ಮಲಪ್ರಭಾ ನದಿಯ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕನಕುಂಬಿ ಗ್ರಾಮದಿಂದ ಪಶ್ಚಿಮಕ್ಕೆ ೧೬ ಕಿಲೊಮೀಟರ ದೂರದಲ್ಲಿ, ಸಮುದ್ರ ಮಟ್ಟದಿಂದ ೭೯೨ ಮೀಟರ ಎತ್ತರದಲ್ಲಿ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಹುಟ್ಟುತ್ತದೆ. ೩೦೪ ಕಿಲೊಮೀಟರುಗಳವರೆಗೆ ಕಟಗಿನಹಳ್ಳಿ ಗ್ರಾಮದ ಮುಖಾಂತರ ಹರಿದು ಕೃಷ್ಣಾ ನದಿಯನ್ನು, ಸಮುದ್ರಮಟ್ಟದಿಂದ ೪೮೮ ಮೀಟರ ಎತ್ತರದಲ್ಲಿರುವ ಕೂಡಲ ಸಂಗಮದಲ್ಲಿ ಕೂಡುತ್ತದೆ. ಸಂಗಮದ ವರೆಗೆ ಇದರ ಜಲಾನಯನ ಪ್ರದೇಶದ ವಿಸ್ತೀರ್ಣ ೧೧,೫೪೯ ಚದುರು ಕಿಲೊಮೀಟರುಗಳು.
ಉಪನದಿಗಳು:-
"ಹಲಾತ್ರಿ ಬೆಣ್ಣಿಹಳ್ಳ ಹಿರೆಹಳ್ಳ ತುಪರಿಹಳ್ಳ ಹಾಗು ತಾಸಹಳ್ಳಬೆಣ್ಣೆ ಹಳ್ಳ ಗಳು ಮಲಪ್ರಭಾ ನದಿಯನ್ನು ಸಂಗಮಿಸುವ ಕೆಲವು ಪ್ರಮುಖ ಹಳ್ಳಗಳು."
ರೇಣುಕಾಸಾಗರ:-
ಮಲಪ್ರಭಾ ನದಿಗೆ ಅಡ್ಡಲಾಗಿ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಹತ್ತಿರ ನವಿಲುತೀರ್ಥ ದಲ್ಲಿ ಕಲ್ಲಿನ ಬಾಂಧಕಾಮಿನ ಆಣೆಕಟ್ಟು ಕಟ್ಟಲಾಗಿದೆ. ಈ ಆಣೆಕಟ್ಟು ೧೫೪.೫೩ ಮೀಟರ ಉದ್ದವಿದ್ದು ೪೦.೨೩ ಮೀಟರ ಎತ್ತರವಿದೆ. ಆಣೆಕಟ್ಟಿನ ಸಂಗ್ರಹ ಸಾಮರ್ಥ್ಯವು ೩೦.೨೬ ಘನ ಮೀಟರಗಳಿಷ್ಟಿದೆ. ಆಣೆಕಟ್ಟಿನ ಹಿನ್ನೀರಿನಲ್ಲಿ ೧೩,೫೭೮ ಹೆಕ್ಟೇರುಗಳಷ್ಟು ಪ್ರದೇಶವು ಮುಳುಗಡೆಯಾಗಿದೆ. ಈ ಜಲಾಶಯಕ್ಕೆ 'ರೇಣುಕಾ ಜಲಾಶಯ'ವೆಂದು ಕರೆಯಲಾಗುತ್ತದೆ.
