ರಾಜಾ ಹಿಂದುಸ್ತಾನಿ ಚಲನಚಿತ್ರ | |
---|---|
![]() ಚಲನಚಿತ್ರದ ಭಿತ್ತಿಪತ್ರ | |
ನಿರ್ದೇಶನ | ಧರ್ಮೇಶ್ ದರ್ಶನ್ |
ನಿರ್ಮಾಪಕ | ಅಲೈವ್ ಮೊರಾನಿ ಕರೀಮ್ ಮೊರಾನಿ ಬಂಟಿ ಸೂರ್ಮಾ |
ಲೇಖಕ | ಧರ್ಮೇಶ್ ದರ್ಶನ್ ಜಾವೇದ್ ಸಿದ್ದೀಕಿ (ಸಂಭಾಷಣೆಗಳು) |
ಚಿತ್ರಕಥೆ | ರಾಬಿನ್ ಭಟ್ |
ಕಥೆ | ಧರ್ಮೇಶ್ ದರ್ಶನ್ |
ಪಾತ್ರವರ್ಗ | ಆಮಿರ್ ಖಾನ್ ಕರಿಶ್ಮಾ ಕಪೂರ್ ಸುರೇಶ್ ಒಬೇರಾಯ್ ಜಾನಿ ಲೀವರ್ ನವ್‍ನೀತ್ ನಿಶಾನ್ ವೀರು ಕೃಷ್ಣನ್ ಕುನಾಲ್ ಖೇಮು ಪ್ರಮೋದ್ ಮೌತೊ ಮೋಹನೀಶ್ ಬೆಹೆಲ್ ಟೀಕು ತಲ್ಸಾನಿಯಾ ಫ಼ರೀದಾ ಜಲಾಲ್ ಅರ್ಚನಾ ಪೂರಣ್ ಸಿಂಗ್ |
ಸಂಗೀತ | ಹಾಡುಗಳು: ನದೀಮ್ ಶ್ರವಣ್ ಹಿನ್ನೆಲೆ ಸಂಗೀತ: ಸುರಿಂದರ್ ಸೋಧಿ |
ಛಾಯಾಗ್ರಹಣ | ಡಬ್ಲ್ಯು. ಬಿ. ರಾವ್ |
ಸಂಕಲನ | ಭರತ್ |
ಸ್ಟುಡಿಯೋ | ಸಿನೆಯುಗ್ |
ವಿತರಕರು | ಟಿಪ್ಸ್ ಫ಼ಿಲ್ಮ್ಸ್ |
ಬಿಡುಗಡೆಯಾಗಿದ್ದು |
|
ಅವಧಿ | 177 ನಿಮಿಷಗಳು |
ದೇಶ | ಭಾರತ |
ಭಾಷೆ | ಹಿಂದಿ |
ಬಂಡವಾಳ | ಅಂದಾಜು ₹57.5 ದಶಲಕ್ಷ[೧] |
ಬಾಕ್ಸ್ ಆಫೀಸ್ | ಅಂದಾಜು ₹763.4 ದಶಲಕ್ಷ[೧] |
ರಾಜಾ ಹಿಂದುಸ್ತಾನಿ ೧೯೯೬ರ ಒಂದು ಹಿಂದಿ ಪ್ರಣಯಪ್ರಧಾನ ನಾಟಕೀಯ ಚಲನಚಿತ್ರ. ಇದನ್ನು ಧರ್ಮೇಶ್ ದರ್ಶನ್ ನಿರ್ದೇಶಿಸಿದ್ದಾರೆ. ಇದು ಒಬ್ಬ ಶ್ರೀಮಂತ ಯುವತಿಯನ್ನು ಪ್ರೀತಿಸತೊಡಗುವ ಸಣ್ಣ ಪಟ್ಟಣದ ಒಬ್ಬ ಟ್ಯಾಕ್ಸಿ ಚಾಲಕನ ಕಥೆಯನ್ನು ಹೇಳುತ್ತದೆ.