ಮುಮ್ಮಡಿ ಕೃಷ್ಣರಾಜ ಒಡೆಯರು (೧೭೯೪ - ಮಾರ್ಚ್ ೨೭, ೧೮೬೮) ಮುಮ್ಮಡಿ ಕೃಷ್ಣರಾಜ ಒಡೆಯರು ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದವರು. ಮೈಸೂರು ರಾಜ್ಯದ ಇತಿಹಾಸದಲ್ಲಿ ತುಂಬಾ ಕಷ್ಟಕರ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದವರು ಮುಮ್ಮಡಿ ಕೃಷ್ಣರಾಜ ಒಡೆಯರು. ಬ್ರಿಟಿಷರೊಡನೆ ೧೭೯೯ರ ಎರಡನೇ ಮೈಸೂರು ಯುದ್ಧದಲ್ಲಿ ಟಿಪ್ಪೂವಿನ ಮರಣಾನಂತರ, ಮೈಸೂರು ರಾಜ್ಯದ ಆಡಳಿತವನ್ನು ಪುನಃ ಮೈಸೂರು ಅರಸು ಮನೆತನಕ್ಕೆ ವಹಿಸಬೇಕೆಂಬ ಒಪ್ಪಂದವಾಯಿತು. ಅದಕ್ಕೆ ಆಂತರಿಕ ವಿರೋಧಗಳು ತುಂಬಾ ಬಲವಾಗಿದ್ದವು. ಮಹಾರಾಣಿ ಲಕ್ಷ್ಮಮ್ಮಣ್ಣಿಯವರ ದಕ್ಷ ಮತ್ತು ವಿಚಕ್ಷಣಾ ಮನೋಭಾವದಿಂದ ಒಪ್ಪಂದವು ಕೈಗೂಡಿತು. ಆಗ ಕೇವಲ ಐದು ವರ್ಷದ ಬಾಲಕನಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ ಪರವಾಗಿ, ಮಹಾರಾಣಿಯವರೂ ಮತ್ತು ದಿವಾನ್ ಪೂರ್ಣಯ್ಯನವರೂ ಆಡಳಿತ ನಡೆಸಬೇಕೆಂದು ಒಪ್ಪಂದವಾಯಿತು .ಬಿರುದು-ಕನ್ನಡದ ಭೋಜ.
ಬ್ರಿಟಿಷರು ಒಪ್ಪಂದದಲ್ಲಿ ಆಂತರಿಕ ಆಡಳಿತವನ್ನು ಮಾತ್ರ ನಿರ್ವಹಿಸತಕ್ಕದ್ದೆಂದೂ; ಉಳಿದ ಎಲ್ಲಾ ಹೊರ ವ್ಯವಹಾರಗಳೂ ಈಸ್ಟ್ ಇಂಡಿಯ ಕಂಪನಿ ಸರ್ಕಾರದವೆಂದೂ ಷರತ್ತು ವಿಧಿಸಿದರು. ಮತ್ತು ವಾರ್ಷಿಕವಾಗಿ ಕಂಪನಿ ಸರ್ಕಾರಕ್ಕೆ ಏಳುಲಕ್ಷ ಪಗೋಡಾಗಳನ್ನು ಕಪ್ಪವಾಗಿ ಕೊಡಬೇಕೆಂದು ತೀರ್ಮಾನಿಸಲಾಯಿತು. ಒಪ್ಪಂದದ ಕಾಲದಲ್ಲಿ ಅರಮನೆಯ ಅಪಾರ ಐಶ್ವರ್ಯ ಬ್ರಿಟಿಷರ ಪಾಲಾಯಿತು. ಮುಮ್ಮಡಿ ಕೃಷ್ಣರಾಜ ಒಡೆಯರ ವಿದ್ಯಾಭ್ಯಾಸ ಮತ್ತು ತರಬೇತಿಯ ಹೊಣೆಯನ್ನು ಸಮರ್ಪಕವಾಗಿ ನಿರ್ವಹಿಸಿದ ಮಹಾರಾಣಿಯವರು ೧೮೧೦ ರಲ್ಲಿ ಮರಣಿಸಿದರು. ನಂತರ ಅಧಿಕಾರ ವಹಿಸಿಕೊಂಡ ಮುಮ್ಮಡಿ ಕೃಷ್ಣರಾಜ ಒಡೆಯರು ಹೆಚ್ಚುಕಾಲ ಅಧಿಕಾರ ನಡೆಸಲು ಬ್ರಿಟಿಷ್ ಆಡಳಿತ ಅವಕಾಶ ಕೊಡಲಿಲ್ಲ. ಸರಿಯಾಗಿ ಕಪ್ಪ ಕೊಡಲಿಲ್ಲವೆಂಬ ನೆಪದಿಂದ ಆಗಿನ ಗೌರ್ನರ್ ಜನರಲ್ ವಿಲಿಯಂ ಬೆಂಟಿಂಕ್ , ಆಡಳಿತ ನಡೆಸಲು ಲುಷಿಂಗ್ಟನ್ ಕಬ್ಬನ್ ಎಂಬ ಅಧಿಕಾರಿಗಳನ್ನು ನೇಮಿಸಿದನು .
ಅತ್ಯಂತ ಸೀಮಿತ ಅವಧಿಯಲ್ಲಿಯೇ ಮುಮ್ಮಡಿ ಕೃಷ್ಣರಾಜರ ಆಡಳಿತ ತುಂಬಾ ಜನಪರವಾಗಿತ್ತು. ಅವರ ಕಾಲದಲ್ಲಿಯೇ ಮೈಸೂರು ನಗರದಲ್ಲಿ ಪ್ರಥಮವಾಗಿ ಸಾರ್ವಜನಿಕ ಉಚಿತ ವೈದ್ಯಶಾಲೆಗಳು ಆರಂಭವಾದವು. ಆಂಗ್ಲ ವಿದ್ಯಾಭ್ಯಾಸಕ್ಕಾಗಿ ಶಾಲೆಗಳು ಆರಂಭವಾದವು. ಶಿವನಸಮುದ್ರದ ಬಳಿ ಕಾವೇರಿ ನದಿಗೆ ಸೇತುವೆ ನಿರ್ಮಾಣವಾಯಿತು. ಮೈಸೂರು ನಗರದಲ್ಲಿ ಅನೇಕ ಹೊಸ ಬಡಾವಣೆಗಳು ತಲೆ ಎತ್ತಿದವು . ಸಾಹಿತ್ಯಕ್ಷೇತ್ರಕ್ಕೆ ಅವರ ಸೇವೆ ಅತ್ಯಂತ ಗಣನೀಯವಾಗಿತ್ತು. ಹೊಸಗನ್ನಡದ ಮೊದಲ ಗದ್ಯ ಗ್ರಂಥವೆಂದು ಮನ್ನಣೆಗೆ ಪಾತ್ರವಾಗಿರುವ 'ಮುದ್ರಾ ಮಂಜೂಷ' ಕೃತಿಯ ಕರ್ತೃ ಕೆಂಪುನಾರಾಯಣನು ಮುಮ್ಮಡಿ ಕೃಷ್ಣರಾಜರ ಆಶ್ರಿತನಾಗಿದ್ದನು.