ರಾಝಿ | |
---|---|
Directed by | ಮೇಘನಾ ಗುಲ್‍ಜ಼ಾರ್ |
Written by | ಮೇಘನಾ ಗುಲ್‍ಜ಼ಾರ್ (ಸಂಭಾಷಣೆ) |
Screenplay by | ಭವಾನಿ ಐಯರ್ ಮೇಘನಾ ಗುಲ್‍ಜ಼ಾರ್ |
Produced by | ವಿನೀತ್ ಜೈನ್ ಕರನ್ ಜೋಹರ್ ಹೀರೂ ಯಶ್ ಜೋಹರ್ ಅಪೂರ್ವ ಮೆಹ್ತಾ |
Starring | ಆಲಿಯಾ ಭಟ್ ವಿಕಿ ಕೌಶಲ್ |
Cinematography | ಜೈ ಐ. ಪಟೇಲ್ |
Edited by | ನಿತಿನ್ ಬೆಯ್ದ್ |
Music by | ಗುಲ್‍ಜ಼ಾರ್ (ಗೀತಸಾಹಿತ್ಯ) ಶಂಕರ್-ಎಹಸಾನ್-ಲಾಯ್ |
Production companies | ಜಂಗ್ಲಿ ಪಿಕ್ಚರ್ಸ್ ಧರ್ಮಾ ಪ್ರೊಡಕ್ಷನ್ಸ್ |
Distributed by | ಎಎ ಫ಼ಿಲ್ಮ್ಸ್ |
Release date | 11-5-2018[೧] |
Running time | 140 ನಿಮಿಷ |
Country | ಭಾರತ |
Language | ಹಿಂದಿ |
Budget | 35–40 ಕೋಟಿ[೨] |
Box office | ಅಂದಾಜು ರೂ. 196–207 ಕೋಟಿ[೩][೪][೫][೬] |
ರಾಝಿ (ಅನುವಾದ-ಸಮ್ಮತಿ) ೨೦೧೮ರ ಒಂದು ಹಿಂದಿ ಪತ್ತೇದಾರಿ ರೋಮಾಂಚನಕಾರಿ ಚಲನಚಿತ್ರವಾಗಿದೆ.[೭] ಮೇಘನಾ ಗುಲ್‍ಜ಼ಾರ್ ಇದರ ನಿರ್ದೇಶಕಿ ಮತ್ತು ವಿನೀತ್ ಜೈನ್, ಕರನ್ ಜೋಹರ್, ಹೀರೂ ಯಶ್ ಜೋಹರ್ ಹಾಗೂ ಅಪೂರ್ವಾ ಮೆಹತಾ ಜಂಗ್ಲೀ ಪಿಕ್ಚರ್ಸ್ ಹಾಗೂ ಧರ್ಮಾ ಪ್ರೊಡಕ್ಷನ್ಸ್ ಸಂಕೇತಗಳಡಿ ಇದನ್ನು ನಿರ್ಮಾಣ ಮಾಡಿದರು. ಮುಖ್ಯಪಾತ್ರದಲ್ಲಿ ಆಲಿಯಾ ಭಟ್ ನಟಿಸಿದ್ದಾರೆ ಮತ್ತು ಪೋಷಕ ಪಾತ್ರಗಳಲ್ಲಿ ವಿಕಿ ಕೌಶಲ್, ರಜಿತ್ ಕಪೂರ್, ಶಿಶಿರ್ ಶರ್ಮಾ ಹಾಗೂ ಜೈದೀಪ್ ಎಹ್ಲಾವತ್ ನಟಿಸಿದ್ದಾರೆ.[೮][೯] ಈ ಚಲನಚಿತ್ರವು ಹರಿಂದರ್ ಸಿಕ್ಕಾರ ೨೦೦೮ ರ ಕಾದಂಬರಿ ಕಾಲಿಂಗ್ ಸೆಹ್ಮತ್‍ನ ರೂಪಾಂತರವಾಗಿದೆ. ಈ ಕಾದಂಬರಿಯು ತನ್ನ ತಂದೆಯ ವಿನಂತಿಯಂತೆ ೧೯೭೧ರ ಭಾರತ-ಪಾಕಿಸ್ತಾನ ಯುದ್ಧದ ಪೂರ್ವದಲ್ಲಿ ಭಾರತಕ್ಕೆ ಮಾಹಿತಿಯನ್ನು ಪಡೆದು ರವಾನಿಸಲು ಪಾಕಿಸ್ತಾನದಲ್ಲಿನ ಸೇನಾಧಿಕಾರಿಗಳ ಕುಟುಂಬದಲ್ಲಿ ಮದುವೆಯಾಗಿ ಹೋಗುವ ಒಬ್ಬ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (ರಾ) ಗೂಢಚಾರಿಣಿಯ ನೈಜ ವರ್ಣನೆಯಾಗಿದೆ.[೧೦][೧೧][೧೨][೧೩]
