ಲೋಣಾರ್ ಉಲ್ಕೆಗುಂಡಿ ಎಂದೂ ಕರೆಯಲ್ಪಡುವ ಲೋಣಾರ್ ಸರೋವರವು ಅಧಿಸೂಚಿತ ರಾಷ್ಟ್ರೀಯ ಭೂಪಾರಂಪರಿಕ ಸ್ಮಾರಕ,[೧][೨][೩] ಉಪ್ಪುನೀರಿನ, ಕ್ಷಾರೀಯ ಸರೋವರವಾಗಿದ್ದು, ಮಹಾರಾಷ್ಟ್ರ ರಾಜ್ಯದ ಬುಲ್ಧಾನಾ ಜಿಲ್ಲೆಯ ಲೋಣಾರ್ನಲ್ಲಿದೆ. ಉಲ್ಕಾಶಿಲೆ ಘರ್ಷಣೆಯ ಪ್ರಭಾವದಿಂದ ಲೋಣಾರ್ ಸರೋವರವದ ರಚನೆಯಾಯಿತು.[೪][೫] ಲೋಣಾರ್ ಸರೋವರು ಸರಾಸರಿ ೩,೯೦೦ ಅಡಿ ವ್ಯಾಸ ಹೊಂದಿದ್ದು ಉಲ್ಕೆಗುಂಡಿಯ ಅಂಚಿನಿಂದ ಸುಮಾರು ೪೪೯ ಅಡಿ ಕೆಳಗಿದೆ. ಉಲ್ಕೆಯ ಕುಳಿಯ ಅಂಚು ಸುಮಾರು ೫,೯೦೦ ಅಡಿ ವ್ಯಾಸದ್ದಾಗಿದೆ.[೬]
ಲೋಣಾರ್ ಉಲ್ಕೆಗುಂಡಿಯು 35,000 ರಿಂದ 50,000 ವರ್ಷಗಳ ಹಿಂದೆ ಸಂಭವಿಸಿದ ಉಲ್ಕಾಶಿಲೆಯ ಪ್ರಭಾವದಿಂದ ಉಂಟಾಗಿದೆ ಎಂದು ತಿಳಿಯಲಾಗಿದೆ.
ಈ ಸರೋವರವನ್ನು ನವೆಂಬರ್ 2020ರಲ್ಲಿ[೭] ಸಂರಕ್ಷಿತ ರ್ಯಾಮ್ಸಾರ್ ತಾಣವೆಂದು ಘೋಷಿಸಲಾಯಿತು.
ಸರೋವರದ ನೀರು ವಿವಿಧ ಲವಣಗಳು ಮತ್ತು ಸೋಡಾಗಳನ್ನು ಹೊಂದಿದೆ. ಶುಷ್ಕ ವಾತಾವರಣದಲ್ಲಿ, ಆವಿಯಾಗುವುದರಿಂದ ನೀರಿನ ಮಟ್ಟ ಕಡಿಮೆಯಾದಾಗ, ದೊಡ್ಡ ಪ್ರಮಾಣದಲ್ಲಿ ಸೋಡಾವನ್ನು ಸಂಗ್ರಹಿಸಲಾಗುತ್ತದೆ. ಪೂರ್ಣಾ ಮತ್ತು ಪೇನ್ಗಂಗಾ ಎಂಬ ಹೆಸರಿನ ಎರಡು ಸಣ್ಣ ತೊರೆಗಳು[೮] ಸರೋವರದೊಳಗೆ ಹರಿಯುತ್ತವೆ ಮತ್ತು ಒಂದು ಸಿಹಿ ನೀರಿನ ಬಾವಿಯು ದಕ್ಷಿಣ ಭಾಗದಲ್ಲಿ, ನೀರಿನ ಅಂಚಿಗೆ ಹತ್ತಿರದಲ್ಲಿದೆ.[೯]