[೨] ಆಮಿರ್ ಖಾನ್ ಮತ್ತು ಕರಿಶ್ಮಾ ಕಪೂರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ೧೫ ನವೆಂಬರ್ ೧೯೯೬ರಂದು ಬಿಡುಗಡೆಯಾದ ಈ ಚಿತ್ರದ ಕಥಾವಸ್ತುವು ಶಶಿ ಕಪೂರ್ ಮತ್ತು ನಂದಾ ನಟಿಸಿರುವ ೧೯೬೫ರ ಚಿತ್ರ ಜಬ್ ಜಬ್ ಫೂಲ್ ಖಿಲೆಯಿಂದ ಸ್ಫೂರ್ತಿಪಡೆದಿದೆ.[೩] ಚಿತ್ರದ ಸಂಗೀತವನ್ನು ನದೀಮ್-ಶ್ರವಣ್ ಸಂಯೋಜಿಸಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ಸಮೀರ್ ಬರೆದಿದ್ದಾರೆ.[೪] ಈ ಚಿತ್ರವು ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ನಟರ ಪ್ರಶಸ್ತಿ ಸೇರಿದಂತೆ ಐದು ಫಿಲ್ಮ್‌ಫೇರ್ ಪ್ರಶಸ್ತಿಗಳು,[೫] ಮತ್ತು ಏಳು ಸ್ಕ್ರೀನ್ ಪ್ರಶಸ್ತಿಗಳನ್ನು ಗೆದ್ದಿತು.[೬]
ಒಟ್ಟು ಆದಾಯದ ಅನುಸಾರವಾಗಿ ರಾಜಾ ಹಿಂದುಸ್ತಾನಿ ೧೯೯೦ರ ದಶಕದ ವಾಣಿಜ್ಯಿಕವಾಗಿ ಮೂರನೇ ಅತ್ಯಂತ ಯಶಸ್ವಿ ಹಿಂದಿ ಚಲನಚಿತ್ರವಾಗಿತ್ತು.[೭]₹57.5 ದಶಲಕ್ಷದಷ್ಟು ಬಂಡವಾಳದಲ್ಲಿ ತಯಾರಾದ ಈ ಚಿತ್ರವು ವಿಶ್ವಾದ್ಯಂತ ₹763.4 ದಶಲಕ್ಷದಷ್ಟು ಗಳಿಸಿ[೧] ಆ ವರ್ಷದ ಅತಿ ಹೆಚ್ಚು ಹಣಗಳಿಸಿದ ಚಿತ್ರವೆನಿಸಿಕೊಂಡಿತು.[೮] ಚಿತ್ರದ ಸಂಗೀತವು ಜನಪ್ರಿಯ ಮತ್ತು ಯಶಸ್ವಿಯಾಯಿತು, ವಿಶೇಷವಾಗಿ ಭಾರತದ ಮಧ್ಯ ಹಾಗೂ ಪೂರ್ವದ ರಾಜ್ಯಗಳಲ್ಲಿ.[೯] ಕನಸುಗಳು ಮತ್ತು ಆಸೆಗಳಿಂದ ತುಂಬಿದ ಶ್ರೀಮಂತ, ಸುಂದರ, ಸಂವೇದನಶೀಲ, ಯುವತಿ ಆರತಿಯಾಗಿ ಅವರ ಅಂದ ಮತ್ತು ಅಭಿನಯಕ್ಕಾಗಿ ಕರಿಶ್ಮಾ ಕಪೂರ್‌ರನ್ನು ಪ್ರಶಂಸಿಸಲಾಯಿತು.