ರಾಮಗುಪ್ತ

ರಾಮಗುಪ್ತ ಸಮುದ್ರಗುಪ್ತನ ಹಿರಿಯ ಮಗ ಮತ್ತು ತಕ್ಷಣದ ಉತ್ತರಾಧಿಕಾರಿ. ಇವನ ನಂತರ ಇವನ ತಮ್ಮ ಎರಡನೇ ಚಂದ್ರಗುಪ್ತನ ಉತ್ತರಾಧಿಕಾರಿ. ಆರಂಭದಲ್ಲಿ, ಇವನು ಕೇವಲ ಸಾಂಪ್ರದಾಯಿಕ ನಿರೂಪಣೆಗಳಿಂದ ಪರಿಚಿತನಾಗಿದ್ದನು. ಆದರೆ ನಂತರ, ಜೈನ ತೀರ್ಥಂಕರ ವಿಗ್ರಹಗಳ ಮೇಲೇ ಮೂರು ಶಾಸನಗಳು ವಿದೀಶಾದ ಹತ್ತಿರದ ದುರ್ಜನ್‍ಪುರ್‍ನಿಂದ ಪತ್ತೆಯಾದವು. ಇವು ಇವನನ್ನು ಮಹಾರಾಜಾಧಿರಾಜ ಎಂದು ಹೆಸರಿಸುತ್ತವೆ. ದೊಡ್ಡ ಸಂಖ್ಯೆಯ ಇವನ ತಾಮ್ರದ ನಾಣ್ಯಗಳು ಕೂಡ ಎಯ್ರನ್-ವಿದೀಶಾ ಪ್ರದೇಶದಿಂದ ಪತ್ತೆಯಾಗಿವೆ.[]

ಸಂಪ್ರದಾಯದಲ್ಲಿ ರಾಮಗುಪ್ತ

[ಬದಲಾಯಿಸಿ]

೧೯೨೩ರಲ್ಲಿ ಲೆವಿ ಈಗ ಕಳೆದುಹೋಗಿರುವ ದೇವಿಚಂದ್ರಗುಪ್ತ ಹೆಸರಿನ ಒಂದು ಸಂಸ್ಕೃತ ನಾಟಕದ ಕೆಲವು ಉದ್ಧರಣಗಳನ್ನು ನಾಟ್ಯದರ್ಪಣದಿಂದ ಪ್ರಕಟಿಸಿದಾಗ, ಆಧುನಿಕ ವಿದ್ವಾಂಸರು ರಾಮಗುಪ್ತನ ಮೇಲಿನ ಸಾಂಪ್ರದಾಯಿಕ ವರ್ಣನೆಗಳ ಬಗ್ಗೆ ಮೊದಲು ತಿಳಿದರು. ರಾಮಚಂದ್ರ ಮತ್ತು ಗುಣಚಂದ್ರ ಎಂಬ ಇಬ್ಬರು ಜೈನ ಬರಹಗಾರರಿಂದ ಬರೆಯಲ್ಪಟ್ಟ ನಾಟಕಕಲೆ ಮೇಲಿನ ಸಂಸ್ಕೃತ ಕೃತಿಯಾದ ನಾಟ್ಯದರ್ಪಣ ಈ ಪಠ್ಯದ ಆರು ಉಲ್ಲೇಖನಗಳನ್ನು ಹೊಂದಿದೆ. ಅದೇ ವರ್ಷ, ಸರಸ್ವತಿ ಎನ್ನುವವರಿಗೆ ಕೂಡ ದೇವಿಚಂದ್ರಗುಪ್ತದ ಮೂರು ವಾಕ್ಯವೃಂದಗಳು ಸಿಕ್ಕವು. ಇವನ್ನು ಭೋಜನು ತನ್ನ ಶೃಂಗಾರಪ್ರಕಾಶ ಮತ್ತು ಸರಸ್ವತಿಕಂಠಾಭರಣಗಳಲ್ಲಿ ಉಲ್ಲೇಖಿಸಿದ್ದಾನೆ. ೧೯೨೪ರಲ್ಲಿ, ಬ್ಯಾನರ್ಜಿ ಇದಕ್ಕೆ ಮೊದಲನೇ ಅಮೋಘವರ್ಷನ ಸಂಜನ್ ತಾಮ್ರಫಲಕ ಶಾಸನದ ಒಂದು ಪದ್ಯದಿಂದ ಸಿಕ್ಕ ಮಾಹಿತಿ, ಜೊತೆಗೆ ಬಾಣಭಟ್ಟನು ಹರ್ಷಚರಿತದಲ್ಲಿ ಮಾಡಿದ ಸಂಕ್ಷಿಪ್ತ ಹೇಳಿಕೆ ಸೇರಿಸಿದರು. ಆಲ್ಟೇಕರ್ ಇವೆಲ್ಲ ಸಾಕ್ಷ್ಯಗಳನ್ನು ಆಧರಿಸಿ, ಸಾಂಪ್ರದಾಯಿಕ ವರ್ಣನೆಗಳಲ್ಲಿ ಉಲ್ಲೇಖಿಸಲಾದ ರಾಮಗುಪ್ತನು ನಿಜವಾಗಿಯೂ ಬದುಕಿದ್ದ ಎಂದು ತೀರ್ಮಾನಿಸಿದರು.

