ಸಂಸ್ಥಾನ ಎಂದರೆ, ಒಂದು ಪ್ರಾಂತ್ಯವನ್ನು ಶಿಸ್ತುಬದ್ಧವಾಗಿ ನಡೆಸಿಕೊಂಡು ಹೋಗುವ ಒಂದು ಸ್ವತಂತ್ರ ರಾಜಕೀಯ ಸಮೂಹ. ಬೆಳಗಾವಿ ಜಿಲ್ಲೆಯ ರಾಮದುರ್ಗ ಸಂಸ್ಥಾನವು ೧೯೪೮ರ ತನಕ ಎಲ್ಲ ಸಂಸ್ಥಾನಗಳು ವಿಲೀನಿಕರಣವಾಗುವವರೆಗೆ ಒಂದು ಪ್ರಮುಖ ಸಂಸ್ಥಾನ ಕೇಂದ್ರವಾಗಿತ್ತು. ಗುಡ್ಡಗಾಡು ಪ್ರದೇಶಗಳಿಂದ ಸುತ್ತುವರೆದ ರಾಮದುರ್ಗ ಪ್ರದೇಶವು ಆಯಕಟ್ಟಿನ ಸ್ಥಳವಾಗಿದ್ದು, ವಾಸ್ತವವಾಗಿ ಕಿಲಬನೂರು ಮತ್ತು ತುರನೂರು ಎಂಬ ಗ್ರಾಮಗಳು ಸೇರಿಕೊಂಡು ೧೮೬೬ರಲ್ಲಿ ರಾಮದುರ್ಗದಲ್ಲಿ ಒಂದು ಪುರಸಭೆ ಸ್ಥಾಪನೆಯಾಯಿತು. ಇಲ್ಲಿ ಐತಿಹಾಸಿಕ ಕೋಟೆ ಮತ್ತು ಅರಮನೆ ಸಂಸ್ಥಾನವು ಜೀವಂತ ಸಾಕ್ಷಿಯಾಗಿವೆ. ರಾಮದುರ್ಗ ಪಟ್ಟಣವು ತಾಲೂಕು ಕೇಂದ್ರಸ್ಥಾನವಿದ್ದು, ಬೆಳಗಾವಿ ಜಿಲ್ಲೆಯಿಂದ ೧೦೩ ಕಿ.ಮೀ ಅಂತರದಲ್ಲಿ ಇದೆ. ರಾಮದುರ್ಗ ಸಂಸ್ಥಾನವು ಕೊಂಕಣಸ್ಥ ಬ್ರಾಹ್ಮಣ ರಾಜವಂಶದವರ ಆಳ್ವಿಕೆಯಲ್ಲಿತ್ತು. ಅಧಿಪತ್ಯ ಸ್ವೀಕರಿಸುವವರಿಗೆ "ರಾಜ" ಎಂಬ ಪದವನ್ನು ಉಪಯೋಗಿಸುತ್ತಿದ್ದರು.