ಮಿಸಳ್ (ಅಂದರೆ ಮರಾಠಿಯಲ್ಲಿ "ಮಿಶ್ರಣ") ಮಹಾರಾಷ್ಟ್ರದಲ್ಲಿ ಬಹಳ ಜನಪ್ರಿಯವಾದ ಖಾದ್ಯ. ಈ ಖಾದ್ಯವನ್ನು ಬಹುತೇಕವಾಗಿ ಬೆಳಿಗ್ಗೆ ತಿಂಡಿಯಲ್ಲಿ ಅಥವಾ ಮಧ್ಯಾಹ್ನದ ಲಘು ಆಹಾರವಾಗಿ, ಅಪರೂಪವಾಗಿ ಏಕ ಭಕ್ಷ್ಯ ಊಟವಾಗಿ, ಹಲವು ವೇಳೆ ಮಿಸಳ್ ಪಾವ್‍ನ ಭಾಗವಾಗಿ ತಿನ್ನಲಾಗುತ್ತದೆ. ತಯಾರಿಸಲು ಸುಲಭವಾಗಿರುವ, ತುಲನಾತ್ಮಕವಾಗಿ ಅಗ್ಗವಾಗಿರುವ ಮತ್ತು ಉತ್ತಮ ಪೌಷ್ಟಿಕ ಮೌಲ್ಯವನ್ನು ಹೊಂದಿರುವ ಇದು ಅಚ್ಚುಮೆಚ್ಚಿನ ಖಾದ್ಯವಾಗಿ ಉಳಿದುಕೊಂಡಿದೆ. ಮಿಸಳ್‍ನ ರುಚಿ ಸೌಮ್ಯದಿಂದ ಅತಿ ಖಾರದವರೆಗೆ ಬದಲಾಗುತ್ತದೆ. ಮತ್ತು ಜೊತೆಗೆ ಅನೇಕ ವೈವಿಧ್ಯಗಳೂ ಇವೆ. ಮಿಸಳ್ ಒಂದು ಜನಪ್ರಿಯ ಬೀದಿ ಆಹಾರವೂ ಆಗಿದೆ. ಈ ಖಾದ್ಯವನ್ನು ಯಾವಾಗಲೂ ಬಿಸಿಯಾಗಿಯೇ ಬಡಿಸಲಾಗುತ್ತದೆ.
ಈ ಖಾದ್ಯ ಖಾಂದೇಶ್ ಹಾಗೂ ಪಶ್ಚಿಮ ಮಹಾರಾಷ್ಟ್ರದ ಗಡಿಯಿಂದ ಹುಟ್ಟಿಕೊಂಡಿದೆ. ಅಂದರೆ ಮಹಾರಾಷ್ಟ್ರದ ಇಂದಿನ ನಾಸಿಕ್ ಹಾಗೂ ಅಹ್ಮದ್‍ನಗರ್ ಜಿಲ್ಲೆಗಳು.
