ರಾಮಾನಂದ ಸಾಗರ | |
---|---|
![]() | |
ಜನನ | ಚಂದ್ರಮೌಳಿ ಚೋಪ್ರ ೨೯ ಡಿಸೆಂಬರ್ ೧೯೧೭ |
ಸಾವು | 12 December 2005 | (aged 87)
Other names | ರಾಮಾನಂದ ಚೋಪ್ರ ರಾಮಾನಂದ ಬೇಡಿ ರಾಮಾನಂದ ಕಶ್ಮೀರಿ |
ಶಿಕ್ಷಣ(s) | ಚಿತ್ರ ನಿರ್ಮಾಪಕ, ನಿರ್ದೇಶಕ, ಲೇಖಕ |
Spouse | ಲೀಲಾವತಿ |
ಮಕ್ಕಳು | ಆನಂದ ಸಾಗರ, ಪ್ರೇಮ ಸಾಗರ, ಮೋತಿ ಸಾಗರ, ಸುಭಾಷ ಸಾಗರ, ನೀಲಂ ಸಾಗರ |
Honours | ಪದ್ಮ ಶ್ರೀ (೨೦೦೦) |
ರಾಮಾನಂದ ಸಾಗರ (ಹಿಂದಿ रामानन्द सागर) (೨೯ ಡಿಸೆಂಬರ್ ೧೯೧೭ - ೧೨ ಡಿಸೆಂಬರ್ ೨೦೦೫) (ಜನ್ಮನಾಮ ಚಂದ್ರಮೌಳಿ ಚೋಪ್ರ) ಒಬ್ಬ ಭಾರತೀಯ ಚಿತ್ರ ನಿರ್ಮಾಪಕ, ನಿರ್ದೇಶಕ. ೧೯೮೭-೮೮ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿದ್ದ ರಾಮಾಯಣ ಧಾರಾವಾಹಿಯ ನಿರ್ಮಾಪಕರಾಗಿ ಹೆಚ್ಚು ಪ್ರಸಿದ್ದರು[೧]. ಈ ಧಾರಾವಾಹಿಯಲ್ಲಿ ಭಗವಾನ್ ರಾಮನಾಗಿ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಕಾಲಿಯಾ ಮನೆಮಾತಾದರು. ಈ ಧಾರಾವಾಹಿಯು ದೇಶದ ಉದ್ದಗಲಕ್ಕೂ ವೀಕ್ಷಿಸಲ್ಪಡುತ್ತಿತ್ತು. ಭಾರತ ಸರ್ಕಾರವು ಅವರಿಗೆ ೨೦೦೦ನೇ ಇಸವಿಯಲ್ಲಿ ಪದ್ಮಶ್ರೀ ಪುರಸ್ಕಾರ ಕೊಟ್ಟು ಗೌರವಿಸಿತು.
ಅವರು ಲಾಹೋರಿನ ಸನಿಹದಲ್ಲಿರಯ ಅಸಲ್ ಗುರು ಎಂಬ ಊರಿನಲ್ಲಿ ಜನಿಸಿದರು. ಅವರ ಮುತ್ತಜ್ಜ ಲಾಲಾ ಶಂಕರ್ ದಾಸ್ ಚೋಪ್ರ ಕಾಶ್ಮೀರದಿಂದ ಲಾಹೋರಿಗೆ ವಲಸೆ ಬಂದಿದ್ದರು. ಅವರ ತಾಯಿಯ ತಾಯಿಗೆ ಗಂಡು ಮಕ್ಕಳಿಲ್ಲದ ಕಾರಣ ಬಾಲಕ ಚಂದ್ರಮೌಳಿ ಚೋಪ್ರನನ್ನು ಅವರು ದತ್ತು ತೆಗೆದುಕೊಂಡರು. ಆಗ ಅವರ ಹೆಸರನ್ನು ಚಂದ್ರಮೌಳಿ ಚೋಪ್ರರಿಂದ ರಾಮಾನಂದ ಸಾಗರ ಎಂದು ಬದಲಾಯಿಸಲಾಯಿತು. ಅವರ ತಾಯಿ ಮಗನ ನೆನಪಿನಲ್ಲಿ ಆರೋಗ್ಯ ಕೆಡೆಸಿಕೊಂಡು ತಮ್ಮ ೨೬ನೇ ವಯಸ್ಸಿಗೆ ತೀರಿಹೋದರು. ಸಾಗರರೂ ಕೂಡಾ ತಮ್ಮ ತಂದೆ-ತಾಯಿಯ ಪ್ರೀತಿಯಿಂದ ವಂಚಿತರಾದೆನೆಂದು ಹಲವು ಸಲ ಅಲವತ್ತುಕೊಂಡಿದ್ದಾರೆ.