ಮಂಗಳೂರು ದಸರಾವನ್ನು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಆಚರಿಸುತ್ತಾರೆ. [೧] ಇದನ್ನು ನವರಾತ್ರಿ ಹಬ್ಬ, ವಿಜಯದಶಮಿ ಎಂದೂ ಕರೆಯುತ್ತಾರೆ. ಈ ಹಬ್ಬದ ಸಮಯದಲ್ಲಿ ಹುಲಿ ನೃತ್ಯ, ಸಿಂಹ ನೃತ್ಯ ಮತ್ತು ಕರಡಿ ನೃತ್ಯ ಪ್ರಮುಖ ಆಕರ್ಷಣೆಗಳಾಗಿವೆ. ಈ ಸಂದರ್ಭದಲ್ಲಿ ೧೦ ದಿನಗಳ ಕಾಲ ನಗರವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ.
ದಸರಾ ಹಬ್ಬದಲ್ಲಿ ಜನರು ತಮ್ಮ ಮನೆಗಳು ಮತ್ತು ಅಂಗಡಿಗಳು, ಹೋಟೆಲ್‌ಗಳು ಇತ್ಯಾದಿಗಳನ್ನು ಅಲಂಕರಿಸುತ್ತಾರೆ. ಮಂಗಳೂರಿನ ಬಹುತೇಕ ರಸ್ತೆಗಳಲ್ಲಿ ದಸರಾ ಮೆರವಣಿಗೆಗಾಗಿ ದೀಪಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿರುವುದು ಕಂಡು ಬರುತ್ತದೆ. ವರ್ಣರಂಜಿತ ಮತ್ತು ಪ್ರಕಾಶಮಾನವಾದ ದೀಪಗಳಿಂದ ಅಲಂಕರಿಸಲ್ಪಟ್ಟ ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ಚಿತ್ರವು ಅದ್ಭುತವಾದ ವೀಕ್ಷಣೆಯನ್ನು ನೀಡುತ್ತದೆ.
೨೦೧೨ ರಲ್ಲಿ ನಡೆದ ನೂರು ವರ್ಷಗಳ ವಾರ್ಷಿಕೋತ್ಸವವು ನವರಾತ್ರಿ ಉತ್ಸವದ ಸಮಯದಲ್ಲಿ ಆಕರ್ಷಣೆಯ ಕೇಂದ್ರವಾಗಿತ್ತು. ನವರಾತ್ರಿ ಮತ್ತು ಶಿವರಾತ್ರಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಆಚರಿಸಲಾಗುವ ಎರಡು ದೊಡ್ಡ ಹಬ್ಬಗಳು. ಮಂಗಳೂರು ದಸರಾವನ್ನು ಬಿ.ಆರ್.ಕರ್ಕೇರ ಅವರು ಮೊದಲು ಪ್ರಾರಂಭಿಸಿದರು.
ಪಿಲಿನಲಿಕೆ ( ತುಳು : ಪಿಲಿ ಯೇಸ, ಕನ್ನಡ : ಹುಲಿವೇಷ ) ದಸರಾ ಸಂದರ್ಭದಲ್ಲಿ ಮಾಡುವ ಜಾನಪದ ನೃತ್ಯವಾಗಿದೆ. ವಿಶಿಷ್ಟವಾಗಿ ಯುವ ಪುರುಷರು ಐದು ರಿಂದ ಹತ್ತು ಪಡೆಗಳನ್ನು ರಚಿಸಿಕೊಂಡು ಹುಲಿಗಳಂತೆ ಬಣ್ಣ ಹಚ್ಚಿ ಮತ್ತು ವೇಷಭೂಷಣವನ್ನು ಧರಿಸುತ್ತಾರೆ. ತುಳುವಿನಲ್ಲಿ ಇದನ್ನು ತಾಸೆ ತಂಡ ಎಂದು ಕರೆಯುತ್ತಾರೆ. ಈ ತಂಡವು ಗುಂಪಿನ ವ್ಯವಸ್ಥಾಪಕರೊಂದಿಗೆ ಇರುತ್ತದೆ. ಈ ಪಡೆಗಳು ತಮ್ಮ ಬ್ಯಾಂಡ್‌ಗಳ ಡ್ರಮ್ ಬೀಟ್‌ಗಳೊಂದಿಗೆ ಪಟ್ಟಣಗಳ ಬೀದಿಗಳಲ್ಲಿ ಸಂಚರಿಸುತ್ತಾರೆ. ಅವರು ಸುಮಾರು ಹತ್ತು ನಿಮಿಷಗಳ ಕಾಲ ಮನೆಗಳಲ್ಲಿ ಮತ್ತು ಅಂಗಡಿಯಲ್ಲಿ ಅಥವಾ ರಸ್ತೆಬದಿಯಲ್ಲಿ ಪ್ರದರ್ಶನವನ್ನು ನೀಡುತ್ತಾರೆ ಮತ್ತು ಜನರಿಂದ ಸ್ವಲ್ಪ ಹಣವನ್ನು ಸಂಗ್ರಹಿಸುತ್ತಾರೆ. ಶಾರದಾ ದೇವಿಯ ನೆಚ್ಚಿನ ಪ್ರಾಣಿ ಹುಲಿಯಾದ್ದರಿಂದ ಪಿಲಿನಲಿಕೆಯನ್ನು ಶಾರದಾ ದೇವಿಯನ್ನು ಗೌರವಿಸಲು ನಡೆಸಲಾಗುತ್ತದೆ.
