ಮುಂಡರಗಿ

ಮುಂಡರಗಿ

<div style="position:absolute;z-index:200;

top:ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"°".%; left:ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"°".%; height:0; width:0; margin:0; padding:0;">

ಮುಂಡರಗಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಗದಗ
ನಿರ್ದೇಶಾಂಕಗಳು "_N_75°54'0"_E_type:city 15°13'12"° N 75°54'0"° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ (2011)
 - ಸಾಂದ್ರತೆ
25000
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 582118
 - +
 - 
ಅಂತರ್ಜಾಲ ತಾಣ: www.mundargitown.gov.in

ಮುಂಡರಗಿ ಇದು ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ ಗದಗ ಜಿಲ್ಲೆಯ ಒಂದು ತಾಲೂಕು ಪಟ್ಟಣ. ಮುಂಡರಗಿಯು ಜಿಲ್ಲಾ ಕೇಂದ್ರವಾದ ಗದಗದಿಂದ 37 ಕಿಲೋ ಮೀಟರ್ ಹಾಗೂ ಕೊಪ್ಪಳ ಶಹರದಿಂದ 32 ಕಿಲೋ ಮೀಟರ್ ದೂರವಿದೆ. ಮುಂಡರಗಿ ಈ ಹೆಸರು ಇಲ್ಲಿರುವ ಮುರುಡಗಿರಿ ಎಂದರೆ ಶಿವನ ಬೆಟ್ಟದಿಂದ ಪಡೆದುಕೊಂಡಿದೆ. ತುಂಗಭದ್ರ ನದಿಯು ಮುಂಡರಗಿ ಪಟ್ಟಣದಿಂದ ಕಿಲೋ ಮೀಟರ್ ದೂರದಲ್ಲಿ ಹರಿಯುತ್ತದೆ.

ಮುಂಡರಗಿ ಕೋಟೆ

[ಬದಲಾಯಿಸಿ]

ಮುಂಡರಗಿ ಪಟ್ಟಣದಲ್ಲಿ ಇತಿಹಾಸ ಪ್ರಸಿದ್ದ ಕೋಟೆಯಿದೆ. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟಗಾರು ಇಲ್ಲಿ ಬೀಡು ಬಿಟ್ಟಿದ್ದರು.

ಮುಂಡರಗಿ ಭೀಮರಾಯ

[ಬದಲಾಯಿಸಿ]

೧೮೫೭ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಸ್ಮರಣೀಯ ವರುಷ. ಲಕ್ಷಾಂತರ ಜನ ತಮ್ಮೆಲ್ಲ ಭೇದ ಭಾವನೆಗಳನ್ನು ತೊರೆದು ದಾಸ್ಯದ ನೊಗವನ್ನು ಕಿತ್ತೊಗೆಯಲು ಮೈ ಕೊಡವಿ ಸಿಂಹ ಗರ್ಜನೆ ಮಾಡುತ್ತಾ ಎದ್ದು ನಿಂತು, ಹೋರಾಟಕ್ಕೆ ಆರಂಭಿಸಿದ ವರ್ಷ.

ಈ ಹೋರಾಟದಲ್ಲಿ ರಾಜ ಮಹಾರಾಜರಷ್ಟೆ ಅಲ್ಲ, ಸಮಾಜದ ಸಾಮಾನ್ಯ ವ್ಯಕ್ತಿಗಳೂ ತಮ್ಮ ಸಂಪತ್ತನ್ನೆಲ್ಲ ಧಾರೆಯೆರೆದು, ಪ್ರಾಣವನ್ನು ಬಲಿದಾನ ಮಾಡಿದರು.

ಇಂತಹವರಲ್ಲಿ ಮುಂಡರಗಿ ಭೀಮರಾಯನೂ ಒಬ್ಬನು. ಕನ್ನಡನಾಡಿನ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಭೀಮರಾಯನ ಮಹತ್ಸಾಧನೆ ಹಾಗೂ ಆತ್ಮಾರ್ಪಣೆಯು ಸ್ಫೂರ್ತಿಯ ಬಿಂದುವಾಗಿದೆ. ಮುಂಡರಗಿ ಭೀಮರಾಯನು ರಾಜ ವಂಶದಲ್ಲಿ ಜನಿಸಿದ ವ್ಯಕ್ತಿಯಲ್ಲ. ಅವನು ಒಬ್ಬ ಸಾಮಾನ್ಯ ಪ್ರಜೆ. ಅನ್ಯಾಯ, ಅತ್ಯಾಚಾರ, ಮೋಸ, ದೌರ್ಜನ್ಯಗಳನ್ನು ಕಂಡಾಗ ಸಿಡಿದೆದ್ದು ಕೆರಳಿ ಪ್ರತೀಕಾರ ಕೈಗೊಳ್ಳುತ್ತಿದ್ದ ಧೀರ ವ್ಯಕ್ತಿ. ಅನಾಯಾಸವಾಗಿ ದೊರೆತಿದ್ದ ಸರಕಾರೀ ನೌಕರಿಗೆ ರಾಜೀನಾಮೆ ಸಲ್ಲಿಸಿ, ದಬ್ಬಾಳಿಕೆಗೆ ಸಿಲುಕಿದ ಜನತೆಯ ಮೂಕ ವೇದನೆಗೆ ಮನನೊಂದು ಬಂಡಾಯವೆದ್ದ ಸ್ವಾತಂತ್ರ್ಯ ಯೋಧ.

ಮನೆತನ

[ಬದಲಾಯಿಸಿ]

ಭೀಮರಾಯನ ತಂದೆ ರಂಗರಾಯ. ಮಹಾ ಮೇಧಾವಿ. ಪೇಷ್ವೆಗಳ ಬಳಿ ನ್ಯಾಯಾಧೀಶನಾಗಿದ್ದನು. ಇವರ ವಂಶಸ್ಥರಿಗೆ ಗದಗು, ಹೈತಾಪುರ, ನಾಗರಹಳ್ಳಿ, ಬೆಣ್ಣೆಹಳ್ಳಿ ಮೊದಲಾದ ಊರುಗಳಲ್ಲಿ ಸಾಕಷ್ಟು ಜಮೀನನ್ನು ಉಂಬಳಿಯಾಗಿ ಕೊಡಲಾಗಿತ್ತು. ಆದುದರಿಂದ ಈ ಮನೆತನದವರನ್ನು ಜನರು ‘ನಾಡಗೌಡ’ರೆಂದು ಗೌರವದಿಂದ ಕರೆಯುತ್ತಿದ್ದರು.

ಮುಂಡರಗಿಯು ಧಾರವಾಡ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಇದರ ಪ್ರಾಚೀನ ಹೆಸರು ಮುರುಡಗಿ. ಇಲ್ಲಿನ ಅನ್ನದಾನೇಶ್ವರ ಮತ್ತು ತೋಂಟದಾರ್ಯ ಮಠಗಳು ಪ್ರಸಿದ್ಧವಾಗಿದ್ದವು. ಊರಿನ ಪಶ್ಚಿಮ ದಿಕ್ಕಿನಲ್ಲಿ ಒಂದು ಗುಡ್ಡ. ಅದರ ಮೇಲೆ ಕನಕ ನರಸಿಂಹ ದೇವಾಲಯ. ಊರಿನಲ್ಲಿ ಒಂದು ಕೋಟೆಯೂ ಇತ್ತು.

ಮುರುಡಗಿ ಅಥವಾ ಮುಂಡರಗಿಯನ್ನು ಭೀಮರಾಯನ ತಾತ ಮೊಂಡಗೈ ಭೀಮರಾಯನಿಗೆ ಜಹಗೀರಾಗಿ ನೀಡಲಾಗಿತ್ತು. ಮೊಂಡಗೈ ಭೀಮರಾಯರು ಡಂಬಳ ದೇಸಾಯರ ಬಳಿ ಪ್ರಧಾನ ಸಚಿವರಾಗಿದ್ದರು. ಬೇಟೆಯಲ್ಲಿ ಸಿದ್ಧಹಸ್ತರು, ನಿಸ್ಸೀಮರು, ಪರಾಕ್ರಮಿಗಳು, ಪ್ರಾಮಾಣಿಕರು. ಅನ್ಯಾಯ, ಮೋಸ, ವಂಚನೆ ಎಲ್ಲಿ ಕಂಡರೂ ಸಹಿಸುತ್ತಿರಲಿಲ್ಲ. ಅದರ ವಿರುದ್ಧ ಹೋರಾಡುತ್ತಿದ್ದಂತಹವ ರಾಗಿದ್ದರು. ತಾತನಂತೆ ಭೀಮರಾಯನ ತಂದೆಯೂ ಸಹ ಅಷ್ಟೆ ಸ್ವಾಭಿಮಾನಿ. ಭೀಮರಾಯನಿಗೆ ತಾತ ಹಾಗೂ ತಂದೆಯ ಗುಣಗಳೆಲ್ಲವೂ ರಕ್ತಗತವಾಗಿ ಬಂದಿದ್ದುವು.

ಅಪ್ರತಿಮ ಬೇಟೆಗಾರ

[ಬದಲಾಯಿಸಿ]

ಬಾಲಕ ಭೀಮರಾಯನಿಗೆ ಬಾಲ್ಯದಲ್ಲಿಯೇ ಕನ್ನಡ, ಮರಾಠಿ ಹಾಗೂ ಇಂಗ್ಲಿಷನ್ನು ತಂದೆ ರಂಗರಾಯನು ಕಲಿಸಿದ್ದನು. ಶಸ್ತ್ರ ಹಾಗೂ ಶಾಸಗಳೆರಡರಲ್ಲೂ ಅವನು ಸಾಕಷ್ಟು ಪರಿಣತಿಯನ್ನು ಪಡೆದುಕೊಂಡಿದ್ದನು. ಬೇಟೆಯಾಡು ವುದರಲ್ಲಂತು ತಾತನನ್ನೂ ಮೊಮ್ಮಗನು ಒಂದು ಕೈ ಮೀರಿಸುತ್ತಿದ್ದ. ಅವನು ಇಟ್ಟ ಗುರಿ ಎಂದಿಗೂ ತಪ್ಪುತ್ತಿರಲಿಲ್ಲ. ಮೇಲೆ ಹಾರುತ್ತಿರುವ ಹಕ್ಕಿಯ ಕಣ್ಣಿಗೂ ಗುರಿ ನೋಡಿ ಹೊಡೆಯುವಷ್ಟು ತರಬೇತಿ ಪಡೆದಿದ್ದನು! ಭೀಮರಾಯನೊಂದಿಗೆ ಹಲವು ಬಾರಿ ಇಂಗ್ಲಿಷ್ ಅಧಿಕಾರಿಗಳೂ ಸಹ ಬೇಟೆಗಾಗಿ ಹೋಗುತ್ತಿದ್ದರು. ಬೇಟೆಗಾಗಿ ಹೋಗುವ ಮುನ್ನ ಇವರ ಮನೆಯ ಆತಿಥ್ಯ ಆಂಗ್ಲ ಅಧಿಕಾರಿಗಳಿಗೆ ತಪ್ಪುತ್ತಿರಲಿಲ್ಲ. ಭೇಟಿಯಲ್ಲಿ ಭೀಮರಾಯನ ಗುರಿ, ಬುದ್ಧಿವಂತಿಕೆ, ಚಾಣಾಕ್ಷತೆಗಳನ್ನು ಕಂಡ ಆಂಗ್ಲ ಅಧಿಕಾರಿಗಳು ಅಚ್ಚರಿಪಟ್ಟು ತಲೆದೂಗುತ್ತಿದ್ದರು. ವಿಶ್ವಾಸದಿಂದ ಭೀಮರಾಯನನ್ನು ‘ಆಂಗ್ಲ ಸರಕಾರದಲ್ಲಿ ಕೆಲಸ ಕೊಡಿಸುತ್ತೇವೆ, ನಮ್ಮೊಡನೆ ಬಂದು ಬಿಡು’ ಎಂದು ಹೇಳುತ್ತಿದ್ದರು. ಬಾಲ್ಯದಿಂದಲೂ ಭೀಮರಾಯನ ವ್ಯಕ್ತಿತ್ವ ಅಂಥದು. ಗುರುತು ಪರಿಚಯವಿಲ್ಲದವರನ್ನೂ ತನ್ನ ಸಹಜವಾದ ಗುಣಗಳಿಂದ ಆಕರ್ಷಿಸುತ್ತಿದ್ದನು. ಮುಂದಾಳುತನ ಅವನ ಸ್ವಭಾವದೊಂದಿಗೆ ಬಂದಿದ್ದ ಹುಟ್ಟುಗುಣವಾಗಿತ್ತು. ಭೀಮರಾಯನು ಬೆಳೆದುದು ಆವಿಭಕ್ತ ಕುಟುಂಬ ದಲ್ಲಿ. ಮನೆತುಂಬ ಜನ. ದೂರದ ಹತ್ತಿರದ ನೆಂಟರಿಷ್ಟರು. ಸ್ವಂತ ತಾಯಿ ಬಾಲ್ಯದಲ್ಲಿಯೇ ಮರಣ ಹೊಂದಿದ್ದಳು. ಗಂಗಾಬಾಯಿ ಭೀಮರಾಯನ ಮಲತಾಯಿ.