[೨] ಅವರ ತಾಯಿಯ ನಿಧನದ ನಂತರ ಅವರ ತಂದೆ ಮರು ಮದುವೆಯಾದರು ಮತ್ತು ಅವರಿಗೆ ಮಕ್ಕಳಾದರು. ಅವರಲ್ಲಿ ಒಬ್ಬ ಮಗ ಹಿಂದಿಯ ನಿರ್ಮಾಪಕ, ನಿರ್ದೇಶಕ ವಿಧು ವಿನೋದ್ ಚೋಪ್ರಾ, ಹಾಗಾಗಿ ಮಲತಮ್ಮನೂ ಹೌದು [೩]
ರಾಮಾನಂದ ಸಾಗರರು ಜೀವನದಲ್ಲಿ ಆದರ್ಶವಾದಿಯಾಗಿದ್ದರು. ತಮ್ಮ ಮಲತಾಯಿಯು ತಮ್ಮ ಮದುವೆಗೆ ವರದಕ್ಷಿಣೆ ಕೇಳಿದಾಗ, ಅದನ್ನು ವಿರೋಧಿಸಿದರು. ಆಗ ಅವರನ್ನು ಮನೆಯಿಂದ ಹೊರಹಾಕಲಾಯಿತು[೪].
ತಮ್ಮ ಜೀವನ ನಿರ್ವಹಣೆಗಾಗಿ ಸಾಗರರು ಜವಾನನಾಗಿ, ಟ್ರಕ್ ಕ್ಲೀನರ ಆಗಿ, ಸೋಪ್ ಮಾರಿ, ಅಕ್ಕಸಾಲಿಗನಲ್ಲಿ ಕೆಲಸ ಕಲಿತು ಹೀಗೆ ಹಲವು ವಿಭಿನ್ನ ವೃತ್ತಿಗಳನ್ನು ಮಾಡಿದರು.[೪] ಬೆಳಗ್ಗೆ ದುಡಿದು, ರಾತ್ರಿ ಓದಿ ಪದವಿ ಪಡೆದರು. ಪಂಜಾಬ್ ವಿಶ್ವವಿದ್ಯಾನಿಲಯದಿಂದ ಸಂಸ್ಕೃತದಲ್ಲಿ ---ಚಿನ್ನದ ಪದಕ--- ಮತ್ತು ಫಾರಸಿಯಲ್ಲಿ ---ಮುನ್ಷಿ ಫಜಲ್--- ಪದವಿಯೊಂದಿಗೆ ತೇರ್ಗಡೆಗೊಂಡರು [೨]
ಲಾಹೋರಿನ ಪತ್ರಿಕೆಯಾದ ಡೈಲಿ ಮಿಲಾಪ್ ಪತ್ರಿಕೆಯ ಸಂಪಾದಕರಾಗಿದ್ದರು. ಅವರು ಹಲವು ಸಣ್ಣ ಕಥೆ, ಕವಿತೆ, ನಾಟಕ, ಕಾದಂಬರಿ ಮುಂತಾದವುಗಳನ್ನು ರಾಮಾನಂದ ಚೋಪ್ರ, ರಾಮಾನಂದ ಬೇಡಿ, ರಾಮಾನಂದ ಕಶ್ಮೀರಿ ಎಂಬೆಲ್ಲಾ ಹೆಸರುಗಳಿಂದ ಪ್ರಕಾಶಿಸುತ್ತಿದ್ದರು. ೧೯೪೨ರಲ್ಲಿ ಅವರಿಗೆ ಕ್ಷಯ ರೋಗ ಬಂದು ಕಾಶ್ಮೀರದಲ್ಲಿ ೧ ವರ್ಷಕಾಲ ಚಿಕಿತ್ಸೆ ಪಡೆದರು. ಆಗ ಅವರು ತಮ್ಮ ಹೋರಾಟದ ಬಗ್ಗೆ ಬರೆದ ಡೈರಿ ಆಫ ಎ ಟಿ.ಬಿ ಪೇಷಂಟ್ (Diary of a T.B. patient), ಧಾರಾವಾಹಿಯಾಗಿ ಲಾಹೋರಿನ ಪತ್ರಿಕೆಯಾದ ಅದಬ್-ಇ-ಮಶ್ರೀಕ್‍ರಲ್ಲಿ ಪ್ರಕಟಗೊಂಡು ಹೆಸರು ಪಡೆಯಿತು [೨][೪].
