಯ ಅರ್ಥಸ್ಯ ಪ್ರತಿಪಾದಕತ್ವೇನ ಸಮನುಗತಾನಿ. ...
- ಅನುವಾದ:'ತು' ಶಬ್ದವು ಪೂರ್ವಪಕ್ಷವನ್ನು ನಿರಾಕರಿಸುವುಸದಕ್ಕಾಗಿ ಬಂದಿದೆ. 'ತತ್' ಎಂದರೆಜಗತ್ತಿನ ಉತ್ಪತ್ತಿ- ಸ್ಥತಿ - ಲಯಗಳಿಗೆ ಕಾರಣವಾದಸರ್ವಜ್ಞವೂ ಸರ್ವಶಕ್ತವೂ ಆದ ಬ್ರಹ್ಮ. ಅದು ವೇದಾಂತ ಶಾಸ್ತ್ರದಿಂದಲೇ ತಿಳಿದುಬರುವುದು. ಹೇಗೆ? ಸಮನ್ವಯದಿಂದ. ಎಲ್ಲಾ ವೇದಾಂತ ಅರ್ಥಾತ್ ಉಪನಿಷತ್ತುಗಳ ವಾಕ್ಯಗಳು ಈ ಅರ್ಥವನ್ನು ತಾತ್ಪರ್ಯದಿಂದ ಹೇಳುತ್ತವೆಯೆಂಬುದರಲ್ಲಿ ಸಮನ್ವಯಗೊಳ್ಳುತ್ತವೆ.[೮]
ಅಧ್ಯಾಯ ೧:ಸಮನ್ವಯಾಧ್ಯಾಯ - ಬ್ರಹ್ಮವೆಂದರೆ ಏನು
[ಬದಲಾಯಿಸಿ]
- ಇಲ್ಲಿ 'ಬ್ರಹ್ಮ' ವೆಂದರೆ ಪುರಾಣದಲ್ಲಿ ಹೇಳಿರುವ ಚತುರ್ಮುಖ ಬ್ರಹ್ಮನಲ್ಲ. ಬ್ರಹ್ಮವೆಂದರೆ ಜಗತ್ತಿಗೆ - ಎಲ್ಲದಕ್ಕೂ ಕಾರಣವಾದ ಮೂಲ ಚೇತನ.
- ತತ್ವವಿಚಾರಭಾಗ:ಆರಂಬದಲ್ಲಿ ಮೊದಲ ಸೂತ್ರ, "ಅಥಾತೋ ಬ್ರಹ್ಮಜಿಜ್ಞಾಸಾ" ಎಂದು ಆರಂಬವಾಗುವದು. ಎಂದರೆ ಅಥ (ಆಮೇಲೆ)- ನಿತ್ಯಾನಿತ್ಯವಸ್ತುವಿವೇಕ, ಇಹಾಮುತ್ರಫಲಭೋಗವಿರಾಗ, ಶಮದಮಾದಿಸಾಧನಸಂಪತ್ತು, ಮತ್ತುಮುಕ್ಷತ್ವ ಈ ನಾಲ್ಕು ಸಾಧನ ಸಂಪತ್ತನ್ನು ಗಳಿಸಿದ ಮೇಲೆ "ಬ್ರಹ್ಮಜಿಜ್ಞಾಸಾ" ಎಂದರೆ ಬ್ರಹ್ಮವನ್ನು ಕುರಿತು ವಿಚಾರ ಮಾಡಬೇಕು, ಎಂಬುದು ಮೊದಲ ಸೂತ್ರದ ತಾತ್ಪರ್ಯ (ನೋಡಿ:ಟಿಪ್ಪಣಿ ೧). ಈಗ ಬ್ರಹ್ಮದ ವಿಚಾರ: ಬ್ರಹ್ಮವು ಜಗತ್ತಿಗೆ ಕಾರಣವೆಂದು ಉಪನಿಷತ್ತುಗಳಲ್ಲಿ ಹೇಳಿದೆ. ಈ ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣವಾದದ್ದೇ ಬ್ರಹ್ಮವೆಂದು ಶ್ರುತಿಯಲ್ಲಿಯೂ ಹೇಳಿರುತ್ತದೆ (ನೋಡಿ:ಟಿಪ್ಪಣಿ ೨.
