ವಡ್ಡಾರಾಧನೆಯು ಶಿವಕೋಟ್ಯಾಚಾರ್ಯ ಬರೆದಿರುವನೆಂದು ನಂಬಲಾಗಿರುವ ಜೈನ ಧಾರ್ಮಿಕ(ನೋಂಪಿ) ಕಥೆಗಳ ಸಂಗ್ರಹ. ಕನ್ನಡದಲ್ಲಿ ದೊರೆತಿರುವ ಕೃತಿಗಳಲ್ಲಿ, ಎಲ್ಲದಕ್ಕಿಂತ ಹಳೆಯದಾದ ಮೊಟ್ಟಮೊದಲ ಗದ್ಯಕೃತಿ ಇದಾಗಿದೆ. ಇದನ್ನು ಬರೆದಾತ ಶಿವಕೋಟ್ಯಾಚಾರ್ಯನು, ರಾಷ್ಟ್ರಕೂಟರ ದೊರೆ ನೃಪತುಂಗನ ರಾಜ್ಯದಲ್ಲಿ. . ಇತ್ತೀಚೆಗಿನ ಸಂಶೋಧನೆಯ ಪ್ರಕಾರ ಈ ಕೃತಿಯು ಬ್ರಾ ಜಿಷ್ಣುವಿನಿಂದ ರಚಿಸಲ್ಪಟ್ಟಿತು. (ಡಾ ಹಂಪನಾ, ಡಾ ಕಲಬುರ್ಗಿ).
ವಡ್ಡಾರಾಧನೆ ರಚನೆ ಆದದ್ದು ಹಳ್ಳಿಖೇಡ(ಬಿ) ಗ್ರಾಮದಲ್ಲಿ ಎಂದು ಹೇಳಲಾಗಿದೆ.[೧]
`ವಡ್ಡಾರಾಧನೆ' ಕೃತಿಯ ಹೆಸರು ಮತ್ತು ಅದರ ಕರ್ತೃವಿನ ಬಗ್ಗೆ ಇನ್ನೂ ಖಚಿತ ಅಭಿಪ್ರಾಯ ಹೊಂದಲು ಸಾಕಷ್ಟು ಆಧಾರಗಳಿಲ್ಲ. ಅವು ಇನ್ನೂ ಸಂಶೋಧನೆಗೆ ತೆರೆದ ವಿಷಯಗಳೇ ಆಗಿವೆ[೨]
ಇದರ ರಚನೆಯ ಕಾಲ ಸು. 920. ಇದರಲ್ಲಿ ಸುಕುಮಾರಸ್ವಾಮಿ, ವೃಷಭಸೇನರಿಸಿ ಮೊದಲಾದ 19 ಮಹಾಪುರುಷರ ಕಥೆಗಳಿವೆ. ಇವರು ದೇವ, ಮಾನವ, ತಿರ್ಯಕ್ ಮತ್ತು ಅಚೇತನ ಎಂಬ 4 ಬಗೆಯ ಉಪಸರ್ಗಗಳು(ತಪಸ್ಸಿಗೆ ಬರುವ ಅಡ್ಡಿ) ಮತ್ತು 22 ಬಗೆಯ ಪರೀಷಹಗಳನ್ನು(ಕೋಟಲೆ) ಸಹಿಸಿ ತಪಸ್ಸುಮಾಡುವುದು. ಈ ರೀತಿಯ ತಪಸ್ಸನ್ನು ಉಪಾಸನೆ ಅಥವಾ ಆರಾಧನೆ ಎನ್ನುತ್ತಾರೆ. ಮರಣದ ಸಮಯದಲ್ಲಿ ದರ್ಶನ, ಜ್ಞಾನ, ಚಾರಿತ್ರ ಮತ್ತು ತಪಸ್ಸುಗಳೆಂಬ 4 ಗುಣಗಳನ್ನು ಆತ್ಮನಲ್ಲಿ ಸ್ಥಿರವಾಗಿಸಿಕೊಳ್ಳುವುದರಿಂದ ಆತ್ಮ ಶುದ್ಧವಾಗಿ ಮುಕ್ತಿ ಪಡೆಯುತ್ತದೆ; ಕರ್ಮಕ್ಷಯ ಮಾಡಿಕೊಂಡು ಪ್ರಾಯೋಪವೇಶ ದಿಂದ ದೇಹತ್ಯಾಗಮಾಡಿದವರು ಉಪಸರ್ಗ ಕೇವಲಿಗಳಾಗುತ್ತಾರೆ ಎಂದು ನಂಬಿಕೆ. ಈ ಕಥೆಗಳು ಸಂಸ್ಕೃತದ ಆರಾಧನಾ ಎಂಬ ಗ್ರಂಥದಲ್ಲಿವೆ(1539-47). ಇವು ಹರಿಷೇಣ, ಶ್ರೀಚಂದ್ರ ಮೊದಲಾದವರ ಕಥಾಕೋಶ ಗಳಲ್ಲಿಯೂ ಕಾಣಿಸುತ್ತವೆ. ಆರಾಧನೆಯ ಟೀಕೆ ಸಂಸ್ಕೃತದಲ್ಲಿದ್ದರೆ ಉದಾಹರಣೆಯ ಕಥೆಗಳು ಪ್ರಾಕೃತದಲ್ಲಿವೆ. ಆರಾಧನೆಯ ಪ್ರತಿಕಾರರರು ಕಥೆಗಳ ಆರಂಭದಲ್ಲಿ ವಿವಿಧ ಪ್ರಾಕೃತ ಕೃತಿಗಳಿಂದ ಬೇರೆ ಬೇರೆ ಗಾಹೆಗಳನ್ನು ತೆಗೆದು ಸೇರಿಸಿದ್ದಾರೆ. ವಡ್ಡಾರಾಧನೆಯಲ್ಲಿ ಮೊದಲು ಗಾಹೆ ಮತ್ತು ಅದರ ಕನ್ನಡ ಅನುವಾದಗಳನ್ನು ನೀಡಿ ಅನಂತರ ಕಥೆಯನ್ನು ಹೇಳಲಾಗಿದೆ.