೧೯೩೨ರಲ್ಲಿ ಸಾಗರರು ತಮ್ಮ ಚಲನಚಿತ್ರ ಜೀವನವನ್ನು ಕ್ಲಾಪ್ಪೆರ ಬಾಯ್(clapper boy) ಆಗಿ ರೈಡರ್ಸ ಆನ್ ದಿ ರೋಡ್ (Raiders of the Rail Road) ಎಂಬ ಮೂಕಿ ಚಿತ್ರದಲ್ಲಿ ಶುರು ಮಾಡಿದರು. ಭಾರತದ ವಿಭಜನೆಯ ನಂತರ, ೧೯೪೯ರಲ್ಲಿ ಮುಂಬೈಗೆ ವಲಸೆ ಬಂದರು[೫].
೧೯೪೦ರ ದಶಕದಲ್ಲಿ ಪೃತ್ವಿರಾಜ್ ಕಪೂರ್ ಅವರ ಪೃತ್ವಿ ಥಿಯೇಟರ್ಸ ನಲ್ಲಿ ಸ್ಟೇಜ್ ಮಾನೇಜರ್ ಆಗಿ ಸೇರಿದರು. ಅಲ್ಲಿ ಪೃತ್ವಿರಾಜ್ ಕಪೂರರ ಪಿತೃಸಮಾನ ಮಾರ್ಗದರ್ಶನದಲ್ಲಿ ಕೆಲವು ನಾಟಕಗಳನ್ನು ನಿರ್ದೇಶಿಸಿದರು[೫].
೧೯೪೯ರಲ್ಲಿ ರಾಮಾನಂದ ಸಾಗರರು ರಾಜ್ ಕಪೂರ್ ರವರ ಸೂಪರ್ ಹಿಟ್ ಚಲನಚಿತ್ರ, ಬರ್ಸಾತ್‍ಗಾಗಿ ಕಥೆ ಮತ್ತು ಚಿತ್ರಕಥೆ ಬರೆದರು.[೬] ಇದಲ್ಲದೆ ನಿರ್ದೇಶನಕ್ಕೂ ಇಳಿದರು. ೧೯೫೦ರಲ್ಲಿ ಸಾಗರ್ ಫಿಲ್ಮ್ಸ (ಸಾಗರ್ ಆರ್ಟ್ಸ) ಎಂದೂ ಕರೆಯಲಾಗುವ ಚಿತ್ರ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದರು [೪]. ಮೆಹ್ಮಾನ್ ಮತ್ತು ಬಾಜೋಬಂದ್ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದರು. ಅವು ಗಲ್ಲಾಪೆಟ್ಟಿಗೆಯಲ್ಲಿ ಸೋತವು.
೧೯೮೫ರಲ್ಲಿ ಸಾಗರರು ದೂರದರ್ಶನ ರಂಗಕ್ಕೆ ಕಾಲಿಟ್ಟರು. ---ದಾದಾ ದಾದಿಕಿ ಕಹಾನಿಯಾಂ--- ಅವರ ಮೊದಲ ಧಾರಾವಾಹಿ. ನಂತರ ವಿಕ್ರಮ್ ಮತ್ತು ಬೇತಾಳ ಧಾರಾವಾಹಿ ಮಾಡಿದರು [೨]. ಅದರಲ್ಲಿ ಮುಂದೆ ರಾಮಾಯಣ ಧಾರಾವಾಹಿಯಲ್ಲಿ ಭಗವಾನ್ ರಾಮನಾಗಿ ನಟಿಸಿದ ಅರುಣ್ ಗೋವಿಲ್ ರಾಜಾ ವಿಕ್ರಮಾದಿತ್ಯನಾಗಿ ಅಭಿನಯಿಸಿದ್ದರು.