ವಿವಾಹ

[ಬದಲಾಯಿಸಿ]

ಕುಂದಗೋಳದ ನಾಡಿಗೇರ ಮನೆತನದ ಜೀವೂಬಾಯಿ ಎಂಬ ಕನ್ಯೆಯೊಂದಿಗೆ ಭೀಮರಾಯನ ವಿವಾಹವಾಯಿತು. ವಿವಾಹವಾಗಿ ನಾಲ್ಕಾರು ವರುಷ ಕಳೆದ ನಂತರ ಒಂದು ಗಂಡು ಮಗು ಜನಿಸಿತು. ಕುಕನೂರಿನ ದೇಸಾಯಿ ಮಾದಗೌಡ ಪಾಟೀಲ ನೆಂಬುವನಿಗೆ ಮುಂಡರಗಿ ಭೀಮರಾಯನನ್ನು ಕಂಡರೆ ತುಂಬ ವಿಶ್ವಾಸ. ಮುಂಚಿನಿಂದಲೂ ಆತನನ್ನು ಅಳಿಯನನ್ನಾಗಿ ಮಾಡಿ ಕೊಳ್ಳಬೇಕೆಂದು ಆಸೆ ಇಟ್ಟುಕೊಂಡಿದ್ದನು. ಒಮ್ಮೆ ಭೀಮರಾಯನನ್ನು ಕುಕನೂರಿಗೆ ಕರೆಸಿ ತನ್ನ ಆಸೆಯನ್ನು ಆತನ ಮುಂದಿಟ್ಟನು. ಹಿರಿಯರೆಲ್ಲ ಒಪ್ಪಿದ ನಂತರ ಭೀಮರಾಯನು ಈ ಬಾಂಧವ್ಯಕ್ಕೆ ಒಪ್ಪಿ ವೆಂಕೂಬಾಯಿ ಎಂಬ ಕನ್ಯೆಯನ್ನು ವಿವಾಹವಾದನು. ಇದೇ ವೇಳೆಗೆ ಕೊಪ್ಪಳದ ಮಾಮಲೇದಾರನಾಗಿದ್ದ ಅಧಿಕಾರಿ ಮೃತನಾದುದರಿಂದ ಆತನ ಹುದ್ದೆ ತೆರವಾಗಿದ್ದಿತು. ಭೀಮರಾಯ ತನ್ನ ಮಗನಿಗೆ ಉತ್ತಮ ಶಿಕ್ಷಣ ಕೊಡಿಸ ಬೇಕೆಂದು, ಕೊಪ್ಪಳದಲ್ಲಿಯೇ ಬಂದು ವಾಸಮಾಡ ಬೇಕೆಂದು ಇಚ್ಛಿಸಿದ್ದನು. ಬಳ್ಳಾರಿ ಹಾಗೂ ಧಾರವಾಡದ ಆಂಗ್ಲ ಅಧಿಕಾರಿಗಳು ತೆರವಾಗಿದ್ದ ಮಾಮಲೇದಾರನ ಹುದ್ದೆಯನ್ನು ಭೀಮರಾಯನಿಗೆ ಕೊಡಬೇಕೆಂದು ಬಯಸಿದ್ದರು.

ಮಹತ್ವದ ಶಿಕಾರಿ

[ಬದಲಾಯಿಸಿ]

ಇದೇ ವೇಳೆಗೆ ಬಳ್ಳಾರಿಯ ಕಲೆಕ್ಟರ್ ಕಚೇರಿಯ ಒಬ್ಬ ಆಂಗ್ಲ ಅಧಿಕಾರಿ ಭೀಮರಾಯನನ್ನು ಭೇಟೆಗೆ ಹೋಗಲು ಆಹ್ವಾನಿಸಿದ್ದನು. ಈ ಬಾರಿಯ ಶಿಕಾರಿ ಭೀಮರಾಯನ ಜೀವನದಲ್ಲಿ ಮಹತ್ತರ ಘಟನೆ. ಆ ದಿನ ಭೀಮರಾಯನು ಕಲೆಕ್ಟರನೊಂದಿಗೆ ಕೊಪ್ಪಳದ ಆಸುಪಾಸಿನ ದಟ್ಟ ಅರಣ್ಯದಲ್ಲಿ ಬೇಟೆಗೆ ಹೊರಟಿದ್ದನು. ಕೆಲವು ದಿನಗಳ ಹಿಂದೆ ಯಾರೋ ಒಂದು ಹುಲಿಯನ್ನು ಗಾಯಗೊಳಿಸಿ ಕೊಲ್ಲದೆ ಹಾಗೇ ಬಿಟ್ಟುಬಿಟ್ಟಿದ್ದರು. ಅದು ರೊಚ್ಚಿಗೆದ್ದು ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳಿಗೆ ನುಗ್ಗಿ ಜನತೆಯಲ್ಲಿ ಭೀತಿ ಹುಟ್ಟಿಸಿತ್ತು. ರೈತರು ಈ ಸಂಗತಿಯನ್ನು ಬಳ್ಳಾರಿಯ ಕಲೆಕ್ಟರನಿಗೆ ತಿಳಿಸಿ ಹುಲಿಯನ್ನು ಕೊಲ್ಲಲು ವ್ಯವಸ್ಥೆ ಮಾಡಬೇಕೆಂದು ವಿನಂತಿಸಿದ್ದರು. ಅಂತೆಯೇ ಅದನ್ನು ಕೊಲ್ಲಲು ಬಳ್ಳಾರಿಯ ಕಲೆಕ್ಟರನು ಭೀಮರಾಯನೊಂದಿಗೆ ಬೇಟೆಗೆ ಬಂದಿದ್ದನು.

ಇಬ್ಬರೂ ಸೇರಿ ಗಾಯಗೊಂಡಿದ್ದ ಹುಲಿಯನ್ನು ಮುಗಿಸಲು ನಿಶ್ಚಯಿಸಿದ್ದರು. ಅದರಂತೆ ಒಂದು ಸಂಚು ಹೂಡಿದರು. ಹುಲಿಯು ಅವಿತುಕೊಂಡಿದ್ದ ಕೊಳ್ಳದ ಬಳಿ ಒಂದು ಮೇಕೆಯನ್ನು ಕಟ್ಟಿ, ಅದನ್ನು ತಿನ್ನಲು ಹುಲಿ ಬಂದಾಗ ತಾವುಗಳು ಪೊದೆಯ ಮರೆಯಲ್ಲಿ ಕುಳಿತಿದ್ದು ಶಿಕಾರಿ ಮಾಡಬೇಕೆಂದೂ ನಿಶ್ಚಯಿಸಿದ್ದರು.

ಅಷ್ಟರಲ್ಲೇ ಹುಲಿಯು ಕಲೆಕ್ಟರನ ಮೇಲೆ ಹಠಾತ್ತನೆ ಬಂದೆರಗಿತು. ದೂರದಲ್ಲಿದ್ದ ಭೀಮರಾಯನು ಇದನ್ನು ನೋಡಿದನು. ಅವನು ಮಿಂಚಿನ ವೇಗದಲ್ಲಿ ಗುಂಡನ್ನು ಹಾರಿಸಿದನು. ಅವನು ಹಾರಿಸಿದ ಗುಂಡು ವ್ಯರ್ಥವಾಗಲಿಲ್ಲ. ಹುಲಿಗೆ ಕಲೆಕ್ಟರನು ಆಹಾರವಾಗುವ ಮೊದಲೇ ಹುಲಿಯು ಗುಂಡಿಗೆ ಬಲಿಯಾಗಿತ್ತು.

ಭೀಮರಾಯನು ಕಲೆಕ್ಟರನ ನೆರವಿಗೆ ಸಕಾಲದಲ್ಲಿ ಬಾರದಿದ್ದಲ್ಲಿ ಆ ಅಧಿಕಾರಿಯ ಕಥೆ ಇಲ್ಲಿಗೆ ಮುಗಿದಿರುತ್ತಿತ್ತು. ಅವನು ಸುದೈವದಿಂದ ಸಾವಿನ ದವಡೆಯಿಂದ ಪಾರಾಗಿದ್ದನು. ಅಂದಿನ ಭೋಜನ ನಿದ್ರೆ ಮುಗಿದ ಮೇಲೆ ಆಂಗ್ಲ ಅಧಿಕಾರಿಯು ತನ್ನ ಕೃತಜ್ಞತೆಯನ್ನು ಸೂಚಿಸುತ್ತಾ, ‘ಭೀಮರಾವ್, ನೀವೇಕೆ ಕೊಪ್ಪಳಕ್ಕೆ ಬಂದು ಅಲ್ಲಿಯೇ ವಾಸಿಸಬಾರದು ? ಇದರಿಂದ ನಮ್ಮ ನಿಮ್ಮ ಭೇಟಿ ಯಾವಾಗ ಅಂದರೆ ಆಗ ಆಗಲು ಅನುಕೂಲವಾಗುವುದಲ್ಲವೇ?” ಎಂದನು.

‘ಹೌದು, ನಾನೂ ಅದನ್ನೇ ಯೋಚಿಸುತ್ತಿದ್ದೆ ಸಾಹೇಬರೆ’ಎಂದ ಭೀಮರಾಯ.

‘ನನಗೆ ನಿಮ್ಮ ಮಾತು ಕೇಳಿ ತುಂಬ ಸಂತೋಷವಾಯಿತು. ನೋಡಿ, ಕೊಪ್ಪಳದ ತಹಶೀಲದಾರನಾಗಿ ನೀವು ಕೆಲಸ ಮಾಡಲು ಒಪ್ಪುವಿರಾದರೆ ನಿಮಗೆ ಅದನ್ನು ಕೊಡಿಸುವೆ.’

ಭೀಮರಾಯ ಈ ಅನಿರೀಕ್ಷಿತ ಕೋರಿಕೆಯಿಂದ ಅವಕ್ಕಾದ. ಅನಂತರ ಕಲೆಕ್ಟರನ ವಿಶ್ವಾಸಕ್ಕೆ ಕಟ್ಟುಬಿದ್ದು ಈ ಹುದ್ದೆಯನ್ನು ಒಪ್ಪಿಕೊಂಡನು.

ತಹಶೀಲದಾರ ಭೀಮರಾಯ

[ಬದಲಾಯಿಸಿ]

ಸ್ವಲ್ಪ ದಿನಗಳಲ್ಲಿಯೇ ಭೀಮರಾಯನು ಕೊಪ್ಪಳಕ್ಕೆ ತಹಶೀಲದಾರನಾಗಿ ಆಯ್ಕೆಯಾಗಿ ಬಂದು ಅಧಿಕಾರ ವಹಿಸಿಕೊಂಡನು. ಅಲ್ಲಿ ಶ್ರದ್ಧೆ ಹಾಗೂ ದಕ್ಷತೆಯಿಂದ ಕೆಲಸ ಮಾಡಿ ಕಲೆಕ್ಟರನ ಅಭಿಮಾನ ಮತ್ತು ಗೌರವಾದರಗಳಿಗೆ ಪಾತ್ರ ನಾಗಿ ಬಳ್ಳಾರಿಯ ಮಾಮಲೇದಾರನಾಗಿ ಬಡ್ತಿ ಹೊಂದಿದನು.

ಭೀಮರಾಯನು ಬಳ್ಳಾರಿಗೆ ಮಾಮಲೇದಾರನಾಗಿ ಬಂದು ಅಧಿಕಾರ ಸ್ವೀಕರಿಸಿದಾಗ, ಅಲ್ಲಿನ ಜನಕ್ಕೆ ಉಂಟಾದ ಆಶ್ಚರ್ಯಕ್ಕೆ ಕೊನೆಯಿಲ್ಲ. ಅದುವರೆಗೂ ಇಂಥ ಹುದ್ದೆಗಳು ಕೇವಲ ವಿದೇಶೀಯರಿಗೆ ಮೀಸಲಾಗಿತ್ತು. ‘ನಮ್ಮ ಹೊಸ ಸಾಹೇಬರು, ಇಂಗ್ಲಿಷ್ ಸಾಹೇಬರಂತೆ ಇಂಗ್ಲಿಷ್ ಮಾತನಾಡುತ್ತಾರೆ. ಮಾತಿನಲ್ಲಿ ಅವರನ್ನೂ ಮೀರಿಸುತ್ತಾರೆ.’

‘ಕಲೆಕ್ಟರ್ ಸಾಹೇಬರು ಖುದ್ದು ಭೀಮರಾಯರ ಜೊತೆಯಲ್ಲಿ ಶಿಕಾರಿಗೆ ಹೋಗುತ್ತಾರಂತೆ’

‘ಭೀಮರಾಯರು ಕೆಲಸದಲ್ಲಿ ಗಟ್ಟಿಗರಂತೆ. ಯಾವ ಆಂಗ್ಲ ಸಾಹೇಬನಿಗೂ ಕಮ್ಮಿಯಿಲ್ಲವಂತೆ. ಇಂಗ್ಲಿಷ್ ಕಾನೂನುಗಳೆಲ್ಲ ಅವರ ಬಾಯಲ್ಲಿಯೇ ಇವೆಯಂತೆ’

‘ನೋಡುವುದಕ್ಕೆ ಆಸಾಮಿ ದರ್ಪಿಷ್ಟನಂತೆ ಕಂಡರೂ ತುಂಬಾ ಒಳ್ಳೆಯವನಂತೆ. ಆದರೆ ಮಾತು ಮಾತ್ರ ಒರಟು. ತುಂಬಾ ನಿಷ್ಠುರ.’

ಇಂಥವೇ ಮಾತುಗಳು ಎಲ್ಲೆಲ್ಲೂ ಕೇಳಿಬರುತ್ತಿದ್ದವು.

ಈಗ ಭೀಮರಾಯನ ಮನೆತುಂಬ ಬಂಧುಗಳು. ಪ್ರೀತಿಯ ಮಡದಿಯರು. ಮಗನೊಂದಿಗೆ ನೆಮ್ಮದಿಯ ಜೀವನ. ಆದರೆ ಇದು ಬಹಳ ಕಾಲದವರೆಗೆ ಮುಂದುವರಿಯಲಿಲ್ಲ.

ಇಂಗ್ಲಿಷರ ನೆಲದ ದಾಹ

[ಬದಲಾಯಿಸಿ]

ಭೀಮರಾಯ ಮೊದಲಿನಿಂದಲೂ ತನ್ನ ಸುತ್ತ ಮುತ್ತಲಿನ ಜಹಗೀರುದಾರರು, ದೇಸಾಯಿಗಳಲ್ಲಿ ತುಂಬ ವಿಶ್ವಾಸಿ. ಸವಣೂರಿನ ನವಾಬ, ಗೋವನಕೊಪ್ಪದ ದೇಸಾಯಿ, ಶಿರಸಿಂಗಿಯ ದೇಸಾಯಿ; ನರಗುಂದದ ಬಾಬಾ ಸಾಹೇಬ ಹೀಗೆ ಆತನ ಸ್ನೇಹಿತರಲ್ಲಿ ಕೆಲವು ಪ್ರಮುಖರು. ಅವರೂ ಸಹ ಭೀಮರಾಯನನ್ನು ತಮ್ಮ ಪರಮಮಿತ್ರನೆಂದೇ ಭಾವಿಸಿದ್ದರು.