ನಾಟ್ಯದರ್ಪಣದ ಪ್ರಕಾರ, ರಾಮಗುಪ್ತನು ಹೇಡಿಯಾಗಿದ್ದನು. ಇವನು ತನ್ನ ತಮ್ಮ ಎರಡನೇ ಚಂದ್ರಗುಪ್ತನೊಂದಿಗೆ ಮದುವೆ ಗೊತ್ತಾಗಿದ್ದ ಧ್ರುವಸ್ವಾಮಿನಿಯನ್ನು ಬಲವಂತದಿಂದ ವಿವಾಹವಾದನು. ಸಮುದ್ರಗುಪ್ತನ ಮರಣದ ನಂತರ ಇವನ ತಮ್ಮನನ್ನು ಗುಪ್ತ ಸಾಮ್ರಾಜ್ಯದ ಭವಿಷ್ಯದ ರಾಜ ಎಂದು ಘೋಷಿಸಲಾದರೂ, ಇವನು ಗುಪ್ತ ಸಾಮ್ರಾಜ್ಯದ ರಾಜನೂ ಆದನು. ಸಾಂಪ್ರದಾಯಿಕ ಕಥನಗಳ ಪ್ರಕಾರ, ರಾಮಗುಪ್ತನು ಗುಜರಾತ್‍ನಲ್ಲಿನ ಶಕರನ್ನು ಆಕ್ರಮಿಸಿ ತನ್ನ ರಾಜ್ಯವನ್ನು ವಿಸ್ತರಿಸಲು ತೀರ್ಮಾನಿಸಿದನು. ಶೀಘ್ರದಲ್ಲೇ ಈ ದಂಡಯಾತ್ರೆ ಹದಗೆಟ್ಟಿತು ಮತ್ತು ಗುಪ್ತ ಸೇನೆಯು ಸಿಕ್ಕಿಬಿದ್ದಿತು. ಶಕ ರಾಜ ಮೂರನೇ ರುದ್ರಸಿಂಹನು ಶಾಂತಿಗಾಗಿ ರಾಮಗುಪ್ತನ ಹೆಂಡತಿ ಧ್ರುವಸ್ವಾಮಿನಿಯನ್ನು ಒಪ್ಪಿಸುವಂತೆ ಬೇಡಿಕೆ ಇಟ್ಟನು. ಈ ದುರ್ಬಲ ರಾಜನಿಗೆ ಈ ಕರಾರುಗಳನ್ನು ಸ್ವೀಕರಿಸುವ ಒಲವಿತ್ತು. ಆದರೆ ಇವನ ಹೆಂಡತಿ ಮತ್ತು ತಮ್ಮ ಚಂದ್ರಗುಪ್ತನಿಗೆ ಇದು ಆಕ್ರೋಶ ತರಿಸಿತು. ಮೋಸದಿಂದ, ಚಂದ್ರಗುಪ್ತನು ಶಕ ಶಿಬಿರಕ್ಕೆ ಹೋಗಿ, ಶಕ ರಾಜನನ್ನು ಕೊಂದು, ವಿಜಯ ತಂದುಕೊಟ್ಟು ಜನರ ಮತ್ತು ರಾಣಿಯ ಸದಭಿಪ್ರಾಯ ಗಳಿಸಿದನು. ಸ್ವಲ್ಪ ಸಮಯದ ನಂತರ, ಚಂದ್ರಗುಪ್ತನು ರಾಮಗುಪ್ತನನ್ನು ಪದಚ್ಯುತಿಗೊಳಿಸಿ ಕೊಂದನು. ಎರಡನೇ ಚಂದ್ರಗುಪ್ತನು ಹಿಂದೆ ಅತ್ತಿಗೆಯಾಗಿದ್ದ ಧ್ರುವಸ್ವಾಮಿನಿಯನ್ನು ಕೂಡ ವಿವಾಹವಾದನು.

ಉಲ್ಲೇಖಗಳು

[ಬದಲಾಯಿಸಿ]
  1. Agarwal, Ashvini (1989). Rise and Fall of the Imperial Guptas, Delhi:Motilal Banarsidass, ISBN 81-208-0592-5, pp.153-9.