ಮುಂದೆ ಸಾಗರರು ಕೋಟ್ಯಾಂತರ ಭಾರತೀಯರು ಮಾತ್ರವಲ್ಲದೆ ವಿಶ್ವದೆಲ್ಲೆಡೆ ರಾಮಾಯಣವನ್ನು ಓದುವ, ಪ್ರೀತಿಸುವ, ಆರಾಧಿಸಿವು ಜನರ ಮನಃಪಟಲದಲ್ಲಿ ಶಾಶ್ವತವಾಗಿ ನಿಲ್ಲುವ ರಾಮಾಯಣ ಧಾರಾವಾಹಿಯನ್ನು ನಿರ್ಮಿಸಿದರು. ಈ ಧಾರಾವಾಹಿಯು ಮನೆ ಮನೆಯ ಮಾತಾಯಿತು. ೭೭ ಕಂತುಗಳ ಈ ಧಾರಾವಾಹಿ ಎಲ್ಲಾ ಹಳೆಯ ದಾಖಲೆಗಳನ್ನು ಅಳಿಸಿಹಾಕಿತು. ಆಗ ಟಿ.ವಿಗಳು ಇದ್ದ ಮನೆಗಳು ವಿರಳ. ಇದ್ದ ಮನೆಗಳಲ್ಲಿ ಭಾನುವಾರ ಬೆಳಗ್ಗೆ ಜನ ಸೇರುತ್ತಿದ್ದದ್ದು ಸಾಮಾನ್ಯ. ಅತ್ಯಂತ ಹೆಚ್ಚು ವೀಕ್ಷಣೆಯಾದ ಪೌರಾಣಿಕ ಧಾರಾವಾಹಿ ಎಂದು ಖ್ಯಾತಿ ಪಡೆದಿತ್ತು. ವಾಲ್ಮೀಕಿ ರಾಮಾಯಣ ಮತ್ತು ತುಳಸಿ ರಾಮಾಯಣದ ಕಥೆಗಳನ್ನು ಆಧಾರ ಗ್ರಂಥಗಳಾಗಿ ಉಪಯೋಗಿಸಲಾಯಿತು [೮]. ಈ ಸಫಲತೆಯ ಬಗ್ಗೆ ವಿನಮ್ರರಾಗಿ ಸಾಗರರು ತನ್ನನ್ನು ಈ ದೈವೀ ಕಾರ್ಯಕ್ಕೆ ತೊಡಗಿಸಿದ್ದು ಹನುಮಂತನ ಕೃಪೆ ಎಂದಿದ್ದರು[೯]. ನಟಿಸಿದ ರಾಮ, ಸೀತೆ, ಹನುಮ, ರಾವಣ ಎಲ್ಲರನ್ನೂ ಸಹಸ್ರಾರು ಜನ ದೇವರೆಂದೇ ಸಿಕ್ಕ ಸಿಕ್ಕಲ್ಲಿ ಕಾಲಿಗೆ ಬೀಳುತ್ತಿದ್ದರು[೧೦].
ಕೆಲ ಚಿಂತಕರ, ಸ್ತ್ರೀವಾದಿಗಳಿಗೆ ಈ ಧಾರಾವಾಹಿ ರುಚಿಸಲಿಲ್ಲ. ದೂರದರ್ಶನದ ಆಡಳಿತದಲ್ಲಿದ್ದಂತಹವರಿಗೂ ಈ ಧಾರಾವಾಹಿಯಲ್ಲಿ ಧಾರ್ಮಿಕ ಅಂಶಗಳು ಹೆಚ್ಚಿದೆಯೆಂದು ಅನ್ನಿಸಿತು. ಸಾಗರರು ಇದನ್ನು ಸ್ವಲ್ಪ ಕಡಿಮೆ ಮಾಡುವ ಪ್ರಯತ್ನ ಮಾಡಿದರು. ಜೊತೆಗೆ ೫೨ ಕಂತುಗಳ್ಳಲ್ಲಿ ಮುಗಿಸುವ ಕರಾರು ಇತ್ತು. ಹೆಚ್ಚಿನ ಅವಧಿ ತೆಗೆದುಕೊಳ್ಳುವ ಹಾಗೆ ಕಾಣುತ್ತಿತ್ತು. ಅವರು ಆಗ ಹಲವು ಕಟ್ಟುಪಾಡುಗಳನ್ನು ಹಾಕಲು ಪ್ರಯತ್ನಿಸಿದರು. ಆದರೆ ಈ ಧಾರಾವಾಹಿಯ ಜನಪ್ರಿಯತೆಯ ಮುಂದೆ ಅವರೂ ಕೂಡ ಬಗ್ಗಬೇಕಾಯಿತು. ಆಗಿನ ಸೂಚನಾ ಮತ್ತು ಪ್ರಸಾರಣಾ ಸಚಿವರು ಮತ್ತು ಆಗಿನ ಪ್ರಧಾನಿ ರಾಜೀವ ಗಾಂಧಿಯವರಿಗೆ ಆಪ್ತರಾಗಿದ್ದ ಹೆಚ್,ಕೆ.ಎಲ್ ಭಗತ್ ಸ್ವತಃ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಇನ್ನು ೨೬ ಕಂತುಗಳ ವಿಸ್ತರಣೆ ನೀಡಿದರು. ನಂತರ ಲವ ಕುಶ (ಉತ್ತರ ರಾಮಾಯಣ) ಧಾರಾವಾಹಿಗೆ ಕೂಡ ಅವರೇ ಖುದ್ದಾಗಿ ಆಸಕ್ತಿ ವಹಿಸಿ ಅವಕಾಶ ಮಾಡಿಕೊಟ್ಟರು[೧೧].
