ಡಾ. ರಾಮದಾಸ್ ಪಾಣೆಮಂಗಳೂರು ಶೆಣೈ | |
---|---|
ಜನನ | ೨೮ರ ಏಪ್ರಿಲ್ ೧೯೨೯ ಪಾಣೆಮಂಗಳೂರು, ಮಂಗಳೂರು |
ಮರಣ | ೧೬ನೇ ಅಗಸ್ಟ್, ೨೦೧೨ |
ವೃತ್ತಿ | ರಕ್ಷಣಾ ವಿಜ್ಞಾನಿ |
ಸಕ್ರಿಯ ವರ್ಷಗಳು | ೧೯೬೦-೨೦೧೨ |
ಗಮನಾರ್ಹ ಕೆಲಸಗಳು | ರಾಡಾರ್ ತಂತ್ರಜ್ಞಾನ |
ಸಂಗಾತಿ | ಅಮಿತಾ ಆರ್ ಶೆಣೈ |
ಮಕ್ಕಳು | ೩ |
ಪೋಷಕ(ರು) | ತಂದೆ- ಮಂಗಳೂರು ನರಸಿಂಹ ಶೆಣೈ, ತಾಯಿ- ಪಿ ಸಂಜೀವಿ ಶೆಣೈ |
ಪ್ರಶಸ್ತಿಗಳು | ಪದ್ಮಶ್ರೀ |
ಆರ್ ಪಿ ಶೆಣೈ ಎಂದೇ ಖ್ಯಾತರಾದ ಡಾ. ರಾಮದಾಸ್ ಪಾಣೆಮಂಗಳೂರು ಶೆಣೈ ಅವರು ಒಬ್ಬ ಭಾರತೀಯ ರಕ್ಷಣಾ ವಿಜ್ಞಾನಿ. ಇವರ ಹುಟ್ಟೂರು ಮಂಗಳೂರು. ಭಾರತೀಯ ರಾಡಾರ್ ತಂತ್ರಜ್ಞಾನದ ಪಿತಾಮಹ ಎಂದೇ ಹೆಸರುವಾಸಿಯಾದವರು.
ರಾಮದಾಸ್ ಅವರು ಹುಟ್ಟಿದ್ದು ೨೮ನೆಯ ಎಪ್ರಿಲ್, ೧೯೨೯ರಂದು ಮಂಗಳೂರಿನ ಹತ್ತಿರದ ಪಾಣೆಮಂಗಳೂರು ಎಂಬ ಹೆಸರಿನ ಹಳ್ಳಿಯಲ್ಲಿ. ತಂದೆ ಮಂಗಳೂರು ನರಸಿಂಹ ಶೆಣೈ, ತಾಯಿ ಪಿ ಸಂಜೀವಿ ಶೆಣೈ.
ಶೆಣೈಯವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕೆನರಾ ಹೈಸ್ಕೂಲ್ ಮಂಗಳೂರಿನಲ್ಲಿ ಪೂರೈಸಿದರು. ಭೌತಶಾಸ್ತ್ರದಲ್ಲಿ ಬಿಎಸ್ಸಿ ಸ್ನಾತಕ ಪದವಿಯನ್ನು ಪಡೆಯಲು ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದರು.ಸ್ನಾತಕ ಪದವಿಯನ್ನು ಪಡೆದ ನಂತರ, ಭೌತಶಾಸ್ತ್ರದಲ್ಲಿಯೇ ಉನ್ನತ ಶಿಕ್ಷಣವನ್ನು(ಸ್ನಾತಕೋತ್ತರ ಪದವಿ) ಪಡೆಯುವ ಸಲುವಾಗಿ, ವಾರಣಾಸಿಯಲ್ಲಿ ಇರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು. ಸ್ನಾತಕೋತ್ತರ ಪದವಿಯನ್ನು ಪೂರೈಸಿದ ನಂತರ, ಶೆಣೈಯವರು ಎಲೆಕ್ಟ್ರಿಕಲ್ ಕಮ್ಯುನಿಕೇಶನ್ ಇಂಜಿನಿಯರಿಂಗ್‍ನಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪದವಿಯನ್ನು ಪಡೆಯಲು ಬೆಂಗಳೂರಿನ ಪ್ರಖ್ಯಾತ ಭಾರತೀಯ ವಿಜ್ಞಾನ ಮಂದಿರಕ್ಕೆ ಸೇರ್ಪಡೆಯಾದರು. ಭಾರತದಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಗಿಸಿದ ಶೆಣೈಯವರು ಇಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಮಾಡುವ ಸಲುವಾಗಿ ಅಮೇರಿಕದಲ್ಲಿರುವ ವಿಸ್ಕಾನ್ಸಿನ್ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು ಮತ್ತು ೧೯೫೭ರಲ್ಲಿ ತಮ್ಮ ಪಿಎಚ್‌ಡಿ ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಿದರು.