ಆರಾಧನೆಯನ್ನು ಬರೆದವರಲ್ಲಿ ಶಿವಾರ್ಯ ಪ್ರಾಚೀನ. ಇವನಿಗೆ ಶಿವಕೋಟಿ ಎಂಬ ಹೆಸರೂ ಇದೆ. ಇವನು ಕ್ರಿ.ಶ.೬ ಸು. 1ನೇ ಶತಮಾನದವನು. ಅರಾಧನಾ ಕೃತಿಗೆ ಭಗವತೀ, ಭಗವತೀ ಆರಾಧನಾ, ಮೂಲಾರಾಧನಾ, ಬೃಹತ್ ಆರಾಧನಾ ಮೊದಲಾದ ಹೆಸರುಗಳಿವೆ. ಆರಾಧನಾ ಗ್ರಂಥಗಳಲ್ಲಿ ಶಿವಾರ್ಯನ ಗ್ರಂಥ ಮಹತ್ವದ್ದು. ಇದರಲ್ಲಿ 5 ಬಗೆಯ ಮರಣಗಳ ವಿವರಣೆಯಿದೆ. 2 ಸಾವಿರಕ್ಕಿಂತ ಹೆಚ್ಚು ಪ್ರಾಕೃತ ಗಾಹೆಗಳಿವೆ. ಇದರಲ್ಲಿ ಶೀರ್ಷಿಕೆಗಳಿರುವ 40 ಅಧಿಕಾರಗಳಿವೆ. `ಕವಚ ಎಂಬ ಶೀರ್ಷಿಕೆ 35ನೆಯದು.
ಬೃಹತ್(ಗಾತ್ರದ ಗ್ರಂಥ)ಆರಾಧನಾ ವಡ್ಡಾರಾಧನಾ ಆಗಿದೆ (ಹೋಲಿಸಿ: ಬೃಹತ್‍ಕಥೆ>ವಡ್ಡಕಥೆ). ಆದ್ದರಿಂದ ಇಲ್ಲಿ ವಡ್ಡ ಎಂದರೆ ವೃದ್ಧ ಎಂಬ ಅರ್ಥ ಹೊಂದುವುದಿಲ್ಲ. ಹಾಗೆಯೇ ಕನ್ನಡದ ವಡ್ಡಾರಾಧನೆಯೇ ಇಡೀ ಬೃಹತ್ ಆರಾಧನೆಯಲ್ಲ. ಏಕೆಂದರೆ ಇದರಲ್ಲಿ ಆರಾಧನೆಯ ಕವಚದ ವರೆಗಿನ ಕಥೆಗಳು ಮಾತ್ರ ಇವೆ. ಇದರಲ್ಲಿ ಉಪಸರ್ಗ ಕೇವಲಿಗಳು, ಮಹಾಪುರುಷರು ಮಾತ್ರ ಇದ್ದಾರೆ. ಆದ್ದರಿಂದ ವಡ್ಡಾರಾಧನೆಯನ್ನು `ಮಹಾಪುರುಷರ್ಕಳ ಕಥೆ ಎಂದು ಕರೆಯುವುದು ಉಚಿತ ಎಂದು ಪ್ರೊ ಆ ನೇ ಉಪಾಧ್ಯೆ ಸೂಚಿಸಿದ್ದಾರೆ. ಶಿವಾರ್ಯನ `ಮೂಲಾರಾಧನೆಗೆ ಭ್ರಾಜಿಷ್ಣು ಬರೆದ ಟೀಕೆಯಿಂದ ಈ ಕಥೆಗಳನ್ನು ಯಾರೊ ಸಂಗ್ರಹಿಸಿ ಇತರ ಕಥಾಕೋಶಗಳ ನೆರವಿನಿಂದ ವಿಸ್ತರಿಸಿ ಕನ್ನಡದ ವಡ್ಡಾರಾಧನೆಯನ್ನು ಸಿದ್ಧಪಡಿಸಿದ್ದಾರೆ. ಅವರು ಯಾರೆಂಬುದನ್ನು ಕೃತಿಯಲ್ಲಿ ಎಲ್ಲಿಯೂ ತಿಳಿಸಿಲ್ಲವಾದರೂ ಅವರು ಶ್ರವಣಬೆಳಗೊಳ ಅಥವಾ ಬಳ್ಳಾರಿ ಜಿಲ್ಲೆಯ ಕೋಗಳಿಯ ಸುತ್ತಮುತ್ತ್ತ ಇದ್ದವರು ಎಂದು ತಿಳಿಯುತ್ತದೆ. ಅವರನ್ನೇ ಮೂಲಾರಾಧನೆಯ ಕರ್ತೃವಿನ ಹೆಸರಿನಿಂದ ` ಶಿವಕೋಟಿ' ಎಂದು ಕರೆಯುವುದು ಸರಿಯಲ್ಲ. ಅವರ ಕಾಲ ಕ್ರಿ. ಶ. ಸು 10-11ನೇ ಶತಮಾನ.