ಈ ಧಾರವಾಹಿಯಂದ ದೂರದರ್ಶನದ ಆದಾಯವೂ ವೃದ್ಧಿಸಿತು. ಆಗತಾನೇ ಉಗಮಿಸುತ್ತಿದ್ದ ಮಧ್ಯಮ ವರ್ಗವು ಜಾಹೀರಾತಿಗೆ ಒಳ್ಳೆಯ ಮಾರುಕಟ್ಟೆ ಒದಗಿಸಿತು. ಹಲವು ಹೊಸ ಸರಕುಗಳು ಜಾಹೀರಾತಿನ ಕಾರಣ ದೇಶದ ಉದ್ದಗಲಕ್ಕೂ ತಲುಪಿದವು[೧೨].
ಸುಮಾರು ೩೦ ವರ್ಷಗಳಾದ ಮೇಲೆ ೨೦೨೦ರಲ್ಲಿ ಕೋವಿಡ್-೧೯ ಕಾರಣ ಭಾರತ ಲಾಕ್‍ಡೌನ್ ಆದಾಗ ಕೇಂದ್ರ ಸರ್ಕಾರವು ಜನರನ್ನು ಮನೆಯಲ್ಲೇ ಇರಲು ಪ್ರೋತ್ಸಾಹಿಸಲು ರಾಮಾಯಣ ಮತ್ತು ಉತ್ತರ ರಾಮಾಯಣ ಧಾರಾವಾಹಿಗಳ ಪುನಃಪ್ರಸಾರವನ್ನು ಮಾಡಿಸಿತು. ಎಲ್ಲಾ ದಾಖಲೆಗಳನ್ನು ಮೀರಿ ೭೭ ಮಿಲಿಯನ್ ಅಥವಾ ೭.೭ ಕೋಟಿ ಜನರು ಒಂದೇ ದಿನ ಈ ಧಾರಾವಾಹಿಯನ್ನು ನೋಡಿದರು. ಮತ್ತೆ ದೂರದರ್ಶನದ ಆದಾಯವೂ ವೃದ್ಧಿಸಿತು[೮][೧೩].
ಬಿಬಿಸಿ ಸಂಸ್ಥೆಯ ಭಾರತದ ಮುಖ್ಯಸ್ಥರಾಗಿದ್ದ ಮಾರ್ಕ್ ಟುಲ್ಲಿಯವರೊಂದಿಗೆ ಲವ ಕುಶ (ಉತ್ತರ ರಾಮಾಯಣ) ಧಾರಾವಾಹಿಯ ನಿರ್ಮಾಣ ಸಮಯದಲ್ಲಿ ಮಾತನಾಡುತ್ತಾ ಸಾಗರರು, ಇನ್ನು ಮುಂದೆ ಧಾರ್ಮಿಕ ಧಾರಾವಾಹಿಗಳನ್ನು ನಿರ್ಮಿಸುವ ಇಂಗಿತ ವ್ಯಕ್ತಪಡಿಸಿದರು[೪]. ಹಾಗೆಯೇ ಅವರು ಕೃಷ್ಣ, ಜೈ ಗಂಗಾ ಮಯ್ಯಾ, ಜೈ ಮಹಾಲಕ್ಷ್ಮಿ ಮತ್ತು ಸಾಯಿಬಾಬ ಧಾರಾವಾಹಿಗಳನ್ನು ನಿರ್ಮಿಸಿದರು[೨].