ಕಾಲುವೆಗಳು
ಮಲಪ್ರಭಾ ಆಣೆಕಟ್ಟಿನ ಎಡದಂಡೆಯ ಕಾಲುವೆಯು ೧೫೦ ಕಿಮೀ ಉದ್ದವಿದ್ದು, ಇದರಿಂದ ೫೩,೧೩೬ ಹೆಕ್ಟೇರ್ ಜಮೀನಿಗೆ ನೀರಾವರಿಯಾಗುತ್ತದೆ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ರೂವಾರಿಯಾದ ಇಂಜನಿಯರ ಎಸ್.ಜಿ.ಬಾಳೆಕುಂದ್ರಿಯವರ ಗೌರವಾರ್ಥ ಈ ಕಾಲುವೆಗೆ "ಬಾಳೆಕುಂದ್ರಿ ಕಾಲುವೆ" ಎಂದು ಹೆಸರಿಡಲಾಗಿದೆ.
ಬಲದಂಡೆಯು ೧೪೨ ಕಿಮೀ ಉದ್ದವಿದ್ದು ೧,೩೯,೯೨೧ ಹೆಕ್ಟೇರ್ ಭೂಮಿಗೆ ನೀರುಣ್ಣಿಸುತ್ತದೆ 'ರೇಣುಕಾ ಜಲಾಶಯ' ದಿಂದ ಹುಬ್ಬಳ್ಳಿ ಹಾಗು ಧಾರವಾಡ ನಗರಗಳಿಗೆ ನೀರಿನ ಪೂರೈಕೆಯಾಗುತ್ತದೆ.
ಶುದ್ಧೀಕರಣ
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಜೀವನದಿ ಮಲಪ್ರಭಾ ಒಂದಾನೊಂದು ಕಾಲದಲ್ಲಿ ನೂರಕ್ಕೂ ಹೆಚ್ಚಿನ ಮೀಟರ್ ಅಗಲಕ್ಕೆ ಮೈದುಂಬಿ ಹರಿಯುತ್ತಿತ್ತು. ಆದರೆ ಒತ್ತುವರಿದಾರರ ಪಾಶಕ್ಕೆ ಸಿಲುಕಿದ್ದ ನದಿ, ಕೊಳಚೆ ನೀರಿನಿಂದ ತುಂಬಿ ಹೋಗಿ, ಇದೇನು ನದಿಯೋ, ಗಟಾರವೋ ಎನ್ನುವಂಥ ಸ್ಥಿತಿಯನ್ನು ತಲುಪಿತ್ತು.
‘ಆಪು’ ವಿಷಕಾರಿ ಜೊಂಡಿನಿಂದಾಗಿ ನೀರು ಅಲ್ಲಲ್ಲಿ ಮಡುಗಟ್ಟಿ ನಿಂತಿತ್ತು. ಇದಕ್ಕೆ ಕೆಳಸೇತುವೆಯ ಬಳಿ ಚರಂಡಿಯ ನೀರೂ ಮಿಶ್ರಣವಾಗಿ, ನದಿಯ ನೀರು ವಾಸನಾಭರಿತವಾಗಿತ್ತು. ಇದರಿಂದ ಹಂದಿಗಳ ಕಾರುಬಾರು ಜೋರಾಗಿತ್ತು. ನದಿಯ ನೀರೂ ತಗ್ಗಿದ್ದರಿಂದ ಅಕ್ಕಪಕ್ಕದ ಜಮೀನಿನವರು ನದಿಯನ್ನೇ ಆಕ್ರಮಿಸಿಕೊಂಡು ಕಬ್ಬು ಬೆಳೆದು ಹಣ ಎಣಿಸುತ್ತಿದ್ದರು! ತೆಂಗಿನ ಗಿಡಗಳನ್ನೂ ಹಾಕಿಕೊಂಡಿದ್ದರು. ಈ ನೀರು ಸೇವನೆಗೆ ಯೋಗ್ಯವಲ್ಲ ಎನ್ನುವ ವರದಿಯನ್ನು ಹಲವು ವರ್ಷಗಳ ಹಿಂದೆಯೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿತ್ತು. ಈ ನೀರಿನಲ್ಲಿ ಕಬ್ಬಿಣದ ಅಂಶ ವಿಪರೀತ ಇರುವುದರಿಂದ ಇದು ಕುಡಿಯಲು ಯೋಗ್ಯವಲ್ಲ ಎಂಬ ಆಘಾತಕಾರಿ ಅಂಶವನ್ನು ಆ ವರದಿ ಒಳಗೊಂಡಿತ್ತು. ಆದರೂ ಇದೇ ನೀರನ್ನೇ ಸೇವಿಸುವ ಅನಿವಾರ್ಯ ಅಲ್ಲಿನ ಜನರದಾಗಿತ್ತು.