ನರಗುಂದದ ಬಾಬಾ ಸಾಹೇಬ ಹಾಗೂ ಭೀಮರಾಯ ಸಮಾನ ವಯಸ್ಕರು. ಇಬ್ಬರೂ ಮಹತ್ವಾ ಕಾಂಕ್ಷಿಗಳು, ದೇಶಪ್ರೇಮಿಗಳು. ಮೇಲಾಗಿ ಸ್ವಾಭಿಮಾನಿ ತರುಣರು. ಬ್ರಿಟಿಷರಿಂದ ನಾಡಿನ ಜನತೆಗೆ ಆಗುತ್ತಿರುವ ಅನ್ಯಾಯಗಳನ್ನು ಕಂಡು ಕನಲುತ್ತಿದ್ದರು. ಸಾಧ್ಯ ವಾದರೆ ಅವರಿಗೆ ಬಲವಾಗಿ ಪೆಟ್ಟು ಕೊಡಬೇಕೆಂದು ಸೂಕ್ತ ಸಮಯವನ್ನು ಕಾಯುತ್ತಿದ್ದರು. ಭೀಮರಾಯನು ಇಂಗ್ಲಿಷರಿಂದ ಅಧಿಕಾರ, ಸಂಪತ್ತನ್ನು ಗಳಿಸಿದ್ದರೂ ಆತನ ದೇಶಪ್ರೇಮ ಅಂತರಂಗದಲ್ಲಿ ತುಡಿಯುತ್ತಿತ್ತು.

ಬಾಬಾಸಾಹೇಬನಿಗೆ ಇದ್ದ ಒಬ್ಬನೇ ಮಗ, ಹುಟ್ಟಿದ ಆರೇ ತಿಂಗಳಲ್ಲಿ ಮೃತನಾದ. ಅವನಿಗೆ ಬೇರೆ ಮಕ್ಕಳಾಗಲಿಲ್ಲ. ರಾಜ್ಯ ಅನ್ಯರ ಪಾಲಾಗುವುದೆಂದು ತಿಳಿದು ದತ್ತು ಸ್ವೀಕಾರ ಮಾಡುವುದಕ್ಕಾಗಿ ಧಾರವಾಡದ ಕಲೆಕ್ಟರನಿಗೂ, ಬೆಳಗಾವಿಯ ಕಮೀಷನರಿಗೂ ಅನುಮತಿಗಾಗಿ ಪ್ರಾರ್ಥಿಸಿ ಪತ್ರ ಬರೆದನು.

ಇಂಗ್ಲಿಷರ ರಾಜ್ಯದಾಹ ಈ ವೇಳೆಗಾಗಲೇ ಎಲ್ಲೆ ಮೀರಿತ್ತು. ವಾರನ್‌ಹೇಸ್ಟಿಂಗ್ಸ್ ಎಂಬ ಗವರ್ನರ್ ಜನರಲ್ಲನು ‘ದತ್ತು ಪುತ್ರರಿಗೆ ರಾಜ್ಯದ ಹಕ್ಕಿಲ್ಲ’ ಎಂಬ ಕಾನೂನನ್ನು ತಂದು ಭಾರತದ ಅನೇಕ ರಾಜ್ಯಗಳನ್ನು ಬ್ರಿಟಿಷ್ ಸರಕಾರಕ್ಕೆ ಸೇರಿಸಿದ್ದನು. ಇಂಗ್ಲೆಂಡಿನ ಕೋರ್ಟ್ ಆಫ್ ಡೈರಕ್ಟರಿಗೆ ಇನಾಂ ಕಮೀಷನರಾಗಿದ್ದ ಮ್ಯಾನ್ಸನ್ನನು ಬಾಬಾಸಾಹೇಬನಿಗೆ ಪ್ರತಿಕೂಲವಾಗುವಂತೆ ಪತ್ರ ಬರೆದನು. ಬಾಬಾಸಾಹೇಬನು ತಾನೇ ನೇರವಾಗಿ ಇಂಗ್ಲೆಂಡಿನ ಡೈರಕ್ಟರಿಗೆ ಪುನಃ ಪತ್ರ ಬರೆದರೂ ಪ್ರಯೋಜನವಾಗಲಿಲ್ಲ.

ಭೀಮರಾಯನ ಕಣ್ಣು ತೆರೆಯಿತು

[ಬದಲಾಯಿಸಿ]

ಈ ವಿಚಾರ ತಿಳಿದ ಬಾಬಾ ಸಾಹೇಬನಿಗೆ ಕ್ಷಣಕಾಲ ದಿಕ್ಕು ತೋಚದಂತಾಯಿತು. ಅನಂತರ ಭೀಮರಾಯನ ಸಹಾಯ ಪಡೆಯಬೇಕೆಂಬ ಉದ್ದೇಶದಿಂದ ಅವನಲ್ಲಿಗೆ ಬಂದು ತನ್ನೆಲ್ಲ ವಿಚಾರಗಳನ್ನೂ ತಿಳಿಸಿದನು. ಭೀಮ ರಾಯನಿಗೆ ಇಂಗ್ಲಿಷ್ ಅಧಿಕಾರಿಗಳಲ್ಲಿ ಸ್ನೇಹವಿತ್ತು. ಅವನು ಧಾರವಾಡ ಹಾಗೂ ಬೆಳಗಾವಿಯ ಕಲೆಕ್ಟರುಗಳನ್ನು ಕಂಡು ಮಾತನಾಡಿದನು. ಇನಾಂ ಕಮೀಷನರ್ ಮ್ಯಾನ್ಸನ್ನನನ್ನೂ ಭೇಟಿ ಮಾಡಿ ಬಾಬಾಸಾಹೇಬನಿಗೆ ನ್ಯಾಯ ದೊರಕಿಸಿ ಕೊಡಲು ಆತನ ಪರವಾಗಿ ವಿನಂತಿಸಿದನು. ಅವರುಗಳು ಯಾವುದೇ ರೀತಿಯ ಸ್ಪಷ್ಟ ಉತ್ತರ ನೀಡದೆ ಐದುವರ್ಷ ಕಾಲ ತಳ್ಳಿದರು. ಇದರಿಂದ ಇಂಗ್ಲಿಷರ ಉದ್ದೇಶ ಹಾಗೂ ನಿಜವಾದ ಗುಣ ಮತ್ತು ಧೋರಣೆ ಏನೆಂಬುದು ಭೀಮರಾಯನಿಗೆ ಸ್ಪಷ್ಟವಾಯಿತು. ಅವನಿಗೆ ಬಹಳಷ್ಟು ಕೋಪವೂ, ವ್ಯಸನವೂ ಆಯಿತು.

ಡಂಬಳದ ಪ್ರಕರಣ

[ಬದಲಾಯಿಸಿ]

ಇದೇ ವೇಳೆಗೆ ‘ಡಂಬಳದ ಪ್ರಕರಣ’ ನಡೆಯಿತು. ಡಂಬಳವು ಧಾರವಾಡ ಜಿಲ್ಲೆಯ ಒಂದು ಪಟ್ಟಣ. ಅದು ಮುಂಡರಗಿ ತಾಲ್ಲೂಕಿಗೆ ಸೇರಿತ್ತು. ಹಮ್ಮಿಗೆ ದೇಸಾಯಿ ಯವರಿಗೆ ಸೇರಿದ ಜಹಗೀರಾಗಿತ್ತು. ಅವರು ಶಿರಹಟ್ಟಿಯ ದೇಸಾಯರಿಗೆ ಅಧೀನರಾಗಿ ಕಂದಾಯ ವಸೂಲಿ ಮಾಡುತ್ತಿದ್ದರು. ಡಂಬಳದ ಹಮ್ಮಿಗೆಯ ಮನೆತನಕ್ಕೂ ಮುಂಡರಗಿ ಭೀಮರಾಯನ ಮನೆತನಕ್ಕೂ ಹಿಂದಿನಿಂದಲೂ ಸ್ನೇಹ ವಿಶ್ವಾಸಗಳಿದ್ದವು. ಹಮ್ಮಿಗೆಯ ದೇಸಾಯಿ ತರುಣನೂ ಸ್ವಾಭಿಮಾನಿಯೂ ಆಗಿದ್ದ ಕೆಂಚನಗೌಡ. ಇವನೂ ಭೀಮರಾಯನೂ ರಾಮಲಕ್ಷ್ಮಣ ರಿದ್ದಂತೆ ಇದ್ದರು. ಶಿರಹಟ್ಟಿ ದೇಸಾಯಿಯವರಿಗೆ ಮಕ್ಕಳಿಲ್ಲದುದರಿಂದ ಅವರು ದೂರದ ಬಂಧುವಾಗಿದ್ದ ಕೆಂಚನ ಗೌಡನನ್ನು ದತ್ತಕ ಮಾಡಿಕೊಂಡರು. ಆಂಗ್ಲ ಸರಕಾರ ಇದನ್ನು ಮಾನ್ಯ ಮಾಡಲಿಲ್ಲ. ಶಿರಹಟ್ಟಿ ದೇಸಾಯರ ಭೂಮಿಯನ್ನು ತನ್ನ ಸ್ವಾಧೀನ ಮಾಡಿ ಕೊಂಡಿತು. ಹೀಗೆ ಇಂಗ್ಲಿಷರ ಪಿತೂರಿ ಕಂಡು ಗೆಳೆಯನಿಗಾಗಿದ್ದ ಅನ್ಯಾಯವನ್ನು ಪ್ರತಿಭಟಿಸಿ ಬಳ್ಳಾರಿ ಹಾಗೂ ಧಾರವಾಡದ ಕಲೆಕ್ಟರುಗಳಿಗೆ ಭೀಮರಾಯ ಖಾರವಾದ ಓಲೆಯನ್ನು ಬರೆದು ಕಳಿಸಿದನು. ಭೀಮರಾಯನ ಪತ್ರಗಳನ್ನು ಓದಿದ ಆಂಗ್ಲ ಅಧಿಕಾರಿಗಳು ಆತನ ಮೇಲೆ ಬಹಳವಾಗಿ ಸಿಟ್ಟಾದರು. ಗೂಢಚರರನ್ನೂ, ಕ್ರೈಸ್ತ ಪಾದ್ರಿಗಳನ್ನೂ ಭೀಮ ರಾಯನ ಚಲನವಲನಗಳ ಮೇಲೆ ಕಣ್ಣಿಡಲು ನೇಮಿಸಿದರು. ಈ ವಿಚಾರ ಹೇಗೋ ಭೀಮರಾಯನಿಗೆ ತಿಳಿಯಿತು. ಇದೇ ಸಮಯದಲ್ಲಿ ಇಂಗ್ಲಿಷರು ಸೊರಟೂರು ದೇಸಾಯಿಯ ಕೈಯಿಂದ ದೇಸಗತ್ತಿಯನ್ನು ಕಿತ್ತುಕೊಂಡರು.

ಪ್ರತಿಭಟನೆ

[ಬದಲಾಯಿಸಿ]

ಸೊರಟೂರ ದೇಸಾಯಿ ಭೀಮರಾಯನ ಸ್ನೇಹಿತ ರಲ್ಲಿ ಒಬ್ಬ. ಸೊರಟೂರಿನಲ್ಲಿ ಮಳೆಯಾಗದುದರಿಂದ ರೈತರ ಕಂದಾಯವನ್ನು ಬಿಟ್ಟು ಬಿಡಬೇಕೆಂದು ದೇಸಾಯಿ ಆಂಗ್ಲ ಅಧಿಕಾರಿಗಳಿಗೆ ಬರೆದ. ಅವನು ದಕ್ಷನಲ್ಲ ಎಂದು ಧಾರವಾಡದ ಕಲೆಕ್ಟರನು ಅವನ ಅಧಿಕಾರವನ್ನು ಕಸಿದುಕೊಂಡ. ಈ ಅನ್ಯಾಯದ ಕ್ರಮವನ್ನು ಭೀಮರಾಯನು ಪ್ರತಿಭಟಿಸಿದನು. ಕಲೆಕ್ಟರನು ಕೋಪಗೊಂಡು ಸೊರಟೂರು ದೇಸಾಯಿಯನ್ನು ಬಂಧಿಸಲು ಆಜ್ಞೆ ಮಾಡಿದನು. ಅನಂತರ ಅವನನ್ನು ಛಡಿ ಏಟಿಗೆ ಒಳಪಡಿಸಿ ಧಾರವಾಡದ ಸೆರೆಯಲ್ಲಿಟ್ಟನು. ಸಾಲದುದಕ್ಕೆ ಆತನ ಆಸ್ತಿಯನ್ನೆಲ್ಲ ಕಂಪೆನಿ ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಂಡನು. ‘ದ್ರೋಹ ಬಗೆಯುವವರು ಯಾರೇ ಆಗಲಿ ಸರಕಾರವು ಆತನ ಸ್ಥಾನ ಮಾನವನ್ನು ಲೆಕ್ಕಿಸದೆ ಶಿಕ್ಷಿಸುವುದು’ ಎಂದು ಸಾರಿಸಿದನು.

ಇಂಗ್ಲಿಷರ ಸ್ನೇಹ ಕಡಿಯಿತು

[ಬದಲಾಯಿಸಿ]

ಇದನ್ನು ಕಣ್ಣಾರೆ ಕಂಡ ಭೀಮರಾಯನೂ ‘ಇಂಥ ನೀಚರ ಕೈಕೆಳಗೆ ನೌಕರಿ ಮಾಡೆನು’ ಎಂದು ಕಾಗದ ಪತ್ರಗಳನ್ನೆಲ್ಲ ಆಡಳಿತದ ಕಲೆಕ್ಟರನ ಮುಂದೆ ಎಸೆದು ತನ್ನ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದನು. ಇಂಗ್ಲಿಷರೊಡನೆ ಸ್ನೇಹ, ವಿಶ್ವಾಸಗಳು ಕಡಿದ ಮೇಲೆ ಭೀಮರಾಯನು ಮುಂಡರಗಿಯನ್ನು ತ್ಯಜಿಸಿ ತನ್ನ ಹೆಂಡತಿ ಮಕ್ಕಳೊಂದಿಗೆ ಬಂದು ಕೊಪ್ಪಳದ ಸಮೀಪದ ಬೆಣ್ಣೆಹಳ್ಳಿ ಯಲ್ಲಿ ನೆಲೆಸಿದನು. ಅವನು ತನ್ನ ಮಿತ್ರರಿಗೆ ಆದ ಅವಮಾನಕ್ಕೆ ಆಂಗ್ಲರ ಮೇಲೆ ಸೇಡನ್ನು ತೀರಿಸಿಕೊಳ್ಳಲು ನಿಶ್ಚಯಿಸಿದನು.