ನವರಾತ್ರಿಯ ಸಮಯದಲ್ಲಿ ಶಾರದಾ ದೇವಿಯೊಂದಿಗೆ ವಿವಿಧ ಮೂರ್ತಿಗಳನ್ನು ಪುರೋಹಿತರು ಸ್ವರ್ಣ ಕಲಾಮಂಟಪದಲ್ಲಿ ಸ್ತೋತ್ರಗಳ ಪಠಣ ಮತ್ತು ವೈದಿಕ ಆಚರಣೆಗಳ ನಡುವೆ ಪ್ರತಿಷ್ಠಾಪಿಸುತ್ತಾರೆ. [2] ಈ ಒಂಬತ್ತು ದಿನಗಳ ಆಚರಣೆಗಳಲ್ಲಿ, ಮಹಾಗಣಪತಿ ಮತ್ತು ನವದುರ್ಗೆಯರ ಜೊತೆಗೆ ಶಾರದಾ ದೇವಿಯ ಅಲಂಕೃತ ವಿಗ್ರಹಗಳನ್ನು ಪೂಜಿಸಲಾಗುತ್ತದೆ.
ಕುದ್ರೋಳಿ ದೇವಸ್ಥಾನದಲ್ಲಿ ನವರಾತ್ರಿಯ ೯ ದಿನಗಳ ಕಾಲ `ಗಂಗಾವತರಣ' ( ಶಿವನ ಕಿರೀಟದಿಂದ ಹರಿಯುವ ಗಂಗಾಜಲ) ವನ್ನು ಕಾರ್ಯರೂಪದಲ್ಲಿಇರಿಸುತ್ತಾರೆ. ಇದರ ಚಿತ್ರಣವು ೧೩ ಅಡಿ ಎತ್ತರದ ಶಿವನ ೪ ವರ್ಣರಂಜಿತ ವಿಗ್ರಹಗಳನ್ನು ಹೊಂದಿದ್ದು, ೧೦೦ ಅಡಿ ತಲುಪುವ ಆಕಾಶದ ಕಡೆಗೆ ಧಾವಿಸಲು ನೀರಿನ ಜೆಟ್ ಅನ್ನು ಹೊಂದಿದೆ. ನಾಲ್ಕು ಕಡೆಯಿಂದ ನೀರು ಉತ್ತುಂಗವನ್ನು ತಲುಪುತ್ತಿದ್ದಂತೆ ಅವು ಶಿವಲಿಂಗದ ಆಕಾರವನ್ನು ಪಡೆಯುತ್ತವೆ.
