ಮತದಾನ ಯಂತ್ರವು ಮತಗಳನ್ನು ದಾಖಲಿಸಲು ಮತ್ತು ಪಟ್ಟಿಮಾಡಲು ಬಳಸಲಾಗುವ ಯಂತ್ರ. ಮೊದಲಿನ ಮತದಾನ ಯಂತ್ರಗಳು ಯಾಂತ್ರಿಕವಾಗಿದ್ದವು ಆದರೆ ವಿದ್ಯುನ್ಮಾನ ಮತದಾನ ಯಂತ್ರಗಳನ್ನು ಬಳಸುವುದು ಹೆಚ್ಚು ಸಾಮಾನ್ಯವಾಗಿದೆ. ಸಾಂಪ್ರದಾಯಿಕವಾಗಿ, ಮತದಾನ ಯಂತ್ರವನ್ನು ವ್ಯವಸ್ಥೆಯು ಮತಗಳನ್ನು ಚಲಾಯಿಸಲು ಬಳಸುವ ಪ್ರಕ್ರಿಯೆಯಿಂದ ವ್ಯಾಖ್ಯಾನಿಸಲಾಗಿದೆ ಮತ್ತು ಅಷ್ಟೆ ಅಲ್ಲದೇ ವ್ಯವಸ್ಥೆಯು ಮತಗಳನ್ನು ಪಟ್ಟಿ ಮಾಡುವ ಸ್ಥಳದಿಂದ ವರ್ಗೀಕರಿಸಲಾಗಿದೆ.
ಮತದಾನ ಯಂತ್ರಗಳು ಉಪಯುಕ್ತತೆ, ಭದ್ರತೆ, ಕಾರ್ಯಕಾರಿತ್ವ ಮತ್ತು ನಿಖರತೆಯ ಭಿನ್ನ ಮಟ್ಟಗಳನ್ನು ಹೊಂದಿವೆ. ಕೆಲವು ವ್ಯವಸ್ಥೆಗಳು ಎಲ್ಲ ಮತದಾರರಿಗೆ ಹೆಚ್ಚು ಅಥವಾ ಕಡಿಮೆ ಎಟಕುವಂತಿರುತ್ತವೆ, ಅಥವಾ ನಿರ್ದಿಷ್ಟ ಬಗೆಯ ಅಂಗವಿಕಲತೆಯಿರುವ ಮತದಾರರಿಗೆ ಎಟಕುವಂತೆ ಇರುವುದಿಲ್ಲ. ಅವು ಚುನಾವಣೆಗಳನ್ನು ಗಮನಿಸುವ ಸಾರ್ವಜನಿಕರ ಸಾಮರ್ಥ್ಯದ ಮೇಲೆಯೂ ಪರಿಣಾಮವನ್ನು ಹೊಂದಿರಬಹುದು.
ಮತದಾನ ಯಂತ್ರಗಳ ಬಳಕೆಗೆ ಮೊದಲ ಪ್ರಮುಖ ಪ್ರಸ್ತಾಪ ೧೮೩೮ರಲ್ಲಿ ಬ್ರಿಟನ್‍ನಲ್ಲಿ ಚಾರ್ಟಿಸ್ಟರಿಂದ ಬಂತು. ೧೮೭೫ರಲ್ಲಿ, ಹೆನ್ರಿ ಸ್ಪ್ರಾಟ್ ಮತದಾನ ಯಂತ್ರದ ಹಕ್ಕುಪತ್ರ ಪಡೆದನು. ಇದರಲ್ಲಿ ಮತಪ್ರಕ್ರಿಯೆಯನ್ನು ಒಬ್ಬ ಅಭ್ಯರ್ಥಿಗೆ ಒಂದು ಒತ್ತು ಗುಂಡಿಯಂತೆ, ಒತ್ತು ಗುಂಡಿಗಳ ವ್ಯೂಹವಾಗಿ ತೋರಿಸಲಾಯಿತು.[೧] ೧೮೮೧ ರಲ್ಲಿ, ಆ್ಯಂಥನಿ ಬೆರಾನೆಕ್ ಅಮೇರಿಕದ ಮುಖ್ಯ ಚುನಾವಣೆಯಲ್ಲಿ ಬಳಕೆಗೆ ಸೂಕ್ತವಾದ ಮೊದಲ ಮತದಾನ ಯಂತ್ರಕ್ಕೆ ಹಕ್ಕುಪತ್ರ ಪಡೆದನು.[೨]