ವಡ್ಡ ಶಬ್ದವು ವರ್ಧಮಾನ (ವಡ್ಡಮಾಣ) ನನ್ನು ಸೂಚಿಸುತ್ತದೆ ಎಂಬುದು ಒಂದು ತೀರ ಇತ್ತೀಚಿನ ಅಭಿಪ್ರಾಯವಾಗಿದೆ.[೩]
ಕಥೆಯ ನಿರೂಪಣೆ ಸರಳವಾಗಿದೆ. ಪ್ರಾರಂಭದಲ್ಲಿ ಪ್ರಾಕೃತ ಗಾಹೆ ಮತ್ತು ಕನ್ನಡ ಅನುವಾದವಿರುತ್ತದೆ. ಜಂಬೂದ್ವೀಪದ ಭರತಖಂಡದ ಒಂದು ನಾಡು, ಅಲ್ಲಿ ಪಟ್ಟಣ, ಅದನ್ನಾಳುವ ರಾಜ, ರಾಣಿ, ಮಂತ್ರಿ, ಮಂತ್ರಿಪತ್ನಿ ಇವರ ವರ್ಣನೆಯಿಂದ ಕಥೆ ಆರಂಭವಾಗುತ್ತದೆ. ರಾಜಮನೆತನ ಅಥವಾ ವಣಿಕ ಕುಟುಂಬದ ವರ್ಣನೆ. ಕಥಾನಾಯಕನಿಗೆ ವೈರಾಗ್ಯಕ್ಕೆ ಒಂದು ಕಾರಣ, ಅವನ ಕುಟುಂಬ ತ್ಯಾಗ, ಸಂಚಾರ, ಉಪಸರ್ಗಗಳನ್ನು ಸಹಿಸುವುದು, ದೇಹತ್ಯಾಗದೊಂದಿಗೆ ಮುಕ್ತಿ ಪಡೆಯುವಲ್ಲಿಗೆ ಕಥೆ ಮುಗಿಯುತ್ತದೆ. ನಡುವೆ ಅನೇಕ ಉಪಕಥೆಗಳು ಬರುತ್ತವೆ. ಕಥೆಗೆ ಪೂರಕವಾಗಿ ಪಾತ್ರ ಚಿತ್ರಣವಿದೆ. ವರ್ಣನೆಗಳು ಕಣ್ಣಿಗೆ ಕಟ್ಟುತ್ತವೆ. ನಿರೂಪಣೆ ಸರಳ ರೇಖಾತ್ಮಕವಾಗಿದೆ. ಪೂರ್ವಭವಗಳನ್ನು ವರ್ಣಿಸುವಾಗ ಹಿಂದೆ ಬಂದು ಮುಂದುವರೆಯುವ ಕ್ರಮವನ್ನು ಅನುಸರಿಸಲಾಗಿದೆ.
ವಡ್ಡಾರಾಧನೆಯಲ್ಲಿ ದೇಸಿ ಭಾಷೆಯ ಸೊಗಡು ಗಮನಾರ್ಹವಾಗಿದೆ. ಜಾನಪದ ಆಶಯಗಳು ವಿಶೇಷವಾಗಿವೆ. ಬಳಕೆಯಲ್ಲಿರುವ ಜನಪದ ಕಥೆಗಳನ್ನೇ ಧರ್ಮನಿರೂಪಣೆಗೆ ಅಳವಡಿಸಿಕೊಂಡಿರುವಂತಿದೆ. ವಡ್ಡಾರಾಧನೆ ಜೈನ ಧರ್ಮದ ಗ್ರಂಥವಾಗಿರುವಂತೆ 10ನೇ ಶತಮಾನದ ಕನ್ನಡನಾಡಿನ ಜೀವನ ಚಿತ್ರಣದ ದಾಖಲೆಯೂ ಆಗಿದೆ.[೪]