[೧೦] ಇದು ಕಪೂರ್‌ರ ಈವರೆಗಿನ ಅತ್ಯಂತ ದೊಡ್ಡ ವಾಣಿಜ್ಯಿಕ ಯಶಸ್ಸಾಗಿದೆ ಮತ್ತು ಅವರ ಅತ್ಯುತ್ತಮ ಅಭಿನಯಗಳಲ್ಲಿ ಒಂದೆಂದು ಪರಿಗಣಿತವಾಗಿದೆ; ಇದು ಅವರ ವೃತ್ತಿಜೀವನದಲ್ಲಿ ಪ್ರಮುಖ ಸಂಧಿಕಾಲವಾಗಿತ್ತು.[೧೧][೧೨][೧೩][೧೪] ಅವರು ತಮ್ಮ ಪಾತ್ರಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದರು.[೧೫] ಮುಖ್ಯ ಜೋಡಿಯಾದ ಆಮಿರ್ ಖಾನ್ ಮತ್ತು ಕರಿಶ್ಮಾ ಕಪೂರ್ ನಡುವಿನ ಪರಸ್ಪರ ಸಂಬಂಧವನ್ನು ಪ್ರಶಂಸಿಸಲಾಯಿತು ಮತ್ತು ಬಹಳ ಮಾತಾಡಿಕೊಳ್ಳಲಾದ ಒಂದು ಚುಂಬನದ ದೃಶ್ಯವಿತ್ತು.[೧೬][೧೭][೧೮] ಈ ಚಿತ್ರವನ್ನು ಕನ್ನಡದಲ್ಲಿ ೨೦೦೨ರಲ್ಲಿ ನಾನು ನಾನೆ ಎಂದು ಮತ್ತು ಒಡಿಯಾದಲ್ಲಿ ೨೦೦೫ರಲ್ಲಿ ಪ್ರಿಯಾ ಮೊ ಪ್ರಿಯಾ ಎಂದು ರೀಮೇಕ್ ಮಾಡಲಾಯಿತು.
ಆರತಿ ಸೆಹಗಲ್ (ಕರಿಶ್ಮಾ ಕಪೂರ್) ಒಬ್ಬ ಶ್ರೀಮಂತ ಯುವತಿಯಾಗಿದ್ದು, ತನ್ನ ತಂದೆ ಮಿ. ಸೆಹಗಲ್ ಮತ್ತು ಮಲತಾಯಿ ಶಾಲಿನಿಯ ಒಬ್ಬಳೇ ಮಗಳಾಗಿರುತ್ತಾಳೆ. ಶಾಲಿನಿ ತನ್ನ ಗಂಡನ ಎಲ್ಲ ಸಂಪತ್ತನ್ನು ಪಡೆಯಬೇಕೆಂದು ಬಯಸಿರುತ್ತಾಳೆ.
ತನ್ನ ಮೃತ ತಾಯಿಯ ನೆನಪುಗಳನ್ನು ಮನಗಾಣಲು ಆರತಿ ರಜೆಗಾಗಿ ಪಾಲನ್‍ಖೇತ್‍ಗೆ ಹೋಗಲು ನಿರ್ಧರಿಸುತ್ತಾಳೆ. ಅಲ್ಲಿ ಆಗಮಿಸಿದ ಮೇಲೆ, ವಿಮಾನ ನಿಲ್ದಾಣದಿಂದ ಪಾಲನ್‍ಖೇತ್‍ಗೆ ಯಾವುದೇ ಸಾರಿಗೆಯಿಲ್ಲ ಎಂದು ಅವಳಿಗೆ ಗೊತ್ತಾಗಿ ಲಭ್ಯವಿರುವ ಏಕೈಕ ಚಾಲಕನಾದ ರಾಜಾ ಹಿಂದುಸ್ತಾನಿಯ (ಆಮಿರ್ ಖಾನ್) ಸೇವೆಗಳನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಾಳೆ.