ತರ್ರಿ/ಕಾಟ್/ಸ್ಯಾಂಪಲ್/ರಸ್ಸಾ, ಒಂದು ಖಾರದ ರಸ. ಇದು ಈ ಖಾದ್ಯದ ಜೀವಾಳವಾಗಿದೆ ಮತ್ತು ಇದನ್ನು ಸಾಮಾನ್ಯವಾಗಿ ಬಣ್ಣದಿಂದ ಗುರುತಿಸಲಾದ ಅನೇಕ ರೂಪಾಂತರಗಳಲ್ಲಿ ತಯಾರಿಸಲಾಗುತ್ತದೆ, ಉದಾ. "ಕಾಲಾ ರಸ್ಸಾ" (ಕಪ್ಪು), "ಲಾಲ್ ರಸ್ಸಾ" (ಕೆಂಪು), "ಹಿರ್ವಾ ರಸ್ಸಾ" (ಹಸಿರು) ಇತ್ಯಾದಿ. ತರ್ರಿಯ ಬಣ್ಣ ಅದರಲ್ಲಿ ಬಳಸಲಾದ ಪದಾರ್ಥಗಳು ಬಿಡುವ ಬಣ್ಣದಿಂದ ಬರುತ್ತದೆ ಮತ್ತು ಕೃತಕ ತಿನ್ನಲರ್ಹ ಆಹಾರದ ಬಣ್ಣಗಳಿಂದಲ್ಲ. ಹಾಗಾಗಿ ಹಸಿರು ತರ್ರಿಯನ್ನು ಮೆಣಸಿನಕಾಯಿ ಹಾಗೂ ಕೊತ್ತಂಬರಿಯಿಂದ ತಯಾರಿಸಲಾದರೆ ಕಪ್ಪು ತರ್ರಿಯನ್ನು ಮುಖ್ಯ ಪದಾರ್ಥಗಳಾಗಿ ಒಣವಾಗಿ ಹುರಿಯಲಾದ ಪಲಾವ್ ಎಲೆ ಹಾಗೂ ಕರಿಮೆಣಸಿನಿಂದ ತಯಾರಿಸಲಾಗುತ್ತದೆ. ನಿರೀಕ್ಷಿಸಿದಂತೆ ಕೆಂಪು ತರ್ರಿಯು ಅಚ್ಚಖಾರದ ಪುಡಿಯನ್ನು ಹೊಂದಿರುತ್ತದೆ.
ಆಲೂಗಡ್ಡೆ ಪಲ್ಯ (ಬೇಯಿಸಿದ, ಚೌಕವಾಗಿ ಕತ್ತರಿಸಿದ ಆಲೂಗಡ್ಡೆ, ಜೊತೆಗೆ ಮಸಾಲೆಗಳಾಗಿ ಅರಿಶಿನ, ಮೆಣಸಿನಕಾಯಿ, ಶುಂಠಿ ಹಾಗೂ ಸಾಸಿವೆ).
ಪದಾರ್ಥಗಳನ್ನು ಬಹು ಪದರ ಶೈಲಿಯಲ್ಲಿ ಹೊಂದಿಸಿ ಬಡಿಸಲಾಗುತ್ತದೆ.
ಬಡಿಸಲಾದ ಮೊದಲ ಪದಾರ್ಥವೆಂದರೆ ಮಡಿಕೆ ಕಾಳಿನ ಉಸಳಿ. ಉಸಳಿ ಎಂದರೆ ಟೊಮೇಟೊ ಹಾಗೂ ಈರುಳ್ಳಿಗಳೊಂದಿಗೆ ಬೇಯಿಸಲಾದ ಮೊಳಕೆ ಎಬ್ಬಿಸಿದ ಕಾಳುಗಳು. ಇದರ ಪೌಷ್ಟಿಕ ಮೌಲ್ಯ ಮೊಳಕೆ ಎಬ್ಬಿಸಿದ ಕಾಳುಗಳಿಂದ ಬರುತ್ತದೆ.
ಎರಡನೇ ಪದರವೆಂದರೆ ಉಸಳಿ ಮೇಲೆ ತೆಳುವಾಗಿ ಹರಡಲಾದ ಆಲೂಗಡ್ಡೆ ಪಲ್ಯ.
ಮೂರನೇ ಪದರವೆಂದರೆ ಆಲೂಗಡ್ಡೆ ಪಲ್ಯದ ಮೇಲೆ ತೆಳುವಾಗಿ ಹರಡಲಾದ ಚಿವ್ಡಾ.
ನಾಲ್ಕನೇ ಪದರವೆಂದರೆ ಈರುಳ್ಳಿ, ಟೊಮೇಟೊ, ಕೊತ್ತಂಬರಿ ಮತ್ತು ತೆಳ್ಳನೆಯ ಸೇವ್‍ನ ಮಿಶ್ರಣ.