ಡಾ. ಪೂರ್ಣಿಮಾ ಗೌರೋಜಿ ಯವರ ಹೋರಾಟ
೨೩:೫೨, ೯ ಫೆಬ್ರವರಿ ೨೦೨೪ (IST)೨೩:೫೨, ೯ ಫೆಬ್ರವರಿ ೨೦೨೪ (IST)೨೩:೫೨, ೯ ಫೆಬ್ರವರಿ ೨೦೨೪ (IST)೨೩:೫೨, ೯ ಫೆಬ್ರವರಿ ೨೦೨೪ (IST)೨೩:೫೨, ೯ ಫೆಬ್ರವರಿ ೨೦೨೪ (IST)೨೩:೫೨, ೯ ಫೆಬ್ರವರಿ ೨೦೨೪ (IST)
ಆದರೆ ಈಗ ‘ಆಪು’ ಜೊಂಡನ್ನು ತೆರವುಗೊಳಿಸಿ ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಲಾಗಿದ್ದು ನದಿಯ ಸಂಪೂರ್ಣ ಚಿತ್ರಣ ಬದಲಾಗಿದೆ. ಇಂಥ ಒಂದು ಅಭೂತಪೂರ್ವ ಕಾರ್ಯದ ಹಿಂದಿರುವ ಶಕ್ತಿ ನದಿಯ ಅಂಚಿನಲ್ಲೇ ಆಯುರ್ವೇದ ಆಸ್ಪತ್ರೆ ನಡೆಸುತ್ತಿದ್ದ ಡಾ. ಪೂರ್ಣಿಮಾ ಗೌರೋಜಿ. ಮಲಪ್ರಭಾ ನದಿಗೆ ಜೀವಕಳೆ ನೀಡುವುದಕ್ಕಾಗಿ ಡಾ.ಪೂರ್ಣಿಮಾ ಅವರು ಕಚೇರಿಗಳಿಂದ ಕಚೇರಿಗಳಿಗೆ ಅಲೆದಾಡಿದರು, ಸರ್ಕಾರದ ಮಟ್ಟದಲ್ಲಿ ಹೋರಾಡಿದರು. ಹೈಕೋರ್ಟ್ ಮೆಟ್ಟಿಲನ್ನೂ ಏರಿ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನೂ ದಾಖಲಿಸಿದ್ದರು.
ಇವರೂ ಸೇರಿದಂತೆ ಹಲವರ ಹೋರಾಟದ ಫಲ ಎನ್ನುವಂತೆ, ರಾಮದುರ್ಗದಲ್ಲಿ ಮಲಪ್ರಭೆಯ 4ಕಿ.ಮೀ.ನಷ್ಟು ನದಿಪಾತ್ರಕ್ಕೆ ಪುನಶ್ಚೇತನ ನೀಡುವ ಕಾರ್ಯ ಆರಂಭವಾಗಿದೆ. ಶಾಸಕ ಅಶೋಕ ಪಟ್ಟಣ ಅವರು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದು, ಹೂಳು ತೆರವು ಕಾರ್ಯ ಪ್ರಗತಿಯಲ್ಲಿದೆ.