ಸ್ವಾತಂತ್ರ್ಯದ ಕಹಳೆ

[ಬದಲಾಯಿಸಿ]

೧೮೫೭ ರಲ್ಲಿ ಉತ್ತರದಲ್ಲಿ ಕಾನ್‌ಪುರ, ಮೀರತ್, ದೆಹಲಿ, ಲಖನೌ, ಕಾಶಿ, ಅಲಹಾಬಾದ್ ಮುಂತಾದೆಡೆಗಳಲ್ಲಿ ಇಡೀ ಜನತೆ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ದಂಗೆ ಎದ್ದು ಸ್ವಾತಂತ್ರ್ಯದ ರಣಕಹಳೆ ಮೊಳಗಿಸಿದರು. ಇದು ಕರ್ನಾಟಕ ದಲ್ಲಿಯೂ ಪ್ರತಿಧ್ವನಿಸಿತು. ಈ ಕ್ರಾಂತಿಯ ಆಹ್ವಾನವನ್ನು ಮೊದಲು ಸ್ವೀಕರಿಸಿದವನು ನರಗುಂದದ ಬಾಬಾಸಾಹೇಬ. ಅದಕ್ಕೆ ಒತ್ತಾಸೆ ನೀಡಿದವನು ಮುಂಡರಗಿ ಭೀಮರಾಯ. ಉತ್ತರ ಭಾರತದಲ್ಲಿ ನಾನಾಸಾಹೇಬ ಮೊಳಗಿಸಿದ ಕ್ರಾಂತಿ ಭೀಮರಾಯನಿಗೆ ಸ್ಫೂರ್ತಿ ನೀಡಿತು. ತಕ್ಷಣ ಗೂಢಚರರನ್ನು ಹಮ್ಮಿಗಿ, ಗಂಗಾಪುರ, ವಡ್ಡರಹಳ್ಳಿ, ಸಿಂಗಟಾಲೂರು, ಮುಂಡರಗಿ, ಕುಕನೂರು, ಕುಂದಗೋಳ, ಬಂಕಾಪುರ, ನವಲಗುಂದ ಇವೇ ಮೊದಲಾದ ಊರುಗಳಿಗೆ ಕಳಿಸಿ ಸ್ವಾತಂತ್ರ್ಯ ಯೋಧರ ಪಡೆಯನ್ನು ನಿರ್ಮಿಸಲು ಆರಂಭಿಸಿದನು. ಸುಸಂಘಟಿತ ಸಶಸ್ತ್ರ ಹೋರಾಟಕ್ಕೆ ಸರ್ವ ಸಿದ್ಧತೆಗಾಗಿ ಆರಂಭಿಸಿದನು. ಎಲ್ಲ ಸಿದ್ಧತೆಗಳೂ ಮುಗಿದು ೧೮೫೭ ರ ಮೇ ೨೭ ಒಟ್ಟಿಗೇ ಬಂಡಾಯ ಏಳಬೇಕೆಂದು ಬಾಬಾಸಾಹೇಬ ಹಾಗೂ ಭೀಮರಾಯ ನಿಶ್ಚಯಿಸಿದ್ದರು. ತೋರಗಲ್ಲ ಸುತ್ತಲೂ ಬಾಬಾಸಾಹೇಬನೂ, ಮುಂಡರಗಿ ತಾಲ್ಲೂಕಿನಲ್ಲಿ ಡಂಬಳದ ದೇಸಾಯಿಯೂ, ಹೊಸಪೇಟೆ ಕಮಲಾಪುರಗಳಲ್ಲಿ ಭೀಮರಾಯನೂ ಶಸ್ತ್ರಾಸ್ತ್ರ ಹಾಗೂ ಸೈನ್ಯವನ್ನು ಕೂಡಿಸ ಬೇಕೆಂದು ನಿರ್ಧರಿಸಿದ್ದರು. ಕೊಪ್ಪಳದಲ್ಲಿದ್ದ ತನ್ನ ನಂಬಿಕೆಯ ಸೇವಕ ಭರಮನಾಯಕನೆಂಬುವನನ್ನು ಕರೆಸಿ ಭೀಮ ರಾಯನು ಗುಪ್ತರೀತಿಯಲ್ಲಿ ಕೊಪ್ಪಳ ಕೋಟೆಯನ್ನು ವಶಕ್ಕೆ ತೆಗೆದುಕೊಳ್ಳುವ ಬಗ್ಗೆ ಏರ್ಪಾಟು ನಡೆಸಿದ್ದನು.

ಎಚ್ಚರವಾಗಿದ್ದ ಆಂಗ್ಲರು

[ಬದಲಾಯಿಸಿ]

ಈ ವಿಚಾರಗಳೆಲ್ಲ ಹೇಗೋ ಆಂಗ್ಲರಿಗೆ ತಿಳಿಯಿತು. ಅವರು ಮುಂಜಾಗ್ರತೆ ಕ್ರಮವಾಗಿ ಕರ್ನಾಟಕದ ಎಲ್ಲ ಜಮೀನುದಾರರಿಗೂ, ದೇಸಾಯಿಗಳಿಗೂ ಹಾಗೂ ಸಂಸ್ಥಾನಿಕ ರಿಗೂ ತಕ್ಷಣ ತಮ್ಮ ತಮ್ಮ ಕೋವಿ, ಬಂದೂಕುಗಳನ್ನು ಸರಕಾರಕ್ಕೆ ತಂದು ಒಪ್ಪಿಸಿ ನೋಂದಾಯಿಸಿ ಕೊಳ್ಳಬೇಕೆಂದು ಆಜ್ಞೆ ಹೊರಡಿಸಿದರು.

ಮುಧೋಳ ಸಂಸ್ಥಾನದಲ್ಲಿ ಹಲಗಲಿ ಒಂದು ಸಣ್ಣ ಗ್ರಾಮ. ಇಲ್ಲಿನ ನಿವಾಸಿಗಳೆಲ್ಲ ‘ಬೇಡ’ ಜನಾಂಗದವರು. ಆಂಗ್ಲ ಸರಕಾರದ ಈ ಆಜ್ಞೆಯನ್ನು ಕೇಳಿ ತಮ್ಮ ಆತ್ಮ ಗೌರವಕ್ಕೆ ಧಕ್ಕೆಯಾಯಿತೆಂದು ಕೆರಳಿದರು. ಇವರೂ ಬ್ರಿಟಿಷರ ವಿರುದ್ಧ ದಂಗೆ ಎದ್ದರು. ೧೮೫೭ ರ ನವೆಂಬರ್ ಮಾಹೆಯಲ್ಲಿ ಕರ್ನಲ್ ಸೆಟನ್‌ಕರ್ ಎಂಬುವವನು ಸುಸಜ್ಜಿತ ಅಶ್ವದಳ ದೊಡನೆ ಹಲಗಲಿಯನ್ನು ಮುತ್ತಿ ಬೇಡರ ಬಂಡುಕೋರ ರನ್ನು ಬಗ್ಗು ಬಡಿಯಲಾರಂಭಿಸಿದನು. ಅಧಿಕ ಸಂಖ್ಯೆ ಯಲ್ಲಿಯೇ ಪ್ರಾಣಹಾನಿಯಾಯಿತು. ತಪ್ಪಿಸಿಕೊಂಡವರಲ್ಲಿ ಕೆಲವರು ಬಾಬಾಸಾಹೇಬನಲ್ಲೂ, ಮತ್ತೆ ಕೆಲವರು ಭೀಮರಾಯನಲ್ಲಿಗೂ ಬಂದು ಸೇರಿದರು. ಭೀಮರಾಯನು ಈ ಸ್ವಾತಂತ್ರ್ಯ ಯೋಧರಿಗೆ ಆಶ್ರಯ ನೀಡಿದನು. ಇನ್ನೂ ಹೆಚ್ಚಿನ ಶಸ್ತ್ರಾಸ್ತ್ರ ಸಂಗ್ರಹಣೆಗೂ, ಸೈನಿಕರ ಜಮಾವಣೆಗೂ ತೀವ್ರ ಗಮನ ಹರಿಸಿದನು.

ಕಲೆಕ್ಟರನೊಡನೆ

[ಬದಲಾಯಿಸಿ]

ಭೀಮರಾಯನ ಈ ಎಲ್ಲ ಚಟುವಟಿಕೆಗಳು, ಪತ್ರ ವ್ಯವಹಾರಗಳು, ಬಳ್ಳಾರಿ ಹಾಗೂ ಧಾರವಾಡ ಜಿಲ್ಲೆಯ ಆಂಗ್ಲ ಅಧಿಕಾರಿಗಳಿಗೆ ಪಾದ್ರಿಗಳಿಂದಲೂ, ಗೂಢಚರರಿಂದಲೂ ತಿಳಿಯುತ್ತಿತ್ತು. ಧಾರವಾಡದ ಕಲೆಕ್ಟರನ ಕೋಪಕ್ಕೆ ಎಣೆ ಇಲ್ಲವಾಯಿತು. ಭೀಮರಾಯನ ಈ ಕಾರ‍್ಯಾಚರಣೆಯನ್ನು ರಾಜದ್ರೋಹ, ಉದ್ಧಟತನದ ವರ್ತನೆ ಎಂದು ಪರಿಗಣಿಸಿದ. ಆದರೂ ತನ್ನ ಮನಸ್ಸನ್ನು ಹೊರಗೆ ತೋರಿಸದೆ ಭೀಮರಾಯನಿಗೆ ಪತ್ರ ಬರೆದು ಧಾರವಾಡಕ್ಕೆ ಬಂದು ತನ್ನನ್ನು ಬೇಟಿಯಾಗುವಂತೆ ಆಹ್ವಾನಿಸಿದ. ಭೀಮರಾಯನು ಈತನ ಆಮಂತ್ರಣವನ್ನು ಒಪ್ಪಿ ತನ್ನ ಗೆಳೆಯ ಹಮ್ಮಿಗೆ ದೇಸಾಯಿ ಯೊಂದಿಗೆ ಹೊರಟು ಕಲೆಕ್ಟರನ ಭೇಟಿ ಮಾಡಿದನು. ಕಲೆಕ್ಟರನು ತನ್ನ ಕೋಪವನ್ನು ತೋರಗೊಡದೆ ಸ್ನೇಹ ನಟಿಸುತ್ತಾ ಹೇಳಿದನು: ‘ಭೀಮರಾಯರೇ, ನೀವು ಬ್ರಿಟಿಷರ ಸ್ನೇಹಿತರು, ಹಿತೈಷಿಗಳೆಂಬುದರಲ್ಲಿ ನಮಗೆ ಯಾವ ಸಂದೇಹವೂ ಇಲ್ಲ. ಆದರೆ ನಿಮ್ಮ ಸ್ನೇಹಿತರಾದ ಇತರ ದೇಸಾಯರ ಬಗ್ಗೆ ನಮಗೆ ಗುಪ್ತಚರರಿಂದ ಅನೇಕ ಸಂಗತಿಗಳು ಕಿವಿಗೆ ಬೀಳುತ್ತಿವೆ. ನಿಮ್ಮ ಮಿತ್ರರಾದ ಸೊರಟೂರು ಹಾಗೂ ಹಮ್ಮಿಗೆಯ ದೇಸಾಯರು ನಮ್ಮ ವಿರುದ್ಧ ಶಸ್ತ್ರಗಳನ್ನು ಸಂಗ್ರಹಿಸಿ ಬಂಡಾಯವೇಳುವುದಕ್ಕೆ ಸಿದ್ಧರಾಗುತ್ತಿರುವರೆಂದು ತಿಳಿಯಿತು. ಇದು ನಿಜವೇ ?’ ಭೀಮರಾಯ :ಇಂಥ ಸುದ್ದಿಗಳನ್ನು ನಂಬುವಿರಾ?,

ಕಲೆಕ್ಟರ್ : ಇಲ್ಲ, ಇಲ್ಲ… ಅದಕ್ಕೆಂದೇ … ನಿಮ್ಮನ್ನು …

ಭೀಮರಾಯ : ನಾನಂತೂ ನಿಮ್ಮ ಉಪ್ಪುಂಡವನು. ನಿಮ್ಮ ಬಗ್ಗೆ ಕನಸು ಮನಸ್ಸಿನಲ್ಲೂ ದ್ರೋಹ ಚಿಂತಿಸುವುದಿಲ್ಲ. ಆದರೆ ನಿಮ್ಮ ಗೂಢಚರರು ನನ್ನ ಬಗ್ಗೆ ತಪ್ಪು ತಿಳಿದು ಇಲ್ಲ ಸಲ್ಲದ ವಿಚಾರಗಳನ್ನು ನಿಮಗೆ ತಿಳಿಸಿರುವುದನ್ನು ಬಲ್ಲೆ.

ಕಲೆಕ್ಟರ್ : ಹಾಗಾದರೆ ನಿಮ್ಮ ಬಳಿ ಶಸ್ತ್ರಾಸ್ತ್ರಗಳು ಇಲ್ಲವೆಂದು ಒಪ್ಪಿಕೊಳ್ಳುವಿರಾ? ಈ ಬಗ್ಗೆ ಹೇಳಿಕೆ ಕೊಡುವಿರಾ?

ಭೀಮರಾಯ : ಬೇಟೆಯಲ್ಲಿ ನನಗೆ ಆಸಕ್ತಿ ಇರುವ ವಿಚಾರ ತಮಗೆ ತಿಳಿದೇ ಇರುವ ಸಂಗತಿ. ಹಾಗಾಗಿ ಬೇಟೆಗೆ ಹೋದಾಗ ಆತ್ಮರಕ್ಷಣೆಗಾಗಿ ಬೇಕಾಗುವಷ್ಟನ್ನು ಮಾತ್ರ ಇಟ್ಟು ಕೊಂಡಿರುವೆನು.

