ಮಾಳ್ವಿ | |
---|---|
ತಳಿಯ ಹೆಸರು | ಮಾಳ್ವಿ |
ಮೂಲ | ಮಧ್ಯಭಾರತದ ಮಾಳ್ವಾ ಪ್ರಾಂತ್ಯ |
ವಿಭಾಗ | ಕೆಲಸಗಾರ ತಳಿ |
ಕೊಂಬು | ದಪ್ಪನೆಯ ಮುಂದೆ ಬಾಗಿದ ಕೋಡು |
ಕಾಲುಗಳು | ಗಿಡ್ಡ ಕಾಲುಗಳು |
ಕಿವಿ | ಜೋಲಾಡದ ಸಣ್ಣ ಕಿವಿಗಳು |
ಮಾಳ್ವಿಯ ಮೂಲ ಮಧ್ಯಭಾರತದ ಮಾಳ್ವಾ ಪ್ರಾಂತ್ಯ. ಪಕ್ಕಾ ಕೆಲಸಗಾರ ತಳಿ ಮಾಳ್ವಿ. ದೊಡ್ಡ ಭೌಗೋಳಿಕ ಪ್ರದೇಶದಲ್ಲಿ ಹರಡಿಕೊಂಡಿರುವ ಮಾಳ್ವಿ, ರಾಜಸ್ಥಾನದ ಆಸುಪಾಸಿನಲ್ಲಿ ದೊಡ್ಡಗಾತ್ರದ ಬಲಿಷ್ಠ ತಳಿಯಾದರೆ, ಮಧ್ಯಪ್ರದೇಶದಲ್ಲಿ ಕುಳ್ಳ ಆದರೆ ರಜಪುತಾನದ ಮಾಳ್ವಿಯ ಹಾಗೇ ಶಕ್ತಿಯುತ. ಮುಂಬಯಿ-ಹೈದರಾಬಾದ್ ಕೆಲಪ್ರಾಂತ್ಯಗಳಲಿ ಅತ್ಯಂತ ಜನಪ್ರಿಯವಾಗಿರುವ ಮಾಳ್ವಿ ಇಲ್ಲಿ ಮಧ್ಯಮ ಗಾತ್ರದ ಉಳುಮೆಗೆ ಹಾಗೂ ಗಾಡಿ ಎತ್ತುಗಳಾಗಿ ಉಪಯೋಗಿಸಲ್ಪಡುತ್ತವೆ. ಮಾಳ್ವಿಗಳು ಚುರುಕಿನ ನಡಿಗೆಗೆ ಪ್ರಸಿದ್ಧ. ಎತ್ತುಗಳು ಕಪ್ಪುಮಣ್ಣಿನಲ್ಲಿ ಸುಲಭವಾಗಿ ಹೂಳುವುದರಿಂದ, ಸಣ್ಣ ಮತ್ತು ಮಧ್ಯಮ ರೈತರಿಗೆ ವರದಾನ.
ಇವುಗಳ ಆಕಾರದಲ್ಲಿ ಸ್ವಲ್ಪ ಸ್ವಲ್ಪ ವ್ಯತ್ಯಾಸ ಪ್ರದೇಶಗಳಿಗನುಗುಣವಾಗಿ ಇದೆಯಾದರೂ ಸಾಮಾನ್ಯವಾಗಿ ಇವು ಕುಳ್ಳನೆಯ ಆದರೆ ಬಲಿಷ್ಠವಾದ ದೇಹದವುಗಳು. ನೇರ ಬೆನ್ನು, ಗಿಡ್ಡ ಕಾಲುಗಳು, ಜೋಲಾಡದ ಸಣ್ಣ ಕಿವಿಗಳು, ದಪ್ಪನೆಯ ಮುಂದೆ ಬಾಗಿದ ಕೋಡು, ಮೊಣಕಾಲು ಮುಟ್ಟುವ ಬಾಲ ಇವು ಮಾಳ್ವಿಯ ಬಗ್ಗೆ ಹೇಳಬಹುದಾದ ದೈಹಿಕ ವೈಶಿಷ್ಟ್ಯಗಳು. ಬಣ್ಣ ಸಾಧಾರಣವಾಗಿ ಬೂದು. ಕುತ್ತಿಗೆ, ಭುಜ, ಡುಬ್ಬಗಳ ಮೇಲಿನ ಕಪ್ಪು ಬಣ್ಣ ಇವುಗಳಿಗೆ ಸೃಷ್ಟಿಯಿತ್ತ ದೃಷ್ಟಿಬೊಟ್ಟುಗಳು. ಇವುಗಳ ಹಾಲು ನೀಡುವ ಸಾಮರ್ಥ್ಯ ಕಡಿಮೆಯದರೂ ಕೆಲವು ಆಯ್ದ ಹಸುಗಳು ೨೫೦೦ ಪೌಂಡ್‌ಗಳಷ್ಟು ಹಾಲು ಒಂದು ಕರಾವಿಗೆ ನೀಡಿದ ಉದಾಹರಣೆಗಳಿವೆ.
'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.