ಮಲಪ್ರಭೆ ಕುರಿತು
___________
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿಯಲ್ಲಿ ಹುಟ್ಟುವ ಮಲಪ್ರಭೆ, ಸುಮಾರು 160 ಕಿ.ಮೀ. ಹರಿದು ಕೂಡಲಸಂಗಮದಲ್ಲಿ ಕೃಷ್ಣಾ ನದಿಯಲ್ಲಿ ಲೀನವಾಗುತ್ತದೆ. 1972ರಲ್ಲಿ ಸವದತ್ತಿ ತಾಲ್ಲೂಕಿನ ನವಿಲುತೀರ್ಥದ ಬಳಿ ಅಣೆಕಟ್ಟೆ ಕಟ್ಟಿ 40 ಟಿಎಂಸಿ ಅಡಿ ನೀರು ಸಂಗ್ರಹಿಸಲು ಶುರು ಮಾಡಿದ ಮೇಲೆ ಕೆಳಹಂತದ ಗ್ರಾಮಗಳಲ್ಲಿ ನೀರಿನ ಕೊರತೆ ಶುರುವಾಯಿತು.
ನದಿಪಾತ್ರದ ಒತ್ತುವರಿ
______________
ಹುಬ್ಬಳ್ಳಿ– ಧಾರವಾಡ ಅವಳಿ ನಗರಗಳಿಗೆ ಇದೇ ಅಣೆಕಟ್ಟೆಯಿಂದ ಕುಡಿಯುವ ನೀರು ಪೂರೈಸುವ ಯೋಜನೆ ಹಾಕಿಕೊಳ್ಳುತ್ತಿದ್ದಂತೆಯೇ ನದಿಯ ಕೆಳಭಾಗದಲ್ಲಿ ನೀರಿನ ಹರಿವು ಕಡಿಮೆಯಾಯಿತು. ಇದರಿಂದ, ಕ್ರಮೇಣವಾಗಿ ಇಲ್ಲಿ ನದಿಪಾತ್ರದ ಒತ್ತುವರಿಯೂ ನಡೆಯುತ್ತಾ ಬಂದಿದ್ದು, ಹೋರಾಟಗಾರರ ಹಾಗೂ ಪರಿಸರಪ್ರೇಮಿಗಳ ಆತಂಕಕ್ಕೆ ಕಾರಣವಾಯಿತು. ಆಗ ಹೋರಾಟಕ್ಕೆ ಶುರು ಮಾಡಿದವರು ಡಾ.ಪೂರ್ಣಿಮಾ ಗೌರೋಜಿ. ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣವು ಮಲಪ್ರಭಾ ನದಿ ದಂಡೆ ಮೇಲಿದೆ. ಈ ತಾಲ್ಲೂಕಿನ ಜಕಬಾಳ ಗ್ರಾಮದಿಂದ ಸಂಗಳ ಗ್ರಾಮದವರೆಗೂ ಸುಮಾರು 40 ಕಿ.ಮೀ.ನಷ್ಟು ಮಲಪ್ರಭಾ ನದಿಪಾತ್ರವಿದೆ. ನದಿಯ ಪಾತ್ರವನ್ನು ಅಕ್ಕಪಕ್ಕದ ರೈತರು ದಿನೇದಿನೇ ಒತ್ತುವರಿ ಮಾಡಿಕೊಂಡಿದ್ದರಿಂದ ನದಿಪಾತ್ರವೇ ಕಿರಿದಾಗಿ ಹೋಗಿತ್ತು. 1993–1994 ರಲ್ಲಿ ಇಲ್ಲಿನ ನದಿಯಲ್ಲಿ 24 ಸಾವಿರ ಕ್ಯುಸೆಕ್ ನೀರು ಹರಿದಾಗ ಪ್ರವಾಹ ಉಂಟಾಗಿ ಹಾಲೋಳ್ಳಿ, ಸುನ್ನಾಳ, ತುರನೂರ, ರಂಕಲಕೊಪ್ಪ, ರಾಮದುರ್ಗ ಪಟ್ಟಣ, ಕಿಲುಬನೂರು, ಹಲಗತ್ತಿ, ಘಟಕನೂರು, ಕೊಳಚೆ, ಹುಲಿಗೊಪ್ಪ ಮತ್ತು ಗೊಣ್ಣಾಗರ ಮೊದಲಾದ ಗ್ರಾಮಗಳ ಗ್ರಾಮಠಾಣಾ ಹಾಗೂ ಜಮೀನುಗಳಿಗೆ ನೀರು ನುಗ್ಗಿ ಅನೇಕ ಸಮಸ್ಯೆ ತಂದೊಡ್ಡಿದ್ದವು.