ಪಾರಾದರು

[ಬದಲಾಯಿಸಿ]

ಕಲೆಕ್ಟರನು ಭೀಮರಾಯನಿಗೆ ವಿಶ್ವಾಸದ ಗುರುತಿಗಾಗಿ ಮುಚ್ಚಳಿಕೆಯನ್ನು ಬರೆದುಕೊಡುವಂತೆ ಒತ್ತಾಯಿಸಿದನು. ಭೀಮರಾಯನು ಹಿಂದುಮುಂದು ನೋಡಿದನು. ಅದೇ ವೇಳೆಗೆ ಕೊಲ್ಲಾಪುರದ ಜೇಕಬ್ ಎಂಬ ಅಧಿಕಾರಿಯು ‘ಹಮ್ಮಿಗೆ ದೇಸಾಯಿ ಭೀಮರಾಯನೊಂದಿಗೆ ಸೇರಿಕೊಂಡು ಪಿತೂರಿ ಕಾರ್ಯದಲ್ಲಿ ತೊಡಗಿರುವನು’ ಎಂದು ಕಲೆಕ್ಟರನಿಗೆ ದೂತನ ಮೂಲಕ ತಿಳಿಸಿದನು. ಈ ಸುದ್ದಿ ಕೇಳಿ ಭೀಮರಾಯನು ಎಚ್ಚೆತ್ತನು. ತನ್ನನ್ನೂ ದೇಸಾಯಿ ಯನ್ನೂ ಬಂಧಿಸಿ ಧಾರವಾಡದ ಸೆರೆಗೆ ತಳ್ಳುವ ಕಲೆಕ್ಟರನ ಉದ್ದೇಶವನ್ನು ಊಹಿಸಿದನು. ತಕ್ಷಣವೇ ಹಮ್ಮಿಗೆ ದೇಸಾಯಿಗೆ ಉಪಾಯವಾಗಿ ತಪ್ಪಿಸಿಕೊಳ್ಳುವಂತೆ ಸೂಚಿಸಿದನು. ದೇಸಾಯಿಯು ಇನಾಂ ಕಮೀಷನರ ಮುಂದೆ ಕೆಲವು ಕಾಗದ ಪತ್ರಗಳನ್ನು ಹಾಜರು ಪಡಿಸಬೇಕೆಂಬ ನೆವವೊಡ್ಡಿ ಧಾರವಾಡದಿಂದ ಪಾರಾದನು. ಭೀಮರಾಯನು ದೇಸಾಯಿ ಯನ್ನು ಹುಡುಕುವ ನೆಪಹೇಳಿ ಚಾಕಚಕ್ಯತೆಯಿಂದ ತಪ್ಪಿಸಿಕೊಂಡನು.

ಹೀಗೆ ಇಬ್ಬರೂ ಧಾರವಾಡದಿಂದ ತಪ್ಪಿಸಿಕೊಂಡ ಮೇಲೆ ಇಂಗ್ಲಿಷರಿಗೆ ಭೀಮರಾಯನ ವಿರೋಧ ಹಾಗೂ ಪಿತೂರಿಗಳ ಬಗ್ಗೆ ನಂಬುಗೆ ಬಂದಿತು. ಅವರು ಮುಂಜಾಗ್ರತೆ ವಹಿಸಿದರು. ಬಾಬಾಸಾಹೇಬನು ಭೀಮರಾಯನಿಗೆ ಪತ್ರ ಬರೆದು ಇಂಗ್ಲಿಷರು ಕಷ್ಟಕ್ಕೆ ಸಿಕ್ಕಿರುವ ಆ ಸಮಯದಲ್ಲಿ ತಾವೂ ಧರ್ಮ ಮತ್ತು ಸಂಸ್ಕೃತಿಗಳನ್ನು ಉಳಿಸಲು ದಂಗೆ ಏಳಬೇಕೆಂದು ತಿಳಿಸಿದನು.

ಬಂಡಾಯದ ಸಿದ್ಧತೆ

[ಬದಲಾಯಿಸಿ]

ಬಂಡಾಯದ ಸಿದ್ಧತೆ ಭರದಿಂದ ಸಾಗಿತು. ಎಲ್ಲ ಸಿದ್ಧತೆಗಳೂ ಮುಗಿದ ನಂತರ ಭೀಮರಾಯನು ನರಗುಂದದ ಬಾಬಾಸಾಹೇಬನಿಗೆ ಪತ್ರ ಬರೆದು ಅವನಿಗೆ ನವಲಗುಂದದ ಮೇಲೆ ಹಾಯ್ದು ಧಾರವಾಡದ ಮೇಲೆ ದಾಳಿಯಿಡುವಂತೆ ಸೂಚಿಸಿದನು. ಅತ್ತ ಡಂಬಳದ ದೇಸಾಯಿಗೆ ಡಂಬಳ ಹಾಗೂ ಗದಗು ಪ್ರಾಂತಗಳನ್ನು ವಶಪಡಿಸಿಕೊಳ್ಳುವಂತೆ ತಿಳಿಸಿದನು. ತಾನು ಹಾಗೂ ಕೆಂಚನಗೌಡನೂ ಸೇರಿಕೊಂಡು ಕೊಪ್ಪಳ ಪ್ರದೇಶದಲ್ಲಿ ಸ್ವಾತಂತ್ರ್ಯ ಯುದ್ಧ ಘೋಷಿಸುವುದಾಗಿ ತಿಳಿಸಿದನು.

ಇಂಥ ಸನ್ನಿವೇಶದಲ್ಲಿ ತನ್ನ ಹೆಂಡತಿ ಮತ್ತು ಮಕ್ಕಳನ್ನು ಬೆಣ್ಣೆಹಳ್ಳಿಯಲ್ಲಿಯೇ ಬಿಟ್ಟರೆ ಅಪಾಯವೆಂದರಿತು ಭೀಮರಾಯನು ಕುಕನೂರಿನ ದೇಸಾಯಿಯ ಮನೆಗೆ ರಹಸ್ಯವಾಗಿ ಕಳಿಸಿದನು. ಭೀಮರಾಯನ ಸಂಧಾನದ ಫಲವಾಗಿ ಆನೆ ಗೊಂದಿ ರಾಜನು ಬಂಡಾಯವೇಳಲು ಸಮ್ಮತಿಸಿ ದೂತರ ಮೂಲಕ ಹೇಳಿಕಳಿಸಿದ್ದನು. ಭೀಮರಾಯನ ಆದೇಶದಂತೆ ಗಂಗಾವತಿಯ ಮುಸ್ಲಿಮರೂ ಸಹ ಬಂಡಾಯ ಹೂಡಲು ಸಿದ್ಧರಾದರು. ಅದರಂತೆ ಮೊದಲು ಗಂಗಾವತಿಯತ್ತ ಭೀಮರಾಯನು ಮುಸಲ್ಮಾನರನ್ನು ಕೂಡಿಸಿಕೊಂಡು ಕೊಪ್ಪಳವನ್ನು ಹಿಡಿಯಲು ಹೊರಟನು.

ಸಿಡಿಲಿನಂತಹ ಸುದ್ದಿ

[ಬದಲಾಯಿಸಿ]

ಇದೇ ವೇಳೆಗೆ ದೂತನೊಬ್ಬ ಬಂದು ಭೀಮ ರಾಯನಿಗೆ ದಾರುಣ ಸುದ್ದಿಯೊಂದನ್ನು ತಿಳಿಸಿದನು. ಕುಕನೂರಿಗೆ ಹೋಗುತ್ತಿದ್ದ ಆತನ ಹೆಂಡತಿ ಮತ್ತು ಮಕ್ಕಳನ್ನು ಆಂಗ್ಲರು ಸೆರೆಹಿಡಿದರೆಂದು ತಿಳಿಸಿದನು. ಭೀಮರಾಯನಿಗೆ ಈ ಸಂಗತಿ ಕೇಳಿದಾಕ್ಷಣ ಅಚ್ಚರಿಯೂ, ದಿಗ್ಭ್ರಮೆಯೂ ಏಕಕಾಲದಲ್ಲಿ ಉಂಟಾಯಿತು. ಆಗ ಆತನ ನಂಬುಗೆಯ ಸೇವಕ ಭವಾನಿ ಸಿಂಹನು ‘ಹುಜೂರ್, ನಿಮ್ಮ ಪತ್ನಿ ಪುತ್ರರ ಕೂದಲೂ ಕೊಂಕದಂತೆ ಬಿಡಿಸಿಕೊಂಡು ಬರುವ ಹೊಣೆ ನನಗಿರಲಿ. ಈ ಕಾರ್ಯದಲ್ಲಿ ನಾನು ವಿಫಲನಾದರೆ ನಿಮಗೆ ನಾನು ಜೀವಂತ ಮುಖವನ್ನು ತೋರಿಸಲಾರೆ’ ಎಂದನು.

ಭೀಮರಾಯನು ಚಿಂತಾಕ್ರಾಂತನಾದನು. ಬಹಳ ರಹಸ್ಯವಾಗಿದ್ದ ಈ ಸಂಗತಿಯು ಹೇಗೆ ಶತ್ರುಗಳಿಗೆ ಗೊತ್ತಾಯಿತೆಂಬುದು ಅವನಿಗೆ ಅರಿವಾಗಲಿಲ್ಲ. ತಮ್ಮಲ್ಲಿಯೇ ಯಾರೋ ದ್ರೋಹಿಗಳು ಸೇರಿಕೊಂಡಿದ್ದು ವರದಿ ಮಾಡುತ್ತಿರಬೇಕೆಂದು ಅನುಮಾನಿಸಿದನು. ತಕ್ಷಣವೇ ಅವನಿಗೆ ಬೆಣ್ಣೆಹಳ್ಳಿಯ ಕುಲಕುರ್ಣಿ ನರಸಪ್ಪ ಎಂಬುವನ ಮೇಲೆ ಸಂಶಯ ಉಂಟಾಯಿತು. ಭೀಮರಾಯನು ಬೆಣ್ಣೆಹಳ್ಳಿಗೆ ದೂತರನ್ನು ಕಳಿಸಿ ಆತನನ್ನು ಸೆರೆಹಿಡಿಯಲು ಪ್ರಯತ್ನಿಸಿದನು. ಈ ವೇಳೆಗೆ ನರಸಪ್ಪ ಅಲ್ಲಿಂದ ಪರಾರಿಯಾಗಿದ್ದನು.

‘ಇಂಥ ದ್ರೋಹಿಗಳಿಂದಲೇ ಭಾರತದ ಸ್ವಾತಂತ್ರ್ಯ ಹೋರಾಟ ಇದು ತನಕ ವಿಫಲಗೊಳ್ಳುತ್ತಾ ಬಂದಿದೆ’ ಎಂದು ಭೀಮರಾಯನು ರೋಷದಿಂದ ಹಲ್ಲು ಕಡಿದನು. ಈಗೇನು ಮಾಡುವುದು? ಕೊಪ್ಪಳಕ್ಕೆ ಹೋಗಿ ಅಲ್ಲಿ ಸೆರೆಯಲ್ಲಿದ್ದ ಅವನ ಇಬ್ಬರು ಹೆಂಡತಿಯರು ಮತ್ತು ಮಕ್ಕಳನ್ನು ಬಿಡಿಸಲೇ ಬೇಕಾಗಿತ್ತು. ಈಗ ದುಡುಕಿದರೆ, ಅವರ ಜೀವಕ್ಕೆ ಅಪಾಯವೂ ಇತ್ತು.

ಹೆಂಡತಿ, ಮಕ್ಕಳ ರಕ್ಷಣೆ

[ಬದಲಾಯಿಸಿ]

ಕೊಪ್ಪಳದ ತಹಶೀಲ್ದಾರ ಮಹಮದ್ ಹನೀಫನು ಭೀಮರಾಯನ ಕುಟುಂಬದವರನ್ನು ಬಂಧಿಸಿ, ಕೊಪ್ಪಳದಲ್ಲಿ ಸೆರೆಮನೆಯಲ್ಲಿಟ್ಟು ಕೆಂಚನಗೌಡ ಮತ್ತು ಭೀಮರಾಯರನ್ನು ಹುಡುಕಿಕೊಂಡು ಬೆಣ್ಣೆಹಳ್ಳಿಯತ್ತ ಹೋಗಿದ್ದನು. ಕೊಪ್ಪಳದಲ್ಲಿ ಈಗ ಹೆಚ್ಚು ಸೈನ್ಯವಿರಲಿಲ್ಲ. ಭೀಮರಾಯನು ಭರಮಪ್ಪ ನಾಯಕನ ಸಹಾಯದಿಂದ ಗುಪ್ತರೀತಿಯಲ್ಲಿ ಕೋಟೆ ಯೊಳಕ್ಕೆ ಪ್ರವೇಶಿಸಿದನು. ಕಾವಲಿದ್ದ ಸೈನಿಕರನ್ನು ಅವರಿದ್ದ ಸ್ಥಳಗಳಲ್ಲಿಯೇ ಬಂಧಿಸಿ ಒಂದು ತೊಟ್ಟು ರಕ್ತವೂ ಬೀಳದಂತೆ ಕೊಪ್ಪಳದ ಕೋಟೆಯನ್ನು ವಶಪಡಿಸಿಕೊಂಡನು. ಭೀಮ ರಾಯನ ಪತ್ನಿ ಹೆಣ್ಣುಮಗುವೊಂದಕ್ಕೆ ಜನ್ಮವಿತ್ತಳು. ಸಂತಸ ಗೊಂಡ ಭೀಮರಾಯನು ಎಲ್ಲರಿಗೂ ಸಕ್ಕರೆ ಹಂಚಿದನು. ‘ತುಲಸಿ’ ಎಂದು ಆ ಮಗುವಿಗೆ ಹೆಸರಿಟ್ಟನು.

