ಭಾರತದಾದ್ಯಂತ ಆಚರಿಸುವ ಮಕರ ಸಂಕ್ರಾಂತಿ ಹಬ್ಬವನ್ನು ಪಂಜಾಬಿನಲ್ಲಿ ಮಾಘಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಪಂಜಾಬಿ ಕ್ಯಾಲೆಂಡರಿನ ಅನ್ವಯ ಮಾಘ ಮಾಸದ ಮೊದಲ ದಿನವನ್ನು ಮಾಘಿ ಎಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಹರ್ಯಾಣ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ. ಮಾಘಿಯ ದಿನವನ್ನು ಹೊಸಪೈರನ್ನು ಪೂಜಿಸಿ, ಸಂಭ್ರಮದ ಆಟೋಟಗಳಲ್ಲಿ ಕಳೆಯಲಾಗುತ್ತದೆ
ಮಾಘಿಯ ದಿನದಂದು ಅಕ್ಕಿ ಮತ್ತು ಕಬ್ಬಿನ ರಸವನ್ನು ಬೇಯಿಸಿ ತಯಾರಿಸುವ ಖೀರು ವಿಶೇಷವಾದ ಸಿಹಿ ತಿಂಡಿ. ಪಂಜಾಬಿನಲ್ಲಿ "ಪೋಹ್ ರಿದ್ದಿ, ಮಾಘ್ ಖಡಿ" ಎಂಬ ಮಾತಿದೆ. ಅಂದರೆ ಹಿಂದಿನ ತಿಂಗಳಾದ ಪೋಹ್ ನ ಕೊನೆಯ ದಿನ ಬೇಯಿಸಲಾಗುವ ಖೀರನ್ನು ಮಾಘದ ಮೊದಲ ದಿನ ಸೇವಿಸಲಾಗುತ್ತದೆ. ಪಂಜಾಬಿನ ಕೆಲವು ಭಾಗಗಳಲ್ಲಿ ಧವಸ ಧಾನ್ಯಗಳಿಂದ ಮಾಡಿದ ಖಿಚಡಿಯನ್ನೂ, ಕಬ್ಬನ್ನೂ ಸೇವಿಸಲಾಗುತ್ತದೆ. ಎಳ್ಳಿನಿಂದ ಮಾಡಿದ ಖಾದ್ಯಗಳನ್ನು ಸೇವಿಸುವ ಸಂಪ್ರದಾಯವೂ ಇದೆ.
ಪಂಜಾಬಿನ ಕೆಲವು ಭಾಗಗಳಲ್ಲಿ ಹುಡುಗಿಯರು ವಯಸ್ಸಾದ ಮಹಿಳೆಯರಿಂದ ಕೊಡುಗೆಗಳನ್ನು ಕೇಳುತ್ತಾರೆ. ಮಾಘಿಯ ದಿನ ಬೆಳಗ್ಗೆ ನಡೆಯುವ ಈ ಆಚರಣೆಯನ್ನು ಮೋಹ್ - ಮಾಹಿ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಹಾಡಲಾಗುವ ಹಾಡು ಇಂತಿದೆ
ಮೋಹ್ ಮಾಹಿ ದೇಖೇ ಜಾ - ದೇಖೇ ಜಾ
ದರ್ಹಿ ಫೂಲ್ ಪುವಾ ಕೆ ಜಾ - ಪೂವಾ ಕೆ ಜಾ
ದರ್ಹಿ ತೇರಿ ಹರಿ ಭರಿ - ಹರಿ ಭರಿ
ಫುಲಾ ದೇ ನಾಲ್ ಜರಿ ಭರಿ - ಜರಿ ಭರಿ