2005ರಲ್ಲಿ ನವಿಲುತೀರ್ಥದಲ್ಲಿರುವ ಮಲಪ್ರಭಾ ಜಲಾಶಯ ತುಂಬಿ 18 ಸಾವಿರ ಕ್ಯುಸೆಕ್‌ನಷ್ಟು ನೀರನ್ನು ನದಿಗೆ ಬಿಡಲಾಗಿತ್ತು. ಆಗ, ದೊಡ್ಡ ಪ್ರಮಾಣದಲ್ಲಿ ಬಂದ ನೀರು ಹರಿಯಲು ನದಿಯಲ್ಲಿ ಜಾಗವಿಲ್ಲದೇ ಗ್ರಾಮಗಳಿಗೆ ನೀರು ನುಗ್ಗಿ ತೊಂದರೆಯಾಗಿತ್ತು. ಸೇತುವೆ ಮುಳುಗಿದ್ದರಿಂದ ಪಟ್ಟಣದ ಸಂಪರ್ಕ ಕಡಿದು ಹೋಗಿತ್ತು. ಅಸ್ತಿ ಪಾಸ್ತಿ ಹಾನಿ ಕೂಡ ಸಂಭವಿಸಿತ್ತು
ಶಾಸಕರ ಪ್ರಯತ್ನ
ಒತ್ತುವರಿ ಹಾಗೂ ತ್ಯಾಜ್ಯ ತೆರವುಗೊಳಿಸಿದರೆ, ಪ್ರವಾಹ ಉಂಟಾಗುವುದನ್ನು ಹಾಗೂ ನೀರು ಜನವಸತಿಗೆ ನುಗ್ಗುವುದನ್ನು ತಡೆಯಬಹುದು ಹಾಗೂ ಎರಡೂ ಬದಿ ಕಟ್ಟೆ ಕಟ್ಟುವುದರಿಂದ (ಕಲ್ಲಿನಿಂದ ಪಿಚ್ಚಿಂಗ್ ಕಾಮಗಾರಿ) ನದಿಗೆ ಹೊಸ ರೂಪ ನೀಡಿದಂತಾಗುತ್ತದೆ ಎಂದುಕೊಂಡ ಸ್ಥಳೀಯ ಶಾಸಕ ಅಶೋಕ ಪಟ್ಟಣ ಅವರ ನೇತೃತ್ವದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಪ್ರಸ್ತಾವ ಸಲ್ಲಿಸಿದ್ದರು. ಇದರ ಫಲವಾಗಿ ಸರ್ಕಾರವು ಈ ಮಹತ್ವದ ಕಾಮಗಾರಿಗೆ ಅನುಮೋದನೆ ನೀಡಿದ್ದು, ಕೆಲಸ ಈಗಾಗಲೇ ಆರಂಭಗೊಂಡಿದೆ.