ಮತ್ತೊಂದು ಸಿಡಿಲು

[ಬದಲಾಯಿಸಿ]

ಕೊಪ್ಪಳವು ವಶವಾದ ನಂತರ ಹೊಸಪೇಟೆ ಮತ್ತು ಕಮಲಾಪುರದತ್ತ ದಾಳಿಯಿಡಲು ಭೀಮರಾಯ ನಿರ್ಧರಿಸಿದನು. ಆದರೆ ಇದೇ ವೇಳೆಗೆ ಕೆಂಚನಗೌಡನಿಂದ ಒಂದು ಭಯಂಕರ ವಾರ್ತೆ ಬಂದಿತು. ಇದುವರೆಗೂ ಹಮ್ಮಿಗೆಯಲ್ಲಿ ಶೇಖರಿಸಿಟ್ಟಿದ್ದ ಅಪಾರವಾದ ಶಸ್ತ್ರಾಸ್ತ್ರಗಳನ್ನು ಆಂಗ್ಲರು ವಶಪಡಿಸಿಕೊಂಡಿರುವರೆಂಬ ವಿಚಾರವನ್ನು ಹೇಳಿ ಕಳಿಸಿದ್ದನು. ಡಂಬಳದ ಫೌಜುದಾರನು ಹಣದ ಆಸೆಗೆ ಬಲಿಯಾಗಿ ಈ ಸಮಾಚಾರವನ್ನು ಆಂಗ್ಲ ಅಧಿಕಾರಿಗಳಿಗೆ ತಿಳಿಸಿದ್ದನು. ಕೂಡಲೇ ಧಾರವಾಡದ ಪೊಲೀಸ್ ಅಧಿಕಾರಿಗಳು ಕಾರ್ಯೋನ್ಮುಖರಾದರು. ಅವರು ಭೀಮರಾಯನ ಬಂಡಾಯವನ್ನು ಮೊಳಕೆಯಲ್ಲೇ ಹೊಸಕಿಹಾಕಲು ನಿಶ್ಚಯಿಸಿದರು. ಧಾರವಾಡದ ಪೊಲೀಸ್ ಅಧಿಕಾರಿಯು ಜನರಿಂದ ವಶಪಡಿಸಿಕೊಂಡಿದ್ದ ಕೋವಿ, ಬಂದೂಕುಗಳನ್ನು ತಂದು ಒಪ್ಪಿಸುವಂತೆ ಭೀಮರಾಯನಿಗೆ ಆಜ್ಞಾಪಿಸಿದನು. ಇತ್ತ ಡಂಬಳದ ಮೇಲೆ ಫೌಜುದಾರನನ್ನು ಹಠಾತ್ತನೆ ಸೈನಿಕರೊಡನೆ ಕಳಿಸಿಕೊಟ್ಟನು. ಅವನು ಆಯುಧ ಸಂಗ್ರಹವಿದ್ದ ಹಮ್ಮಿಗೆ ದೇಸಾಯಿವಾಡೆಯನ್ನು ಮುತ್ತಿ ಅಲ್ಲಿದ್ದ ಎಲ್ಲ ಅಸ್ತ್ರಗಳನ್ನೂ ಮದ್ದು ಗುಂಡುಗಳನ್ನೂ ಧಾರವಾಡಕ್ಕೆ ಸಾಗಿಸಿದನು. ಕೆಂಚನಗೌಡನ ಕಡೆಯವರು ಫೌಜುದಾರನಿಗೆ ಹೆದರಿ ಯುದ್ಧವನ್ನೂ ಮಾಡದೆ ಶಸ್ತ್ರಾಸ್ತ್ರಗಳನ್ನು ಅವರಿಗೆ ಒಪ್ಪಿಸಿದ್ದರು. ಈ ಸಂಗತಿಯನ್ನು ಕೇಳಿ ಭೀಮರಾಯನಿಗೆ ಬಲವಾದ ಆಘಾತವಾದಂತಾಯಿತು. ಅವನಿಗೆ ನೆಲ ತಟ್ಟನೆ ಕುಸಿದಂತಾಯಿತು. ಆಂಗ್ಲರ ಮೇಲೆ ಈಗಾಗಲೇ ಯುದ್ಧವನ್ನು ಸಾರಿಯಾಗಿತ್ತು. ಮಿತ್ರರನ್ನೆಲ್ಲ ಹೋರಾಡಲು ಸಂಘಟಿಸಿ ದುದೂ ಆಗಿತ್ತು. ಇಂಥ ಪರಿಸ್ಥಿತಿಯಲ್ಲಿ ಸಂಗ್ರಹಿಸಿಟ್ಟಿದ್ದ ಆಯುಧಾಗಾರವೆಲ್ಲ ಕೈಬಿಟ್ಟು ಹೋಗಿತ್ತು. ಕ್ಷಣಕಾಲ ಭೀಮ ರಾಯನಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಇದಕ್ಕೆ ಪೂರಕವಾಗಿ ನರಗುಂದದ ಬಾಬಾಸಾಹೇಬನು ಆಂಗ್ಲರ ಮೇಲೆ ಯುದ್ಧ ಸಾರಿದ್ದನು. ಈತನನ್ನು ಹತ್ತಿಕ್ಕಲು ಬಂದಿದ್ದ ಮ್ಯಾನ್ಸನ್ನನ ಸೈನ್ಯವನ್ನು ಬಾಬಾ ಸಾಹೇಬನ ಸೈನಿಕರು ಸುರೇಬಾನಿನಲ್ಲಿ ನಿರ್ದಯವಾಗಿ ಕೊಂದು ಹಾಕಿದ್ದರು.

ಪಂಜರ ಸೇರಿದ ಹಕ್ಕಿ

[ಬದಲಾಯಿಸಿ]

ಶಸ್ತ್ರಾಸ್ತ್ರಗಳೆಲ್ಲ ಇಂಗ್ಲಿಷರ ಪಾಲಾದ ಮೇಲೆ ಭೀಮರಾಯನ ಸ್ಥಿತಿ ನಿಸ್ಸಹಾಯಕವಾಗಿದ್ದಿತು. ಅವನ ಮಿತ್ರರು ಈಗ ತಾವು ಕೆಲವು ಕಾಲ ತಲೆತಪ್ಪಿಸಿಕೊಂಡು ಬಂಡಾಯದ ಪ್ರಯತ್ನವನ್ನು ವ್ಯವಸ್ಥಿತ ರೀತಿಯಲ್ಲಿ ಸಿದ್ಧಪಡಿಸಿಕೊಂಡು ಹೋರಾಡುವುದೆಂದು ಸಲಹೆಯಿತ್ತರು. ಭವಾನಿಸಿಂಗನು ತಾವು ಕೊಪ್ಪಳದ ಬೆಟ್ಟಗುಡ್ಡಗಳಲ್ಲಿ ಅಡಗಿದ್ದು ಶತ್ರುಗಳನ್ನು ಕೂಟ ಯುದ್ಧದಿಂದ ಮಣಿಸಬೇಕೆಂದು ಸೂಚಿಸಿದನು. ಭೀಮರಾಯನು ಇದಾವುದಕ್ಕೂ ಒಪ್ಪಲಿಲ್ಲ. ಬದಲಾಗಿ ತಾವು ಹೋರಾಡುವುದೆಂದು ನಿರ್ಧರಿಸಿದ್ದೇವೆ, ಕೊಪ್ಪಳದ ಕೋಟೆಯ ಆಕ್ರಮಣದಿಂದಲೇ ಯುದ್ಧ ಆರಂಭ ಮಾಡೋಣವೆಂದು ತೀರ್ಮಾನಿಸಿದನು. ಪ್ರಾಯಶಃ ಹೆಂಡತಿ ಮಕ್ಕಳ ಮೇಲಿನ ಮೋಹ ಅವನನ್ನು ಇಂಥ ತಪ್ಪು ಲೆಕ್ಕಾಚಾರ ಮಾಡಿಸಿತೋ ಏನೋ? ಇದೇ ಭೀಮರಾಯನ ಪ್ರಥಮ ದುಡುಕು ನಿರ್ಧಾರವಾಗಿದ್ದಿತು. ಅವರು ಅದರಂತೆ ಕೊಪ್ಪಳದ ಕೋಟೆಯನ್ನು ಸುಲಭವಾಗಿ ತಮ್ಮ ವಶಕ್ಕೆ ತೆಗೆದುಕೊಂಡರು. ಅವರು ಅದನ್ನು ಹೋರಾಟದ ಕೇಂದ್ರವನ್ನಾಗಿ ಮಾಡಿಕೊಳ್ಳ ಬೇಕೆನ್ನುವಷ್ಟರಲ್ಲಿಯೇ ಆಂಗ್ಲರ ದಂಡು ಬಂದು ಕೊಪ್ಪಳದ ಹೊರವಲಯದಲ್ಲಿ ಬೀಡುಬಿಟ್ಟಿತ್ತು. ಇಂಗ್ಲಿಷರ ಚಲನವಲನ ಗಳನ್ನು ಅರಿತುಕೊಂಡು ಯುದ್ಧದ ರೀತಿ ನೀತಿಗಳನ್ನು ನಿರ್ಧರಿಸಲು ಭೀಮರಾಯನಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಸ್ವತಂತ್ರವಾಗಿ ಹಾರಾಡುತ್ತಿದ್ದ ಹಕ್ಕಿ ತಾನಾಗಿ ಬಂದು ಪಂಜರದಲ್ಲಿ ಸಿಲುಕಿದಂತೆ ಆಗಿತ್ತು.

ಶತ್ರುಗಳು ಬಂದರು

[ಬದಲಾಯಿಸಿ]

ಭೀಮರಾಯನನ್ನು ಸೆರೆಹಿಡಿದು ಅವನ ಬಂಡಾಯ ವನ್ನೆಲ್ಲ ತೊಡೆದು ಹಾಕಲು ಧಾರವಾಡದಲ್ಲಿದ್ದ ಕಲೆಕ್ಟರನು ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದನು. ಅವನು ಮೇಜರ್ ಹ್ಯೂಸ್ ಎಂಬ ಸಮರ್ಥ ದಳಪತಿಯನ್ನು ಈ ಕಾರ್ಯಕ್ಕೆ ನಿಯೋಜಿಸಿದ್ದನು. ಜೊತೆಗೆ ಬಳ್ಳಾರಿ, ರಾಯಚೂರು, ಧಾರವಾಡ ಮತ್ತು ಹೈದರಾಬಾದುಗಳಿಂದ ಇಂಗ್ಲಿಷ್ ಸೈನ್ಯ ಶೀಘ್ರ ಹೊರಟು ಯಾರಿಗೂ ತಿಳಿಯದಂತೆ ಕೊಪ್ಪಳದ ಬಳಿಗೆ ಬಂದು ಬೀಡುಬಿಡಲು ವ್ಯವಸ್ಥೆಗೊಳಿಸ ಲಾಗಿತ್ತು. ಈ ವಿಚಾರ ಭೀಮರಾಯನಿಗೆ ಮುಂಚಿತವಾಗಿ ತಿಳಿಯುವುದಕ್ಕೆ ಅವಕಾಶವೇ ಆಗಲಿಲ್ಲ. ಇಂಥ ಪ್ರಯತ್ನವನ್ನು ಇಂಗ್ಲಿಷ್ ಪಡೆಯು ಅತ್ಯಲ್ಪಕಾಲದಲ್ಲಿ ಸಾಧಿಸಬಹುದೆಂಬ ಕಲ್ಪನೆಯೂ ಉಂಟಾಗಲಿಲ್ಲ. ಹ್ಯೂಸನು ಕಾಲುದಳ ಮತ್ತು ಮೈಸೂರು ದಳದವರೊಂದಿಗೆ ಹೊರಟು ಸಕಾಲದಲ್ಲಿ ಕೊಪ್ಪಳದ ಕೋಟೆಯನ್ನು ಮುತ್ತಿದ್ದನು. ಕೆಂಚನಗೌಡ ಮತ್ತು ಭೀಮರಾಯರನ್ನು ಜೀವಸಹಿತ ಸೆರೆ ಹಿಡಿಯಬೇಕೆಂಬ ಇಚ್ಛೆ ಅವನದಾಗಿದ್ದಿತು. ಧಾರವಾಡದ ಕಲೆಕ್ಟರನು ಭೀಮರಾಯ ನನ್ನು ಜೀವಸಹಿತ ಹಿಡಿದುಕೊಟ್ಟವರಿಗೆ ಐದು ಸಹಸ್ರ ರೂಪಾಯಿಗಳ ಬಹುಮಾನ ಕೊಡುವುದಾಗಿ ಪ್ರಕಟಿಸಿದ್ದನು! ಆದರೆ ಯಾರೂ ಅಂತಹ ಕಾರ್ಯಕ್ಕೆ ಮುಂದಾಗಿರಲಿಲ್ಲ. ಏಕೆಂದರೆ ಭೀಮರಾಯನ ಜೋಡಿನಳಿಕೆಯ ಬಂದೂಕಿನ ಗುರಿ ಎಂಥದೆಂಬುದು ಅವರಿಗೆ ಪರಿಚಯವಿತ್ತು. ಇದಕ್ಕೂ ಮೇಲಾಗಿ ಭವಾನಿಸಿಂಗನು ಭೀಮರಾಯನನ್ನು ನೆರಳಿನಂತೆ ಅನುಸರಿಸುತ್ತಿದ್ದನು. ಹೀಗಾಗಿ ಲಂಚ, ಬಹುಮಾನ, ಇತರ ಯಾವುದೇ ಆಮಿಷಗಳಿಗೆ ಜನತೆ ಆಸೆಪಟ್ಟು ಮುಂದೆ ಬರಲಿಲ್ಲ. ಮೇಜರ್ ಹ್ಯೂಸ್ ಈ ಬಾರಿ ತಾನೇ ಆ ಕೆಲಸವನ್ನು ನಿರ್ವಹಿಸಿ ತೀರುವೆನೆಂಬ ನಂಬಿಕೆಯಿಂದ ಬಂದಿದ್ದನು!

ಕೊಪ್ಪಳಕ್ಕೆ ಸುಭದ್ರವಾದ ಪ್ರಾಚೀನ ಕೋಟೆ ಇದ್ದಿತು. ಹೊರಕೋಟೆ ದಾಟಿದನಂತರ ಒಳಕೋಟೆಯ ರಕ್ಷಣೆ ನಿಂತಿತ್ತು. ಕೊಪ್ಪಳದಲ್ಲಿ ಸಹಸ್ರಾರು ಮಂದಿ ಸೈನಿಕರಿಗೆ ದೀರ್ಘ ಕಾಲ ಹೋರಾಟಕ್ಕೆ ಅನುಕೂಲವಿತ್ತು. ಯಥೇಚ್ಛವಾಗಿ ಆಹಾರಧಾನ್ಯ ಸಂಗ್ರಹಣೆ, ನೀರಿನ ಅನುಕೂಲ, ಶಸ್ತ್ರಾಸಗಳ ಸರಬರಾಜಾಗುತ್ತಿತ್ತು. ಭೀಮರಾಯನಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ನೂರಾರು ಸೈನಿಕರು ಸಿದ್ಧರಾಗಿ ನಿಂತಿದ್ದರು. ಹಾಗಾಗಿ ಆಂಗ್ಲರಿಗೆ ಕೊಪ್ಪಳದ ಕೋಟೆ ಹೋರಾಟವಿಲ್ಲದೆ ಸುಲಭವಾಗಿ ದಕ್ಕುವಂತಿರಲಿಲ್ಲ.

ಭೀಮರಾಯನ ಉತ್ತರ

[ಬದಲಾಯಿಸಿ]

ಮರುದಿನ, ೧೮೫೮ರ ಮೇ ೩೦ ರಂದು, ಬೆಳಗಿನ ನಾಲ್ಕು ಗಂಟೆಯ ವೇಳೆಗೆ ಡೆಪ್ಯೂಟಿ ಕಮೀಷನರ್, ಲೆಫ್ಟಿನೆಂಟ್ ಟೈಲರ್‌ನೊಡಗೂಡಿ ಬಂದನು. ನಾಲ್ಕನೆ ಹೈದರಾಬಾದ್ ಸೈನಿಕದಳದೊಂದಿಗೆ, ಲೆಫ್ಟಿನೆಂಟ್ ಫಿಡ್ಲರನೂ ಬಂದು ಹ್ಯೂಸ್‌ನು ಸೇರಿಕೊಂಡನು. ಯುದ್ಧ ಆರಂಭ ವಾಗುವ ಮುನ್ನ ಹ್ಯೂಸನನ್ನು ಭೀಮರಾಯನಿಗೆ ಕಡೇ ಎಚ್ಚರಿಕೆ ನೀಡಿದನು. ‘ಈಗಲೂ ಕಾಲ ಮಿಂಚಿಲ್ಲ. ಕೊಪ್ಪಳದ ಕೋಟೆಯನ್ನು ಒಪ್ಪಿಸಿ ಶರಣಾಗುವುದಾದರೆ ಪ್ರಾಣದಾನ ಮಾಡುವೆ’ ಎಂಬುದಾಗಿ ಪತ್ರ ಬರೆದು ಒಬ್ಬ ಸೈನಿಕನೊಂದಿಗೆ ಕಳಿಸಿಕೊಟ್ಟನು.

