Rheum australe | |
---|---|
Scientific classification | |
ಸಾಮ್ರಾಜ್ಯ: | Plantae |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | Eudicots |
ಗಣ: | ಕ್ಯಾರ್ಯೋಫಿಲಾಲೀಸ್ |
ಕುಟುಂಬ: | ಪಾಲಿಗೊನೇಸಿಯೀ |
ಕುಲ: | ರಿಯಮ್ |
ಪ್ರಜಾತಿ: | R. australe
|
Binomial name | |
Rheum australe | |
Synonyms[೧] | |
|
ರೇವಲ್ಚಿನ್ನಿ ಪಾಲಿಗೋನೇಸೀ ಕುಟುಂಬದ[೧] ರಿಯಮ್ ಇಮೋಡಿ ಪ್ರಭೇದದ ಮೂಲಿಕೆ ಸಸ್ಯ. ಔಷಧೀಯ ಗುಣವಿದೆ. ಹಿಮಾಲಯನ್ ರೂಬಾರ್ಬ್,[೨][೩] ಇಂಡಿಯನ್ ರೂಬಾರ್ಬ್ ಎಂಬ ಹೆಸರುಗಳೂ ಇವೆ.
ಕಾಶ್ಮೀರದಿಂದ ಸಿಕ್ಕಿಮ್‍ವರೆಗೆ ಹಿಮಾಲಯ ಪರ್ವತಶ್ರೇಣಿಗಳಲ್ಲಿ 3,300-5,300 ಮೀ ಎತ್ತರದ ಪ್ರದೇಶಗಳಲ್ಲಿ 1.5-3 ಮೀ ಎತ್ತರಕ್ಕೆ ಸ್ವಾಭಾವಿಕವಾಗಿ ಬೆಳೆಯುತ್ತದೆ. ಅಸ್ಸಾಮಿನಲ್ಲಿ ಇದನ್ನು ಕೃಷಿ ಬೆಳೆಯಾಗಿ ಬೆಳೆಯುವುದುಂಟು. ಬೇರುಗಳು ಬಲವಾಗಿರುತ್ತವೆ. ಎಲೆಗಳು ದೊಡ್ಡವು; ಸುಮಾರು 60 ಸೆಂಮೀ ಅಗಲ. ಎಲೆತೊಟ್ಟು ಕೂಡ ಉದ್ದ; 30-45 ಸೆಂಮೀ ಇರುವುದುಂಟು. ಹೂಗಳು ಚಿಕ್ಕವು; ಕಡುಊದಾ ಇಲ್ಲವೆ ತಿಳಿಗೆಂಪು ಬಣ್ಣದವು.
ರೇವಲ್‌ಚಿನ್ನಿ ಒಣಹವೆಯನ್ನು ತಡೆದುಕೊಳ್ಳಬಲ್ಲುದು. ಇದನ್ನು ಬೀಜಗಳಿಂದ ಇಲ್ಲವೆ ಗೆಡ್ಡೆತುಂಡುಗಳಿಂದ ವೃದ್ಧಿಸಬಹುದಾಗಿದೆ. ಗಿಡಗಳಿಗೆ 3-10 ವರ್ಷ ವಯಸ್ಸಾದ ಮೇಲೆ ಇವುಗಳ ಭೂಗತ ಗೆಡ್ಡೆಕಾಂಡವನ್ನು ಅಗೆದು ತೆಗೆಯಲಾಗುತ್ತದೆ. ಕಾಂಡವನ್ನು ತೊಳೆಯ ಸಣ್ಣತುಂಡುಗಳಾಗಿ ಕತ್ತರಿಸಿ ಬಿಸಿಲಿನಲ್ಲಿ ಇಲ್ಲವೆ ಕಾವುಗೂಡುಗಳಲ್ಲಿ ಇರಿಸಿ ಒಣಗಿಸಿ ಸೂರ್ಯನ ಪ್ರಕಾಶಕ್ಕೆ ಒಡ್ಡದಂತೆ ಶೇಖರಿಸಿ ಇಡಲಾಗುತ್ತದೆ.
ರೇವಲ್‌ಚಿನ್ನಿಗೆ ಔಷಧೀಯ ಗುಣಗಳಿರುವುದರಿಂದ ಇದನ್ನು ಆಯುರ್ವೇದ ವೈದ್ಯಪದ್ಧತಿಯಲ್ಲಿ ಬಳಸಲಾಗುತ್ತದೆ. ಬೇರುಗಳನ್ನು ಭೇದಿಕಾರಕವಾಗಿಯೂ ಬಂಧಕ, ಶಕ್ತಿವರ್ಧಕವಾಗಿಯೂ ಉಪಯೋಗಿಸುವುದಿದೆ. ಇವಕ್ಕೆ ಉತ್ತೇಜಕ ಮತ್ತು ಸುಖರೇಚಕ ಗುಣ ಇರುವುದರಿಂದ ಅಗ್ನಿಮಾಂದ್ಯದ ಚಿಕಿತ್ಸೆಯಲ್ಲಿ ಇದಕ್ಕೆ ಮಹತ್ತ್ವದ ಸ್ಥಾನ ಉಂಟು. ಬೇರಿನ ಪುಡಿಯನ್ನು ಹಲ್ಲುಜ್ಜುವುದಕ್ಕೂ ವ್ರಣಗಳ ಮೇಲೆ ಚಿಮುಕಿಸುವುದಕ್ಕೂ ಬಳಸಲಾಗುತ್ತದೆ. ಅಲ್ಲದೆ ಬೇರನ್ನು ಮಂಜಿಷ್ಠ ಮತ್ತು ಪೊಟ್ಯಾಷ್‌ಗಳೊಂದಿಗೆ ಬೆರೆಸಿ ಬಟ್ಟೆಗಳಿಗೆ ಕೆಂಪುಬಣ್ಣಕೊಡಲು ಉಪಯೋಗಿಲಾಗುತ್ತದೆ. ಎಲೆ, ಹೂಗಳನ್ನು ತರಕಾರಿಯಾಗಿ ಉಪಯೋಗಿಸುವರು.