‘ಕಾಮಗಾರಿ ಪೂರ್ಣಗೊಂಡ ನಂತರ ನದಿಯಲ್ಲಿ ನೀರು ಸರಾಗವಾಗಿ ಹರಿಯುತ್ತದೆ. ಒಂದು ವೇಳೆ ನದಿಗೆ ಹೆಚ್ಚಿನ ನೀರು ಬಿಟ್ಟರೂ, ರಾಮದುರ್ಗ ಸುತ್ತಮುತ್ತಲಿನ ಕೆಲ ಹಳ್ಳಿಗಳು ಪ್ರವಾಹಪೀಡಿತವಾಗುವ ಆತಂಕ ಇರುವುದಿಲ್ಲ’ ಎನ್ನುತ್ತಾರೆ ನೀರಾವರಿ ನಿಗಮದ ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಾಣ ಉಪವಿಭಾಗ–6ರ ಅಧಿಕಾರಿಗಳು. ನವೆಂಬರ್‌ನಲ್ಲಿ ಕಾಮಗಾರಿ ಆರಂಭವಾಗಿದ್ದು ರಾಮದುರ್ಗ ಪಟ್ಟಣದ ಕೆಳಸೇತುವೆಯಿಂದ ಮೇಲಕ್ಕೆ ಹಾಗೂ ಕೆಳಕ್ಕೆ ತಲಾ ಎರಡು ಕಿ.ಮೀ.ನಷ್ಟು ನದಿಪಾತ್ರದಲ್ಲಿ ಹೂಳು, ಜೊಂಡು ತೆರವು ಕಾರ್ಯಾಚರಣೆ ನಡೆದಿದೆ.
‘ಸರ್ಕಾರದಿಂದ ರೂ.7 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಕಾಮಗಾರಿ ಮುಗಿದ ನಂತರ ಮತ್ತೊಮ್ಮೆ ಯಾರೂ ಒತ್ತುವರಿ ಮಾಡಿಕೊಳ್ಳದಿರಲೆಂದು ಕಲ್ಲುಗಳನ್ನು ಬಳಸಿ ‘ಪಿಚ್ಚಿಂಗ್’ ಕಾಮಗಾರಿ (ಕಟ್ಟೆ ಕಟ್ಟುವುದು) ನಡೆಸಲಾಗುತ್ತಿದೆ. ಮುಂದಿನ ಹಂತದಲ್ಲಿ 25ರಿಂದ 30 ಕಿ.ಮೀ. ನದಿ ಪಾತ್ರದಲ್ಲೂ ಇಂಥದ್ದೇ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ’ ಎನ್ನುತ್ತಾರೆ ಶಾಸಕ ಅಶೋಕ ಪಟ್ಟಣ.
ಗತವೈಭವದ ಮರಳುವಿಕೆಗೆ ಪ್ರಯತ್ನ
ಮೊದಲ ಹಂತದಲ್ಲಿನ ಕಾಮಗಾರಿ ಮುಂಗಾರು ಅರಂಭವಾಗುವವರೆಗೆ ಪೂರ್ಣಗೊಳ್ಳಲಿದೆ. ರಾಮದುರ್ಗದ ಹಳೆ ಸೇತುವೆಯಿಂದ ಹೊಸ ಸೇತುವೆವರೆಗೆ ಬೋಟಿಂಗ್ ವ್ಯವಸ್ಥೆಯನ್ನೂ ಮಾಡಬೇಕು ಎಂದು ಯೋಜಿಸಲಾಗಿದೆ. ನದಿಪಾತ್ರದಲ್ಲಿ ಅಂತರ್ಜಲ ವೃದ್ಧಿಯಾಗಿ ಕೃಷಿಗೆ ಅನುಕೂಲವಾಗುತ್ತದೆ ಎನ್ನುವ ವಿಶ್ವಾಸ ಅವರದು. ‘ಪ್ರಸ್ತುತ ಈ ಕಾಮಗಾರಿ ಜೂನ್ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ’ ಎನ್ನುತ್ತಾರೆ ನೀರಾವರಿ ನಿಗಮದ ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಾಣ ಉಪವಿಭಾಗ–6ರ ಕಿರಿಯ ಎಂಜಿನಿಯರ್ ಮಲ್ಲಿಕಾರ್ಜುನ ಡಂಬಳಕರ.