ಇದಕ್ಕೆ ಉತ್ತರವಾಗಿ ಭೀಮರಾಯನು ಕೊಪ್ಪಳದ ಬತೇರಿಯ ಮೇಲಿದ್ದ ತೋಪಿನಿಂದ ಗುಂಡನ್ನು ಹಾರಿಸಿದನು! ಕದನ ಪ್ರಾರಂಭವಾಯಿತು.

೧೮೫೮ನೇ ಮೇ ತಿಂಗಳ ೩೧ನೇ ದಿನಾಂಕ ಕದನ ಆರಂಭವಾಯಿತು. ನಾಲ್ಕೂ ದಿಕ್ಕಿನಿಂದ ಕೋಟೆ ಗೋಡೆಗಳಿಗೆ ಗುಂಡುಗಳು ರೊಯ್ಯನೆ ಬಂದು ಬಡಿಯುತ್ತಿದ್ದವು. ಪುನಃ ಹ್ಯೂಸನು ವಿನಾಕಾರಣ ನಿರಪರಾಧಿಗಳ ರಕ್ತಪಾತ ವಾಗುವುದು ಬೇಡವೆಂದು ಭೀಮರಾಯನಿಗೆ ಎಚ್ಚರಿಸಿ, ಇನ್ನೂ ಮೂರು ತಾಸು ಗಡವು ಕೊಟ್ಟು ಶರಣಾಗುವಂತೆ ತಿಳಿಸಿದನು. ಆದರೆ ಭೀಮರಾಯ ಯಾವುದಕ್ಕೂ ಗಮನ ನೀಡಲಿಲ್ಲ. ಅವನು ಆಂಗ್ಲರಿಗೆ ಮಣಿಯಕೂಡದೆಂಬ ಸಂಕಲ್ಪವನ್ನೇ ಮಾಡಿದ್ದನು. ಹ್ಯೂಸನು ಗುಂಡು ಹಾರಿಸಲು ಆಜ್ಞೆ ನೀಡಿದನು.

ಗುಂಡುಗಳು ಸಿಡಿಯುತ್ತಿದ್ದಂತೆ ಕೋಟೆಯ ಕಲ್ಲುಗಳು ಸಡಿಲವಾಗಿ ಬೀಳತೊಡಗಿದವು. ತೋಪುಗಳು ಅತ್ಯಲ್ಪ ಕಾಲದಲ್ಲಿ ಬಾಗಿಲನ್ನು ಧ್ವಂಸಗೊಳಿಸಿದವು. ಶತ್ರುಸೈನಿಕರು ಬಿರುಗಾಳಿಯಂತೆ ನುಗ್ಗಿದರು. ಬತೇರಿಯಲ್ಲಿದ್ದ ಭೀಮರಾಯನಿಗೆ ಕೋಟೆಯ ಬಾಗಿಲನ್ನು ರಕ್ಷಿಸುವುದೇ ಅಥವಾ ಒಳಕೋಟೆಯನ್ನು ಸೇರಿಕೊಂಡು ಕಾದುವುದೇ ಎಂದು ತಿಳಿಯದಾಯಿತು. ಅಷ್ಟರಲ್ಲಿ ಭವಾನಿ ಸಿಂಗನು ಓಡಿಬಂದು ‘. . . ಒಡೆಯಾ ದ್ರೋಹಿಗಳು ವಿಶ್ವಾಸಘಾತುಕತನ ಮಾಡಿದ್ದಾರೆ. ಕೋಟೆಯನ್ನು ಶತ್ರುಗಳಿಗೆ ಒಪ್ಪಿಸಲು ಪಿತೂರಿ ಮಾಡಿದ್ದಾರೆ’ ಎಂದು ತಿಳಿಸಿದನು.

ಹೇಡಿಯಾದ ಮಿತ್ರ

[ಬದಲಾಯಿಸಿ]

ಇದನ್ನು ಕೇಳಿ ಭೀಮರಾಯನು ಕೋಪದಿಂದ ಹುಚ್ಚನಂತಾದನು. ಇಂಥ ಸಮಯದಲ್ಲಿ ದ್ರೋಹ ಚಿಂತನೆಯೇ ಎಂದು ಕನಲಿದನು. ಆದರೆ ಕಾಲ ಮಿಂಚಿತ್ತು. ದ್ರೋಹಿಗಳು ಈ ವೇಳೆಗಾಗಲೇ ಶತ್ರುಗಳಿಗೆ ಕೋಟೆಯ ಬಾಗಿಲನ್ನು ತೆರೆದಿದ್ದರು. ಆ ಸಂದರ್ಭದಲ್ಲಿ ಏನೂ ಮಾಡಲು ಸಾಧ್ಯವಿರಲಿಲ್ಲ. ಈಗ ಹೋರಾಡುವುದು ಇಲ್ಲವೇ ಮಡಿಯುವುದು! ಮಡಿದರೂ ಸರಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿಯಬೇಕು ಎಂದು ನಿರ್ಧರಿಸಿ ಕೈಗೆ ಕೋವಿ ಯನ್ನು ಎತ್ತಿಕೊಂಡನು. ಈ ಸಮಯದಲ್ಲಿ ಕೆಂಚನಗೌಡ, ಭವಾನಿಸಿಂಗ್ ಇಬ್ಬರೂ ಬಂದು ಅವನನ್ನು ಕೂಡಿಕೊಂಡಿದ್ದರು. ಅವರು ಮೂವರೂ ಮಹಾದ್ವಾರದತ್ತ ಬಂದೂಕು ಹಿಡಿದು ಹೊರಟರು ದ್ವಾರದ ಬಳಿಗೆ ಬರುವಷ್ಟರಲ್ಲಿ ಶತ್ರುಸೈನ್ಯ ದ್ವಾರದಿಂದ ಒಳಕ್ಕೆ ಅಲೆಯಂತೆ ನುಗ್ಗುತ್ತಿತ್ತು. ಗುಂಡುಗಳು ರಪರಪನೆ ಸೈನಿಕರಿಗೆ ಬಂದು ತಾಕುತ್ತಿದ್ದವು. ಭೀಮರಾಯನ ಕಡೆಯ ಸೈನಿಕರು ನಿಂತಲ್ಲಿಯೇ ನೆಲಕಚ್ಚುತ್ತಿದ್ದರು. ಕೆಂಚನಗೌಡ ಈ ದೃಶ್ಯ ಕಂಡು ನಡುಗಿದ. ಅವನಿಗೆ ನಿಂತಲ್ಲಿ ನಿಲ್ಲಲಾಗಲಿಲ್ಲ. ಪ್ರಾಣ ಉಳಿಸಿಕೊಳ್ಳಲು ಓಡುವುದೊಂದೇ ಅವನಿಗುಳಿದಿದ್ದ ಮಾರ್ಗ. ಹೇಡಿಯಂತೆ ಓಡತೊಡಗಿದ. ಭೀಮರಾಯ ಹಿಂದಿರುಗಿ ನೋಡಿದ. ಆತನ ಬೆರಳುಗಳು ತಾವಾಗಿಯೇ ಬಂದೂಕಿನ ಕುದುರೆಯನ್ನು ಎಳೆದವು. ಕ್ಷಣಮಾತ್ರದಲ್ಲಿ ಕೆಂಚನಗೌಡನ ದೇಹದೊಳಕ್ಕೆ ಎರಡು ಗುಂಡುಗಳು ತೂರಿ ಅವನನ್ನು ನೆಲಕ್ಕೆ ಕೆಡವಿದವು. ಶತ್ರುವಾದರೇನು ? ಮಿತ್ರ ನಾದರೇನು? ಸ್ವರಾಜ್ಯಕ್ಕೆ ಬೆನ್ನು ತೋರಿಸಿ ಓಡಿ ಹೋಗುವವನು ಸಾಯಲೇಬೇಕು ! ಇದು ಭೀಮರಾಯನ ತೀರ್ಮಾನ !

ಸ್ವಾತಂತ್ರ್ಯನಿಷ್ಠ ಜೀವ ಆರಿತು

[ಬದಲಾಯಿಸಿ]

ಭೀಮರಾಯನೊಡನೆ ನೂರಾರು ಸೈನಿಕರು ಪ್ರಾಣದ ಹಂಗು ತೊರೆದು ಹೋರಾಡಿದರು. ಭೀಮರಾಯನಲ್ಲಿದ್ದ ಗುಂಡುಗಳು ಮುಗಿಯುತ್ತ ಬಂದಿತು. ನಾಲ್ಕು . . .ಮೂರು ! ಇನ್ನುಳಿದುದು ಎರಡೇ ಎರಡು ! ಅದರಲ್ಲಿ ಮತ್ತೂ ಒಂದು ಸಿಡಿಯಿತು. ಮುನ್ನುಗ್ಗಿ ಬರಿತ್ತಿದ್ದ ಶತ್ರು ಸೈನಿಕ ಚೀರಿ ನೆಲಕ್ಕುರುಳಿದ. ಉಳಿದುದು ಒಂದೇ ಒಂದು! ಕೊನೆಯ ಗುಂಡು! ಭೀಮರಾಯ ತನ್ನೆದೆಗೆ ತಾನೇ ಹಾರಿಸಿಕೊಂಡ ! ಎಲ್ಲವೂ ಒಂದೇ ಕ್ಷಣ ! ಭೀಮರಾಯನ ಎದೆಯನ್ನು ಭೇದಿಸಿಕೊಂಡು ಗುಂಡು ಹಾರಿತು. ಹೋರಾಡುತ್ತಾ, ಹೋರಾಡುತ್ತಾ ರಣಕಲಿ ಮುಂಡರಗಿ ಭೀಮರಾಯನು ವೀರನಂತೆ ಮಡಿದಿದ್ದನು. ಶತ್ರುಗಳ ಕೈಗೆ ಸಿಕ್ಕದೆ, ಶತ್ರುಗಳಿಂದ ಪ್ರಾಣ ಕಳೆದುಕೊಳ್ಳದೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜೀವ ಒಂದು ಕಣ್ಮರೆಯಾಯಿತು.

ಆ ದಿನ ಮಧ್ಯಾಹ್ಯ ಹನ್ನೆರಡು ಗಂಟೆಗೆ ಆರಂಭವಾಗಿದ್ದ ಕದನ ಮೂರು ಗಂಟೆಗೇ ಮುಗಿದಿತ್ತು.

ಕ್ಯಾಪ್ಟನ್ ಮೆನಸೀಸನ ನೇತೃತ್ವದಲ್ಲಿ ಹೊರಟಿದ್ದ ಎಪ್ಪತ್ತನಾಲ್ಕನೆ ಹೈಲೆಂಡರ‍್ಸ್ ದಳದ ಒಂದು ಭಾಗ, ಕ್ಯಾಪ್ಟನ್ ಫೋರ್ಡನ ಮುಂದಾಳುತನದಲ್ಲಿ ಬಂದ ನಲವತ್ತೇಳನೆಯ ರೆಜಿಮೆಂಟಿನ ಕೆಲವು ಭಾಗದ ಸೈನಿಕರಿಗೆ ಅಲ್ಪಸ್ವಲ್ಪ ಸಾವು ನೋವುಗಳಾಗಿದ್ದವು. ಇದು ಬಿಟ್ಟರೆ ಸುಲಭವಾಗಿಯೇ ಕೊಪ್ಪಳದ ಕೋಟೆ ಶತ್ರುಗಳ ವಶವಾದಂತಾಯಿತು. ಆಂಗ್ಲ ಸೈನಿಕರು ಕೋಟೆಯೊಳಗೆ ಕೈಗೆಸಿಕ್ಕ ಕ್ರಾಂತಿಕಾರಿಗಳನ್ನು ಕೊಂದರು. ಭೀಮರಾಯನ ಕಡೆಯ ನೂರಾಐವತ್ತು ಮಂದಿ ಸ್ವಾತಂತ್ರ್ಯ ಯೋಧರು ಸೆರೆಸಿಕ್ಕರು. ಕೊಪ್ಪಳದ ಕೋಟೆಯಲ್ಲಿದ್ದ ಬೆಲೆಬಾಳುವ ವಸ್ತುಗಳೆಲ್ಲ ಶತ್ರುಗಳ ವಶವಾಯಿತು. ಭೀಮ ರಾಯನ ಕುಟುಂಬದವರನ್ನು ಹ್ಯೂಸನು ಬಂಧಿಸಿದನು. ಆಂಗ್ಲ ಸರಕಾರ ಭೀಮರಾಯನ ಇನಾಂ ಜಮೀನು ಹಾಗೂ ಉಳಿದ ಆಸ್ತಿಗಳನ್ನೆಲ್ಲ ಮುಟ್ಟುಗೋಲು ಹಾಕಿಕೊಂಡಿತು. ಆತನ ಕುಟುಂಬದಿಂದ ಏನೂ ತೊಂದರೆಯಿಲ್ಲ ಎಂಬುದು ನಂಬಿಗೆಯಾದನಂತರ ಅವರನ್ನು ಬಿಡುಗಡೆಮಾಡಿತು. ಆತನ ಹೆಂಡತಿ ಹಾಗೂ ಮಕ್ಕಳು ಬೀದಿ ಪಾಲಾಗಿ ನಿರ್ಗತಿಕರಾದರು. ಆಂಗ್ಲ ಸರಕಾರ ಮೂವತ್ತು ರೂಪಾಯಿಗಳ ಮಾಸಾಶನವನ್ನು ಭಿಕ್ಷೆಯಂತೆ ನೀಡಿ ತನ್ನ ಔದಾರ್ಯವನ್ನು ತೋರಿಸಿತು!