ವಿಜಯ ದಶಮಿ ದಿನ ಸಂಜೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಗಿ ಮರುದಿನ ಮುಂಜಾನೆ ದೇವಸ್ಥಾನದ ಸಂಕೀರ್ಣದಲ್ಲಿರುವ ಪುಷ್ಕರಿಣಿಯಲ್ಲಿ ವಿಗ್ರಹಗಳ ನಿಮಜ್ಜನದೊಂದಿಗೆ ಅದೇ ಸ್ಥಳದಲ್ಲಿ ಕೊನೆಗೊಳ್ಳುತ್ತದೆ. [೨] ಮಹಾಗಣಪತಿ ಮತ್ತು ಶಾರದೆಯ ಜೊತೆಗೆ ನವದುರ್ಗೆಯರ ವಿಗ್ರಹಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಈ ಮೆರವಣಿಗೆಯಲ್ಲಿ ಪುಷ್ಪಗಳು, ಅಲಂಕಾರಿಕ ಛತ್ರಿಗಳು, ಬ್ಯಾಂಡ್‍ಗಳು, ಚೆಂಡೆ ಮತ್ತು ಸಾಂಪ್ರದಾಯಿಕ ನೃತ್ಯಗಳು, ಜಾನಪದ ನೃತ್ಯಗಳು, ಯಕ್ಷಗಾನ ಪಾತ್ರಗಳು, ಡೊಳ್ಳು ಕುಣಿತ, ಪಿಲಿನಲಿಕೆ ಮತ್ತು ಇತರ ಸಾಂಪ್ರದಾಯಿಕ ಕಲಾ ಪ್ರಕಾರಗಳು ಇರುತ್ತದೆ. ಕುದ್ರೋಳಿ, ಮಣ್ಣಗುಡ್ಡ, ಲೇಡಿಹಿಲ್, ಲಾಲ್‌ಬಾಗ್, ಕೆಎಸ್ ರಾವ್ ರಸ್ತೆ, ಹಂಪನಕಟ್ಟೆ, ಕಾರ್ ಸ್ಟ್ರೀಟ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಈ ಮೆರವಣಿಗೆ ಸಾಗುತ್ತದೆ.
ಮಂಗಳೂರು ದಸರಾದ ಪ್ರಾಥಮಿಕ ಸ್ಥಳವು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನವಾಗಿದ್ದರೂ, ಮಂಗಳೂರು ದಸರಾವನ್ನು ಮಂಗಳಾದೇವಿ ದೇವಸ್ಥಾನ, ಶ್ರೀ ವೆಂಕಟ್ರಮಣ ದೇವಸ್ಥಾನ, ಶ್ರೀ ಜೋಡುಮುತ್ತು ಮುಂತಾದ ದೇವಸ್ಥಾನಗಳು ಆಚರಣೆಯನ್ನುಆಯೋಜಿಸುತ್ತಾರೆ. ಶಾರದ ಪೂಜೆಯನ್ನು ಆಯೋಜಿಸಲು ವಿವಿಧ ಶಾರದ ಪೂಜಾ ಸಮಿತಿಗಳಿವೆ. ಅವುಗಳಲ್ಲಿ ಕೆಲವು ಸಾರ್ವಜನಿಕ ಶ್ರೀ ಶಾರದ ಪೂಜಾ ಮಹೋತ್ಸವ ಆಚಾರ್ಯ ಮಠ, ಬ್ರಹ್ಮ ವಿದ್ಯಾ ಪ್ರಬೋಧಿನಿ ಶ್ರೀ ಶಾರದ ಪೂಜಾ ಮಹೋತ್ಸವ ಜೋಡುಮಠ, ರಥಬೀದಿ ಬಾಲಕರ ಶಾರದ ಮಹೋತ್ಸವ ಗೋಕರ್ಣ ಮಠ, ಟ್ಯಾಂಕ್ ಕಾಲೋನಿ ಶಾರದ ಮಹೋತ್ಸವ, ವಿ.ಟಿ.ರಸ್ತೆ ಬಾಲಕರ ವೃಂದ ಇತ್ಯಾದಿ.