ಮುಂದಿನ ಹಂತದಲ್ಲಿ ಸುನ್ನಾಳದಿಂದ ಕೊಳಚಿ ಗ್ರಾಮದ ಚಿಕ್ಕ ಅಣೆಕಟ್ಟೆಯವರೆಗೂ ಹೂಳು ತೆಗೆಸಿ, ಒತ್ತುವರಿ ತೆರವುಗೊಳಿಸಿ, ಪಿಚ್ಚಿಂಗ್ ಕಾಮಗಾರಿ ಮಾಡಿಸಲು ಯೋಜಿಸಲಾಗಿದೆ. ಇಲ್ಲಿ ಸರಾಸರಿ 10–25 ಮೀಟರ್‌ಗೆ ಕಿರಿದಾಗಿದ್ದ ನದಿಪಾತ್ರವನ್ನು ಸರಾಸರಿ 40–110 ಮೀಟರ್‌ವರೆಗೆ ವಿಸ್ತರಿಸಲಾಗುತ್ತಿದೆ. ಕೇವಲ 9ಸಾವಿರ ಕ್ಯುಸೆಕ್‌ನಷ್ಟು ನೀರು ಹರಿಯಬಹುದಾದ ಸಾಮರ್ಥ್ಯಕ್ಕೆ ಇಳಿದಿದ್ದ ಮಲಪ್ರಭೆಯನ್ನು 18ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರು ಹರಿಯುವ ಸಾಮರ್ಥ್ಯಕ್ಕೆ ಹಿಗ್ಗಿಸಲಾಗುತ್ತಿದೆ. ಹೂಳೆತ್ತುವ ಸ್ಥಳದಿಂದ ರೈತರು ಫಲವತ್ತಾದ ಕಪ್ಪುಮಣ್ಣನ್ನು ತುಂಬಿಸಿಕೊಂಡು ಹೊಲ–ಜಮೀನುಗಳಿಗೆ ಸುರಿದುಕೊಳ್ಳುತ್ತಿದ್ದಾರೆ. ಇದರಿಂದ ತೆರವು ಕಾರ್ಯವೂ ಚುರುಕು ಪಡೆಯುತ್ತಿದ್ದು ರೈತರ ಹೊಲಗಳಿಗೂ ಉತ್ತಮ ಮಣ್ಣು ದೊರಕಿದೆ. ರಾಮದುರ್ಗ ತಾಲ್ಲೂಕು ಹಾಗೂ ಬಾಗಲಕೋಟೆ ಜಿಲ್ಲೆಯ ಹುನಗುಂದ ಜನರಿಗೆ ಕುಡಿಯುವ ನೀರು ಪೂರೈಕೆಗೆ ಸವದತ್ತಿಯ ನವಿಲುತೀರ್ಥ ಅಣೆಕಟ್ಟೆಯ ರೇಣುಕಾ ಜಲಾಶಯದಿಂದ ಕೆಲವು ದಿನಗಳ ಹಿಂದೆ ನೀರು ಬಿಡಲಾಗಿದೆ. ಇದರಿಂದ, ಹೂಳೆತ್ತಿರುವ ಜಾಗದಲ್ಲಿ ಮಲಪ್ರಭಾ ನದಿಯು ಹರಿಯುತ್ತಿರುವ ನೋಟ ಗತವೈಭವವನ್ನು ನೆನಪಿಸುತ್ತಿದೆ.
ಉಳಿದ ಭಾಗದ ಸಮಸ್ಯೆ
________________
ರಾಮದುರ್ಗ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಮಲಪ್ರಭಾ ನದಿ ಪಾತ್ರವನ್ನೇನೋ ಸ್ವಚ್ಛಗೊಳಿಸಲಾಗುತ್ತಿದೆ. ನದಿಯ ಉಳಿದ ಭಾಗದ ಚಿತ್ರಣವನ್ನು ಬದಲಾಯಿಸುವುದು ಯಾವಾಗ ಎನ್ನುವುದೇ ಈಗಿರುವ ಪ್ರಶ್ನೆ!