ಭೀಮರಾಯನ ನಂತರ ದೇಶದ ಈ ಭಾಗದಲ್ಲಿ ಬಂಡಾಯಗಾರರಿಗೆ ಸಮರ್ಥ ನಾಯಕರಾರೂ ಇಲ್ಲ ವಾಯಿತು. ಹಾಗಾಗಿ ಬಂಡಾಯ ತಣ್ಣಗಾಯಿತು. ಇಂಗ್ಲಿಷರು ಸೆರೆಸಿಕ್ಕ ಕ್ರಾಂತಿಕಾರಿಗಳನ್ನು ರಾಯಚೂರಿನಲ್ಲಿ ಮಿಲಿಟರಿ ವಿಚಾರಣೆ ಗೊಳಪಡಿಸಿದರು. ತಪ್ಪಿತಸ್ತರೆಂದು ತೀರ್ಮಾನಿಸಿ ಎಪ್ಪತ್ತೇಳು ಮಂದಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ನಲವತ್ತೇಳು ಮಂದಿಗೆ ಜೀವಾವಧಿ ಕಠಿಣ ಶಿಕ್ಷೆಯನ್ನು, ಇಪ್ಪತ್ತು ಮಂದಿಗೆ ಐದು ವರುಷಗಳ ಶಿಕ್ಷೆಯನ್ನು ವಿಧಿಸಲಾಯಿತು. ಭೀಮರಾಯನಿಗೆ ನೆರವಾಗಿದ್ದ ಎಲ್ಲ ದೇಸಾಯರಿಗೂ ಒಂದಲ್ಲ ಇನ್ನೊಂದು ರೀತಿಯ ಶಿಕ್ಷೆ ಯಾಯಿತು. ಮೊಹದೀನನಿಗೂ ಘಾಸಿ ಶಿಕ್ಷೆ ವಿಧಿಸಲಾಯಿತು.

ಇಷ್ಟೆ ಅಲ್ಲ ಆಂಗ್ಲರ ಮಾತನ್ನು ನಂಬಿ ಬಂಡಾಯದ ವಿವರವನ್ನೆಲ್ಲ ಹೊರಗೆಡಹಿದ್ದ ಭೀಮರಾಯನ ಗುಮಾಸ್ತ ನಾಗಿದ್ದ ಭೀಮರಾಯನೆಂಬುವನಿಗೂ ಸೆರೆವಾಸ ಪ್ರಾಪ್ತಿ ಯಾಯಿತು! ಹೀಗೆ ಮುಂಡರಗಿ ಭೀಮರಾಯನ ಸ್ವಾತಂತ್ರ್ಯ ಹೋರಾಟ ವಿಫಲವಾಯಿತು. ಭಾರತೀಯರಲ್ಲಿದ್ದ ಸ್ವಾರ್ಥ, ಅನೈಕಮತ್ಯ, ಪರಸ್ಪರ ದ್ವೇಷಾಸೂಯೆಗಳಿಂದ ಸ್ವಾತಂತ್ರ್ಯ ಯೋಧರು ಹಚ್ಚಿದ್ದ ಸ್ವಾತಂತ್ರ್ಯ ಜ್ವಾಲೆ ನಂದಿತು.

ಎಲ್ಲ ಕಾಲಕ್ಕೆ ಸ್ಫೂರ್ತಿ

[ಬದಲಾಯಿಸಿ]

ಭೀಮರಾಯನು ರಾಜನಲ್ಲ, ರಾಜವಂಶಸ್ಥನೂ ಅಲ್ಲ, ದೇಸಾಯಿಯೂ ಅಲ್ಲ. ಮಾತೃಭೂಮಿಯ ಸರ್ವಸಂಪತ್ತೂ ಅನ್ಯರ ಪಾಲಾಗಿ, ಧರ್ಮ, ಸಂಸ್ಕೃತಿಗಳ ನಾಶವಾಗಿ ದೇಶ ಬಾಂಧವರು ಪರರ ಆಳಾಗುವರಲ್ಲ ಎಂಬ ದೇಶಪ್ರೇಮದಿಂದ ಇಂಗ್ಲಿಷರ ವಿರುದ್ಧ ಬಂಡೆದ್ದ ವೀರ. ಅವನು ಒಬ್ಬ ಸಾಮಾನ್ಯ ಪ್ರಜೆ. ಸಹಸ್ರಾರು ದೇಶಭಕ್ತರನ್ನು ಸಂಘಟಿಸಿದ ಪುರುಷಸಿಂಹ. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಆರಂಭಗೊಂಡಾಗ ಕರ್ನಾಟಕದ ಅನೇಕ ಮಹಾರಾಜರುಗಳು ಕೈಕಟ್ಟಿ ಕುಳಿತಿದ್ದಾಗ ಜನತೆಯ ಪ್ರತಿನಿಧಿಯಾಗಿ ಕೈಯಲ್ಲಿ ಶಸ್ತ್ರ ಹಿಡಿದುನಿಂತು ಹೋರಾಡಿ ಮಡಿದ ಧೀರಪುರುಷ ಮುಂಡರಗಿ ಭೀಮರಾಯ ! ಇವನ ಧೀರೋದಾತ್ತ ಜೀವನ ಹೋರಾಟ, ಸಮಯ ಸ್ಫೂರ್ತಿಗಳು ಎಲ್ಲ ಕಾಲಕ್ಕೂ ನವಚೇತನವನ್ನು ಹೊಮ್ಮಿಸುವುದರಲ್ಲಿ ಸಂದೇಹವಿಲ್ಲ !

ಗಂಗಾಪೂರ ಕೈಗಾರಿಕಾ ಪ್ರದೇಶ

[ಬದಲಾಯಿಸಿ]

ಮುಂಡರಗಿ ಪಟ್ಟಣದಿಂದ ದಕ್ಷಿಣ ದಿಕ್ಕಿಗೆ ಸುಮಾರ ೧೩ ಕೀ.ಮಿ.ದೂರದಲ್ಲಿ ಇದೆ. ತುಂಗಾಭದ್ರ ದಡದಲ್ಲಿ ಇರುವ ಒಂದು ಸುಂದರ ಚಿಕ್ಕ ಗ್ರಾಮ. ಈ ಗ್ರಾಮದಲ್ಲಿ ಮೃಡಗಿರಿ ಸಹಕಾರ ಸಕ್ಕರೆ ಕಾರ್ಖಾನೆ ಗಂಗಾಪೂರವನ್ನು ಮಾಜಿ ಸಚಿವರಾಗಿದ್ದ ಎಸ್.ಎಸ್.ಪಾಟೀಲರ ನೇತೃತ್ವದಲ್ಲಿ ಸ್ಥಾಪಿಸಿದ್ದು ಇರುತ್ತದೆ. ನಂತರ ಕೆಲವು ಆರ್ಥಿಕ ಮತ್ತು ಆಡಳಿತಾತ್ಮಕ ಸಮಸ್ಯೆಯಿಂದಾಗಿ ಅದನ್ನು ಮಾಜಿ ಕೇಂದ್ರ ಸಚಿವರಾದ ಆಂಧ್ರದ ಜೈಪಾಲ್ ರೆಡ್ಡಿಯವರ ಒಡೆತನದ ಕಂಪನಿಗೆ ೩೦ ವರ್ಷಗಳ ಗುತ್ತಿಗೆಗೆ ಕೊಟ್ಟಿದ್ದು ಈಗ ವಿಜಯನಗರ ಸಕ್ಕರೆ ಕಾರ್ಖಾನೆ ಗಂಗಾಪೂರ ಎಂದು ಮರುನಾಮಕರಣದೊಂದಿಗೆ ನಡೆಯುತ್ತಿದೆ.ಸಕ್ಕರೆ ಕಾರ್ಖಾನೆ ಜೊತೆಗೆ ಸ್ಪಿರಿಟ್ ಮತ್ತು ಗೊಬ್ಬರ ತಯಾರಿಕ ಘಟಕಗಳನ್ನು ಕೂಡ ಹೊಂದಿದೆ. ಇದು ಗದಗ ಜಿಲ್ಲೆಯ ದೊಡ್ಡ ಕೈಗಾರಿಕ ಪ್ರದೇಶವಾಗಿದ್ದು ಸಾವಿರಾರು ಜನರಿಗೆ ಉದ್ಯೋಗ ಕೊಡುತ್ತಿದೆ.. .‌. ಅಮಸೂ(ಅಂಗಂ)

ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಮೈಲಾರ ಲಿಂಗನ ಸಿಬಾರಗಟ್ಟೆ ಜಾತ್ರೆ

[ಬದಲಾಯಿಸಿ]
  • ಬನದ ಹುಣ್ಣಿಮೆಯ ಅಂಗವಾಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಹೊರವಲಯದಲ್ಲಿ ಇರುವ ಮೈಲಾರ ಲಿಂಗನ ಸಿಬಾರಗಟ್ಟೆಯಲ್ಲಿ ಹಲವಾರು ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳು ನರೆಯುತ್ತವೆ.

ದಿ.12 ಜನ, 2017 ಗುರುವಾರ ಪೂಜೆಯ ನಂತರ ಗ್ರಾಮದ ಮುಖ್ಯ ಬೀದಿಗಳಲ್ಲಿ ಬೆಲ್ಲದ ಬಂಡಿಯ ಮೆರವ ಣಿಗೆಯನ್ನು ಕೈಗೊಳ್ಳಲಾಯಿತು. ಪೂರ್ಣ ಕುಂಭ ಹೊತ್ತ ಮಹಿಳೆಯರು ಮೆರವ ಣಿಗೆಯ ಮುಂಚೂಣಿಯಲ್ಲಿದ್ದರು. ಡೊಳ್ಳು ಹೊಡೆತದ ಲಯಕ್ಕೆ ತಕ್ಕಂತೆ ಗೊರವಪ್ಪನವರು ಮೆರವಣಿಗೆ ಉದ್ದಕ್ಕೂ ಹೆಜ್ಜೆ ಹಾಕುತ್ತಾ ಸಿಬಾರಗಟ್ಟೆ ತಲುಪಿ ದರು. ಸಿಬಾರಗಟ್ಟೆಯಲ್ಲಿ ಗೊರವಪ್ಪನ ವರು ಹಲವಾರು ಪವಾಡ ತೋರಿಸಿ ಭಕ್ತರನ್ನು ಮಂತ್ರಮುಗ್ಧಗೊಳಿಸಿದರು.

ತೆಂಗಿನಕಾಯಿಗಳನ್ನು ತನ್ನ ತಲೆಗೆ ಅಪ್ಪಳಿಸಿ ಒಡೆದ

[ಬದಲಾಯಿಸಿ]
  • ನವಲಗುಂದ ತಾಲ್ಲೂಕಿನ ಶಿರಕೋಳ ಗ್ರಾಮದ ಮಲ್ಲಪ್ಪ ಗೊರವರ ಎಂಬ ಗೊರವಪ್ಪ ಸುಮಾರು 25 ಸುಲಿದ ತೆಂಗಿನ ಕಾಯಿಗಳನ್ನು ತನ್ನ ತಲೆಗೆ ಅಪ್ಪಳಿಸಿಕೊಂಡು ಒಡೆದು ಹಾಕಿದನು. ಒಂದೊಂದು ಕಾಯಿಯನ್ನು ಒಡೆಯು ವಾಗಲೂ ನೆರೆದಿದ್ದ ಜನರು ‘ಏಳು ಕೋಟಿ, ಏಳುಕೋಟಿ, ಏಳುಕೋಟಿ... ಚಾಂಗುಭಲಾ, ಚಾಂಗುಭಲಾ...’ ಎಂದು ಹರ್ಷೋದ್ಘಾರ ಮಾಡುತ್ತಿದ್ದರು.

ಕಬ್ಬಿಣದ ಸರಪಳಿಯನ್ನು ತುಂಡು ಮಾಡಿದ

[ಬದಲಾಯಿಸಿ]

ಸಿಬಾರಗಟ್ಟೆಯ ಮುಂದೆ ನಿಲ್ಲಿಸಿದ್ದ ಬೃಹತ್ ಕಲ್ಲಿಗೆ ಕಟ್ಟಿದ್ದ ಕಬ್ಬಿಣದ ಸರಪಳಿ ಯನ್ನು ಕೊರ್ಲಹಳ್ಳಿ ಗ್ರಾಮದ ಜುಂಜಪ್ಪ ಕೆಲೂರ ಎಂಬ ಗೊರವಪ್ಪ ಕೈಯಿಂದ ಎಳೆದು ತುಂಡು ಮಾಡುತ್ತಿದ್ದಂತೆ ನೆರೆ ದಿದ್ದ ಭಕ್ತರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತ ಪಡಿಸಿದರು. ಕಬ್ಬಿಣದ ಸರಪಳಿ ಹರಿದ ಗೊರವಪ್ಪನಿಗೆ ನೆರೆದಿದ್ದ ಜನ ಬಂಢಾ ರದ ಮಳೆಗರೆದರು.

ಕಾಲುಗಳಿಗೆ ಚುಚ್ಚಿಕೊಂಡು ತಂತಿ ಪವಾಡ

[ಬದಲಾಯಿಸಿ]

ಸುಮಾರು 25 ಅಡಿ ಉದ್ದದ ತಂತಿ ಯನ್ನು ಏಕಕಾಲದಲ್ಲಿ ಸುಮಾರು 25 ಜನ ಗೊರವಪ್ಪನವರು ತಮ್ಮ ಕಾಲುಗಳಿಗೆ ಚುಚ್ಚಿಕೊಂಡು ತಂತಿ ಪವಾಡ ಮಾಡಿದರು. ಕೆಲವು ಗೊರವಪ್ಪಗಳು ತಮ್ಮ ಕಾಲಿನ ಹಿಂಬದಿಗೆ (ಮೀನ ಖಂಡಕ್ಕೆ) ದಪ್ಪನೆಯ ಕಬ್ಬಿಣದ ಸರಳನ್ನು ಚುಚ್ಚಿಕೊಂಡು ನೋಡುಗರ ಮೈನೆವಿರೇ ಳುವಂತೆ ಮಾಡಿದರು. ಕೆಲವರು ತಮ್ಮ ಪಾದದ ಹಿಮ್ಮಡಿಗೆ ಕಬ್ಬಿಣದ ಸಲಾಕೆ ಚುಚ್ಚಿಕೊಂಡು ಹರಕೆ ತೀರಿಸಿದರು.[]

ಉಲ್ಲೇಖಗಳು

[ಬದಲಾಯಿಸಿ]


ಉಲ್ಲೇಖ

[ಬದಲಾಯಿಸಿ]