ಯಶೋಧರ್ಮನ್ ಮಧ್ಯ ಭಾರತದಲ್ಲಿ, ೬ನೇ ಶತಮಾನದ ಮುಂಚಿನ ಭಾಗದಲ್ಲಿ, ಮಾಲ್ವಾದ ರಾಜನಾಗಿದ್ದನು. ಇವನು ಔಲೀಕರ ರಾಜವಂಶಕ್ಕೆ ಸೇರಿದ್ದನು.[೧] ಇವನು ಮತ್ತೊಬ್ಬ ಪ್ರಖ್ಯಾತ ಔಲೀಕರ ರಾಜನಾದ ಪ್ರಕಾಶಧರ್ಮನ ಮಗ ಹಾಗೂ ಉತ್ತರಾಧಿಕಾರಿಯಾಗಿರಬಹುದು.
೫ನೇ ಶತಮಾನದ ಕೊನೆಯಲ್ಲಿ, ಭಾರತದ ಮೇಲೆ ಹೂಣರು ಆಕ್ರಮಣ ಮಾಡಿದರು. ಯಶೋಧರ್ಮನ್ ಮತ್ತು ಬಹುಶಃ ಗುಪ್ತ ಸಾಮ್ರಾಟ ನರಸಿಂಹಗುಪ್ತ ಇಬ್ಬರೂ ಸೇರಿ ಒಂದು ಹೂಣ ಸೇನೆ ಮತ್ತು ಅದರ ರಾಜ ಮಿಹಿರಕುಲನನ್ನು ಕ್ರಿ.ಶ. ೫೨೮ರಲ್ಲಿ ಪರಾಭವಗೊಳಿಸಿ ಭಾರತದಿಂದ ಹೊರಗೋಡಿಸಿದರು.
ಯಶೋಧರ್ಮನ್‍ನ ಮೂರು ಶಾಸನಗಳು ಮಂದ್‍ಸೌರ್‍ನಲ್ಲಿ ಪತ್ತೆಯಾಗಿವೆ. ಇದರಲ್ಲಿ ಒಂದು ಶಾಸನವಾದ ಯಶೋಧರ್ಮನ್-ವಿಷ್ಣುವರ್ಧನನ ಮಂದ್‍ಸೌರ್ ಶಿಲಾಶಾಸನ ಸಂವತ್ ೫೮೯ರದ್ದು (ಕ್ರಿ.ಶ. ೫೩೨).
ಯಶೋಧರ್ಮನ್-ವಿಷ್ಣುವರ್ಧನನ ಮಂದ್‍ಸೌರ್ ಶಿಲಾಶಾಸನವನ್ನು ಕ್ರಿ.ಶ. ೫೩೨ರಲ್ಲಿ ಕೆತ್ತಲಾಯಿತು, ಮತ್ತು ಯಶೋಧರ್ಮನ್‍ನ ಆಳ್ವಿಕೆಯ ಅವಧಿಯಲ್ಲಿ ದಶಪುರದಲ್ಲಿ (ಅಧುನಿಕ ಮಂದ್‍ಸೌರ್) ದಕ್ಷನೆಂಬ ವ್ಯಕ್ತಿಯಿಂದ ಒಂದು ಬಾವಿಯ ನಿರ್ಮಾಣವನ್ನು ದಾಖಲಿಸುತ್ತದೆ. ಈ ಶಾಸನವು ಉತ್ತರ ಹಾಗೂ ಪೂರ್ವದ ರಾಜ್ಯಗಳ ಮೇಲೆ ಸ್ಥಳೀಯ ಅರಸ ಯಶೋಧರ್ಮನ್‍ನ (ಮತ್ತು ಪ್ರಾಯಶಃ ಚಾಳುಕ್ಯ ಅರಸ ವಿಷ್ಣುವರ್ಧನ) ವಿಜಯಗಳನ್ನು ಉಲ್ಲೇಖಿಸುತ್ತದೆ. ಈ ರಾಜ್ಯಗಳನ್ನು ಮುಂದಕ್ಕೆ ಉಲ್ಲೇಖಿಸಿಲ್ಲ, ಆದರೆ ತನ್ನ ವಿಜಯಗಳ ನಂತರ ಯಶೋಧರ್ಮನನು ಉತ್ತರದಲ್ಲಿ ಹೂಣರ ಬಹುತೇಕ ಪ್ರಾಂತ್ಯಗಳನ್ನು, ಮತ್ತು ಪೂರ್ವದಲ್ಲಿ ಗುಪ್ತ ಸಾಮ್ರಾಜ್ಯದ ಬಹುತೇಕ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿದ್ದನು ಎಂದು ತಿಳಿದಿದೆ. ಆ ದಿನಾಂಕದ ನಂತರ ಕೇವಲ ಇನ್ನೊಂದು ಗುಪ್ತ ಶಾಸನ ಪರಿಚಿತವಿದೆ, ಅದು ಕೊನೆಯ ಗುಪ್ತ ಸಾಮ್ರಾಟ ವಿಷ್ಣುಗುಪ್ತನಿಂದ ಕೋಟಿವರ್ಷ ಪ್ರದೇಶದಲ್ಲಿ ನೀಡಲ್ಪಟ್ಟ ಒಂದು ಭೂ ದತ್ತಿ. ಹೂಣರ ಮೇಲಿನ ವಿಜಯವನ್ನು ಯಶೋಧರ್ಮನ್‍ನ ಮಂದ್‍ಸೌರ್ ಸ್ತಂಭಶಾಸನದಲ್ಲಿಯೂ ವರ್ಣಿಸಲಾಗಿದೆ.