40 ರಿಂದ 110 ಮೀಟರ್ ನಿರ್ಮಾಣಗೊಳ್ಳಲಿರುವ ನದಿಪಾತ್ರದ ವಿಸ್ತೀರ್ಣ
18 ಸಾವಿರ ಕ್ಯುಸೆಕ್ – ನದಿಯಲ್ಲಿ ಇಷ್ಟು ನೀರು ಸರಾಗವಾಗಿ ಹರಿಯಬಲ್ಲದು
ನದಿಯ ವೈಭವ ಹೀಗಿತ್ತು
1980ರ ದಶಕಕ್ಕೂ ಮೊದಲು ಈ ನದಿಯ ವೈಭವ ವರ್ಣಾತೀತವಾದುದು. ಈ ಹೊಳೆ ದಂಡೆಯ ಬೆಳ್ಳಗಿನ ಉಸುಕಿನಲ್ಲಿ ಹೊರಳಾಡಿದ್ದು, ಬೆಳದಿಂಗಳ ರಾತ್ರಿಯಲ್ಲಿ ಹಲಗತ್ತಿಯ ಕೆನೆ ಮೊಸರಿನೊಂದಿಗೆ ಅವಲಕ್ಕಿಯನ್ನು ಉಳ್ಳಾಗಡ್ಡಿ ಹಸಿರು ಮೆಣಸಿನಕಾಯಿ ಬೆರೆಸಿ ಹೊಟ್ಟೆ ಬಿರಿಯುವಂತೆ ಉಂಡಿದ್ದು ಈಗಲೂ ಕಣ್ಮುಂದೆ ಕಟ್ಟಿದೆ; ಬಾಯಲ್ಲಿ ನೀರೂರಿಸುತ್ತದೆ. ನಾವು ಈಜು ಕಲಿತದ್ದೇ ಈ ನದಿಯಲ್ಲಿ. 1980ರ ದಶಕದ ನಂತರ ಇದರ ರೂಪವೇ ಬದಲಾಗುತ್ತಾ ಬಂತು. ನದಿಗೆ ಕಾಯಕಲ್ಪ ನೀಡುವ ಕಾಳಜಿಗೆ ಸ್ಥಳೀಯ ರಾಜಕಾರಣವೇ ಅಡ್ಡಿಯಾಯಿತು ಎನ್ನಬಹುದು.:ಅಶೋಕ ಚಂದರಗಿ, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ರ ಅನುಭವ.03/21/4780 ಮಲಪ್ರಭಾಗೆ ಹೊಸ ಪ್ರಭೆ;ಎಂ.;ಮಹೇಶ;21 Mar,2017 ನದಿಯನ್ನು ಮುಂದುವರಿಸಿದರು.
ಯಾತ್ರಾಸ್ಥಳಗಳು
ರೇಣುಕಾ ಜಲಾಶಯಕ್ಕೆ ಸುಮಾರು ೧೫ ಕಿಮೀ ದೂರದಲ್ಲಿ ಹೆಸರಾಂತ ಎಲ್ಲಮ್ಮನ ಗುಡಿ ಇರುತ್ತದೆ. ಕರ್ನಾಟಕ ಹಾಗು ಮಹಾರಾಷ್ಟ್ರದ ಲಕ್ಷಾಂತರ
ಜನರು ಎಲ್ಲಮ್ಮ ದೇವಿಯ ಭಕ್ತರಿರುತ್ತಾರೆ. ಪ್ರತಿ ವರುಷ 'ಭಾರತ ಹುಣ್ಣಿಮೆ' ದಿನ'ಎಲ್ಲಮ್ಮನ ಜಾತ್ರೆ'ಯಾಗುತ್ತದೆ.
ಹತ್ತಿರದಲ್ಲಿಯೆ ಸೊಗಲ ಗ್ರಾಮವಿದ್ದು ಪುರಾತನ'ಸೋಮೇಶ್ವರ ಗುಡಿ' ಯಿಂದಾಗಿ ಹಾಗು ಮನೋಹರವಾದ, ಚಿಕ್ಕ ಜಲಪಾತಕ್ಕಾಗಿ ಆಕರ್ಷಕವಾದ ಯಾತ್ರಾಸ್ಥಳ ಹಾಗು ಪ್ರವಾಸಿ ತಾಣವಾಗಿದೆ.