ರಾಜ಼ಿಯ ಪ್ರಧಾನ ಛಾಯಾಗ್ರಹಣ ಮುಂಬಯಿಯಲ್ಲಿ ಜುಲೈ ೨೦೧೭ರಲ್ಲಿ ಆರಂಭವಾಗಿ ೨೭ ಅಕ್ಟೋಬರ್ ೨೦೧೭ರಂದು ಮುಕ್ತಾಯವಾಯಿತು.[೧೪] ಇದರ ಚಿತ್ರೀಕರಣವು ಪಟಿಯಾಲ, ನಾಭಾ, ಮಲೆರ್‌ಕೋಟ್ಲಾ ಹಾಗೂ ದೂಧ್‍ಪತ್ರಿ ಸೇರಿದಂತೆ ಹಲವು ಸ್ಥಳಗಳಲ್ಲಿ ನಡೆಯಿತು.[೧೫]
ರಾಜ಼ಿ ೧೧ ಮೇ ೨೦೧೮ರಂದು ಬಿಡುಗಡೆಯಾಯಿತು. ₹35 ಕೋಟಿಯ ಬಜೆಟ್‍ನಲ್ಲಿ ನಿರ್ಮಾಣವಾದ ಇದು ವಿಶ್ವದಾದ್ಯಂತ ₹207 ಕೋಟಿ ಗಳಿಸಿತು,[೬][೫] ಮತ್ತು ಮುಖ್ಯಪಾತ್ರದಲ್ಲಿ ಮಹಿಳೆ ನಟಿಸಿರುವ ಅತ್ಯಂತ ಹೆಚ್ಚು ಹಣಗಳಿಸಿದ ಚಲನಚಿತ್ರಗಳ ಪೈಕಿ ಒಂದಾಗಿ ಹೊರಹೊಮ್ಮಿತು.[೧೬] ಇದು ವಿಮರ್ಶಾತ್ಮಕ ಮೆಚ್ಚುಗೆಯನ್ನೂ ಪಡೆಯಿತು,[೧೭] ಮತ್ತು ಮೇಘನಾರ ನಿರ್ದೇಶನ ಹಾಗೂ ಭಟ್‌ರ ಅಭಿನಯವನ್ನು ಮೆಚ್ಚಲಾಯಿತು. ೬೪ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ರಾಜ಼ಿ ೧೫ ನಾಮನಿರ್ದೇಶನಗಳನ್ನು ಪಡೆಯಿತು ಮತ್ತು ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕಿ ಹಾಗೂ ಭಟ್‌ರಿಗೆ ಅತ್ಯುತ್ತಮ ನಟಿ ಸೇರಿದಂತೆ, ಐದು ಪ್ರಶಸ್ತಿಗಳನ್ನು ಗೆದ್ದುಕೊಂಡಿತು.[೧೮]
ಭಾರತೀಯ ಸೇನೆಯ ಅಧಿಕಾರಿ ಲೆಫ಼್ಟಿನೆಂಟ್ ಜನರಲ್ ನಿಖಿಲ್ ಬಕ್ಷಿ ಭಾರತೀಯ ಸೈನಿಕರ ಒಂದು ಗುಂಪನ್ನು ಐ.ಎನ್.ಎಸ್ ವಿರಾಟ್ ನೌಕೆಯ ಮೇಲೆ ಸಂಬೋಧಿಸುತ್ತಾರೆ, ಮತ್ತು ಭಾರತದ ಗುಪ್ತ ಮಾಹಿತಿ ಸಂಸ್ಥೆಯಾದ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಗೂಢಚಾರಿಣಿಯಾಗಿ ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುವಾಗ ಒಬ್ಬ ಮಹಿಳೆಯು ಮಾಡಿದ ಸಾಹಸಕೃತ್ಯಗಳನ್ನು ವಿವರವಾಗಿ ಹೇಳುತ್ತಾರೆ.
