ಯಶಸ್ವಿ ಭೂಪೇಂದ್ರ ಕುಮಾರ್ ಜೈಸ್ವಾಲ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಎಡಗೈ ಆರಂಭಿಕ ಬ್ಯಾಟ್ಸಮ್ಯಾನ್ ಹಾಗು ಬಲಗೈ ಲೆಗ್ ಬ್ರೆಕ್ ಬೌಲರ್. ರಣಜಿ ಟ್ರೋಫಿಯಲ್ಲಿ ಮುಂಬೈ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಾರೆ.[೧][೨][೩]
ಯಶಸ್ವಿ ಜೈಸ್ವಾಲ್ ಡಿಸೆಂಬರ್ ೨೮, ೨೦೦೧ ರಂದು ಉತ್ತರ ಪ್ರದೇಶದ ಭಾದೋಹಿಯಲ್ಲಿ ಆರು ಮಕ್ಕಳಲ್ಲಿ ನಾಲ್ಕನೆಯವರಾಗಿ ಜನಿಸಿದರು. ಇವರ ತಂದೆ ಭೂಪೇಂದ್ರ ಜೈಸ್ವಾಲ್ ಸಣ್ಣ ಹಾರ್ಡ್‌ವೇರ್ ಅಂಗಡಿಯ ಮಾಲೀಕ ಮತ್ತು ತಾಯಿ ಕಾಂಚನ್ ಜೈಸ್ವಾಲ್ ಗೃಹಿಣಿ.[೪][೫] ತಮ್ಮ ಹತ್ತನೇ ವಯಸ್ಸಿನಲ್ಲಿ, ಅವರು ಕ್ರಿಕೆಟ್ ತರಬೇತಿ ಪಡೆಯಲು ಮುಂಬಯಿಗೆ ತೆರಳಿದರು. ಆರಂಭದಲ್ಲಿ ಡೈರಿಯಲ್ಲಿ ಕೆಲಸಕ್ಕೆ ಸೇರಿ ಅಲ್ಲೆ ವಸತಿ ಪಡೆದಿದ್ದರು, ಆದರೆ ಕೆಲಸಕ್ಕೆ ಸದಾ ಹೋಗಲಾಗದ ಕಾರಣ ಡೈರಿಯಿಂದ ಹೊರಹಾಕಲಾಯಿತು. ಹೀಗಾಗಿ ಯಶಸ್ವಿ ತಮ್ಮ ಕ್ರಿಕೆಟ್ ಮೈದಾನದ ಸಿಬ್ಬಂದಿಗಳ ಜೊತೆಗೆ ಟೆಂಟ್ ನಲ್ಲಿ ವಾಸಿಸುತ್ತಿದ್ದರು. ಅಲ್ಲಿ ಅವರು ಸಂಜೆ ಪಾನಿಪೂರಿ ಮಾರುತ್ತಿದ್ದರು.[೬][೭][೮][೯]
ಯಶಸ್ವಿ ಜೈಸ್ವಾಲ್ ಸೆಪ್ಟೆಂಬರ್ ೨೨, ೨೦೨೦ರಂದು ಯುಎಇಯ ಶಾರ್ಜದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ೪ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು.[೧೦][೧೧]
ಜುಲೈ ೧೨-೧೪, ೨೦೨೩ರಲ್ಲಿ ವೆಸ್ಟ್ ಇಂಡೀಸ್ನ ರೋಸಿಯೋನಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ವಿರುದ್ಧ ನಡೆದ ಮೊದಲನೇ ಟೆಸ್ಟ್ ಪಂದ್ಯದ ಮೂಲಕ ಯಶಸ್ವಿ ಜೈಸ್ವಾಲ್ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲನೇ ಇನ್ನಿಂಗ್ಸ್ ನಲ್ಲಿ ಇವರು ಶತಕ ಬಾರಿಸಿದರು.[೧೨]