ಪಾಲನ್‍ಖೇತ್‍ನಲ್ಲಿ ತನ್ನ ವಾಸದ ಅವಧಿಯಲ್ಲಿ, ಆರತಿ ಮತ್ತು ರಾಜಾ ನಡುವೆ ಸಂಬಂಧವೇರ್ಪಟ್ಟು ಅಂತಿಮವಾಗಿ ಅವರು ಆಕಸ್ಮಿಕವಾಗಿ ಒಬ್ಬರನ್ನೊಬ್ಬರು ಚುಂಬಿಸಿದ ಮೇಲೆ ಪ್ರೀತಿಯಲ್ಲಿ ಬೀಳುತ್ತಾರೆ. ಒಂದು ದಿನ ಆರತಿಗೆ ಆಶ್ಚರ್ಯವಾಗುವಂತೆ, ತನ್ನ ಜೊತೆ ಅವಳನ್ನು ಮನೆಗೆ ಕರೆದೊಯ್ಯುವ ಉದ್ದೇಶದಿಂದ ಅವಳ ತಂದೆ ಪಾಲನ್‍ಖೇತ್‍ಗೆ ಆಗಮಿಸುತ್ತಾನೆ. ಆರತಿ ತನ್ನ ತಂದೆಗೆ ರಾಜಾನ ಬಗ್ಗೆ ಹೇಳುತ್ತಾಳೆ. ಆದರೆ ರಾಜಾ ಮುಂಬಯಿಗೆ ಹೋಗಿ ಸಮಾಜದ ಗೌರವಾನ್ವಿತ ಸದಸ್ಯನಾಗಲು ಕಲಿಯುವನು ಎಂಬ ಷರತ್ತಿನ ಮೇಲೆ ಮಾತ್ರ ಮದುವೆಯನ್ನು ಒಪ್ಪುವುದಾಗಿ ಮಿ. ಸೆಹಗಲ್ ಹೇಳುತ್ತಾನೆ. ರಾಜಾ ನಿರಾಕರಿಸಿ ಆರತಿ ಒಂದು ನಿರ್ಧಾರ ಮಾಡುವಂತೆ ಒತ್ತಾಯಪಡಿಸುತ್ತಾನೆ. ಆರತಿ ರಾಜಾನನ್ನು ಆಯ್ಕೆ ಮಾಡುತ್ತಾಳೆ ಆದರೆ ತನ್ನ ತಂದೆಯ ಆಶೀರ್ವಾದಕ್ಕಾಗಿ ಬೇಡಿಕೊಳ್ಳುತ್ತಾಳೆ. ಅವಳ ತಂದೆ ತನ್ನ ಆಶೀರ್ವಾದ ನೀಡಲು ನಿರಾಕರಿಸಿ ಮುಂಬಯಿಗೆ ಹೊರಡುತ್ತಾನೆ.
ಸ್ವಲ್ಪ ಸಮಯದ ನಂತರ, ಮಿ. ಸೆಹಗಲ್ ತಮ್ಮ ಮಗಳನ್ನು ಕ್ಷಮಿಸಿ ಪಾಲನ್‍ಖೇತ್‍ನಲ್ಲಿ ಅವಳನ್ನು ಭೇಟಿಯಾಗುತ್ತಾರೆ. ಅಲ್ಲಿದ್ದಾಗ, ಅವನು ತನ್ನ ಮಗಳು ಮತ್ತು ಅಳಿಯನಿಗೆ ಒಂದು ಹೊಸ ಮನೆಯನ್ನು ಕೊಡುತ್ತಾರೆ. ರಾಜಾ ಆ ಮನೆಯಲ್ಲಿರಲು ನಿರಾಕರಿಸುತ್ತಾನೆ ಏಕೆಂದರೆ ಅವನು ಆ ಮನೆಯನ್ನು ಉಡುಗೊರೆಯಾಗಿ ನೋಡದೆ ದಾನವಾಗಿ ನೋಡುತ್ತಾನೆ ಏಕೆಂದರೆ ಅವನು ಬಡವನಾಗಿರುತ್ತಾನೆ. ಶಾಲಿನಿ, ಅವಳ ಸೋದರ ಸ್ವರಾಜ್ ಮತ್ತು ಸೋದರಳಿಯ ಜೈ ಮಿ. ಸೆಹಗಲ್‍ನ ಆಸ್ತಿಯ ಸಂಪೂರ್ಣ ಹತೋಟಿಯನ್ನು ಪಡೆಯಲು ಈ ಜಗಳವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ. ಒಂದು ಹುಟ್ಟುಹಬ್ಬದ ಪಾರ್ಟಿಯ ನೆಪದಲ್ಲಿ, ಅವರು ರಾಜಾ ಮತ್ತು ಆರತಿಯನ್ನು ಮುಂಬಯಿಗೆ ಕರೆತಂದು ರಾಜಾ ಮತ್ತು ಆರತಿ ಬೇರೆಯಾಗುವುದಕ್ಕೆ ಕಾರಣವಾಗುವ ಘಟನೆಗಳು ಆಗುವಂತೆ ಮಾಡುತ್ತಾರೆ.