ಧೀರ್ಘಕಾಲೀನ ಅಸೌಖ್ಯದ ಕಾರಣ ರಾಮಾನಂದ ಸಾಗರರು ೨೦೦೫ನೇ ಡಿಸೆಂಬರಿನಲ್ಲಿ ತಮ್ಮ ೮೮ನೇ ವಯಸ್ಸಿನಲ್ಲಿ ಇಹಲೋಕ ಯಾತ್ರೆ ಸಂಪೂರ್ಣಗೊಳಿಸಿದರು [೨].
ಡಿಸೆಂಬರ್ ೨೦೧೯ರಲ್ಲಿ ಅವರ ಮಗ ಪ್ರೇಮ್ ಸಾಗರ, ಅನ್ ಎಪಿಕ್ ಲೈಫ - ರಾಮಾನಂದ ಸಾಗರ, ಫ್ರಮ್ ಬರ್ಸಾತ್ ಟು ರಾಮಾಯಣ್ (An Epic Life: Ramanand Sagar, From Barsaat to Ramayan) [೧೪] ಎಂಬ ತಮ್ಮ ತಂದೆಯ ಜೀವನ ಚರಿತ್ರೆಯನ್ನು ಬಿಡುಗಡೆಗೊಳಿಸಿದರು. ರಾಮಾನಂದ ಸಾಗರರ ಈ ಜೀವನ ಚರಿತ್ರೆ, ಒಬ್ಬ ಕಾರಕೂನನಿಂದ ದೇಶದ ಅತ್ಯಂತ ದೊಡ್ಡ ನಿರ್ಮಾಪಕ, ನಿರ್ದೇಶಕರೊಬ್ಬರಾಗಿ ಜೀವನದಲ್ಲಿ ಹೋರಾಟಗಳನ್ನು ಎದುರಿಸಿ ಬೆಳೆದ ಪರಿಯನ್ನು ಕಟ್ಟಿಕೊಡುತ್ತದೆ [೫]
ತಮ್ಮ ವೃತ್ತಿಯಲ್ಲಿನ ಕೊಡುಗೆಗಳಿಗಾಗಿ ರಾಮಾನಂದ ಸಾಗರರರಿಗೆ ಹಲವು ಪ್ರಶಸ್ತಿಗಳು ಸಂದಿವೆ
ವರ್ಷ | ಹೆಸರು | ಚಿತ್ರ / ಧಾರವಾಹಿ | ಜವಾಬ್ದಾರಿ | ಟಿಪ್ಪಣಿಗಳು |
---|---|---|---|---|
೨೦೦೫ | ಸಾಯಿ ಬಾಬಾ (ಹಿಂದಿ) | ಧಾರವಾಹಿ | ನಿರ್ದೇಶಕ | |
೧೯೯೩ | ಅಲಿಫ್ ಲೈಲಾ (ಹಿಂದಿ) | ಧಾರವಾಹಿ | ನಿರ್ದೇಶಕ | |
೧೯೯೨ | ಕೃಷ್ಣ (ಹಿಂದಿ) | ಧಾರವಾಹಿ | ನಿರ್ದೇಶಕ | |
೧೯೮೮-೮೯ | ಲವ ಕುಶ (ಉತ್ತರ ರಾಮಾಯಣ) (ಹಿಂದಿ) | ಧಾರವಾಹಿ | ನಿರ್ದೇಶಕ | |
೧೯೮೭-೮೮ | ರಾಮಾಯಣ (ಹಿಂದಿ) | ಧಾರವಾಹಿ | ನಿರ್ದೇಶಕ ನಿರ್ಮಾಪಕ ಕಥೆ |
|
೧೯೮೬ | ವಿಕ್ರಮ್ ಮತ್ತು ಬೇತಾಳ (ಹಿಂದಿ) | ಧಾರವಾಹಿ | ನಿರ್ದೇಶಕ ನಿರ್ಮಾಪಕ |
|
೧೯೮೫ | ಸಲ್ಮಾ (ಹಿಂದಿ) | ಚಿತ್ರ | ನಿರ್ದೇಶಕ ನಿರ್ಮಾಪಕ |
|
೧೯೮೩ | ರೋಮಾನ್ಸ (ಹಿಂದಿ) | ಚಿತ್ರ | ನಿರ್ದೇಶಕ ನಿರ್ಮಾಪಕ |
|
೧೯೮೨ | ಭಗಾವತ್(ಹಿಂದಿ) | ಚಿತ್ರ | ನಿರ್ದೇಶಕ ನಿರ್ಮಾಪಕ |
|