ದಸರಾ ಹಬ್ಬವನ್ನು ಆಚರಿಸಲು ಮಂಗಳಾದೇವಿ ದೇವಸ್ಥಾನ, ಬೋಳಾರ್ ಭಾರತದಾದ್ಯಂತ ಇರುವ ಭಕ್ತರನ್ನು ಆಕರ್ಷಿಸುತ್ತದೆ. [೩] ಮಂಗಳೂರು ಎಂಬ ಹೆಸರು ಮಂಗಳಾದೇವಿಯಿಂದ ಬಂದಿದೆ. ಮಂಗಳಾದೇವಿ ದೇವಸ್ಥಾನವು ಜಾನಪದ, ಸಂಗೀತ, ನಾಟಕ, ವಿವಿಧ ವಿಷಯಗಳ ನಾಟಕಗಳು, ಮತ್ತು ಭಕ್ತಿಗೀತೆಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತದೆ. ಮಹಾನವಮಿ ಎಂದು ಕರೆಯಲ್ಪಡುವ ಒಂಬತ್ತನೇ ದಿನದಂದು ಭಕ್ತರು ರಥೋತ್ಸವದಲ್ಲಿ ಭಾಗವಹಿಸುತ್ತಾರೆ. ಅಲಂಕೃತ ದೇವಿಯನ್ನು ಭವ್ಯ ರಥದ ಮೇಲೆ ಕೂರಿಸಿದ ನಂತರ ರಥವನ್ನು ಎಳೆಯಲಾಗುತ್ತದೆ. ರಥೋತ್ಸವವು ವಿವಿಧ ದೇವತೆಗಳಿಂದ ತುಂಬಿರುತ್ತದೆ ಮತ್ತು ಅನೇಕ ಕೋಷ್ಟಕಗಳು ವರ್ಣರಂಜಿತ ದೀಪಗಳಿಂದ ಅಲಂಕೃತವಾಗಿರುತ್ತದೆ. ಮೆರವಣಿಗೆಯು ಮಾರ್ನಮಿಕಟ್ಟವನ್ನು ತಲುಪಿದ ನಂತರ ಅಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. [೪]
ಕಾರ್ ಸ್ಟ್ರೀಟ್‌ನ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ನವರಾತ್ರಿಯ ಸಮಯದಲ್ಲಿ ೬-೭ ದಿನಗಳ ಕಾಲ ಮಂಗಳೂರು ಶಾರದೋತ್ಸವ ಅಥವಾ ಶಾರದ ಮಹೋತ್ಸವ ಆಚರಣೆಯನ್ನು ಆಚರಿಸುತ್ತಾರೆ. ಕಾರ್ ಸ್ಟ್ರೀಟ್‌ನ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಶಾರದಾ ದೇವಿಯ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ. ವಿಗ್ರಹವನ್ನು ಮೊದಲು ದಿ ಗ್ರೇಟ್ ದರ್ಬಾರ್ ಬೀದಿ ವರ್ಕ್ಸ್, ಬಂದರ್‌ನಿಂದ ಭವ್ಯವಾದ ಮೆರವಣಿಗೆಯಲ್ಲಿ ಮಠದ ಆವರಣಕ್ಕೆ ತರಲಾಗುತ್ತದೆ. [೫] ಶಾರದಾ ಮಾತೆಯ ವಿಗ್ರಹವನ್ನು ಹೊತ್ತೊಯ್ಯುವ ವರ್ಣರಂಜಿತ ಮತ್ತು ಭವ್ಯವಾದ ಮೆರವಣಿಗೆಯೊಂದಿಗೆ ಉತ್ಸವವು ಮುಕ್ತಾಯಗೊಳ್ಳಲಿದೆ, ಮೆರವಣಿಗೆಯನ್ನು ವೀಕ್ಷಿಸಲು ಸಾವಿರಾರು ಜನರು ಸೇರುತ್ತಾರೆ. [೬] ಮೆರವಣಿಗೆ ಮುಕ್ತಾಯವಾದ ಮೇಲೆ ಬೆಳಗಿನ ಜಾವದಲ್ಲಿ ಮಹಾಮಾಯಾ ದೇವಸ್ಥಾನದ ಸರೋವರದಲ್ಲಿ ವಿಗ್ರಹವನ್ನು ವಿಸರ್ಜಿಸಲಾಗುವುದು. [೭]
ಮಂಗಳೂರಿನ ಜೋಡುಮಠ ಬೀದಿಯಲ್ಲಿ ಬ್ರಹ್ಮ ವಿದ್ಯಾ ಪ್ರಬೋಧಿನಿ ಶ್ರೀ ಶಾರದ ಪೂಜಾ ಮಹೋತ್ಸವವನ್ನು, ನವರಾತ್ರಿಯ ಸಂದರ್ಭದಲ್ಲಿ ೬-೭ ದಿನಗಳ ಆಚರಿಸುತ್ತಾರೆ. ಜೋಡುಮಠದ ಆವರಣದಲ್ಲಿ ಶಾರದಾ ದೇವಿಯ ವಿಗ್ರಹವನ್ನು ಸ್ಥಾಪಿಸಲಾಗಿದ್ದು, ಮೂಲಾ ನಕ್ಷತ್ರದಿಂದ ಶ್ರವಣ ನಕ್ಷತ್ರದವರೆಗೆ ಪೂಜೆ ನಡೆಯಲಿದೆ. ಪೂಜಾ ದಿನದಂದು ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ. ನವರಾತ್ರಿಯ ಏಕಾದಶಿ ದಿನದಂದು ಶೋಭಾಯಾತ್ರೆಯಲ್ಲಿ ವಿಗ್ರಹ ನಿಮಜ್ಜನದೊಂದಿಗೆ ಮುಕ್ತಾಯಗೊಳ್ಳುತ್ತದೆ.