ಆರತಿಗೆ ತಾನು ಗರ್ಭಿಣಿಯೆಂದು ಅರಿವಾಗುತ್ತದೆ. ಆದರೆ ಆರೋಗ್ಯ ಸಮಸ್ಯೆಗಳ ಕಾರಣ ವೈದ್ಯರು ಅವಳು ಪ್ರಯಾಣಿಸದಿರುವಂತೆ ಸಲಹೆ ನೀಡುತ್ತಾರೆ. ಬದಲಾಗಿ, ಪಾಲನ್‍ಖೇತ್‍ಗೆ ಹೋಗಿ ರಾಜಾನಿಗೆ ಅವನ ಮಗುವಿನ ಬಗ್ಗೆ ತಿಳಿಸಿ ಮುಂಬಯಿಗೆ ಬರುವಂತೆ ವಿನಂತಿಸಿಕೊಳ್ಳಲು ಅವಳ ಮಲತಾಯಿಯನ್ನು ಕೇಳಿಕೊಳ್ಳಲಾಗುತ್ತದೆ. ಆದರೆ, ಆರತಿಯು ಅವನಿಗೆ ವಿಚ್ಛೇದನ ನೀಡಬೇಕೆಂದು ಬಯಸಿದ್ದಾಳೆ ಎಂದು ಆರತಿಯ ಮಲತಾಯಿಯು ರಾಜಾನಿಗೆ ಹೇಳುತ್ತಾಳೆ. ರಾಜಾ ನಿರಾಕರಿಸುತ್ತಾನೆ. ಸ್ವಲ್ಪ ಕಾಲದ ನಂತರ, ಆರತಿಗೆ ಮಗು ಹುಟ್ಟಿದೆಯೆಂದು ರಾಜಾಗೆ ಗೊತ್ತಾಗುತ್ತದೆ. ಅವಳು ಅವನನ್ನು ತನ್ನ ಮಗುವಿನಿಂದ ದೂರವಿಡುವ ಉದ್ದೇಶ ಹೊಂದಿದ್ದಾಳೆ ಎಂದು ತಪ್ಪಾಗಿ ಭಾವಿಸುತ್ತಾನೆ. ಅವನು ತನಗೆ ತನ್ನ ಮಗುವನ್ನು ನೋಡಲು ಎಂದೂ ಅವಕಾಶ ಸಿಗುವುದಿಲ್ಲವೆಂದು ಹೆದರಿ ತನ್ನ ಮಗುವನ್ನು ಅಪಹರಿಸಲು ನಿರ್ಧರಿಸುತ್ತಾನೆ. ತಲ್ಲಣಗೊಂಡ ಆರತಿ ರಾಜಾನನ್ನು ಕಾಣಲು ಹೋಗಿ ತನಗೆ ತನ್ನ ಮಗುವನ್ನು ವಾಪಸು ಕೊಡುವಂತೆ ಬೇಡಿಕೊಳ್ಳುತ್ತಾಳೆ. ಅಂತಿಮವಾಗಿ, ಆರತಿಯ ಮಲತಾಯಿಯ ಸುಳ್ಳುಗಳು ಮತ್ತು ವಂಚನೆ ಬಹಿರಂಗವಾಗಿ ಆರತಿ ಮತ್ತು ರಾಜಾ ಮತ್ತೆ ಒಂದಾಗುತ್ತಾರೆ.