- ಎರಡನೇ ಸೂತ್ರ "ಜನ್ಮಾದ್ಯಸ್ಯ ಯತಃ". ವೇದದಲ್ಲಿ "ಏತದಪ್ರಮೇಯಮ್" (ಬೃ,ಉ.೪-೪-೨೦)ಇದು ಅಪ್ರಮೇಯವಾದುದು (ತರ್ಕದಿಂದ ಸಾಧಿಸಲು ಆಗದು), ,"ಅದ್ರೇಶ್ಯಮಗ್ರಾಹ್ಯಮ್" (ಮುಂ.ಉ. ೧-೧-೫)- ಇದು ಕಾಣದಿರುವುದು ಮತ್ತು ಗ್ರಹಿಸಲಾರದ್ದು, "ಅಪ್ರಾಪ್ಯ ಮನಸಾಸಹ"(ತೈ.ಉ.೨-೪)- ಮನಸ್ಸಿನಿಂದ ತಲುಪಲಾರದ್ದು. ಇಂಥ ಬ್ರಹ್ಮಕ್ಕೆ ಲಕ್ಷಣವನ್ನು (ಹೀಗಿದೆ ಎಂದು) ಹೇಳುವುದು ಹೇಗೆ? ಅದಕ್ಕಾಗಿ "ಜನ್ಮಾದ್ಯಸ್ಯ ಯತಃ" ಎಂದು ಲಕ್ಷಣವನ್ನು ಹೇಳಿದೆ. ಅಂದರೆ ಜಗತ್ತಿನ ಜನ್ಮಾದಿಗಳಿಗೆ ಕಾರಣವಾದದ್ದು ಬ್ರಹ್ಮ. ಮಾತಿನಿಂದಾಗಲೀ, ಮನಸ್ಸಿನಿಂದಾಗಲಿ, ಕಣ್ಣಿನಿಂದಾಗಲೀ, ಬೇರೆ ಇಂದ್ರಿಯಗಳಿಂದಾಗಲಿ, ಅದನ್ನು ತಲುಪಲು ಸಾಧ್ಯವಿಲ್ಲ. ಹೀಗೆ ಯಾವ ವಿಶೇಷವೂ ಇಲ್ಲದಿದ್ದರೂ ಜಗತ್ತಿಗೆ ಕಾರಣವೆಂದು ಗೊತ್ತಾಗಿರುವುದರಿಂದ ಅದು ಇದ್ದೇ ಇರುವುದು.
- ಆದರೆ ಜಗತ್ತು ಹಾಗಲ್ಲ; ಅದು ನಮಗೆ ಪರಿಚಿತ,ಅದು ನಮ್ಮ ಕಣ್ಣಿಗೆ ಕಾಣುವುದು. ಕಾಲ (ಟೈಮ್), ಆಕಾಶ (ಸ್ಪೇಸ್)ಗಳಿಂದ ಕೂಡಿರುವ ಜಗತ್ತಿಗೆ ಕಾರಣವೆಂದಿರುವುದರಿಂದ, ಬ್ರಹ್ಮವು ಕಾಲ ಮತ್ತು ಆಕಾಶಗಳಿಗೂ (ಅವುಗಳ ಸೃಷ್ಟಿಗೆ)ಕಾರಣ; ಕಾಲ ಆಕಾಶಗಳು ಹುಟ್ಟುವುದಕ್ಕೂ ಮೊದಲ ಸ್ಥಿತಿ ಕಲ್ಪನೆ ಮಾಡಲು ಬಾರದು. ಆದಕ್ಕೆ ಗಾಢನಿದ್ರೆಯ ಸ್ಥಿತಿಯನ್ನು ಕಲ್ಪಿಸಿಕೊಳ್ಳಬೇಕು. (ಕಾರಣವಿಲ್ಲದೆ ಕಾರ್ಯವಿಲ್ಲ -ಟಿಪ್ಪಣಿ ೩). ಆದ್ದರಿಂದ ಬ್ರಹ್ಮವು ಕಾಲ, ಆಕಾಶಾದಿ ಎಲ್ಲಕ್ಕೂ ಕಾರಣವಾಗಿದೆ. ಅದನ್ನೇ ಎರಡನೆಯ ಸೂತ್ರದಲ್ಲಿ "ಯಾವುದು ಜಗತ್ತಿನ ಹುಟ್ಟಿಗೆ ಕಾರಣವೋ ಅದು(ಬ್ರಹ್ಮ)", ಎಂದು ಹೇಳಿದೆ.[೮][೯]
- ಟಿಪ್ಪಣಿ ೧. ಆದಿ ಶಂಕರರು ಮತ್ತು ಅದ್ವೈತ ಪುಟದಲ್ಲಿ ಕೊನೆಯ ಪ್ಯಾರಾದಲ್ಲಿ 'ನಾಲ್ಕು ಸಾಧನ ಸಂಪತ್ತು'ಗಳ (ಸಾಧನ ಚತುಷ್ಟಯಗಳ) ಅರ್ಥವನ್ನು ಕೊಟ್ಟಿದೆ.
- ಟಿಪ್ಪಣಿ:೨. ಶ್ರುತಿ=ವೇದಗಳು; ಇಲ್ಲಿ ವೇದ ಉಪನಿಷತ್ತುಗಳು ಹೇಳಿದ್ದು ಆಧಾರವೆನಿಸುತ್ತವೆ.
