ಲಿಟ್ಟಿ, ಜೊತೆಗೆ ಚೋಖಾ ಒಂದು ಸಂಪೂರ್ಣ ಆಹಾರವಾಗಿದ್ದು ಭಾರತದ ಬಿಹಾರ ರಾಜ್ಯದಿಂದ ಹುಟ್ಟಿಕೊಂಡಿತು. ಇದು ಝಾರ್ಖಂಡ್ ಮತ್ತು ಪೂರ್ವ ಉತ್ತರ ಪ್ರದೇಶದ ಭಾಗಗಳಲ್ಲಿ ಕೂಡ ಜನಪ್ರಿಯವಾಗಿದೆ. ಇದು ಗೋಧಿ ಹಿಟ್ಟಿನ ಒಳಗೆ ಸೊಪ್ಪುಗಳು ಹಾಗೂ ಸಂಬಾರ ಪದಾರ್ಥಗಳನ್ನು ಬೆರೆಸಿದ ಸಟ್ಟುದ (ಹುರಿದ ಕಡಲೆಹಿಟ್ಟು ಮತ್ತು ಬಾರ್ಲಿ ಹಿಟ್ಟು) ಹೂರಣ ತುಂಬಿಸಿ ತಯಾರಿಸಲಾದ ಹಿಟ್ಟಿನ ಉಂಡೆಯಾಗಿದ್ದು ಈ ಉಂಡೆಯನ್ನು ನಂತರ ಕಲ್ಲಿದ್ದಲು ಅಥವಾ ಬೆರಣಿ ಅಥವಾ ಕಟ್ಟಿಗೆಯ ಮೇಲೆ ಬೇಯಿಸಲಾಗುತ್ತದೆ. ನಂತರ ಹೇರಳ ತುಪ್ಪ ಹಾಕಿದ ಒಗ್ಗರಣೆಯಲ್ಲಿ ಇದನ್ನು ಚಿಮ್ಮಿಸಲಾಗುತ್ತದೆ.[೧]. ಇದನ್ನು ಮೊಸರು, ಬದನೆಕಾಯಿ ಭರ್ತಾ, ಆಲೂ ಭರ್ತಾ ಮತ್ತು ಹಪ್ಪಳದೊಂದಿಗೆ ತಿನ್ನಬಹುದು.[೨] ಸಾಂಪ್ರದಾಯಿಕವಾಗಿ ಲಿಟ್ಟಿಯನ್ನು ಬೆರಣಿಯ ಬೆಂಕಿಯ ಮೇಲೆ ಬೇಯಿಸಲಾಗುತ್ತದೆ,[೩] ಆದರೆ ಆಧುನಿಕ ದಿನದಲ್ಲಿ ಹೊಸದಾದ ಕರಿದ ರೂಪವನ್ನು ಅಭಿವೃದ್ಧಿಪಡಿಸಲಾಗಿದೆ.[೪]
ಲಿಟ್ಟಿಗೆ ಸೇರಿಸಲಾದ ಸೊಪ್ಪುಗಳು ಮತ್ತು ಸಂಬಾರ ಪದಾರ್ಥಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ, ನಿಂಬೆ ರಸ, ಅಜವಾನದ ಬೀಜಗಳು, ಕರಿ ಜೀರಿಗೆ ಮತ್ತು ಉಪ್ಪು ಸೇರಿವೆ.[೫] ಚೋಖಾ ಹುರಿದು ರುಬ್ಬಿದ ಬದನೆಕಾಯಿ, ಟೊಮೇಟೊ ಮತ್ತು ಆಲೂಗಡ್ಡೆಯ ಒಂದು ತಯಾರಿಕೆಯಾಗಿದೆ.[೬]