ಜೆ ನೆ ಮೋಹ್ ಮಾಹಿ ದಿತ್ತಿ ಸು
ದುಹಾತರಹ್ ದರ್ಹಿ ಪುಟ್ಟು ಸು
ನೀನು ಹೊರಡುವುದಕ್ಕೆ ಮೊದಲು ನನಗೆ ಮೋಹ್ ಮಾಹಿಯನ್ನು ಕೊಡು
ನಿನ್ನ ಗಡ್ಡದಲ್ಲಿ ಹೂಗಳನ್ನು ಮುಡಿ
ನಿನ್ನ ಗಡ್ಡ ಸುಗಂಧಭರಿತವಾಗಿದೆ
ಹೂಗಳಿಂದ ತುಂಬಿ
ನೀನು ನನಗೆ ಮೋಹ್ ಮಾಹಿಯನ್ನು ಕೊಡದಿದ್ದರೆ
ನಾ ನಿನ್ನ ಗಡ್ಡವನ್ನು ಎಳೆದುಬಿಡುತ್ತೇನೆ
(ಇಲ್ಲಿ ಗಡ್ಡ ಎನ್ನುವುದು ಮತ್ತೊಬ್ಬ ಮಹಿಳೆಯ ಮುಖವೆಂಬ ಅರ್ಥ ಕೊಡುತ್ತದೆ)
ಮಾಘಿಯ ದಿನ ಪಂಜಾಬಿ ಕಬಡ್ಡಿ, ಕುಸ್ತಿ ಮತ್ತಿತರ ಗ್ರಾಮೀಣ ಆಟಗಳನ್ನು ಆಡಲಾಗುತ್ತದೆ.
ಹಿಂದೂಗಳು ಮಾಘಿಯ ದಿನದಂದು ಗಂಗೆ ಮುಂತಾದ ನದಿಗಳಲ್ಲಿ ಸ್ನಾನ ಮಾಡಿ ದೇಗುಲಗಳಿಗೆ ಭೇಟಿ ಕೊಡುತ್ತಾರೆ. ಮಾಘಿಯ ದಿನವನ್ನು ದಾನಧರ್ಮಗಳನ್ನ ಮತ್ತು ಜಪತಪಗಳಲ್ಲಿ ಕಳೆಯುತ್ತಾರೆ
ಗುರು ಅಮರದಾಸ್ ಜೀ ಅವರಿಂದ ಸಿಖ್ಖರ ಆಚರಣೆಗಾಗಿ ಆರಿಸಲ್ಪಟ್ಟ ಮೂರು ಹಬ್ಬಗಳಲ್ಲಿ ಮಾಘಿಯೂ ಒಂದು. ಉಳಿದವೆಂದರೆ ಭೈಸಾಖಿ ಮತ್ತು ದೀಪಾವಳಿ.
ಸಿಖ್ಕರು ಮಾಘಿಯ ಮೊದಲ ದಿನದಂದು ಮೃತ ಗುರುದ್ವಾರಗಳಿಗೆ ಭೇಟಿ ನೀಡುತ್ತಾರೆ. ಗುರು ಗೋವಿಂದ ಸಿಂಗರನ್ನು ಕೊಲ್ಲಲೋಸುಗ ಬರುತ್ತಿದ್ದ ಸೇನೆಯನ್ನು ಕಿರಾಣೆ ಡಿ ದಾಬ್ ಎಂಬ ಸರೋವರದ ಬಳಿ ನಡೆದ ತಡೆದ ನಲವತ್ತು ಜನ ಆ ಕಾಳಗದಲ್ಲಿ ಮೃತರಾಗುತ್ತಾರೆ. ೨೯, ಡಿಸೆಂಬರ್ ೧೭೦೫ ರ ಆ ದಿನ ಪೋಹದ ಮೂವತ್ತನೇ ದಿನ. ಅವರ ಅಂತಿಮ ಸಂಸ್ಕಾರವನ್ನು ಮಾಘಿಯ ಮೊದಲ ದಿನದಂದು ನೆರವೇರಿಸಲಾಗುತ್ತದೆ.ಹಾಗಾಗಿ ಮಾಘಿಯ ದಿನ ಸಿಖ್ಖರಿಗೆ ಭಾವನಾತ್ಮಕವಾಗಿಯೂ ಮುಖ್ಯ. ಆ ದಿನದಂದು ಸಿಖ್ಖರು ಪವಿತ್ರ ಜಲದಲ್ಲಿ ಮುಳುಗೇಳುತ್ತಾರೆ.