ಉನ್ನತ ಶಿಕ್ಷಣವನ್ನು ಪೂರೈಸಿದ ಶೆಣೈಯವರು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದು, ರೇಡಿಯೊ ಕಾರ್ಪೋರೇಶನ್ ಆಫ್ ಅಮೇರಿಕಾದ ದೂರದರ್ಶನ ಪ್ರಸಾರ ವಿಭಾಗದಲ್ಲಿ. ಇಲ್ಲಿ ಅವರು ಸುಮಾರು ೩ ವರ್ಷ ತಮ್ಮ ಸೇವೆ ಸಲ್ಲಿಸಿ, ೧೯೬೦ರಲ್ಲಿ ಭಾರತಕ್ಕೆ ಮರಳಿ ಬಂದರು.
೧೯೬೦ರಲ್ಲಿ ಭಾರತಕ್ಕೆ ಮರಳಿದ ಶೆಣೈಯವರು ತಮ್ಮ ಬುದ್ಧಿವಂತಿಕೆ, ಚಾಣಾಕ್ಷತೆ ಮತ್ತು ಸಾಮರ್ಥ್ಯವನ್ನು ತಾಯಿ ಭಾರತಿಯ ಸೇವೆಗಾಗಿ ಮುಡಿಪಾಗಿಟ್ಟರು. ೧೯೬೦ರಿಂದ ೧೯೮೭ರವರೆಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದರು.
೧೯೬೦ರಿಂದ ೧೯೬೭ರವರೆಗೆ ವಿಜ್ಞಾನಿಯಾಗಿ- ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್ ಅಭಿವೃದ್ದಿ ವಿಭಾಗ (ಬೆಂಗಳೂರು) ೧೯೬೭ರಿಂದ ೧೯೭೧ರವರೆಗೆ ಉಪ ನಿರ್ದೇಶಕರಾಗಿ- ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ (ಹೈದರಾಬಾದ್) ೧೯೭೧ರಿಂದ ೧೯೭೩ರವರೆಗೆ ಮುಖ್ಯ ತಾಂತ್ರಿಕ ಅಧಿಕಾರಿಯಾಗಿ- ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಘಾಝಿಯಾಬಾದ್, ಉತ್ತರಪ್ರದೇಶ್) ೧೯೭೩ರಿಂದ ೧೯೮೭ರವರೆಗೆ ನಿರ್ದೇಶರಾಗಿ- ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್ ಅಭಿವೃದ್ಧಿ ವಿಭಾಗ.