ಮುಖ್ಯ ನಟಿಯ ಪಾತ್ರವನ್ನು ಮೊದಲು ಜೂಹಿ ಚಾವ್ಲಾ, ಐಶ್ವರ್ಯಾ ರೈ ಸೇರಿದಂತೆ ಅನೇಕ ನಟಿಯರಿಗೆ ಕೊಡಲು ಪ್ರಸ್ತಾಪಿಸಲಾಗಿತ್ತು ಆದರೆ ಜೂಹಿ ಈ ಪಾತ್ರವನ್ನು ನಿರಾಕರಿಸಿದರು.[೧೯][೧೬] ಪಾಲನ್‍ಖೇತ್ ಈ ಚಿತ್ರಕ್ಕಾಗಿ ಸೃಷ್ಟಿಸಲಾದ ಒಂದು ಕಾಲ್ಪನಿಕ ಸ್ಥಳವಾಗಿತ್ತು. ಇದು ಎರಡು ನೈಜ ಗಿರಿಧಾಮಗಳಾದ ಪಾಲಮ್‍ಪುರ್ ಮತ್ತು ರಾನೀಖೇತ್‍ನ ಹೆಸರುಗಳ ಬೆರಕೆಪದವಾಗಿದೆ.[೨೦]
ರಾಜಾ ಹಿಂದುಸ್ತಾನಿ ವಿಶ್ವಾದ್ಯಂತ ₹763.4 ದಶಲಕ್ಷದಶ್ಟು ಗಳಿಸಿತು. ಇದರ ದೇಶೀಯ ಗಳಿಕೆ ₹738.4 ದಶಲಕ್ಷದಷ್ಟಿತ್ತು.[೨೧] ಈ ಚಿತ್ರದ ಮಾರ್ಪಡಿತ ವಿಶ್ವಾದ್ಯಂತ ಹಣಗಳಿಕೆಯು ₹3.94 ಶತಕೋಟಿಗೆ ಸಮಾನವಾಗಿದೆ.[೨೨]
ನದೀಮ್-ಶ್ರವಣ್ ಚಿತ್ರದ ಧ್ವನಿವಾಹಿನಿಯನ್ನು ಸಂಯೋಜಿಸಿದರು.
ಇದು "ಕಿತನಾ ಪ್ಯಾರಾ ತುಝೆ ರಬ್ ನೇ" (ನಸ್ರತ್ ಫತೇ ಅಲಿ ಖಾನ್‍ರ ಪಂಜಾಬಿ ಹಾಡು "ಕಿನ್ನಾ ಸೋಹ್ನಾ ತೇನು ರಬ್ ನೇ ಬನಾಯಾ"ದಿಂದ ಅನುವಾದಿತವಾಗಿದೆ), ಅಪಾರವಾಗಿ ಜನಪ್ರಿಯವಾದ ಮದುವೆ ಹಾಡಾಗಿದ್ದ "ಆಯೆ ಹೋ ಮೇರಿ ಜ಼ಿಂದಗಿ ಮೇ", ಮತ್ತು ಆ ಕಾಲದ ಬಹಳವಾಗಿ ಕೇಳಲ್ಪಟ್ಟ ಪ್ರಮುಖ ಹಾಡಾಗಿದ್ದ ಮತ್ತು ಚಿತ್ರದ ಯಶಸ್ಸಿಗೂ ಕಾರಣವಾದ, ಉದಿತ್ ನಾರಾಯಣ್ ಹಾಗೂ ಅಲ್ಕಾ ಯಾಜ್ಞಿಕ್‍ರ "ಪರ್ದೇಸಿ ಪರ್ದೇಸಿ"ಯಂತಹ ಹಾಡುಗಳನ್ನು ಹೊಂದಿತ್ತು.[೧೮] ಈ ಹಾಡಿಗಾಗಿ ಉದಿತ್ ನಾರಾಯಣ್ ತಮ್ಮ ೩ನೇ ಫಿಲ್ಮ್‌ಫೇರ್ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಯನ್ನು ಗೆದ್ದರು. ಈ ಧ್ವನಿಸುರುಳಿ ಸಂಗ್ರಹವು ವಿಶಾಲ ಅಂತರದಿಂದ ಆ ವರ್ಷದ ಅತಿ ಹೆಚ್ಚು ಮಾರಾಟವಾದ ಬಾಲಿವುಡ್ ಧ್ವನಿವಾಹಿನಿಯಾಯಿತು.[೨೩]
ಈ ಧ್ವನಿವಾಹಿನಿ ಸಂಗ್ರಹದ ೧೧ ದಶಲಕ್ಷ ಪ್ರತಿಗಳು ಮಾರಾಟವಾದವು ಮತ್ತು ಇದು ಅತ್ಯಂತ ಹೆಚ್ಚು ಮಾರಾಟವಾದ ಸಾರ್ವಕಾಲಿಕ ಬಾಲಿವುಡ್ ಧ್ವನಿವಾಹಿನಿ ಸಂಗ್ರಹಗಳಲ್ಲಿ ಒಂದಾಗಿದೆ.[೨೩]
ಅಲ್ಕಾ ಯಾಗ್ನಿಕ್ "ಪೂಛೊ ಜ಼ರಾ ಪೂಛೊ" ಹಾಡನ್ನು ತಾವು ಸಾರ್ವಕಾಲಿಕವಾಗಿ ಹಾಡಿದ ಅತ್ಯುತ್ತಮ ಹಾಡುಗಳಲ್ಲಿ ಒಂದು ಎಂದು ಪರಿಗಣಿಸುತ್ತಾರೆ. ಅಂದಿನಿಂದ ಈ ಹಾಡನ್ನು ಅನೇಕ ಸಂಗೀತ ನಿರ್ದೇಶಕರು ನಕಲಿಸಿದ್ದಾರೆ.