"(ಸಾ. 5.)— ಮತ್ತು, ಇನ್ನೊಮ್ಮೆ, ಭೂಮಿಯ ಮೇಲೆ ಜನಗಳ ಇದೇ ರಾಜ, ಯುದ್ಧದಲ್ಲಿ ವಿಜಯಶಾಲಿ, ಮಹಿಮಾನ್ವಿತ ವಿಷ್ಣುವರ್ಧನನು ವಿಜಯಿಯಾಗಿದ್ದಾನೆ; ಇವನಿಂದ, ಔಲೀಕರ ಶಿಖೆಯನ್ನು ಹೊಂದಿರುವ, ಇವನದ್ದೇ ಪ್ರಸಿದ್ಧ ವಂಶ, ಮತ್ತಷ್ಟು ಎತ್ತರೆತ್ತರದ ಘನತೆಯ ಸ್ಥಿತಿಗೆ ತರಲ್ಪಟ್ಟಿದೆ. ಇವನಿಂದ ಶಾಂತಿಯುತ ಪ್ರಸ್ತಾಪಗಳು ಮತ್ತು ಯುದ್ಧದಿಂದ ಅಧೀನದಲ್ಲಿ ತರಲ್ಪಟ್ಟು, ಪೂರ್ವದ ಪ್ರಬಲ ರಾಜರು ಮತ್ತು ಉತ್ತರದ ಅನೇಕ ರಾಜರು, ವಿಶ್ವದಲ್ಲಿ ಆಹ್ಲಾದಕರವಾದ ಆದರೆ ಸಾಧಿಸಲು ಕಷ್ಟವಾದ, ಈ ಎರಡನೇ ಹೆಸರಾದ "ಮಹಾರಾಜಾಧಿರಾಜ ಮತ್ತು ಮಹಾದೇವ"ವನ್ನು ಎತ್ತರಕ್ಕೆ ಏರಿಸಲಾಗಿದೆ."
— ಯಶೋಧರ್ಮನ್ ಮತ್ತು ವಿಷ್ಣುವರ್ಧನನ ಮಂದ್‍ಸೌರ್ ಶಿಲಾಶಾಸನ
ತನ್ನ ವಿಜಯದ ದಾಖಲೆಯಾಗಿ ಮಂದ್‍ಸೌರ್ ಜಿಲ್ಲೆಯ ಸೋಂಧನಿಯಲ್ಲಿನ ಅವಳಿ ಏಕಶಿಲಾ ಸ್ತಂಭಗಳನ್ನು ಯಶೋಧರ್ಮನನು ಸ್ಥಾಪಿಸಿದನು. ಸೋಂಧನಿ ಶಾಸನದ ಒಂದು ಭಾಗದಲ್ಲಿ, ರಾಜ ಮಿಹಿರಕುಲನನ್ನು ಪರಾಭವಗೊಳಿಸಿದ್ದಕ್ಕಾಗಿ ಯಶೋಧರ್ಮನನು ತನ್ನನ್ನು ಹೊಗಳಿಕೊಳ್ಳುತ್ತಾನೆ.