ಶೆಣೈಯವರು ಕಾರ್ಯನಿರ್ವಹಿಸಿದ ಇತರೆ ಸಂಸ್ಥೆಗಳು, ಪದನಾಮ ಮತ್ತು ಅವಧಿ ಈ ರೀತಿ ಇವೆ:
ನಾಲ್ಟೆಕ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು- ನಿರ್ದೇಶಕ- ೧೯೯೩ರಿಂದ ೨೦೦೬ ಎ ಎಸ್ ಎಮ್ ಟೆಕ್ನಾಲಜೀಸ್ ಲಿಮಿಟೆಡ್, ಬೆಂಗಳೂರು- ನಿರ್ದೇಶಕ- ೧೯೯೩ರಿಂದ ೨೦೦೨ ಮತ್ತು ೨೦೦೬ರಿಂದ ೨೦೧೨ ಅಸ್ತ್ರ ಮೈಕ್ರೋವೇವ್ ಪ್ರಾಡಕ್ಟ್ಸ್ ಲಿಮಿಟೆಡ್, ಹೈದರಾಬಾದ್- ಅಧ್ಯಕ್ಷ- ೧೯೯೫ರಿಂದ ೨೦೦೯
ಇನ್ನು, ಸಾರ್ವಜನಿಕ ರಂಗದ ಪ್ರಮುಖ ಸಂಸ್ಥೆಗಳಾದ ಭಾರತ್ ಎಲೆಕ್ಟ್ರಾನಿಕ್ಸ ಲಿಮಿಟೆಡ್, ಕಿಯೋನಿಕ್ಸ್, ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ತಮಿಳುನಾಡು- ಇಲ್ಲಿ ನಿರ್ದೇಶಕ ಮಂಡಳಿಯ ಜೊತೆ ಸೇರಿಕೊಂಡು, ಈ ಸಂಸ್ಥೆಗಳ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿದ್ದಾರೆ.
ಅಲ್ಲದೆ, ಬೆಂಗಳೂರಿನ ಭಾರತೀಯ ವಿಜ್ಞಾನಮಂದಿರದಲ್ಲಿ ಮತ್ತು ಜವಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರೀಸರ್ಚ್(ಇದೂ ಸಹ ಬೆಂಗಳೂರಿನಲ್ಲೇ ಇದೆ) ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ತಮ್ಮ ಸೇವೆ ಸಲ್ಲಿಸಿದ್ದಾರೆ.
ತಮ್ಮ ವೃತ್ತಿಯಲ್ಲಿ ಪಡೆದ ಆಳವಾದ ನೈಪುಣ್ಯ, ಅನುಭವ ಮತ್ತು ರಾಡಾರ್ ಕ್ಷೇತ್ರದಲ್ಲಿ ನಡೆಸಿದ ಉನ್ನತ ಸಂಶೋಧನೆಗಳನ್ನು ಕ್ರೋಢೀಕರಿಸಿ, ಶೆಣೈಯವರು ಮೂರು ಪುಸ್ತಕಗಳನ್ನು ಬರೆದಿದ್ದಾರೆ.
ಭಾರತೀಯ ರಕ್ಷಣಾ ಕ್ಷೇತ್ರದಲ್ಲಿ, ಅದರಲ್ಲೂ ರಾಡಾರ್ ವಿಭಾಗದಲ್ಲಿ ನಡೆಸಿದ ಸಂಶೋಧನೆ ಮತ್ತು ಆ ಕ್ಷೇತ್ರದ ಅಭಿವೃದ್ಧಿಗಾಗಿ ನೀಡಿದ ಕೊಡುಗೆಗಳಿಂದಾಗಿ, ಶೆಣೈಯವರನ್ನು ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ. ಅವುಗಳೆಂದರೆ,
ಡಾ. ರಾಮದಾಸ್ ಪಾಣೆಮಂಗಳೂರು ಶೆಣೈಯವರು ಅಲ್ಪಕಾಲದ ಅನಾರೋಗ್ಯದ ಕಾರಣದಿಂದ ೧೬ನೆಯ ಆಗಸ್ಟ್ ೨೦೧೨ರಂದು, ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ೮೩ ವರ್ಷ ವಯಸ್ಸಾಗಿತ್ತು.