೧೯೭೪ರ ಚಲನಚಿತ್ರ ಸಗೀನಾ ದ ಹಾಡು ಸಾಲಾ ಮೇ ತೊ ಸಾಹಬ್ ಬನ್ ಗಯಾ ವನ್ನು ಈ ಚಿತ್ರದಲ್ಲಿ ಸಂಕ್ಷಿಪ್ತವಾಗಿ ಬಳಸಲಾಯಿತು. ಈ ಹಾಡನ್ನು ಆಮಿರ್ ಖಾನ್ ಮೇಲೆ ಚಿತ್ರೀಕರಿಸಲಾಗಿತ್ತು.
ಹಾಡು # | ಶೀರ್ಷಿಕೆ | ಗಾಯಕ(ರು) | ಕಾಲಾವಧಿ |
---|---|---|---|
1 | "ಪೂಛೊ ಜ಼ರಾ ಪೂಛೊ" | ಅಲ್ಕಾ ಯಾಗ್ನಿಕ್, ಕುಮಾರ್ ಸಾನು | 06:12 |
2 | "ಆಯೇ ಹೋ ಮೇರಿ ಜ಼ಿಂದಗಿ ಮೇ" (ಪುರುಷ) | ಉದಿತ್ ನಾರಾಯಣ್ | 06:02 |
3 | "ಆಯೇ ಹೋ ಮೇರಿ ಜ಼ಿಂದಗಿ ಮೇ" (ಸ್ತ್ರೀ) | ಅಲ್ಕಾ ಯಾಗ್ನಿಕ್ | 06:02 |
4 | "ಕಿತನಾ ಪ್ಯಾರಾ ತುಝೆ ರಬ್ ನೇ" | ಅಲ್ಕಾ ಯಾಗ್ನಿಕ್, ಉದಿತ್ ನಾರಾಯಣ್ | 06:20 |
5 | "ಪರ್ದೇಸಿ ಪರ್ದೇಸಿ" (I) | ಅಲ್ಕಾ ಯಾಗ್ನಿಕ್, ಉದಿತ್ ನಾರಾಯಣ್, ಸಪ್ನಾ ಅವಸ್ಥಿ | 07:31 |
6 | "ಪರ್ದೇಸಿ ಪರ್ದೇಸಿ" (II) | ಅಲ್ಕಾ ಯಾಜ್ಞಿಕ್, ಕುಮಾರ್ ಸಾನು | 08:19 |
7 | "ತೇರೆ ಇಶ್ಕ್ ಮೇ ನಾಚೇಂಗೆ" | ಕುಮಾರ್ ಸಾನು, ಅಲೀಶಾ ಚಿನಾಯ್, ಸಪ್ನಾ ಮುಖರ್ಜಿ | 08:14 |
8 | "ಪರ್ದೇಸಿ ಪರ್ದೇಸಿ" (ದುಃಖಕರ) | ಸುರೇಶ್ ವಾಡ್ಕರ್, ಬೇಲಾ ಸುಲಾಖೆ | 02:40 |
ಫಿಲ್ಮ್‌ಫೇರ್ ಪ್ರಶಸ್ತಿಗಳು
{{cite web}}
: |last=
has generic name (help)