ಸರೋವರವನ್ನು ಮೊದಲು ಪ್ರಾಚೀನ ಗ್ರಂಥಗಳಾದ ಸ್ಕಂದ ಪುರಾಣ ಮತ್ತು ಪದ್ಮ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಈ ಸರೋವರವಿರುವ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯು ಒಂದು ಕಾಲದಲ್ಲಿ ಮೌರ್ಯ ಸಾಮ್ರಾಜ್ಯದ ಭಾಗವಾಗಿತ್ತು ಮತ್ತು ನಂತರ ಶಾತವಾಹನ ಸಾಮ್ರಾಜ್ಯದ ಭಾಗವಾಗಿತ್ತು. ಚಾಲುಕ್ಯರು ಮತ್ತು ರಾಷ್ಟ್ರಕೂಟರು ಕೂಡ ಈ ಪ್ರದೇಶವನ್ನು ಆಳಿದರು. ಮೊಘಲರು, ಯಾದವರು, ನಿಜ಼ಾಮರು ಮತ್ತು ಬ್ರಿಟಿಷರ ಅವಧಿಯಲ್ಲಿ ಈ ಪ್ರದೇಶದಲ್ಲಿ ವ್ಯಾಪಾರ ಅಭಿವೃದ್ಧಿಹೊಂದಿತು. ಸರೋವರದ ಪರಿಧಿಯಲ್ಲಿ ಕಂಡುಬರುವ ಹಲವಾರು ದೇವಾಲಯಗಳನ್ನು ಯಾದವ ದೇವಾಲಯಗಳು ಎಂದು ಮತ್ತು ಹೇಮದ್ಪಂತಿ ದೇವಾಲಯಗಳು (ಹೇಮಾದ್ರಿ ರಾಮಗಯಾ ಹೆಸರನ್ನು ಇಡಲಾಗಿದೆ) ಎಂದೂ ಕರೆಯಲಾಗುತ್ತದೆ.
ಸರೋವರವು ವ್ಯಾಪಕ ಶ್ರೇಣಿಯ ಸಸ್ಯ ಮತ್ತು ಪ್ರಾಣಿಗಳಿಗೆ ಆಶ್ರಯಧಾಮವಾಗಿದೆ.[೧೦]
ಈ ತಾಣವು 160 ಪಕ್ಷಿಗಳು, 46 ಸರೀಸೃಪಗಳು ಮತ್ತು 12 ಸಸ್ತನಿ ಜಾತಿಗಳನ್ನು ಹೊಂದಿದೆ.[೧೧] ನಿವಾಸಿ ಮತ್ತು ವಲಸೆ ಹಕ್ಕಿಗಳಾದ ಕಪ್ಪು ರೆಕ್ಕೆಯ ಸ್ಟಿಲ್ಟ್ಗಳು, ಚಕ್ರವಾಕಗಳು, ಗ್ರೀಬ್ಗಳು, ಶೆಲ್ಡಕ್ಸ್ (ಯುರೋಪಿಯನ್ ವಲಸಿಗರು), ಶಾವೆಲರ್ಗಳು, ಟೀಲ್ಗಳು, ಕಬ್ಬಾರೆ ಹಕ್ಕಿಗಳು, ಕೆಂಪು- ಟಿಟ್ಟಿಭಗಳು, ರೋಲರ್ಗಳು ಅಥವಾ ಬ್ಲೂ ಜೇಸ್, ಗೀಜಗಗಳು, ರಾಬಿನ್ಗಳು ಮತ್ತು ಸ್ವಾಲೋಗಳು ಸರೋವರದ ಮೇಲೆ ಕಂಡುಬರುತ್ತವೆ.[೧೦]
ಸರೀಸೃಪಗಳಲ್ಲಿ, ಮಾನಿಟರ್ ಹಲ್ಲಿ ಪ್ರಮುಖವಾದುದು ಎಂದು ವರದಿಯಾಗಿದೆ. ಈ ಸರೋವರವು ಸಾವಿರಾರು ನವಿಲುಗಳು, ಚಿಂಕಾರಾ ಮತ್ತು ಗಜ಼ೆಲ್ಗಳಿಗೆ ನೆಲೆಯಾಗಿದೆ.[೧೦]