ಕಥೆಯು ೧೯೭೧ರ ಭಾರತ ಪಾಕಿಸ್ತಾನ ಯುದ್ಧದ ಪೂರ್ವದಲ್ಲಿನ ಘಟನೆಗಳಿಗೆ ಹಾರುತ್ತದೆ. ಹಿದಾಯತ್ ಖಾನ್ ಒಬ್ಬ ಭಾರತೀಯ ಸ್ವಾತಂತ್ರ್ಯ ಹೋರಾಟಗಾರನ ಮಗನಾಗಿದ್ದು ಪಾಕಿಸ್ತಾನ ಸರ್ಕಾರದ ಮಾಹಿತಿದಾರನಾಗಿ ಸೋಗು ಹಾಕಿರುವ ಗೂಢಚಾರಿಯಾಗಿರುತ್ತಾನೆ. ಶ್ವಾಸಕೋಶದ ಕ್ಯಾನ್ಸರ್‌ನಿಂದ ತನ್ನ ಸನ್ನಿಹಿತವಾದ ಸಾವಿಗಿಂತ ಮೊದಲು ಕೊನೆಯ ಆಸೆಯಾಗಿ ತನ್ನ ೨೦ ವರ್ಷದ ಮಗಳು ಸೆಹ್ಮತ್‌ಳನ್ನು ಗೂಢಚಾರಿಣಿಯಾಗಿ ಮಾಡಿ ದೇಶದ ಸೇವೆ ಮಾಡುವ ಕುಟುಂಬದ ಸಂಪ್ರದಾಯವನ್ನು ಮುಂದುವರಿಸಲು ಅವನು ಬಯಸುತ್ತಾನೆ. ತನ್ನ ತಾಯಿ ತೇಜಿ ಖಾನ್‍ಳ ಆಸೆಗಳಿಗೆ ವಿರುದ್ಧವಾಗಿ ಸೆಹ್ಮತ್ ಕಾಲೇಜ್ ತೊರೆಯುತ್ತಾಳೆ. ಅವಳನ್ನು ಗೂಢಚರ್ಯೆಗೆ ಸಿದ್ಧಮಾಡಲು, ಹಿರಿಯ ರಾ ಅಧಿಕಾರಿ ಖಾಲಿದ್ ಮೀರ್ ಮತ್ತು ಅವರ ಸಹಾಯಕ ಯುವ ಬಕ್ಷಿಯವರಿಂದ ಸಮರ ಕಲೆಗಳು ಹಾಗೂ ಬಂದೂಕುಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕ್ಷಿಪ್ರವಾಗಿ ತರಬೇತಿ ನೀಡಲಾಗುತ್ತದೆ. ಅವಳು ಕ್ಷಿಪ್ರವಾಗಿ ಕಲಿಯುವವಳು ಎಂದು ಸಾಬೀತಾಗುತ್ತದೆ. ಸೆಹ್ಮತ್ ಪಾಕಿಸ್ತಾನದಲ್ಲಿನ ಇತರ ಗೂಢಚಾರರು ಮತ್ತು ಅವರ ಸಂಪರ್ಕಗಳ ಬಗ್ಗೆ ತಿಳಿದುಕೊಳ್ಳುತ್ತಾಳೆ, ಮತ್ತು ಪಠ್ಯ ಮಾಹಿತಿಯನ್ನು ಭಾರತಕ್ಕೆ ಕಳುಹಿಸುವಾಗ ತಾನು ಬಳಸಬೇಕಾದ ಮಾರ್ಸ್ ಸಂಕೇತಭಾಷೆಗೆ ಪರಿವರ್ತಿಸುವುದನ್ನು ಅಭ್ಯಸಿಸುತ್ತಾಳೆ.