- ಟಿಪ್ಪಣಿ ೩:ಮಣ್ಣು ಮಡಿಕೆಗೆ ಕಾರಣ ಅದೇ ರೀತಿ ಬ್ರಹ್ಮ ಜಗತ್ತಿಗೆ ಕಾರಣ; ಕುಂಬಾರ (ಮಾಡುವವ) ಮಡಿಕೆಗೆ ಕಾರಣ; ಅದೇ ರೀತಿ ಬ್ರಹ್ಮ ಜಗತ್ತಿಗೆ ಕಾರಣ. ನೋಡಿ:ನ್ಯಾಯ ದರ್ಶನ ಕಾರ್ಯ- ಕಾರಣ ಸಿದ್ಧಾಂತ ಭಾಗ.
ಬ್ರಹ್ಮಸೂತ್ರದ ೨,೩,೪ ನೇ ಅಧ್ಯಾಯಗಳು
[ಬದಲಾಯಿಸಿ]
- ಮೇಲೆ ಆರಂಭದಲ್ಲಿ ತಿಳಿಸಿದಂತೆ (ಅವು) ಅ.೨, ಒಂದನೇ ಅಧ್ಯಾಯದಲ್ಲಿ ನಿಶ್ಚಯಿಸಿದ ಬ್ರಹ್ಮದ ವಿಷಯ ಶಾಸ್ತ್ರಕ್ಕೆ ಅಂದರೆ ವೇದ ಉಪನಿಷತ್ತುಗಳಿಗೆ ವಿರೋಧವಿಲ್ಲವೆಂಬುದನ್ನೂ; ಅ.೩, ಉಪಾಸನಾ ವಿಧಗಳನ್ನೂ ಅದರ ಫಲವನ್ನೂ; ಅ.೪, ಈ ಬ್ರಹ್ಮ ವಿಷಯದ ಶಾಸ್ತ್ರ ಅಧ್ಯಯನದ ಪ್ರಯೊಜನವನ್ನು ಚರ್ಚಿಸುತ್ತದೆ ಮತ್ತು ವಿವರಿಸುತ್ತದೆ.
- ↑ 'ವೇದಾಂತ ದರ್ಶನ" (ಬ್ರಹ್ಮಸೂತ್ರಗಳಮೊದಲನೆಯ ಪರಿಚಯ);ಲೇಖಕ:ಯ.ಸುಬ್ರಹ್ಮಣ್ಯ ಶರ್ಮ,ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಹೊಳೆನರಸಿಪುರ,ಮುದ್ರಣ ೧೯೪೪. ಕರ್ನಾಟಕ.
- ↑ Radhakrishna, Sarvepalli (1960). Brahma Sutra, The Philosophy of Spiritual Life. pp. 23–24.
- ↑ ಬ್ರಹ್ಮಸೂತ್ರಭಾಷ್ಯಸಾರ;ಅಧ್ಯಾತ್ಮಪ್ರಕಾಶಕಾರ್ಯಾಲಯ,ಹೊಳೆನರಸೀಪುರ, ಹಾಸನ ಜಿಲ್ಲೆ- 573 211;ದೂ: 08175-273820
- ↑ Andrew J. Nicholson (2013). Unifying Hinduism: Philosophy and Identity in Indian Intellectual History. Columbia University Press. p. 26. (ISBN 978-0-231-14987-7) Quote: "From a historical perspective, the Brahmasutras are best understood as a group of sutras composed by multiple authors over the course of hundreds of years, most likely composed in its current form between 400 and 450 BCE."
- ↑ ಬ್ರಹ್ಮಸೂತ್ರ ಭಾಷ್ಯ ಸಂಪುಟ ೧ ಪೀಠಿಕೆ ಪುಟ೧೦;ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು;ಹೊಳೆನರಸಿಪುರ.
- ↑ ಬ್ರಹ್ಮಸೂತ್ರ ಭಾಷ್ಯ ಸಂಪುಟ ೧, ಪುಟ೨,೩;ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು;ಹೊಳೆನರಸಿಪುರ.
- ↑ ಪರಮಾನಂದ ಸುಧಾ ಪ್ರೊ.ಎಂ.ಎ.ಹೆಗಡೆ
- ↑ ೮.೦ ೮.೧ ಪರಮಾನಂದಸುಧಾ: ಶ್ರೀಶಂಕರರ ಬ್ರಹ್ಮಸೂತ್ರಭಾಷ್ಯದ ನಾಲ್ಕುಸುತ್ರಗಳ ಭಾಷ್ಯ ಅನುವಾದ ವಿವರಣೆ;ಪ್ರೊ.ಎಂ.ಎ.ಹೆಗಡೆ ಸಿರ್ಸಿ.
- ↑ ವೇದಾಂತ ದರ್ಶನ ಅದ್ಯಾತ್ಮಪ್ರಕಾಶ ಕಾರ್ಯಾಲಯ ಹೊಳೆನರಸಿಪುರ;