೧೯೮೧ | ಅರ್ಮಾನ (ಹಿಂದಿ) | ಚಿತ್ರ | ನಿರ್ಮಾಪಕ | |
೧೯೭೯ | ತೇರೆ ಆಶಿಕ್ ಹೇ (ಹಿಂದಿ) | ಚಿತ್ರ | ಸಂಭಾಷಣೆ ಚಿತ್ರಕಥೆ |
|
೧೯೭೯ | ಪ್ರೇಮ್ ಬಂಧನ್ (ಹಿಂದಿ) | ಚಿತ್ರ | ನಿರ್ದೇಶಕ | |
೧೯೭೬ | ಚರನ್ (ಹಿಂದಿ) | ಚಿತ್ರ | ನಿರ್ದೇಶಕ ನಿರ್ಮಾಪಕ ಕಥೆ |
|
೧೯೭೩ | ಜಲ್ತೆ ಬದನ್ (ಹಿಂದಿ) | ಚಿತ್ರ | ನಿರ್ದೇಶಕ ನಿರ್ಮಾಪಕ ಕಥೆ |
|
೧೯೭೨ | ಲಲ್ಕಾರ್ (ಹಿಂದಿ) | ಚಿತ್ರ | ನಿರ್ದೇಶಕ ನಿರ್ಮಾಪಕ ಕಥೆ |
|
೧೯೭೦ | ಗೀತ್ (ಹಿಂದಿ) | ಚಿತ್ರ | ನಿರ್ದೇಶಕ ನಿರ್ಮಾಪಕ |
|
೧೯೬೮ | ಆಂಖೇನ್ (ಹಿಂದಿ) | ಚಿತ್ರ | ನಿರ್ದೇಶಕ ನಿರ್ಮಾಪಕ ಕಥೆ |
|
೧೯೬೫ | ಆರ್ಜೂ (ಹಿಂದಿ) | ಚಿತ್ರ | ನಿರ್ದೇಶಕ ನಿರ್ಮಾಪಕ ಕಥೆ |
|
೧೯೬೪ | ಜಿಂದಗೀ (ಹಿಂದಿ) | ಚಿತ್ರ | ನಿರ್ದೇಶಕ ನಿರ್ಮಾಪಕ |
|
೧೯೬೪ | ರಾಜಕುಮಾರ್ (ಹಿಂದಿ) | ಚಿತ್ರ | ಸಂಭಾಷಣೆ ಚಿತ್ರಕಥೆ |
|
೧೯೬೦ | ಘುಂಘಟ್ (ಹಿಂದಿ) | ಚಿತ್ರ | ನಿರ್ದೇಶಕ | |
೧೯೫೯ | ಪೈಗಾಮ್ (ಹಿಂದಿ) | ಚಿತ್ರ | ಸಂಭಾಷಣೆ | |
೧೯೫೮ | ರಾಜ್ ತಿಲಕ್ | ಚಿತ್ರ | ಕಥೆ ಸಂಭಾಷಣೆ |
|
೧೯೫೬ | ಮೇಮ್ ಸಾಹಿಬ್ | ಚಿತ್ರ | ಸಂಭಾಷಣೆ | |
೧೯೫೪ | ಬಾಜೋಬಂದ್ | ಚಿತ್ರ | ನಿರ್ದೇಶಕ | |
೧೯೫೨ | ಸಂಗ್ದಿಲ್ | ಚಿತ್ರ | ಸಂಭಾಷಣೆ ಚಿತ್ರಕಥೆ |
|
೧೯೫೩ | ಮೆಹ್ಮಾನ್ | ಚಿತ್ರ | ನಿರ್ದೇಶಕ | |
೧೯೫೦ | ಜಾನ್ ಪೆಹ್ಚಾನ್ | ಚಿತ್ರ | ಸಂಭಾಷಣೆ ಚಿತ್ರಕಥೆ |
|
೧೯೪೯ | ಬರ್ಸಾತ್ | ಚಿತ್ರ | ಕಥೆ ಸಂಭಾಷಣೆ ಚಿತ್ರಕಥೆ |
{{cite web}}
: |archive-date=
/ |archive-url=
timestamp mismatch; 2019-10-29 suggested (help)
{{cite web}}
: CS1 maint: bot: original URL status unknown (link)