ಖಾನ್ ಪಾಕಿಸ್ತಾನ ಸೇನೆಯ ಬ್ರಿಗೇಡಿಯರ್ ಸೈಯ್ಯದ್‌ನೊಂದಿಗಿನ ತನ್ನ ಗೆಳೆತನವನ್ನು ಬಳಸಿ, ಮತ್ತೊಬ್ಬ ಸೇನಾಧಿಕಾರಿಯಾದ ಅವನ ಕಿರಿಯ ಮಗ ಇಕ್ಬಾಲ್‌ನಿಗೆ ಮದುವೆ ಮಾಡಿಕೊಡುತ್ತಾನೆ. ಮದುವೆಯಾಗಿ ಪಾಕಿಸ್ತಾನಕ್ಕೆ ಹೋದ ನಂತರ, ಸೆಹ್ಮತ್ ಕ್ಷಿಪ್ರವಾಗಿ ತನ್ನ ವೈವಾಹಿಕ ಜೀವನಕ್ಕೆ, ಹೊಸ ದೇಶಕ್ಕೆ ಹೊಂದಿಕೊಂಡು ತನ್ನ ಗಂಡನ ಮನೆಯವರ ವಿಶ್ವಾಸ ಮತ್ತು ನಂಬಿಕೆಯನ್ನು ಗಳಿಸುತ್ತಾಳೆ. ಸ್ವಲ್ಪ ಸಮಯದ ನಂತರ ಬ್ರಿಗೇಡಿಯರ್ ಸೈಯದ್ ಮೇಜರ್ ಜನರಲ್ ಆಗಿ ಬಡ್ತಿ ಹೊಂದುತ್ತಾರೆ. ಪರಿಣಾಮವಾಗಿ, ದೇಶದ ರಕ್ಷಣಾ ದಳಗಳ ಹಿರಿಯ ಸದಸ್ಯರು ಮತ್ತು ಅತಿ ಮುಖ್ಯ ರಾಷ್ಟ್ರೀಯ ಭದ್ರತಾ ದಸ್ತಾವೇಜುಗಳು ಈ ಮನೆಯ ಮೂಲಕ ಸಾಗುವುದು ಶುರುವಾಗುತ್ತದೆ. ಸೆಹ್ಮತ್ ಶೀಘ್ರದಲ್ಲೇ ಭಾರತದಲ್ಲಿನ ತನ್ನ ಉಸ್ತುವಾರಿಗಾರರೊಂದಿಗೆ ಸಂಪರ್ಕದಾರಿಗಳನ್ನು ಸ್ಥಾಪಿಸಿ ಮಾಹಿತಿ ರವಾನಿಸುವುದನ್ನು ಆರಂಭಿಸುತ್ತಾಳೆ. ಈ ನಡುವೆ, ಅವಳು ಇಕ್ಬಾಲ್‍ನನ್ನು ಪ್ರೀತಿಸಲು ಶುರುಮಾಡುತ್ತಾಳೆ ಮತ್ತು ಅವರು ತಮ್ಮ ವಿವಾಹವನ್ನು ಪ್ರಸ್ತಕಾರ್ಯದಿಂದ ಪೂರ್ಣಮಾಡುತ್ತಾರೆ.