ಹಲವಾರು ದೇವಾಲಯಗಳು ಸರೋವರವನ್ನು ಸುತ್ತುವರೆದಿವೆ, ಅವುಗಳಲ್ಲಿ ಹೆಚ್ಚಿನವು ಇಂದು ಪಾಳುಬಿದ್ದಿವೆ, ಲೋಣಾರ್ ಪಟ್ಟಣದ ಮಧ್ಯಭಾಗದಲ್ಲಿರುವ ದೈತ್ಯ ಸೂದನ ದೇವಾಲಯವನ್ನು ಹೊರತುಪಡಿಸಿ. ದೈತ್ಯ ಲೋಣಾಸುರನ ಮೇಲೆ ವಿಷ್ಣುವಿನ ವಿಜಯದ ಗೌರವಾರ್ಥವಾಗಿ ಇದನ್ನು ನಿರ್ಮಿಸಲಾಗಿದೆ. ಇದು ಆರಂಭಿಕ ಹಿಂದೂ ವಾಸ್ತುಶೈಲಿಗೆ ಉತ್ತಮ ಉದಾಹರಣೆಯಾಗಿದೆ.[೧೨] ವಿಷ್ಣುಮಂದಿರ, ವಾಘ್ ಮಹಾದೇವ್, ಮೋರಾ ಮಹಾದೇವ್, ಮುಂಗ್ಲ್ಯಾಚಾ ಮಂದಿರ ಮತ್ತು ಕಮಲಾಜಾ ದೇವಿಯಾ ಉಲ್ಕೆಗುಂಡಿಯೊಳಗೆ ಕಂಡುಬರುವ ಇತರ ದೇವಾಲಯಗಳು.
ದೈತ್ಯ ಸೂದನ ದೇವಾಲಯವು 6 ನೇ ಮತ್ತು 12 ನೇ ಶತಮಾನದ ನಡುವೆ ಮಧ್ಯ ಮತ್ತು ದಕ್ಷಿಣ ಭಾರತವನ್ನು ಆಳಿದ ಚಾಲುಕ್ಯ ರಾಜವಂಶಕ್ಕೆ ಸೇರಿದ ವಿಷ್ಣು ದೇವಾಲಯವಾಗಿದೆ. ಇದು ಹೇಮಾದ್ಪಂಥಿ ವರ್ಗಕ್ಕೆ ಸೇರಿದ್ದು, ಅನಿಯಮಿತ ನಕ್ಷತ್ರದ ರೂಪದಲ್ಲಿ ನಿರ್ಮಿಸಲ್ಪಟ್ಟಿದೆ. ಇದು ಖಜುರಾಹೊ ದೇವಾಲಯಗಳಲ್ಲಿ ಕಂಡುಬರುವ ಕೆತ್ತನೆಗಳನ್ನು ಹೋಲುವ ಕೆತ್ತನೆಗಳನ್ನು ಒಳಗೊಂಡಿದೆ. ಈ ದೇವಾಲಯದ ದೇವರನ್ನು ಕಲ್ಲಿನಂತೆ ಹೋಲುವ ಹೆಚ್ಚಿನ ಲೋಹದ ಅಂಶವಿರುವ ಅದಿರಿನಿಂದ ಮಾಡಲಾಗಿದೆ. ದೇವಾಲಯದ ಚಾವಣಿಯು ಕೆತ್ತನೆಗಳನ್ನು ಹೊಂದಿದೆ. ಬಾಹ್ಯ ಗೋಡೆಗಳು ಸಹ ಕೆತ್ತಿದ ವಿಗ್ರಹಗಳಿಂದ ಆವರಿಸಲ್ಪಟ್ಟಿವೆ. ದೇವಾಲಯದ ಸ್ತಂಭವು ಸುಮಾರು 1.5 ಮೀ. ಎತ್ತರ ಆಗಿದೆ ಮತ್ತು ಅಪೂರ್ಣ ಛಾವಣಿಯು ಗೋಪುರದ ಉದ್ದೇಶಿತ ಪಿರಮಿಡ್ ರೂಪವನ್ನು ಸೂಚಿಸುತ್ತದೆ.
ಲೋನಾರ್ ಉಲ್ಕೆಗುಂಡಿಯ ಹರವು ನೋಟಗಳು