ಮೂಲ | |
---|---|
ಮೂಲ ಸ್ಥಳ | ಭಾರತ |
ಪ್ರಾಂತ್ಯ ಅಥವಾ ರಾಜ್ಯ | ಗುಜರಾತ್ ಮತ್ತು ಮಹಾರಾಷ್ಟ್ರ |
ವಿವರಗಳು | |
ಮುಖ್ಯ ಘಟಕಾಂಶ(ಗಳು) | ಹಳದಿ ಬಟಾಣಿ, ಆಲೂಗಡ್ಡೆಗಳು, ಸಂಬಾರ ಪದಾರ್ಥಗಳು |
ಪ್ರಭೇದಗಳು | ಸಮೋಸಾ ರಗಡಾ, ಛೋಲೆ ಟಿಕ್ಕಿ |
ರಗಡಾ ಪ್ಯಾಟೀಸ್ ಮಹಾರಾಷ್ಟ್ರ ಮತ್ತು ಗುಜರಾತ್‍ನ ಬೀದಿ ಆಹಾರದ ಸಂಸ್ಕೃತಿಯ ಭಾಗವಾಗಿದೆ. ಇದು ಉತ್ತರ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಛೋಲೆ ಟಿಕ್ಕಿಯನ್ನು ಹೋಲುತ್ತದೆ. ಈ ಖಾದ್ಯವು ಒಂದು ಜನಪ್ರಿಯ ಬೀದಿ ಆಹಾರವಾಗಿದೆ, ಮತ್ತು ಭಾರತೀಯ ತ್ವರಿತ ಆಹಾರವನ್ನು ಬಡಿಸುವ ರೆಸ್ಟೋರೆಂಟ್‍ಗಳಲ್ಲೂ ಬಡಿಸಲಾಗುತ್ತದೆ. “ಪ್ಯಾಟೀಸ್” ಆಂಗ್ಲ ಶಬ್ದ ಪ್ಯಾಟಿಯ ಸ್ಥಳೀಕರಣವಾಗಿರಬಹುದು, ಮತ್ತು ಇದು ಈ ಖಾದ್ಯದ ಜೀವಾಳವಾದ ಆಲೂಗಡ್ಡೆಯ ಬಿಲ್ಲೆಗಳನ್ನು ಸೂಚಿಸುತ್ತದೆ.
ಈ ಖಾದ್ಯವನ್ನು ಎರಡು ಭಾಗದಲ್ಲಿ ತಯಾರಿಸಲಾಗುತ್ತದೆ: ರಗಡಾ (ಗ್ರೇವಿ) ಮತ್ತು ಪ್ಯಾಟೀಸ್. ರಗಡಾ ನೆನೆಸಿದ ಒಣ ಬಿಳಿ ಬಟಾಣಿಗಳನ್ನು ವಿವಿಧ ಸಂಬಾರ ಪದಾರ್ಥಗಳೊಂದಿಗೆ ಬೇಯಿಸಲಾದ ಒಂದು ಹಗುರವಾದ ರಸ. ಪ್ಯಾಟೀಸ್‍ಗಳು ಸರಳವಾದ ಹಿಸುಕಿದ ಆಲೂಗಡ್ಡೆಗಳ ಬಿಲ್ಲೆಗಳು. ಉತ್ತರ ಭಾರತದ ಟಿಕ್ಕಿಗಳಿಗೆ ವ್ಯತಿರಿಕ್ತವಾಗಿ, ಪ್ಯಾಟೀಸ್‍ಗಳಿಗೆ ಸಾಮಾನ್ಯವಾಗಿ ಸಂಬಾರ ಪದಾರ್ಥಗಳನ್ನು ಸೇರಿಸಿಲಾಗಿರುವುದಿಲ್ಲ, ಕೇವಲ ಉಪ್ಪು ಸೇರಿಸಲಾಗುತ್ತದೆ. ಬಡಿಸಲು, ಎರಡು ಪ್ಯಾಟೀಸ್‍ನ್ನು ಒಂದು ಬೋಗುಣಿ ಅಥವಾ ತಟ್ಟೆಯಲ್ಲಿ ಇರಿಸಿ, ಅವನ್ನು ಸ್ವಲ್ಪ ರಗಡಾದಿಂದ ಮುಚ್ಚಲಾಗುತ್ತದೆ, ಮತ್ತು ಮೇಲೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಕೊತ್ತಂಬರಿ, ಹಸಿರು ಚಟ್ನಿ, ಹುಣಸೆ ಚಟ್ನಿ, ಮತ್ತು ಸೇವ್‍ನಿಂದ ಅಲಂಕರಿಸಲಾಗುತ್ತದೆ.