ಅಂತಿಮವಾಗಿ, ಸೆಹ್ಮತ್ ಭಾರತದ ವಿರುದ್ಧದ ಆಕ್ರಮಣದ ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ಗುರುತಿಸುತ್ತಾಳೆ, ಮತ್ತು ಬಹಳ ಅಪಾಯದ ನಡುವೆಯೂ ಅಗತ್ಯವಾದ ವಿವರಗಳನ್ನು ಸಂಗ್ರಹಿಸಿ ಅವುಗಳನ್ನು ಕಳಿಸುವುದಕ್ಕೆ ಸಾಧ್ಯವಾಗುತ್ತದೆ. ಒಬ್ಬ ಸೇವಕನಾದ ಅಬ್ದುಲ್ ಸೆಹ್ಮತ್‌ಳ ಬಗ್ಗೆ ಸತ್ಯವನ್ನು ಕಂಡುಹಿಡಿದು ಇತರರಿಗೆ ವಿಷಯ ತಿಳಿಸಲು ಹೊರಗೋಡುತ್ತಾನೆ. ಅವಳು ಅವನನ್ನು ಬೆನ್ನಟ್ಟಿ ತನ್ನ ಗೋಪ್ಯತೆಯು ಬಹಿರಂಗಗೊಳ್ಳುವುದನ್ನು ತಪ್ಪಿಸಲು ಅವನಿಗೆ ಕಾರನ್ನು ಡಿಕ್ಕಿ ಮಾಡಿ ಕೊಲ್ಲುತ್ತಾಳೆ. ಈ ಘಟನೆಯು ಭಾವನಾತ್ಮಕವಾಗಿ ಅವಳ ಮೇಲೆ ಭಾರಿ ಪ್ರಭಾವ ಬೀರುತ್ತದೆ. ಅವಳು ಕಳಿಸಿದ ಮಾಹಿತಿಯು ಆಗ ಬಂಗಾಳ ಕೊಲ್ಲಿಯಲ್ಲಿ ಸ್ಥಿತವಾಗಿದ್ದ ಭಾರತೀಯ ವಿಮಾನವಾಹಕ ನೌಕೆ ಐ.ಎನ್.ಎಸ್ ವಿಕ್ರಾಂತ್ ಮೇಲಿನ ದಾಳಿಯನ್ನು ಸೂಚಿಸುತ್ತದೆ ಮತ್ತು ಆ ಬೆದರಿಕೆಯ ಆರಂಭಿಕ ಎಚ್ಚರಿಕೆಗಳಲ್ಲಿ ಒಂದನ್ನು ಒದಗಿಸಿತು.
ಇಕ್ಬಾಲ್‍ನ ಅಣ್ಣ ಹಾಗೂ ಸೇನಾಧಿಕಾರಿಯಾದ ಮೆಹಬೂಬ್, ಅಬ್ದುಲ್‌ನ ಸಾವಿನ ತನಿಖೆಯನ್ನು ಆರಂಭಿಸಿ ಅವಳು ಶಂಕಿತೆಯೆಂದು ಕಂಡುಕೊಂಡಮೇಲೆ, ಸೆಹ್ಮತ್ ಅವನನ್ನು ಸಾಯಿಸಲು ಸಂಚು ಮಾಡುತ್ತಾಳೆ. ಅವಳು ಕೊಡೆ ಸಾಧನವನ್ನು ಬಳಸಿ ಅವನಿಗೆ ರಿಸಿನ್ ವಿಷವನ್ನು ಹಾಕುವಲ್ಲಿ ಯಶಸ್ವಿಯಾಗುತ್ತಾಳೆ. ಪಾಕಿಸ್ತಾನಿ ಗುಪ್ತದಳವು ಆ ಪ್ರದೇಶದಲ್ಲಿನ ಬೇಹುಗಾರಿಕೆ ಕಾರ್ಯಗಳ ಮೇಲೆ ತೀವ್ರಕ್ರಮಗಳನ್ನು ಆರಂಭಿಸುತ್ತದೆ, ಮತ್ತು ಸೆಹ್ಮತ್‌ಳ ಹಲವಾರು ಸಹಾಯಕರನ್ನು ಬಂಧಿಸಲಾಗುತ್ತದೆ, ಮತ್ತು ಒಂದು ಹೆಚ್ಚಿನ ಸವಾಲು ಎದುರಾಗುತ್ತದೆ. ಮೆಹಬೂಬ್‍ನ ಹೆಂಡತಿ ಮುನೀರಾಳನ್ನು ವಿಧವೆ ಮಾಡಿದ್ದಕ್ಕಾಗಿ ಸೆಹ್ಮತ್ ಮಾನಸಿಕವಾಗಿ ಕ್ಷೋಭೆಗೊಂಡಿರುತ್ತಾಳೆ ಆದರೆ ಬೇಗನೇ ಚೇತರಿಸಿಕೊಳ್ಳುತ್ತಾಳೆ. ಮೀರ್ ಇಕ್ಬಾಲ್‌ನ ಮನೆಗೆ ಒಬ್ಬ ಪಾಕಿಸ್ತಾನಿ ಕಮಾಂಡರನ ವೇಷದಲ್ಲಿ ಬಂದು ಮುಂದೇನು ಮಾಡಬೇಕೆಂದು ಸಂಕೇತಭಾಷೆಯಲ್ಲಿ ಸೆಹ್ಮತ್‍ಳಿಗೆ ಹೇಳುತ್ತಾನೆ. ನಂತರ ಸೆಹ್ಮತ್ ಮುನೀರಾಳನ್ನು ನಡೆಯುತ್ತಿರುವ ಪೋಲಿಸ್ ತನಿಖೆ ಹಾಗೂ ವಿಚಾರಣೆಯಿಂದ ಜಾಣತನದಿಂದ ಉಳಿಸುತ್ತಾಳೆ. ನಂತರ, ಅಂತಿಮವಾಗಿ ಅವಳು ಒಬ್ಬ ಗೂಢಚಾರಿಣಿಯೆಂದು ಇಕ್ಬಾಲ್ ಪತ್ತೆಹಚ್ಚುತ್ತಾನೆ, ಮತ್ತು ಆ ಸಂಗತಿಯಿಂದ ಅತಿ ದುಃಖಿತನಾಗುತ್ತಾನೆ. ಇಕ್ಬಾಲ್ ಪೋಲಿಸರ ಜೊತೆಗೆ ಸೆಹ್ಮತ್‍ಳ ಮುಖಾಮುಖಿಯಾಗುತ್ತಾನೆ, ಆದರೆ (ಸೆಹ್ಮತ್‌ಳನ್ನು ಪಾರುಮಾಡಲು ಆಗಮಿಸಿದ) ಮೀರ್‌ನ ತಂಡದ ಒಬ್ಬ ಸದಸ್ಯನು ಅವಳು ಸಿಕ್ಕಿಬಿದ್ದರೆ ಅವಳ ಮರಣ ಉಂಟುಮಾಡಲು ಎಸೆದ ಗ್ರೆನೇಡಿನಿಂದ ಸಾಯುತ್ತಾನೆ. ಸೆಹ್ಮತ್ ಬದುಕಿರುತ್ತಾಳೆ, ಮತ್ತು ಮುಂಚೆಯೇ ಮತ್ತೊಬ್ಬ ಬುರ್ಕಾ ಧರಿಸಿದ ಗೂಢಚಾರಿಣಿಯೊಂದಿಗೆ ಸ್ಥಾನವನ್ನು ಅದಲು ಬದಲು ಮಾಡಿಕೊಂಡಿರುತ್ತಾಳೆ ಮತ್ತು ಹಾಗಾಗಿ ಆ ಮತ್ತೊಬ್ಬ ವ್ಯಕ್ತಿಯು ಗ್ರೆನೇಡಿನಿಂದ ಸಾಯುತ್ತಾಳೆ. ಅವಳು ಆ ವೃತ್ತಿಯಲ್ಲಿ ಸಂಬಂಧಗಳು ಮತ್ತು ಮಾನವೀಯತೆಯ ಅಮುಖ್ಯತೆಯನ್ನು ಅರಿತುಕೊಳ್ಳುತ್ತಾಳೆ. ತನ್ನ ಕೈಯಿಂದಾದ ಒಂದು ಕುಟುಂಬದ ನಾಶ ಮತ್ತು ತಾನು ನೋಡಿದ ಹಾಗೂ ಮಾಡಿದ ಎಲ್ಲದರಿಂದ ಅತಿ ದುಃಖ ಹೊಂದಿ, ಭಾರತಕ್ಕೆ ಮರಳಲು ಅನುಮತಿ ನೀಡಬೇಕೆಂದು ಸೆಹ್ಮತ್ ಮೀರ್‌ಗೆ ವಿನಂತಿ ಮಾಡಿಕೊಳ್ಳುತ್ತಾಳೆ. ಹಿಂತಿರುಗಿದ ನಂತರ, ಅವಳು ಇಕ್ಬಾಲ್‍ನ ಮಗುವಿಗೆ ತಾಯಿಯಾಗುತ್ತಿದ್ದಾಳೆಂದು ಪತ್ತೆಯಾಗುತ್ತದೆ. ಅವನನ್ನು ಇಟ್ಟುಕೊಂಡು ಸಾಕಿ ಬೆಳೆಸುತ್ತೇನೆಂದು ಅವಳು ಹೇಳುತ್ತಾಳೆ.