ಮತದಾನ ಯಂತ್ರಗಳನ್ನು ದಸ್ತಾವೇಜು ಆಧಾರಿತ ಮತ ಚಲಾವಣಾ ವ್ಯವಸ್ಥೆಗಳು ಮತ್ತು ದಸ್ತಾವೇಜು ಇಲ್ಲದ ಮತ ಚಲಾವಣಾ ವ್ಯವಸ್ಥೆಗಳು ಎಂದು ವರ್ಗೀಕರಿಸಬಹುದು. ತೂತು ಕೊರೆದ ಕಾರ್ಡ್ ದಸ್ತಾವೇಜು ಆಧಾರಿತ ಮತ ಚಲಾವಣಾ ವ್ಯವಸ್ಥೆಯ ಮುಖ್ಯ ಬಗೆ. ಎರಡನೇ ವರ್ಗದಲ್ಲಿ ನೇರ ದಾಖಲೆ ಮತಚಲಾವಣಾ ವ್ಯವಸ್ಥೆ ಮುಖ್ಯವಾದ ಬಗೆ. ಅಮೇರಿಕದಲ್ಲಿ ೧೯೯೦ರ ದಶಕದವರೆಗೆ ಬಳಸಲಾಯಿತು. ಇವು ಮತಗಳನ್ನು ಪಟ್ಟಿಮಾಡಲು ಯಾಂತ್ರಿಕ ವಿಧಾನ ಬಳಸುತ್ತವೆ. ನೇರ ದಾಖಲೆ ಮತಚಲಾವಣಾ ವ್ಯವಸ್ಥೆಯ ಎರಡನೇ ಬಗೆ ನೇರ ದಾಖಲೆ ವಿದ್ಯುನ್ಮಾನ ಮತಚಲಾವಣೆ ಯಂತ್ರ.
ಈ ಯಂತ್ರವು ವಿದ್ಯುನ್ಮಾನ ಸಾಧನದ ಮೂಲಕ ಮತಗಳನ್ನು ದಾಖಲಿಸುತ್ತದೆ. ಇದಕ್ಕೆ ಯಾಂತ್ರಿಕ ಅಥವಾ ವಿದ್ಯುತ್-ದೃಕ್ ಘಟಕಗಳನ್ನು ಒದಗಿಸಲಾಗಿರುತ್ತದೆ ಮತ್ತು ಇದನ್ನು ಮತದಾರನು ಕ್ರಿಯಾಮುಖವಾಗಿಸುತ್ತಾನೆ. ಮತದಾರನ ಆಯ್ಕೆಯನ್ನು ಕಂಪ್ಯೂಟರ್ ಕ್ರಮವಿಧಿಯ ಮೂಲಕ ಸಂಸ್ಕರಿಸಿ ಆ ಮಾಹಿತಿಯನ್ನು ಸ್ಮರಣ ಘಟಕಗಳಲ್ಲಿ ದಾಖಲಿಸಲಾಗುತ್ತದೆ. ನಂತರ ಇದು ಮತದಾನ ಮಾಹಿತಿಯ ಪಟ್ಟಿ ಸೃಷ್ಟಿಸುತ್ತದೆ ಮತ್ತು ಇದನ್ನು ತೆಗೆಯಬಹುದಾದ ಸ್ಮರಣ ಘಟಕದಲ್ಲಿ ಸಂಗ್ರಹಿಸಿಡಲಾಗುತ್ತದೆ. ಇದೇ ಬಗೆಯ ಮತದಾನ ಯಂತ್ರವನ್ನು ಭಾರತದಲ್ಲಿ ಬಳಸಲಾಗುತ್ತಿದೆ.