ಬಟ್ಟಲನ್ನು ತುಂಬಿಸುವಷ್ಟು ತರ್ರಿ ಅಥವಾ ಕಾಟ್ ಅನ್ನು ಸೇರಿಸಲಾಗುತ್ತದೆ (ಹೆಚ್ಚಿನ ತರ್ರಿಯನ್ನು ಪ್ರತ್ಯೇಕ ಬಟ್ಟಲಲ್ಲಿ ನೀಡಲಾಗುತ್ತದೆ)
ಮಿಸಳ್ ಅನ್ನು ಮಿಸಳ್ ಪಾವ್ ಖಾದ್ಯದಲ್ಲಿ ಬ್ರೆಡ್ ತುಂಡಿನೊಂದಿಗೆ ಬಡಿಸಲಾಗುತ್ತದೆ.
"ಉಪವಾಸ್ ಮಿಸಳ್" ಎಂಬ ರೂಪಾಂತರವಿದೆ. ಇದನ್ನು ಧಾರ್ಮಿಕ ಉಪವಾಸದಲ್ಲಿರುವವರು ತಿನ್ನಬಹುದು, ಪ್ರಾತಿನಿಧಿಕವಾಗಿ ಗಣೇಶ ಚತುರ್ಥಿ. ಇದು ಆಲೂಗಡ್ಡೆ, ಸಬ್ಬಕ್ಕಿ, ಕಡಲೆಕಾಯಿ ಇತ್ಯಾದಿಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಹೊಂದಿರುತ್ತದೆ.
ಥಾನೆ ನಗರದಲ್ಲಿ ಮಾಮ್ಲೆದಾರ್ ಮಿಸಳ್ ಇದೆ, ಇದು ಸಾಮಾನ್ಯವಾಗಿ ಹೆಚ್ಚು ಖಾರವಾಗಿರುತ್ತದೆ..
ಮತ್ತೊಂದು ರೂಪವೆಂದರೆ ಪುನೇರಿ ಮಿಸಳ್. ಇದು ಅವಲಕ್ಕಿಯನ್ನು ಹೊಂದಿರುತ್ತದೆ.[೧][೨]
ಮಿಸಳ್‍ನ ಕೋಲ್ಹಾಪುರಿ ರೂಪ ಸಾಮಾನ್ಯವಾಗಿ ಹೆಚ್ಚು ಖಾರವಾಗಿರುತ್ತದೆ ಮತ್ತು ಅವಲಕ್ಕಿಯನ್ನು ಹೊಂದಿರುವುದಿಲ್ಲ. ಇದನ್ನು ಬ್ರೆಡ್‍ನ (ಪಾವ್ ಅಲ್ಲ) ದಪ್ಪನೆಯ ತುಂಡುಗಳೊಂದಿಗೆ ಬಡಿಸಲಾಗುತ್ತದೆ.
ನಾಸಿಕ್ ಪ್ರದೇಶದಲ್ಲಿ, ಮಿಸಳ್ ಅನ್ನು ಬಹುತೇಕವಾಗಿ ಕರಿದ ಹಪ್ಪಳದೊಂದಿಗೆ ಬಡಿಸಲಾಗುತ್ತದೆ.
ವ್ಯಾಪಕವಾಗಿ ತಿನ್ನಲಾದ ರೂಪಗಳಲ್ಲಿ ದಹಿ ಮಿಸಳ್ ಕೂಡ ಒಂದು. ಇದರಲ್ಲಿ ಖಾರದ ರುಚಿಯನ್ನು ಸರಿದೂಗಿಸಲು ಮೊಸರನ್ನು ಸೇರಿಸಲಾಗುತ್ತದೆ.
ಮಿಸಳ್ ಉದ್ಯಮದಲ್ಲಿ ಜೈನ್ ಮಿಸಳ್ ಮತ್ತೊಂದು ಹೊಸ ರೂಪವಾಗಿದೆ. ಇದು ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಹೊಂದಿರುವುದಿಲ್ಲ. ಮಡಿಕೆ ಕಾಳು ಕೂಡ ಮೊಳಕೆ ಎಬ್ಬಿಸಿರುವುದಿಲ್ಲ, ಕೇವಲ ನೆನೆಸಲಾಗಿರುತ್ತದೆ.