ಸೆಹ್ಮತ್‍ಳ ಶೋಧನೆಗಳ ಸಹಾಯದಿಂದ, ಐಎನ್ಎಸ್ ರಾಜ್ಪುತ್ ವಿಶಾಖಪಟ್ನಂ ಕರಾವಳಿಗೆ ದೂರದಲ್ಲಿದ್ದ ಪಾಕಿಸ್ತಾನದ ಜಲಾಂತರ್ಗಾಮಿ ನೌಕೆ ಪಿಎನ್ಎಸ್ ಗಾಜ಼ಿಯನ್ನು ಮುಳುಗಿಸುತ್ತದೆ. ಇದು ಪಾಕಿಸ್ತಾನದ ಶರಣಾಗತಿ ಪತ್ರ, ಭಾರತದ ವಿಜಯ ಮತ್ತು ಹೊಸ ದೇಶವಾದ ಬಾಂಗ್ಲಾದೇಶದ ಜನನದೊಂದಿಗೆ ಅಂತ್ಯವಾಗುತ್ತದೆ.
ಬಕ್ಷಿ ತಮ್ಮ ಭಾಷಣವನ್ನು ಮುಗಿಸುತ್ತಾರೆ. ಸೆಹ್ಮತ್‌ಳ ಮಗ ಸಮರ ಸೈಯದ್ ಸಂಬೋಧಿತ ಅಧಿಕಾರಿಗಳ ಪೈಕಿ ಒಬ್ಬನಾಗಿರುತ್ತಾನೆ. ಈ ನಡುವೆ, ವಯಸ್ಸಾದ ಸೆಹ್ಮತ್ ತನ್ನ ಕುರ್ಚಿಯ ಮೇಲೆ ಕುಳಿತು ತನ್ನ ಮನೆಯ ಕಿಟಕಿಯ ಹೊರಗೆ ದೂರದ ಸ್ಥಳವನ್ನು ನೋಡುತ್ತಿರುವುದು ಕಾಣುತ್ತದೆ.
ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಶಂಕರ್-ಎಹಸಾನ್-ಲಾಯ್ ಸಂಯೋಜಿಸಿದ್ದಾರೆ ಮತ್ತು ಗುಲ್ಜಾರ್ ಗೀತಸಾಹಿತ್ಯವನ್ನು ಬರೆದಿದ್ದಾರೆ. ಚಿತ್ರದಲ್ಲಿನ ಹಾಡುಗಳನ್ನು ಅರ್ಜಿತ್ ಸಿಂಗ್, ಹರ್ಷ್‌ದೀಪ್ ಕೌರ್, ವಿಭಾ ಸರಾಫ಼್, ಶಂಕರ್ ಮಹಾದೇವನ್ ಮತ್ತು ಸುನಿಧಿ ಚೌಹಾನ್ ಹಾಡಿದ್ದಾರೆ.